ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಎ.ಐ. ಬಳಸಿ ಧ್ವನಿ ಸೃಷ್ಟಿಸಿ

Published 14 ಜುಲೈ 2024, 18:14 IST
Last Updated 14 ಜುಲೈ 2024, 18:14 IST
ಅಕ್ಷರ ಗಾತ್ರ

ಎ.ಐ. ಬಳಸಿ ಧ್ವನಿ ಸೃಷ್ಟಿಸಿ

ತಮ್ಮ ಅನುಪಮ ದನಿಯ ಕನ್ನಡದಿಂದ, ಕನ್ನಡ ಜಗತ್ತಿನ ಹೃದಯದಲ್ಲಿ ಅಜರಾಮರರಾಗಿ ಉಳಿದ ನಿರೂಪಕಿ, ನಟಿ ಅಪರ್ಣಾ ಅವರನ್ನು ಶ್ವಾಸಕೋಶದ ಕ್ಯಾನ್ಸರ್ ಬಲಿಪಡೆದಿದೆ. ಅವರು ಇನ್ನು ಮುಂದೆ ನೆನಪು ಮಾತ್ರ. ಬೆಂಗಳೂರಿನ ‘ನಮ್ಮ ಮೆಟ್ರೊ’ ಪ್ರಯಾಣಿಕರ ಅನುಕೂಲಕ್ಕೆ ಅವರು ನೀಡಿದ ಧ್ವನಿಯು ಮಧುರವಾಗಿ, ಸ್ಪಷ್ಟವಾಗಿ, ಅಪ್ಯಾಯಮಾನ
ವಾಗಿದೆ. ಮೆಟ್ರೊ ಸಂಚಾರದ ವೇಳೆ ಪ್ರಕಟಣೆಗಳನ್ನು ಅಪರ್ಣಾ ಅವರ ದನಿಯಲ್ಲಿ ಕೇಳುವುದೇ ಒಂದು ಸೊಗಸು‌.

ಮುಂದೆ ನಿರ್ಮಾಣವಾಗುವ ಹೊಸ ಮೆಟ್ರೊ ನಿಲ್ದಾಣಗಳಲ್ಲಿಯೂ ಮಾಹಿತಿ ಪ್ರಕಟಣೆಗೆ ಅಪರ್ಣಾ ಅವರ ಧ್ವನಿಯನ್ನು ಜನರೇಟಿವ್ ಎ.ಐ. ತಂತ್ರಜ್ಞಾನದ ನೆರವು ಪಡೆದು ಬಳಸಬಹುದು. ಅಪರ್ಣಾ ಅವರೇ ಖುದ್ದಾಗಿ ಧ್ವನಿ ನೀಡಿದಂತೆ ಹೊಸದಾಗಿ ಪ್ರಕಟಣೆಗಳನ್ನು ಸೃಷ್ಟಿಸಬಹುದು. ಅವರು ಇಲ್ಲಿಯವರೆಗೂ ಒದಗಿಸಿದ ಘೋಷಣೆಗಳ ಧ್ವನಿ ಮಾದರಿಗಳನ್ನು ಆಧರಿಸಿ, ಅವರದ್ದೇ ದನಿ ಮತ್ತು ಲಯದಲ್ಲಿ ಹೊಸ ಘೋಷಣೆಗಳನ್ನು ಸೃಷ್ಟಿಸಬಹುದು. ಬೆಂಗಳೂರು ಮೆಟ್ರೊ ರೈಲು ನಿಗಮವು ಈ ದಿಸೆಯಲ್ಲಿ ಮುಂದಡಿ ಇರಿಸಬೇಕಿದೆ.

–ಗಣೇಶ್ ಕೆ. ದಾವಣಗೆರೆ, ಮೂಡುಬಿದಿರೆ

ಮತದಾರರ ಪ್ರಜ್ಞಾವಂತಿಕೆ ಮೆಚ್ಚಬೇಕು

ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಈಚೆಗೆ ನಡೆದ ಉಪಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಹತ್ತು ಸ್ಥಾನಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಮತದಾರರ ಅಚ್ಚರಿಯ
ಪ್ರಜ್ಞಾವಂತಿಕೆಯನ್ನು ನಾವು ಮೆಚ್ಚಲೇಬೇಕು. ಹಿಮಾಚಲಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ  ಬಿಜೆಪಿ ಈ ಹಿಂದೆ ಪಕ್ಷಾಂತರದ ಪಿಡುಗನ್ನು ಸೃಷ್ಟಿಸಿ, ಮತದಾರರ ಮತಾಧಿಕಾರವನ್ನೇ ಕಸಿದುಕೊಂಡಿತ್ತು. ಈಗ  ಮತದಾರರು ಹಲವು ಪಕ್ಷಾಂತರಿಗಳನ್ನು ಸೋಲಿಸಿ, ಅನೈತಿಕ ರಾಜಕೀಯಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಮತದಾರರು ಹೀಗೆ ಪ್ರಜ್ಞಾವಂತಿಕೆ ಮೆರೆಯತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಏಕೆಂದರೆ ಈ ಬಗೆಯ ಪ್ರಜ್ಞಾವಂತಿಕೆಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಮತ ತೀರ್ಪಿಗೆ ದ್ರೋಹ ಬಗೆವ ರಾಜಕೀಯ ಕುತಂತ್ರವನ್ನು ಕೊನೆಗೊಳಿಸುವ ಶಕ್ತಿ ಹೊಂದಿದೆ.

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಸಮಾಜಮುಖಿ ಕಾರ್ಯ: ಉಲ್ಲೇಖಾರ್ಹ ಹೆಸರು

ಸತೀಶ್ ಜಿ.ಕೆ.ತೀರ್ಥಹಳ್ಳಿ ಅವರು ‘ಒಳ್ಳೆಯತನಕ್ಕೆ ಜಾಗ ಖಾಲಿ ಇದೆ’ ಲೇಖನದಲ್ಲಿ (ಸಂಗತ, ಜುಲೈ 12) ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಕೆಲವರ ಹೆಸರು ಉಲ್ಲೇಖಿಸಿದ್ದಾರೆ. ಆ ಹೆಸರುಗಳ ಜೊತೆಗೆ, ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ವಾಸವಾಗಿರುವ ಜುಬೇದಾ ಎನ್ನುವ ಮಹಿಳೆಯೊಬ್ಬರ ಹೆಸರು ಉಲ್ಲೇಖಿಸುವುದು ಸೂಕ್ತವಾದದ್ದು. ಇವರು ಅಸಹಾಯಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರ ಪೋಷಣೆ, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಅನಾಥ ಶವಗಳ ಸಂಸ್ಕಾರ, ಭಿಕ್ಷಾಟನೆ ನಿರ್ಮೂಲನೆಗೆ ಹೋರಾಟ, ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಮೃತರಾದವರ ಅಂತ್ಯಸಂಸ್ಕಾರ, ಕೋವಿಡ್ ರೋಗಿಗಳ ಆರೈಕೆ ಮುಂತಾದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ನರಸಿಂಹರಾಜಪುರದ ಬಡಾವಣೆಯೊಂದರ ಗಣೇಶೋತ್ಸವ ಸಮಿತಿ ಹಾಗೂ ಇಲ್ಲಿನ ನಾಗರಕಟ್ಟೆಯ ಕಾರ್ತಿಕ ದೀಪೋತ್ಸವ ಸಮಿತಿಯ ಅಧ್ಯಕ್ಷರಾಗಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

–ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

ಕಾರ್ಯಸಾಧ್ಯ ಬೇಡಿಕೆ ಮಂಡಿಸಿ

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಗೆ ಕಾನೂನಿನ ಮೂಲಕ ಖಾತರಿ ನೀಡಬೇಕು ಎಂಬ ತನ್ನ ಬೇಡಿಕೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಪುನರುಚ್ಚರಿಸಿದೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿದ್ಧಪಡಿಸಿದ ಇತ್ತೀಚಿನ ಸಂಶೋಧನಾ ವರದಿಯೊಂದು ಎಂಎಸ್‌ಪಿ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಅದು ಗಮನಿಸಿದಂತಿಲ್ಲ. ‘2014-15ರ ನಂತರದ ಅವಧಿಯಲ್ಲಿ ಎಂಎಸ್‌ಪಿ ಅಡಿ ಆಹಾರ ಧಾನ್ಯ ಖರೀದಿಸುವ ವೆಚ್ಚ ಹಲವು ಪಟ್ಟು ಹೆಚ್ಚಿದೆ (2022-23ರಲ್ಲಿ ಇದು ₹3.4 ಲಕ್ಷ ಕೋಟಿ). ಆದರೆ ಕೃಷಿ ಮತ್ತು ಸಂಬಂಧಿತ ಉತ್ಪಾದನೆಗಳ ಶೇ 6ರಷ್ಟು ಮಾತ್ರ ಈ ವ್ಯವಸ್ಥೆಯ ಅಡಿ ಖರೀದಿ ಆಗಿದೆ’ ಎಂದು ವರದಿಯು ಹೇಳಿದೆ.

ಕನಿಷ್ಠ ಬೆಂಬಲ ಬೆಲೆ ಇರುವುದು 22 ಬೆಳೆಗಳಿಗೆ ಮಾತ್ರ. ಇತರ ಬೆಳೆಗಳು ಉಪೇಕ್ಷೆಗೆ ಒಳಗಾಗಿವೆ. ಹಾಗಾದರೆ ಏನು ಮಾಡಬೇಕು? ಮಾರುಕಟ್ಟೆ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಆದಾಗ ಮಾತ್ರ ಬೆಂಬಲ ಒದಗಿಸಬೇಕು. ಖಾಸಗಿಯವರು ಎಂಎಸ್‌ಪಿಗಿಂತ ಹೆಚ್ಚಿನ ಬೆಲೆಗೆ ಖರೀದಿಸಲೇಬೇಕಾದ‌ ಪರಿಸ್ಥಿತಿ ನಿರ್ಮಿಸಬೇಕು. ಈ ಕ್ರಮಗಳ ಜತೆ ಬೆಳೆ ವೈವಿಧ್ಯವನ್ನು ಉತ್ತೇಜಿಸಬೇಕು.

ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ ಸಿದ್ಧಪಡಿಸುವಾಗ ಈ ವರದಿಯಲ್ಲಿನ ಅಂಶಗಳನ್ನು ಪರಿಗಣಿ
ಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಲಂತೂ ಅದು ತಯಾರಿಲ್ಲ. ರೈತ ಸಂಘಟನೆಗಳು ಕಾರ್ಯಸಾಧ್ಯವಾದ ಹಾಗೂ ಬಹುಸಂಖ್ಯೆಯ ರೈತರಿಗೆ ಉಪಯುಕ್ತವಾಗುವ ಬೇಡಿಕೆಗಳನ್ನು ಮಂಡಿಸುವುದು ಒಳಿತು.

–ಎಚ್.ಎಸ್. ಮಂಜುನಾಥ, ಗೌರಿಬಿದನೂರು

ತಕ್ಷಣದ ಪರಿಹಾರ ಬೇಕಿದೆ

ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ. ‘ನಡಿಗೆ ಶಿಕ್ಷೆ’ (ಪ್ರ.ವಾ., ಜುಲೈ 13) ಓದಿ ಮನ ಕಲಕಿತು. ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗಲು ಬಸ್ ವ್ಯವಸ್ಥೆಯನ್ನೇ ಅವಲಂಬಿ
ಸಿದ್ದಾರೆ. ಸರಿಯಾದ ಸಮಯಕ್ಕೆ ಬಸ್ ಬಾರದೆ ಪರದಾಡುವುದು, ಬಸ್ಸಿಗಾಗಿ 2-3 ತಾಸು ಕಾಯುವುದು ಇಲ್ಲಿ ಸಾಮಾನ್ಯವಾಗಿದೆ. ಪರೀಕ್ಷಾ ಸಮಯದಲ್ಲಂತೂ ವಿದ್ಯಾರ್ಥಿಗಳ ಅಳಲು ಹೇಳತೀರದು. ಇದರಿಂದಾಗಿ ಗ್ರಾಮೀಣಪ್ರದೇಶಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಸಹ ಕಡಿಮೆ ಆಗಿ ಗ್ರಾಮೀಣ ಪ್ರತಿಭೆಗಳು ವಿದ್ಯಾಭ್ಯಾಸದಿಂದ ವಂಚಿತವಾಗುತ್ತಿವೆ. ಈ ಸಮಸ್ಯೆಗೆ ತಕ್ಷಣ ಪರಿಹಾರದ ಅಗತ್ಯವಿದೆ.

–ಗಾನಶ್ರುತಿ ಎಂ.ಕೆ., ಹುಲಸೂರು, ಬೀದರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT