ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ವಿರೋಧಕ್ಕಾಗಿ ವಿರೋಧ ಸಲ್ಲ

Published 27 ಜುಲೈ 2024, 0:40 IST
Last Updated 27 ಜುಲೈ 2024, 0:40 IST
ಅಕ್ಷರ ಗಾತ್ರ

ವಿರೋಧಕ್ಕಾಗಿ ವಿರೋಧ ಸಲ್ಲ

ಧರಣಿ, ಪ್ರತಿಭಟನೆಯು ಸಂಸತ್‌ ಮತ್ತು ವಿಧಾನಮಂಡಲ ಈ ಎರಡೂ ಕಡೆಯ ಸದನಗಳಲ್ಲಿ ಇತ್ತೀಚಿನ ‌ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳು ಸದನವನ್ನು ಕದನಕ್ಕಾಗಿಯೇ ಇರುವುದು ಎಂಬಂತೆ ಭಾವಿಸಿ, ಪ್ರತಿ ವಿಷಯಕ್ಕೂ ಗಲಾಟೆ, ವಾಕ್ಸಮರ, ಪ್ರತಿಭಟನೆ ಹಾಗೂ ಸಭಾತ್ಯಾಗ ಮಾಡುತ್ತಿರುತ್ತವೆ. ಆದರೆ ಈ ಧೋರಣೆಯಲ್ಲಿ ಸಾಮಾಜಿಕ ಹಿತಕ್ಕಿಂತ ಪಕ್ಷಹಿತವೇ ಮುಖ್ಯವಾದಂತೆ ಕಾಣುತ್ತದೆ.

ಇಂತಹ ಪ್ರತಿಭಟನೆಗಳನ್ನು ಒಂದೆರಡು ದಿನಗಳಲ್ಲಿ ಮುಗಿಸಿ, ದೇಶ ಹಾಗೂ ರಾಜ್ಯದ ಪ್ರಗತಿಯ ಬಗ್ಗೆ ಚರ್ಚಿಸಬೇಕಾದುದು ಅತ್ಯಂತ ಅವಶ್ಯ. ದೇಶದಲ್ಲಿ ಮಾಡಬೇಕಿರುವ ಕೆಲಸ, ಪರಿಹರಿಸಬೇಕಾದ ಸಮಸ್ಯೆಗಳು ಬಹಳಷ್ಟಿವೆ. ಆದರೆ ನಮ್ಮ ಜನನಾಯಕರಿಗೆ ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ಇದ್ದಂತೆ ಕಾಣುವುದಿಲ್ಲ. ‘ನಾವು ನಡೆದದ್ದೇ ದಾರಿ’ ಎಂದು ಆಡಳಿತ ಪಕ್ಷ ಪಟ್ಟು ಹಿಡಿಯುವುದು, ವಿರೋಧಕ್ಕಾಗಿ ವಿರೋಧ ಎಂಬಂತೆ ವಿರೋಧ ಪಕ್ಷಗಳು ಹಟಕ್ಕೆ ಬಿದ್ದಂತೆ ವಿರೋಧಿಸುವುದು ಸರಿಯಲ್ಲ.

ಕಡೂರು ಫಣಿಶಂಕರ್, ಬೆಂಗಳೂರು 

ಬಡ್ತಿ ತಾರತಮ್ಯ: ಪ್ರಯೋಜನವಾಗದ ಹೋರಾಟ

ಸ್ನಾತಕೋತ್ತರ ಪದವಿ ಪಡೆದ ಸಹಶಿಕ್ಷಕರ ಜ್ಯೇಷ್ಠತಾ ಪಟ್ಟಿ ಸಿದ್ಧಗೊಳಿಸಲು ಶಿಕ್ಷಣ ಸಚಿವರು ಸೂಚಿಸಿರುವ ಪ್ರೌಢಶಾಲಾ ಶಿಕ್ಷಕರಿಗೆ ಮುಂಬಡ್ತಿ ಭಾಗ್ಯ ಎಂಬ ಪತ್ರಿಕಾ ವರದಿಯನ್ನು ನೋಡಿದೆ. ಇದನ್ನು ಭಾಗ್ಯ ಎನ್ನುವುದಕ್ಕಿಂತ ದೌರ್ಭಾಗ್ಯ ಎನ್ನಬಹುದು ಎಂಬುದು ನನ್ನ ಅನುಭವದ ಮಾತು. ನಾನು ಪದವಿಪೂರ್ವ ಶಿಕ್ಷಣ ಇಲಾಖೆಗೆ ಮುಂಬಡ್ತಿ ಪಡೆಯದೆ ಪ್ರೌಢಶಾಲೆಯಲ್ಲಿಯೇ ಉಳಿದಿದ್ದರೆ ಕಾಲಮಿತಿ ವೇತನ ಬಡ್ತಿಗಳನ್ನು ಪಡೆಯಬಹುದಿತ್ತು. ಜೊತೆಗೆ ಪ್ರೌಢಶಾಲಾ ಮುಖ್ಯ ಶಿಕ್ಷಕನಾಗಿಯೂ ಮುಂಬಡ್ತಿ ಹೊಂದುವ ಅವಕಾಶವಿತ್ತು. ಆದರೆ ಪ್ರೌಢಶಾಲೆಯಿಂದ ಬಡ್ತಿ ಹೊಂದಿ ಪದವಿಪೂರ್ವ ಕಾಲೇಜಿಗೆ ಬಂದ ನಾನು, 20, 25 ವರ್ಷಗಳ ಕಾಲಮಿತಿ ಬಡ್ತಿಗಳಿಂದ ವಂಚಿತನಾಗಿದ್ದೇನೆ. ಜೊತೆಗೆ ಕಾಲೇಜಿನ ಪ್ರಾಂಶುಪಾಲನಾಗುವ ಅವಕಾಶವೂ ಇಲ್ಲ. ಆದರೆ ನನ್ನೊಂದಿಗೆ ಸಹಶಿಕ್ಷಕರಾಗಿ ನೇಮಕಗೊಂಡು ಸ್ನಾತಕೋತ್ತರ ಪದವಿ ಪಡೆದಿದ್ದರೂ ಉಪನ್ಯಾಸಕರಾಗಿ ಬಡ್ತಿ ಪಡೆಯಲು ಆಸಕ್ತಿ ತೋರದೆ ಸದರಿ ಹುದ್ದೆಯಲ್ಲಿಯೇ ಇರುವವರು ಕಾಲಮಿತಿ ಬಡ್ತಿ ಜೊತೆಗೆ ಮುಂಬಡ್ತಿ ಪಡೆದು ನನಗಿಂತಲೂ ಹೆಚ್ಚಿನ ಆರ್ಥಿಕ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಈ ತಾರತಮ್ಯದ ಬಗ್ಗೆ ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ.

ಆರನೇ ವೇತನ ಆಯೋಗದ ವರದಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂರು ವರದಿಗಳು, ಸದನದಲ್ಲಿನ ಚರ್ಚೆ ಹಾಗೂ ಸರ್ಕಾರದ ಆದೇಶಗಳು ಬಡ್ತಿ ಉಪನ್ಯಾಸಕರ ಪರವಾಗಿದ್ದರೂ ಈ ಸಮಸ್ಯೆ ಇತ್ಯರ್ಥವಾಗಿಲ್ಲ. ಹಾಗಾಗಿ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಆರ್ಥಿಕ ಇಲಾಖೆ ಹಾಗೂ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಪರಿಷತ್ ಸದಸ್ಯರು ಸಮಸ್ಯೆಯನ್ನು ಸರಿಪಡಿಸುವ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಂಡು, ಬಡ್ತಿ ಉಪನ್ಯಾಸಕರು ಹಾಗೂ ಮುಂದೆ ಮುಂಬಡ್ತಿ ಹೊಂದುವ ಸಹಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು.

ರಮೇಶ್ ಡಿ.ಆರ್., ಕೃಷ್ಣರಾಜಪೇಟೆ, ಮಂಡ್ಯ

ಅಶುದ್ಧ ರಾಗಿ ಕೊಡುವುದೇಕೆ?

ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿಯ ಜೊತೆಗೆ ರಾಗಿಯನ್ನೂ ನೀಡಲಾಗುತ್ತಿದೆ. ಆದರೆ ಸುಮಾರು ವರ್ಷಗಳಿಂದ ಆ ರಾಗಿಯಲ್ಲಿ ಮಣ್ಣು, ಕಸ-ಕಡ್ಡಿ ಬೆರೆತಿರುತ್ತದೆ. ಸರ್ಕಾರ ಪ್ರತಿ ವರ್ಷವೂ ರೈತರಿಂದ ಅಂತಹ ರಾಗಿಯನ್ನೇ ಕೊಳ್ಳುತ್ತದೆಯೇ? ಗುಣಮಟ್ಟದ ರಾಗಿಯನ್ನು ಕೊಳ್ಳುವುದಿಲ್ಲವೇಕೆ?

ರೈತರು ಮಾರುಕಟ್ಟೆಗೆ ಅಂತಹ ರಾಗಿಯನ್ನು ತಂದಿರುವುದನ್ನು ನಾನು ಎಂದೂ ಇಲ್ಲಿಯವರೆಗೆ ನೋಡಿಲ್ಲ. ಆದರೂ ನ್ಯಾಯಬೆಲೆ ಅಂಗಡಿಗೆ ಮಾತ್ರ ಅಂತಹದ್ದು ಹೇಗೆ ಪೂರೈಕೆ ಆಗುತ್ತದೆ? ಸರ್ಕಾರ ಇತ್ತ ಗಮನಹರಿಸಿ, ಒಳ್ಳೆಯ ರಾಗಿಯನ್ನು ಪೂರೈಕೆ ಮಾಡಬೇಕು.

ಸಣ್ಣಮಾರಪ್ಪ, ಚಂಗಾವರ, ಶಿರಾ

ನಿರ್ಬಂಧ ಹಿಂತೆಗೆತ: ಅಸಮಂಜಸ ಕ್ರಮ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಚಟುವಟಿಕೆಗಳಲ್ಲಿ ಕೇಂದ್ರ ಸರ್ಕಾರದ ನೌಕರರು ಭಾಗವಹಿಸುವುದು ಮತ್ತು ಸದಸ್ಯತ್ವ ಪಡೆಯುವುದಕ್ಕೆ ದಶಕಗಳ ಹಿಂದೆ ವಿಧಿಸಲಾಗಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆಗೆದುಹಾಕಿರುವುದು ಆಧುನಿಕೋತ್ತರ ಭಾರತದ ಬಹುದೊಡ್ಡ ದುರಂತವೇ ಆಗಿದೆ. ಈ ಸಂಘಟನೆಯು ದೇಶದಲ್ಲಿ ಮೂರು ಬಾರಿ ನಿಷೇಧಕ್ಕೆ ಒಳಗಾಗಿದ್ದನ್ನು ಯಾರೂ ಮರೆತಿಲ್ಲ. ಮೊದಲ ಬಾರಿ, ಹಿಂದೂ ಧರ್ಮದ ರಕ್ಷಣೆ ಹೆಸರಿನಲ್ಲಿ ನಾಥೂರಾಮ್‌ ಗೋಡ್ಸೆಯು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಗುಂಡಿಟ್ಟು ಕೊಂದಾಗ. ಎರಡನೇ ಬಾರಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ. ಮೂರನೇ ಬಾರಿ, ಬಾಬರಿ ಮಸೀದಿ ಧ್ವಂಸವಾದಾಗ. ಈ ಮೂರರಲ್ಲಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಿಷೇಧಿಸಿದ್ದು ಮಾತ್ರ ಅಸಮಂಜಸವಾಗಿತ್ತು. ಗಾಂಧಿ ಹತ್ಯೆ ಮತ್ತು ಬಾಬರಿ ಮಸೀದಿ ಧ್ವಂಸ ಪ್ರಕರಣಗಳು ಭಾರತದ ಇತಿಹಾಸಕ್ಕೆ ಇಂದಿಗೂ ಅಂಟಿಕೊಂಡಿರುವ ಕರಾಳ ಮುಖಗಳು. ಮೊದಲ ಬಾರಿಯಂತೂ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರು ಸಂಘದ ನಡೆಯನ್ನು ತೀವ್ರವಾಗಿ ಖಂಡಿಸಿ ಅದನ್ನು ನಿಷೇಧಿಸಿದ್ದರು. ಆದರೆ ಕೇಂದ್ರದ ಈಗಿನ ನಡೆ ಪಟೇಲರನ್ನು ಅವಮಾನಿಸಿದೆ.

ಇದೇ ರೀತಿ ಜಮಾತ್‌- ಎ- ಇಸ್ಲಾಮಿ ಸಂಘಟನೆಯ ಸದಸ್ಯತ್ವ ಪಡೆಯುವುದರ ಮೇಲಿನ ನಿರ್ಬಂಧವನ್ನೂ ತೆರವುಗೊಳಿಸಿದರೆ ದೇಶದ ಪರಿಸ್ಥಿತಿ ಏನಾಗಬಹುದು ಎಂಬುದು ಉಹಿಸಲಸಾಧ್ಯ. ಏಕೆಂದರೆ ಇವೆರಡೂ ಮತಾಂಧತೆಯನ್ನೇ ತಮ್ಮ ತತ್ವವನ್ನಾಗಿಸಿಕೊಂಡಿರುವ ಅಮಾನವೀಯ ಸಂಘಟನೆಗಳು. ಈಗಾಗಲೇ ದೇಶದ ಹಲವಾರು ಉನ್ನತ ಶಿಕ್ಷಣ ಸಂಸ್ಥೆ, ತನಿಖಾ ಸಂಸ್ಥೆ ಮತ್ತು ಆಡಳಿತಾತ್ಮಕ ಇಲಾಖೆಗಳು ಆರ್‌ಎಸ್‌ಎಸ್ ಅಡ್ಡೆಗಳಂತೆ ವರ್ತಿಸುತ್ತಿವೆ. ಜನರ ಹಸಿವಿನ ಮುಂದೆ ಧರ್ಮ, ಸಂಸ್ಕೃತಿಯಂತಹ ಭಾವನಾತ್ಮಕ ಅಂಶಗಳು ಬಹಳ ಮುಂದೆ ಹೋಗಲಾರವು. ಕ್ಷಣ ಹೊತ್ತು ಧರ್ಮಾಂಧತೆಯಲ್ಲಿ ಕಳೆದುಹೋಗಿರುವ ಯುವ ಭಾರತ ಒಂದಿಲ್ಲೊಂದು ದಿನ ಹಸಿವಿನ ಬೆಂಕಿಯನ್ನು ಆರಿಸಿಕೊಳ್ಳಲು ತಿಳಿ ನೀರಿನ ಪ್ರಶಾಂತ ಸರೋವರವನ್ನು ಹುಡುಕಿಕೊಂಡು ಬಂದೇ ಬರುತ್ತದೆ. ಹೀಗೆ ಆಗುವಷ್ಟರಲ್ಲಿ ದೇಶ ಬಹು ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ.

ಮೀನಾಕ್ಷಿ ಬಾಳಿ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT