ಹೀಗಿದೆ ಎಕ್ಸ್ಪ್ರೆಸ್ ಬಸ್ಸಿನ ಹಣೆಬರಹ...

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಇತ್ತೀಚೆಗೆ ನಾನು ಕೆಎಸ್ಆರ್ಟಿಸಿ ಸುವರ್ಣ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಬೇಕಾಗಿ ಬಂತು. ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ಕೇಂದ್ರ ನಿಲ್ದಾಣದಿಂದ ಹೊರಟ ಬಸ್ಸು ಶಿವಮೊಗ್ಗ ತಲುಪಿದಾಗ ಬರೋಬ್ಬರಿ ಮಧ್ಯಾಹ್ನ ಒಂದೂಮುಕ್ಕಾಲು ಗಂಟೆ. ದಾರಿಯುದ್ದಕ್ಕೂ ಅರ್ಧಂಬರ್ಧ ಕಾಮಗಾರಿ ನಡೆದು ನಿಂತುಹೋಗಿರುವ ಹೆದ್ದಾರಿ ಮೇಲ್ಸೇತುವೆಗಳು, ಅದರಿಂದಾಗಿ ಇರುವ ರಸ್ತೆಯೂ ಇಲ್ಲದಂತಾಗಿರುವುದು, ಊರಿಗೂ ಹೆದ್ದಾರಿಗೂ ಸಂಬಂಧವಿಲ್ಲದಂತೆ ಇರುವ ಬಸ್ ನಿಲ್ದಾಣಗಳು, ಬೀರೂರಿನ ಬಳಿ ಸುಮಾರು 25 ನಿಮಿಷ ಮುಚ್ಚಿದ ರೈಲ್ವೆ ಗೇಟು, ಜನನಿಬಿಡ ರಸ್ತೆಗಳಲ್ಲಿ ನಿಂತೂ ನಿಂತೂ ಹೊರಡುವ ಎಕ್ಸ್ಪ್ರೆಸ್ ಬಸ್ಸಿನ ಹಣೆಬರಹವನ್ನು ಕಂಡು ತುಂಬಾ ಬೇಸರವಾಯಿತು.

ಜನಸ್ನೇಹಿ ಸೇವೆಯನ್ನು ಕೈಗೆಟಕುವ ದರದಲ್ಲಿ ಕೊಡುವಲ್ಲಿ ಕೆಎಸ್ಆರ್ಟಿಸಿ ದೇಶಕ್ಕೇ ಒಂದು ಮಾದರಿಯಾಗಿ ಬೆಳೆದ ಸಂಸ್ಠೆ. ಆದರೆ ಇಂದು ಐರಾವತ, ಅಂಬಾರಿ ಎಂದೆಲ್ಲ ದುಬಾರಿ ದರದ ವೋಲ್ವೊ ಬಿಳಿಯಾನೆಗಳನ್ನು ಸಾಕುವ ದುರಾಸೆಗೆ ಬಿದ್ದು ಸಾಮಾನ್ಯ ಕೆಂಪು ಬಸ್ಸುಗಳನ್ನು ಕಳಪೆ ಹಾದಿಗೆ ಅಟ್ಟಿರುವುದು ನಾಡಿನ ದುರ್ದೈವ. ಬೆಂಗಳೂರಿನ ಕೆಟ್ಟ ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಂಡರೂ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ದುರವಸ್ಥೆಯ ಕಾರಣದಿಂದ 300 ಕಿ.ಮೀ. ಪ್ರಯಾಣಕ್ಕೆ ಬರೋಬ್ಬರಿ ಏಳೂಮುಕ್ಕಾಲು ಗಂಟೆ ಸವೆಸುವಂತೆ ಆಗಿರುವ ಈ ಪರಿಸ್ಠಿತಿಯನ್ನು ಯಾವ ರೀತಿಯ ಅಭಿವೃದ್ಧಿ ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಭಾವಿಸಿವೆಯೋ ಗೊತ್ತಿಲ್ಲ. ಬೆಂಗಳೂರು– ಮೈಸೂರು ಹೆದ್ದಾರಿಯನ್ನು ಕೊಂಡಾಡುವವರಿಗೆ ರಾಜ್ಯದ ಉಳಿದ ಭಾಗಗಳ ರೋದನ ಕೇಳದಂತಾಗಿದೆ.

ಶ್ರೀಕಂಠ, ಬೆಂಗಳೂರು

ಮತ್ತೆ ಮತ್ತೆ ಅಭಿವೃದ್ಧಿಯಾಗುತ್ತದೆ ನಮ್ಮ ರಸ್ತೆ!

ಗುತ್ತಿಗೆದಾರ ಶೇ 5ರಷ್ಟು ಕಮಿಷನ್ ಪಾವತಿಸಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಶಾಸಕರ ಬೆಂಬಲಿಗರೊಬ್ಬರು,
ಹೊಸದಾಗಿ ಡಾಂಬರ್ ಹಾಕಿ ಅಭಿವೃದ್ಧಿಪಡಿಸಿದ್ದ ರಸ್ತೆಯನ್ನು ಬುಲ್ಡೋಜರ್ ಬಳಸಿ ಸುಮಾರು ಅರ್ಧ ಕಿ.ಮೀ.ನಷ್ಟು ದೂರ ಕಿತ್ತು ಹಾಕಿರುವ ಪ್ರಕರಣ ಉತ್ತರಪ್ರದೇಶದಿಂದ ವರದಿಯಾಗಿದೆ (ಪ್ರ.ವಾ., ಅ. 6). ನಮ್ಮಲ್ಲಿ ಗುತ್ತಿಗೆದಾರ
ರಿಂದ ಶೇ 40ರಿಂದ 50ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ದೂರು ಕೇಳಿಬಂದರೂ ಮತ್ತು ಆ ದೂರು ದಿಲ್ಲಿ ತನಕ ಮುಟ್ಟಿದರೂ ಕಮಿಷನ್ ನೀಡದ್ದಕ್ಕೆ ಉತ್ತರಪ್ರದೇಶದಂತೆ ರಸ್ತೆಗಳನ್ನು ಅಗೆದುಹಾಕುವುದು ಅಥವಾ ಮಾಡಲಾದ ಕಾಮಗಾರಿಗಳನ್ನು ಕೆಡವಿ ಹಾಕುವುದು ಕಂಡುಬಂದಿಲ್ಲ. ಹಾಗೆ ಆಗಿದ್ದರೆ ನಮ್ಮಲ್ಲಿ ಒಂದೂ ಕಾಮಗಾರಿ ಉಳಿಯುತ್ತಿರಲಿಲ್ಲ. ನಮ್ಮ ನೇತಾರರು, ಅನುಯಾಯಿಗಳು ಇನ್ನೂ ಆ ಮಟ್ಟಕ್ಕೆ ಇಳಿದಿಲ್ಲ. ಹೀಗಾಗಿ, ಗುತ್ತಿಗೆದಾರರೇ ಯಾರಿಗೆಲ್ಲ ಕೊಡಬೇಕೋ ಅಷ್ಟನ್ನು ಕೊಟ್ಟು ಉಳಿದ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡಿ, ಅವು ಅಲ್ಪಾವಧಿಯಲ್ಲಿ ಕಿತ್ತು ಹೋಗುವಂತೆ ಮಾಡುತ್ತಾರೆ. ಅದೇ ರಸ್ತೆಯನ್ನು ಮತ್ತೆ ಮತ್ತೆ ಅಭಿವೃದ್ಧಿಪಡಿಸುತ್ತಾ ಎಲ್ಲರೂ ನಿರಂತರ ಲಾಭದಲ್ಲಿ ಇರಬಹುದು ಎಂಬ ಕಾರಣದಿಂದ!

ಕಮಿಷನ್ ಕೊಡಲಾಗದವರು ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಒಂದಿಷ್ಟು ಗೊಣಗುತ್ತಾ ಇರುತ್ತಾರೆ. ಜನಸಾಮಾನ್ಯರು ಇದನ್ನೆಲ್ಲಾ ಅಸಹಾಯಕರಾಗಿ ಗಮನಿಸುತ್ತಾರೆ!

ವೆಂಕಟೇಶ ಮಾಚಕನೂರ, ಧಾರವಾಡ

ಕ್ರೀಡಾ ಸಾಧನೆ: ಶ್ರೇಷ್ಠತೆ ಅನುಕರಿಸೋಣ

ಹಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟವು ಭಾರತೀಯರಾದ ನಮ್ಮಲ್ಲಿ ಕುತೂಹಲವನ್ನು ಕೆರಳಿಸಿದೆ. ಪರರಾಷ್ಟ್ರಗಳ ಕ್ರೀಡಾಳುಗಳ ಸಾಧನೆಯ ಎತ್ತರವನ್ನು ಗಮನಿಸಿದಾಗ, ನಮ್ಮ ಕ್ರೀಡಾಪಟುಗಳೂ ಏಕೆ ಅವರಂತೆ ಸಾಧಿಸಲು ಆಗುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಹೀಗೆ ಹೇಳುವಾಗ ಇಲ್ಲಿ ಮಾತ್ಸರ್ಯದ ಸೋಂಕು ಇಲ್ಲ. ಅನುಕರಿಸಬೇಕೆಂಬ ಹಂಬಲ ಮಾತ್ರ ಇದೆ. ಚೀನಾ, ದಕ್ಷಿಣ ಕೊರಿಯಾ ಮತ್ತು ಜಪಾನ್ ರಾಷ್ಟ್ರವು ಪದಕ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಈ ದೇಶಗಳಲ್ಲಿ ಅವರು ತಮ್ಮ ಸ್ಪರ್ಧಾಳುಗಳಿಗಾಗಿ ನೀಡುತ್ತಿರುವ ವ್ಯವಸ್ಥೆಗಳೇನೇನು, ಕೊಡುವ ಸೌಲಭ್ಯಗಳ್ಯಾವುವು, ಪ್ರೋತ್ಸಾಹ ಯಾವ ಬಗೆಯದು ಎಂದು ತಿಳಿದುಕೊಳ್ಳಲು ನಮ್ಮ ಕೇಂದ್ರ ಸರ್ಕಾರವು ಕ್ರೀಡಾ ವಿಭಾಗದ ಮುಖ್ಯಸ್ಥರು, ವಿವಿಧ ಕ್ರೀಡಾ ಪರಿಣತರ ಒಂದು ನಿಯೋಗವನ್ನು ರಚಿಸಿ ಅಲ್ಲಿಗೆ ಕಳುಹಿಸಿಕೊಡಬಹುದು.

ಈ ನಿಯೋಗವು ಅಲ್ಲಿಯ ಕ್ರೀಡಾಪಟುಗಳಿಗಾಗಿ ಮಾಡಿದ ವ್ಯವಸ್ಥೆ ಮತ್ತು ರೂಪುರೇಷೆಗಳನ್ನು ಅಭ್ಯಸಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಂತರ ನಮ್ಮ ದೇಶದಲ್ಲಿಯ ಎಲ್ಲ ಕ್ರೀಡಾಪ್ರಕಾರಗಳ ಅಧಿಕಾರಿಗಳು, ಪರಿಣತರನ್ನು ಆಹ್ವಾನಿಸಿ, ವರದಿಯಲ್ಲಿಯ ಯಾವ ಅಂಶಗಳನ್ನು ನಮ್ಮ ಕ್ರೀಡಾ ಸಂಹಿತೆಯಲ್ಲಿ ಸೇರಿಸಲು ಸಾಧ್ಯ ಎಂಬುದನ್ನು ಚರ್ಚಿಸಿ, ನಿರ್ಧರಿಸಿ ಅನುಷ್ಠಾನಕ್ಕೆ ತರುವ ಮೂಲಕ ನಮ್ಮ ಸ್ಪರ್ಧಾತ್ಮಕ ಕ್ರೀಡಾಕ್ಷೇತ್ರದಲ್ಲಿ ಇನ್ನೂ ಉನ್ನತ ಸಾಧನೆಯ ಭರವಸೆಯನ್ನು ಮೂಡಿಸುವ ಪ್ರಯತ್ನಗಳು ತುರ್ತಾಗಿ ಆಗಬೇಕು.

ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ಮಿತಿಮೀರಿದ ಶಬ್ದಮಾಲಿನ್ಯ ನಿಯಂತ್ರಿಸಿ

ಯಾವುದೇ ಧಾರ್ಮಿಕ ಆಚರಣೆಯ ಭಾಗವಾಗಿ ನಡೆಯುವ ಉತ್ಸವಗಳಲ್ಲಿ ಇತ್ತೀಚೆಗೆ ಮಿತಿಮೀರಿ
ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ. ಈ ಮೂಲಕ ಸುತ್ತಮುತ್ತಲಿನ ಪರಿಸರಕ್ಕೆ ತೀವ್ರತರವಾದ ಶಬ್ದಮಾಲಿನ್ಯ ಉಂಟಾಗುತ್ತಿದೆ. ಮಕ್ಕಳು, ವಯೋವೃದ್ಧರು ಅನಾರೋಗ್ಯಪೀಡಿತರು, ಹೃದಯಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಉತ್ಸವ ನಿರ್ವಹಣೆಗೆ ಆಯೋಜನೆಗೊಂಡ ಪೊಲೀಸ್ ವ್ಯವಸ್ಥೆಯೂ ಈ ಬಗ್ಗೆ ಚಕಾರ ಎತ್ತುವುದಿಲ್ಲ. ಇದು ವ್ಯವಸ್ಥೆಯ ಲೋಪವೇ? ಧ್ವನಿವರ್ಧಕದ ಅತಿಯಾದ ಶಬ್ದದ ಆಧಾರದ ಮೇಲೆಯೇ ಉತ್ಸವದ ಅದ್ದೂರಿತನ ನಿಂತಿದೆ ಎಂದು ಅನೇಕರು ತಪ್ಪು ತಿಳಿದಂತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಉತ್ಸವಗಳ ಸಂದರ್ಭದಲ್ಲಿ ಧ್ವನಿವರ್ಧಕದ ಬಳಕೆಗೆ ಮಿತಿ ಹೇರಬೇಕು.

ಮಂಜುನಾಥ್ ಬಿ., ಹೊಳೆಹೊನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.