ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ನ್ಯಾಯಾಂಗದ ಪ್ರಬುದ್ಧ ನಡೆ

Published : 26 ಸೆಪ್ಟೆಂಬರ್ 2024, 20:52 IST
Last Updated : 26 ಸೆಪ್ಟೆಂಬರ್ 2024, 20:52 IST
ಫಾಲೋ ಮಾಡಿ
Comments

ನ್ಯಾಯಾಂಗದ ಪ್ರಬುದ್ಧ ನಡೆ

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರು ಇತ್ತೀಚೆಗೆ ಕೆಲವು ಸೂಕ್ಷ್ಮ ಸಂಗತಿಗಳ ಕುರಿತು
ನ್ಯಾಯಾಲಯದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಗಳ ಬಗ್ಗೆ ಸುಪ್ರೀಂ ಕೋರ್ಟ್‌ ಬಹಳ ಗಂಭೀರವಾಗಿ ಪ್ರತಿಕ್ರಿಯಿಸಿತ್ತಲ್ಲದೆ, ಸಂವೇದನಾಶೀಲತೆಗೆ ಸಂಬಂಧಿಸಿದಂತೆ ಪ್ರಕರಣ ತೀವ್ರ ಚರ್ಚೆಯನ್ನೂ ಹುಟ್ಟುಹಾಕಿತ್ತು. ಆದರೆ, ತಾವು ವ್ಯಕ್ತಿಗತವಾಗಿ ಟೀಕಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ ನ್ಯಾಯಮೂರ್ತಿ, ತಮ್ಮ ನಡೆನುಡಿಗಳಿಂದ ಯಾರಿಗಾದರೂ ನೋವೆನಿಸಿದ್ದಲ್ಲಿ ವಿಷಾದ ವ್ಯಕ್ತಪಡಿಸುವುದಾಗಿ ಬಹಿರಂಗವಾಗಿ ಹೇಳಿದ್ದರು. ಇದನ್ನು ಗಮನಿಸಿದ ಸುಪ್ರೀಂ ಕೋರ್ಟ್‌ ಕೂಡ ಪ್ರಕರಣವನ್ನು ಹೆಚ್ಚು ಲಂಬಿಸದೆ, ಅನಗತ್ಯ ವಾದ–ವಿವಾದಗಳಿಗೆ ಆಸ್ಪದವಾಗದಂತೆ ಭವಿಷ್ಯದಲ್ಲಿ ಜಾಗರೂಕತೆಯಿಂದ ಅಭಿಪ್ರಾಯ ವ್ಯಕ್ತಪಡಿಸಲು ಸೂಚಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿರುವುದು ಪ್ರಬುದ್ಧ ನಡೆಯಾಗಿದೆ.

ಜೊತೆಗೆ ನ್ಯಾಯಾಲಯದ ನಡಾವಳಿಗಳನ್ನು ಜಾಲತಾಣಗಳ ಮೂಲಕ ನೇರ ಪ್ರಸಾರ ಮಾಡುವುದನ್ನು ನಿರ್ಬಂಧಿಸುವ ಮಾತುಗಳಿಗೂ ಕೋರ್ಟ್‌ ವಿರಾಮ ಹಾಕಿರುವುದು ಸಮಂಜಸವಾಗಿದೆ. ಎಲ್ಲವನ್ನೂ ಮುಚ್ಚಿಡುವುದು ಪರಿಹಾರವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ನ್ಯಾಯಾಲಯಗಳ ಮೇಲಿನ ವಿಶ್ವಾಸ ವರ್ಧಿಸಲು ಜನಸಾಮಾನ್ಯರೂ ಕಲಾಪಗಳನ್ನು ವೀಕ್ಷಿಸಲಿ ಎಂದು ಕೋರ್ಟ್‌ ಹೇಳಿರುವುದು ಸರಿಯಾಗಿದೆ. ಈ ಬೆಳವಣಿಗೆಗಳು ನ್ಯಾಯಾಂಗದ ಬಗ್ಗೆ ಸಾಮಾನ್ಯರು ಇಟ್ಟಿರುವ ಭರವಸೆಗೆ ಪುಷ್ಟಿ ನೀಡುವಂತಿವೆ.

–ಚನ್ನು ಅ. ಹಿರೇಮಠ, ರಾಣೆಬೆನ್ನೂರು

ನೈತಿಕತೆ ಮರೆಯಾದ ಸಂದರ್ಭದಲ್ಲಿ...

ಕುಶಾಲನಗರದ ಪಟ್ಟಣ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದನ್ನು ನೋಡಿದ ಮೇಲೆ, ರಾಜಕೀಯ ಪಕ್ಷಗಳಲ್ಲಿ ಈಗ ಯಾವುದೇ ಬಗೆಯ ನೈತಿಕತೆ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ರಾಜಕೀಯ ಮೇಲಾಟದಲ್ಲಿ ಯಾವ ಪಕ್ಷದ ಸದಸ್ಯರು ಯಾವ ಸಂದರ್ಭದಲ್ಲಿ ಯಾರ ಕೈಹಿಡಿಯುತ್ತಾರೋ ಯಾರಿಗೆ ಕೈಕೊಡುತ್ತಾರೋ ಯಾರಿಗೂ ಗೊತ್ತಿರುವುದಿಲ್ಲ. ಇಂತಹ ಮೇಲಾಟಗಳ ಮೂಲಕ, ನೈತಿಕತೆ ಇರುವ ಯಾರೂ ರಾಜಕೀಯಕ್ಕೆ ಬರಬಾರದು ಎನ್ನುವ ಸಂದೇಶವನ್ನು ಜನಪ್ರತಿನಿಧಿಗಳು ನೀಡುತ್ತಿರುತ್ತಾರೆ. ಇದನ್ನು ನೋಡಿದ ಮೇಲಾದರೂ ರಾಜಕಾರಣಿಗಳ ಬಗ್ಗೆ ಜನಸಾಮಾನ್ಯರು ಹುಷಾರಾಗಿ ಇರಬೇಕಾಗುತ್ತದೆ.

ಪ್ರ–ಸನ್ನ ಗಣಪತಿ ಎ.ಎಚ್., ಬೆಂಗಳೂರು

ನಂದಿನಿ ಉತ್ಪನ್ನ: ನ್ಯಾಯ ಒದಗಿಸಬೇಕಿದೆ

ನಂದಿನಿ’ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ಇಂತಹ ಸಂದರ್ಭದಲ್ಲಿ ಬೆಲೆ ನಿಗದಿ ಕುರಿತೂ ಸಂಸ್ಥೆ ಹೆಚ್ಚು ಎಚ್ಚರಿಕೆ ವಹಿಸಬೇಕು. ರೈತರು ಮತ್ತು ಗ್ರಾಹಕರು ಈ ಎರಡೂ ವರ್ಗಗಳ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಸೂಕ್ತ ರೀತಿಯಲ್ಲಿ ಬೆಲೆ ನಿಗದಿಪಡಿಸಬೇಕು. ಲಾಭಾಂಶದಲ್ಲಿ ಹೆಚ್ಚಿನ ಅಂಶವು ರೈತರಿಗೆ ತಲುಪುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. 

–ಜಿ.ಪಿ.ದಯಾನಂದ, ಬೆಂಗಳೂರು

ಕನ್ನಡ ಮಾಧ್ಯಮ ಸುಭದ್ರಗೊಳಿಸುವ ಸವಾಲು

ಎಂಟು ದಶಕಗಳ ಹಿಂದೆ ಸ್ಥಾಪನೆಯಾದ ಬೆಂಗಳೂರಿನ ಬ್ಯಾಟರಾಯನಪುರದ ‘ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯು ಹೈಟೆಕ್ ಆಗಿ ಪರಿವರ್ತನೆಗೊಂಡಿರುವ ಸುದ್ದಿಯು (ಪ್ರ.ವಾ., ಸೆ. 26) ಎಲ್ಲರ ಸಂತೋಷ ಹಾಗೂ ಪ್ರಶಂಸೆಗೆ ಅರ್ಹವಾದುದು. ಆದರೆ, ‘ಈ ವರ್ಷ ಇಂಗ್ಲಿಷ್ ಮಾಧ್ಯಮ
ಆರಂಭಿಸಲಾಗಿದ್ದು, 30 ಮಕ್ಕಳು ಕಲಿಯುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮ ಆರಂಭಿಸಿದ ಬಳಿಕ ಸ್ಥಳೀಯರೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಿದ್ದಾರೆ’ ಎಂಬ ಪ್ರಭಾರ
ಮುಖ್ಯೋಪಾಧ್ಯಾಯರ ಮಾತು ಸ್ವಲ್ಪ ಅಸಮಾಧಾನವನ್ನು ಉಂಟುಮಾಡುತ್ತದೆ.

ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಇವೆ. ಸರ್ಕಾರಿ ಶಾಲೆಯನ್ನು ಸುಸಜ್ಜಿತಗೊಳಿಸಿ ಅಲ್ಲಿರುವ ಕನ್ನಡ ಮಾಧ್ಯಮದ ವ್ಯವಸ್ಥೆಯನ್ನು ಸುಭದ್ರಗೊಳಿಸುವುದು ಸವಾಲಿನ ಕೆಲಸವಾದರೂ ಶೈಕ್ಷಣಿಕ ದೃಷ್ಟಿಯಿಂದ ಇದು ಉತ್ತಮವಾದುದು ಮತ್ತು ಅಪೇಕ್ಷಣೀಯವಾದುದು. ಅದುಬಿಟ್ಟು ಇಂಗ್ಲಿಷ್‌ ಮಾಧ್ಯಮಕ್ಕೆ ಆದ್ಯತೆ ನೀಡುವುದು, ಮಗನನ್ನು ಚೆನ್ನಾಗಿ ಓದಿಸಿ ಶ್ರೀಮಂತರ ‘ಮನೆ ಅಳಿಯ’ನನ್ನಾಗಿ ಮಾಡಿದ ಹಾಗೆ ಆಗುತ್ತದೆ. ಕಟ್ಟಡದ ಜೊತೆಗೆ ಅಗತ್ಯವಿರುವಷ್ಟು ಶಿಕ್ಷಕರ ನೇಮಕಾತಿ, ಶಿಕ್ಷಕರನ್ನು ಸಶಕ್ತರನ್ನಾಗಿಸುವುದು, ಆಟ, ಪಾಠ, ಪಠ್ಯೇತರ ಚಟುವಟಿಕೆಗಳಂತಹ ಸಮಗ್ರ ಯೋಜನೆಗಳೊಂದಿಗೆ ಆ ಸುಸಜ್ಜಿತ ಕಟ್ಟಡದಲ್ಲಿ ಕಲಿಕೆ ಪ್ರಧಾನವಾಗಬೇಕು. ಆಗ ಕನ್ನಡ ಮಾಧ್ಯಮ ತನಗೆ ತಾನೇ ಜನಾಕರ್ಷಣೀಯ ಆಗುತ್ತದೆ ಮತ್ತು ಶಿಕ್ಷಣದ ನಿಜವಾದ ಉದ್ದೇಶವೂ ಬಹುಪಾಲು ಈಡೇರುತ್ತದೆ.

ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷಾ ಮಾಧ್ಯಮದಲ್ಲಿಯೇ ಇರಬೇಕು ಎಂಬ ಶಿಕ್ಷಣತಜ್ಞರ
ಅಭಿಪ್ರಾಯವನ್ನು ಒಂದು ಸಮಾಜ ತನ್ನ ದೇಶದ ಸುಸ್ಥಿರ ಹಾಗೂ ಸುಕ್ಷೇಮ ಭವಿಷ್ಯದ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕಾಗಿದೆ.

–ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಕಾವ್ಯ ರಸದೌತಣ!

ಈ ಬಾರಿಯ ದಸರಾದಲ್ಲಿ
ಮೊದಲ ಬಾರಿಗೆ ವಿದೇಶಿ
ಕವಿಗಳಿಗೆ ಆಹ್ವಾನವಂತೆ!
ಸಹೃದಯರಿಗೆ ಸಿಗಲಿ ಬಿಡಿ
ಬಗೆಬಗೆಯ ಕಾವ್ಯ ರಸದೌತಣ,
ಆದರೆ, ಹಿಂದೊಮ್ಮೆ
ಹೆಸರನ್ನೂ ಮುದ್ರಿಸಿ
ನೀಡಿಬಿಟ್ಟಿದ್ದರು ಆಯೋಜಕರು
ಸ್ವರ್ಗಸ್ಥ ಕವಿಗೂ
ಆತ್ಮೀಯ ಆಮಂತ್ರಣ!

–ಮ.ಗು.ಬಸವಣ್ಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT