ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20ಗೆ ವಿದಾಯ ಹೇಳಿದ ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್‌

Published : 26 ಸೆಪ್ಟೆಂಬರ್ 2024, 16:02 IST
Last Updated : 26 ಸೆಪ್ಟೆಂಬರ್ 2024, 16:02 IST
ಫಾಲೋ ಮಾಡಿ
Comments

ಕಾನ್ಪುರ: ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್ ಅಲ್ ಹಸನ್ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಭಾರತ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯ ತಮ್ಮ ಪಾಲಿಗೆ ಕೊನೆಯದಾಗಬಹುದು ಎಂದಿದ್ದಾರೆ.  ಮುಂದಿನ ವರ್ಷ ಚಾಂಪಿಯನ್ಸ್‌ ಟ್ರೋಫಿ ಬಳಿಕ ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವುದಾಗಿ ಅವರು  ಪ್ರಕಟಿಸಿದ್ದಾರೆ.

ತಮ್ಮ ದೇಶದಲ್ಲಿ ಕೊಲೆ ಆರೋಪ ಹೊತ್ತಿರುವ, 37 ವರ್ಷ ವಯಸ್ಸಿನ ಶಕೀಬ್ ಅವರು ಬಾಂಗ್ಲಾದೇಶ ಕಂಡ ಶ್ರೇಷ್ಠ ಕ್ರಿಕೆಟ್‌ ತಾರೆಗಳಲ್ಲಿ ಒಬ್ಬರು. ತವರಿನಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿ ಸಾಕಾರಗೊಳ್ಳದೇ ಹೋದಲ್ಲಿ ಭಾರತ ವಿರುದ್ಧ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯವೇ ತಮ್ಮ ಪಾಲಿನ ಕೊನೆಯ ಟೆಸ್ಟ್‌ ಆಗಲಿದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಪ್ರಕಟಿಸಿದರು.

ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಸರಣಿ ನಡೆಯಲಿದ್ದು, ಎರಡನೇ ಟೆಸ್ಟ್‌ ಪಂದ್ಯವನ್ನು ಮೀರ್‌ಪುರದಲ್ಲಿ ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಈ ಸರಣಿಗೆ ತಮ್ಮನ್ನು ಆಯ್ಕೆ ಮಾಡುವ ಭರವಸೆಯನ್ನು ಅವರು ಹೊಂದಿದ್ದಾರೆ.

‘ನನ್ನ ಪಾಲಿಗೆ ಆಟ ಕಷ್ಟವಾಗುತ್ತ ಬಂದಿದೆ. ಆಟದ ಮೇಲೆ ಗಮನ ಕೇಂದ್ರೀಕರಿಸಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬುದು ಅಲ್ಲಾಹುಗಷ್ಟೇ ಗೊತ್ತು’ ಎಂದು ಬಾಂಗ್ಲಾದೇಶ ಕಂಡ ಶ್ರೇಷ್ಠ ಆಲ್‌ರೌಂಡರ್ ಒಪ್ಪಿಕೊಂಡರು.

ಶಕೀಬ್ 129 ಟಿ20 ಪಂದ್ಯಗಳನ್ನು ಆಡಿದ್ದು 2551 ರನ್ ಹಾಗೂ 149 ವಿಕೆಟ್‌ಗಳನ್ನು ಪಡೆದಿದ್ದಾರೆ. ಫ್ರಾಂಚೈಸಿ ಲೀಗ್‌ಗಳಲ್ಲಿ ಅವರು ಮುಂದುವರಿಯಲಿದ್ದಾರೆ.

‘ಟಿ20 ವಿಶ್ವಕಪ್‌ ವೇಳೆ ಕೊನೆಯ ಟಿ20 ಪಂದ್ಯ ಆಡಿದ್ದೆ. ಇದನ್ನು ಆಯ್ಕೆಗಾರರ ಜೊತೆ ಚರ್ಚಿಸಿದ್ದೇನೆ. 2026ರಲ್ಲಿ ಮುಂದಿನ ಟಿ20 ವಿಶ್ವಕಪ್ ಇರುವ ಕಾರಣ ಇದು ವಿದಾಯ ಹೇಳಲು ಸೂಕ್ತ ಸಮಯ’ ಎಂದರು.

70 ಟೆಸ್ಟ್‌ ಪಂದ್ಯಗಳಲ್ಲಿ ಅವರು 4,600 ರನ್ ಹಾಗೂ 242 ವಿಕೆಟ್ ಕಬಳಿಸಿದ್ದಾರೆ.

ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ದಂಗೆಯ ವೇಳೆ ಶಕಿಬ್  ಅವರನ್ನು ಕೊಲೆಪ್ರಕರಣವೊಂದರಲ್ಲಿ ದೋಷಿಯಾಗಿ ಆರೋಪಿಸಲಾಗಿದೆ. ಶಕಿಬ್ ಕೂಡ ಅವಾಮಿ ಲೀಗ್‌ನಿಂದ ಸಂಸದರಾಗಿದ್ದರು. ಗಾರ್ಮೆಂಟ್‌ ಉದ್ಯೋಗಿಯಾಗಿದ್ದ ಮೊಹಮ್ಮದ್ ರುಬೆಲ್ ಕೊಲೆ ಪ್ರಕರಣದಲ್ಲಿ ಅವರ ತಂದೆ ರಫಿಕುಲ್ ಇಸ್ಲಾಂ ಅವರು ಶಕೀಬ್ ವಿರುದ್ಧ ಆ. 7ರಂದು ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT