‘ನನ್ನ ಅಹಂಕಾರ ಲತೆಗೆ ಎರೆಯಬೇಡ ನೀರ

ನಿನ್ನ ಜ್ಯೋತಿ ಜ್ವಾಲೆ ನುಂಗಿ ನೆಕ್ಕಿ ಬಿಡಲಿ ಪೂರ’

ಇದು ಕೋ.ಚೆ ಎಂದೇ ಖ್ಯಾತರಾಗಿದ್ದ ಕೋ. ಚೆನ್ನಬಸಪ್ಪನವರ ಕವಿತೆಯ ಸಾಲು.

ಹೊರತೋರಿಕೆಗೆ ಸಿಟ್ಟು ಸೆಡವಿನ ಅಹಂಕಾರಿಯಂತೆ ಕಾಣುತ್ತಿದ್ದ ಕೋ.ಚೆಯವರು ಬದುಕಿನುದ್ದಕ್ಕೂ ಸಾಮಾನ್ಯ ಜನರ ಬಗ್ಗೆ ಅತೀವ ಕಾಳಜಿ, ಸಂಪನ್ನ ಅನುಕಂಪ ಉಳ್ಳವರಾಗಿದ್ದರು. ವೃತ್ತಿಯಲ್ಲಿ ಎಷ್ಟು ಕಠೋರ ನಿಯಮಗಳನ್ನು ಪಾಲಿಸುತ್ತಿದ್ದರೋ ಅಷ್ಟೇ ಅಂತಃಕರಣದ ಭಾವದಲ್ಲಿ ವೃತ್ತಿಧರ್ಮವನ್ನು ನ್ಯಾಯಕ್ಕಾಗಿ, ನೊಂದವರಿಗಾಗಿ, ಬಡವರಿಗಾಗಿ, ಅಮಾಯಕರಿಗಾಗಿ ಮೀಸಲಿಟ್ಟು ಸತ್ಯ, ಶುದ್ಧ ಕಾಯಕಪ್ರಜ್ಞೆಯಲ್ಲಿ ಬಾಳಿದರು. ರಾಮಕೃಷ್ಣ ಪರಮಹಂಸ, ಶಾರದಾಮಾತೆ, ವಿವೇಕಾನಂದ, ಕುವೆಂಪು, ಅರವಿಂದರನ್ನು ಆಧ್ಯಾತ್ಮಿಕ ಗುರುಗಳಾಗಿ ಉಪಾಸಿಸಿದ್ದರು. ‘ಮಾಯೆಯನ್ನು ಹರಿದೊಗೆವ ಶಕ್ತಿ ನನ್ನೊಳಗಾಗೆ ನಾನೊಬ್ಬ ದೇವನಹೆ ನಿನ್ನ ಹಂಗೇನು?’ ಎಂಬ ಆತ್ಮಪ್ರತ್ಯಯದಲ್ಲಿ ನೈತಿಕ ಕೆಚ್ಚಿನಿಂದ ನಡೆದುಕೊಂಡರು. ವಕೀಲರಾಗಿ, ನ್ಯಾಯಾಧೀಶರಾಗಿ ಪತ್ರಿಕೆಯ ಸಂಪಾದಕರಾಗಿ ಅವರು ತಮ್ಮ ವೃತ್ತಿ ಧರ್ಮಕ್ಕೆ ಎಂದೂ ಎರವಾಗಿ ಬಾಳಿದವರಲ್ಲ. ನ್ಯಾಯನಿಷ್ಠುರಿಯಾಗಿ ಮಾನವೀಯ ಸಂವೇದನೆಯ ಕರ್ತವ್ಯಪ್ರಜ್ಞೆಗೆ ಬದ್ಧರಾಗಿ ಬದುಕಿದರು. ಇಂಥ ಕೋ.ಚೆಯವರು ಇಂದು ಬದುಕಿದ್ದರೆ ಅವರಿಗೆ ನೂರು ವರ್ಷ ತುಂಬಿರುತ್ತಿತ್ತು.

ಕೋ.ಚೆಯವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಆಲೂರು ಮಜರಾಗ್ರಾಮ ಕಾನಾಮಡುಗುವಿನಲ್ಲಿ 1922ರ ಫೆಬ್ರುವರಿ 27ರಂದು ಜನಿಸಿದರು. ತಂದೆ ಕೋ. ವೀರಣ್ಣ, ತಾಯಿ ಬಸಮ್ಮ. ವಿದ್ಯಾರ್ಥಿ ಆಗಿದ್ದಾಗಲೇ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ ಕೋ.ಚೆಯವರು ಒಬ್ಬ ಹುಟ್ಟು ಹೋರಾಟಗಾರ. ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅವರು ಮುಂದೆ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಬಳ್ಳಾರಿಯು ಕರ್ನಾಟಕದಲ್ಲೇ ಉಳಿಯಬೇಕು ಎಂದು 1953ರಲ್ಲೇ ನ್ಯಾಯಮೂರ್ತಿ ಎಲ್.ಎನ್. ಮಿಶ್ರಾ ಆಯೋಗದ ಮುಂದೆ ಮೈಸೂರು ಶಾಸಕರಿಂದ ಸಹಿ ಸಂಗ್ರಹ ಮಾಡಿಸಿ ಮನವಿ ಅರ್ಪಿಸಿದ್ದರು. ಅದರ ಫಲವಾಗಿ ಬಳ್ಳಾರಿ, ಮೈಸೂರು ರಾಜ್ಯದಲ್ಲಿ ವಿಲೀನಗೊಂಡು ಕರ್ನಾಟಕ ಪ್ರಾಂತ ರಚನೆಗೆ ನಾಂದಿ ಹಾಡಿತು.

ಕೋ.ಚೆಯವರ ಈ ಬಗೆಯ ಹೋರಾಟದ ಕಿಚ್ಚು ಬದುಕಿನುದ್ದಕ್ಕೂ ಜ್ವಲಂತವಾಗಿತ್ತು. ಇಂಥ ಕ್ರಿಯಾಶೀಲತೆಯ ಉಪ ಉತ್ಪನ್ನದ ರೂಪದಲ್ಲಿ ಅವರ ಸಾಹಿತ್ಯ, ಮಾತು, ಚಿಂತನೆ, ಕಾರ್ಯಕ್ರಮ ಎಲ್ಲವೂ ರೂಪು ತಳೆದಿವೆ. ಅವರು ಬಳ್ಳಾರಿಯಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದಾಗ ‘ರೈತ’ ಪತ್ರಿಕೆಯನ್ನು ಆರಂಭಿಸಿದರು. ಅವರ ಸಾಮಾಜಿಕ ಬದ್ಧತೆ ಎಷ್ಟಿತ್ತೆಂದರೆ, ತಮ್ಮ ಪತ್ನಿಯ ಮೈಮೇಲಿನ ಒಡವೆಗಳನ್ನು ಒತ್ತೆ ಇಟ್ಟು ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಬಾಯಿಯಿಲ್ಲದ ಬಡ ರೈತರ ಗೋಳಿಗೆ ಬಾಯಿಯಾಯಿತು ‘ರೈತ’ ಪತ್ರಿಕೆ. ಕನ್ನಡದ ಹೆಸರಾಂತ ಹಾಸ್ಯ ಸಾಹಿತಿ ಬೀಚಿಯವರು ‘ಬೇವಿನಕಟ್ಟೆ ತಿಮ್ಮ’ ಎಂಬ ಸ್ಥಿರ ಶೀರ್ಷಿಕೆಯಲ್ಲಿ ಮೊಟ್ಟಮೊದಲು ಬರೆದದ್ದು ಇದೇ ಪತ್ರಿಕೆಯಲ್ಲಿ.

1946ರಿಂದ 1965ರವರೆಗೆ ಬಳ್ಳಾರಿಯಲ್ಲಿ ವಕೀಲಿ ವೃತ್ತಿ ಮಾಡಿದ ಕೋ.ಚೆಯವರು ನ್ಯಾಯನಿಷ್ಠೆ, ಪ್ರಾಮಾಣಿಕತೆಯಿಂದ ವ್ಯವಹರಿಸಿದವರು. ಪ್ರಸಂಗ ಬಂದಾಗ ಕೋರ್ಟಿನಲ್ಲಿಯೇ ನ್ಯಾಯಾಧೀಶರನ್ನು ತರಾಟೆಗೆ ತೆಗೆದುಕೊಂಡು ಫಜೀತಿ ಉಂಟುಮಾಡಿದ ಸಂದರ್ಭಗಳೂ ಉಂಟು. 1965ರಲ್ಲಿ ಅವರು ನ್ಯಾಯಾಧೀಶರಾಗಿ ಬಡ್ತಿ ಪಡೆದರು. ನ್ಯಾಯಪೀಠದಲ್ಲಿ ಕುಳಿತಾಗ ಅವರ ಕಾಳಜಿ ಇದ್ದದ್ದು ನ್ಯಾಯನಿಷ್ಠೆಯ ಕಡೆಗೆ ಮತ್ತು ನ್ಯಾಯ ವಿಳಂಬದಿಂದ ಅನ್ಯಾಯ ಆಗಬಾರದು ಎಂಬ ಕಾಲನಿಷ್ಠೆಯ ಕಡೆಗೆ.

ಸಾಹಿತಿಯಾಗಿ ಕೋ.ಚೆ ಅವರ ಸಾಧನೆ ಅನನ್ಯವಾದದ್ದು. ಕಾವ್ಯ, ಕಥೆ, ಕಾದಂಬರಿ, ನಾಟಕ, ಜೀವನಚರಿತ್ರೆ, ವಿಮರ್ಶೆ, ಪ್ರಬಂಧ, ಲೇಖನ, ಪ್ರವಾಸಕಥನ, ಆತ್ಮಕಥನ, ಅನುವಾದ ಇತ್ಯಾದಿ ಎಲ್ಲ ಪ್ರಕಾರಗಳೂ ಸೇರಿದಂತೆ ಒಟ್ಟು 89 ಕೃತಿಗಳನ್ನು ಪ್ರಕಟಿಸಿದ್ದಾರೆ. ರಸಋಷಿ ಕುವೆಂಪು ಅವರ ‘ರಾಮಾಯಣ ದರ್ಶನಂ’ ಕೃತಿಗೆ ಅವರು ಬರೆದಿರುವ ಸಮಗ್ರ ಕಾವ್ಯ ಸಮೀಕ್ಷೆ ಅವರ ವಿಮರ್ಶಾ ದೃಷ್ಟಿಯ ರಸಾರ್ದ್ರ ಭಾವಕ್ಕೆ, ಒಳನೋಟದ ಅನುಭಾವಿಕ ದರ್ಶನ ದೃಷ್ಟಿಗೆ ಸಾಕ್ಷಿಯಾಗಿದೆ. ಅರವಿಂದರ ಮಹಾಕಾವ್ಯಗಳಾದ ‘ಡಿವೈನ್ ಲೈಫ್’ ಮತ್ತು ‘ಸಾವಿತ್ರಿ’ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಕುವೆಂಪು ಅವರಿಂದ ಶ್ಲಾಘನೆಗೆ ಒಳಗಾಗಿದ್ದು ಅವರ ಅನುವಾದ ಶ್ರೇಷ್ಠತೆಗೆ ಸಂದ ಬಹುದೊಡ್ಡ ಗೌರವವೇ ಸರಿ.

1965ರಿಂದ 1972ರವರೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರವೂ ಅವರು ಹಲವು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾಗಿದ್ದರು. ಬಳ್ಳಾರಿ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾಗಿ, ಪಂಪಾ ವಿದ್ಯಾಪೀಠದ ಸ್ಥಾಪನೆ ಮಾಡಿ ಆ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು. ಬಳ್ಳಾರಿ ಸಾಹಿತ್ಯ ಅಕಾಡೆಮಿ, ಸಜೀವ ಸಾಹಿತ್ಯ ಮಾಲೆಗಳನ್ನು ಹುಟ್ಟುಹಾಕಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದರು. ಕನ್ನಡ ಆಡಳಿತ ಭಾಷೆಯ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ, ಪಾಂಡಿಚೇರಿ ಅರವಿಂದಾಶ್ರಮದ ಕರ್ನಾಟಕ ನಿಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

2013ರ ಫೆಬ್ರುವರಿ ತಿಂಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಲಾಯಿತು. ಆಗ ಅವರಿಗೆ 92 ವರ್ಷ. ಅವರು ದೈವ ಭಕ್ತರಾಗಿದ್ದರೂ ಆಧ್ಯಾತ್ಮಿಕ ಚಿಂತಕರಾಗಿದ್ದರೂ ಪ್ರಖರವಾದ ವೈಚಾರಿಕ ಪ್ರಜ್ಞೆಯನ್ನೂ ವೈಜ್ಞಾನಿಕ ಮನೋಧರ್ಮವನ್ನೂ ಒಳಗೊಂಡಿದ್ದ ಒಬ್ಬ ಮಾನವತಾವಾದಿಯಾಗಿದ್ದರು.

ಇಂಥ ಹಿರಿಯ ಜೀವದ ಜೊತೆಗೆ ಅವರ ಕೊನೆಗಾಲದ ಹತ್ತು ವರ್ಷ ಅವರ ಕಿರಿಯ ಆಪ್ತನಾಗಿದ್ದೆನೆಂಬುದು, ಅವರು ಮನೆಗೆ ಆಗಾಗ ಕರೆಸಿಕೊಂಡು ನಾಡು, ನುಡಿ, ಶಿಕ್ಷಣ, ರಾಜಕಾರಣಗಳ ಆಗುಹೋಗಿನ ಬಗ್ಗೆ ಚರ್ಚೆ ಮಾಡಿ, ಸಲಹೆ, ಸೂಚನೆ ಕೊಟ್ಟು ಕಾರ್ಯೋನ್ಮುಖನಾಗುವಂತೆ ನನಗೆ ಹೇಳುತ್ತಿದ್ದರೆಂಬುದು ನನ್ನ ಬಾಳಿನ ಅನನ್ಯ ಪುಟಗಳೆಂದು ಭಾವಿಸಿದ್ದೇನೆ. ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಸೇರಿದ್ದಾಗ ಅವರನ್ನು ಕಾಣಲು ಹೋಗಿದ್ದ ಆ ಸಂದರ್ಭ ನನ್ನ ಬಾಳಿನಲ್ಲಿ ಮರೆಯಲಾಗದ ಒಂದು ವಿಶೇಷ ಅನುಭವ. ಅವರ ತಲೆಗೆ ಬ್ಯಾಂಡೇಜ್ ಕಟ್ಟಿದ್ದರು. ಅವರು ಹೆಚ್ಚು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ಆ ಕ್ಷಣದಲ್ಲಿ ಅವರು ಆಗಿನ ಸರ್ಕಾರ 1,000 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡಲು ಮುಂದಾಗಿದ್ದರ ಬಗ್ಗೆ ಹೆಚ್ಚು ಆತಂಕಿತರಾಗಿದ್ದರು. ಅದನ್ನು ತಡೆಯಬೇಕು ಎಂದು ತುಂಬಾ ಆಗ್ರಹದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳ ಸಬಲೀಕರಣ, ಗಡಿಭಾಗದ ಶಿಕ್ಷಣದ ಬಗ್ಗೆ ಸಲಹೆ ಹೀಗೆ ಮಾತು ಮುಂದುವರಿಸುತ್ತಲೇ ಇದ್ದರು.

ಮಾತು ಬೆಳೆಸುವುದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಭಾವಿಸಿದ ನಾನು ಮತ್ತು ನನ್ನ ಜೊತೆ ಬಂದಿದ್ದ ಡಾ.ವೀರಶೆಟ್ಟಿ ಅವರು ಅಲ್ಲಿಂದ ಸೂಕ್ಷ್ಮವಾಗಿ ಹೊರಟು ಬಾಗಿಲುದಾಟಿ ಬಂದಿದ್ದೆವು. ಮತ್ತೆ ಅವರಿಂದ ಕರೆ ಬರಲಾಗಿ ಅವರ ಹತ್ತಿರ ಹೋದೆವು. ಆಗ ಅವರು ನನ್ನನ್ನು ನೇರವಾಗಿ ದಿಟ್ಟಿಸಿ ನೋಡುತ್ತಾ ‘ಕುವೆಂಪು ಅವರು ಪಕ್ಕದ ಕೊಠಡಿಯಲ್ಲಿದ್ದಾರೆ. ಅವರನ್ನು ನೋಡಿ ಬಂದೆಯಾ? ಮಾತನಾಡಿಸಿದೆಯಾ? ಹೋಗಿ ಮಾತನಾಡಿಸು’ ಎಂದು ಸುಮ್ಮನಾದರು. ನನಗೆ ದಿಗ್ಭ್ರಮೆಯಾಗಿ ಅವಾಕ್ಕಾಗಿ ನಿಂತೆ. ಕ್ಷಣಹೊತ್ತು ಸುತ್ತಲಿದ್ದವರೆಲ್ಲರಿಗೂ ಏನೂ ತೋಚದ ಸ್ಥಿತಿ. ವೀರಶೆಟ್ಟಿಯವರು ನನ್ನ ಕಡೆ ನೋಡುತ್ತಾ ನಿಂತರು. ಅವರ ಹಿರಿಯ ಮಗಳು ‘ಬನ್ನಿ ಹೋಗೋಣ’ ಎಂದು ಹೊರ ನಡೆದರು. ನಾನು ಕೋ.ಚೆ ಅವರ ಪಾದಕ್ಕೆ ನಮಸ್ಕರಿಸಿ ಹೊರಬಂದೆ. 2019ರ ಫೆಬ್ರುವರಿ 23ರಂದು ಅವರು ನಿಧನರಾದರು.

ಕೊನೆಯ ದಿನಗಳ ಅವರ ಮನಸ್ಥಿತಿಗೆ ಕನ್ನಡಿ ಹಿಡಿದಂತೆ ಅವರ ಬಾಯಿಯಿಂದ ಬಂದ ಕುವೆಂಪು ಬಗೆಗಿನ ಮಾತುಗಳು ನನ್ನನ್ನು ಈಗಲೂ ಕಾಡಿಸುತ್ತಿವೆ. ಈಗಲೂ ಬೆರಗು ಹುಟ್ಟಿಸುವ ಅರಿವಿನ ನುಡಿಗಳವು. ಸಾವು, ಆ ಸಂದರ್ಭದ ಮನಃಸ್ಥಿತಿ, ಕಾಲಪ್ರಜ್ಞೆ, ಜೀವಿತಗತಿ, ಎಲ್ಲವನ್ನೂ ಗಂಭೀರವಾಗಿ ಚಿಂತನೆಗೆ ಹಚ್ಚುವ ಆ ನುಡಿಗಳು ಕೇವಲ ಮಾತಿಗೆ ಮಾತಾಗಿ ಮೂಡಿದ ಒಣ ನೆನಪಿನ ಶಬ್ದ ಅನ್ನಿಸಿಲ್ಲ. ಅದೊಂದು ರೂಪಕ.. ದೊಡ್ಡ ಜೀವಗಳು ತಮ್ಮ ಬಾಳ ಸಂಜೆಯಲ್ಲಿ ವರ್ತಮಾನದ ಜೊತೆಗೆ ಗತವನ್ನೂ, ಸದ್ಯದ ಕ್ಷಣಗಳನ್ನು ಒಟ್ಟೊಟ್ಟಿಗೆ ಅನುಭವಿಸುತ್ತಲೇ ಹೇಗೆ ಮುಂದಿನ ದಾರಿಯಲ್ಲಿನ ಮನೋಯಾನವನ್ನೂ ಮನಗಾಣಿಸುತ್ತವೆ ಎಂಬ ಒಂದು ಸೆಳಕಿನ ಮಿಂಚು ಇದು ಎಂದು ನನಗೆ ಭಾಸವಾಗಿದೆ. ಇನ್ನುಮುಂದೆ ಶಬ್ದವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.