ಸಮಗ್ರ ವಿ.ವಿ: ಹೊಸ ಪರಿಕಲ್ಪನೆಯಲ್ಲ

ಕೃಷಿಗೆ ಸಂಬಂಧಿಸಿದಂತೆ ಸಮಗ್ರ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿಪ್ರಾಯಪಟ್ಟಿರುವುದು (ಪ್ರ.ವಾ., ಸೆ. 23) ಸರಿಯಾಗಿದೆ. ಈ ಮೊದಲು ಎಲ್ಲ ಕೃಷಿ ವಿಶ್ವವಿದ್ಯಾಲಯಗಳೂ ಸಮಗ್ರವೇ ಆಗಿದ್ದವು. ನಂತರ ಹುಟ್ಟಿಕೊಂಡ ಪಶುವೈದ್ಯಕೀಯ, ತೋಟಗಾರಿಕೆಯಂತಹ ವಿಶ್ವವಿದ್ಯಾಲಯಗಳ ನಡುವೆ ಸಮನ್ವಯ ಇಲ್ಲದೆ ಕಂಗಾಲಾಗಿದ್ದು ರೈತರು ಮಾತ್ರ. ಕೃಷಿಕನಿಗೆ ಎಲ್ಲವೂ ಇರಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇವೆಲ್ಲವೂ ಒಂದೇ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಇರುವ ಸಮಗ್ರ ವಿಶ್ವವಿದ್ಯಾಲಯ ಇದಕ್ಕೆ ಪೂರಕವಾಗಿದೆ.

–ಅನಿಲಕುಮಾರ ಮುಗಳಿ, ಧಾರವಾಡ

ಅಂದಂದಿನ ನೈವೇದ್ಯವಷ್ಟೇ ಪ್ರಸಾದ

ರಾಜ್ಯದ ಪ್ರಮುಖ ದೇವಸ್ಥಾನವೊಂದರಿಂದ ಖರೀದಿಸಿದ ಲಾಡುವಿನ ಗುಣಮಟ್ಟದ ಬಗ್ಗೆ ಬಿ.ಎಂ.ಭ್ರಮರಾಂಭ ಆಕ್ಷೇಪ ವ್ಯಕ್ತಪಡಿಸಿದ್ದಾರೆ (ವಾ.ವಾ., ಸೆ. 23). ಸಾಮಾನ್ಯವಾಗಿ ಲಾಡು ಎಂದಾಕ್ಷಣ ಬೂಂದಿಯಿಂದ ತಯಾರಿಸಿದ ಲಾಡು ನಮ್ಮ ಕಣ್ಮುಂದೆ ಬರುತ್ತದೆ. ವಾಸ್ತವವಾಗಿ ಕಡಲೆಹಿಟ್ಟಿನ ಲಾಡು (ಬೇಸನ್ ಲಾಡು), ಅಕ್ಕಿಹಿಟ್ಟಿನ ಲಾಡು, ಪುರಿಲಾಡು (ಮಂಡಕ್ಕಿ ಲಾಡು), ಬೂಂದಿ ಲಾಡು, ಮೋತಿ ಲಾಡು (ಸಣ್ಣ ಬೂಂದಿ ಉಪಯೋಗಿಸಿ ಮಾಡುವ ಲಾಡು) ಹೀಗೆ ಹಲವು ವಿಧಗಳ ಲಾಡುಗಳಿವೆ. ಕಡಲೆಹಿಟ್ಟಿನಿಂದ ಮೆತ್ತನೆಯ ಲಾಡು ಮತ್ತು ಗಟ್ಟಿಯಾದ ಲಾಡು ಮಾಡುತ್ತಾರೆ. ಅದೇ ರೀತಿ ಚುರುಮುರಿಯ ಗರಿಗರಿ ಲಾಡು ಮತ್ತು ಗಟ್ಟಿಯಾಗಿರುವ ಲಾಡುಗಳನ್ನೂ ತಯಾರಿಸುತ್ತಾರೆ.

ತಿರುಪತಿಯಲ್ಲಿ ಮಾರುವ, ಉದ್ದಿನಬೇಳೆಯಿಂದ ಆಯಾ ದಿನ ತಯಾರಿಸುವ ‘ವಡೆ’ಯೂ ಕಲ್ಲಿನಂತೆ ಗಟ್ಟಿಯಾಗಿಯೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ಅದು ಕಳಪೆ ಗುಣಮಟ್ಟದ್ದಾಗಿರುವುದಿಲ್ಲ ಅಥವಾ ಬಹಳಷ್ಟು ದಿನಗಳ ಹಿಂದೆ ತಯಾರಿಸಿದ ವಡೆ ಆಗಿರುವುದಿಲ್ಲ. ದೇವಸ್ಥಾನಗಳಲ್ಲಿ ಆಯಾ ದಿನ ದೇವರಿಗೆ ನೈವೇದ್ಯ ಮಾಡಿದ ತಿಂಡಿಗಳು ಮಾತ್ರ ಪ್ರಸಾದ ಎನಿಸಿಕೊಳ್ಳುತ್ತವೆ. ಹಾಗಾಗಿ, ಬಹಳ ದಿನಗಳ ಹಿಂದೆ ತಯಾರಿಸಿ ದಾಸ್ತಾನು ಮಾಡಲಾದ ತಿಂಡಿಗಳು ಪ್ರಸಾದ ಎನಿಸಿಕೊಳ್ಳುವುದಿಲ್ಲ. ದೂರದ ಊರುಗಳಿಂದ ಬರುವ ಭಕ್ತರು ತಿರುಪತಿ ಲಾಡುವನ್ನು ಖರೀದಿಸಿ ತಮ್ಮ ನೆಂಟರಿಷ್ಟರಿಗೆ ತಲುಪಿಸುವಲ್ಲಿ ಹಲವಾರು ದಿನಗಳು ಹಿಡಿಯುತ್ತವೆ. ಆದ್ದರಿಂದ ತಿರುಪತಿ ಲಾಡುವಿನ ಪೊಟ್ಟಣದ ಮೇಲೆ ಇಂತಿಷ್ಟು ದಿನಗಳೊಳಗೆ ಉಪಯೋಗಿಸಬೇಕೆಂದು ಮುದ್ರಿಸಿರುತ್ತಾರೆ.

–ಜಿ.ನಾಗೇಂದ್ರ ಕಾವೂರು, ಸಂಡೂರು

ಎಲ್ಲ ಬಾವುಟ ತೆರವಾಗಲಿ

ಇತ್ತೀಚೆಗೆ ದಾವಣಗೆರೆಗೆ ಹೋಗಿದ್ದೆ. ಗಣೇಶೋತ್ಸವದ ಮೆರವಣಿಗೆಯಲ್ಲಿ ಎರಡು ಕೋಮುಗಳ ನಡುವೆ ಕಲ್ಲು ತೂರಾಟ ನಡೆದು ರಾಜ್ಯದ ಗಮನ ಸೆಳೆದಿದ್ದರ ಫಲವಾಗಿ, ಎಲ್ಲಿ ನೋಡಿದರಲ್ಲಿ ಪೊಲೀಸರು ಜಮಾಯಿಸಿದ್ದರು, ನಗರದಲ್ಲಿ ಶಾಂತಿ ನೆಲಸುವಂತೆ ಮಾಡಿದ್ದರು. ಆದರೆ ಬಸ್ಸಿನ ಕಿಟಕಿಯಿಂದ ಇಣುಕಿ ನೋಡಿದರೆ, ಕೆಲವು ಮನೆಗಳ ಮೇಲೆ ಹಸಿರು ಬಾವುಟ, ಇನ್ನು ಕೆಲವು ಮನೆಗಳ ಮೇಲೆ ಕೇಸರಿ ಬಾವುಟ ರಾರಾಜಿಸುತ್ತಿದ್ದವು! ಇದರ ವಿಶೇಷ ಏನೆಂದರೆ, ತಮ್ಮನ್ನು ತಾವು ಇಂತಹ ಕೋಮಿಗೆ ಸೇರಿದವರು ಎಂದು ಗುರುತಿಸಿಕೊಳ್ಳುವ ಹೆಮ್ಮೆಯಿಂದ ಎರಡೂ ಕೋಮುಗಳವರು ಪೈಪೋಟಿಯ ಮೇಲೆ ಬಾವುಟಗಳನ್ನು ನೆಟ್ಟಿದ್ದರು! ಜಗಳೂರು ರಸ್ತೆಯ ಅರಳಿಮರದ ಹತ್ತಿರ ಕೆಲವರು ಅತಿ ಎತ್ತರದ ಹೈಮಾಸ್ಕ್ ಲೈಟ್ ಕಂಬಕ್ಕೆ ಅತಿ ದೊಡ್ಡದಾದ ಹಸಿರು ಬಣ್ಣದ ಧ್ವಜವನ್ನು ಆರೋಹಣ ಮಾಡಿದ್ದಾರೆ. ಇವರಿಗೆ ಪೈಪೋಟಿ ನೀಡಲು ಅಲ್ಲೇ ಪಕ್ಕದ ವಾಟರ್ಟ್ಯಾಂಕ್ ಮತ್ತು ಮೊಬೈಲ್ ಟವರ್ ಕಂಬಕ್ಕೆ ಕೇಸರಿ ಧ್ವಜವನ್ನು ಕಟ್ಟಲಾಗಿದೆ!

ಇದು ಇಡೀ ದಾವಣಗೆರೆಯನ್ನು ಕೇಸರಿ, ಹಸಿರುಮಯ ನಗರವನ್ನಾಗಿ ಮಾಡಿದೆ. ನಿಜಕ್ಕೂ ಈ ಅತಿರೇಕವನ್ನು ಯಾರೂ ಗಮನಿಸಿಲ್ಲವೋ ಅಥವಾ ಗೊತ್ತಿದ್ದೂ ಕೈಕಟ್ಟಿ ಕೂತಿದ್ದಾರೋ ಗೊತ್ತಿಲ್ಲ. ಮೊದಲೇ ಕೋಮುದಳ್ಳುರಿ ಬಾಧಿಸುತ್ತಿರುವ ಈ ದಿನಗಳಲ್ಲಿ ಧ್ವಜಗಳ ಪೈಪೋಟಿಯು ಕೋಮುಭಾವನೆ ಮತ್ತಷ್ಟು ಕೆರಳುವಂತೆ ಮಾಡುತ್ತದೆ. ಅವರು ಹೆಚ್ಚು, ಇವರು ಕಡಿಮೆ ಎನ್ನುವುದಕ್ಕಿಂತ ಎಲ್ಲ ಬಾವುಟಗಳನ್ನೂ ತೆರವುಗೊಳಿಸುವುದು ಸೂಕ್ತ ಅನ್ನಿಸುತ್ತದೆ. ಇದು ಬರೀ ದಾವಣಗೆರೆಯ ಸಮಸ್ಯೆ ಅಲ್ಲ, ದೇಶದುದ್ದಕ್ಕೂ ಇರುವ ಸಮಸ್ಯೆಯಾಗಿದೆ. ಈ ಬಾವುಟಗಳ ಪ್ರದರ್ಶನ ಜನರನ್ನು ವಿಭಜಿಸುತ್ತದೆ. ಮೊದಲು ಇವುಗಳನ್ನು ತೆರವುಗೊಳಿಸಿ ಇಡೀ ರಾಜ್ಯಕ್ಕೆ ಮಾದರಿಯಾಗುವ ಅವಕಾಶ ದಾವಣಗೆರೆ ನಗರಕ್ಕೆ ಇದೆ.

–ರಾಜು ಬಿ. ಲಕ್ಕಂಪುರ, ಜಗಳೂರು

ಏಕತೆ ಪರಿಕಲ್ಪನೆ: ಅಮೂರ್ತವಾಗಿಯೇ ಇರಲಿ

ಭಾರತದ ವಿವಿಧ ನಾಡುಗಳಲ್ಲಿನ ಕೆಲವು ಆಚರಣೆ, ಇರಸಣಿಕೆಗಳಲ್ಲಿ ಸ್ವಲ್ಪಮಟ್ಟಿಗೆ ಕಂಡುಬರುವ ಸಾಮ್ಯತೆಯನ್ನು ಸ್ಥೂಲವಾಗಿ ಏಕತೆ ಎಂದು ಬಣ್ಣಿಸಲಾಗುತ್ತದೆ. ಆದರೆ ಇದು ವ್ಯಾವಹಾರಿಕವಾಗಿ, ವಾಸ್ತವದಲ್ಲಿ ಇರುವುದಲ್ಲ. ವಿಭಿನ್ನ, ವೈವಿಧ್ಯ ಮತ್ತು ಸಮಾನಾಂತರ ಮೌಲ್ಯಗಳೇ ದೇಶದಲ್ಲಿನ ನಿಜವಾದ ಸ್ಥಾಯಿಭಾವ. ಇಡೀ ನಿರ್ದಿಷ್ಟ ಭೂಖಂಡಕ್ಕೆ ಸರ್ವಸಮಾನ ಶತ್ರು ಎದುರಿದ್ದಾಗ ಸ್ವಾತಂತ್ರ್ಯ ಸಾಧನೆಯ ಐಕಮತ್ಯದಿಂದ ಭಾರತವೆಂಬ ದೇಶವು ಬಹುತೇಕ ಒಂದಾಗಿ ಹೋರಾಡಿದಂತೆ ಕಂಡುಬಂದಿತಾದರೂ, ಪ್ರಾದೇಶಿಕ ವೈಶಿಷ್ಟ್ಯವೇನೂ ಅಳಿಸಿಹೋಗಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿ ಈಗ ‘ಒಂದು ದೇಶ’ ಎಂಬ ಭಾವವನ್ನು ಅಸ್ಪಷ್ಟ ಕಿಡಿಯಾಗಿ ಉಳಿಸಿಕೊಳ್ಳಲಾಗಿದೆ, ವಸುಧೈವ ಕುಟುಂಬಕಂ ಎಂಬ ಅನೂಚಾನ ಹೇಳಿಕೆಯ ಮುಂದುವರಿಕೆ ಎಂಬಂತೆ! ಈ ಹಂತದಲ್ಲಿ, ‘ಒಂದು ದೇಶ, ಒಂದು ಭಾಷೆ‘, ‘ಒಂದು ದೇಶ, ಒಂದು ಚುನಾವಣೆ’ ಎಂಬಂಥ ಅತಿರೇಕದ ಗಾಳಿಯನ್ನು ಉರುಬಹೋದರೆ ವ್ಯತಿರಿಕ್ತ ಪರಿಣಾಮವೇ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಈ ಪರಿಕಲ್ಪನೆಯನ್ನು ಆದಷ್ಟು ಅಮೂರ್ತವಾಗಿಯೇ ಉಳಿಸಿಕೊಳ್ಳುವುದು ಒಳ್ಳೆಯದು.

–ಆರ್.ಕೆ.ದಿವಾಕರ, ಬೆಂಗಳೂರು

ಇರದು ಷಡ್ಯಂತ್ರ

ಅಧಿಕಾರದಲ್ಲಿದ್ದಾಗ
ನೀಡಿದರೆ ಸ್ವಚ್ಛ ಶುದ್ಧ
ಸ್ವಾರ್ಥರಹಿತ
ಆಡಳಿತ...
ಯಾರೂ ಮಾಡುವುದಿಲ್ಲ
ಆಗ ಯಾರ ವಿರುದ್ಧವೂ
ಷಡ್ಯಂತ್ರ.

–ವೆಂಕಟೇಶ ಬೈಲೂರು, ಕುಮಟಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.