ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾಕ್ಟ್ರು ಬರೀತಾರೆ ಹಕ್ಕಿಚಿತ್ರ–ಸಂದೇಶ ಪತ್ರ!

ಕೊಡಗು ವಿರಾಜಪೇಟೆಯ ವೈದ್ಯ ಎಸ್.ವಿ.ನರಸಿಂಹನ್ ಅವರ ಅಪರೂಪದ ಕಾಯಕ
Published : 5 ಅಕ್ಟೋಬರ್ 2024, 23:30 IST
Last Updated : 5 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಪ್ರತಿ ವರ್ಷ ವನ್ಯಜೀವಿ ಸಪ್ತಾಹ ಬಂತೆಂದರೆ ಸಾಕು, ಸಾವಿರಾರು ಮಂದಿ ಅಂಚೆಯಣ್ಣನ ದಾರಿ ಕಾಯುತ್ತಿರುತ್ತಾರೆ. ಈ ವರ್ಷ ಇನ್ನಾವ ಸಂದೇಶ ಹೊತ್ತು ಕೈಯಲ್ಲಿ ಬಿಡಿಸಿದ ವನ್ಯಜೀವಿಯ ಚಿತ್ರ ಇರುವ ಅಂಚೆಪತ್ರ ಬರುವುದೋ ಎನ್ನುವ ನಿರೀಕ್ಷೆಯಲ್ಲಿರುತ್ತಾರೆ. ಇವರೆಲ್ಲ ಚಾತಕಪಕ್ಷಿಗಳಂತೆ ಕಾಯುವುದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ವೈದ್ಯರಾಗಿರುವ ಎಸ್.ವಿ.ನರಸಿಂಹನ್ ಅವರ ಪತ್ರಕ್ಕಾಗಿ.

ಅಳಿಯುತ್ತಿರುವ ವನ್ಯಜೀವಿಗಳನ್ನು ಉಳಿಸಲು ಅಕ್ಟೋಬರ್‌ 2 ರಿಂದ 8ರವರೆಗೆ ಆಚರಿಸಲಾಗುವ ವಿಶ್ವ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಕಿಲೋಮೀಟರ್‌ಗಟ್ಟಲೆ ವಿದ್ಯಾರ್ಥಿಗಳಿಂದ ಜಾಥಾ ನಡೆಸುತ್ತದೆ. ಆದರೆ, ಇವರು ಮಾತ್ರ ಸದ್ದಿಲ್ಲದೇ ಸಾವಿರಾರು ಮಂದಿಯಲ್ಲಿ ವನ್ಯಜೀವಿ ಕುರಿತ ಪ್ರೀತಿ ಮತ್ತು ಕಳಕಳಿಯ ಬೀಜವನ್ನು ಪತ್ರಗಳ ಮೂಲಕ ಬಿತ್ತುತ್ತಿದ್ದಾರೆ.

ನರಸಿಂಹನ್ ಅವರು ಪ್ರತಿ ವರ್ಷ ವನ್ಯಜೀವಿ ಸಪ್ತಾಹದ ಅಂಗವಾಗಿ ಸಾವಿರಾರು ಮಂದಿಗೆ ಅಂಚೆಪತ್ರದಲ್ಲಿ ವನ್ಯಜೀವಿಗಳ ಚಿತ್ರ ಬಿಡಿಸಿ, ವನ್ಯಜೀವಿ ಉಳಿಸುವ ಸಂಬಂಧ ಜಾಗೃತಿ ಸಂದೇಶ ಬರೆದು ಕಳುಹಿಸುತ್ತಿದ್ದಾರೆ. ಈ ಚಿತ್ರಗಳನ್ನೆಲ್ಲ ಬಿಡುವಿನಲ್ಲಿ ಅವರೇ ಬರೆಯುವುದು ವಿಶೇಷ!

ಕಳೆದ ನಲವತ್ತು ವರ್ಷಗಳಿಂದ ಪ್ರತಿ ವರ್ಷವೂ ಇಂತಹ ಅಂಚೆಪತ್ರಗಳನ್ನು ಕಳುಹಿಸುವುದನ್ನು ವ್ರತದಂತೆ ಪಾಲಿಸುತ್ತಿದ್ದಾರೆ. ಇಲ್ಲಿಯವರೆಗೆ ಬರೋಬರಿ 81,595 ಪತ್ರಗಳನ್ನು ರವಾನಿಸಿದ್ದಾರೆ! ಈ ವರ್ಷ ಅವರು 2,180 ಪತ್ರಗಳನ್ನು ಕಳುಹಿಸಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್‌ 30ರೊಳಗೆ ಪೋಸ್ಟ್ ಮಾಡುವ ಕೆಲಸ ಮುಗಿದಿರುತ್ತದೆ.

‘ಪತ್ರ ಪಡೆದವರ ಸ್ನೇಹಿತರು, ಬಂಧುಗಳು, ಹೊಸದಾಗಿ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಇಂತಹ ಪತ್ರಕ್ಕಾಗಿ ಅವರಾಗೇ ಬೇಡಿಕೆ ಇಡುತ್ತಾರೆ. ಜೊತೆಗೆ, ನನಗೆ ಹೊಸದಾಗಿ ಪರಿಚಯವಾದವರ ವಿಳಾಸ ಪಡೆದು ಅವರಿಗೂ ಕಳುಹಿಸುತ್ತೇನೆ’ ಎಂದು ನರಸಿಂಹನ್ ಹೇಳುತ್ತಾರೆ.

1984ರಲ್ಲಿ ಅವರು ಈ ಬಗೆಯಲ್ಲಿ ಪತ್ರ ಬರೆಯುವ ಅ‍ಪರೂಪದ ಹವ್ಯಾಸವನ್ನು ಬೆಳೆಸಿಕೊಂಡರು. ಅವರೇ ಹೇಳುವಂತೆ, ‘ಹಿಂದೆ ಗೆಳೆಯರೆಲ್ಲ ಸೇರಿ ಕಟ್ಟಿಕೊಂಡ ತರಂಗ ವೇದಿಕೆಯ ವತಿಯಿಂದ ವಿರಾಜಪೇಟೆಯ ಟೌನ್‌ಹಾಲ್‌ ಹಾಗೂ ಇತರೆಡೆ ವೈವಿಧ್ಯಮಯವಾದ ಕಾರ್ಯಕ್ರಮಗಳ‌ನ್ನು ಪ್ರತಿ ತಿಂಗಳೂ ಆಯೋಜಿಸುತ್ತಿದ್ದೆವು. ಪ್ರತಿ ವರ್ಷವೂ ನಾನೇ ಕೈಯಲ್ಲಿ ಬರೆದ ಆಹ್ವಾನ ಪತ್ರವನ್ನು ನೀಡುತ್ತಿದೆ. ಒಮ್ಮೆ ಆಹ್ವಾನ ಪತ್ರ ಮೇಲೆ ಚಿತ್ರವೊಂದನ್ನು ಬರೆದೆ. ಅದನ್ನು ಪಡೆದವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ಕೇವಲ ನೂರರಿಂದ ನೂರಿಪ್ಪತ್ತು ಮಂದಿಗೆ ಆಹ್ವಾನ ಪತ್ರ ಕಳುಹಿಸಿದ್ದೆ. ಈಗ ಇದರ ಸಂಖ್ಯೆ ಸಾವಿರ ದಾಟಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಇಷ್ಟೊಂದು ಚಿತ್ರ ಬರೆಯುವುದು ಹೇಗೆ?

ಸಾವಿರಾರು ಅಂಚೆಪತ್ರಗಳಲ್ಲಿ ಚಿತ್ರ ಬಿಡಿಸಿ, ಅದಕ್ಕೆ ಬಣ್ಣ ಹಚ್ಚಿ, ಚಿತ್ತಾಕರ್ಷಕವಾಗಿ ರೂಪಿಸುವುದು ಅಷ್ಟು ಸುಲಭವಲ್ಲ. ವೈದ್ಯ ವೃತ್ತಿಯ ಒತ್ತಡದ ಬದುಕಿನ ಮಧ್ಯೆಯೂ ಅವರು ಇಂತಹ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಮೊದಲಿಗೆ ಚಿತ್ರದ ಔಟ್‌ಲೈನ್ ಹಾಕಿದ ಪತ್ರಗಳನ್ನು ಸಾಲಾಗಿ ಜೋಡಿಸಿಟ್ಟುಕೊಳ್ಳುತ್ತಾರೆ.

ನಂತರ, ಅವುಗಳಿಗೆ ಒಂದಾದ ಮೇಲೆ ಒಂದರಂತೆ ಬಣ್ಣ ಹಾಕುತ್ತಾರೆ. ಇದರಿಂದ ಕೆಲಸ ಬೇಗ ಸಾಗುತ್ತದೆ ಎಂದು ಅವರು ಹೇಳುತ್ತಾರೆ.

ಇಂತಹ ಅಪರೂಪದ ಪ್ರಯತ್ನದ ಜೊತೆಗೆ ಪಕ್ಷಿ ವೀಕ್ಷಕರೂ ಆಗಿರುವ ಅವರು ‘ಪಕ್ಷಿಗಳು’ ಹಾಗೂ ‘ಕೊಡಗಿನ ಖಗ ರತ್ನಗಳು’ ಎಂಬ ಕೃತಿಗಳನ್ನು ರಚಿಸಿದ್ದಾರೆ. ‘ಕೊಡಗಿನ ಖಗ ರತ್ನಗಳು’ ಪುಸ್ತಕದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಮೂಲಕ ಕೊಡಗಿನಲ್ಲಿ ಕಂಡು ಬರುವ 310 ವಿಶಿಷ್ಟ ಪಕ್ಷಿ ಸಂಕುಲವನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಈ ಕೃತಿಯ ವಿಶೇಷತೆ ಎಂದರೆ ಲೇಖಕ ನರಸಿಂಹನ್ ಅವರೆ, ಕೃತಿಯಲ್ಲಿರುವ ಎಲ್ಲಾ 310 ಪಕ್ಷಿಗಳ ಚಿತ್ರವನ್ನು ಬಿಡಿಸಿದ್ದಾರೆ. ಅಲ್ಲದೇ ಪಕ್ಷಿ ಸಂಕುಲ ಹಾಗೂ ಪರಿಸರ ಕುರಿತದ ಕಾರ್ಯಕ್ರಮಗಳಲ್ಲಿ ಅವರು ಉಪನ್ಯಾಸ ನೀಡುತ್ತಾ ಬಂದಿದ್ದಾರೆ.

ಅವರು ಬರೆದ ‘ಕೊಡಗಿನ ಖಗ ರತ್ನಗಳು’ ಪುಸ್ತಕ ಹಾಗೂ ವನ್ಯಜೀವಿ ಸಪ್ತಾಹಕ್ಕಾಗಿ ಬರೆಯುತ್ತಿರುವ ಪತ್ರಗಳು 2013ರಲ್ಲೇ ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿವೆ. ಇದುವರೆಗೂ ಪತ್ರದಲ್ಲಿ 450ರಿಂದ 480 ಪ್ರಭೇದದ ವನ್ಯಜೀವಿಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಈ ವರ್ಷ 16 ವನ್ಯಜೀವಿಗಳ ಚಿತ್ರಗಳು ಪತ್ರದಲ್ಲಿವೆ.

ಡಾಕ್ಟ್ರು ಬರೆದ ಪತ್ರದಲ್ಲಿ ‘ಪ್ರೀತಿಯಿಲ್ಲದ ಹೊರತು ಪ್ರಕೃತಿ ಸಂರಕ್ಷಣೆ ಅಸಾಧ್ಯ’ ಎನ್ನುವ ಸಂದೇಶದೊಂದಿಗೆ ಔಗುಹಕ್ಕಿಯ ಚಿತ್ರವಿದೆ. ಮತ್ತೊಂದರಲ್ಲಿ ನವಿಲುಗರಿಯ ಚಿತ್ರವಿದ್ದು, ‘ಪ್ರಕೃತಿ ಸವಿಯಲು ಸಾಕು ಎರಡು ಕಣ್ಗಳು, ಉಳಿಸಲು ಬೇಕು ಸಾವಿರ ಕೈಗಳು!’ ಹೌದಲ್ವೆ? (ಸಂಪರ್ಕ:94807 30884)

ವನ್ಯಜೀವಿ ಸಂದೇಶ ಪತ್ರ
ವನ್ಯಜೀವಿ ಸಂದೇಶ ಪತ್ರ
ವನ್ಯಜೀವಿ ಸಂದೇಶ ಪತ್ರ
ವನ್ಯಜೀವಿ ಸಂದೇಶ ಪತ್ರ
ಡಾ.ಎಸ್.ವಿ.ನರಸಿಂಹನ್ ಅವರು ಕೈಯಿಂದಲೇ ಬರೆದಿರುವ ಪಕ್ಷಿಯ ಚಿತ್ರ ಹಾಗೂ ವನ್ಯಜೀವಿ ಸಂದೇಶ ಪತ್ರ
ಡಾ.ಎಸ್.ವಿ.ನರಸಿಂಹನ್ ಅವರು ಕೈಯಿಂದಲೇ ಬರೆದಿರುವ ಪಕ್ಷಿಯ ಚಿತ್ರ ಹಾಗೂ ವನ್ಯಜೀವಿ ಸಂದೇಶ ಪತ್ರ
ಡಾ.ಎಸ್.ವಿ.ನರಸಿಂಹನ್ ಅವರು ಕೈಯಿಂದಲೇ ಬರೆದಿರುವ ಪಕ್ಷಿಯ ಚಿತ್ರ ಹಾಗೂ ವನ್ಯಜೀವಿ ಸಂದೇಶ ಪತ್ರ
ಡಾ.ಎಸ್.ವಿ.ನರಸಿಂಹನ್ ಅವರು ಕೈಯಿಂದಲೇ ಬರೆದಿರುವ ಪಕ್ಷಿಯ ಚಿತ್ರ ಹಾಗೂ ವನ್ಯಜೀವಿ ಸಂದೇಶ ಪತ್ರ
ಡಾ.ಎಸ್.ವಿ.ನರಸಿಂಹನ್ ಅವರು ಕೈಯಿಂದಲೇ ಬರೆದಿರುವ ಪಕ್ಷಿಯ ಚಿತ್ರ ಹಾಗೂ ವನ್ಯಜೀವಿ ಸಂದೇಶ ಪತ್ರ
ಡಾ.ಎಸ್.ವಿ.ನರಸಿಂಹನ್ ಅವರು ಕೈಯಿಂದಲೇ ಬರೆದಿರುವ ಪಕ್ಷಿಯ ಚಿತ್ರ ಹಾಗೂ ವನ್ಯಜೀವಿ ಸಂದೇಶ ಪತ್ರ
ಡಾ.ಎಸ್.ವಿ.ನರಸಿಂಹನ್ ಅವರು ಬರೆದ ವನ್ಯಜೀವಿ ಚಿತ್ರಗಳನ್ನು ಬಿಡಿಸಿದ ಜಾಗೃತಿ ಸಂದೇಶ ಇರುವ ಪತ್ರಗಳು
ಡಾ.ಎಸ್.ವಿ.ನರಸಿಂಹನ್ ಅವರು ಬರೆದ ವನ್ಯಜೀವಿ ಚಿತ್ರಗಳನ್ನು ಬಿಡಿಸಿದ ಜಾಗೃತಿ ಸಂದೇಶ ಇರುವ ಪತ್ರಗಳು
ಪತ್ರದಲ್ಲಿ ವನ್ಯಜೀವಿ ಚಿತ್ರಗಳನ್ನು ಬಿಡಿಸಲು ಡಾ.ಎಸ್.ವಿ.ನರಸಿಂಹನ್ ಅವರು ತಂದಿರಿಸಿರುವ ಪರಿಕರಗಳು
ಪತ್ರದಲ್ಲಿ ವನ್ಯಜೀವಿ ಚಿತ್ರಗಳನ್ನು ಬಿಡಿಸಲು ಡಾ.ಎಸ್.ವಿ.ನರಸಿಂಹನ್ ಅವರು ತಂದಿರಿಸಿರುವ ಪರಿಕರಗಳು
ಡಾ.ಎಸ್.ವಿ.ನರಸಿಂಹನ್
ಡಾ.ಎಸ್.ವಿ.ನರಸಿಂಹನ್
ನರಸಿಂಹನ್ ತಮ್ಮದೇ ಹಣ ವ್ಯಯಿಸಿ ತಾವೇ ಚಿತ್ರ ಬರೆದು ಪತ್ರ ಕಳುಹಿಸುತ್ತಿದ್ದಾರೆ. ಇದರ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸು ಕೆಲಸ ಮಾಡುತ್ತಿದ್ದಾರೆ. ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೊಡಗಿನಲ್ಲಿರುವ ಅಪರೂಪದ ಪಕ್ಷಿ ತಜ್ಞರು ಅವರು. ನಾನೂ ಅವರ ಪತ್ರ ಪಡೆದುಕೊಂಡಿದ್ದೇನೆ. ಈ ವರ್ಷ ಪ್ಲಾಸ್ಟಿಕ್‌ ಬಗ್ಗೆ ಜಾಗೃತಿ ಮೂಡಿಸುವ ಬರಹವನ್ನು ಪತ್ರದಲ್ಲಿ ಬರೆದಿದ್ದಾರೆ.
-ಡಿ.ಕೃಷ್ಣ ಚೈತನ್ಯ, ವಿಜ್ಞಾನ ಶಿಕ್ಷಕರು ಗೋಣಿಕೊಪ್ಪಲು ಪ್ರೌಢಶಾಲೆ
ಎಸ್.ವಿ.ನರಸಿಂಹನ್ ಅವರು ನನಗೆ ಪರಿಚಯವಾಗಿ 30 ವರ್ಷವಾಯಿತು. ಅಂದಿನಿಂದಲೂ ಅವರು ಅಂಚೆಪತ್ರದಲ್ಲಿ ಒಂದು ವನ್ಯಜೀವಿ ಚಿತ್ರ ಬರೆದು ಅದರಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತ ಸಂದೇಶವನ್ನು ಬರೆದು ಕಳುಹಿಸುತ್ತಿದ್ದಾರೆ. ನನಗೆ ಪ್ರತೀ ವರ್ಷವೂ ಈ ಪತ್ರ ಬರುತ್ತಿದೆ. ಅವರು ಹೆಚ್ಚಿಗೆ ಚಿತ್ರ ಬರೆದಾಗ ಹೊಸಬರ ವಿಳಾಸ ಕೇಳುತ್ತಾರೆ. ಕೊಡಗಿನಲ್ಲಿರುವ ಹಕ್ಕಿಗಳ ಬಗ್ಗೆ ಅತ್ಯಂತ ನಿಖರವಾದ ಪುಸ್ತಕಗಳನ್ನೂ ಬರೆದಿದ್ದಾರೆ. ಈ ಮೂಲಕ ಅವರು ಜನರ ಮನಸ್ಸಿನಲ್ಲಿ ಪರಿಸರಕ್ಕೊಂದು ಜಾಗ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.
-ಎ.ಶಿವಪ್ರಕಾಶ್, ಪಕ್ಷಿ ವೀಕ್ಷಕ ಮೈಸೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT