ರಾಯಚೂರು: ಮುಖ್ಯಮಂತ್ರಿ ಅವರ ಬಸ್ ಯಾತ್ರೆ ಹಾಗೂ ಜನತಾ ದರ್ಶನದಲ್ಲಿ ಸಾವಿರಾರು ಜನ ಮನವಿ ಸಲ್ಲಿಸಿದರು.

ರಾಯಚೂರಿನಿಂದ ಕರೇಗುಡ್ಡಕ್ಕೆ ಬಸ್ನಲ್ಲಿ ಹೋಗುತ್ತಿರುವುದನ್ನು ತಿಳಿದ ಮಾರ್ಗಮಧ್ಯದ ಕಲ್ಲೂರ, ನೀರಮಾನ್ವಿ, ಮಾನ್ವಿ, ಕೊಟ್ನೇಕಲ್, ನಂದಿಹಾಳ, ಕಪಗಲ್, ಕುರ್ಡಿಕ್ರಾಸ್ನಲ್ಲಿ ಜನರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕಲ್ಲೂರು ಗ್ರಾಮದಲ್ಲಿ ಮುಖ್ಯಮಂತ್ರಿಯನ್ನು ಸನ್ಮಾನಿಸಿ, ಜನರು ಅಹವಾಲು ಪತ್ರ ಸಲ್ಲಿಸಿದರು.

ನೀರಮಾನ್ವಿ ಗ್ರಾಮದಲ್ಲಿ ವಿದ್ಯಾರ್ಥಿನಿ ಅಪೂರ್ವ ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ‘ನಮ್ಮ ಶಾಲೆಗೆ 18 ಶಿಕ್ಷಕರ ಹುದ್ದೆ ಮಂಜೂರಾಗಿದ್ದು, ಎಂಟು ಜನ ಮಾತ್ರ ಇದ್ದಾರೆ. ಶಾಲೆಯಲ್ಲಿ ಕುಡಿಯವ ನೀರಿನ ವ್ಯವಸ್ಥೆಯಿಲ್ಲ. ವಸತಿ ಸೌಕರ್ಯ ಇಲ್ಲ’ ಎಂದಳು. ಈ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಜನತಾ ದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮನವಿ ಸಲ್ಲಿಸಿದ ಆ ಬಾಲೆಯ ಬೇಡಿಕೆಗೆ ನನ್ನ ಹೃದಯ ಮಿಡಿಯಿತು’ ಎಂದರು.

ಯಾದಗಿರಿ ಜಿಲ್ಲೆ ಶಹಾಪೂರ ತಾಲ್ಲೂಕಿನ ಮಾಚನೂರು ಗ್ರಾಮದ ರೈತ ಬಸವರಾಜ ಅವರು ಕೃಷಿ ಕೆಲಸ ಮಾಡುತ್ತಿರುವಾಗಲೇ ಅಂಗಾಂಗ ಶಕ್ತಿ ಕಳೆದುಕೊಂಡಿದ್ದು, ಅವರನ್ನು ಎತ್ತಿಕೊಂಡು ಜನತಾ ದರ್ಶನಕ್ಕೆ ಕರೆತರಲಾಗಿತ್ತು. ಅವರ ಸ್ಥಿತಿ ಕಂಡು ಮರುಗಿದ ಸಿ.ಎಂ. ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಬಿಜೆಪಿ ನಾಯಕರ ಬಂಧನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇವದುರ್ಗ ತಾಲ್ಲೂಕಿನ ಗೂಗಲ್ನಿಂದ ಕರೇಗುಡ್ಡಕ್ಕೆ ಶಾಸಕ ಶಿವನಗೌಡ ನಾಯಕ ನೇತೃತ್ವದಲ್ಲಿ ಪಾದಯಾತ್ರೆ ಹೊರಟಿದ್ದವರನ್ನು ಕರೇಗುಡ್ಡದಿಂದ 12 ಕಿ.ಮೀ. ಅಂತರದಲ್ಲಿರುವ ಬಲ್ಲಟಗಿ ಗ್ರಾಮದಲ್ಲೇ ತಡೆಯಲಾಯಿತು. ಪಾದಯಾತ್ರೆ ಮುಂದೆ ಸಾಗುವುದನ್ನು ತಡೆಯಲು ಗ್ರಾಮದಲ್ಲಿ ಸಿಆರ್ಪಿಸಿ ಕಲಂ 144 ಜಾರಿಗೊಳಿಸಲಾಯಿತು. ಇದನ್ನು ಲೆಕ್ಕಿಸದೆ ಮುಂದೆ ಸಾಗಿದ ಶಾಸಕ ಶಿವನಗೌಡ ನಾಯಕ ಸೇರಿ ಇತರರನ್ನು ಬಂಧಿಸಿ, ಸಿರವಾರಕ್ಕೆ ಕರೆದೊಯ್ದು ಅಲ್ಲಿ ಬಿಡುಗಡೆ ಮಾಡಲಾಯಿತು.

ಮಾಸಾಶನ ಹೆಚ್ಚಳ: ರಾಜ್ಯದಲ್ಲಿ 65 ವರ್ಷ ಮೇಲ್ಪಟ್ಟಿರುವ ಹಿರಿಯರಿಗೆ ಕೊಡುತ್ತಿರುವ ಮಾಸಾಶನವನ್ನು ಮುಂದಿನ ವರ್ಷದಿಂದ ₹ 2 ಸಾವಿರಕ್ಕೆ ಹಾಗೂ ಅಂಗವಿಕಲರ ಮಾಸಾಶನವನ್ನು ₹ 2,500ಕ್ಕೆ ಹೆಚ್ಚಿಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಮೃದು ಧೋರಣೆ ದೌರ್ಬಲ್ಯವಲ್ಲ: ಕುಮಾರಸ್ವಾಮಿ
ರಾಯಚೂರು: ‘ಮೃದು ಧೋರಣೆ ನನ್ನ ದೌರ್ಬಲ್ಯವಲ್ಲ. ಪ್ರತಿಭಟನಾಕಾರರಿಗೆ ನಾನು ಬಳಸಿದ ಪದ ಆಕ್ಷೇಪಾರ್ಹವಲ್ಲ. ಬಿಜೆಪಿಯವರು ಹೇಳಿದರೆಂದು ಆ ಪದ ವಾಪಸ್ ಪಡೆಯುವುದಿಲ್ಲ. ಕ್ಷಮೆಯನ್ನೂ ಕೇಳುವುದಿಲ್ಲ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗ್ರಾಮವಾಸ್ತವ್ಯಕ್ಕೆ ಹೀಗೆ ಅಡ್ಡಿಯನ್ನುಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

‘ಪ್ರಧಾನಿ ಮೋದಿ ಅವರು ಪ್ರಯಾಣಿಸುವ ವಾಹನಕ್ಕೆ ಹೀಗೆ ಅಡ್ಡಗಟ್ಟಿದರೆ ಅವರು ಸಹಿಸಿಕೊಂಡು ಸುಮ್ಮನಿರುತ್ತಾರಾ? ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಓಡಿಸುತ್ತಾರೆ’ ಎಂದೂ ಪ್ರಶ್ನಿಸಿದರು.

‘ರಾಜ್ಯದ ಯಾವುದೇ ಮೂಲೆಯಿಂದ ಜನರು ಬಂದರೂ ಅವರ ಜಾತಿ, ಪಕ್ಷ ಕೇಳದೆ ನಾನು ಸಮಾಧಾನದಿಂದ ಅವರ ಸಮಸ್ಯೆ ಆಲಿಸುತ್ತೇನೆ. ವಿರೋಧಿಗಳ ಕಷ್ಟವನ್ನೂ ಕೇಳುವ ಮಾನವೀಯ ಹೃದಯ ಉಳ್ಳವನು ನಾನು. ಯಾರ ಬಗ್ಗೆಯೂ ಲಘುವಾಗಿ ಮಾತನಾಡಲ್ಲ. ನನ್ನನ್ನು ಕಠೋರ ಹೃದಯಿ ಎಂದು ಬಿಂಬಿಸಬೇಡಿ’ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.

ಅಡ್ಡಿ ಮಾಡಬಾರದು

ಮೈಸೂರು: ‘ಎಲ್ಲರೂ ಸೇರಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಉದ್ವೇಗಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ’ ಎಂದು ಶಾಸಕ ಎಚ್.ವಿಶ್ವನಾಥ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಇರುವ ಬಸ್ ಅಡ್ಡಗಟ್ಟಿ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾರೆ. ಬಿಜೆಪಿಯ ಈ ಕ್ರಮ ಸರಿ ಇಲ್ಲ. ಮುಖ್ಯಮಂತ್ರಿ ಕೂಡ ಮನುಷ್ಯರೇ. ಮನಸ್ಸಿಗೆ ಗಾಸಿಯಾದಾಗ ಕೆಲ ಮಾತುಗಳು ಹೊರಹೊಮ್ಮುತ್ತವೆ’ ಎಂದು ಕುಮಾರಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡರು.

‘ವಿರೋಧ ಪಕ್ಷ ಸುಭದ್ರವಾಗಿದ್ದರೆ, ಆ ರಾಜ್ಯದ ಸರ್ಕಾರ ಕೂಡ ಸುಭದ್ರವಾಗಿರುತ್ತದೆ. ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕೆ ಅಡ್ಡಿ ಉಂಟು ಮಾಡಬಾರದು’ ಎಂದು ಹೇಳಿದರು.

ಜೆಡಿಎಸ್ ತೊರೆಯುವ ವದಂತಿಗಳ ಕುರಿತು ಪ್ರತಿಕ್ರಿಯಿಸಿ, ‘ಇವೆಲ್ಲಾ ಮಾಧ್ಯಮಗಳ ಸೃಷ್ಟಿ. ಕರ್ನಾಟಕ ರಾಜಕಾರಣದಲ್ಲಿ ಬರೀ ಸಂಶಯ, ಅಪನಂಬಿಕೆ ಶುರುವಾಗಿದೆ. ಆರೋಗ್ಯ ವಿಚಾರಿಸಲು ಗೆಳೆಯ ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಿದರೆ ಬೇರೆಯೇ ಅರ್ಥ ಕಲ್ಪಿಸುತ್ತಾರೆ. ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿರುವ ನನ್ನ ಕೈಹಿಡಿದು ಅವಕಾಶ ನೀಡಿದ್ದು ಜೆಡಿಎಸ್’ ಎಂದರು.

ಕಾರಿನಲ್ಲೇ ತೆರಳಲಿರುವ ಸಿ.ಎಂ
ಬೀದರ್: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೂನ್ 27ರಂದು ಬಸವ ಕಲ್ಯಾಣ ತಾಲ್ಲೂಕು ಉಜಳಂಬದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮದಿಂದ ಹೆಲಿಕಾಪ್ಟರ್ ಬದಲು ಕಾರಿನಲ್ಲಿ ಬರಲಿದ್ದಾರೆ.

ಕರೇಗುಡ್ಡದಿಂದ ಉಜಳಂಬ ಅಂದಾಜು 285 ಕಿ.ಮೀ. ಅಂತರವಿದೆ. ಬೆಳಿಗ್ಗೆ 5ಕ್ಕೇ ಕರೇಗುಡ್ಡದಿಂದ ಹೊರಡುವ ಮುಖ್ಯಮಂತ್ರಿ ಕಲಬುರ್ಗಿ, ಕಮಲಾಪುರ, ಹುಮನಾಬಾದ್, ಬಸವಕಲ್ಯಾಣ ಮಾರ್ಗವಾಗಿ ಬೆಳಿಗ್ಗೆ 10 ಗಂಟೆಗೆ ಉಜಳಂಬ ತಲುಪಲಿದ್ದಾರೆ.

ಜೂನ್ 28 ರಂದು ಬೆಳಿಗ್ಗೆ 7 ಗಂಟೆಗೆ ಗ್ರಾಮದಿಂದ ರಸ್ತೆ ಮಾರ್ಗವಾಗಿ ಬೀದರ್ ವಾಯುಪಡೆ ನಿಲ್ದಾಣಕ್ಕೆ ಬಂದು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.

ಮೊದಲ ಬಾರಿ ಅಭಿವೃದ್ಧಿ ದರ್ಶನ: ಮೂರು ದಿಕ್ಕುಗಳಲ್ಲಿ ಬೆಟ್ಟಗಳಿಂದ ಸುತ್ತುವರಿದಿರುವ ಗಡಿ ಗ್ರಾಮ ಉಜಳಂಬ ಮುಖ್ಯಮಂತ್ರಿ ಅವರಿಗಾಗಿ ಸ್ವಚ್ಛ, ಸುಂದರ ರೂಪ ಪಡೆದುಕೊಂಡಿದೆ.

ಗಡಿ ಗ್ರಾಮದ ಜನ ಮೊದಲ ಬಾರಿಗೆ ಅಭಿವೃದ್ಧಿಯ ದರ್ಶನ ಪಡೆದಿದ್ದಾರೆ. ಒಂದು ತಿಂಗಳ ಅವಧಿಯಲ್ಲೇ ಗ್ರಾಮ ಸಾಕಷ್ಟು ಬದಲಾಗಿದೆ.

ಹೈದರಾಬಾದ್–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ವರೆಗೂ ಅಚ್ಚುಕಟ್ಟಾದ ರಸ್ತೆ ನಿರ್ಮಾಣವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಕೆಂಪು ಮಣ್ಣು ಸುರಿಯಲಾಗಿದೆ. ಗ್ರಾಮದ ಪ್ರತಿಯೊಂದು ಓಣಿಯಲ್ಲೂ ಕಾಂಕ್ರೀಟ್ ರಸ್ತೆ ಕಾಣುತ್ತಿದೆ.

ಆಗಲೋ, ಈಗಲೋ ಬೀಳುವ ಸ್ಥಿತಿಯಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ತೆರವುಗೊಳಿಸಿ ₹ 59 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ. ಸುಸಜ್ಜಿತ ಶೌಚಾಲಯ ಹಾಗೂ ಶಾಲಾ ಆವರಣ ಗೋಡೆ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ವಾಸ್ತವ್ಯ ಮಾಡಲಿರುವ ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಲಾಗಿದ್ದು, ಆಕರ್ಷಕ ಚಿತ್ರಗಳನ್ನೂ ಬಿಡಿಸಲಾಗಿದೆ.

ದೇವೇಗೌಡ ಗುಡ್ಡ ಸೇರಲಿ: ಕತ್ತಿ
ಬೆಳಗಾವಿ: ‘ರಾಯಚೂರಿನಲ್ಲಿ ಮನವಿ ಸಲ್ಲಿಸಲು ಬಂದವರೊಂದಿಗೆ ತಾಳ್ಮೆ ಕಳೆದುಕೊಂಡು ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ತೆರಳಲಿ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ರಾಜಕೀಯ ನಿವೃತ್ತಿ ಪಡೆದು ಗುಡ್ಡಕ್ಕೆ (ಬೆಟ್ಟಕ್ಕೆ) ಹೋಗಲಿ’ ಎಂದು ಶಾಸಕ, ಬಿಜೆಪಿಯ ಉಮೇಶ ಕತ್ತಿ ವ್ಯಂಗ್ಯವಾಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಾಲ ಮನ್ನಾ ವಿಚಾರದಲ್ಲಿ ಅವರಿಬ್ಬರ ನಡುವೆ ಮನಸ್ತಾಪವಿದೆ. ಹೀಗಾಗಿಯೇ ಮುಖ್ಯಮಂತ್ರಿ ಎಲ್ಲರೊಂದಿಗೆ ಸಿಡಿದು ಬೀಳುತ್ತಿದ್ದಾರೆ. ಅವರ ಭಾಷೆ ಹದ್ದು ಮೀರಿದೆ. ಒಂದೆಡೆ ಅಪ್ಪನ ತೊಂದರೆ, ಮತ್ತೊಂದೆಡೆ ಸೋದರನ (ಎಚ್.ಡಿ. ರೇವಣ್ಣ) ಕಾಟ, ಇನ್ನೊಂದೆಡೆ ಸಮ್ಮಿಶ್ರ ಸರ್ಕಾರದ ಹೊರೆ. ಇದೆಲ್ಲದರಿಂದಾಗಿ ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ಅವರನ್ನು ಬದುಕಲು ಜೆಡಿಎಸ್, ಕಾಂಗ್ರೆಸ್ನವರು ಬಿಡಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.

‘ಮುಖ್ಯಮಂತ್ರಿ ತಂದೆ ಮಾತು ಕೇಳಿ ಹಾಳಾಗುತ್ತಿದ್ದಾರೆ ಎನಿಸುತ್ತದೆ. ಅವರಿಗೆ ಆಸ್ಪತ್ರೆಗೆ ಸೇರಿಸುವಂಥ ರೋಗವಿಲ್ಲ. ತಂದೆ, ಸಹೋದರ ಹಾಗೂ ಪಾರ್ಟ್ನರ್ಗಳ ರೋಗ’ ಎಂದು ಟೀಕಿಸಿದರು.

‘ಕುಮಾರಸ್ವಾಮಿ ಅವರ ಮಾನಸಿಕ ಸ್ಥಿತಿ ಸರಿ ಇಲ್ಲ. ಅವರನ್ನು ಧಾರವಾಡದ ಹುಚ್ಚಾಸ್ಪತ್ರೆಗೆ ಸೇರಿಸಬೇಕು’ ಎಂದು ಶಾಸಕ, ಬಿಜೆಪಿಯ ಡಿ.ಎಂ. ಐಹೊಳೆ ಹೇಳಿದರು.

‘ಅವರು ಗ್ರಾಮವಾಸ್ತವ್ಯ ಬದಲಿಗೆ ಧಾರವಾಡ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ. ಬರಗಾಲವಿದ್ದಾಗ ಯಾವ ಊರುಗಳಿಗೂ ಹೋಗಲಿಲ್ಲ, ಅನುದಾನ ಬಿಡುಗಡೆ ಮಾಡಲಿಲ್ಲ. ಮಳೆಗಾಲ ಆರಂಭವಾದಾಗ ಗ್ರಾಮವಾಸ್ತವ್ಯದ ನಾಟಕ ಆಡುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.