ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನೋಧೋರಣೆ ಬದಲಾಗಲಿ

ಫಾಲೋ ಮಾಡಿ
Comments

‘ಸತ್ಯ ಅರಿತು ಟೀಕಿಸಿ’ (ವಾ.ವಾ., ಸೆ. 19) ಪತ್ರಕ್ಕೆ ಪ್ರತಿಕ್ರಿಯೆ. ಗ್ರಾಮೀಣ ಭಾಗದಲ್ಲಿ ಶೌಚಾಲಯಗಳು ಬಳಕೆ ಆಗದಿರುವುದರ ಹಿಂದಿನ ನೈಜ ಕಾರಣಗಳನ್ನು ಶೋಧಿಸಿ ಹಾಗೂ ಅಲ್ಲಿನ ಪರಿಸ್ಥಿತಿಯನ್ನು ಅಧಿಕಾರಿಗಳು ಖುದ್ದಾಗಿ ಅವಲೋಕಿಸಿದ ಬಳಿಕ ಟೀಕೆ ಮಾಡುವುದು ಒಳಿತು ಎಂದಿದ್ದಾರೆ ಮಹದೇವಪ್ಪ. ಅವರ ಮಾತನ್ನು ಒಪ್ಪಿಕೊಳ್ಳೋಣ. ಆದರೆ ನನ್ನದು ಒಂದೆರಡು ತಕಾರರು. ಮನೆಗೊಂದು ಮರ ಎನ್ನುವಂತೆ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಮನೆಗೊಂದು ಶೌಚಾಲಯವನ್ನು ನಿರ್ಮಿಸಿಕೊಳ್ಳಿ ಅಂತ ಕೇಂದ್ರ ಸರ್ಕಾರ ಧನಸಹಾಯ ಮಾಡಿದೆ. ಆದರೆ ನಮ್ಮ ಗ್ರಾಮೀಣ ಜನರು ಬೇರೆಯವರು ಯಾರೋ ನಿರ್ಮಿಸಿಕೊಂಡ ಶೌಚಾಲಯದ ಮುಂದೆ ನಿಂತು ಒಂದು ಪೋಟೊ ತೆಗೆಸಿಕೊಂಡು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ, ಅದೇ ಅಧಿಕಾರಿಗಳಿಂದ ಧನಸಹಾಯವನ್ನು ಪಡೆದುಕೊಂಡ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಣು ಮುಂದೆ ಇವೆ!

ಅಷ್ಟೇ ಅಲ್ಲ. ಬುನಾದಿ ಹಾಕದೆ, ಹಾಲೋಬ್ಲಾಕ್‌ನಿಂದ ನಾಲ್ಕೂ ಮೂಲೆಯಲ್ಲಿ ಗೋಡೆಯನ್ನು ಎಬ್ಬಿಸಿ ಅದಕ್ಕೆ ಪೈಪ್‌ಲೈನ್ ವ್ಯವಸ್ಥೆ ಮಾಡದೆ, ಗುಂಡಿಯನ್ನು ತೋಡದೆ, ಗೋಡೆ ತೋರಿಸಿ ಸಹಾಯಧನ ಪಡೆದ ಎಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಇಂತಹವರಿಗೆ ಏನು ಹೇಳ್ತೀರಿ?

ಎಲ್ಲಾ ಊರುಗಳಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ನಮ್ಮ ಊರಿನ ಮುಂದೆ ಕೃಷ್ಣಾ ನದಿ ಹರಿಯುತ್ತದೆ. ನದಿಯಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಕುಡಿಯುವುದಕ್ಕಾಗಲೀ ಬಳಸುವುದಕ್ಕಾಗಲೀ ನೀರಿನ ಕೊರತೆ ಕಂಡುಬಂದದ್ದೇ ಇಲ್ಲ. ಒಂದು ವೇಳೆ ಶೌಚಾಲಯ ಕಟ್ಟಿಸಿದರೂ ನಮ್ಮ ಜನರು ‘ಶೌಚಾಲಯದಲ್ಲಿ ಕೂಡುವುದಕ್ಕೆ ಹೇಸಿಗೆ ಬರುತ್ತದೆ’ ಎಂದು ಖಂಡಿತ ಹೇಳುತ್ತಾರೆ. ಅಲ್ಲದೇ, ‘ಸಂಡಾಸು ಕೂಡೋದು ಮನಿಮುಂದ ಇರಬಾರದು, ಅನಿಷ್ಟ...’ ಅನ್ನುವಂತಹ ಮನಸ್ಥಿತಿ ನಮ್ಮ ಜನರದು. ನಾವು ಅಧಿಕಾರಿಗಳನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ನಮ್ಮ ಜನರ ಮನೋಧೋರಣೆ ಬದಲಾಗಬೇಕು. ಸರ್ಕಾರ ಧನಸಹಾಯ ಪಡೆದಿದ್ದೇವೆ. ಕೇಳುವ ಹಕ್ಕು ಅವರಿಗಿದೆ.

ಮಲ್ಲಮ್ಮ ಯಾಟಗಲ್, ದೇವದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT