ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ನಾಗರಿಕತೆಗೆ ಮಂಗಳಾರತಿ

Published 23 ಜುಲೈ 2024, 23:19 IST
Last Updated 23 ಜುಲೈ 2024, 23:19 IST
ಅಕ್ಷರ ಗಾತ್ರ

ಸದನದಲ್ಲಿ...

ಏನಿದು
ಸದನದಲ್ಲಿ

ರಾಮಾಯಣ?! 
ಹೌದು...
‘ವಾಲ್ಮೀಕಿ’ ರಾಮಾಯಣ! 

- ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ಖರ್ಚು ಹೆಚ್ಚೇನಲ್ಲ...

ಅಧಿಕೃತವಾಗಿ ಹದಿನೈದು ಸಾವಿರ ರೂಪಾಯಿ ವಾರ್ಷಿಕ ಆದಾಯ ಎಂದು ಪ್ರಮಾಣಪತ್ರ ಪಡೆದ ಬಡ ಬೋರೇಗೌಡ ತನ್ನ ಮಗಳ ಮದುವೆಯ ಛತ್ರ, ಚಿನ್ನ, ಊಟ, ಬಟ್ಟೆಗೆಂದು ಆದಾಯದ ಮೂವತ್ತಮೂರು ಪಟ್ಟು ಖರ್ಚು (₹ 5 ಲಕ್ಷ) ಮಾಡುವುದನ್ನು ನೋಡಿದರೆ, ಅಂಬಾನಿ ಪುತ್ರನ ಮದುವೆಗೆ ಮಾಡಿದ ಖರ್ಚು ಹೆಚ್ಚೇನಲ್ಲ ಅನಿಸುತ್ತದೆ!

ಜೆ.ಬಿ.ಮಂಜುನಾಥ, ಪಾಂಡವಪುರ

ಕಾವೇರಿಗಲ್ಲ, ವೃಷಭಾವತಿಗೆ ಆರತಿ...

ವಾರಾಣಸಿಯಲ್ಲಿ ನಿತ್ಯವೂ ನಡೆಯುವ ‘ಗಂಗಾ ಆರತಿ’ ಮಾದರಿಯಲ್ಲಿ ಕಾವೇರಿಗೂ ಆರತಿ ಮಾಡಲೆಂದು ತಜ್ಞರ ಆಯೋಗವನ್ನು ಕಾಶಿಗೆ ಕಳಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ (ಪ್ರ.ವಾ., ಜುಲೈ 23). ಉತ್ತರ ಭಾರತದ ನದಿಗಳು ವರ್ಷವಿಡೀ ತುಂಬಿ ಹರಿಯುತ್ತಿರುತ್ತವೆ. ನಮ್ಮ ನದಿಗಳಾದರೋ ಅತಿವೃಷ್ಟಿಯಲ್ಲೂ ಬಿರುಬೇಸಿಗೆಯಲ್ಲೂ ರೈತರ ಪಾಲಿಗೆ ಕಣ್ಣೀರನ್ನೇ ಹರಿಸುತ್ತಿವೆ. ಜಲಾನಯನ ಕ್ಷೇತ್ರದ ದುರವಸ್ಥೆಯಿಂದಾಗಿ ನಮ್ಮ ನದಿಗಳು ಕೆಂಪು ಮೇಲ್ಮಣ್ಣನ್ನು ಮತ್ತು ಅಪಾರ ಮಾಲಿನ್ಯವನ್ನು ಸಾಗಿಸುತ್ತ ಮಹಾಮಳೆಯಲ್ಲಿ ರಜಸ್ವಲೆಯೇ ಆಗಿರುತ್ತವೆ. ಬೇಸಿಗೆಯಲ್ಲಿ ಶ್ರೀರಂಗಪಟ್ಟಣದ ಕಾವೇರಿಧಾರೆಗಳು ಹಸಿರುಚಾಪೆಯನ್ನು ಹೊದೆದು ಮೃತಧಾರೆಗಳಾಗುತ್ತವೆ. ಸುತ್ತೆಲ್ಲ ಜಲತಜ್ಞರಿರುವ ಬೆಂಗಳೂರಿನ ಬೆಳ್ಳಂದೂರು ಕೆರೆಯಂತೂ ನೊರೆಯ ಬಗ್ಗಡವನ್ನೂ ಪ್ಲಾಸ್ಟಿಕ್‌ ಹೋಮದ ಹೊಗೆಯನ್ನೂ ಹೊಮ್ಮಿಸುತ್ತದೆ. ಇಲ್ಲಿನ ವೃಷಭಾವತಿಯಂತೂ ನಮ್ಮ ನಾಗರಿಕತೆಗೇ ಮಂಗಳಾರತಿ ಎತ್ತುತ್ತಿದೆ.

ಮಳೆನೀರನ್ನು ಇಂಗಿಸುವಂತೆ ಜನರಿಗೆ ಪ್ರೇರಣೆ ಕೊಟ್ಟು, ಕೆರೆಗಳ ಹೂಳೆತ್ತಿಸಿ, ಸಿಂಗಪುರ ಅಥವಾ ವೂಹಾನ್‌ ಮಾದರಿಯಲ್ಲಿ ಪ್ರತಿ ನಗರವೂ ಸ್ಪಂಜಿನ ನಗರವಾಗುವಂತೆ ಮಾಡಿ, ಪ್ರತಿ ಜಲಾಶಯವೂ ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಮಾಡುವತ್ತ ಸರ್ಕಾರ ಯೋಜಿಸಬೇಕಲ್ಲವೆ?

ನಾಗೇಶ ಹೆಗಡೆ, ಕೆಂಗೇರಿ

ಬೇಕಾಗಿದೆ ವಚನ ವಿಶ್ವವಿದ್ಯಾಲಯ

ಬಸವಭಕ್ತರು, ಬಸವವಾದಿಗಳ ಆಗ್ರಹದಂತೆ, ಬಸವಣ್ಣನವರು ಮತ್ತು ಶರಣರು ಕೊಟ್ಟ ವಚನಗಳನ್ನು ಫ.ಗು.ಹಳಕಟ್ಟಿ ಅವರು ಸಂಸ್ಕರಿಸಿ, ಪರಿಷ್ಕರಿಸಿ ಕನ್ನಡ ನಾಡಿಗೆ ಕೊಟ್ಟು ಈಗ 100 ವರ್ಷಗಳು ಸಂದಿವೆ. ಈ ನೆನಪಿನಲ್ಲಿ, ಹಳಕಟ್ಟಿ ಅವರ ಹುಟ್ಟೂರಾದ ಧಾರವಾಡದಲ್ಲಿ ಅವರ ಹೆಸರಿನಲ್ಲಿ ವಚನ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು.

ಹದಿನಾರನೆಯ ಶತಮಾನದಲ್ಲಿ ನಡೆದ ವಚನಗಳ ಸಂಕಲನ ಕಾರ್ಯದ ಸಂದರ್ಭದಲ್ಲಿ ಮತ್ತು ಶೂನ್ಯ ಸಂಪಾದನೆಯ ರಚನಾ ಕಾಲಘಟ್ಟದಲ್ಲಿ ಕೆಲ ಪ್ರಕ್ಷಿಪ್ತ ವಚನಗಳು, ಖೋಟಾ ವಚನಗಳು ವಚನಗಳ ಕಟ್ಟಿನಲ್ಲಿ ಸೇರಿಕೊಂಡಿವೆ. ಅವುಗಳ ಪುನರಾವೃತ್ತಿಯಾಗಿ ಹಿಂದಿನ ಒಂದು ದಶಕದಿಂದ ನಡೆದ ಸಮಗ್ರ ವಚನಗಳ ಸಂಪುಟದ ಸಂಪಾದನೆಯಲ್ಲಿಯೂ ಕೆಲವು ಪ್ರಮಾದಗಳು ನಡೆದಿವೆ. ಇಂತಹ ದೋಷಪೂರಿತ ವಚನಗಳನ್ನು ತೆಗೆದುಹಾಕುವ ಮತ್ತು ವಚನ ಚಳವಳಿಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಕಾರ್ಯ ಅತ್ಯಗತ್ಯವಾಗಿ ನಡೆಯಬೇಕಿದೆ. ಬಸವಕಾಲೀನ ಶರಣರ ಬಗ್ಗೆ ಅನೇಕ ಸಂಶೋಧನೆಗಳು ನಡೆಯಬೇಕಿದೆ.

ಶಶಿಕಾಂತ ಪಟ್ಟಣ, ಬೆಳಗಾವಿ 

ಅರ್ಹ ಶಿಕ್ಷಕರ ಗುರುತಿಸಬೇಕಿದೆ

ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿರುವುದು (ಪ್ರ.ವಾ., ಜುಲೈ 23) ಸರಿಯಲ್ಲ. ನಾನು ತೀರಾ ಹತ್ತಿರದಿಂದ ಬಲ್ಲಂತೆ, ಹೀಗೆ ಅರ್ಜಿ ಹಾಕಿಕೊಂಡು ಪ್ರಶಸ್ತಿ ಪಡೆಯಲು ಎಷ್ಟೋ ಶಿಕ್ಷಕರಿಗೆ ಸ್ವಾಭಿಮಾನ ಅಡ್ಡಬರುತ್ತದೆ. ಅವರೆಲ್ಲ ತುಂಬ ಪ್ರಾಮಾಣಿಕರೂ ಪ್ರತಿಭಾವಂತರೂ ಶಾಲೆಗೆ ಭೂಷಣರೂ ಆಗಿದ್ದಾರೆ. ಅಂಥವರು ತಮ್ಮ ವ್ಯಕ್ತಿಗತ ಘನತೆ, ಗೌರವವನ್ನು ಬದಿಗಿರಿಸಿ, ಈ ರೀತಿ ಅರ್ಜಿ ಹಾಕಿಕೊಳ್ಳದೆ ಅರ್ಹ ಪ್ರಶಸ್ತಿ, ಗೌರವ, ಸನ್ಮಾನಗಳಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿ.

ಶಿಕ್ಷಣ ಇಲಾಖೆಯೇ ಅಂತಹ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಜವಾಬ್ದಾರಿ ಹೊರಬೇಕು. ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಮೂಲಕ ಈ ಕಾರ್ಯ ನಡೆಸುವುದು ಅಂತಹ ಕಷ್ಟವೇನಲ್ಲ.

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಪ್ಪು ಮಾಡಿದವರಿಗಷ್ಟೇ ಶಿಕ್ಷೆಯಾಗಲಿ

ಬೆಂಗಳೂರಿನ ಬಸವೇಶ್ವರ ನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಕಾರು ಚಾಲನೆಯ ತರಬೇತಿ ವೇಳೆ ಯುವತಿಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ, ಆ ಕೇಂದ್ರದ ಪರವಾನಗಿ ಹಾಗೂ ಆ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿ.ಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿರುವುದು ಸರಿಯಲ್ಲ. ಒಬ್ಬ ತರಬೇತುದಾರ ಮಾಡಿದ ತಪ್ಪಿಗಾಗಿ ಅವನಿಗೆ ಮಾತ್ರ ಶಿಕ್ಷೆ ಕೊಡುವುದು ಸಮಂಜಸ. ಅದಕ್ಕೆ ಬದಲಾಗಿ ಅವನು ಕೆಲಸ ಮಾಡುತ್ತಿದ್ದ ಕೇಂದ್ರದ ಪರವಾನಗಿಯನ್ನೇ ರದ್ದುಪಡಿಸುವುದು ಎಷ್ಟು ಸರಿ? ಇದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಸಿಬ್ಬಂದಿಗೆ ಮಾತ್ರವಲ್ಲದೆ ಅದರ ಮಾಲೀಕನಿಗೂ ತೊಂದರೆಯಲ್ಲವೇ? ಹೀಗೆ ಮಾಡುವುದರಿಂದ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಆಗುವುದಿಲ್ಲವೇ?

ಬಾಲಕೃಷ್ಣ ಎಂ.ಆರ್., ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT