ಕನ್ನಡ ವಿದ್ವತ್ ಲೋಕದಲ್ಲಿ ಮೂರು ಧಾರೆಯ ಸಂಶೋಧಕರಿದ್ದಾರೆ. ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿರುವವರು; ವೃತ್ತಿಯಿಂದ ಪ್ರಾಧ್ಯಾಪಕ ರಲ್ಲದಿದ್ದರೂ ವಕೀಲರೋ ವ್ಯಾಪಾರಿಯೋ ರೈತರೋ ಆಗಿದ್ದು, ಹವ್ಯಾಸದಿಂದ ಸಂಶೋಧನೆಯಲ್ಲಿ ತೊಡಗಿ
ರುವವರು: ಸಾಮಾಜಿಕ ಧಾರ್ಮಿಕ ಸಂಸ್ಥೆಗಳ ಭಾಗವಾಗಿ ಸಂಶೋಧನೆ ಮಾಡುವವರು. ಈಚೆಗೆ ನಿಧನರಾದ ಸ್ವಾಮಿ ಅಂತಪ್ಪನವರು ಮೂರನೇ ಧಾರೆಗೆ ಸೇರಿದವರು.

ಜರ್ಮನಿಯಿಂದ ಬಂದಿದ್ದ ಕಿಟೆಲ್-ಮೊಗ್ಲಿಂಗ್ ಮೊದಲಾದ ಪಾದ್ರಿಗಳು ಕನ್ನಡಕ್ಕೆ ಮಾಡಿದ ಕೆಲಸದ ಮಹತ್ವವನ್ನು ನಾವೆಲ್ಲ ನೆನೆಯುತ್ತೇವೆ. ಆದರೆ ಇವರ ಮುಂದುವರಿಕೆಯಾಗಿ ಕನ್ನಡಿಗರಾದ ಉತ್ತಂಗಿ ಚನ್ನಪ್ಪ, ಸ್ವಾಮಿ ಅಂತಪ್ಪ, ಪ್ರಶಾಂತ ಮಾಡ್ತಾ ಮೊದಲಾದ ಧರ್ಮಗುರುಗಳು, ಕರ್ನಾಟಕದ ಚರಿತ್ರೆ ಸಂಸ್ಕೃತಿ ಸಾಹಿತ್ಯ ಕುರಿತು ಮಾಡಿರುವ ಸಂಶೋಧನೆಯನ್ನು ಅಷ್ಟಾಗಿ ಗಮನಿಸಿಲ್ಲ.

ಅಂತಪ್ಪನವರ ಸಂಶೋಧನ ಕ್ಷೇತ್ರ ಚರಿತ್ರೆಯದು. ಅದರಲ್ಲೂ ಕರ್ನಾಟಕದಲ್ಲಿ ಕ್ರೈಸ್ತಧರ್ಮವು ಬೇರೆಬೇರೆ ಕಾಲಘಟ್ಟಗಳಲ್ಲಿ ನೆಲೆಯೂರಿ ಬೆಳೆದ ಚರಿತ್ರೆಗೆ ಸಂಬಂಧಿಸಿದ್ದು. ಈ ದಿಸೆಯಲ್ಲಿ ಅವರು ರಚಿಸಿದ ಕೃತಿಗಳಲ್ಲಿ ‘ಶ್ರೀರಂಗಪಟ್ಟಣ ಮತ್ತು ಅದರ ಸುತ್ತಮುತ್ತಲಿನ ಕ್ರೈಸ್ತಧರ್ಮ’ (1994) ಮುಖ್ಯವಾಗಿದೆ. 17-19ನೇ ಶತಮಾನಗಳಲ್ಲಿ, ಕರ್ನಾಟಕದಲ್ಲಿದ್ದ ಜೆಸುಯೆಟ್ ಪಾದ್ರಿಗಳು ರೋಮ್‌ಗೆ ಕಳಿಸಿಕೊಡುತ್ತಿದ್ದ ವರದಿಗಳನ್ನು ಆಧರಿಸಿ ರಚಿತವಾದ ಈ ಕೃತಿ, ಕರ್ನಾಟಕದ ಧಾರ್ಮಿಕ ರಾಜಕೀಯ ಚರಿತ್ರೆಗೆ ಅನೇಕ ಹೊಸ ವಿವರ ಮತ್ತು ನೋಟಗಳನ್ನು ಕೊಡುತ್ತದೆ. ಲವಲವಿಕೆ ಶೈಲಿಯಿಂದಲೂ ಸ್ವಾರಸ್ಯಕರ ಘಟನೆಗಳಿಂದಲೂ, ಪಾಂಡಿತ್ಯದ ಭಾರವಿಲ್ಲದ ಸರಳ ಭಾಷೆಯಿಂದಲೂ ಕೂಡಿರುವ ಇದು, ಕತೆಯ ಪುಸ್ತಕದಂತಿದೆ. ಅಂತಪ್ಪನವರ ವಿಶೇಷತೆಯೆಂದರೆ, ಹುಡುಕಾಟದ ತೀವ್ರಶ್ರದ್ಧೆ ಮತ್ತು ವಿಶ್ವವಿದ್ಯಾಲಯಗಳಲ್ಲಿರುವ ಎಷ್ಟೋ ವಿದ್ವಾಂಸರಲ್ಲಿ ಕಾಣಸಿಗದ ಅಪಾರ ಪಾಂಡಿತ್ಯ.

ಕನಕಪುರ ತಾಲ್ಲೂಕಿನ ಹಾರೋಬೆಲೆಯಲ್ಲಿ ಹುಟ್ಟಿದ ಅಂತಪ್ಪನವರ ಬದುಕು (1929-2000), ಶೂನ್ಯದಿಂದ ಶಿಖರಕ್ಕೇರಿದ ಕಥನ. ಕನ್ನಡ ಮಾಧ್ಯಮದಲ್ಲಿ ಓದಿದ ಅವರಿಗೆ ಇಂಗ್ಲಿಷ್, ತಮಿಳಿನಲ್ಲಿ ಹಿಡಿತವಿತ್ತು. ಪಾದ್ರಿಯಾದ ಬಳಿಕ ಇಟಲಿಗೆ ಹೋಗಿ ಇತಾಲಿಯಾ, ಗ್ರೀಕ್, ಹೀಬ್ರೂ, ಲ್ಯಾಟಿನ್ ಕಲಿತರು. ರೋಮ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪಡೆದರು. ಬಹುಶಃ ಗೋವಿಂದ ಪೈಗಳನ್ನು ಬಿಟ್ಟರೆ ಕನ್ನಡದಲ್ಲಿ ಈ ಪರಿಯ ಬಹುಭಾಷಿಕ ಪ್ರಭುತ್ವ ಇದ್ದುದು ಇವರಲ್ಲೇ. ಪ್ರಧಾನವಾಗಿ ಸಂಸ್ಕೃತ, ಕನ್ನಡ, ಇಂಗ್ಲಿಷ್ ಆಕರಗಳಿಂದ ಈತನಕ ಕರ್ನಾಟಕದ ಚರಿತ್ರೆ, ಸಂಸ್ಕೃತಿ, ಪರಂಪರೆಗಳ ಮೇಲೆ ಚಿತ್ರಗಳನ್ನು ರಚಿಸಲಾಗಿದೆ. ಆದರೆ, ಕರ್ನಾಟಕದ ಮೇಲೆ ಅರಬ್ಬಿ, ಪಾರಸಿ, ಲ್ಯಾಟಿನ್, ಇತಾಲಿಯಾ, ಪೋರ್ಚುಗೀಸ್ ನುಡಿಗಳಲ್ಲಿರುವ ಬಹುತೇಕ ದಾಖಲೆಗಳು ಅಸ್ಪೃಶ್ಯವಾಗಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಅಂತಪ್ಪನವರು ಇತಾಲಿಯಾ, ಪೋರ್ಚುಗೀಸ್, ಲ್ಯಾಟಿನ್‍ಗಳಲ್ಲಿರುವ ದಸ್ತಾವೇಜುಗಳ ಮೂಲಕ ಸಂಶೋಧನೆ ಮಾಡಿ, ಕರ್ನಾಟಕದ ಕುರಿತ ಹೊಸ ವಿಚಾರಗಳನ್ನು ತಿಳಿಸಿಕೊಟ್ಟವರು. ಅವರ ಕೃತಿಗಳಲ್ಲಿ, ಜೇಸುಯೆಟ್ ಪಾದ್ರಿಗಳು ಧರ್ಮಪ್ರಸಾರ ಮಾಡುವಾಗ ಮೈಸೂರು ಒಡೆಯರಿಂದಲೂ ಹೈದರ್-ಟಿಪ್ಪು ಅವರಿಂದಲೂ ಎದುರಿಸಿದ ವಿಚಾರಣೆ, ಪಡೆದ ಶಿಕ್ಷೆ ಹಾಗೂ ಮನ್ನಣೆಗಳ ಚಿತ್ರಗಳಿವೆ; ಒಡೆಯರು, ಹೈದರ್, ಟಿಪ್ಪು ಹಾಗೂ ಮರಾಠರ ನಡುವಣ ರಾಜಕೀಯ ಸಂಘರ್ಷಗಳ ಮೇಲೆ ಕ್ರೈಸ್ತಧರ್ಮದ ನೆಲೆಯಿಂದ ಮಾಡಲಾದ ಅಪೂರ್ವ ವಿಶ್ಲೇಷಣೆಗಳಿವೆ. ಯುರೋಪಿನ ಬೇರೆಬೇರೆ ದೇಶದ ಮಿಶನರಿಗಳ ನಡುವಿದ್ದ ಸಂಘರ್ಷಗಳ ಬಗ್ಗೆ ಸ್ವಾರಸ್ಯಕರ ನೋಟಗಳಿವೆ.

ಯಾವುದೇ ಧರ್ಮಕ್ಕೆ ಪ್ರಭುತ್ವವು ಕೊಡುವ ಮನ್ನಣೆ-ತಿರಸ್ಕಾರಗಳಿಗೆ, ಕೇವಲ ಪ್ರಭುಗಳ ‘ವೈಯಕ್ತಿಕ’ ಕಾರಣಗಳಿರುವುದಿಲ್ಲ; ರಾಜಕೀಯವಾದ ತಂತ್ರಗಾರಿಕೆ- ಒತ್ತಡ ಇರುತ್ತವೆ. ಹೀಗಾಗಿ ಗತಕಾಲದ ಧಾರ್ಮಿಕ-ರಾಜಕೀಯ ವಿದ್ಯಮಾನಗಳನ್ನು ನಿರ್ದಿಷ್ಟ ಧರ್ಮದ ಪರವಿರೋಧದ ನೆಲೆಗೆ ಬದಲಾಗಿ, ರಾಜಕೀಯ ಪ್ರಜ್ಞೆಯಿಂದ ವಿಶ್ಲೇಷಿಸಬೇಕು. ಈ ಬಗೆಯ ಚಾರಿತ್ರಿಕ ಪ್ರಜ್ಞೆ ಇದ್ದಿದ್ದರಿಂದಲೇ ಅಂತಪ್ಪನವರ ಸಂಶೋಧನೆ, ಧರ್ಮಗುರುವೊಬ್ಬರು ಸ್ವಧರ್ಮದ ಸಮರ್ಥನೆಗೆಂದು ಮಾಡಿದ್ದು ಅನಿಸುವುದಿಲ್ಲ. ರಾಗದ್ವೇಷಗಳಿಲ್ಲದ ಪ್ರಬುದ್ಧ ಇತಿಹಾಸಕಾರನ ವ್ಯಾಖ್ಯಾನ ಎನಿಸುತ್ತದೆ.

ಸಂಶೋಧನೆಯು ಅಂತಪ್ಪನವರ ಬದುಕಿನ ಒಂದು ಮುಖವಾದರೆ, ಕನ್ನಡ ಹೋರಾಟ ಇನ್ನೊಂದು ಮುಖ. ‘ಬೆಂಗಳೂರು ಸೀಮೆಯ ಚರ್ಚುಗಳ ಆಡಳಿತ ಮತ್ತು ಪ್ರಾರ್ಥನ ಭಾಷೆ ಕನ್ನಡದಲ್ಲಿರಬೇಕು. ತಮಿಳು-ಕೊಂಕಣಿ ಯಜಮಾನಿಕೆಯಿಂದ ಬಿಡುಗಡೆಯಾಗಬೇಕು. ತಾಯ್ನುಡಿಯಲ್ಲಿ ಪ್ರಾರ್ಥನೆ ಮಾಡುವ ಸ್ವಾತಂತ್ರ್ಯ ಕೊಡಬೇಕು’ ಎಂದು, ಅವರು ದಶಕಗಳ ಕಾಲ ಚರ್ಚ್ ಆಡಳಿತಶಾಹಿಯ ವಿರುದ್ಧ ಆಂದೋಲನ ಮಾಡಿದರು. ಇದಕ್ಕಾಗಿ ‘ಕರ್ನಾಟಕ ಕ್ಯಾಥೋಲಿಕರ ಕನ್ನಡ ಸಂಘ’ವನ್ನು ಕಟ್ಟಿ, ಕನ್ನಡದ ಚಳವಳಿಗಾರರನ್ನೂ ವಿದ್ವಾಂಸರನ್ನೂ ಅದಕ್ಕೆ ಜೋಡಿಸಿದರು. ತತ್ಫಲವಾಗಿ ಅನೇಕ ಕಷ್ಟ-ಕಿರುಕುಳಗಳನ್ನು ಅವರು ಉಣ್ಣಬೇಕಾಯಿತು. ಅಪಾರ ವಿದ್ವತ್ತಿದ್ದರೂ ಬಿಶಪ್ ಪದವಿಗೇರಲು ಸಾಧ್ಯವಾಗಲಿಲ್ಲ. ಆದರೆ, ಚರ್ಚುಗಳಲ್ಲಿ ಕನ್ನಡವು ಸ್ಥಾನ ಪಡೆಯಲು ಸಾಧ್ಯವಾಯಿತು.

ತಮ್ಮ ಧರ್ಮಗಳು ಮಾತ್ರ ಶ್ರೇಷ್ಠವೆಂದು ನಂಬಿ, ಉಳಿದ ಧರ್ಮಗಳತ್ತ ತಿರಸ್ಕಾರ ಬೀರುವ ಧರ್ಮಪಂಡಿತರು ಎಲ್ಲ ಧರ್ಮಗಳಲ್ಲಿ ವಿಪುಲವಾಗಿ ಸಿಗುತ್ತಾರೆ. ಆದರೆ, ತಮ್ಮ ಧರ್ಮಗಳ ಬಗ್ಗೆ ಆಳವಾದ ಅಧ್ಯಯನಗಳ ಮೂಲಕ ಸಾರ್ವಜನಿಕ ತಿಳಿವನ್ನು ಸೃಷ್ಟಿಸುತ್ತ, ಉಳಿದ ಧರ್ಮಗಳನ್ನು ಗೌರವಿಸುತ್ತ, ಎಲ್ಲ ಧರ್ಮಗಳಿಗೆ ಸೇರಿದ ಜನ ನಾಡನ್ನು ಕಟ್ಟಿದ್ದಾರೆ ಎಂಬ ದಾರ್ಶನಿಕ ಪ್ರಜ್ಞೆಯುಳ್ಳವರು ಕಡಿಮೆ. ಅಂತಪ್ಪನವರು ಎರಡನೆಯ ಮಾದರಿಯ ಧಾರ್ಮಿಕ ಪಂಡಿತರು. ಸಮುದಾಯಗಳಲ್ಲಿ ಪರಸ್ಪರ ಧರ್ಮಗಳ ಅರಿವಿನ ಮತ್ತು ನೇರವಾದ ಸಂವಾದಗಳ ಕೊರತೆ ಕೂಡ ಸಂಘರ್ಷಗಳಿಗೆ ಕಾರಣವೆಂದೂ ಚರಿತ್ರೆಯನ್ನು ಸತ್ಯಾನ್ವೇಷಣೆಯ ಮನೋಭಾವನೆಯಿಂದ ಅರ್ಥೈಸಬೇಕೆಂದೂ ಅವರು ಹೇಳುತ್ತಿದ್ದರು.

ಅಂತಪ್ಪನವರ ಪುಸ್ತಕಗಳನ್ನು ಓದಿದ ಬಳಿಕ, ಅವರನ್ನು ಭೇಟಿಯಾಗಬೇಕು ಎಂಬ ತುಡಿತವುಂಟಾಯಿತು. ಬೆಂಗಳೂರಿನ ಬಿಶಪ್ ಭವನದಲ್ಲಿ ನಿವೃತ್ತ ಪಾದ್ರಿಗಳಿಗೆ ಮೀಸಲಾಗಿರುವ ವಿಶ್ರಾಂತಿಗೃಹದಲ್ಲಿ ಅವರು ವಾಸವಿದ್ದರು. ಅವರನ್ನು ನಾನು ಭೇಟಿಯಾಗುವಾಗ ತೊಂಬತ್ತು ದಾಟಿತ್ತು. ಸ್ಮೃತಿಶಕ್ತಿ ಕುಂದಿತ್ತು. ಕಿವಿ ಕೇಳಿಸುತ್ತಿರಲಿಲ್ಲ. ಆರೋಗ್ಯ ಚೆನ್ನಾಗಿರಲಿಲ್ಲ. ಚೀಟಿಯಲ್ಲಿ ಬರೆದುಕೊಂಡು ಮಾತಾಡಿದೆವು. ಅವರೊಡನೆ ಕಳೆದ ಅರ್ಧದಿನವು ನನ್ನ ಬಾಳಿನ ಅಮೂಲ್ಯ ಗಳಿಗೆ. ಮಾತುಕತೆ ಮುಗಿದ ಬಳಿಕ ಕಿವಿಯ ಬಳಿ ಬಾಯಿಟ್ಟು ಗಟ್ಟಿದನಿಯಲ್ಲಿ ಕೇಳಿದೆ: ‘ಸುದೀರ್ಘವಾದ ಜೀವನ ನಡೆಸಿದ್ದೀರಿ. ಈಗ ಹಿಂತಿರುಗಿ ನೋಡುವಾಗ ಏನನಿಸುತ್ತಿದೆ?’. ಅವರು ತಣ್ಣಗೆ ಹೇಳಿದರು: ‘ಮಾಡಬೇಕಾದ ಕೆಲಸಗಳು ಬಹಳ ಇವೆ. ದೇಹ ಸಹಕರಿಸುತ್ತಿಲ್ಲ. ಸಾವು ಹತ್ತಿರವಾಗಿದೆ. ಸಾವು ಮಾನವ ಬಾಳಿನಲ್ಲಿ ಹಾದುಹೋಗುವ ಒಂದು ಅವಸ್ಥೆ ಮಾತ್ರ. ಅದುವೇ ಬಾಳಿನ ಕೊನೆಯಲ್ಲ.’ ಈ ಹೇಳಿಕೆಯಲ್ಲಿ ಪುನರುತ್ಥಾನದಲ್ಲಿ ನಂಬಿಕೆಯಿಟ್ಟ ಕ್ರೈಸ್ತಶ್ರದ್ಧೆಯಿತ್ತು. ಮಾಗಿದ ಜೀವವೊಂದರ ಶತಮಾನದ ಬಾಳುವೆಯ ಅನುಭವ-ಚಿಂತನೆಯೂ ಇತ್ತು. ಅವರಿಗೆ ನಮಸ್ಕಾರಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.