ಕರ್ನಾಟಕದ ಬಹುತೇಕ ರೈತರು ಎತ್ತುಗಳನ್ನು ದೇವರ ಸ್ವರೂಪ ಎಂದೇ ಭಾವಿಸುತ್ತಾರೆ. ಸೋಮವಾರ ಬೇಸಾಯದ ಕೆಲಸ ಮಾಡುವ ಎತ್ತುಗಳಿಗೆ ರಜೆ. ಅಂದು ರೈತರು ಎತ್ತುಗಳನ್ನು ದುಡಿಸುವುದಿಲ್ಲ. ಈ ಪದ್ಧತಿ ನೂರಾರು ವರ್ಷಗಳಿಂದ ರೂಢಿಯಲ್ಲಿದೆ. ಅಂದು ಎತ್ತುಗಳ ಮೈ ತೊಳೆದು ವಿಶೇಷ ಆಹಾರ ನೀಡಿ ದಿನಪೂರ್ತಿ ವಿಶ್ರಾಂತಿ ನೀಡುತ್ತಾರೆ.

ತುಮಕೂರು ಜಿಲ್ಲೆ ತೋವಿನಕೆರೆ ಸಮೀಪದ ಮಣುವಿನಕುರಿಕೆ ಗ್ರಾಮದ ರೈತ ಕೃಷ್ಣಪ್ಪ (68) ಸೋಮವಾರ ಬೇಸಾಯ ಮಾಡಲು ಅನುಸರಿಸಿದ ರೀತಿ ಸುತ್ತಲಿನ ಊರುಗಳ ರೈತರ ಗಮನ ಸೆಳೆದಿದೆ. ಅಂದು ಸೋಮವಾರ. ರಾಗಿ ಸಸಿ ನಾಟಿ ಮಾಡಲು ಭೂಮಿ ಹದವಾಗಿತ್ತು.

ಒಂದು ದಿನ ಕಳೆದರೆ ಭೂಮಿಯಲ್ಲಿನ ತೇವಾಂಶ ಕಡಿಮೆಯಾಗಬಹುದು ಎಂಬ ಭಯವಿತ್ತು. ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದ ಸಂಪ್ರದಾಯ ಮುರಿಯಲು ಕೃಷ್ಣಪ್ಪ ಅವರಿಗೆ ಇಷ್ಟವಿರಲಿಲ್ಲ. ಆಗ ಅವರಿಗೆ ಅವರ ತಂದೆ ಅನುಸರಿಸುತ್ತಿದ್ದ ಕ್ರಮ ನೆನಪಿಗೆ ಬಂತು.

ತಮ್ಮ ಮಗ ರಾಮಕೃಷ್ಣ ಹಾಗೂ ಪಕ್ಕದ ಜಮೀನಿನ ಮಂಜುನಾಥನನ್ನು ಮುಯ್ಯೊಳಾಗಿ ಬಳಸಿಕೊಂಡು ನೇಗಿಲು ಕಟ್ಟಲು ಅವರು ಸಿದ್ದರಾದರು. ಈ ಇಬ್ಬರು ಯುವಕರು ಎತ್ತುಗಳಂತೆ ಹೆಗಲ ಮೇಲೆ ನೇಗಿಲು ಹೊತ್ತರು. ಕೃಷ್ಣಪ್ಪ ಹಲ್ವೆ ಹಿಡಿದು ಸಾಲು ಹೊಡೆದರು. ಆಗಾಗ ನೊಗ ಹೊತ್ತವರಿಗೆ ವಿಶ್ರಾಂತಿ ಕೊಟ್ಟರು. ಮನೆಯ ಹೆಣ್ಣು ಮಕ್ಕಳ ಜೊತೆ ಕೆಲವು ಮುಯ್ಯೊಳುಗಳನ್ನು ಬಳಸಿಕೊಂಡು ಸಂಜೆ ಹೊತ್ತಿಗೆ ಎರಡು ಎಕರೆಯಲ್ಲಿ ರಾಗಿ ಸಸಿ ನಾಟಿ ಮಾಡಿ ಮುಗಿಸಿದರು.

ಎರಡು ಎಕರೆಯಲ್ಲಿ ನಾಟಿ ಕೆಲಸ ಖರ್ಚಿಲ್ಲದೆ ನಡೆಯಿತು. ಈ ಕೆಲಸಕ್ಕೆ ಕೂಲಿಗಳನ್ನು ನಂಬಿಕೊಂಡಿದ್ದರೆ ಎರಡು ಎಕರೆಯಲ್ಲಿ ನಾಟಿ ಮಾಡಲು ಒಂದು ದಿನ ಸಾಲುತ್ತಿರಲಿಲ್ಲ. ಸೋಮವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಆಳುಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ.

ಹಿಂದಿನ ಕಾಲದಲ್ಲಿ ರೈತರು ಹಣದ ಕೂಲಿಗೆ ಬದಲು ಮುಯ್ಯಾಳು ಆಧಾರದ ಮೇಲೆ ಬೇಸಾಯದ ಕೆಲಸಗಳನ್ನು ಪರಸ್ಪರ ಸಹಕಾರದ ಮೇಲೆ ಮಾಡಿ ಮುಗಿಸುತ್ತಿದ್ದರು. ಈಗ ಮತ್ತೆ ಮುಯ್ಯಾಳು ಪದ್ಧತಿ ಅಲ್ಲಲ್ಲಿ ಜಾರಿಗೆ ಬಂದಿದೆ.

ರೈತ ಕುಟುಂಬಗಳ ಸದಸ್ಯರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಕೂಲಿ ಹಣ ಪಡೆಯದೆ ಅವರ ಹೊಲದಲ್ಲಿ ಇವರು, ಇವರ ಹೊಲದಲ್ಲಿ ಅವರು ಕೆಲಸ ಮಾಡುವುದೇ ಮುಯ್ಯಾಳು ಪದ್ಧತಿ. ಇದರಿಂದ ಕೆಲಸ ಹಗುರವಾಗುತ್ತದೆ. ಹಣವೂ ಉಳಿತಾಯವಾಗುತ್ತದೆ. ಬೇಸಾಯದ ಕೆಲಸಗಳಿಗೆ ಆಳುಗಳ ಕೊರತೆ ಹೆಚ್ಚಾಗಿರುವ ಈ ಕಾಲದಲ್ಲಿ ಮುಯ್ಯಾಳು ಪದ್ಧತಿ ಮತ್ತೆ ರೂಢಿಗೆ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.