ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಆಕಾಂಕ್ಷಿಯ ಆಕಾಂಕ್ಷೆ! 

Published : 25 ಸೆಪ್ಟೆಂಬರ್ 2024, 18:33 IST
Last Updated : 25 ಸೆಪ್ಟೆಂಬರ್ 2024, 18:33 IST
ಫಾಲೋ ಮಾಡಿ
Comments

‘ಯಾಕ್ ಸರ್ ತಲೆ ಮೇಲೆ ಕೈ ಹೊತ್ಕೊಂಡು ಕೂತಿದೀರ?’ ಪಂಚಾಯಿತಿ ಅಧ್ಯಕ್ಷರನ್ನ ಕೇಳಿದ ಮುದ್ದಣ್ಣ.

‘ಏನ್ ಹೇಳೋದು ಬಿಡು ಮುದ್ದಣ್ಣ, ಯಾರ್ ನಮ್ಮೋರು, ಯಾರು ಹೊರಗಿನೋರು, ಮತ್ತ್ಯಾರು ಹಿತಶತ್ರುಗಳು ಅಂತಾನೇ ಗೊತ್ತಾಗ್ತಿಲ್ಲ’ ಬೇಸರದಲ್ಲಿ ಹೇಳಿದರು ಅಧ್ಯಕ್ಷ ವಿಜಿ. 

‘ಕೆಲವರು ಹಾಗೇ ಇರ್ತಾರೆ ಸರ್, ನಿಮ್ಮ ಪದವಿ ಮೇಲೆ ಒಬ್ಬಿಬ್ಬರ ಕಣ್ಣಾ ಇರುತ್ತೆ?’ 

‘ಅದು ನಂಗೂ ಗೊತ್ತು. ಆದರೆ, ಯಾರು ಹೆಂಗೆ ಅಂತಾನೇ ಗೊತ್ತಾಗ್ತಿಲ್ಲ’.

‘ಅದಕ್ಕ್ಯಾಕೆ ಯೋಚನೆ ಮಾಡ್ತೀರಿ ಸರ್, ನನಗೆ ಅಂಜನ ಪ್ರಯೋಗ ಗೊತ್ತು‌. ಯಾರ ಮನದಲ್ಲೇನಿದೆ ಅಂತ ಅಂಜನ‌ ಹಾಕಿ ನೋಡಿ ಹೇಳ್ಲಾ?’ ಕೇಳಿದ ಮುದ್ದಣ್ಣ. 

‘ಸರಿ, ಒಬ್ಬೊಬ್ಬರದೇ ಫೋಟೊ ಕೊಡ್ತೀನಿ, ಅವರು ಹೆಂಗೆಂಗೆ ಅಂತ ನೋಡಿ ಹೇಳು’. 

‘ಸರ್, ಇವರು‌ ಮಹಾ ಮಹತ್ವಾಕಾಂಕ್ಷಿ. ನಿಮ್ಮ ಪದವಿ ಎಂಬ ಕೈಲಾಸದ ಮೇಲೆ ಈ ಶಿವನದೂ ಕಣ್ಣಿದೆ. ಆದರೆ, ಮನದಲ್ಲಿರೋದನ್ನ ಆಡಂಗಿಲ್ಲ, ಅನುಭವಿಸಂಗಿಲ್ಲ ಅನ್ನೋ ಸ್ಥಿತಿಯಲ್ಲಿದ್ದಾರೆ’.

‘ಇನ್ನು ಇವರು, ಅವಕಾಶವಿದ್ದರೆ ಕುಮಾರ ಪರ್ವತವನ್ನೇ ಕೊಟ್ಟರೂ ಬೇಡ ಎನ್ನುವವರಲ್ಲ. ಅದೇ ರೀತಿ, ನೀವೆಂದರೆ ಸ್ವಲ್ಪವೂ ಇಷ್ಟವಿಲ್ಲ. ಆದರೆ, ನೀವು ಹೋಗಿ ಬೇರೆಯವರು ಬಂದರೆ ಊದುವುದು ಕೊಟ್ಟು, ಬಾರಿಸುವುದನ್ನು ತೆಗೆದುಕೊಂಡಂತಾಗುತ್ತದೆ ಎಂಬ ಕಾರಣಕ್ಕೆ, ನಿಮ್ಮ ರಾಜೀನಾಮೆಗೆ ಇವರು ಒತ್ತಾಯಿಸುತ್ತಿಲ್ಲ’.

‘ಈ ಫೋಟೊ ನೋಡಿ ಹೇಳು’. 

‘ಈಗ ಅನಿವಾರ್ಯ ಕರ್ಮ ಎಂಬಂತೆ ತಮ್ಮ ಹುದ್ದೆ ನಿಭಾಯಿಸುತ್ತಿರುವ ಇವರಿಗೆ ತಮ್ಮ ಪಕ್ಷದೊಳಗಿನ ಶೋಕವನ್ನ ಕಡಿಮೆ ಮಾಡುವುದೇ ಸವಾಲಾಗಿದೆ. ನೀವು ಜಾಗ ಖಾಲಿ ಮಾಡಿ, ಅವರ ಸಮುದಾಯದವರೇ ಪದವಿಗೇರುವುದು ಇವರಿಗೆ ಎಳ್ಳಷ್ಟೂ ಇಷ್ಟವಿಲ್ಲ. ಹೀಗಾಗಿ, ಮೇಲ್ನೋಟಕ್ಕೆ ಇವರ ವಿರೋಧವಷ್ಟೇ’. 

‘ಅಂದ್ರೆ, ವಿರೋಧಪಕ್ಷದ ಯಾರಿಗೂ ನನ್ನ ಬಗ್ಗೆ ವಿರೋಧವಿಲ್ಲ ಅಂತಾಯ್ತು’ ಖುಷಿಪಟ್ಟರು ಅಧ್ಯಕ್ಷರು.

‘ಆದರೆ, ನನಗಿದೆಯಲ್ಲ ಸರ್...’ 

‘ಹಾಂ! ನಿನಗಾ?’ 

‘ನಾನೂ ಅಧ್ಯಕ್ಷ ಹುದ್ದೆ ಆಕಾಂಕ್ಷಿ!’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT