ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮೇ 6ರಂದು ನೀಡಿದ ತೀರ್ಪು ಹಲವರು ಭಾವಿಸಿದಂತೆ ಅನಿರೀಕ್ಷಿತ ಹಾಗೂ ಆಘಾತಕಾರಿಯೇನಲ್ಲ. ತೀರ್ಪಿನ ಬಗ್ಗೆ ಆಶ್ಚರ್ಯಪಡಬೇಕಾದ ಅಗತ್ಯವೂ ಇಲ್ಲ. ಏಕೆಂದರೆ, ಇದೊಂದು ನಿರೀಕ್ಷಿತ ತೀರ್ಪು.

ವ್ಯಾಪಾರವೇ ಸರ್ವಸ್ವ ಮತ್ತು ಲಾಭವೇ ಜೀವನದ ಪರಮಗುರಿ ಎನಿಸಿರುವ ಮಾರುಕಟ್ಟೆ ಆಧಾರಿತ ಸಾಮಾಜಿಕ ವ್ಯವಸ್ಥೆಯ ಯಜಮಾನಿಕೆ ವಹಿಸಿರುವ ಭಾಷೆಯನ್ನೇ ತನ್ನ ವ್ಯಾವಹಾರಿಕ ಭಾಷೆಯನ್ನಾಗಿ ಅವಲಂಬಿಸಿ ಜನಸಾಮಾನ್ಯರನ್ನು ನ್ಯಾಯದ ಪರಿಧಿಯಿಂದ ಹೊರಗಿಟ್ಟಿರುವ ನ್ಯಾಯಾಂಗ ವ್ಯವಸ್ಥೆಯಿಂದ ಬೇರೇನನ್ನು ತಾನೆ ನಿರೀಕ್ಷಿಸಲು ಸಾಧ್ಯ!.

ಜಾಗತೀಕರಣ, ಖಾಸಗೀಕರಣ ಮತ್ತು ನವ -ಉದಾರೀಕರಣದ ಆಕ್ರಮಣಕಾರಿ ನೀತಿಯ ಸುಳಿಗೆ ಎಲ್ಲವೂ ಕೊಚ್ಚಿ ಹೋಗುತ್ತಿರುವಾಗ, ನ್ಯಾಯಾಂಗ ವ್ಯವಸ್ಥೆ ಈ ಆಕ್ರಮಣಕಾರಿ ಸುಳಿಯಿಂದ ಹೊರಬಂದು ನ್ಯಾಯ ಒದಗಿಸಬೇಕೆಂದು ನಿರೀಕ್ಷಿಸುವುದು ನಮ್ಮ ಮುಗ್ಧತೆಯಲ್ಲದೆ ಬೇರೇನು? ಸಂವಿಧಾನದ ಮೂಲ ಆಶಯಗಳಾದ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಎರಡೂವರೆ ದಶಕಗಳ ಹಿಂದೆಯೇ ವಿದಾಯ ಹೇಳಿ, ದೇಶದ ಭಾಷೆ-, ನೆಲ,- ಜಲ-, ನೈಸರ್ಗಿಕ ಸಂಪನ್ಮೂಲ ಎಲ್ಲವನ್ನೂ ನವ-ವಸಾಹತುಶಾಹಿಯ ತಳಕಾಣದ ಲಾಭದ ಹುಂಡಿಗೆ ಸಮರ್ಪಿಸುವ ಕರಾರಿಗೆ ಸಹಿ ಹಾಕಿದ್ದೇವೆ ನಾವು. ಈಗ ನಮ್ಮ ಭಾಷೆ, -ಸಂಸ್ಕೃತಿಯನ್ನು ಕರಾರಿನಿಂದ ಹೊರತಂದು ರಕ್ಷಿಸಲು ದಿಟ್ಟ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸದ ಹೊರತು ಅನ್ಯ ಮಾರ್ಗವಿಲ್ಲ.

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು, ನ್ಯಾಯಾಲಯದ ದೃಷ್ಟಿಯಲ್ಲಿ ಕಾನೂನಾತ್ಮಕವಾಗಿ ಸರಿಯೆನಿಸಿದರೂ, ಜನಸಾಮಾನ್ಯರ ದೃಷ್ಟಿಯಲ್ಲಿ ನ್ಯಾಯಸಮ್ಮತವಲ್ಲ. ಎಂದಿನಂತೆ, ಕಾನೂನಾತ್ಮಕವಾಗಿರುವುದೆಲ್ಲವೂ ನ್ಯಾಯಸಮ್ಮತವಲ್ಲ ಅಥವಾ ನ್ಯಾಯಸಮ್ಮತವಾಗಿರುವುದೆಲ್ಲ ಕಾನೂನಾತ್ಮಕವಾಗಿರಬೇಕಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.

ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಆಧಾರದಲ್ಲಿ ಒಂದು ಸಮ-ಸಮಾಜವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ, ಉತ್ತಮ ನಾಗರಿಕನಾಗಿ ಮಾನವ ರೂಪುಗೊಳ್ಳಲು ಅಗತ್ಯವಾಗಿ ಕಟ್ಟಿಕೊಳ್ಳಬೇಕಾದ ಜ್ಞಾನದ ರಾಚನಿಕ(Construction of Knowledge ) ಕ್ರಿಯೆಯಲ್ಲಿ ಭಾಷೆಯ ಮಹತ್ವವನ್ನು ಅರಿಯಬೇಕಾದುದು ಅಗತ್ಯ.

ಇದಕ್ಕಾಗಿ ಒಂದು ಹಂತದವರೆಗಾದರೂ ಎಲ್ಲಾ ಮಕ್ಕಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಅನಿವಾರ್ಯತೆ ಮತ್ತು ಅಗತ್ಯತೆಯನ್ನು ಅರಿಯಲು ನ್ಯಾಯಾಲಯ ಸೋತಿದೆ. ನಮ್ಮ ಸಂವಿಧಾನ ರಚನಾಕಾರರು ಸಂವಿಧಾನದ ತಳಹದಿಯೆನಿಸಿರುವ ಪ್ರಸ್ತಾವನೆಯಲ್ಲಿ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಮೂಲತತ್ವಗಳನ್ನಾಗಿ ಅಳವಡಿಸಿಕೊಂಡಿದ್ದನ್ನು ಅಣಕಿಸುವಂತಾಗಿದೆ.
ಸಾಮಾನ್ಯವಾಗಿ, ನ್ಯಾಯಾಲಯವನ್ನೂ ಒಳಗೊಂಡಂತೆ, ನಾವೆಲ್ಲರೂ ಭಾಷೆಯನ್ನು ಒಂದು ಸರಳ ಸಂವಹನ ಸಾಧನ ಎಂದು ತಿಳಿಯುತ್ತೇವೆ.

ಶಿಕ್ಷಣದಲ್ಲಿ ಭಾಷೆಯ ಪ್ರಾಮುಖ್ಯ ಅರಿಯಬೇಕಾದರೆ, ನಾವು ಭಾಷೆಯ ಬಗ್ಗೆ ಒಂದು ಸಮಗ್ರ ದೃಷ್ಟಿ ಕೋನವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಭಾಷೆಯ ಮಹತ್ವವನ್ನು ಹಲವು ಬೇರೆಬೇರೆ ಆಯಾಮಗಳಿಂದ, ಅಂದರೆ, ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆ, ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ಮನೋವೈಜ್ಞಾನಿಕ, ಸೌಂದರ್ಯೋಪಾಸನೆ ಇತ್ಯಾದಿಗಳಿಂದ ಪರಿಶೀಲಿಸಬೇಕಾಗುತ್ತದೆ. ಔಪಚಾರಿಕವಾಗಿ ಭಾಷೆಯನ್ನು ಸೊಲ್ಲು, ಪದ ಮತ್ತು ವಾಕ್ಯಗಳ ಮೂಲಕ ರಚನೆಗೊಳ್ಳುವ ಪದಕೋಶ ಮತ್ತು ಒಂದಷ್ಟು ವಾಕ್ಯರಚನೆಯ ನಿಯಮಗಳು ಎಂದು ಪರಿಭಾವಿಸಲಾಗುತ್ತದೆ. ಇದು ಸತ್ಯ. ಆದರೆ ಇದು ಭಾಷೆಯ ಒಂದು ಮುಖ ಮಾತ್ರ.

ಹೀಗಾಗಿ, ಭಾಷೆ ಕೇವಲ ನಿಯಮಗಳಿಗನುಗುಣವಾಗಿ ಸಂವಹನಗೊಳ್ಳುವ ಒಂದು ವ್ಯವಸ್ಥಿತ ಕ್ರಿಯೆ ಮಾತ್ರವಲ್ಲದೆ ನಮ್ಮ ಯೋಚನಾ ಲಹರಿಯನ್ನು ಸಂರಚನೆಗೊಳಿಸುವ ಮತ್ತು ಆ ಮೂಲಕ ನಮ್ಮ ರಾಜಕೀಯ ಹಾಗೂ ಸಾಮಾಜಿಕ ಸಂಬಂಧಗಳನ್ನು ವ್ಯಾಖ್ಯಾನಿಸುವ ಮತ್ತು ನಿರ್ಧರಿಸುವ ಒಂದು ವಿದ್ಯಮಾನ. ಹೀಗಾಗಿ, ಎಲ್ಲಾ ಭಾಷಾ ವ್ಯಾಸಂಗದ ಬೆಳವಣಿಗೆಗಳು, ನಿಶ್ಚಿತವಾಗಿ ರಾಜಕೀಯ ಮತ್ತು ಸಾಮಾಜಿಕ, -ಸಾಂಸ್ಕೃತಿಕ ಮಧ್ಯಸ್ಥಿಕೆಯ ಫಲಿತಾಂಶಗಳು ಕೂಡ ಹೌದು ಎಂಬುದನ್ನು ನಾವು ಮರೆಯಬಾರದು.

ಈ ವಿಷಯವಾಗಿ ನಮ್ಮ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಪ್ಯಾರಾ ೩.೧.೧ರಲ್ಲಿ ಹೇಳಿರುವಂತೆ, ಭಾರತದ ಭಾಷಿಕ ವೈವಿಧ್ಯ ಅನೇಕ ಕ್ಲಿಷ್ಟ ಸವಾಲುಗಳನ್ನು ಮುಂದಿಡುವಂತೆಯೇ ಅನೇಕ ಅವಕಾಶಗಳನ್ನೂ ತೆರೆದಿಡುತ್ತದೆ. ದೇಶದಲ್ಲಿ ಬಳಕೆಯಲ್ಲಿರುವ ಭಾಷೆಗಳು ಸಂಖ್ಯಾಬಲದ ದೃಷ್ಟಿಯಿಂದ ಮಾತ್ರವಲ್ಲ ಅವು ಪ್ರತಿನಿಧಿಸುವ ಭಾಷಾ ಕುಟುಂಬಗಳ ವೈವಿಧ್ಯದ ದೃಷ್ಟಿಯಿಂದಲೂ ವಿಶಿಷ್ಟವೆನಿಸಿವೆ.

ವಿಶಾಲವಾದ ಸಾಮಾಜಿಕ,- ಸಾಂಸ್ಕೃತಿಕ ತಳಹದಿಯ ಮೇಲೆ ಬಹುಭಾಷಾ ಮತ್ತು ಬಹುಸಾಂಸ್ಕೃತಿಕ ಸಮಾಜ ನಿರ್ಮಾಣಕ್ಕೆ ಪೂರಕವಾದ ನ್ಯಾಯಸಮ್ಮತ ತೀರ್ಪನ್ನು ನೀಡುವ ಬದಲು ಆಂಗ್ಲೀಕರಣದ ಮೂಲಕ ಮಾರುಕಟ್ಟೆ ಆಧಾರಿತ ಯಜಮಾನಿಕೆಯ ಏಕಸಂಸ್ಕೃತಿಯ ಹುನ್ನಾರಕ್ಕೆ ನಮ್ಮ ನ್ಯಾಯಾಲಯ ಬಲಿಯಾದದ್ದು ನಿಜಕ್ಕೂ ವಿಪರ್ಯಾಸ.

ಇದರಿಂದ ಕಲಿತ ಪಾಠವೇನೆಂದರೆ, ಶಾಸಕಾಂಗ ತೀರ್ಮಾನಿಸಬೇಕಾದ ಗಂಭೀರವಾದ ವಿಷಯವನ್ನು ಕೇವಲ ಕಾನೂನಿನ ಚೌಕಟ್ಟಿನಲ್ಲಿ ಅರ್ಥೈಸಲು ಯತ್ನಿಸಿದರೆ ಸಂವಿಧಾನದಲ್ಲಿನ ಮೂಲ ಆಶಯಗಳಾದ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಸಮಾನತೆಯ ತತ್ವಗಳಿಗೆ ತಿಲಾಂಜಲಿಯಿಟ್ಟಂತಾಗುತ್ತದೆ.

ಕುವೆಂಪು ಅವರು ಜನವರಿ ೨೬,೧೯೬೫ರಲ್ಲಿ ‘ರಾಷ್ಟ್ರಕವಿ’ ಪುರಸ್ಕಾರವನ್ನು ಸ್ವೀಕರಿಸಿ ಮಾಡಿದ ಭಾಷಣದಲ್ಲಿ ಹೇಳಿದ ಮಾತು ಈ ಸಂದರ್ಭದಲ್ಲಿ ಉತ್ಪ್ರೇಕ್ಷೆಯಾಗಲಾರದು ಎಂದು ಭಾವಿಸುತ್ತೇನೆ. ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಮಹನೀಯರೆ, ಅಧಿಕೃತ ಶಾಸನಕರ್ತರಾದ ನಿಮ್ಮಲ್ಲಿ ಅನಧಿಕೃತ ಶಾಸನಕರ್ತನಾದ ನನ್ನ ಒಂದು ಅಹವಾಲು: ಅದು ಇಂಗ್ಲಿಷ್ ಭಾಷೆಗೂ ಶಿಕ್ಷಣ ಮಾಧ್ಯಮಕ್ಕೂ ಸಂಬಂಧಪಟ್ಟಿದ್ದು.

ವಿವರಕ್ಕಾಗಲಿ, ವಾದಕ್ಕಾಗಲಿ, ಜಿಜ್ಞಾಸೆಗಾಗಲಿ ನಾನೀಗ ಕೈ ಹಾಕುವುದಿಲ್ಲ. ಅದು ತತ್ಸಮಯ ಸಾಧ್ಯವೂ ಅಲ್ಲ; ಅದಕ್ಕಿಲ್ಲಿ ಕಾಲಾವಕಾಶವೂ ಇಲ್ಲ. ತಮ್ಮ ಗಮನವನ್ನು ಅತ್ತ ಕಡೆ ಎಳೆದು, ಅದು ತಮ್ಮ ಶೀಘ್ರ ಪರಿಶೀಲನೆಗೂ ಇತ್ಯರ್ಥಕ್ಕೂ ಒಳಗಾಗುವಂತೆ ಮಾಡುವುದೇ ನನ್ನ ಸದ್ಯದ ಪ್ರಯತ್ನದ ಮುಖ್ಯ ಉದ್ದೇಶ. ಆ ವಿಚಾರವಾಗಿ ನಮ್ಮ ರಾಷ್ಟ್ರಪಿತನಾದಿಯಾಗಿ ಸಾವಿರಾರು ದೇಶಭಕ್ತರು, ನೂರಾರು ಸ್ವದೇಶಿ ಮತ್ತು ವಿದೇಶಿ ವಿದ್ಯಾತಜ್ಞರು ಹೇಳಿದ್ದಾರೆ, ಮಾತನಾಡಿದ್ದಾರೆ, ಬರೆದಿದ್ದಾರೆ.

ಹೊತ್ತಗೆ ಹೊತ್ತಗೆಗಳನ್ನು ಪ್ರಕಟಿಸಿಯೂ ಇದ್ದಾರೆ.ಆದರೆ ನಮ್ಮ ದೇಶದ ಪ್ರಚ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರಹಿತಾಸಕ್ತ ಪ್ರತಿಗಾಮಿ ಶಕ್ತಿಗಳು, ಮಕ್ಕಳಿಗೆ ಹಾಲುಣಿಸುವ ನೆಪದಲ್ಲಿ ಕೊಲ್ಲುತ್ತಿದ್ದ ಭಾಗವತ ಪುರಾಣದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್ ಭಾಷೆಯಿಂದಲೂ ಇಂಗ್ಲಿಷ್ ಮಾಧ್ಯಮದಿಂದಲೂ ವರ್ಷ ವರ್ಷವೂ ಪರೀಕ್ಷೆಯ ಜಿಲೊಟಿನ್ನಿಗೆ ಕೋಟ್ಯಂತರ ಬಾಲಕರ ಮತ್ತು ತರುಣರ ತಲೆಗಳನ್ನು ಬಲಿಕೊಡುತ್ತಿದ್ದಾರೆ. ಆ ನಷ್ಟದ ಪರಿಮಾಣವನ್ನು ಊಹಿಸಲೂ ಸಾಧ್ಯವಿಲ್ಲ. ಬಹುಶಃ, ಸರಿಯಾಗಿ ಲೆಕ್ಕ ಹಾಕಿದರೆ, ನಾಲ್ಕಾರು ಪಂಚವಾರ್ಷಿಕ ಯೋಜನೆಗಳ ಮೊತ್ತವೇ ಆದರೂ ಆಗಬಹುದೇನೊ!.’

ಮುಂದುವರಿದು, ‘ಇಂಗ್ಲಿಷ್ ಭಾಷೆ ಬಲತ್ಕಾರದ ಸ್ಥಾನದಿಂದ ಐಚ್ಛಿಕ ಸ್ಥಾನಕ್ಕೆ ನಿಯಂತ್ರಣಗೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೆ ನಿತ್ಯರೋಗಿಯಂತಿರಬೇಕಾಗುತ್ತದೆ.

ಅಲ್ಲದೆ ಮತ್ತೂ ಒಂದನ್ನು ಕಂಡಂತೆ ಹೇಳುತ್ತೇನೆ ತಮಗೆ; ನಮ್ಮ ಕಾರ್ಖಾನೆಗಳನ್ನೆಲ್ಲ ನಿಲ್ಲಿಸಿ, ಅಣೆಕಟ್ಟುಗಳನ್ನೆಲ್ಲ ತಡೆಹಿಡಿದು, ಪ್ರಯೋಗಶಾಲೆ ಸಂಶೋಧನಾಗಾರಗಳನ್ನೆಲ್ಲ ವಜಾಮಾಡಿ, ಹಲವು ಪಂಚವಾರ್ಷಿಕ ಯೋಜನೆಗಳ ಹಣವನ್ನೆಲ್ಲ ಇಂಗ್ಲಿಷ್ ಸ್ಟಾಂಡರ್ಡ್ ಅನ್ನು ಉತ್ತಮಗೊಳಿಸುವುದಕ್ಕಾಗಿಯೇ ವೆಚ್ಚಮಾಡಿದರೂ, ಇನ್ನೂ ನೂರು ವರ್ಷಗಳ ಅನಂತರವೂ ನಮ್ಮ ಮಕ್ಕಳ ಇಂಗ್ಲಿಷ್ನ ಮಟ್ಟ ಈಗಿರುವುದಕ್ಕಿಂತ ಮೇಲಕ್ಕೇರುವುದಿಲ್ಲ!’

ಕುವೆಂಪು ಅವರ ಅಂದಿನ ಮಾತು ಅಕ್ಷರಶಃ ಸತ್ಯ. ಈ ವಿಷ ವರ್ತುಲದಿಂದ ಹೊರಬರಬೇಕಾದರೆ ಶಾಸಕಾಂಗ ಇನ್ನಾದರೂ ಕಾರ್ಯ ಪ್ರವೃತ್ತವಾಗಬೇಕಿದೆ. ಜನಮನದ ಭಾಷೆಯಾಗಿರುವ ಕನ್ನಡ ಭಾಷೆ ಮೊದಲು ಆಡಳಿತದ ಎಲ್ಲಾ ಹಂತದಲ್ಲಿ; ಅಂದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾಮಾಣಿಕವಾಗಿ ಜಾರಿಯಾಗಬೇಕಾಗಿದೆ.

ಈ ಕೆಲಸ ಪರಿಣಾಮಕಾರಿಯಾಗಿ ಆಗಬೇಕಾದರೆ ಅದರ ಮೂಲವೆನಿಸಿರುವ ಶಾಲಾ ಶಿಕ್ಷಣ ವ್ಯವಸ್ಥೆಗೆ ಹೊಸ ಕಾಯಕಲ್ಪ ಕಲ್ಪಿಸಬೇಕಿದೆ. ಶಿಕ್ಷಣದಲ್ಲಿರುವ ಅಸಮಾನತೆ, ಪ್ರತ್ಯೇಕತೆ ಮತ್ತು ಆಧುನಿಕ ಅಸ್ಪೃಶ್ಯತೆ-ಯ ತಾರತಮ್ಯ ತೊಲಗಿ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲ ಸಮಗ್ರ ಶಿಕ್ಷಣ ನೀತಿ ಹಾಗೂ ಭಾಷಾ ನೀತಿಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ.

ನೀತಿಯನ್ನು ರೂಪಿಸುವ ಸಾರ್ವಭೌಮ ಅಧಿಕಾರ ಶಾಸಕಾಂಗಕ್ಕಿದ್ದು ಅದನ್ನು ಚಲಾಯಿಸಬೇಕಾಗಿದೆ. ಸಂವಿಧಾನದ ಮೂಲ ತಳಹದಿ ಎನಿಸಿರುವ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗನುಸಾರವಾಗಿ ಮಾತೃ ಭಾಷಾ ಮಾಧ್ಯಮದಲ್ಲಿ ಸಮಾನ ಶಾಲಾ ಶಿಕ್ಷಣವನ್ನು ನೀಡಲು ಸಾಧ್ಯವಾಗಬಹುದಾದ ಸಮಗ್ರ ಶಿಕ್ಷಣ ನೀತಿಯೊಂದು ಮಾತ್ರ ಇಂತಹ ಸಂಕೀರ್ಣ ಮತ್ತು ಸೂಕ್ಷ್ಮತೆಯ ವಿಚಾರಗಳಿಗೆ ಪರಿಹಾರವನ್ನು ಒದಗಿಸಬಲ್ಲದು.

ಈಗ ಸರ್ಕಾರ ಪುನರ್ಪರಿಶೀಲನಾ ಅರ್ಜಿ ಸಲ್ಲಿಸಲು ಕ್ರಮ ಕೈಗೊಂಡಿದೆ. ಇದಕ್ಕಾಗಿ ತಜ್ಞರ ಸಣ್ಣ ಸಮಿತಿಯೊಂದನ್ನು ರಚಿಸಿ ಕೇವಲ ಕಾನೂನಿನ ಅಂಶಗಳಿಗೆ ಮಾತ್ರ ಒತ್ತು ನೀಡದೆ ಮಾತೃ ಭಾಷಾ ಮಾಧ್ಯಮದ ವಿಷಯದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯಮಟ್ಟದಲ್ಲಿ ನಡೆದಿರುವ ಎಲ್ಲ ಸಂಶೋಧನೆಗಳ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳಾಗಿ ಒದಗಿಸುವ ಪ್ರಯತ್ನ ಮಾಡಬೇಕಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಲಾದರೂ ಸರ್ಕಾರ ಭಾಷಾತಜ್ಞರ ಮತ್ತು ಶಿಕ್ಷಣತಜ್ಞರ ನುರಿತ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ.

ಮತ್ತೊಂದೆಡೆ, ರಾಷ್ಟ್ರದ ಹೊಸ ಪ್ರಧಾನಿಯವರಿಗೆ ಸವಿಸ್ತಾರವಾದ ಪತ್ರ ಬರೆದು ಈ ವಿಷಯವನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಒಂದು ಒಮ್ಮತದ ನಿರ್ಧಾರಕ್ಕೆ ಬರುವಂತೆ ಒತ್ತಾಯಿಸಬೇಕಿದೆ.

ಜೊತೆಜೊತೆಗೆ ಶಿಕ್ಷಣ ಆಯೋಗದ (೧೯೬೪-–೬೬) ಶಿಫಾರಸ್ಸಿನಂತೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳಿಗನುಗುಣವಾಗಿ (೧೯೬೮, ೧೯೮೬ ಮತ್ತು ಪರಿಷ್ಕೃತ ೧೯೯೨)ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಪೂರಕವಾದ ಒಂದು ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ರಾಷ್ಟ್ರೀಯ ಭಾಷಾ ನೀತಿಯನ್ನು ರೂಪಿಸಿ ಸಂಸತ್ತಿನಲ್ಲಿ ಮಂಡಿಸುವ ಮೂಲಕ ಬಹು ವರ್ಷಗಳ ಈ ರಾಷ್ಟ್ರೀಯ
ಸಮಸ್ಯೆಗೆ ವಿದಾಯ ಹೇಳಬೇಕಾಗಿದೆ.

(ಲೇಖಕರು, ಫೆಲೋ ಹಾಗೂ ಮುಖ್ಯಸ್ಥರು. ಸಮಾನ ಗುಣಮಟ್ಟದ ಶಾಲಾ ಶಿಕ್ಷಣ ಸಾರ್ವತ್ರೀಕರಣ ಕಾರ್ಯಕ್ರಮ, ಮಗು ಮತ್ತು ಕಾನೂನು ಕೇಂದ್ರ, ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.