We learn from experience that
men never learn anything from experience...
-George Bernard Shaw

ಈ ಬ್ರಹ್ಮಾಂಡ, ತಾರಾಗಣ, ಭೂಮಿ, ಗಾಳಿ, ನೀರು, ಬೆಂಕಿ, ಶಬ್ದ, ಧ್ವನಿ, ದೃಷ್ಟಿ, ಕನಸು, ಪ್ರಜ್ಞೆ, ಜೀವಜಗತ್ತು ಹೇಗೆ ಸೃಷ್ಟಿಯಾದವು, ಏಕೆ ಸೃಷ್ಟಿಯಾದವು ಎಂಬುದೊಂದು ಎಂದೆಂದಿಗೂ ಉತ್ತರಿಸಲಾರದ ದೊಡ್ಡ ಪ್ರಶ್ನೆ. ಜೀವಜಗತ್ತಿನ ಪ್ರತಿಯೊಂದು ಶರೀರಕ್ಕೂ ಉಸಿರಿರುವಾಗ ಎಲ್ಲವೂ ಸತ್ಯ; ಉಸಿರು ಕಳೆದು ಹೋದ ಬಳಿಕ ಎಲ್ಲವೂ ಮಿಥ್ಯ. ಉಸಿರು ಮತ್ತು ದೇಹಗಳ ಅನುಸಂಧಾನ... ಮೈಗಾಡ್ ಎಂಥ ವಿಸ್ಮಯ! ಪ್ರಿಯ ವಾಚಕ ಮಹನೀಯರೇ, ನನ್ನ ಕಥನಗಾರಿಕೆಯ ಮೂವತ್ತು ವರ್ಷಗಳ ಅವಧಿಯಲ್ಲಿ ನಾನೆಂದೂ ಕನಸೊಂದನ್ನು ಆಧಾರವಾಗಿಟ್ಟುಕೊಂಡು ಕಥೆಯೊಂದನ್ನು ಹೆಣೆದವನಲ್ಲ.

ನೀವು ಗಮನಿಸಿದಂತೆ ಜೀವಜಗತ್ತಿನ ನ್ಯಾಚುರಲ್ ಇನ್ಸ್ಟಿಂಕ್್ಟಗಳಾದ ಹಸಿವು, ಕಾಮ, ದ್ವೇಷ, ಮತ್ಸರ, ಕ್ರೌರ್ಯ ಮುಂತಾದುವುಗಳೇ ನನ್ನ ಕಥೆಗಳ ಪ್ರಧಾನ ಜೀವನಾಡಿಗಳಾಗಿ ದಟ್ಟವಾಗಿ ಆವರಿಸಿಕೊಂಡು ಕಥಾನಕದ ಬೆಳವಣಿಗೆಗೆ ಒಂದು ರೀತಿಯ ಕುತೂಹಲಕರವಾದ, ವಿಸ್ಮಯಕರವಾದ emotional ಚೌಕಟ್ಟುಗಳಿಂದ ನಿರ್ಮಿಸಲ್ಪಟ್ಟ ಆವರಣವನ್ನು ತಮ್ಮಷ್ಟಕ್ಕೆ ತಾವೇ ಕಟ್ಟಿಕೊಳ್ಳುತ್ತಿದ್ದದ್ದು. ಇಂಥ ಕ್ರಿಯೆಗೆ ನಾನು ಸೈಕಾಲಜಿ, ಎಕನಾಮಿಕ್್ಸ ಮತ್ತು ಸೋಷಿಯಾಲಜಿ ಈ ಮೂರು ಸಬ್ಜೆಕ್್ಟಗಳ ವಿದ್ಯಾರ್ಥಿಯಾಗಿರುವುದೇ ಕಾರಣವಿರಬಹುದೆಂದು ನನ್ನ ಬಲವಾದ ಗುಮಾನಿ. ನನಗೆ ಕನಸುಗಳ ಬಗ್ಗೆ ಇರುವ ಮೋಹ ಅಷ್ಟಕ್ಕಷ್ಟೆ.

ಸುಪ್ತ ಮನಸ್ಸಿನ ಅಗೋಚರ ಎಳೆಗಳಲ್ಲಿ ಕನಸುಗಳ ಹುಟ್ಟು ಅಡಗಿರುವುದರಿಂದ ಕನಸುಗಳದೊಂದು absurd ಸಂಗತಿಯೆಂದೇ ನನ್ನ ಅನ್ನಿಸಿಕೆ. ಆದರೆ ನನ್ನ ಯೌವನದ ದಿನಗಳಲ್ಲಿ ಸ್ವಪ್ನಸ್ಖಲನವಾದಾಗ ಖುಷಿಗೊಳ್ಳುತ್ತಿದ್ದೆ. ಕನಸುಗಳು ದೇಹ ಮತ್ತು ಮನಸ್ಸುಗಳ ಸಂಪರ್ಕ ಸ್ಥಿತಿಯ ಯಾವುದೋ ವಿವರಿಸಲಾಗದಂತಹ ಅನುಭೂತಿ ಇದ್ದಿರಲೂ ಸಾಕು.

ಫ್ರಾಯ್್್ಡನಿಂದ ಹಿಡಿದು ಅಲೆನ್ ಹಾಬ್ಸನ್, ಮಾರ್ಕ್ ಬ್ಲೆಚನ್ರವರೆಗೂ ಶಿಸ್ತಾಗಿ ಓದಿಕೊಂಡಿದ್ದರೂ, ಕನಸುಗಳ ಬಗ್ಗೆ ಒಂದು ನಿರ್ದಿಷ್ಟ ವ್ಯಾಖ್ಯಾನ ನೀಡಲು ಯಾರಿಂದಲೂ ಸಾಧ್ಯವಾಗಿಲ್ಲವೆಂದೇ ನನ್ನ ತೀರ್ಮಾನ. ಸೃಷ್ಟಿ ಮತ್ತು ಅದರ ಸುತ್ತಲೂ ಗಿರಕಿ ಹೊಡೆಯುತ್ತಿರುವ ಅನೇಕಾನೇಕ ರಹಸ್ಯಗಳನ್ನು ತಿಳಿಯಲು ಇದುವರೆವಿಗೂ ಪ್ರಪಂಚದಾದ್ಯಂತ ಯಾವ ಘನ ವಿಜ್ಞಾನಿಗಳಿಗಾಗಲೀ, ಮನಶಾಸ್ತ್ರಜ್ಞರಿಗಾಗಲೀ, ದಾರ್ಶನಿಕರಿಗಾಗಲೀ, ದೈವಾಂಶ ಸಂಭೂತರಿಗಾಗಲೀ ಸಾಧ್ಯವಾಗದಿರುವುದೊಂದು ಮಾತ್ರ ಘನತರವಾದ ವಿಷಯ.

ಪ್ರಿಯ ವಾಚಕ ಮಹನೀಯರೇ, ಕ್ಷಮೆ ಇರಲಿ. ಮೊಟ್ಟಮೊದಲ ಬಾರಿಗೆ ಕನಸೊಂದನ್ನು ಆಧಾರವಾಗಿಟ್ಟುಕೊಂಡು ನಾನು ಕಥೆ ಬರೆಯಲು ಹೊರಟಿರುವುದರಿಂದ ನಿಮ್ಮ ಮುಂದೆ ಇಷ್ಟೆಲ್ಲವನ್ನೂ ಪ್ರಸ್ತಾಪಿಸಬೇಕಾಯಿತು. ನನಗೆ ಬಿದ್ದ ಕನಸನ್ನು ಹಾಗೆಯೇ ಹಸಿ ಹಸಿಯಾಗಿ ಚಂದಮಾಮ ಕಥೆಯೊಂದರ ರೂಪದಲ್ಲಿ ನಿಮ್ಮ ಮುಂದೆ ಇಟ್ಟುಬಿಡುತ್ತೇನೆ. ಕಥೆಗೋ ಕನಸಿಗೋ ಒಂದು ತಾರ್ಕಿಕ ಅಂತ್ಯ ಇರಲೇಬೇಕೆಂಬ ನಿಯಮವೇನೂ ಇಲ್ಲ. ಅಂದು ನನಗೆ ಎಚ್ಚರವಾದಾಗ ವಿಶಾಲವಾದ ಬಯಲೊಂದರಲ್ಲಿ ಅಂಗಾತವಾಗಿ ಮಲಗಿದ್ದೆ. ಸಂಪೂರ್ಣವಾಗಿ ನಗ್ನನಾಗಿದ್ದೆ. ಮೈ ಭಾರವಾದಂತೆ ಅಲುಗಾಡಲೂ ಸಾಧ್ಯವಾಗುತ್ತಿರಲಿಲ್ಲ. ನಾನೊಂದು ಜಂತುವಾಗಿ ರೂಪಾಂತರಗೊಂಡಿದ್ದೆ.

ನನ್ನಂಥ ದೊಡ್ಡದಾದ ಜಂತುವನ್ನು ನಾನೇ ಎಂದೂ ನೋಡಿರಲಿಲ್ಲ. ಅದಾಗ ತಾನೇ ಸೂರ್ಯೋದಯವಾಗುತ್ತಿತ್ತು. ಸೂರ್ಯನ ಕಿರಣಗಳ ಜೊತೆಯಲ್ಲಿಯೇ ಬೃಹತ್ ಪಕ್ಷಿಯೊಂದು ಸೂರ್ಯನ ಗರ್ಭದಿಂದಲೇ ಆವಿರ್ಭವಿಸಿದಂತೆ ಆಗಸದಲ್ಲಿ ಕಾಣಿಸಿಕೊಂಡಿತ್ತು. ಅದು ಆಗಸದಲ್ಲಿ ಹಾರುತ್ತಿದ್ದರೆ, ಅದರ ನೆರಳು ಭೂಮಿಯ ಮೇಲೆ ಬೃಹದಾಕಾರವಾಗಿ ಮೋಡದಂತೆ ಚಲಿಸುತ್ತಿತ್ತು. ಆ ಪಕ್ಷಿ ನನ್ನ ಕಡೆ ಹಾರಿ ಬಂದು, ಒಮ್ಮೆಗೇ ಕೊಕ್ಕಿನಿಂದ ನುಂಗಿ ಹಾಕಿ ಹಿಕ್ಕೆಯನ್ನು ಹಾಕಿತ್ತು. ಹಿಕ್ಕೆಯೊಂದಿಗೆ ನಾನು ನೆಲಕ್ಕೆ ಉದುರಿದ್ದೆ ಮತ್ತು ಮಾಮೂಲಿ ಮನುಷ್ಯನಾಗಿದ್ದೆ. ಆದರೆ ಆ ಹಕ್ಕಿ ಮಾತ್ರ ಅದಾಗ ತಾನೆ ಸೂರ್ಯನ ಕಿರಣಗಳೊಟ್ಟಿಗೆ ಹಾರಿ ಬರುತ್ತಿರುವಂತೆ ಕಾಣುತ್ತಿತ್ತು. ಅಂಥ ದೊಡ್ಡದಾದ ಪಕ್ಷಿಯನ್ನು ಜನತೆ ನೋಡುತ್ತಿದ್ದದ್ದು ಅದೇ ಮೊದಲು.

‘ಅರೆ, ಇಂಥ ಪಕ್ಷಿಯನ್ನು ಜೀವಮಾನದಲ್ಲೆ ಕಂಡಿರಲಿಲ್ಲ. ಪುಷ್ಪಕ ವಿಮಾನದಂತೆ ಕಂಗೊಳಿಸುತ್ತಿದೆಯಲ್ಲ...’ ಎಂದು ಹಿರಿಯರು ಮಾತನಾಡಿಕೊಂಡಿದ್ದರು. ‘ಓಹ್ ಇಂಥ ರೂಪ, ಬಣ್ಣ, ಆಕಾರಗಳನ್ನು ಹೊತ್ತ ಪಕ್ಷಿಯನ್ನು ನಾವೆಂದೂ ಕಂಡವರಲ್ಲ’ ಎಂದು ಹೆಂಗಸರು ಅಚ್ಚರಿಯ ಧ್ವನಿಗಳನ್ನು ಹೊರಡಿಸಿದ್ದರು. ‘ಈ ಪಕ್ಷಿಯು ರಣಹದ್ದು ಇರಬಹುದೆ, ಪ್ರಾಣಿ ಪಕ್ಷಿಗಳೊಂದಿಗೆ ಮನುಷ್ಯರನ್ನು ಕೂಡ ನುಂಗಲು ಬಂದಿರಬಹುದೆ. ಅಥವಾ ಅನ್ಯಗ್ರಹ ಜೀವಿಗಳ ಹುನ್ನಾರವೇನಾದರೂ ಇರಬಹುದೆ...’ ಎಂದು ಕೆಲವು ಪುಕ್ಕಲರು ಓಡಿ ಹೋಗಿ ಮನೆಗಳಲ್ಲಿ ಅವಿತುಕೊಂಡರು. ‘ಇಂಥ ವಿಚಿತ್ರ ಪಕ್ಷಿಯನ್ನು ನಾವು ಸಿನಿಮಾಗಳಲ್ಲೂ ಕಂಡವರಲ್ಲ. ಎಂತೆಂಥ ಇಂಗ್ಲಿಷ್ ಸಿನಿಮಾಗಳನ್ನು ನೋಡಿದ್ದೇವೆ’ ಎಂದು ಯುವಕರು ಪಿಸುಗುಟ್ಟಿಕೊಂಡಿದ್ದರು.

‘ನಾವೆಷ್ಟೋ ಪುರಾಣ, ಪುಣ್ಯ ಗ್ರಂಥಗಳನ್ನು ಓದಿದ್ದೇವೆ. ಇಂಥ ವಿಶಿಷ್ಟ ಪಕ್ಷಿಯೊಂದರ ಉಲ್ಲೇಖ ಯಾವ ಗ್ರಂಥದಲ್ಲೂ ಇದ್ದಿರುವುದು ನೆನಪಾಗುತ್ತಿಲ್ಲ’ ಎಂದು ಪಂಡಿತ ಪಾಮರರು ತಲೆ ಕೆಡಿಸಿಕೊಂಡಿದ್ದರು. ‘ಈ ಪಕ್ಷಿ ಪ್ರಳಯದ ಮುನ್ಸೂಚನೆಯೇನಾದರೂ ಇರಬಹುದೇ’ ಎಂದು ಕೆಲವು ನಿರಾಶಾವಾದಿಗಳು ವ್ಯಥೆಯಿಂದ ತಲೆ ಕೆಡಿಸಿಕೊಂಡಿದ್ದರು.

ಆಗಸದಲ್ಲಿ ಹಾರಾಡುತ್ತಿದ್ದ ಪಕ್ಷಿ ಜನ ನೋಡನೋಡುತ್ತಲೇ ಭೂಮಿಗೆ ಇಳಿದು ದೊಡ್ಡ ಬಯಲಿನ ಮಧ್ಯದಲ್ಲಿ ಕುಳಿತುಕೊಂಡಿತು. ಜನರಿಗೆ ಅದನ್ನು ಹತ್ತಿರದಿಂದ ನೋಡುವ ಕುತೂಹಲ. ಧೈರ್ಯವಿದ್ದ ಕೆಲವರು ಅದರ ಕಡೆ ನಡೆಯತೊಡಗಿದರು. ನಾನು ಕೆಲವರನ್ನು ತಡೆದು ‘ಅದು ರಾಕ್ಷಸ ಪಕ್ಷಿ, ಹತ್ತಿರ ಹೋದವರನ್ನು ನುಂಗಿಹಾಕುತ್ತದೆ’ ಎಂದು ಕಿರುಚಿಕೊಂಡಿದ್ದೆ. ಆದರೆ ನನ್ನ ಮಾತುಗಳು ಯಾರಿಗೂ ಕೇಳಿಸುತ್ತಿರಲಿಲ್ಲ. ನನ್ನನ್ನು ಜಂತುವಿನ ರೂಪದಲ್ಲಿದ್ದಾಗ ನುಂಗಿ ಮತ್ತೆ ನನಗೆ ಮಾಮೂಲಿ ಮನುಷ್ಯ ರೂಪವನ್ನು ಕೊಟ್ಟ ಆ ಪಕ್ಷಿಯ ಮೇಲೆ ನನಗೆ ಅಭಿಮಾನ ಕೂಡ ಇತ್ತು. ಹಾಗಾಗಿ ಅದರ ಬಳಿ ಹೋಗಲು ಧೈರ್ಯವಾಗಿ ಹೊರಟವರನ್ನು ಹಿಂಬಾಲಿಸಿದ್ದೆ. ಅದರ ಸುತ್ತಲೂ ಅನೇಕ ಜನ ನೆರೆದಿದ್ದರು.

ನಿಜಕ್ಕೂ ಅದೊಂದು ಆಕರ್ಷಣೀಯವಾದ ಮುಗ್ಧ ಹಕ್ಕಿಯಂತೆ ತೋರುತ್ತಿತ್ತು. ಚಿಕ್ಕದಾದ ಕೊಕ್ಕು, ಚಿಕ್ಕದಾದ ಕಣ್ಣುಗಳು. ಕಾಲುಗಳೂ ಚಿಕ್ಕದಾಗಿದ್ದವು. ಈ ಪಕ್ಷಿ ನನ್ನನ್ನು ನುಂಗಿದ್ದು ಬಹುಶಃ ನನ್ನ ಭ್ರಮೆಯಿರಬೇಕು ಅನ್ನಿಸಿತು. ಅದರ ದೇಹ ಅತ್ಯಂತ ದೊಡ್ಡದಾಗಿ ಕಾಣುತ್ತಿತ್ತು. ಮೈ ತುಂಬಾ ಕೆಂಪು ಮಿಶ್ರಿತ ಆಕಾಶ ಬಣ್ಣದ ರೆಕ್ಕೆಗಳು, ಗರಿಗಳು. ನಾನು ಧೈರ್ಯ ಮಾಡಿ ತುಂಬಾ ಹತ್ತಿರ ಹೋಗಿದ್ದೆ. ಸುಮಾರು ಜನ ನನ್ನನ್ನು ಹಿಂಬಾಲಿಸಿದ್ದರು. ಅದರ ಪುಟ್ಟ ಕಣ್ಣುಗಳಲ್ಲಿ ನಗು ಮಡುಗಟ್ಟಿರುವುದು ನನ್ನನ್ನೂ ಸೇರಿ ಎಲ್ಲರ ಗಮನಕ್ಕೂ ಬಂದಿತ್ತು.

ಅದು ಅತ್ಯಂತ ಸಾಧು ಪಕ್ಷಿಯಾಗಿತ್ತು. ನನಗೆ ಅರಿವಿಲ್ಲದೆಯೇ ಅದರ ಮೈ ಸವರಿದ್ದೆ. ಇಡೀ ಜೀವಮಾನದಲ್ಲಿ ಎಂದೂ ಕಂಡರಿಯದ ಅಚ್ಚರಿಯೊಂದು ಕಣ್ಣಿಗೆ ರಾಚಿತ್ತು. ಅದರ ರೆಕ್ಕೆ, ಗರಿ, ಪುಕ್ಕಗಳೆಲ್ಲವೂ ಸಾವಿರ ರೂಪಾಯಿಯ ನೋಟುಗಳಿಂದ ಮಾಡಲ್ಪಟ್ಟಿದ್ದವು. ನನ್ನ ಹತ್ತಿರವೇ ಇದ್ದ ವ್ಯಕ್ತಿಯೊಬ್ಬ ಧೈರ್ಯ ಮಾಡಿ ಒಂದು ನೋಟನ್ನು ಕಿತ್ತುಕೊಂಡಿದ್ದ. ಸಾವಿರ ರೂಪಾಯಿನ ಹೊಚ್ಚ ಹೊಸ ನೋಟು. ಇನ್ಯಾರದೋ ಜೇಬಿನಲ್ಲಿದ್ದ ಸಾವಿರ ರೂಪಾಯಿಯ ನೋಟನ್ನು ತೆಗೆದು ಅದರ ಪಕ್ಕ ಇಟ್ಟು ಹೋಲಿಸಲಾಯಿತು. ಸೇಮ್ ಟು ಸೇಮ್. ಒಂದೇ ಒಂದು ಅಣುವಿನಷ್ಟೂ ವ್ಯತ್ಯಾಸವಿರಲಿಲ್ಲ.

ರೂಪ, ಬಣ್ಣ, ಗಾತ್ರ, ನಮೂದಿಸಲಾಗಿದ್ದ ಭಾಷೆ, ನೋಟಿನ ಸಂಖ್ಯೆ ಎಲ್ಲವೂ ಒರಿಜಿನಲ್. ಇನ್ನೊಂದು ಅಚ್ಚರಿಯೆಂದರೆ ಕಿತ್ತುಕೊಂಡಿದ್ದ ನೋಟಿನ ಜಾಗದಲ್ಲಿ ಮತ್ತೊಂದು ಅಂಥದ್ದೇ ನೋಟು ಹುಟ್ಟಿಕೊಂಡಿತ್ತು. ಈಗ ಅನೇಕ ಜನ ಪಕ್ಷಿಯ ಪುಕ್ಕಗಳಿಗೆ ಅರ್ಥಾತ್ ಕರೆನ್ಸಿ ನೋಟುಗಳಿಗೆ ಕೈ ಹಾಕಿ ಕಿತ್ತುಕೊಳ್ಳತೊಡಗಿದರು. ಕಿತ್ತುಕೊಂಡ ಕ್ಷಣಾರ್ಧದಲ್ಲಿ ಮತ್ತೆ ನೋಟುಗಳಿಂದ ಪಕ್ಷಿಯ ದೇಹ ತುಂಬಿಕೊಳ್ಳುತ್ತಿತ್ತು. ನಾನೂ ಸಾಕಷ್ಟು ನೋಟುಗಳನ್ನು ಕಿತ್ತು ಜೇಬುಗಳಿಗೆ ತುಂಬಿಕೊಂಡಿದ್ದೆ.

ನೋಟುಗಳನ್ನು ಕೀಳುತ್ತಿದ್ದರೆ ಪಕ್ಷಿ ಮತ್ತು ಆವರಿಸಿಕೊಂಡಂತೆ ಹಿತವನ್ನು ಅನುಭವಿಸುತ್ತಿತ್ತು. ಈಗ ನೆರೆದವರೆಲ್ಲರೂ ಸಂಭ್ರಮದಿಂದ ನೋಟುಗಳನ್ನು ಕಿತ್ತು ಕಿತ್ತು ತಮ್ಮ ತಮ್ಮ ಜೇಬು–ಬ್ಯಾಗುಗಳಲ್ಲಿ ತುಂಬಿಕೊಳ್ಳತೊಡಗಿದರು. ಕೆಲವರು ಹರ್ಷೋದ್ಗಾರ ಮಾಡಿದ್ದರು. ಮತ್ತೆ ಕೆಲವರು ‘ಓಹೋ ಹಕ್ಕಿ, ಆಹಾ ಹಕ್ಕಿ, ಚಿನ್ನದ ಹಕ್ಕಿ, ರನ್ನದ ಹಕ್ಕಿ, ಮುತ್ತು ರತ್ನಗಳ ನಾಚಿಸೋ ಹಕ್ಕಿ...’ ಎಂದು ಹೊಗಳಿಕೆಯ ಹಾಡುಗಳನ್ನು ಹಾಡುತ್ತಾ ನೋಟುಗಳನ್ನು ಕೀಳುತ್ತಿದ್ದರು.

ಈ ಸುದ್ದಿಯನ್ನು ಯಾರೋ ನ್ಯೂಸ್ ಚಾನೆಲ್ಗಳಿಗೆ ಮುಟ್ಟಿಸಿದ್ದರು. ಹತ್ತಾರು ಚಾನೆಲ್ಗಳವರು ಗಂಟೆಯೊಂದರಲ್ಲಿ ಸ್ಥಳಕ್ಕೆ ಧಾವಿಸಿದ್ದರು. ಮೈಕ್, ಕ್ಯಾಮರಾಗಳೊಂದಿಗೆ ಪಕ್ಷಿಯ ಬಳಿಗೆ ದೌಡಾಯಿಸಿದ್ದರು. ಇದುವರೆವಿಗೂ ಯಾವ ಚಾನೆಲ್ನವರು ಇಂಥ ಅದ್ಭುತ, ವಿಸ್ಮಯ ಸುದ್ದಿಯನ್ನು ಬಿತ್ತರಿಸಿರಲಿಲ್ಲ. ರಿಪೋರ್ಟ್ರ್ಗಳು ಹಕ್ಕಿಯ ಮೈ ತಡವುತ್ತಾ, ನೋಟುಗಳನ್ನು ಕಿತ್ತು ಮತ್ತೆ ಅದೇ ಜಾಗದಲ್ಲಿ ನೋಟುಗಳು ಹುಟ್ಟುವುದನ್ನು, ನೋಟುಗಳ ಒರಿಜಿನಾಲಿಟಿಯನ್ನು ತೋರಿಸುತ್ತಾ ವಿವರಿಸುತ್ತಿದ್ದರು.

ಎಲ್ಲಾ ಚಾನೆಲ್ಗಳಲ್ಲೂ ಇದು ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರಗೊಳ್ಳುತ್ತಿತ್ತು. ನುರಿತ ಕ್ಯಾಮರಾಮನ್ಗಳು ಹಕ್ಕಿಯ ಕೊಕ್ಕನ್ನು, ಕಣ್ಣುಗಳನ್ನು, ಕಾಲುಗಳನ್ನು ಕ್ಲೋಸ್ ಅಪ್ನಲ್ಲಿ ಸೆರೆ ಹಿಡಿದು ಚಾನೆಲ್ಗಳ ಲೈವ್ ನ್ಯೂಸ್ಗೆ ರವಾನಿಸುತ್ತಿದ್ದರು. ಜನ ನೋಟುಗಳನ್ನು ಕೀಳುತ್ತಿದ್ದರೆ ಹಕ್ಕಿಯು ಅಮಲುಗೊಂಡಂತೆ ಕಣ್ಣುಮುಚ್ಚಿ ಸುಖವನ್ನು ಅನುಭವಿಸುತ್ತಿದ್ದ ದೃಶ್ಯಗಳು ಚಾನೆಲ್ಗಳಲ್ಲಿ ಅತ್ಯಮೂಲ್ಯವಾದ ಕ್ಷಣಗಳಂತೆ ಮತ್ತೆ ಮತ್ತೆ ಬಿತ್ತರಗೊಳ್ಳತೊಡಗಿದವು. ‘ಕುಬೇರನ ಮಾಯಾ ಪಕ್ಷಿ’, ‘ಐಶ್ವರ್ಯದ ಹಡಗು’, ‘ಕರೆನ್ಸಿಯ ಕಲ್ಪವೃಕ್ಷ’, ‘ಹಣದ ಅಕ್ಷಯ ಪಾತ್ರೆ’, ‘ಸಮಾನತೆಯ ಸಾಕ್ಷಿ ಪ್ರಜ್ಞೆ’ ಮುಂತಾದ ಅಡಿ ಬರಹಗಳನ್ನು ಬ್ರೇಕಿಂಗ್ ನ್ಯೂಸ್ಗೆ ಕೊಡುತ್ತಿದ್ದರು. ಸುದ್ದಿ ಕೇಳಿ ದೇಶದ ಎಲ್ಲಾ ಕಡೆ ಜನ ಅಚ್ಚರಿಯೊಂದಿಗೆ ಸಡಗರ, ಸಂಭ್ರಮಗಳಲ್ಲಿ ಮುಳುಗಿ ಪಕ್ಷಿಯನ್ನು ಹುಡುಕುತ್ತಾ ಹೋಗಲು ಸಿದ್ಧರಾಗತೊಡಗಿದರು.

ಆಗ ಮತ್ತೊಂದು ಸುದ್ದಿ ಬಿತ್ತರವಾಗತೊಡಗಿತ್ತು. ಹಣದ ಹಕ್ಕಿಯು ಸರ್ವಂತರ್ಯಾಮಿಯಾಗಿತ್ತು. ಬಡವ ಶ್ರೀಮಂತರೆನ್ನದೆ, ರೈತರು ಕೂಲಿ ಕಾರ್ಮಿಕರೆನ್ನದೆ, ಉದ್ಯಮಪತಿಗಳು ಕಾರ್ಮಿಕರೆನ್ನದೆ, ಶ್ರೀಮಂತರ ಬಡಾವಣೆ ಸ್ಲಂಗಳೆನ್ನದೆ ಎಲ್ಲಾ ಕಡೆಯೂ ಕಾಣಿಸಿಕೊಂಡಿತ್ತು. ನ್ಯೂಸ್ ಚಾನೆಲ್ ವರದಿಗಾರರು ಎಲ್ಲಾ ಹಳ್ಳಿ, ನಗರ, ಪಟ್ಟಣಗಳಿಂದಲೂ ವರದಿಯನ್ನು ಮಾಡುತ್ತಲೇ ಪಕ್ಷಿಗಳ ದೇಹಗಳಿಂದ ನೋಟುಗಳನ್ನು ಕಿತ್ತು ತುಂಬಿಕೊಳ್ಳುತ್ತಿದ್ದರು. ಸ್ಟುಡಿಯೋದಲ್ಲಿದ್ದವರು ರಿಪೋಟರ್ಗಳಿಗೆ, ಕ್ಯಾಮರಾಮನ್ಗಳಿಗೆ ಫೋನು ಮಾಡಿ ತಮಗೂ ಕೂಡ ಸಾಕಾಗುವಷ್ಟು ನೋಟುಗಳನ್ನು ಚಾನೆಲ್ ವಾಹನಗಳಲ್ಲಿ ತುಂಬಿಕೊಂಡು ಬರಲು ಮನವಿ ಮಾಡಿಕೊಂಡಿದ್ದರು.

ಮೊದಲಿಗೆ ಈ ಪಕ್ಷಿ ಪ್ರಧಾನವಾಗಿ ಆಕರ್ಷಿಸಿದ್ದು ರೈತಾಪಿಗಳನ್ನು, ಕೂಲಿಕಾರರನ್ನು, ಕೆಳ ಮಧ್ಯಮ ವರ್ಗದ ಬಡವರನ್ನು ಮತ್ತು ಭಿಕ್ಷುಕರನ್ನು. ‘ಕೋಟಿ, ಕೋಟಿ ವರ್ಷಗಳಿಂದಲೂ ನಮಗೆ ನ್ಯಾಯ ಸಿಕ್ಕಿರಲಿಲ್ಲ. ನಮ್ಮ ಮೇಲೆ ಯಾರಿಗೂ ಕರುಣೆ ಹುಟ್ಟಿರಲಿಲ್ಲ. ಜನ್ಮ ಜರ್ಝರಿತವಾಗುವಂತೆ ದುಡಿದರೂ ತಕ್ಕ ಬೆಲೆ ಸಿಗುತ್ತಿರಲಿಲ್ಲ. ಕಡೆಗೂ ದೇವರು ಕಣ್ಣು ತೆರೆದಿದ್ದಾನೆ...’, ‘ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲ ಎನ್ನುವಂಥ ಸ್ಥಿತಿ ಇತ್ತು. ಯಾರು ದೇಶ ಆಳಲು ಬಂದರೂ ನಮ್ಮ ಸ್ಥಿತಿ ಮಾತ್ರ ಖರಾಬೇ ಆಗಿತ್ತು. ಭಗವಂತ ಕರುಣೆ ತೋರಿದ್ದಾನೆ...’, ‘ಇಷ್ಟು ದಿನ ಕಾಡಿ ಬೇಡಿ ಬದುಕು ಸವೆಸಿದ್ದಾಯಿತು.

ಇನ್ನಾದರೂ ನೆಮ್ಮದಿಯ ಜೀವನವನ್ನು ಸಾಗಿಸಬೇಕು...’– ಮುಂತಾಗಿ ಮಾತನಾಡಿಕೊಳ್ಳುತ್ತಾ ಅವರೆಲ್ಲ ಸಡಗರ ಸಂಭ್ರಮಗಳಿಂದ ಪಕ್ಷಿಯ ಕಡೆ ಹೊರಟರು. ಅವರ ಜೊತೆಗೆ ಶಾಲಾ ಕಾಲೇಜುಗಳ ಮೇಷ್ಟ್ರುಗಳು, ವಿದ್ಯಾರ್ಥಿಗಳೂ ದೌಡಾಯಿಸಿದರು. ‘ವಿಪರೀತ ಬೆಲೆಯೇರಿಕೆಯಿಂದಾಗಿ ಜೀವನ ನಡೆಸುವುದೇ ದುಸ್ತರವಾಗಿದೆ. ಇಂಥ ವೇಳೆಯಲ್ಲಿ ಲಂಚರುಷುವತ್ತುಗಳನ್ನು ತೆಗೆದುಕೊಳ್ಳುವವರು ಮಾತ್ರ ಮಜವಾಗಿ ಜೀವನ ನಡೆಸಬಹುದು. ಈಗ ನಮಗೊಂದು ಒಳ್ಳೆಯ ದಾರಿಯಾಯಿತು. ಲಂಚಕೋರರು ಪಕ್ಷಿಯ ನೋಟುಗಳನ್ನು ಕೀಳಬಾರದೆಂದು ಸರ್ಕಾರ ಕಾನೂನು ಮಾಡಿದರೆ ಒಳ್ಳೆಯದು...’ ಎಂದು ಲಂಚರುಷುವತ್ತುಗಳಿಗೆ ಅವಕಾಶವಿಲ್ಲದ ವರ್ಗ ತರ್ಕಕ್ಕೆ ಬಿತ್ತು.

‘ನಾವು ಸಾವಿರಾರು ವರ್ಷಗಳಿಂದ ಪೂಜೆ, ಯಜ್ಞಯಾಗಾದಿಗಳನ್ನು ಮಾಡಿದ ಫಲ ಇದು. ನಮ್ಮ ಪೂಜೆಗೆ, ಭಕ್ತಿಗೆ ಮೆಚ್ಚಿ ದೇವರು ಪಕ್ಷಿಗಳ ರೂಪದಲ್ಲಿ ಸ್ವರ್ಗವನ್ನೆ ಭೂಮಿಗೆ ಕಳಿಸಿದ್ದಾನೆ. ಇನ್ನು ನಮ್ಮ ದೇಶ ಸುಭಿಕ್ಷವಾಗಿರುತ್ತದೆ. ಇದರ ಫಲವನ್ನು ನಾವು ಕೂಡ ಅನುಭವಿಸಬೇಕು...’ ಎಂದು ದೇವಸ್ಥಾನಗಳ ಪೂಜಾರಿಗಳು, ಮಠ ಮಾನ್ಯಗಳಲ್ಲಿ ವಿಜೃಂಭಿಸುತ್ತಿದ್ದ ಮಠಾಧಿಪತಿಗಳು ಮತ್ತು ಸಹಸ್ರ ಸಹಸ್ರ ಭಕ್ತರು ಪಕ್ಷಿಯ ಕಡೆ ಪ್ರಾರ್ಥಿಸುತ್ತಾ, ಧ್ಯಾನಿಸುತ್ತಾ, ಜಯಕಾರ ಹಾಕುತ್ತಾ ಖುಷಿಯಿಂದ ಸಾಗಿದ್ದರು. ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಆಭರಣ ವ್ಯಾಪಾರಿಗಳು ಕೂಡಲೇ ಗುಪ್ತ ಸಭೆಯನ್ನು ನಡೆಸಿದರು.

‘ಪಕ್ಷಿಯ ಹಣಕ್ಕಾಗಿ ನಾವು ಯಾರೂ ಮುಂದಾಗಬಾರದು. ಅದು ನಮ್ಮ ಘನೆತೆಗ ತಕ್ಕುದ್ದಲ್ಲ. ಜನರ ಬಳಿ ಹಣ ಜಾಸ್ತಿಯಾದರೆ ವ್ಯಾಪಾರ ಮಾಡಲು ಮುಗಿಬೀಳುತ್ತಾರೆ. ಆಗ ಮೂವತ್ತು, ನಲವತ್ತು ಪರ್ಸೆಂಟ್ ಹೆಚ್ಚಿನ ಲಾಭ ಇಟ್ಟುಕೊಂಡು ವ್ಯಾಪಾರ ಮಾಡಿದರೆ ಶ್ರಮವಿಲ್ಲದೆ ನಮ್ಮ ಘನತೆಯನ್ನೂ ಉಳಿಸಿಕೊಂಡು ದುಡ್ಡನ್ನು ರಾಶಿಹಾಕಬಹುದು...’ ಎಂದು ಅಭಿಪ್ರಾಯಕ್ಕೆ ಬಂದರು. ಆದರೆ ಇದೇ ಸಮಯದಲ್ಲಿ ಕೆಲಸಗಾರರು, ಕಾರ್ಮಿಕರು, ಹಮಾಲಿಗಳು, ಡ್ರೈವರ್ಗಳು ತಾವೂ ಒಂದು ಗುಪ್ತ ಸಭೆಯನ್ನು ನಡೆಸಿ ‘ಇಷ್ಟು ವರ್ಷ ಯಜಮಾನರುಗಳು ನಮ್ಮನ್ನು ಶೋಷಣೆ ಮಾಡಿದ್ದಾರೆ. ಕಷ್ಟಪಟ್ಟು ಹಗಲು ರಾತ್ರಿಗಳು ಎನ್ನದೆ ದುಡಿಯುವುದು ನಾವಾದರೆ, ನಾಯಿಗಳಿಗೆ ಹಾಕುವಂತೆ ನಮಗೊಂದಿಷ್ಟನ್ನು ಬಿಸಾಕಿ ಸಂಪೂರ್ಣವಾಗಿ ಗಳಿಕೆಯನ್ನು ಮಜಾ ಮಾಡುತ್ತಿರುವುದು ಅವರು. ನಮ್ಮ ಬೆವರಿಗೆ ಬೆಲೆಯೇ ಇಲ್ಲದಂತಾಗಿತ್ತು.

ಕೂಡಲೇ ನಾವೆಲ್ಲ ಕೆಲಸವನ್ನು ನಿಲ್ಲಿಸಿ ಪಕ್ಷಿಯ ಹತ್ತಿರ ಹೋಗೋಣ...’ ಎಂದು ತೀರ್ಮಾನವನ್ನು ತೆಗೆದುಕೊಂಡು ಪಕ್ಷಿಯ ಕಡೆ ಹೊರಟರು. ಅವರೊಂದಿಗೆ ಸಣ್ಣ ಪುಟ್ಟ ಕೈಗಾರಿಕೋದ್ಯಮಿಗಳು, ಫುಟ್ಪಾತ್ ವ್ಯಾಪಾರಿಗಳು ಜೊತೆಗೂಡಿದರು. ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಮಾಡುವವರು ಕೂಡ ‘ಹಗಲು ರಾತ್ರಿ ಕಂಪ್ಯೂಟರ್ಗಳ ಮುಂದೆ ಕುಳಿತು ಕೆಲಸ ಮಾಡಿ ತಲೆ ಕೆಟ್ಟು ಹೋಗಿದೆ. ಹೆಂಡತಿ ಮಕ್ಕಳೊಂದಿಗೆ ಮಾತನಾಡಲೂ ಆಗದಂತಹ ಸ್ಥಿತಿಯಲ್ಲಿದ್ದೇವೆ. ಹಣದ ಹಕ್ಕಿಯ ಹತ್ತಿರ ಹೋಗಿ ನೋಟುಗಳನ್ನು ಕಿತ್ತುಕೊಂಡು ಬಂದರೆ ಒಂದೆರಡು ವರ್ಷಗಳಾದರೂ ಆರಾಮವಾಗಿ ಹೆಂಡತಿ ಮಕ್ಕಳೊಂದಿಗೆ ತಿರುಗಾಡಿಕೊಂಡು ಇರಬಹುದು’ ಎಂದು ಕಂಪ್ಯೂಟರ್ಗಳನ್ನು ಷಟ್ ಡೌನ್ ಮಾಡಿ ಹೊರಟರು.

ಪಕ್ಷಿಯನ್ನು ನೋಡಿ ಕಾರ್ಮಿಕ ಮುಖಂಡರು ಭಾವುಕರಾದರು. ಕೆಲವು ಕಾರ್ಮಿಕ ನಾಯಕರು ಅದಕ್ಕೆ ‘ಸಮಾನತೆಯ ಹಕ್ಕಿ’ ಎಂದು ಬಿರುದು ಕೊಟ್ಟರು. ಒಬ್ಬ ಕಾರ್ಮಿಕ ಮುಖಂಡನಂತೂ ಕಣ್ಣಲ್ಲಿ ನೀರು ತುಂಬಿಕೊಂಡು– ‘ನನಗನ್ನಿಸುತ್ತದೆ ಈ ಷಕ್ಷಿಗಳು ಕಾರ್ಲ್ ಮಾರ್ಕ್ಸ್ನ ಪುನರ್ ಜನ್ಮದ ಅಣುಗಳಿರಬೇಕು. ಈ ಪಕ್ಷಿಗಳು ನಿಜವಾದ ಸಮಾನತೆಯ ಹೋರಾಟದ ಜಯವನ್ನು ಸಾಧಿಸಿವೆ, ಆದ್ದರಿಂದ ಈ ಪಕ್ಷಿಗಳನ್ನು ನಾನು ಕಾರ್ಲ್ ಮಾರ್ಕ್ಸ್ ಪಕ್ಷಿಗಳೆಂದೇ ಕರೆಯುತ್ತೇನೆ. ಕಮ್ಯುನಿಸಂ ಚಿರಾಯುವಾಗಲಿ...’ ಎಂದು ಭಾವೋದ್ವೇಗದಿಂದ ಕ್ಯಾಮರಾಗಳ ಮುಂದೆ ಹೇಳಿದ್ದ.

ಸಾಹಿತಿ, ಬುದ್ಧಿಜೀವಿ, ಸಮಾಜ ಚಿಂತಕರು ಸಹ ಗುಂಪುಗೂಡಿಕೊಂಡು ಈ ವಿಚಿತ್ರ ಪಕ್ಷಿಯನ್ನು ನೋಡಲು ದೌಡಾಯಿಸಿ ಬಂದರು. ಕೆಲವರು ಗಡ್ಡ ಬಿಟ್ಟಿದ್ದರು. ಕೆಲವರು ಜುಬ್ಬಾ ಪಾಯಿಜಾಮಗಳಲ್ಲಿದ್ದರು. ಕೆಲವರು ಸಿಗರೇಟು ಸೇದುತ್ತಿದ್ದರು. ಕೆಲವರು ಗಲ್ಲಗಳ ಹತ್ತಿರ ಬೆರಳಿಟ್ಟುಕೊಂಡು ಚಿಂತನೆಯಲ್ಲಿ ತೊಡಗಿದವರಂತೆ ಪಕ್ಷಿಯ ಕಡೆ ನೋಡುತ್ತಿದ್ದರು.

ಕೆಲವರು ಅಲ್ಲೇ ಆಶು ಕವಿತೆಗಳನ್ನು ಹಣದ ಹಕ್ಕಿಯ ಮೇಲೆ ಬರೆದರು. ಕಥೆಗಾರರು, ಕಾದಂಬರಿಕಾರರು ಈ ಪಕ್ಷಿಯ ಮೇಲೆ ವಿಶಿಷ್ಟವಾದ ಕಥೆ ಕಾದಂಬರಿಗಳನ್ನು ಬರೆದು ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಮುಂತಾದ ಪ್ರಶಸ್ತಿಗಳನ್ನು ಪಡೆದೇ ತೀರಬೇಕೆಂದು ನಿರ್ಧರಿಸಿ ಮನಸ್ಸುಗಳಲ್ಲೆ ಸ್ಕೆಚ್ಗಳನ್ನು ಹಾಕತೊಡಗಿದರು. ನಂತರ ಎಲ್ಲರೂ ತೀರ್ಮಾನಕ್ಕೆ ಬಂದು ಪಕ್ಷಿಯ ಮೈಗೆ ಕೈ ಹಾಕಿ ನೋಟುಗಳನ್ನು ಕೀಳಲಾರಂಭಿಸಿದರು.

ಸಹಿಷ್ಣುತೆಯ ಮತ್ತು ಅಸಹಿಷ್ಣುತೆಯ ಪರ ಮತ್ತು ವಿರೋಧವಾಗಿದ್ದವರೆಲ್ಲರೂ ಒಕ್ಕೊರಲಿನಿಂದ ಹಣದ ಹಕ್ಕಿಯನ್ನು ‘ಸಹಿಷ್ಣುತೆಯ ಪಕ್ಷಿ’ ಎಂದು ಒಪ್ಪಿಕೊಂಡು, ಹಿಂದಿನ ಮನಸ್ತಾಪಗಳನ್ನು ಮರೆತು ಒಬ್ಬರಿಗೊಬ್ಬರು ಕೈಕುಲುಕಿದರು. ತಬ್ಬಿಕೊಂಡು, ನಗಾಡಿದರು. ಹೀಗೆ ಮಾಡುತ್ತಲೇ ತಮ್ಮ ತಮ್ಮ ಶಕ್ತಾನುಸಾರ ನೋಟುಗಳನ್ನು ತರಚಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಚಿತ್ರರಂಗದವರೂ ಬಂದರು.

ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಾರ್ಮಿಕರು ಎಲ್ಲರೂ ಒಟ್ಟಿಗೆ ಬಂದಿದ್ದರು. ಈ ಪಕ್ಷಿಯ ಬಗ್ಗೆ ದೊಡ್ಡ ಬಜೆಟ್ನ ಸಿನಿಮಾಗಳನ್ನು ತಯಾರಿಸಲು ಟೈಟಲ್ಗಳಿಗಾಗಿ ಹುಡುಕಾಟ ನಡೆಸತೊಡಗಿದ್ದರು. ‘ವಜ್ರದ ಹಕ್ಕಿ’, ‘ಕರೆನ್ಸಿ ಕವಚ’, ‘ಹೊನ್ನಿನ ರಾಶಿ’, ‘ದುಡ್ಡಿನ ತುಪ್ಪಟ’ ಮುಂತಾದ ಶೀರ್ಷಿಕೆಗಳನ್ನು ತಮ್ಮ ಸೆಲ್ ಫೋನುಗಳಲ್ಲಿ ಬರೆದುಕೊಳ್ಳತೊಡಗಿದರು. ಪಕ್ಷಿಗಳ ಜೊತೆ ನಾಯಕಿಯಾಗಿ ನಟಿಸಲು ಸಿದ್ದ ಎಂದು ಅನೇಕ ಸುಪ್ರಸಿದ್ದ ನಟಿಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ, ಗೌರ್ಮೆಂಟ್ ಆಸ್ಪತ್ರೆಗಳಲ್ಲಿ ವಿವಿಧ ರೋಗರುಜಿನಗಳಿಂದ ನರಳುತ್ತಿದ್ದ ಲಕ್ಷಾಂತರ ರೋಗಿಗಳು ಟೀವಿಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿ ನೋಡಿ, ಕೇಳಿ ನವ ಉಲ್ಲಾಸದಿಂದ ತಮ್ಮ ತಮ್ಮ ನೋವು, ನರಳಾಟಗಳನ್ನು ಮರೆತು ಹಕ್ಕಿಯ ಕಡೆ ಓಡತೊಡಗಿದರು. ಇಂಥ ಒಂದು ಬೆರಗನ್ನು ನೋಡಿ ಡಾಕ್ಟರುಗಳು, ನರ್ಸ್ಗಳು, ನರ್ಸಿಂಗ್ ಹೋಂಗಳ ಓನರ್ಗಳು, ಆಸ್ಪತ್ರೆ – ನರ್ಸಿಂಗ್ ಹೋಂಗಳ ಬಾಗಿಲುಗಳನ್ನು ಮುಚ್ಚಿ ತಾವೂ ಹಕ್ಕಿಯ ಕಡೆ ಓಡತೊಡಗಿದರು.

‘ಎಂತೆಂಥ ಘನ ರೋಗದಿಂದ ನರಳುತ್ತಿದ್ದ ರೋಗಿಗಳು ಕೂಡ ಈ ರೀತಿ ಮಾಯೆಗೊಳಗಾದವರಂತೆ ಖುಷಿ ಖುಷಿಯಿಂದ ನಡೆದು ಹೋಗುತ್ತಿರುವುದು ಪ್ರಪಂಚದ ಅದ್ಭುತಗಳಲ್ಲಿ ಒಂದು’ ಎಂದು ತಜ್ಞ ಡಾಕ್ಟರುಗಳು ಬೆಕ್ಕಸ ಬೆರಗಾಗಿ ತಮ್ಮ ತಮ್ಮ ಮೂತಿಗಳ ಮೇಲೆ ಬೆರಳುಗಳನ್ನಿಟ್ಟುಕೊಂಡರು. ಇದೇ ರೀತಿ ಕೋರ್ಟುಗಳಲ್ಲಿ, ಜೈಲುಗಳಲ್ಲಿ ಸುದ್ದಿ ಕೇಳಿ ಒಂದು ರೀತಿಯ ಅಲ್ಲೋಲ ಕಲ್ಲೋಲ ಉಂಟಾಯಿತು. ಲಾಯರ್ಗಳು, ಕಕ್ಷಿದಾರರು, ಜೈಲುವಾರ್ಡನ್ಗಳು, ಪೊಲೀಸರು ತಮ್ಮ ತಮ್ಮ ಕರ್ತವ್ಯಗಳನ್ನು ಮರೆತು ತಾವೂ ಕೈಲಾದಷ್ಟು ಹಣ ಸಂಗ್ರಹಿಸಲು ಹಣದ ಹಕ್ಕಿಗಳ ಕಡೆ ನಡೆಯತೊಡಗಿದರು. ಕೈದಿಗಳು ಕೇಕೆ ಹಾಕಿಕೊಂಡು ‘ನಾವು ಇನ್ನು ಮೇಲೆ ಅಪರಾಧಗಳನ್ನೇ ಮಾಡುವುದಿಲ್ಲ’ ಎಂದು ಪ್ರತಿಜ್ಞೆಯನ್ನು ಮಾಡಿ ಹಣದ ಹಕ್ಕಿಗಳ ಕಡೆ ಜೋರಾಗಿ ನಡೆಯತೊಡಗಿದರು. ಈ ವಿದ್ಯಮಾನಗಳಿಂದ ವಿಚಲಿತರಾದ ನ್ಯಾಯಾಧೀಶರು ಸಹ ಹಣದ ಹಕ್ಕಿಯ ಕಡೆ ನಡೆಯತೊಡಗಿದರು. ಕಳ್ಳ, ದರೋಡೆಕೋರರು, ನ್ಯಾಯಾಧೀಶರನ್ನು ಹಿಂಬಾಲಿಸಿದ್ದರು. ವೇಶ್ಯೆಯರು ಕೂಡಾ ಮಾಧ್ಯಮಗಳಿಂದ ಆ ಕಡೆ ಮುಖ ಮಾಡಿದರು.

‘ಜಾತಿ, ಮತ, ವರ್ಗಗಳೆಂಬ ಭೇದ ಭಾವಗಳಿಲ್ಲದೆ ಎಲ್ಲರಿಗೂ ಸಮಾನವಾಗಿ ಸಂಪತ್ತನ್ನು ನೀಡುತ್ತಿರುವ ಈ ಹಕ್ಕಿಗಳು ನಿಜವಾದ ಅರ್ಥದಲ್ಲಿ ನ್ಯಾಯ ದೇವತೆಗಳೇ ಸರಿ...’ ಎಂದು ಎಲ್ಲಾ ನ್ಯಾಯವಾದಿಗಳು, ನ್ಯಾಯಾಧೀಶರು ತಾವು ಮಂಡಿಸಿದ ವಾದಗಳನ್ನು, ನೀಡಿದ ತೀರ್ಪುಗಳನ್ನು ಸ್ವವಿಮರ್ಶೆ ಮಾಡಿಕೊಳ್ಳತೊಡಗಿದರು. ಪಕ್ಷಿಗೆ ಒಕ್ಕೊರಲಿನಿಂದ ‘ನ್ಯಾಯ ದೇವತೆ’ ಎಂಬ ಬಿರುದನ್ನೂ ಕೊಟ್ಟು ನೋಟುಗಳನ್ನು ಕಿತ್ತುಕೊಳ್ಳಲು ಮುಂದಾಗಿದ್ದರು.

‘ಬದುಕಿಗಾಗಿ ಇಷ್ಟೆಲ್ಲಾ ವರ್ಷ ನಮ್ಮ ದೇಹಗಳನ್ನು, ಮಾನ – ಮರ್ಯಾದೆಗಳನ್ನು ಮಾರಿಕೊಂಡಿದ್ದೆವು. ಕಾಮುಕರು ನೀಡುತ್ತಿದ್ದ ಹಿಂಸೆಗಳನ್ನು ಸಹಿಸಿಕೊಳ್ಳುತ್ತಿದ್ದೆವು. ಇನ್ನು ಮೇಲೆ ನಾವೂ ಕೂಡ ಸಮಾಜದಲ್ಲಿ ಮಾನವಂತರಂತೆ ಬದುಕುತ್ತೇವೆ. ಇಂಥ ಬದಲಾವಣೆಗೆ ಕಾರಣವಾದ ಹಣದ ಹಕ್ಕಿಗೆ ನಾವು ಜನ್ಮಜನ್ಮಾಂತರಗಳಲ್ಲೂ ಋಣಿಯಾಗಿರತ್ತೇವೆ...’ ಎಂದು ವೇಶ್ಯೆಯರು ಮಾತನಾಡಿಕೊಂಡು ಕಣ್ಣುಗಳಲ್ಲಿ ನೀರು ಹಾಕಿಕೊಂಡಿದ್ದರು. ಅವರಲ್ಲಿ ಅತ್ಯಂತ ಹಿರಿಯ ವೇಶ್ಯೆಯರು ‘ದುಡ್ಡಿನ ದೇವತೆ ಉಘೇ ಉಘೇ...’ ಎಂದು ಹರ್ಷೋದ್ಗಾರ ಮಾಡಿದ್ದರು.

ಎಲ್ಲರೂ ಖುಷಿಯಿಂದ ಪಕ್ಷಿಯ ಗರಿಗಳನ್ನು ಕೀಳತೊಡಗಿದರು. ‘ನಾವು ಕೂಡ ಬದುಕಿಗಾಗಿಯೇ ಕಳ್ಳತನ ಮಾಡುತ್ತಿದ್ದದ್ದು. ನಮ್ಮ ಅಸಹಾಯಕತೆಯನ್ನು ಇದುವರೆವಿಗೂ ಯಾರೂ ಅರ್ಥ ಮಾಡಿಕೊಂಡಿರಲಿಲ್ಲ. ಇಂದು ನಮಗಾಗಿಯೇ ಈ ಪಕ್ಷಿ ಆಕಾಶದಿಂದ ಹಾರಿ ಬಂದಿದೆಯೇನೋ ಅನ್ನಿಸುತ್ತಿದೆ...’ ಎಂದು ಕಳ್ಳರು, ದೊಡ್ಡ ದೊಡ್ಡ ದರೋಡೆಕೋರರು, ದಗಾಕೋರರು ಅತ್ಯಂತ ಮುತುವರ್ಜಿಯಿಂದ ಹಣದ ಹಕ್ಕಿಯನ್ನು ಮುಟ್ಟಿ, ಅದರ ಗರಿಗಳಾದ ನೋಟುಗಳನ್ನು ಕಿತ್ತುಕೊಂಡು ಪಾವನರಾದರು. ಚಾನೆಲ್ಗಳಲ್ಲಿ ಇಂಥ ಅಪೂರ್ವ ದೃಶ್ಯಗಳನ್ನು ಕಣ್ಣ ತುಂಬಿಕೊಳ್ಳುತ್ತಿದ್ದ ದೇಶದ ಪ್ರಸಿದ್ಧ ವಿಜ್ಞಾನಿಗಳು, ಇತಿಹಾಸಕಾರರು, ಸಮಾಜ ಶಾಸ್ತ್ರಜ್ಞರು, ತತ್ವಜ್ಞಾನಿಗಳು, ಭವಿಷ್ಯಕಾರರು, ಸಾಮಾಜಿಕ ಕಾರ್ಯಕರ್ತರು, ದಾನಿಗಳು ಮುಂತಾದವರು ‘What a Eecular Bird...!’ ಎಂದು ಉದ್ಗಾರ ಹೊರಡಿಸಿದ್ದರು.

ಇಷ್ಟೆಲ್ಲಾ ಗವುಜು ಗದ್ದಲ ಉಂಟಾದ ಮೇಲೆ ರಾಜಕಾರಣಿಗಳು ಕೂಡಾ ಎಚ್ಚರಗೊಂಡಿದ್ದರು. ಹಣದ ಹಕ್ಕಿಯ ಬಳಿ ಹೋದರೆ ತಮ್ಮ ಘನತೆಗೆ ಎಲ್ಲಿ ಭಂಗ ಬರುತ್ತದೋ ಎಂದು ಅಲ್ಲಿಗೆ ಇದುವರೆವಿಗೂ ಎಡತಾಕಿರಲಿಲ್ಲ. ಇಡೀ ಪ್ರಜಾಸಮೂಹವೇ ಸಾಮೂಹಿಕ ಸನ್ನಿಗೆ ಒಳಗಾದಂತೆ ಹಣದ ಹಕ್ಕಿಯ ಆಶ್ರಯ ಪಡೆಯಲು ಹೋಗುತ್ತಿರಬೇಕಾದರೆ, ಅವರ ಓಟುಗಳನ್ನೆ ನಂಬಿ ರಾಜಕೀಯ ಮಾಡುತ್ತಿರುವ ತಾವು ಕೂಡ ಅಲ್ಲಿಗೆ ಹೋಗದಿದ್ದರೆ,. ಸಮಾಜದಲ್ಲಿ wrong message ಹೋಗುವುದೆಂದು ಯಾರೋ ಪೊಲಿಟಿಕಲ್ ಎಕ್ಸ್ಪರ್ಟ್ ಹೇಳಿದ ಕೂಡಲೇ ಎಲ್ಲಾ ಹಂತದ ರಾಜಕಾರಣಿಗಳೂ ಹಕ್ಕಿಯ ಕಡೆ ಹೊರಟೇ ಬಿಟ್ಟರು. ಹೋದವರು ಇರಲಿ ಎಂದು ತಾವೂ ಹಕ್ಕಿಯ ಮೈಗೆ ಕೈ ಹಾಕಿದರು. ಈ ಹಕ್ಕಿಯಿಂದಾಗಿ ಬಡವ ಬಲ್ಲಿದರೆಲ್ಲರೂ ಸಮಾನರಾದರೆ ತಮ್ಮ ಮಾತನ್ನು ಕೇಳುವವರ್ಯಾರು ಎಂಬ ಚಿಂತೆ ಮತ್ತು ಸಂಶಯ ರಾಜಕಾರಣಿಗಳನ್ನು ಥಟ್ಟನೆ ಕಾಡಲು ಪ್ರಾರಂಭಿಸಿತು.

ಹಣದ ಹಕ್ಕಿಯ ವಿಷಯದಲ್ಲಿ ಅರ್ಥಶಾಸ್ತ್ರಜ್ಞರಲ್ಲಿ ಭಿನ್ನಾಭಿಪ್ರಾಯಗಳು ಉಂಟಾದವು. ಬಹುತೇಕ ಅರ್ಥಶಾಸ್ತ್ರಜ್ಞರು ಹಣದ ಹಕ್ಕಿಯನ್ನು ಬೆಂಬಲಿಸಿದರು. ಹಣದ ಹಕ್ಕಿಯ ದೆಶೆಯಿಂದಾಗಿ ರಾಷ್ಟ್ರದ ಜನರ ತಲಾ ವರಮಾನ ಹೆಚ್ಚಾಗುತ್ತದೆ. ದೇಶದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಿ ಆ ಮೂಲಕ ಉತ್ಪಾದನೆ ಅಧಿಕವಾಗಿ ಆ ಮೂಲಕ ರಫ್ತು ವಹಿವಾಟು ಹೆಚ್ಚಿ ವಿದೇಶ ವಿನಿಮಯ ಹೆಚ್ಚಾಗುತ್ತದೆ.

ದೇಶದ ವಿದೇಶಿ ಸಾಲವನ್ನು ತೀರಿಸಿ ನಾವೇ ಬೇರೆ ದೇಶಗಳಿಗೆ ಸಾಲವನ್ನು ನೀಡಬಹುದಲ್ಲದೆ, ವಿಶ್ವಬ್ಯಾಂಕ್ನ ಸಾಲವನ್ನು ತೀರಿಸಿ, ಅಲ್ಲಿ ಅತ್ಯಧಿಕ ಠೇವಣಿಯನ್ನು ಇಡುವ ಮೂಲಕ ಅಮೆರಿಕಾ, ಚೀನಾ, ಇಂಗ್ಲೆಂಡ್ ಮುಂತಾದ ರಾಷ್ಟ್ರಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕತೆಯಲ್ಲಿ ಪ್ರಬಲ ಪೈಪೋಟಿಯನ್ನು ನೀಡಬಹುದು. ಆಗ ಶತ್ರು ರಾಷ್ಟ್ರಗಳಿಗೂ ನಮ್ಮನ್ನು ಕಂಡರೆ ಭಯ ಹುಟ್ಟುತ್ತದೆ... ಮುಂತಾಗಿ ವಾದಗಳನ್ನು ಮಂಡಿಸಿದರು.

ಇನ್ನೂ ಕೆಲವು ಅರ್ಥಶಾಸ್ತ್ರಜ್ಞರು ದೇಶದಲ್ಲಿ ವಿಪರೀತ ಹಣದ ಚಲಾವಣೆ ಉಂಟಾಗಿ ಆರ್ಥಿಕ ಅಸ್ಥಿರತೆ ಉಂಟಾಗುತ್ತದೆಂದು ಹೇಳಿದರು. ಕಡೆಗೆ ಪರ, ವಿರೋಧ ವಾದಗಳಲ್ಲಿ ತೊಡಗಿದ್ದ ಎಲ್ಲಾ ಅರ್ಥಶಾಸ್ತ್ರಜ್ಞರು ಒಟ್ಟಾಗಿ ಹಣದ ಹಕ್ಕಿಗಳನ್ನು ಪರೀಕ್ಷಿಸುವ ಸಲುವಾಗಿ ಹೊರಟರು. ಅಲ್ಲಿಗೆ ಹೋದ ಮೇಲೆ ವಾದಗಳನ್ನೇ ಮರೆತು ಹಣದ ಹಕ್ಕಿಯ ರೂಪ ಮತ್ತು ಕೌಶಲ್ಯಕ್ಕೆ ಇನ್ನಿಲ್ಲದಂತೆ ಮರುಳಾಗಿ ಹಕ್ಕಿಯನ್ನು ಅಪ್ಪಿ ತಮತಮಗೆ ಕೈಲಾದಷ್ಟು ನೋಟುಗಳನ್ನು ಕೋಟು, ಪ್ಯಾಂಟುಗಳಲ್ಲಿ ತುಂಬಿಸಿಕೊಳ್ಳಲಾರಂಬಿಸಿದರು. ದರಿದ್ರವೆಂಬ ಪಿಶಾಚಿ ಇನ್ನು ದೇಶದಿಂದ ತೊಲಗಿ ಬಿಡುತ್ತದೆಂದು ಅನೇಕ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದರಲ್ಲದೆ, ಹಣದ ಹಕ್ಕಿಗಳಿಗೆ ‘Birds of Paradise’, ‘Birds of bright Economy’ ಎಂಬ ಬಿರುದುಗಳನ್ನು ದಯಪಾಲಿಸಿದ್ದರು. ಅಷ್ಟರಲ್ಲಿ ಕೆಲವು ನ್ಯಾಯಪರ ಸಂಘಟನೆಗಳವರು, ಮಹಿಳಾ ಸಂಘಟನೆಗಳವರು ‘ಹಣದ ಹಕ್ಕಿಗಳಲ್ಲಿ ಮೀಸಲಾತಿಯನ್ನು ಇಡಬೇಕು.

ಶತಶತಮಾನಗಳಿಂದಲೂ ನಮಗೆ ಅನ್ಯಾಯವಾಗಿದೆ...’ ಎಂದು ಬೋರ್ಡುಗಳನ್ನು ಹಿಡಿದು ಕೂಗಲಾರಂಭಿಸಿದರು. ಆಗ ಹಿರಿಯ ಅಧಿಕಾರಿಯೊಬ್ಬರು ‘ರೀ ಎಂಥ ದಡ್ಡರು ನೀವು, ಹಣದ ಹಕ್ಕಿಗಳು ಸರ್ಕಾರಕ್ಕೆ ಸೇರಿದವುಗಳಲ್ಲ. ಇಷ್ಟಕ್ಕೂ ನೋಟುಗಳನ್ನು ಕಿತ್ತುಕೊಳ್ಳಲು ಯಾವ ನಿಬಂಧನೆಗಳೂ ಇಲ್ಲ. ಹೋರಾಟ ಬಿಟ್ಟು ಹಕ್ಕಿಗಳು ಹಾರಿ ಹೋಗುವ ಮೊದಲು ನಿಮ್ಮ ಶಕ್ತಾನುಸಾರ ಸಂಗ್ರಹಿಸಿಕೊಳ್ಳಿ...’ ಎಂದು ಬುದ್ಧಿವಾದ ಹೇಳಿದ್ದರು. ಕೈಲಿದ್ದ ಬೋರ್ಡುಗಳನ್ನು ಬಿಸಾಕಿ ಸಂಘಟನೆಗಳವರು ಹಕ್ಕಿಗಳ ಕಡೆ ಓಡಿ ಹೋಗಿದ್ದರು.

ಈ ಮಧ್ಯೆ ಯಾರೋ ಒಬ್ಬರು ಹಣದ ಪಕ್ಷಿಯ ಋಣ ತೀರಿಸಲೆಂದು ತಿನ್ನಲು ಆಹಾರವನ್ನು ಕೊಟ್ಟಿದ್ದರು. ಅದು ಬ್ರೇಕಿಂಗ್ ನ್ಯೂಸ್ ಆಗಿ ಪ್ರತಿಯೊಬ್ಬರು ಕೂಡ ಪೈಪೋಟಿಗೆ ಬಿದ್ದವರಂತೆ ತಮ್ಮಲ್ಲಿದ್ದ ದವಸ, ಧಾನ್ಯ, ಹಣ್ಣು ಹಂಪಲು, ಆಹಾರ ಪದಾರ್ಥಗಳನ್ನು ಹಣದ ಹಕ್ಕಿಗಳಿಗೆ ಬಡಿಸತೊಡಗಿದರು. ಪ್ರತಿ ಊರಿನ, ಪಟ್ಟಣದ, ನಗರದ ಬಡಾವಣೆಯ ಜನರು ತಮ್ಮ ತಮ್ಮ ಹಣದ ಪಕ್ಷಿಗಳಿಗೆ ಆಹಾರವನ್ನು ಸಮರ್ಪಿಸ ತೊಡಗಿದರು. ಹಣದ ಹಕ್ಕಿಗಳು ತಮ್ಮ ಚಿಕ್ಕ ಚಿಕ್ಕ ಕೊಕ್ಕುಗಳ ಮೂಲಕ ರಾಶಿ ರಾಶಿ ಆಹಾರ ಪದಾರ್ಥಗಳನ್ನು ಹಸಿದ ಯಂತ್ರಗಳಂತೆ ಕ್ಷಣಾರ್ಧದಲ್ಲಿ ತಿಂದು ಮುಗಿಸುತ್ತಿದ್ದವು. ಚಾನೆಲ್ಗಳು ಬಿತ್ತರಿಸುತ್ತಿದ್ದ ಕ್ಲೋಸ್ ಅಪ್ ದೃಶ್ಯಗಳಲ್ಲಿ ಹಣದ ಹಕ್ಕಿಗಳು ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದ ರೀತಿ ನದಿಯ ನೀರು ಜಲಪಾತಗಳಲ್ಲಿ ರಭಸವಾಗಿ ಧುಮುಕುತ್ತಿರುವಂತೆ ರುದ್ರರಮಣೀಯವಾಗಿ ಕಾಡುತ್ತಿತ್ತು.

ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನ ಮಂತ್ರಿಗಳು, ವಿದೇಶಾಂಗ ಸಚಿವರು ರಾಜಧಾನಿಗೆ ಹಿಂತಿರುಗಿದ್ದರು. ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಅವರು ಆತಂಕಗೊಂಡಿದ್ದರು. ಮೊದಲು ಹಣಕಾಸು ಸಚಿವರ ಜೊತೆ ಮಾತನಾಡಿ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳನ್ನು ರಾಜಧಾನಿಗೆ ಕರೆಸಿಕೊಂಡಿದ್ದರು.

ಕೇಂದ್ರ ಸರ್ಕಾರದ ಎಲ್ಲಾ ಮಂತ್ರಿಗಳು, ಉನ್ನತಾಧಿಕಾರಿಗಳು, ಭದ್ರತಾಧಿಕಾರಿಗಳು, ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಮುಖಗಳಲ್ಲೂ ದಟ್ಟವಾದ ಗೊಂದಲ ಮನೆ ಮಾಡಿತ್ತು. ಈ ವೇಳೆಗಾಗಲೇ ದೇಶದ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು, ಸಾಫ್ಟ್ವೇರ್ ಕಂಪೆನಿಗಳ ಮಾಲಿಕರು, ರಿಯಲ್ ಎಸ್ಟೇಟ್ ಕುಳಗಳು, ಭೂಗತ ಡಾನ್ಗಳು, ಫೈನಾನ್ಸ್ ಕಂಪೆನಿಗಳವರು ವಿಪರೀತವಾಗಿ ಅಸಹನೆಗೊಂಡಿದ್ದರಲ್ಲದೆ ಹಣದ ಹಕ್ಕಿಗಳು ನಿರ್ಮಿಸಿರುವ ವಾತಾವರಣದ ಬಗ್ಗೆ ದೂರುಗಳನ್ನು ನೀಡಿದ್ದರು. ಪ್ರಧಾನ ಮಂತ್ರಿಗಳ ಮನದಲ್ಲಿ ‘ಷಡ್ಯಂತ್ರ’ ಎಂಬ ಪದ ಪ್ರತಿಧ್ವನಿಸತೊಡಗಿತು.

ಹಣದ ಹಕ್ಕಿಗಳನ್ನು ಕೂಡಲೇ ಕೊಲ್ಲಿಸದಿದ್ದರೆ ದೇಶಕ್ಕೆ ದೊಡ್ಡ ಗಂಡಾಂತರ ಒದಗುತ್ತದೆಂದು ಅವರಿಗೆ ನಿಶ್ಚಯವಾಗಿತ್ತು. ದೇಶದ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿರುವ ಬಗ್ಗೆ, ಆಹಾರ ಧಾನ್ಯಗಳ ತೀವ್ರ ಕೊರತೆಯ ಬಗ್ಗೆ, ಪ್ರಾಣಿ ಪಕ್ಷಿಗಳು ಸಾಯುತ್ತಿರುವ ಬಗ್ಗೆ ಇಂಟೆಲಿಜೆನ್ಸ್ ವಿಭಾಗದಿಂದ ಸುದ್ದಿ ಬಂದಿತ್ತು. ರಕ್ಷಣಾ ಮಂತ್ರಿಗಳೊಂದಿಗೆ ಮತ್ತು ಸೇನಾ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಕೂಡಲೇ ಕಾರ್ಯ ತಂತ್ರವೊಂದನ್ನು ರೂಪಿಸಲಾಯಿತು. ದೇಶದ ಎಲ್ಲಾ ಕಡೆ ಏಕಕಾಲದಲ್ಲಿ ಹಣದ ಹಕ್ಕಿಗಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡುವುದು. ಈ ಕಾರ್ಯ ಸೂತ್ರಕ್ಕೆ ‘ಆಪರೇಶನ್ ಮನಿ ಬರ್ಡ್ಸ್’ ಎಂದು ಹೆಸರಿಡಲಾಯಿತು.

ಅದರಂತೆ ಮಿಲಿಟರಿ ಯೋಧರು ಲಕ್ಷಾಂತರ ಸಂಖ್ಯೆಯಲ್ಲಿ ಏಕ ಕಾಲದಲ್ಲಿ ಎಲ್ಲಾ ಕಡೆಯೂ ಹಣದ ಹಕ್ಕಿಗಳ ಮೇಲೆ ಮುತ್ತಿಗೆ ಹಾಕಲು ಹೊರಟರು. ಆಗ ಎಲ್ಲಕ್ಕಿಂತಲೂ ಘನ ಘೋರ ಆಶ್ಚರ್ಯವೊಂದು ನಡೆದು ಹೋಯಿತು. ಎಲ್ಲಾ ಯೋಧರೂ ಹಣದ ಹಕ್ಕಿಗಳ ರೂಪಕ್ಕೆ ಮರುಳಾಗಿ ಶಸ್ತ್ರಾಸ್ತ್ರಗಳನ್ನು ಕೆಳಕ್ಕೆ ಹಾಕಿ ಭಕ್ತಿಯಿಂದ ಅವುಗಳಿಗೆ ಶರಣಾಗಿ ತಾವೂ ಕೂಡ ನೋಟುಗಳೆಂಬ ಅವುಗಳ ಗರಿಗಳನ್ನು ಕಿತ್ತುಕೊಳ್ಳಲು ಕಾರ್ಯೋನ್ಮುಖರಾದರು.

ಒಂದು ಗಂಟೆಯಲ್ಲಿ ಚಾನೆಲ್ಗಳಲ್ಲಿ ಬಿತ್ತರವಾಗುತ್ತಿದ್ದ ದೃಶ್ಯಗಳು ಬದಲಾಗಿದ್ದವು. ಹಣದ ಹಕ್ಕಿಗಳು ಸಂಪೂರ್ಣವಾಗಿ ಅದೃಶ್ಯವಾಗಿದ್ದವು. ಮನೆಗಳು, ರಸ್ತೆಗಳು, ಹೊಲಗದ್ದೆಗಳು, ವಾಹನಗಳು ಹೀಗೆ ಎಲ್ಲಾ ಕಡೆಗಳಲ್ಲೂ ನೋಟಿನ ರಾಶಿಗಳು. ಆ ನೋಟಿನ ರಾಶಿಗಳಲ್ಲಿ ತೆವಳಲು ಕೂಡ ಆಗದ ಸ್ಥಿತಿಯಲ್ಲಿ ಬಿದ್ದಿದ್ದ ಬೆತ್ತಲಾಗಿದ್ದ ನರಜಂತುಗಳು. ಎಲ್ಲೆಲ್ಲಿ ನೋಡಿದರೂ ಭೀಕರ ಮೌನ. ಕಾಡು, ನದಿ, ಬೆಟ್ಟ, ಸಮುದ್ರ, ಹಸಿರು ಎಲ್ಲವನ್ನೂ ನುಂಗಿದ್ದ ನೋಟುಗಳು. ಕಡೆಗೆ ಚಾನೆಲ್ಗೂ ನಿಂತು ಹೋಗಿದ್ದವು. ನಾನು ಕೂಡ ಒಂದು ಬೆತ್ತಲೆ ನರಜಂತುವಾಗಿ ಪಕ್ಕದಲ್ಲಿ ಬಿದ್ದಿದ್ದ ನೋಟಿನ ರಾಶಿಯನ್ನು ತಬ್ಬಿಕೊಳ್ಳಲು ವೃಥಾ ಪ್ರಯತ್ನಿಸುತ್ತಿದ್ದೆ.

ಪ್ರಿಯ ವಾಚಕ ಮಹನೀಯರೇ, ಇಲ್ಲಿಗೆ ಈ ಕನಸನ್ನೋ ಅಥವಾ ಕಥೆಯನ್ನೊ ಮುಗಿಸುತ್ತಿದ್ದೇನೆ. ಕನಸುಗಳಿಗೆ ಅಥವಾ ಕಥೆಗಳಿಗೆ ಅಂಥ ಘನ ಉದ್ದೇಶವೇನೂ ಇರುವುದಿಲ್ಲವೆಂದೇ ನನ್ನ ನಂಬಿಕೆ. ಆ ನಂಬಿಕೆ ನಿಮಗೂ ಸಾಧ್ಯವಾದರೆ ಇರಲಿ ಮತ್ತು ಇಂಥ ನೀರಸವಾದ ಲೇಖನವೊಂದನ್ನು ಬರೆದದ್ದಕ್ಕೆ ನಿಮ್ಮ ಲಕ್ಷ ಲಕ್ಷ ಶಾಪಗಳು ನನ್ನ ಮೇಲಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.