ಕೃಷಿಮೇಳ ಇನ್ನಷ್ಟು ಜನಸ್ನೇಹಿ ಆಗಲಿ

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಡೆದ ಕೃಷಿಮೇಳಕ್ಕೆ ಮೊದಲ ಬಾರಿ ಹೋಗಿದ್ದೆ. ಕೃಷಿಯ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆ ಇರಬಹುದು ಎಂಬ ಭಾವನೆ ನನ್ನಲ್ಲಿತ್ತು. ಆದರೆ ಕೃಷಿಮೇಳವು ನನ್ನ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿತು. ಅಲ್ಲಿಗೆ ಜನಸಾಗರ ಹರಿದುಬಂದಿದ್ದುದನ್ನು ನೋಡಿ ಅಚ್ಚರಿಯಾಯಿತು. ಆಬಾಲವೃದ್ಧ
ರಾದಿಯಾಗಿ ಎಲ್ಲರೂ ಅಲ್ಲಿದ್ದರು. ಗಮನಸೆಳೆವ ಕೃಷಿ ಉಪಕರಣಗಳು, ಬಗೆ ಬಗೆಯ ತರಕಾರಿ ಬೀಜಗಳು, ಸಸಿಗಳು, ಮಳಿಗೆಗಳಲ್ಲಿ ಸಂತೋಷದಿಂದ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದ ವ್ಯಾಪಾರಿಗಳು... ಎಲ್ಲವನ್ನೂ ನೋಡಿ ಸಂತೋಷವಾಯಿತು.

ಆದರೆ ಕೃಷಿಮೇಳದಲ್ಲಿ ಕೆಲವು ಮೂಲಸೌಲಭ್ಯಗಳ ಕೊರತೆ ಇದ್ದುದು ಬೇಸರ ಮೂಡಿಸಿತು. ಶೌಚಾಲಯಗಳು, ವಿಶ್ರಾಂತಿ ತಾಣಗಳು, ಕೈಗೆಟಕುವ ಬೆಲೆಗೆ ಊಟದಂತಹ ವ್ಯವಸ್ಥೆಯ ಕೊರತೆ ಇತ್ತು. ಇಂತಹ ಕೊರತೆಗಳನ್ನು ನೀಗಿಸುವ ಮೂಲಕ ಸರ್ಕಾರವು ಮುಂದಿನ ದಿನಗಳಲ್ಲಿ ಕೃಷಿಮೇಳ ಇನ್ನಷ್ಟು ಜನಸ್ನೇಹಿಯಾಗುವಂತೆ ಮಾಡಬೇಕಿದೆ.

–ಸಂತೋಷ್ ಕುಮಾರ್ ಎಲ್., ಹಿರಿಯೂರು

ರೈಲು ವಿಳಂಬ ತಪ್ಪಲಿ, ದಕ್ಷತೆ ಹೆಚ್ಚಲಿ

ರೈಲು ವಿಳಂಬದಿಂದ ಮದುವೆ ಮುಹೂರ್ತಕ್ಕೆ ಸರಿಯಾಗಿ ಮಂಟಪಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕದಲ್ಲಿದ್ದ ಮುಂಬೈನ ವರ ಮತ್ತು ಅವರ ಕುಟುಂಬದ ಸದಸ್ಯರ ಭಾವನೆಗೆ ಸ್ಪಂದಿಸಿದ ರೈಲ್ವೆ ಇಲಾಖೆ, ಸಕಾಲಕ್ಕೆ ಅವರನ್ನು ನಿಗದಿತ ಸ್ಥಳಕ್ಕೆ ತಲುಪಿಸಿದ್ದಾಗಿ ವರದಿಯಾಗಿದೆ (ಪ್ರ.ವಾ., ನ. 17). ರೈಲು ವಿಳಂಬದ ಕುರಿತು, ಕುಟುಂಬದ ಸದಸ್ಯರು ರೈಲ್ವೆ ಸಚಿವರಿಗೆ ‘ಎಕ್ಸ್’ನಲ್ಲಿ ಟ್ಯಾಗ್ ಮಾಡಿದ ಪರಿಣಾಮವಾಗಿ, ಸಚಿವರ ಆಣತಿಯಂತೆ ಸಮರೋಪಾದಿಯಲ್ಲಿಕ್ರಮ ಕೈಗೊಂಡ ರೈಲ್ವೆ ಇಲಾಖೆ ಅಧಿಕಾರಿಗಳ ಕಾರ್ಯ ಶ್ಲಾಘನೀ ಯವೇ ಹೌದು. ಬಹುಶಃ ಭಾರತೀಯ ರೈಲ್ವೆ ಇಲಾಖೆಯಲ್ಲಿ ಇದು ಹಿಂದೆಂದೂ ಕಾಣದಿದ್ದಂತಹ ದಾಖಲೆಯ ಕಾರ್ಯ ಎನ್ನಬಹುದು! ಏಕೆಂದರೆ, ರೈಲ್ವೆ ಇಲಾಖೆಯು ವಿಳಂಬಕ್ಕೆ ಮತ್ತೊಂದು ಹೆಸರು ಎಂದೇ ಕುಖ್ಯಾತಿ ಪಡೆದಿದೆ. ರೈಲು ಸಮಯಕ್ಕೆ ಸರಿಯಾಗಿನಿಲ್ದಾಣವನ್ನು ಬಿಟ್ಟರೂ, ನಡುವೆ ಕ್ರಾಸಿಂಗ್, ನಿಲ್ದಾಣದಲ್ಲಿ ಪ್ಲ್ಯಾ ಟ್ಫಾರಂ ಖಾಲಿ ಇಲ್ಲವೆಂಬ ಕಾರಣದಿಂದನಡು ಮಧ್ಯದಲ್ಲಿ ರೈಲು ನಿಲ್ಲಿಸಿ ಜನರನ್ನು ಹೈರಾಣವಾಗಿಸುವುದು ಸಹಜ ಎನ್ನುವಂತಹ ಸ್ಥಿತಿ ಇದೆ. ಇದರಿಂದ,
ಕೆಲಸದ ನಿಮಿತ್ತ ನಿತ್ಯ ಪ್ರಯಾಣಿಸುವವರು, ಸಂದರ್ಶನ, ಪರೀಕ್ಷೆಗೆ ತೆರಳುವವರು ತೊಂದರೆ ಅನುಭವಿಸುತ್ತಲೇ ಇರುತ್ತಾರೆ.

ಮೈಸೂರು- ಬೆಂಗಳೂರು ನಡುವೆ ಸಂಚರಿಸುವ ರೈಲುಗಳು ಹಲವು ಬಾರಿ ನಿಗದಿತ ಸಮಯಕ್ಕಿಂತ 30ರಿಂದ 45 ನಿಮಿಷ ವಿಳಂಬವಾಗಿ ಗಮ್ಯವನ್ನು ತಲುಪುವುದಿದೆ. ಹೀಗಾಗಿ, ರೈಲುಗಳು ಸಮಯಕ್ಕೆ ಸರಿಯಾಗಿ ನಿಗದಿತ ನಿಲ್ದಾಣ ತಲುಪುವಂತೆ ಮಾಡುವಲ್ಲಿ ರೈಲ್ವೆ ಇಲಾಖೆ ದಕ್ಷತೆಯನ್ನು ತೋರಬೇಕಿದೆ. ಹಾಗೆಯೇ ರೈಲುಗಳಲ್ಲಿ ದುರ್ನಾತ ಬೀರುವ ಶೌಚಾಲಯಗಳ ಸ್ವಚ್ಛತೆಗೆ ಗಮನಹರಿಸಿ, ರೈಲು ಪ್ರಯಾಣಿಕರಿಗೆ ಆಗುವ ಹಿಂಸೆ ತಪ್ಪಿಸಬೇಕಿದೆ. ಶೌಚಾಲಯವನ್ನು ಆಗಾಗ ಸ್ವಚ್ಛಗೊಳಿಸಲು ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗಿದೆ.

–ಮುಳ್ಳೂರು ಪ್ರಕಾಶ್, ಮೈಸೂರು

ಜಾತಿಗೆ ಸೀಮಿತವಾಗದಿರಲಿ ದಾಸಶ್ರೇಷ್ಠರು

ದಾಸಶ್ರೇಷ್ಠ ಕನಕದಾಸರ ಜಯಂತಿ ಇಂದು (ನ. 18). ಕನಕದಾಸರು ರಚಿಸಿದ ಕೀರ್ತನೆಗಳು ಒಂದು ವಿಶಿಷ್ಟ ಪ್ರಯೋಗ. ಅವರು ಕನ್ನಡ ಸಂಗೀತ ಲೋಕಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ ಎಂದು ಮಾನವ ಕುಲಕ್ಕೆ ತಮ್ಮ ಕೀರ್ತನೆಯ ಮೂಲಕ ತಿಳಿಹೇಳಿದ್ದಾರೆ. ಸಮಾಜದಲ್ಲಿನ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದವರು ಅವರು. ಅವರ ರಚನೆಗಳು ಸಾಮಾಜಿಕ ನ್ಯಾಯ, ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುತ್ತವೆ ಮತ್ತು ಕೋಮು ಸೌಹಾರ್ದದ ಭಾವನೆಯನ್ನು ಎತ್ತಿ ತೋರಿಸುತ್ತವೆ. ಆದರೆ ಇಂದು ಅವರು ಒಂದು ಜಾತಿಗೆ ಸೀಮಿತವಾಗುತ್ತಿದ್ದಾರೆ. ಹಾಗಾಗಬಾರದು. ಕನಕದಾಸರ ಉಪದೇಶಗಳು, ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಆಗಬೇಕು. ಜಾತೀಯತೆಯನ್ನು ಬಿಡಬೇಕು. ಆಗ ಮಾತ್ರ ಅವರ ಜಯಂತಿ ಆಚರಣೆಗೆ ಅರ್ಥ ಬರಲು ಸಾಧ್ಯ.

–ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ

70 ತಾಸು ಕೆಲಸ: ವ್ಯತಿರಿಕ್ತ ಪರಿಣಾಮ ಅರಿಯಬೇಕಿದೆ

‘ಯುವಕರು ವಾರದಲ್ಲಿ 70 ತಾಸು ಕೆಲಸ ಮಾಡಬೇಕು ಎಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ತಮ್ಮ ಹಿಂದಿನ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ವಾರಕ್ಕೆ 70 ತಾಸು ಎಂದರೆ, ವಾರಾಂತ್ಯದ ಎರಡು ರಜೆ ದಿನಗಳನ್ನು ಹೊರತುಪಡಿ
ಸಿದರೆ ದಿನಕ್ಕೆ 14 ತಾಸುಗಳ ಕೆಲಸ ಆಗುತ್ತದೆ. ಕಚೇರಿಗೆ ಹೋಗಿಬರುವ ಸಮಯ ಕನಿಷ್ಠ ಎರಡು ಗಂಟೆ ಎಂದರೂ 16 ಗಂಟೆಗಳು ಆಗುತ್ತವೆ. ವೈದ್ಯರ ಪ್ರಕಾರ, ಆರೋಗ್ಯವಂತ ವ್ಯಕ್ತಿಗೆ ನಿತ್ಯ 8 ಗಂಟೆಗಳ ನಿದ್ರೆ ಅವಶ್ಯ. ಇನ್ನು ನಿತ್ಯದ ಇತರ ಕೆಲಸಗಳಿಗೆ ಸಮಯವನ್ನು ಹೇಗೆ ನೀಡುವುದು? ಅಷ್ಟೇ ಅಲ್ಲದೆ ಕೆಲಸ ಮಾಡಿ ಬಳಲಿದ ವ್ಯಕ್ತಿಗೆ ಮನರಂಜನೆಯ ಅವಶ್ಯಕತೆ ಕೂಡಾ ಇರುತ್ತದೆ ಅಲ್ಲವೇ? ಇಷ್ಟು ದೀರ್ಘಕಾಲ ಕೆಲಸ ಮಾಡಿದರೆ ದಾಂಪತ್ಯದ ಗತಿ ಏನು? ಈಗಾಗಲೇ ದಂಪತಿ ಪರಸ್ಪರ ಸಮಯ ನೀಡಲಾಗದೇ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗಿರುವುದನ್ನು ಸಮೀಕ್ಷೆಗಳು ತಿಳಿಸಿವೆ.

ಇವುಗಳನ್ನೆಲ್ಲಾ ಪರಿಶೀಲಿಸಿಯೇ ದಿನವನ್ನು ಎಂಟು ಗಂಟೆಗಳಂತೆ ಮೂರು ಭಾಗ ಮಾಡಿ, ನಿದ್ರೆಗೆ, ವೈಯಕ್ತಿಕ ಕೆಲಸಗಳಿಗೆ ಹಾಗೂ ವೃತ್ತಿಗೆ ಎಂದು ತಲಾ ಎಂಟು ಗಂಟೆಗಳಂತೆ ನಿಗದಿ ಮಾಡಿರುವುದು. ಮಾಧ್ಯಮದವರು, ಕೂಲಿಯಾಳುಗಳು, ತುರ್ತು ಮತ್ತು ಅಗತ್ಯ ಸೇವೆಗಳ ವೈದ್ಯರು, ಪೊಲೀಸ್ ಇಲಾಖೆಯವರು, ರಕ್ಷಣಾ ಕ್ಷೇತ್ರಕ್ಕೆ ಸೇರಿದಂತಹವರು ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡುವುದು ನಿಜ. ಆದರೆ ಅವರ ಕೆಲಸಗಳಲ್ಲಿ ಏಕತಾನತೆ ಕಡಿಮೆ. ವೈವಿಧ್ಯ ಇರುವ ಕಾರಣ, ಶ್ರಮ ಅಷ್ಟಾಗಿ ಬಾಧಿಸದೇ ಇರಬಹುದು. ಐ.ಟಿ ಕ್ಷೇತ್ರ ಆ ಮಾದರಿಯದ್ದಲ್ಲ. ಕೆಲಸ ಮಾಡುವಷ್ಟೂ ಸಮಯ ಕಂಪ್ಯೂಟರ್ ಪರದೆಯನ್ನು ನೋಡುತ್ತಲೇ ಇರಬೇಕು ಮತ್ತು ಫೋನಿನಲ್ಲಿ ಸಂಭಾಷಣೆ ಮಾಡುತ್ತಿರಬೇಕು. ಇಂತಹ ಕೆಲಸಗಳನ್ನು ನಿರಂತರವಾಗಿ ಮಾಡುವವರ ಆರೋಗ್ಯ ಮತ್ತು ಕಣ್ಣಿನ ಗತಿ ಏನಾಗಬೇಕು?

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.