ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 28 ಜೂನ್ 2024, 19:48 IST
Last Updated 28 ಜೂನ್ 2024, 19:48 IST
ಅಕ್ಷರ ಗಾತ್ರ

ಮೂಲ ಉದ್ದೇಶ ಮರೆಯುತ್ತಿರುವ ಜಯಂತಿ ಆಚರಣೆ

ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆಯ ಪ್ರಯುಕ್ತ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಕೆಂಪೇಗೌಡರ ಜೀವನ‌ ಮತ್ತು ಸಾಧನೆಯ ಅರಿವು ಮೂಡಿಸಿ, ಅವರಿಗೆ ಪ್ರಬಂಧ, ಚರ್ಚಾ ಸ್ಪರ್ಧೆ ಏರ್ಪಡಿಸಿರುವ ಸರ್ಕಾರದ ನಡೆ ಶ್ಲಾಘನೀಯ. ಮಹನೀಯರನ್ನು ಸ್ಮರಿಸಿ ಅವರ ಆದರ್ಶಗಳು ಸಮಾಜದಲ್ಲಿ ಚಲಾವಣೆಯಾಗುವಂತೆ ಮಾಡುವುದು ಜಯಂತಿಗಳ ಉದ್ದೇಶವಾಗಬೇಕಾಗಿದ್ದ ಈ ಹೊತ್ತಿನಲ್ಲಿ, ಇಂದಿನ ಆಚರಣೆಗಳು ಅವುಗಳ ಮೂಲ ಉದ್ದೇಶವನ್ನು ಮರೆಯುತ್ತಿವೆ. ಸರ್ಕಾರದ ಆದೇಶ ಪಾಲನೆಯ ಕಾಟಾಚಾರಕ್ಕೆ ಅವು ನಡೆಯುತ್ತಿವೆಯೇನೊ ಎಂದೆನಿಸುತ್ತಿದೆ.

ಭವಿಷ್ಯದ ಪೀಳಿಗೆ ನಿಸ್ವಾರ್ಥವಾಗಿ, ಸಾಮಾಜಿಕ ಕಳಕಳಿ ಹೊಂದಿರಬೇಕೆಂದರೆ, ಯಾವುದೇ ಮಹನೀಯರ ಜಯಂತಿಯು ರಜೆರಹಿತವಾಗಿರಬೇಕು. ಮಹನೀಯರ ತತ್ವಾದರ್ಶಗಳು ಎದೆಗಿಳಿಯಬೇಕು. ಆಗ ಇಂತಹ ಆಚರಣೆಗಳು ಸಾರ್ಥಕವಾಗುತ್ತವೆ.⇒ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ

ಪರಿತ್ಯಾಗಿಗಳಿಗೂ ರಾಜಕಾರಣದ ಹಂಬಲ!

‘ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು’ ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಜೂನ್‌ 28). ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂಬುದು ಗಮನಾರ್ಹ. ಯಾವುದೇ ಸ್ವಾಮೀಜಿ ತಮ್ಮ ಮಠ ಮತ್ತು ಭಕ್ತರಿಗೆ ಸತ್ಚಿಂತನೆ ಮತ್ತು ಆಧ್ಯಾತ್ಮಿಕ ಬೋಧನೆ ಮಾಡುತ್ತಾ ಜನರಿಗೆ ತಪ್ಪು ಮತ್ತು ಸರಿಗಳನ್ನು ತೋರುತ್ತಾ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು. ಅದನ್ನು ಬಿಟ್ಟು ರಾಜಕೀಯದೆಡೆಗೆ ಅವರಿಗೆ ಆಸಕ್ತಿ ಏಕೆ?

ಮುಖ್ಯಮಂತ್ರಿಯ ಗಾದಿಯಲ್ಲಿ ಯಾರೇ ಕುಳಿತರೂ ಸ್ವಾಮಿಗಳಿಗೆ ಆತ ಒಬ್ಬ ಭಕ್ತನಂತೆ ಕಾಣಬೇಕೇ ವಿನಾ ರಾಜನಂತಲ್ಲ. ಭಕ್ತರು ಮತ್ತು ಜನರನ್ನು ಲೋಭದಿಂದ ದೂರವಿಡಲು ಪ್ರಯತ್ನಿಸಬೇಕಾದ ಸ್ವಾಮಿಗಳೇ ಲೋಭಕ್ಕೆ ಒಳಗಾದರೆ ಮಠದ ಮೂಲ ಉದ್ದೇಶ ದಿಕ್ಕು ತಪ್ಪುತ್ತದೆ. ಸ್ವಾಮಿಗಳ ಮಾತುಗಳು ಮೌಲ್ಯಯುತ. ಈ ರೀತಿ ಮಾತನಾಡಿ ಆ ಮೌಲ್ಯವನ್ನು ಕನಿಷ್ಠಗೊಳಿಸುವುದು ತರವಲ್ಲ. ಹಾಗಾಗಿ, ಮಠಾಧೀಶರು ರಾಜಕಾರಣದ ಮೊಗಸಾಲೆಯಿಂದ ದೂರ ಇರುವುದೇ ಒಳಿತು. ರಾಜಕಾರಣದ ಕೆಸರಿನ ಕೊಳದೊಳಕ್ಕೆ ಕೈ ಹಾಕಿ ಕೊಳಕು ಮಾಡಿಕೊಳ್ಳಬಾರದು. ಸರ್ವಸಂಗ ಪರಿತ್ಯಾಗಿಗಳಾದ ಸ್ವಾಮಿಗಳೇ ಭೋಗಕ್ಕೆ ಪರಿತಪಿಸುವಂತಾದರೆ ಹೇಗೆ?

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಹೆಚ್ಚುವರಿ ಹಾಲು: ದೋಷರಹಿತ ಕ್ರಮ

ನಂದಿನಿ ಹಾಲಿನ ದರ ಮತ್ತು ಪ್ರಮಾಣವನ್ನು ಹೆಚ್ಚಿಸಿರುವ ಕೆಎಂಎಫ್‌ ಕ್ರಮವನ್ನು ಸಾಮಗ ದತ್ತಾತ್ರಿ ಪ್ರಶ್ನಿಸಿದ್ದಾರೆ (ವಾ.ವಾ., ಜೂನ್‌ 27). ಇಲ್ಲಿ ಅವರು ಗಮನಿಸಬೇಕಾದ ಇನ್ನೂ ಅನೇಕ ವಿಚಾರಗಳಿವೆ. ಸರ್ಕಾರಗಳು ಹಿಂದಿನ ಹತ್ತು ವರ್ಷಗಳಲ್ಲಿ ಹೆಚ್ಚಿಸಿರುವ ಪರೋಕ್ಷ ತೆರಿಗೆಗಳ ಪಟ್ಟಿಯನ್ನು ನೋಡಿದರೆ, ಜನಸಾಮಾನ್ಯರು ತಮಗೆ ಗೊತ್ತಿಲ್ಲದಂತೆಯೇ ಎಷ್ಟೆಲ್ಲಾ ವಸ್ತುಗಳಿಗೆ ಹೆಚ್ಚುವರಿ ಹಣ ತೆರುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ.

ಕೇಂದ್ರ ಸರ್ಕಾರ ಪಡೆಯುತ್ತಿರುವ ಸೆಸ್ ರೂಪದ ಪರೋಕ್ಷ ತೆರಿಗೆಯಲ್ಲಂತೂ ರಾಜ್ಯಗಳ ಪರಿಸ್ಥಿತಿ ‘ಕೊಟ್ಟೋನ್ ಕೋಡಂಗಿ ಈಸ್ಕೊಂಡೋನ್ ಈರಭದ್ರ’ ಎನ್ನುವಂತಾಗಿದೆ. ಇಂಥದ್ದರಲ್ಲಿ, ಹಾಲಿನ ಪೊಟ್ಟಣಕ್ಕೆ ಎರಡು ರೂಪಾಯಿ ಹೆಚ್ಚಿಸಿ 50 ಮಿ.ಲೀ ಹೆಚ್ಚುವರಿ ಹಾಲು ಕೊಡುತ್ತಿರುವ ಪಾರದರ್ಶಕ ಕ್ರಮವನ್ನು ಟೀಕಿಸುವ ಮುನ್ನ ಪರೋಕ್ಷ ತೆರಿಗೆಯೆಂಬ ಸುಲಿಗೆಯ ಬಗ್ಗೆಯೂ ಚರ್ಚೆ ಆಗಬೇಕಿದೆ. ಹಾಲಿನ ಉತ್ಪಾದನೆ ಹೆಚ್ಚಾಗಿದ್ದರೆ ಅದನ್ನು ಪೌಷ್ಟಿಕ ಆಹಾರವಾಗಿ ಉಚಿತವಾಗಿ ಹಂಚಲಿ ಎನ್ನುವ ಮಂದಿಯೇ ಸರ್ಕಾರದ ಉಚಿತ ಗ್ಯಾರಂಟಿ
ಗಳನ್ನು ಭರಪೂರ ಜರಿದಿದ್ದಾರೆ ಎಂಬುದು ನಮ್ಮ ರಾಜಕಾರಣದ ತತ್ವಹೀನ ಪರಿಸ್ಥಿತಿಗೆ ಹಿಡಿದ ಕನ್ನಡಿ. ಗ್ಯಾರಂಟಿಗಳನ್ನು, ಅವುಗಳಿಂದ ಆಗಬಹುದಾದ ದೂರಗಾಮಿ ಪರಿಣಾಮಗಳನ್ನು ಸರಿಯಾದ ದಿಕ್ಕಿನಲ್ಲಿ ವಿಮರ್ಶೆಗೆ ಒಳಪಡಿಸುವ ಅಗತ್ಯವಿದೆ. ಆದರೆ, ಹಾಲಿನ ದರ ಏರಿಸಿ ಹೆಚ್ಚುವರಿ ಹಾಲು ಕೊಡುತ್ತಿರುವ ಕ್ರಮದಲ್ಲಿ ಮೇಲ್ನೋಟಕ್ಕೆ ದೋಷವಿಲ್ಲ.

ಶ್ರೀಕಂಠ, ಬೆಂಗಳೂರು

ಶಕ್ತಿ ಯೋಜನೆ: ಸುಧಾರಣೆ ಅಗತ್ಯ

‘ಶಕ್ತಿ’ ಯೋಜನೆ ಕುರಿತ ಎಸ್‌.ಆರ್‌.ವಿಜಯಶಂಕರ ಅವರ ಲೇಖನ (ಸಂಗತ, ಜೂನ್‌ 28) ದಿನನಿತ್ಯ ಪ್ರಯಾಣಿಸುವ ಸಾಮಾನ್ಯರಿಗೆ ಆಗುವ ಹಿಂಸೆಯನ್ನು ಅಲಕ್ಷಿಸಿದೆ. ಉದಾಹರಣೆಗೆ, ಬಾಗಲಕೋಟೆಯಿಂದ ದಿನಾಲೂ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ನಗರಗಳಿಗೆ ಅನೇಕರು ಪ್ರಯಾಣಿಸುತ್ತಾರೆ. ಶಕ್ತಿ ಯೋಜನೆ ಬಂದ ನಂತರ ಬಸ್‍ಗಳು ಪ್ರಯಾಣಿಕರಿಗೆ ಉಸಿರಾಡುವುದಕ್ಕೇ ಕಷ್ಟವಾಗುವ ರೀತಿಯಲ್ಲಿ ತುಂಬಿರುತ್ತವೆ. ಅನೇಕ ಮಹಿಳೆಯರು 10 ಕಿ.ಮೀ. ದೂರದ ಗದ್ದನಕೇರಿಗೆ ಹೋಗುವವರು. ಅಲ್ಲಿ ಹೋದ ನಂತರ ಹೊಸಬರು ಹತ್ತುತ್ತಾರೆ. ಅವರು 15 ಕಿ.ಮೀ. ದೂರದ ಇನ್ನೊಂದು ಪಟ್ಟಣಕ್ಕೆ ಹೋಗುವವರು. ಇದರಿಂದ, ನೂರಾರು ಕಿ.ಮೀ. ದೂರ ಹೋಗುವವರಿಗೆ ಸೀಟು ಸಿಗುವ ಸಾಧ್ಯತೆಯೇ ಕಡಿಮೆ. ಆದರೂ ಮಹಿಳೆಯರನ್ನೂ ಒಳಗೊಂಡು ಅನೇಕರು ಅನಿವಾರ್ಯವಾಗಿ 2-3 ತಾಸು ನಿಂತುಕೊಂಡೇ ಹೋಗುತ್ತಾರೆ. ಹೀಗಾಗಿ ಶಕ್ತಿ ಯೋಜನೆಗೆ ತಕ್ಷಣವೇ ಸೂಕ್ತ ಮಾರ್ಪಾಡು ಮಾಡಬೇಕು. ದಿನಾಲು ದುಡಿಯಲು ಹೋಗುವವರಿಗೆ ಮಾತ್ರ ಪಾಸ್‌ ನೀಡುವುದು, 50 ಕಿ.ಮೀ.ಗಿಂತ ದೂರದ ಪ್ರಯಾಣಕ್ಕೆ ಅನ್ವಯಿಸದಿರುವುದು ಹೀಗೆ ಅನೇಕ ರೀತಿಯ ಪರಿಹಾರಗಳನ್ನು ಯೋಚಿಸಬಹುದು.

ಶಶಿಧರ ಪಾಟೀಲ, ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT