‘ಅ ಬ್ರಕಡಬ್ರ’, ‘ಹೋಕಸ್–ಪೋಕಸ್...’

ನೀವು ಅಮೆರಿಕ, ಜಪಾನ್ ಇಲ್ಲವೆ ಯುರೋಪಿನ ಯಾವುದೇ ದೇಶಕ್ಕೆ ತೆರಳಿದಾಗ, ಅಲ್ಲಿನ ಪ್ರವಾಸಿ ತಾಣದಲ್ಲಿ, ತಲೆ ಮೇಲೊಂದು ಉದ್ದನೆಯ ಟೋಪಿ ಹಾಕಿಕೊಂಡ ಹಾಗೂ ಕೈಯಲ್ಲೊಂದು ಮಂತ್ರದಂಡವನ್ನೂ ಹಿಡಿದುಕೊಂಡ ಬಾಲಕನೊಬ್ಬ ಏನನ್ನೋ ಜಾದೂ ಮಾಡಿ ತೋರಿಸುತ್ತಿರುವುದು ಕಣ್ಣಿಗೆ ಬೀಳುತ್ತದೆ. ಆ ಹುಡುಗನ ಇಂದ್ರಜಾಲಕ್ಕೆ ಮಾರುಹೋಗುವ ನೀವು, ಆತ ಹಿಡಿದಿರುವ ಸಾಧನದ ಮೇಲೊಮ್ಮೆ ಅಕಸ್ಮಾತ್ ಕಣ್ಣಾಡಿಸಿಬಿಟ್ಟರೆ ಮತ್ತಷ್ಟು ಚಕಿತರಾಗುತ್ತೀರಿ. ಏಕೆಂದರೆ, ಆತನ ಕೈಯಲ್ಲಿರುವುದು ನಮ್ಮ ಕನ್ನಡದ ‘ತಬ್ಬಿಬ್ಬು ಗುಂಡನ ಯಕ್ಷಿಣಿ ಡಬ್ಬಿ’ ಅರ್ಥಾತ್ ಉದಯ್ ಮ್ಯಾಜಿಕ್ ವರ್ಲ್ಡ್ನ (ಯುಎಂಡಬ್ಲೂ) ಜಾದೂ ಕಿಟ್!

ಬೆಂಗಳೂರಿನ ಕೊಳೆಗೇರಿ ನಿವಾಸಿಗಳ ಕೈಚಳಕದಲ್ಲಿ ಅರಳಿದ ಈ ಯಕ್ಷಿಣಿ ಕಿಟ್ಗಳು ಎರಡು ದಶಕಗಳ ಹಿಂದೆಯೇ ಸಾಗರೋಲ್ಲಂಘನ ಮಾಡಿ, ನಾನಾ ದೇಶಗಳಲ್ಲಿ ದೊಡ್ಡ ಹೆಸರನ್ನೂ ಗಳಿಸಿವೆ ಗೊತ್ತೆ? ಪ್ರಪಂಚದ ಮೂಲೆ–ಮೂಲೆಯಲ್ಲಿ ಸಾವಿರಾರು ಯಕ್ಷಿಣಿಗಾರರು ತಮ್ಮ ಗಿಲಿಗಿಲಿ ಮ್ಯಾಜಿಕ್ಗೆ ಈ ಕಿಟ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣರಾದ ಉದಯ್ ಜಾದೂಗಾರ್ ಮಾತ್ರ ತಮ್ಮ ಕಾರ್ಯಾಗಾರದಲ್ಲಿ ಸದ್ದಿಲ್ಲದೆ ಮತ್ತೊಂದು ಹೊಸ ಸಾಧನದ ಶೋಧದಲ್ಲಿ ತೊಡಗಿದ್ದಾರೆ. ಅಂದಹಾಗೆ, ‘ಅಬ್ರಕಡಬ್ರ’, ‘ಹೋಕಸ್–ಪೋಕಸ್’ ಎಂಬ ಇಂಗ್ಲಿಷ್ನ ಯಕ್ಷಿಣಿ ಮಂತ್ರಗಳಿಗೆ ಪರ್ಯಾಯವಾಗಿ ‘ತಬ್ಬಿಬ್ಬುಗುಂಡ’ ಎಂಬ ಕನ್ನಡದ ಮಂತ್ರವನ್ನು ಸೃಜಿಸಿಕೊಟ್ಟವರು ಕೂಡ ಇದೇ ಜಾದೂಗಾರ.

ಜಗತ್ತಿನಾದ್ಯಂತ ಸಾವಿರಾರು ಜಾದೂ ಪ್ರದರ್ಶನಗಳನ್ನೂ ನೀಡಿ, ವೆಂಟ್ರಿಲೋಕ್ವಿಸ್ಟ್ (‘ಮಾತನಾಡುವ ಗೊಂಬೆ’ಯ ಕಲಾವಿದ) ಆಗಿಯೂ ಹೆಸರು ಮಾಡಿ, ಕೈತುಂಬಾ ಸಂಪಾದನೆ ಮಾಡುತ್ತಿದ್ದ ಉದಯ್ ಅವರಿಗೆ ಯಕ್ಷಿಣಿ ಕಿಟ್ ತಯಾರಿಸುವ ಹುಚ್ಚು ಹಿಡಿದಿದ್ದು ಹೇಗೆ? ಕುತೂಹಲದಿಂದ ಈ ಪ್ರಶ್ನೆಯನ್ನು ಅವರ ಮುಂದಿಟ್ಟಾಗ, ‘ಅಯ್ಯೋ, ಅದೊಂದು ರಾಮಾಯಣದಂತಹ ದೊಡ್ಡ ಕಥೆ’ ಎಂದು ಜೋರಾಗಿ ನಕ್ಕುಬಿಟ್ಟರು.

ಬೆಂಗಳೂರಿನ ವಿಜಯನಗರ ಪ್ರದೇಶದಲ್ಲಿದ್ದ ಪೈಪ್ಲೈನ್ ಬಡಾವಣೆಯ ಪುಟ್ಟ ಮನೆಯೊಂದರಲ್ಲಿ ಜಾದೂ ಸಾಧನ ತಯಾರಿಸುವ ಘಟಕವನ್ನು ಆರಂಭಿಸಿದ ಕ್ಷಣಗಳನ್ನು ಉದಯ್ ಅವರು ಮೆಲುಕು ಹಾಕುವಾಗ ಕಾಲ ಸರ್ರನೆ ಎರಡೂವರೆ ದಶಕಗಳಷ್ಟು ಹಿಂದಕ್ಕೆ ಸರಿಯುತ್ತದೆ. ‘ಯಕ್ಷಿಣಿ ಎಂದರೆ ಇದೇನೂ ಅಲೌಕಿಕ ವಿದ್ಯೆಯಲ್ಲ. ಇದಕ್ಕೆ ಅತೀಂದ್ರಿಯ ಶಕ್ತಿಯೂ ಬೇಕಿಲ್ಲ. ಸಂಗೀತ, ನೃತ್ಯದಂತೆಯೇ ಒಂದು ಕಲೆಯಷ್ಟೆ. ಈ ಕಲೆಯನ್ನು ಸಮಾಜದ ನಡುವೆ ಜೀವಂತವಾಗಿಡಬೇಕು; ಯಾರು ಬೇಕಾದರೂ ಮ್ಯಾಜಿಕ್ ಮಾಡಲು ಸಾಧ್ಯವಾಗುವಂತಹ ಕಿಟ್ ತಯಾರಿಸಿ, ಕೈಗೆಟಕುವ ದರದಲ್ಲಿ ಕೊಡಬೇಕು ಎಂಬ ತುಡಿತದಿಂದ ₹ 50 ಸಾವಿರ ಮೂಲ ಬಂಡವಾಳ ಹಾಕಿ, ಯುಎಂಡಬ್ಲೂ ಶುರು ಮಾಡಿದೆ’ ಎಂದು ಅವರು ಪೀಠಿಕೆ ಹಾಕುತ್ತಾರೆ.

ವೃತ್ತಿಪರ ಜಾದೂಗಾರರಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ಯುಎಂಡಬ್ಲೂ ತಯಾರಿಸುತ್ತದೆ. ಇಲ್ಲಿನ ಯಕ್ಷಿಣಿ ಸಾಧನಗಳಿಗಾಗಿ ಜಗತ್ತಿನ ಹಲವು ಪ್ರತಿಷ್ಠಿತ ಕಂಪನಿಗಳು ಮುಂಗಡ ಹಣ ಕೊಟ್ಟು, ಹಲವು ತಿಂಗಳುಗಳವರೆಗೆ ಕಾಯಲು ಸಿದ್ಧವಿವೆ. ಆದರೆ, ಆರಂಭದಲ್ಲಿ ಮಕ್ಕಳು ಸ್ವತಃ ಯಕ್ಷಿಣಿ ಮಾಡಿ ನೋಡಲು ಸಾಧ್ಯವಿದ್ದ ಬಾಲ್ ಟ್ರಿಕ್ಗಳು, ರೋಪ್ ಟ್ರಿಕ್ಗಳು, ಕಾರ್ಡ್ ಟ್ರಿಕ್ಗಳು ಹಾಗೂ ನಾಣ್ಯದ ಟ್ರಿಕ್ಗಳನ್ನು ಒಳಗೊಂಡ ಬೇಸಿಕ್ ಕಿಟ್ಗಳನ್ನು ಈ ಸಂಸ್ಥೆ ತಯಾರು ಮಾಡುತ್ತಿತ್ತು. ಅದರಲ್ಲೂ ದಾರದಲ್ಲಿ ಪೋಣಿಸಿದ ‘ಆಜ್ಞಾಪಾಲಕ ಚೆಂಡು’ ಇಲ್ಲಿ ತಯಾರಾದ ಮೊಟ್ಟಮೊದಲ ಸಾಧನ. ಲಂಬಕೋನದಲ್ಲಿ ನಿಂತ ದಾರದ ನೆತ್ತಿಯೇರಿ ಕೂರುವ ಈ ಚೆಂಡು, ಯಕ್ಷಿಣಿಗಾರ ಹೇಳಿದರೆ ಮಾತ್ರ ಕೆಳಗೆ ಇಳಿಯುತ್ತದೆ. ‘ಯಾಕೆ ಅವಸರ ಮಾಡ್ತೀಯಾ ನಿಧಾನವಾಗಿ ಬಾ’ ಅಂದರೆ ಸಾಕು, ಮೆಲ್ಲ ಮೆಲ್ಲನೆ ಉರುಳುತ್ತದೆ. ಮಧ್ಯದಲ್ಲಿ ‘ಸ್ವಲ್ಪ ನಿಲ್ಲು’ ಎಂದರೆ ಆ ಆಜ್ಞೆಯನ್ನೂ ಪಾಲಿಸುತ್ತದೆ!

ಯಕ್ಷಿಣಿ ಕಿಟ್ಗಳ ತಯಾರಿಕೆಗಾಗಿ ಉದಯ್ ಅವರು ಆಯ್ದುಕೊಂಡದ್ದು ಕೊಳೆಗೇರಿ ನಿವಾಸಿಗಳನ್ನು. ‘ಇಲ್ಲಿಯೂ ಮ್ಯಾಜಿಕ್ ಮಾಡಲು ಹೊರಟಿದ್ದೀರಾ’ ಎಂದು ಪರಿಚಿತರೆಲ್ಲ ಗೇಲಿ ಮಾಡಿದರೂ ಇವರು ಹಿಡಿದ ಪಟ್ಟು ಬಿಡಲಿಲ್ಲ. ಕೆಲಸಕ್ಕೆ ಬಂದ ಕೊಳೆಗೇರಿ ಜನರಿಗೆ ಮೊದಲು ಸ್ವಚ್ಛತೆಯ ಪಾಠವನ್ನು ಮಾಡಿದರು. ನಿತ್ಯ ಸ್ನಾನ ಮಾಡುವಂತೆ ತಾಕೀತು ಮಾಡಿದರು. ಓದುವುದನ್ನು, ಬರೆಯುವುದನ್ನು ಹೇಳಿಕೊಟ್ಟರು. ‘ಎ, ಬಿ, ಸಿ, ಡಿ’ ಕಲಿತವರಿಗೆ ತಿಂಗಳಿಗೆ ₹ 500 ವಿಶೇಷ ಬಕ್ಷೀಸು ಇಟ್ಟರು. ಕಲಿಯದವರ ಸಂಬಳದಲ್ಲಿ ಅಷ್ಟೇ ಮೊತ್ತಕ್ಕೆ ಕತ್ತರಿ ಬೀಳಲಿದೆ ಎಂದೂ ಹೆದರಿಸಿದರು. ‘ಆ ಯಪ್ಪಾ, ಮಹಾ ತರ್ಲೆ. ಅದೇನೋ ‘ಎ, ಬಿ, ಸಿ, ಡಿ’ ಕಲಿತರೆ ಹೆಚ್ಚಿನ ಸಂಬಳವಂತೆ’ ಅಂತ ಬೈದುಕೊಂಡ ಮಹಿಳೆಯರೇ ದಿನದ ಕೆಲಸ ಮುಗಿಸಿದ ಮೇಲೆ ಅಕ್ಷರಗಳನ್ನು ಕಲಿಯಲು ಕುಳಿತರು.

ಕೆಲಸದ ಸ್ಥಳದಲ್ಲಿ ಯಾವಾಗಲೂ ದೊಡ್ಡದಾದ ಬಾಳೆಯ ಗೊನೆಯೊಂದು ನೇತಾಡುತ್ತಿತ್ತು. ಯಾರೂ ಬೇಕಾದರೂ ಕಿತ್ತುಕೊಂಡು ತಿನ್ನಬಹುದಿತ್ತು. ಹಾಲು– ಮೊಟ್ಟೆಗಳ ವ್ಯವಸ್ಥೆಯನ್ನೂ ಮಾಡಿದರು ಉದಯ್. ಯಾರು, ಯಾವ ಸಾಧನ ಸಿದ್ಧಪಡಿಸಬೇಕು ಎಂಬುದನ್ನು ನಿರ್ಧರಿಸಿ, ಆಯಾ ಕೌಶಲವನ್ನು ಪ್ರತಿ ಕಾರ್ಮಿಕನಿಗೂ ಹೇಳಿಕೊಟ್ಟರು. ‘ಶಿಸ್ತಿನ ಸಿಪಾಯಿಗಳಂತೆ ಎಲ್ಲ ಕಾರ್ಮಿಕರು ಬೆಳಿಗ್ಗೆ 8.30ಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿದ್ದರು.

ಹೇಳಿಕೊಟ್ಟಿದ್ದನ್ನು ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದರು. ಅವರ ಅರ್ಪಣಾಭಾವ ಕಂಡು ನನ್ನ ಮನ ತುಂಬಿ ಬಂದಿತ್ತು’ ಎಂದು ಈ ಜಾದೂಗಾರ ನೆನೆಯುತ್ತಾರೆ.

‘ನಮ್ಮ ಟ್ರಿಕ್ಗೆ ಬೇಕಾದ ಚೆಂಡನ್ನು ಮುಂಬೈನಿಂದ ತರಿಸಿಕೊಳ್ಳಬೇಕಿತ್ತು. ಒಂದು ಚೆಂಡಿಗೆ ಐದು ರೂಪಾಯಿ ಕೊಡಬೇಕಿತ್ತು. ನಾವೇ ತಯಾರಿಸಿಕೊಂಡರೆ ಪ್ರತಿ ಚೆಂಡಿಗೆ 50 ಪೈಸೆ ಖರ್ಚಾಗುತ್ತಿತ್ತು. ಪಟ್ಟುಬಿಡದೆ ಮೆಷಿನ್ ತಂದು ಚೆಂಡುಗಳ ತಯಾರಿಕೆಯನ್ನೂ ಆರಂಭಿಸಿದೆವು’ ಎಂದು ಅವರು ಹೇಳುತ್ತಾರೆ.

ತಯಾರಿಕಾ ಘಟಕವೇನೋ ಒಂದು ರೂಪು ಪಡೆದುಕೊಂಡಿತು. ಇಲ್ಲಿ ಸಿದ್ಧವಾದ ಸಾಧನಗಳನ್ನು ಮಾರಾಟ ಮಾಡುವ ಬಗೆ ಹೇಗೆ ಎನ್ನುವುದು ಮುಂದಿದ್ದ ಪ್ರಶ್ನೆ. ತಾವು ಜಾದೂ ಪ್ರದರ್ಶನ ಏರ್ಪಡಿಸಿದ ಕಡೆಗಳಲ್ಲಿ ಈ ಕಿಟ್ಗಳನ್ನು ಮಾರಾಟ ಮಾಡಲು ಸಾಧ್ಯವೇ ಎಂದು ಉದಯ್ ಪರೀಕ್ಷಿಸಿ ನೋಡಿದರು. ಮಾತು ಕೇಳುವ ಚೆಂಡನ್ನು ಜನ ಕುತೂಹಲದಿಂದ ಗಮನಿಸಿದರೂ ಕೊಳ್ಳಲು ಅಷ್ಟಾಗಿ ಆಸಕ್ತಿ ತೋರಲಿಲ್ಲ. ರಸ್ತೆಯ ಬದಿಯಲ್ಲಿ ಪಿಟೀಲು ಮಾರಾಟ ಮಾಡುವ ಹುಡುಗರು ಅದನ್ನು ಬಲು ಸುಶ್ರಾವ್ಯವಾಗಿ ನುಡಿಸಿ ತೋರಿಸುತ್ತಾರೆ. ಆದರೆ, ಖರೀದಿಸಿ ತಂದರೆ ಮಕ್ಕಳಿಗೆ ನುಡಿಸಲು ಬರುವುದಿಲ್ಲ. ಇದರ ಹಣೆಬರಹ ಕೂಡ ಅಷ್ಟೇ. ಇದನ್ನು ಕಟ್ಟಿಕೊಂಡು ಮನೆಯಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ ಎನ್ನುವ ಸಾಮಾನ್ಯ ಅಭಿಪ್ರಾಯ ಯಕ್ಷಿಣಿ ಕಿಟ್ಗಳ ಮಾರಾಟಕ್ಕೆ ಅಡ್ಡಿಯಾಗಿದೆ ಎಂಬುದನ್ನು ಅವರು ಕಂಡುಕೊಂಡರು.

‘ಮಾರಾಟಕ್ಕೆ ಎದುರಾದ ಅಡ್ಡಿಯ ನಿವಾರಣೆಗೆ ನಾವು ಯತ್ನಿಸಿದೆವು. ಮೂರು ವರ್ಷದ ಮಗು ಕೂಡ ಈ ಕಿಟ್ ಬಳಸಬಹುದು ಎಂಬುದನ್ನು ತಿಳಿಹೇಳಿ, ಹಿಂದಿರುವ ಟ್ರಿಕ್ ಏನೆಂಬುದನ್ನೂ ಹೇಳಿಕೊಡಲು ಶುರುಮಾಡಿದೆವು. ಅಯ್ಯೋ, ಇಷ್ಟೇನಾ ಈ ಮ್ಯಾಜಿಕ್ ಎಂದು ಕೇಳಲು ನಿಂತವರೆಲ್ಲ ಹೊರಟು ಹೋಗುತ್ತಿದ್ದರು. ಅಂಗಡಿಯಲ್ಲಿ ಇಟ್ಟರೆ ಮಾರಾಟವಾಗಲಿಲ್ಲ. ಬೀದಿಬದಿಯ ವ್ಯಾಪಾರಿಗಳಿಗೂ ಈ ಕಿಟ್ಗಳನ್ನು ಕೊಟ್ಟು ದೊಡ್ಡ ನಾಮ ಹಾಕಿಸಿಕೊಂಡೆವು. ಕೊನೆಗೆ ಬೆಂಗಳೂರಿನ ಅಲಂಕಾರ ಪ್ಲಾಜಾದಲ್ಲಿ ಒಂದು ಅಂಗಡಿಯನ್ನು ಬಾಡಿಗೆ ಪಡೆದು, ಕಿಟ್ಗಳ ಮಾರಾಟ ಶುರು ಮಾಡಿದೆವು’ ಎಂದು ಉದಯ್ ಆಗಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಹೆಚ್ಚು–ಕಡಿಮೆ ಅದೇ ಅವಧಿಯಲ್ಲಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ದೊಡ್ಡ ಉತ್ಸವವೊಂದು ಏರ್ಪಾಡಾಗಿತ್ತು. ಅಲ್ಲಿ ಯಕ್ಷಿಣಿ ಕಿಟ್ ಅಂಗಡಿಯನ್ನು ಹಾಕಲು ಮಂಗಳೂರಿನ ವಿಜಯಕುಮಾರ್ ಶೆಟ್ಟಿ ಅವರಿಂದ ಅವಕಾಶ ಗಿಟ್ಟಿಸಿದ ಉದಯ್, ಒಂದು ಲಾರಿ ತುಂಬಿ ತುಳುಕುವಷ್ಟು ಕಿಟ್ಗಳನ್ನು ಒಯ್ದರು. ಮೊದಲ ಎರಡು ದಿನ, ಅವುಗಳು ಮಾರಾಟವಾಗದೇ ಇದ್ದಾಗ ಅವರಿಗೆ ನಿರಾಸೆಯಾಯಿತು. ತಕ್ಷಣ ಅವರೊಂದು ಉಪಾಯ ಹೂಡಿದರು. ‘ಯಾರು ಬೇಕಾದರೂ ಈ ಮ್ಯಾಜಿಕ್ ಮಾಡಬಹುದು. ಬೇಡವೆಂದರೆ ಪೂರ್ತಿ ಹಣ ವಾಪಸ್’ ಎಂಬ ಬೋರ್ಡ್ ತೂಗು ಹಾಕಿದರು. ಒಂದು ಲೋಡ್ ಕಿಟ್ಗಳು ಫಟಾಪಟ್ ಅಂತ ಖರ್ಚಾಗಿಬಿಟ್ಟವು.

ಉದಯ್ ಜಾದೂ ನೋಡಿದ್ದ ರವಿಶಂಕರ್ ಕಿಣಿ ಎಂಬುವರು, ‘ಇಷ್ಟು ಚೆನ್ನಾಗಿ ಮ್ಯಾಜಿಕ್ ಮಾಡ್ತೀಯಾ. ಕೊಚ್ಚೆಯಲ್ಲಿ ಮೀನು ಹಿಡಿಯುವುದೇಕೆ? ದುಬೈಗೆ ಬಂದು ಷೋ ಕೊಡು. ಕೈತುಂಬಾ ಹಣ ಗಳಿಸುವೆಯಂತೆ’ ಎಂದು ಹುರಿದುಂಬಿಸಿದರು. ತಂಡ ಕಟ್ಟಲು ನಿರ್ಧರಿಸಿದ ಈ ಯಕ್ಷಿಣಿಗಾರ, ‘ವಿದೇಶಕ್ಕೆ ಹೋಗುವ ಆಸಕ್ತಿ ಇದ್ದವರು ಬನ್ನಿ’ ಎಂದು ಪತ್ರಿಕಾ ಜಾಹೀರಾತು ಕೊಟ್ಟರು. ಮೊದಲು ಮ್ಯಾಜಿಕ್ ಕಲಿಸುತ್ತೇವೆ ಬನ್ನಿ ಎಂದರೆ ಮನಸ್ಸು ಮಾಡದವರೇ ವಿದೇಶ ಪ್ರಯಾಣದ ಆಸೆಯಿಂದ ಬಂದಿದ್ದರು. ಹಾಗೆ ಬಂದವರನ್ನೆಲ್ಲ ಕರೆದುಕೊಂಡ ಉದಯ್, ಅವರಿಗೆಲ್ಲ ಬೆಳಿಗ್ಗೆ ಐದಕ್ಕೆ ಎದ್ದು, ಪೈಲ್ವಾನರಂತೆ ಅಂಗ ಕಸರತ್ತು ನಡೆಸಲು ಹೇಳಿದರು. ಬೆಳಗಿನಿಂದ ರಾತ್ರಿವರೆಗೆ ಷೋಗಳು ನಡೆಯಬೇಕಾದ ಕಾರಣ ಅಂತಹ ಬಲಶಾಲಿ ತಂಡ ಕಟ್ಟುವುದು ಅನಿವಾರ್ಯವಾಗಿತ್ತು ಎಂದು ಅವರು ವಿವರಿಸುತ್ತಾರೆ.

ದುಬೈನಲ್ಲಿ ಕಿಣಿಯವರ ನೆರವಿನಿಂದ ಷೋ ಮಾಡಲು ಅವಕಾಶ ಸಿಕ್ಕಮೇಲೆ, ಷೋ ಅವಧಿಯಲ್ಲಿ ಕಿಟ್ಗಳ ಮಾರಾಟಕ್ಕೆ ಅಂಗಡಿಯೊಂದನ್ನು ಬಾಡಿಗೆ ಪಡೆದುಕೊಂಡ ಈ ಯಕ್ಷಿಣಿಗಾರರ ತಂಡದ ಸದಸ್ಯರೆಲ್ಲ, ‘ಕಿಟ್ ಇಷ್ಟವಾಗದಿದ್ದರೆ ಹಣ ವಾಪಸ್ (ಮನಿ ಬ್ಯಾಕ್ ಗ್ಯಾರಂಟಿ)’ ಎಂದು ಅರಬ್ ಭಾಷೆಯಲ್ಲಿ ಹೇಳಲು ಕಲಿತರು. ಪ್ರದರ್ಶನಕ್ಕೆ ಬಂದ ಒಂದೊಂದು ಕುಟುಂಬವೂ ಹತ್ತಾರು ಕಿಟ್ಗಳನ್ನು ಖರೀದಿಸತೊಡಗಿತು. ಉದಯ್ ಅವರಿಗೆ ಖುಷಿಯೋ ಖುಷಿ. ಅದೇ ಹುರುಪಿನಲ್ಲಿ ತಮ್ಮ ಜೀವಮಾನದ ಗಳಿಕೆ ಹತ್ತು ಲಕ್ಷ ರೂಪಾಯಿಯನ್ನು ತಯಾರಿಕಾ ಘಟಕಕ್ಕೆ ಹೂಡಿ, ಹೊಸ, ಹೊಸ ಯಂತ್ರಗಳನ್ನು ಖರೀದಿಸಿತಂದರು. ಕಿಟ್ಗಳ ತಯಾರಿಕಾ ಪ್ರಮಾಣವೂ ಹೆಚ್ಚಿತು.

ದೆಹಲಿ, ಮುಂಬೈ, ಹೈದರಾಬಾದ್... ಹೀಗೆ ಎಲ್ಲೆಂದರಲ್ಲಿ ಕಿಟ್ಗಳನ್ನು ಕಳುಹಿಸಿದರೂ ಹಣ ಕೊಡುವಾಗ ವ್ಯಾಪಾರಿಗಳು ಸತಾಯಿಸಿದರು. ಹೀಗಾಗಿ ಯುಎಂಡಬ್ಲೂನ ಚಿತ್ತ ವಿದೇಶಗಳ ಕಡೆಗೂ ಹರಿಯಿತು. ಅಮೆರಿಕದ ಕೆಲವು ಕಂಪನಿಗಳು, ‘ಭಾರತೀಯರಾದ ನೀವು ಒಳ್ಳೆಯ ಸ್ಯಾಂಪಲ್ ಕಳಿಸುತ್ತೀರಿ. ಆದರೆ, ಆರ್ಡರ್ ಕೊಟ್ಟಮೇಲೆ ಕಳಪೆ ಸಾಮಗ್ರಿ ಕೊಡುತ್ತೀರಿ. ಆದ್ದರಿಂದಲೇ ನಿಮ್ಮ ಮೇಲೆ ಅನುಮಾನ’ ಎಂದು ಹೇಳಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಉದಯ್, ಕಿಟ್ಗಳನ್ನು ಕಳುಹಿಸಿದ ಮೇಲೆಯೇ ದುಡ್ಡು ಕೊಡಿ ಎಂದು ರಫ್ತು ಮಾಡಿದರೆ, ಅಮೆರಿಕದವರೂ ಅವರಿಗೆ ಪಂಗನಾಮ ಹಾಕಿದರು.

‘ಅಮೆರಿಕದಲ್ಲಿ ಇವರ ಕಿಟ್ಗಳು ಸಿಗುವಂತಾದ ಮೇಲೆ ಜೇಮ್ಸ್ ಜಾರ್ಜ್ ಎಂಬುವರು (ಅವರೀಗ ಬೆಂಗಳೂರಿನಲ್ಲೇ ನೆಲೆಸಿಬಿಟ್ಟಿದ್ದಾರೆ) ಉದಯ್ ಅವರಿಗೆ ಕರೆಮಾಡಿ ತಮಗೆ ಹತ್ತು ಸಾವಿರ ಡಾಲರ್ ಮೌಲ್ಯದ ಕಿಟ್ಗಳು ಬೇಕೆಂದು ಬೇಡಿಕೆ ಸಲ್ಲಿಸಿದರು. ಮೊದಲು ಹಣ ಕೊಟ್ಟರೆ ನಂತರ ಸಾಧನಗಳನ್ನು ಕಳುಹಿಸುವುದಾಗಿ ನಾವು ಹೇಳಿದೆವು. ಅವರಿಂದ ದುಡ್ಡು ಖಾತೆಗೆ ವರ್ಗವಾದ ನಂತರವೇ ಕಿಟ್ ತಯಾರಿಸಿ ಕಳುಹಿಸಿದೆವು’ ಎಂದು ಯುಎಂಡಬ್ಲೂನ ಪ್ರತಿ ಹಂತದ ಬೆಳವಣಿಗೆಗೆ ಸಾಕ್ಷಿಯಾಗಿರುವ ಅದರ ವ್ಯವಸ್ಥಾಪಕ ಚಂದ್ರಶೇಖರ್ ಹೇಳುತ್ತಾರೆ.

ವಾಷಿಂಗ್ಟನ್ನ ಉದ್ಯಮಿಯೊಬ್ಬರಿಂದ ಏಕಕಾಲಕ್ಕೆ ಮೂರು ಕೋಟಿ ರೂಪಾಯಿಯ ಆರ್ಡರ್ ಸಿಗುವ ವೇಳೆಗೆ, ಯುಎಂಡಬ್ಲೂ ಬ್ಯಾಟರಾಯನಪುರದ ಒಂದು ದೊಡ್ಡ ಕಟ್ಟಡಕ್ಕೆ ಸ್ಥಳಾಂತರ ಆಗಿತ್ತು. ಅದೇ ಕಟ್ಟಡದ ಮೇಲೆ ಮಹಡಿಯ ಮೇಲೆ ಮಹಡಿಗಳು ಎದ್ದವು. ಪ್ರತಿನಿತ್ಯ 16 ಗಂಟೆಗಳವರೆಗೆ ಉದಯ್ ಕಾರ್ಯಾಗಾರದಲ್ಲೇ ಕಳೆಯತೊಡಗಿದರು. ಕೋಲ್ಕತ್ತದ ಮ್ಯಾಜಿಕ್ ಸಾಧನಗಳಿಗೆ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸಡ್ಡು ಹೊಡೆಯಿತು.

‘ಮಗನೇ ನೀನು ಮಾಡಿಟ್ಟ ದುಡ್ಡನ್ನು ಈ ಜನ್ಮದಲ್ಲಿ ಖರ್ಚು ಮಾಡ್ತೀಯಾ’ ಎಂದು ಉದಯ್ ಅವರ ತಂದೆ ಅವರನ್ನೊಮ್ಮೆ ಕರೆದು ಕೇಳಿದರಂತೆ. ಆಗ ತಮ್ಮ ಇಬ್ಬರೂ ಹೆಣ್ಣುಮಕ್ಕಳಿಗೆ ಕರೆಮಾಡಿದ ಈ ಜಾದೂಗಾರ, ‘ನಿಮಗೆ ದುಡ್ಡು ಬೇಕೇ’ ಎಂದು ವಿಚಾರಿಸಿದರಂತೆ. ‘ಇಬ್ಬರೂ ನಿರಾಕರಿಸಿದ್ದರಿಂದ ಬಿಟ್ಟು ಹೋಗುವ ದುಡ್ಡಿಗಾಗಿ ಕಷ್ಟಪಡುವುದರಲ್ಲಿ ಏನು ಅರ್ಥವಿದೆ’ ಎಂದು ಕಿಟ್ಗಳ ತಯಾರಿಕಾ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದೆ. ನನ್ನ ಜತೆಗಿದ್ದ ಎಲ್ಲರಿಗೂ ಒಂದೊಂದು ವ್ಯವಸ್ಥೆ ಮಾಡಬೇಕಿತ್ತು. ಹತ್ತು ವರ್ಷಗಳ ಹಿಂದೆಯೇ ಸಂಸ್ಥೆಯನ್ನು ಮುಚ್ಚುವ ನಿರ್ಧಾರ ಘೋಷಿಸಿದೆ. ಕೆಲವರಿಗೆ ಬಡ್ಡಿರಹಿತ ಸಾಲಕೊಟ್ಟು ಪರ್ಯಾಯ ವ್ಯವಸ್ಥೆಯನ್ನೂ ಮಾಡಿದೆ. ಇನ್ನು ಕೆಲವರು ಮ್ಯಾಜಿಶಿಯನ್ ಆದರು. ಇನ್ನೂ ಎಂಟು ಜನ ಈಗಲೂ ನಮ್ಮೊಂದಿಗಿದ್ದಾರೆ. ಅವರಿಗಾಗಿ ಸಂಸ್ಥೆಯನ್ನು ನಡೆಸುತ್ತಲೇ ಇದ್ದೇನೆ’ ಎಂದು ಉದಯ್ ಹೇಳುತ್ತಾರೆ.

‘ನೀವೇಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ’ ಎಂದು ಕೆಲಸದಲ್ಲಿ ತೊಡಗಿದ್ದ ಶೋಭಾ, ಮಂಜುಳಾ, ಸರೋಜಮ್ಮ ಮತ್ತಿತರನ್ನು ಕೇಳಿದಾಗ, ‘ಇಂತಹ ಸಂಸ್ಥೆ ಮತ್ತೆಲ್ಲಿ ಸಿಗುತ್ತೆ? ಅವರು ಕ್ಲೋಸ್ ಮಾಡುವವರೆಗೆ ನಾವು ಎಲ್ಲಿಯೂ ಹೋಗಲ್ಲ. ಏನೂ ಇಲ್ಲದಿದ್ದಾಗ ಎರಡು ಹೊತ್ತಿನ ಗಂಜಿಗೆ ದಾರಿ ಮಾಡಿಕೊಟ್ಟ ಸಂಸ್ಥೆ ಇದು. ನಮ್ಮ ಮಕ್ಕಳೆಲ್ಲ ಒಳ್ಳೆಯ ವಿದ್ಯಾಭ್ಯಾಸ ಮಾಡಿ, ನೌಕರಿ ಮಾಡ್ತಾ ಇದ್ದಾರೆ. ಅವರ ಓದಿಗೂ ಈ ಸಂಸ್ಥೆ ನೆರವಾಗಿದೆ’ ಎಂದು ಪ್ರೀತಿಯಿಂದ ಹೇಳುತ್ತಾರೆ. ‘ನಮ್ ಸರ್ಗೆ ಯಾವ ಪ್ರಶಸ್ತಿ ಸಿಕ್ಕರೂ ಕಡಿಮೆ’ ಎಂದು ಕಾರ್ಮಿಕರು ಹೇಳಿದರೆ, ‘ಅಯೋಗ್ಯರಾಗಿ ಯಾವುದೇ ಪ್ರಶಸ್ತಿ ಪಡೆಯುವುದಕ್ಕಿಂತ, ಯೋಗ್ಯರಾಗಿ ಪಡೆಯದೆ ಇರುವುದೇ ಒಳಿತು’ ಎಂದು ಉದಯ್ ಅವರನ್ನು ಸುಮ್ಮನಾಗಿಸುತ್ತಾರೆ.

ಬಾಟಲಿಯಲ್ಲಿ ನೀರು ತುಂಬಿ, ಅದರ ಬಾಯಿಯನ್ನು ತೆಗೆದು ಬೋರಲಾಗಿ ಹಿಡಿದರೂ ಅದರಲ್ಲಿನ ನೀರು ಕೆಳಗೆ ಬೀಳದ ವಾಟರ್ ವರ್ಕ್ಸ್ ಮತ್ತು ನಾಣ್ಯವನ್ನು ಮುರಿದು ತುಂಡು, ತುಂಡು ಮಾಡುವ ಬ್ರೇಕ್ನಂತಹ ಉದಯ್ ಮ್ಯಾಜಿಕ್ಗಳು ವಿಶ್ವಮಾನ್ಯವಾಗಿವೆ. ಆದರೆ, ಇವೆಲ್ಲವುಗಳಿಗಿಂತ ಅವರು ಮಾಡಿದ ದೊಡ್ಡ ಯಕ್ಷಿಣಿಯೆಂದರೆ ನೂರಾರು ಕೊಳೆಗೇರಿ ಕುಟುಂಬಗಳ ಬಾಳಿನಲ್ಲಿ ಬೆಳಕು ಮೂಡಿಸಿರುವುದೇ ಆಗಿದೆ.

ಒಂದಲ್ಲ, ಎರಡಲ್ಲ!

ಬಾಲ್ಯದಲ್ಲಿ ‘ಅಟೆನ್ಷನ್ ಡೆಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್' (ಎಡಿಎಚ್ಡಿ) ಸಮಸ್ಯೆಯಿಂದ ಬಳಲಿದ್ದ ಉದಯ್ ಅವರು, ತಮ್ಮ ಈ ಸಮಸ್ಯೆಯನ್ನೇ ಅವಕಾಶವಾಗಿ ಪರಿವರ್ತಿಸಿಕೊಂಡು ಬಹುಮುಖ ಪ್ರತಿಭೆಯಾಗಿ ಬೆಳೆದವರು. ಯಕ್ಷಿಣಿಗಾರನಾಗಿ ಜಗದ್ವಿಖ್ಯಾತವಾದ ಅವರೊಬ್ಬ ಈಜುಪಟು, ಚೆಸ್ ಆಟಗಾರ, ನಟ, ನಿರ್ದೇಶಕ (ದರೋಡೆ, ಯುದ್ಧ ಮತ್ತು ಸ್ವಾತಂತ್ರ್ಯದಂತಹ ಸಿನಿಮಾ ಕೊಟ್ಟವರು), ಶಿವಮೊಗ್ಗದಲ್ಲಿದ್ದ ತಮ್ಮ ತಂದೆಯ ಬಾಂಬೆ ಸ್ಟುಡಿಯೊದಲ್ಲಿ ಛಾಯಾಗ್ರಾಹಕನಾಗಿಯೂ ಪಳಗಿದವರು.

‘ಗಳಿಸುವುದು ಹೇಗೆ?’, ‘ಸರಳ ಯಕ್ಷಿಣಿ’ಯಂತಹ ಕೃತಿಗಳನ್ನು ಬರೆದಿರುವ ಅವರು ಲೇಖಕನಾಗಿಯೂ ಗುರ್ತಿಸಿಕೊಂಡಿದ್ದಾರೆ. ಅವರೊಬ್ಬ ಒಳ್ಳೆಯ ಪೇಂಟರ್ ಕೂಡ ಹೌದು ಎನ್ನುವುದು ಕಾರ್ಯಾಗಾರದ ಗೋಡೆಗಳನ್ನು ಅಲಂಕರಿಸಿರುವ ಕಲಾಕೃತಿಗಳನ್ನು ನೋಡಿದರೆ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ನೆರಳು ಬೆಳಕಿನಾಟದಲ್ಲಿ ಸಿದ್ಧಹಸ್ತರು. ಕಂಪ್ಯೂಟರ್ನ ತಾಂತ್ರಿಕ ಪಟ್ಟುಗಳನ್ನೆಲ್ಲ ಕರಗತ ಮಾಡಿಕೊಂಡವರು. ‘ಹೌದು, ನನಗೆ ನೋಡಿದ್ದನ್ನೆಲ್ಲ ಮಾಡುವ ಹುಚ್ಚು’ ಎಂದು ನಗುತ್ತಲೇ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.