ಬದುಕಿನ ಕೆಲವು ಪುಟ ಹೀಗಿರುತ್ತವಲ್ಲ, ನಮಗೆ ನಾವೂ ಓದಿಕೊಳ್ಳಲಾಗುವುದಿಲ್ಲ. ಈ ಪುಸ್ತಕ ನಾವು ಮಾತ್ರ ಬರೆದುಕೊಂಡದ್ದಲ್ಲ, ಜೊತೆಯಾದವರೆಲ್ಲರೂ ಗೀಚುವವರೇ, ಹೆಸರು ಮಾತ್ರ ನಮ್ಮದೇ. ಹೊಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ, ಹೊರೆಯಾದರೂ. ಬಲ್ಲವರು ಹೇಳುವಂತೆ ಅಳಿಸಲಾಗದ ಲಿಪಿಯನು ಬರೆಯಲಾಗದು, ಬರೆಯಬಾರದು ನಿಜ. ಬದುಕಿನ ಹಾಳೆಯಲ್ಲಿ ಮಾತ್ರ ಬರೆದದ್ದನ್ನು ಅಳಿಸಲಾಗುವುದಿಲ್ಲ. ತಿದ್ದಿ ಬರೆದುಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಹಾಗೆಲ್ಲ ಬರೆದುಕೊಂಡು ಬದುಕಲಾಗುವುದಿಲ್ಲ, ಬದುಕಿದ್ದು ದಾಖಲಾಗುತ್ತಾ ಹೋಗುತ್ತದೆ ಅಷ್ಟೆ. ನಮಗೆ ಬೇಕಿರಲಿ, ಬೇಡದಿರಲಿ. ಹೀಗೂ ಆಗಬಹುದು– ಕೆಲವು ಪುಟ ಕಳೆದು ಹೋಗಿರಬಹುದು, ಇಲ್ಲ ಅಂಟಿಕೊಂಡಿರಬಹುದು. ನೋಡಿಕೊಳ್ಳಲಾಗದೇ ಇರಬಹುದು. ಆದರೆ ನಾನು ತೆರೆಯುತ್ತಿರುವ ಈ ಪುಟ ನನಗೆ ಗೊತ್ತಿದ್ದೂ ತೆರೆದು ಓದಿರಲಿಲ್ಲ.

ಎಷ್ಟೇ ಪ್ರಯತ್ನ ಪಟ್ಟರೂ ತೆರೆಯಲಾಗಿರಲಿಲ್ಲ. ಈ ಪುಟ ಹಸಿ ಚರ್ಮದ ಹಾಳೆಯಲ್ಲಿ ಸೂಜಿಯಿಂದ ಕೆತ್ತಿದ್ದಕ್ಕೋ ಏನೋ ತುಂಬ ಚಿಕ್ಕಂದಿನಿಂದಲೂ ಎಷ್ಟೇ ಪ್ರಯತ್ನಿಸಿದರೂ ಓದಲಾಗಿರಲೇ ಇಲ್ಲ. ಇಲ್ಲಿ ಬರುವ ಕರುಳಬಳ್ಳಿಗಳು ದುಃಖದ ಭಾಷೆಯಲ್ಲಿ ಮಾತನಾಡುತ್ತವೆ. ಹಿಂಸೆ, ಕ್ರೌರ್ಯದ ಬೇಗುದಿಯಲ್ಲಿ ಬೇಯುತ್ತಿದ್ದ ನನಗೆ ಯಾವ ದನಿಗಳೂ ಅರ್ಥವಾಗುತ್ತಿರಲಿಲ್ಲ, ನನ್ನದು ನೋವೆಂದು ನನಗೂ. ಮನುಷ್ಯ ಸಂಬಂಧಗಳು ಯಾರೋ ಸೃಷ್ಟಿಸಿದ ಕಥಾಕಥಿತ ಕ್ರೂರ ಕಾನೂನುಗಳನ್ನು ಅದು ಹೇಗೆ ದಾಟುತ್ತವೆ, ದಾಟಿ ದಾರಿಕಾಣುತ್ತವೆ, ಒಮ್ಮೊಮ್ಮೆ ಏನೇನೂ ತೋಚದೆ ನಿಲ್ಲುತ್ತವೆ, ಹಾದಿ ತಪ್ಪುತ್ತವೆ, ಎಡವುತ್ತವೆ, ಬೀಳುತ್ತವೆ, ಬೀಳಿಸಿಕೊಳ್ಳುತ್ತವೆ, ಮತ್ತೆ ತಾವೇ ಎದ್ದು ಹೇಗೆ ನಿಲ್ಲುತ್ತವೆ ಎನ್ನುವುದರ ಜಿಜ್ಞಾಸೆ ಈ ಕಪ್ಪು ಅಕ್ಷರಗಳ ಕನಸು.

ಜಾತಿಯ ಬೇಲಿ ಸುಟ್ಟ ಅಜ್ಜಿ
ಜವಾರಿ ಗೋಧಿ ಹೊಳಪಿನ ಮುಖ ನಡುಗುವ ಕತ್ತಿನ ಮೇಲೆ ಕೂತಿದ್ದರೂ ಅಜ್ಜಿ ಮಾತುಗಳನ್ನು ಸಿಡಿಸುತ್ತಾಳೆ, ಡೈನಾಮೈಟಿನಂತೆ. ಈಕೆ ನಮ್ಮೂರ ಚೌಡಿಯ ಹತ್ತಿರ ಮಾತನಾಡುತ್ತಿದ್ದರೆ, ದೇಸಾಯರ ಓಣಿಯಲ್ಲಿ ಕೇಳುತ್ತಿತ್ತು. ಕಲಕೇರಿಯ ಬೆಳಗಿನ ತುಂಬ ಈಕೆಯದೇ ನಗಾರಿ ಸದ್ದು. ಅಜ್ಜಿಯೆಂದರೆ ನೆನಪಾಗುವುದು ಹಿಟ್ಟಿನ ಉಪ್ಪಿಟ್ಟು. ಪುಟ್ಟ ಪುಟ್ಟ ಮಕ್ಕಳಿಗೆ ಈ ನನ್ನಜ್ಜಿಯ ದನಿ ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡಿಕೊಂಡಿರಲಿಕ್ಕೆ ಸಾಕು. ಖಡಕ್ಕಾಗಿ ಮಾತನಾಡುತ್ತಿದ್ದ ಅಜ್ಜಿಗೆ ಹೂ ಹೃದಯ. ಆಕೆಯ ಕಠಿಣತೆ, ಕಾಲದ ಕೊಡುಗೆ.

ಹಾಗೆ ನೋಡಿದರೆ ನಾನು ನನ್ನಜ್ಜಿ ಎಂದೂ ಒಂದೇ ಮನೆಯಲ್ಲಿ ಬದುಕಲೇ ಇಲ್ಲ. ಅಪ್ಪ ಮತ್ತು ಆಕೆಯ ನಡುವಿನ ಮುನಿಸು ನಮಗೆ ಅಜ್ಜಿಯ ಜೊತೆ ಇರುವ ಅವಕಾಶ ಕೊಡಲೇ ಇಲ್ಲ. ನಮ್ಮೂರ ಇತಿಹಾಸ ಹಲವು ಗುಟ್ಟುಗಳ ಕಟ್ಟು. ಊರ ಬಸ್ಟ್ಯಾಂಡಿನಲ್ಲಿ ಚಹಾದಂಗಡಿ ನಡೆಸುತ್ತಿದ್ದ ಅಜ್ಜಿ ಯಾರಿಗೂ ಅಂಜದೆ ಮಟ್ಕಾ ಆಡುತ್ತಿದ್ದ ಗಟ್ಟಿಗಿತ್ತಿಯಂತೆ. ನಮಗೆ ಯಾರಿಗೂ ಅಜ್ಜನ ನೆನಪಿಲ್ಲ. ಇಂದಿಗೂ ಆತನ ಚಹರೆಯೇ ನನಗೆ ಗೊತ್ತಿಲ್ಲ, ನೋಡಿಕೊಳ್ಳಲು ಒಂದು ಫೋಟೊ ಕೂಡ ಸಿಕ್ಕಿಲ್ಲ. ಅಪ್ಪನಿಗೆ ಬದುಕಿನ ಕಲ್ಪನೆ ಬರುವ ಮೊದಲೇ ಅಜ್ಜ ಕಾಲದಲ್ಲಿ ಮುಳುಗಿ ಹೋಗಿದ್ದ, ಹಾಗಾಗಿಯೇ ಯಾವುದಕ್ಕೂ ಹತೋಟಿಯಿಲ್ಲ. ಸರಿತಪ್ಪುಗಳು ಈ ಜಗತ್ತಿನಲ್ಲಿ ಹುಟ್ಟೇ ಇಲ್ಲವೇನೊ ಎಂಬಂತೆ ಬದುಕಿಬಿಟ್ಟವನು ಅಪ್ಪ. ಅಜ್ಜನ ಗೈರು ಕೂಡ ಇದಕ್ಕೆ ಕಾರಣವೇನೊ ಗೊತ್ತಿಲ್ಲ.

ನನ್ನಪ್ಪನ ಊರು ಯಾವಾಗಲೂ ನನಗೆ ಅಪರಿಚಿತವೇ. ಈ ಊರಿಗೆ ಬಂದು ಎರಡು ದಶಕಗಳಾದರೂ ಎಂದೂ ನನಗೆ ಸ್ವಂತ ಊರು ಎಂದೆನಿಸಲೇ ಇಲ್ಲ. ತಾಯಿಯ ತವರು ತೊಡೆಯ ತೊಟ್ಟಿಲಲ್ಲಿ ಬೆಚ್ಚಗಿರಿಸಿಕೊಂಡು ಲಾಲಿ ಹಾಡಿದ್ದಕ್ಕೊ, ಈ ಊರು ಸಣ್ಣ ಹುಡುಗರನ್ನೂ ಜಾತಿ ಅಂತಸ್ತಿನ ಅಳತೆಗೋಲಿನಿಂದ ತಿವಿದದ್ದಕ್ಕೋ ನನಗೆ ಸ್ಪಷ್ಟವಿಲ್ಲ. ಬಣ್ಣದ ಗೋಲಿಗಳನ್ನು ಗೆಲ್ಲಲೇಬೇಕೆಂಬ ಹಟದಲ್ಲಿ ಅಪ್ಪನ ಕಣ್ಣು ತಪ್ಪಿಸಿ ಆ ಅಂಗಳದಲ್ಲಿ ಗುರಿನೆಟ್ಟು ನಾನು ಗುಂಡು ಹೊಡೆಯುತ್ತಿದ್ದರೆ, ನಮ್ಮೂರಿನ ಮಾಜಿ ಚೇರ್ಮನ್ನರು– ‘ಲೇ ಅಯ್ಯನಾರ ಬಾರಲೇ ಇಲ್ಲಿ. ಹೋಗಿ ಚಾರ್ಮಿನಾರ್ ಸಿಗರೇಟ್ ತಗೊಂಡು ಬಾ’ ಎಂದು ಗದರಿಸಿದರೆ ನನಗೆ ಕಳವಳ. ಅಗಸರ ಈರ ಅಂತ ಎಲ್ಲರೂ ಕರೆಯುತ್ತಿದ್ದರು.

ನನಗೂ ಗೊತ್ತಿತ್ತು– ಮಡಿವಾಳಿ, ಕರಿಯ, ಹೆರಚೆಟಿಗಿ, ಸೊಂಡಿ ಭರಮ, ಇವೆಲ್ಲ ನನಗೆ ಆಗದವರು ಅಥವಾ ತೀರಾ ಆಗುವವರು ಕರೆಯುತ್ತಿದ್ದ ಅನ್ವರ್ಥಗಳು. ಆಶ್ಚರ್ಯದ ಕಣ್ಣುಗಳಿಂದ ತದೇಕವಾಗಿ ಇವರು ಕರೆದದ್ದು ನನ್ನನ್ನೋ ಅಥವಾ ಬೇರೆಯವರನ್ನೋ ಎಂಬ ಗೊಂದಲದಲ್ಲಿ ಚೇರ್ಮನ್ನರನ್ನು ದಿಟ್ಟಿಸುತ್ತಿದ್ದರೆ, ‘ನಿನ್ನಲೇ ಅಯ್ನಾರ ಕೇಳಿಸ್ತೋ ಇಲ್ವೋ’ ಎಂದು ಮತ್ತೊಮ್ಮೆ ಬೆದರಿಸಿದಾಗ ಏನೂ ಅರ್ಥವಾಗದವನಂತೆ ಅಂಗಡಿಗೆ ಹೋಗಿ ಸಿಗರೇಟ್ ತಂದು ಕೊಟ್ಟಮೇಲೂ ಮನಸ್ಸಲ್ಲಿ ಆ ‘ಅಯ್ಯನಾರ’ ಎಂಬ ಕೂಗೇ ಅನುರಣಿಸುತ್ತಿತ್ತು. ನಂತರ ಅದು ರೂಢಿಯಾಗಿ ಹೋಯಿತು. ಈ ನನ್ನ ಗೊಂದಲವನ್ನು ಪರಿಹರಿಸಿಕೊಳ್ಳುವ ದಾರಿ ಸುಲಭದ್ದಾಗಿರಲಿಲ್ಲ. ನನಗಂತೂ ಧೈರ್ಯವೇ ಸಾಲಿದ್ದಿಲ್ಲ. ಊರಿನಲ್ಲಿ ಯಾರೂ ನನ್ನನ್ನ ಹೀಗೆ ಕರೆದಿಲ್ಲ. ಈ ಮನುಷ್ಯ ಮಾತ್ರ ಹೀಗೇಕೆ ಕರೆಯುತ್ತಾನೆ– ಇದು ನನಗೆ ಬಗಹರಿಯದ ಒಗಟು. ಚೇರ್ಮನ್ನರು ತೀರಿಕೊಂಡು ಸುಮಾರು ವರ್ಷಗಳ ಮೇಲೂ ನನಗೆ ಉತ್ತರ ಹೊಳೆದೇ ಇರಲಿಲ್ಲ.

‘ಸಾಲಿಮಠ’ ಎಂಬ ಹುಡುಗರು ಇದ್ದಕ್ಕಿದ್ದಂತೆ ನೆನಪಾಗುತ್ತಿದ್ದಾರೆ. ಒಬ್ಬ ನನಗಿಂತ ದೊಡ್ಡವನು, ಮತ್ತೊಬ್ಬ ನನ್ನ ತಮ್ಮನ ಓರಗೆಯವನು. ಇವರಿಗೆ ನನ್ನ ಮೇಲೆ, ನನ್ನ ತಮ್ಮನ ಮೇಲೆ ತುಂಬು ಪ್ರೀತಿ. ಅದು ವಿನಾಕಾರಣ ಎಂದು ನಾನಾಗ ತಿಳಿದಿದ್ದೆ. ಅಪ್ಪ ಕದ್ದು ತರುತ್ತಿದ್ದ ತೆಂಗಿನ ಕಾಯಿಗಳನ್ನು ತಲೆಯ ಮೇಲೆ ಹೊತ್ತು ಅಮವಾಸ್ಯೆಯ ದಿನ ಮಾರಲು ಹೋದಾಗ ನಾನು ಊರಿನ ಕೆಳಗಿನ ಓಣಿಗೂ ಹೋಗಬೇಕಾಗುತ್ತಿತ್ತು. ಅಲ್ಲೊಂದು ಮನೆ, ಅದು ಈ ಸಾಲಿಮಠರದು. ಆ ಅಕ್ಕಂದಿರು ನನ್ನನ್ನು ಕರೆದು ಏನೂ ತಿನ್ನಿಸದೇ ಎಂದೂ ಕಳಿಸಿದ್ದಿಲ್ಲ. ದೊಡ್ಡವರು ಚಿಕ್ಕವರು ಎನ್ನದೆ ನಿರ್ವ್ಯಾಜ ಪ್ರೀತಿಯಿಂದ ಅವರು ನಮ್ಮನ್ನು ನಡೆಸಿಕೊಳ್ಳುತ್ತಿದ್ದರೆ ನನಗೊಂದು ಥರ ಒಳಗೊಳಗೇ ಪುಳಕ. ಅಷ್ಟು ದೂರದ ಆ ಓಣಿಗೆ ನಾನು ಹೋಗುತ್ತಿದ್ದುದೇ ವಿರಳ.

ಪರಿಚಯದವರು ತೋರಿಸುವ ಪ್ರೀತಿಗಿಂತ ಅವರು ಕೊಡುತ್ತಿದ್ದ ಅಕ್ಕರೆ ಅದಮ್ಯವಾಗಿರುತ್ತಿತ್ತು. ಅಪ್ಪನ ರಜೆಗೋಸ್ಕರ ಯಾರು ಯಾರೋ ಚೀಪಿ ಎಸೆದ ಮಾವಿನ ವಾಟೆಗಳನ್ನ ನಾನು ಬಾಚಿ ಬಾಚಿ ಆಯುತ್ತಿದ್ದಾಗ ಮಾತ್ರ ಆ ಕಡೆ ತಿರುಗಿಯೂ ನೋಡದೆ ಓಡಿ ಹೋಗುತ್ತಿದ್ದೆ. ಆಗೆಲ್ಲ ಅವರ ಅಸಹಾಯಕ ಮತ್ತು ನಿರ್ಲಕ್ಷ್ಯದ ನೋಟಗಳು ನನ್ನನ್ನು ಇರಿದದ್ದೂ ಇದೆ. ನಮ್ಮ ಮನೆಗೆ ಬರುತ್ತಿದ್ದ ಒಬ್ಬನೇ ಹಿರಿಯ ಎಂದರೆ ಅಜ್ಜಯ್ಯ. ಜನತಾ ಪ್ಲಾಟಿನ ಮನೆಗೆ ಹೋಗುವುದು ಅನಿವಾರ್ಯವಾದಾಗ ಇದೇ ಅಜ್ಜಯ್ಯ ಬಂದು ಪೂಜೆ ಮಾಡಿ ಹೋಗಿದ್ದ. ಅಪ್ಪನು ಆ ಓಣಿಯಲ್ಲಿ ತೋರಿದ ಅಪರಾವತಾರಗಳಿಂದ ಆ ಮನೆಯಲ್ಲಿ ಇರಲು ಸಾಧ್ಯವಾಗದಂತೆ ವಿಲವಿಲ ಒದ್ದಾಡಿ, ಬಿಟ್ಟು, ಮೊದಲಿದ್ದಲ್ಲಿಗೇ ಬಂದಾಗ ಅಪ್ಪ ಆಜ್ಜಯ್ಯನನ್ನು ಬೈಯುತ್ತ ಸರಿಯಾಗಿ ಮನೆಶಾಂತಿ ಮಾಡಲಿಲ್ಲ ಎಂದು ಆತನೊಡನೆ ಮಾತು ಬಿಟ್ಟ.

ಸುಮಾರು ವರ್ಷಗಳ ನಂತರ ನನಗೆ ತಿಳಿದ ಸತ್ಯವೆಂದರೆ ನನ್ನಜ್ಜ ಗುಂಡಪ್ಪ ಅಯ್ಯನಾರವನು ಮತ್ತು ನನ್ನ ಅಗಸರ ಅಜ್ಜಿ ಆಗಿನ ಆ ಕಾಲದಲ್ಲೇ ಜಾತಿಯ ಬೇಲಿ ಸುಟ್ಟು ಮದುವೆಯಾಗಿದ್ದರು ಎಂಬುದು. ಸಾಲಿಮಠರು ಬೇರೆ ಯಾರೂ ಆಗಿರಲಿಲ್ಲ, ನನ್ನಜ್ಜನ ಕುಟುಂಬದವರೇ. ಈ ಅಯ್ಯನಾರೆಂದರೆ ಶೂದ್ರರಲ್ಲೇ ಬ್ರಾಹ್ಮಣರು. ಹೊಸ ಮನೆಗೆ ಇವರದೇ ಪಾದದೋಕಳಿಯನ್ನು ಮನೆ ತುಂಬ ಸಿಂಪಡಿಸಿ ಶುದ್ಧೀಕರಿಸುವ ರೂಢಿಯಿದೆ. ಯಾರೇ ಸತ್ತರೂ ಹೆಣದ ತೊಡೆಯ ಮೇಲೆ ಇವರು ಕಾಲಿಟ್ಟು ಮಾಡುವ ಪೂಜೆಯ ಕರಾಳ, ಅನರ್ಥ ಆಚರಣೆ ಇನ್ನೂ ಜೀವಂತವಿದೆ. ಊಟಕ್ಕಿರಲಿ, ಉಡಲಿಕ್ಕಿರಲಿ ಇವರಿಗೆ ಮಡಿಯೇ ಆಗಬೇಕು. ಇಂಥ ಅಪ್ಪಟ ಮಡಿಯ ಅಯ್ಯನಾರಿಗೂ, ಬಟ್ಟೆ ತೊಳೆಯುವ ನನ್ನಜ್ಜಿಗೂ ಪ್ರೇಮವಾಗಿ, ಎಲ್ಲವನ್ನೂ ಎದುರಿಸಿ ಬದುಕಿ ತಮ್ಮ ಪಾತ್ರ ಮುಗಿಸಿ ಹೋದದ್ದೊಂದು ಇತಿಹಾಸ.

ಅಜ್ಜನ ಅಪ್ಪಟ ಜೀವನಪ್ರೇಮಕ್ಕೆ ನನ್ನಜ್ಜಿಯ ತ್ಯಾಗವೇನು ಸಣ್ಣದಾಗಿರಲಿಲ್ಲ. ಅದೆಲ್ಲಕ್ಕಿಂತ ಹೊರಜಗತ್ತನ್ನು ಅವರು ಖಡಕ್ಕಾಗಿ ಎದುರು ಹಾಕಿಕೊಂಡು ಸೆಣಸಿದ್ದು ನಿಜವಾದ ಪ್ರತಿರೋಧದ ಜೀವಂತ ಮಾದರಿಯೆನಿಸುತ್ತದೆ. ಈಗ ನಾನು ಈ ಪುಟ ತಿರುವಿದಾಗ, ಈ ಸತ್ಯಗಳು ಹೆಚ್ಚು ಅರ್ಥವಾಗುತ್ತವೆ. ಅಜ್ಜಿಯ ಆ ಸಿಡಿಲ ದನಿ ಹುಟ್ಟಿನಿಂದ ಬಂದದ್ದಲ್ಲ, ಜಾತಿ ಮೀರಿದಾಗ ಎಲ್ಲರ ನಿರ್ಲಕ್ಷ್ಯವನ್ನು ಎದುರುಗೊಳ್ಳಲು ಮಾಡಿಕೊಂಡ ತನ್ನದೇ ಮಾರ್ಪಾಡದು. ಈ ಕೊಲಾಜ್ ಈ ಕ್ಷಣ ನನಗೊಂದು ಅಪೂರ್ವ ವಿಶ್ವಾಸವನ್ನು ಕೊಡುತ್ತಿದೆ.

ರೆಹಾನಾ: ಬದುಕಿನ ಹಸಿರು
ಅಜ್ಜಿಗೆ ಬರೋಬ್ಬರಿ ಐದು ಜನ ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು. ನನ್ನವ್ವನೇ ಹಿರಿಯವಳು. ನಮ್ಮನ್ನು ಹಾಗೇ ತಿಳಿಯುವಂತೆ ಮಾಡಲಾಗಿತ್ತು. ನಿಜವಾಗಿಯೂ ನಮ್ಮಜ್ಜಿಗೆ ಆರು ಜನ ಹೆಣ್ಣುಮಕ್ಕಳು. ಇದನ್ನು ದಾಖಲಿಸುತ್ತಿರುವ ಈ ಕ್ಷಣಕ್ಕೂ ನನ್ನಪ್ಪ, ನನ್ನ ಚಿಕ್ಕಪ್ಪಂದಿರಿಗೂ ಈ ವಿಷಯ ತಿಳಿದಿಲ್ಲ. ಬರೋಬ್ಬರಿ ನಲವತ್ತು ವರ್ಷಗಳಿಂದ ಈ ಸತ್ಯವೇಕೆ ಎಲ್ಲರಿಗೂ ತಿಳಿದಿಲ್ಲವೆಂದು ಶೋಧಿಸಿದರೆ ನನಗೆ ನನ್ನ ದೊಡ್ಡಮ್ಮನ ಮುಖದ ಮೇಲಿನ ಅಗಲಿಕೆಯ ಯಾತನೆ ಕಣ್ಣಮುಂದೆ ಬರುತ್ತಿದೆ. ಹೌದು, ಸುಮಾರು ನಲವತ್ತು ವರ್ಷಗಳ ಹಿಂದೆ ನನ್ನ ದೊಡ್ಡಮ್ಮ ರೇಣುಕಾ, ಮುಸ್ಲಿಂ ಆದ ನನ್ನ ದೊಡ್ಡಪ್ಪನನ್ನು ಮದುವೆಯಾಗಿ ಮನೆ ಬಿಟ್ಟವರು ಇಂದಿಗೂ ಊರು ನೋಡಿಲ್ಲ, ಮನೆ ಕಂಡಿಲ್ಲ.

ನನ್ನ ದೊಡ್ಡಮ್ಮ ಮುಸ್ಲಿಂ ಒಬ್ಬರನ್ನು ಮದುವೆಯಾದಳು ಎನ್ನುವ ಒಂದೇ ಕಾರಣಕ್ಕೆ ನಮಗೊಬ್ಬಳು ದೊಡ್ಡವ್ವ ಇದ್ದಾಳೆ ಎಂಬುದನ್ನೇ ನಮ್ಮೆಲ್ಲರಿಂದ ಮರೆಮಾಚಲಾಯಿತು. ಇಷ್ಟು ವರ್ಷಗಳ ಕಾಲ ನಮಗೆ ದೊಡ್ಡವ್ವ ಇದ್ದಾಳೆ, ನಮಗೆ ಇಬ್ಬರು ಅಕ್ಕಂದಿರಿದ್ದಾರೆ, ಒಬ್ಬ ಅಣ್ಣ ಇದ್ದಾನೆ ಎಂಬುದನ್ನು ತಿಳಿಯದೇ, ಅವರೊಡನೆ ಆಡದೆ, ನೋಡದೆ ಬೆಳೆದೆವೆಲ್ಲ ಎಂಬ ಕೊರಗು ಕೊರೆಯುತ್ತಿದೆ. ನಾವು ಮಕ್ಕಳು ಹೋಗಲಿ, ಹಿರಿಯಕ್ಕನಾಗಿದ್ದ ನಮ್ಮ ದೊಡ್ಡವ್ವ ಎಲ್ಲ ಐದು ತಂಗಿಯರನ್ನು, ಇಬ್ಬರು ತಮ್ಮಂದಿರನ್ನು ತಾಯಿಯಾಗಿ ಬೆಳೆಸಿದ್ದಳಲ್ಲ– ಅಂಥವಳನ್ನು ಕೇವಲ ನೆನಪಿನಲ್ಲಿಟ್ಟುಕೊಂಡೇ ಬದುಕುತ್ತಿರುವ ನನ್ನ ಅವ್ವ, ಚಿಕ್ಕವ್ವ ಮತ್ತು ಮಾವಂದಿರ ದುಃಖದ ವಿಸ್ತಾರ ಎಂತಹುದಿರಬಹುದು?

ನನ್ನ ಅಜ್ಜಿಗೆ ತನ್ನ ದೊಡ್ಡ ಮಗಳ ಮದುವೆ ಕುರಿತು ಯಾವುದೇ ತಕರಾರುಗಳಿರಲಿಲ್ಲ. ಆದರೆ ಅಜ್ಜನೂ ತೀರಿಹೋಗಿ ಒಬ್ಬಂಟಿಯಾಗಿದ್ದ ಅವಳನ್ನು ತೀರಾ ಅಸಹಾಯಕಳನ್ನಾಗಿ ಮಾಡಿದ್ದು ಆರು ಹೆಣ್ಣುಮಕ್ಕಳನ್ನು ತೊಡೆಯ ಮೇಲಿಟ್ಟುಕೊಂಡು ಬದುಕುತ್ತಿದ್ದ ಹೊಣೆಗಾರಿಕೆ, ಓಣಿ ಮತ್ತು ಊರಿನ ಜನ. ಹಿರಿಮಗಳು ಮುಸ್ಲಿಮನನ್ನು ಮದುವೆಯಾಗಿದ್ದು ತಿಳಿದರೆ ಉಳಿದ ಐವರು ಹೆಣ್ಣುಮಕ್ಕಳು ಮದುವೆಯಾಗದೆ ಕುಳಿತುಕೊಳ್ಳುತ್ತಾರೆ ಎನ್ನುವ ಭಯವನ್ನು ತೀವ್ರವಾಗಿ ಅವಳಲ್ಲಿ ಬಿತ್ತಲಾಗಿತ್ತು. ಅದೆಲ್ಲವನ್ನೂ ನೆನೆದೇ ಮಗಳಿಗೆ ಬೇಕಾದ್ದೆಲ್ಲವನ್ನು ಕೊಟ್ಟು ತನ್ನ ಎದೆಯೊಳಗೆ ಕಣ್ಣೀರು ತುಂಬಿಕೊಂಡು ಯಾರಿಗೂ ತಿಳಿಯದಂತೆ ಕಳುಹಿಸಿಕೊಟ್ಟಿದ್ದಳು. ಹಾಗೆ ಆ ದಿನ ಮನೆ ಬಿಟ್ಟು ಬಂದ ನನ್ನ ದೊಡ್ಡಮ್ಮ ರೇಣುಕಾ ಮಹಾರಾಷ್ಟ್ರದ ಮೀರಜ್ಗೆ ಬಂದು ರೆಹಾನಾ ಆದಳು. ಹುಟ್ಟಿದ ಚಂದನೆಯ ಮಗನಿಗೆ ಅವಳು ಭರತ ಎಂದು ಹೆಸರಿಟ್ಟರೆ, ದೊಡ್ಡಪ್ಪ ಜಾವೇದ್ ಅಂತ ಕರೀತಿದ್ದ. ಅಕ್ಕಂದಿರಿಗೆ ದೊಡ್ಡಪ್ಪ ರಿಜವಾನಾ ಮತ್ತು ಅರ್ಮಾನಾ ಅಂತ ಹೆಸರಿಟ್ಟರೆ ನನ್ನ ದೊಡ್ಡಮ್ಮ ಅವರನ್ನು ಅಪ್ಪಿ, ಪಪ್ಪಿ ಅಂತ ಕರೀತಾಳೆ.

ನಾನಾಗ ಎಂಟನೇ ತರಗತಿ ಓದುತ್ತಿದ್ದೆ. ಹತ್ತು ವರ್ಷದಾಗ ಒಮ್ಮೆ ನಮ್ಮ ಮನೆಗೆ ಬರುವ ನನ್ನ ಚಿಕ್ಕಮಾಮಾ ಅವ್ವನೊಡನೆ ದೊಡ್ಡಮ್ಮನ ಕುರಿತು ಮಾತನಾಡುತ್ತಿದ್ದುದು (ಅಪ್ಪನಿಗೆ ಗೊತ್ತಿಲ್ಲದಂತೆ) ನನಗೆ ಅಸ್ಪಷ್ಟವಾಗಿ ಗೊತ್ತಾಯಿತು. ಬರಬರುತ್ತ ನನಗೆ ಎಲ್ಲ ವಿಷಯ ತಿಳಿಯುತ್ತಾ ಹೋಯಿತು. ಹಾಗೆ ಅಂದು ಹೊರಟುಹೋದ ದೊಡ್ಡಮ್ಮನನ್ನು ಇವರೆಲ್ಲ ಹುಡುಕುತ್ತಿರುವುದು ತಿಳಿಯುತ್ತಾ ಹೋಯಿತು. ಮುಂದೆ ನಾನು 2007ರಲ್ಲಿ ನೌಕರಿ ಸೇರಿ ಊರೂರು ಸುತ್ತುತ್ತಾ ಹೋದಂತೆ ನನ್ನ ಕರುಳ ಬಳ್ಳಿಗಳ ವಾಸನೆ ಹುಡುಕುತ್ತಲೇ ಇದ್ದೆ. ಹಾಗೆ ಹುಡುಕುತ್ತಿರುವಾಗಲೇ ನನ್ನ ಬದುಕಿನ ನಿರ್ಣಾಯಕ ಆಯ್ಕೆಯಲ್ಲಿ ಚಿಕ್ಕೋಡಿಗೆ ಬಂದೆ. ಮೀರಜ್ ಇಲ್ಲೇ ಸಮೀಪದಲ್ಲಿದೆ ಎಂದು ತಿಳಿದ ಮೇಲೆ ನನ್ನ ಕುತೂಹಲ ಮತ್ತು ಹುಡುಕಾಟ ತೀವ್ರವಾಯಿತು.

ಎರಡು ಮೂರು ಫೋನ್ ನಂಬರ್ ಸಿಕ್ಕವು, ಮೀರಜ್ ರೇಲ್ವೆ ನಿಲ್ದಾಣದ ಸಮೀಪದಲ್ಲೇ ದೊಡ್ಡಮ್ಮನ ಕುಟುಂಬ ಇರುವ ಸುಳಿವುಗಳು ಅಸ್ಪಷ್ಟವಾಗಿ ಸಿಕ್ಕವು. ಆದರೆ ಅವು ಯಾವುವೂ ಸಹಾಯಕ್ಕೆ ಬರಲಿಲ್ಲ. ಸಿಕ್ಕ ನಂಬರ್ಗಳು ಮಹಾರಾಷ್ಟ್ರದವಾದ್ದರಿಂದ ಮರಾಠಿಯಲ್ಲಿ ಮಾತನಾಡಬೇಕಿತ್ತು. ನನಗೆ ತಿಳಿದಷ್ಟು ಮರಾಠಿಯಲ್ಲಿ ಪೇಚಾಡುತ್ತಿದ್ದ. ನನ್ನ ಶಾಲೆಯ ಮರಾಠಿ ಬಲ್ಲ ಶಿಕ್ಷಕರಾದ ಕೊಕಾಟೆ ಮತ್ತು ಕುರೆ ಸರ್ ಪ್ರಯತ್ನವೂ ಸಫಲವಾಗಲಿಲ್ಲ. ಕೊನೆಗೆ ಒಂದು ದಿನ ನನ್ನ ದೊಡ್ಡಮ್ಮನ ಮೊಬೈಲ್ ನಂಬರ್ ಸಿಕ್ಕಿತು. ನನಗಂದು ಹೇಳತೀರದ ಅನುಭವ. ಆಗಾಗ ಕದ್ದು ಮುಚ್ಚಿ ಹೇಳುತ್ತಿದ್ದ ಅವ್ವನ ನೆನಪುಗಳಿಂದ ನನ್ನ ದೊಡ್ಡಮ್ಮ ನನ್ನ ಪ್ರಜ್ಞೆಯಲ್ಲಿ ಸದಾ ನನ್ನ ಜೊತೆಯಲ್ಲಿದ್ದಳು. ಹಾಗಾಗಿ ನಾನು ಸಹಜ ಪ್ರೀತಿಯಲ್ಲೇ ಮಾತನಾಡಿಸಿದೆ. ದೊಡ್ಡಮ್ಮನ ಕಕ್ಕುಲಾತಿಯ ಪ್ರತಿಕ್ರಿಯೆ ಕೆನ್ನೆ ತೋಯಿಸಿತು.

ದೊಡ್ಡಪ್ಪ ಮಮಕಾರದಿಂದ ಮಾತನಾಡಿಸಿದ. ಸಮಯ ನೋಡಿ, ಈ ಕ್ಷಣಕ್ಕೂ ಸ್ವಲ್ಪ ಧೈರ್ಯವಂತೆ ಎನ್ನಿಸುವ ನನ್ನ ಚಿಕ್ಕಮ್ಮ ಗಂಗಮ್ಮನನ್ನು ಏನೂ ಹೇಳದೆ ರಾಯಬಾಗಕ್ಕೆ ಕರೆಯಿಸಿದೆ. ಎಲ್ಲವನ್ನೂ ಹೇಳಿ ದೊಡ್ಡಮ್ಮ–ದೊಡ್ಡಪ್ಪರನ್ನೂ ಕರೆಸಿದೆ. ಅಂದು ಆ ರಾಯಬಾಗದ ರೈಲು ನಿಲ್ದಾಣದಲ್ಲಿ ಚಿಕ್ಕಮ್ಮ ಮತ್ತು ದೊಡ್ಡಮ್ಮರ ನಾಲ್ಕು ದಶಕಗಳ ನಂತರದ ಭೇಟಿ, ಅವರ ಆಕ್ರಂದನಗಳು, ಅಪ್ಪುಗೆಗಳನ್ನು ನೆನೆದರೆ ಈಗಲೂ ಎದೆ ತೇವಗೊಳ್ಳುತ್ತದೆ. ತುಂಬ ಸಂಕೋಚ ಮತ್ತು ಹೆದರಿಕೆಯಿಂದ ನನ್ನ ಮನೆಗೆ ಬಂದ ದೊಡ್ಡಮ್ಮ ಮತ್ತು ದೊಡ್ಡಪ್ಪ ತೀವ್ರವಾದ ಗೊಂದಲದಲ್ಲಿದ್ದರು. ನಮಗೆ ಅವರ ಗೊಂದಲಗಳನ್ನು ಊಹಿಸಲು ಸಾಧ್ಯವಾಗಿಯೇ ಇರಲಿಲ್ಲ.

ಕೊನೆಗೆ ನನ್ನ ಪತ್ನಿ ಭಾರತಿ ಅವರ ಸಂಕೋಚದ ಕಾರಣಗಳನ್ನು ಸೂಚ್ಯವಾಗಿ ಹೇಳಿದಳು. ಆಗ ನಾನು ದೊಡ್ಡಮ್ಮನನ್ನ ಸಲುಗೆಯಿಂದ ಮಾತನಾಡಿಸಿದೆ. ದೊಡ್ಡಮ್ಮನ ದ್ವಂದ್ವದ ಕಾರಣ ಅಯ್ಯೋ ಎನ್ನಿಸಿತು. ಧರ್ಮದವರನ್ನು ಮದುವೆಯಾದ ತನ್ನನ್ನು ಹೇಗೆ ನಡೆಸಿಕೊಳ್ಳುತ್ತಾರೋ ಎನ್ನುವ ಭಯ ಈಗಲೂ ಆ ಜೀವದೊಳಗೆ ಉಳಿಯುವಂತೆ ಮಾಡಿದೆಯಲ್ಲ, ಆ ಭಯದ ಕ್ರೌರ್ಯ ಎಂಥದ್ದಿರಬೇಕು.
ದೊಡ್ಡಪ್ಪ ದೊಡ್ಡಮ್ಮರನ್ನು ಕರೆದುಕೊಂಡು ನನ್ನ ಉಳಿದ ಚಿಕ್ಕಮ್ಮಂದಿರನ್ನು ಭೇಟಿ ಮಾಡಿಸಲು ಹೊರಟೆ. ಸಾವಿತ್ರಿ ಚಿಕ್ಕಮ್ಮ ಮತ್ತು ಅವಳ ಮಕ್ಕಳು, ಗಿರಿಜ ಚಿಕ್ಕಮ್ಮ ಅವಳ ಮಕ್ಕಳು, ಗಂಗಮ್ಮ ಮತ್ತು ಅವಳ ಮಗಳು ಎಲ್ಲರ ಪರಸ್ಪರ ಭೇಟಿ, ಆನಂದದ ಕಣ್ಣೀರು ಯಾವ ಬಣ್ಣದಲ್ಲೂ ಚಿತ್ರಿಸಲಾಗದು.

ಬಿಳಿಹೂವ ಕೂಸು ಡೇನಿಯಲ್
ಅಕ್ಕನೆಂಬ ಕಾದಂಬರಿ ಓದಲೂ ಆಗದು, ಕೇಳಲೂ ಆಗದು ನನಗೆ. ಅಪ್ಪಟ ಬಿಳಿ ಹೂವಿನಂತಿರುವ ಅಕ್ಕ ತನ್ನ ಕಡುಕಪ್ಪು ಕಣ್ಣುಗಳಲ್ಲಿ ಬಣ್ಣವಿಲ್ಲದ ಕಣ್ಣೀರು ಹನಿಸುತ್ತಾ ತನ್ನ ಬದುಕನ್ನು ತೆರೆದಿಡುತ್ತಿದ್ದರೆ ನಾನು ನಿಂತ ನೆಲ ಕುಸಿಯುತ್ತಿತ್ತು. ನಿಲ್ಲಲಾಗದೆ ನಾನು ನಲುಗತೊಡಗಿದ್ದೆ. ಆಕೆ ಅರ್ಮಾನಾ, ನನ್ನ ದೊಡ್ಡವ್ವಳ ಚಿಕ್ಕ ಮಗಳು. ಅವಳು ಹೇಳುತ್ತಾಳೆ– ತನಗೆ ಹುಟ್ಟಿದ ಮಗುವನ್ನು ತಿಂಗಳಲ್ಲೇ ಅವಳ ಅತ್ತೆ ಕಿತ್ತುಕೊಂಡು ಹೋದಳು ಎಂದು.

ನನ್ನ ಅಕ್ಕ ಅರ್ಮಾನಾ ಕ್ರಿಶ್ಚಿಯನ್ ಆಗಿರುವ ನನ್ನ ಮಾಮನನ್ನು ಪ್ರೀತಿಸಿದ್ದಳು. ಆದರೆ ಹುಡುಗನ ತಾಯಿಗೆ ಇದು ಒಪ್ಪಿತವಿಲ್ಲ. ದೊಡ್ಡಮ್ಮ–ದೊಡ್ಡಪ್ಪ ತಕರಾರಿಲ್ಲದೆ ಮದುವೆ ಮಾಡಿಕೊಟ್ಟರು. ಅಲ್ಲಿಂದಲೇ ಅಕ್ಕನ ಅನಿಶ್ಚಿತ ನಡೆ ಪ್ರಾರಂಭವಾದದ್ದು. ಹೀಗೆ ಮದುವೆಯಾಗಿ ಬಂದ ಅರ್ಮಾನಾ ನಿಶಾ ಆದಳು. ಮತ್ತು ಅತ್ತೆಯ ಕಡೆಯಿಂದ ಹೊರಹಾಕಿಸಿಕೊಂಡು ಗೇಟಿನ ಬಳಿಯ ಜೋಪಡಿಯಲ್ಲೇ ಜೀವನ ಪ್ರಾರಂಭಿಸಿದಳು. ಆಗ ಹುಟ್ಟಿದವನೇ ಡೇನಿಯಲ್. ಹುಟ್ಟಿದ ತಿಂಗಳಿನಲ್ಲೇ ಅಕ್ಕನಿಂದ ಮಗುವನ್ನು ಕಿತ್ತುಕೊಂಡ ಅವಳ ಅತ್ತೆ, ಆನಂತರ ಮಗನೊಂದಿಗೆ ಮಾತನಾಡಲೂ ಅವಕಾಶ ಕೊಡಲಿಲ್ಲ. ಕಣ್ಣೆದುರಿನಲ್ಲೇ ಹೆತ್ತ ಮಗುವಿದ್ದರೂ ತಾಯಿಯ ಮಮತೆ ಅವಳಿಗೇ ನೀಡಲಾಗಲೇ ಇಲ್ಲ. ಬೆಳೆಬೆಳೆಯುತ್ತ ಡೇನಿಯಲ್ ತನ್ನವ್ವಳನ್ನು ಅಪರಿಚಿತಳಂತೆಯೇ ಭಾವಿಸಿದ. ಈಗ ಡೇನಿಯಲ್ಗೆ ಹದಿನಾರು ವರ್ಷ.

ತನ್ನ ತಾಯಿಯನ್ನೇ ಹೆಸರು ಹಿಡಿದು ಯಾವುದೋ ಹೆಂಗಸನ್ನು ಮಾತನಾಡಿಸುವಂತೆ ನಿಕೃಷ್ಟವಾಗಿ, ತಿರಸ್ಕಾರದಿಂದ ಮಾತನಾಡಿಸುತ್ತಾನಂತೆ. ‘ನಾನು ನಿನ್ನ ತಾಯಿ’ ಎಂದು ಅರ್ಮಾನಾ ಅಕ್ಕ ಎಷ್ಟೇ ಹೇಳಿದರೂ ಡೇನಿಯಲ್ ನಂಬುತ್ತಿಲ್ಲ. ಈ ಸಂಕಟದ ಚಿತ್ರಕ್ಕೆ ಯಾವ ಆಕಾರವೋ ತಿಳಿಯದು. ಅರ್ಮಾನಾ ಅಕ್ಕನಿಗೆ ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಒಬ್ಬಳಿಗೆ ಆರು, ಮತ್ತೊಬ್ಬಳಿಗೆ ಹತ್ತು ವರ್ಷ. ಮಾಮನದು ವಿಪರೀತ ಕುಡಿತ. ಎರಡು ಮಕ್ಕಳ ಭವಿಷ್ಯವನ್ನು ಮನಸ್ಸಿನಲ್ಲಿ ಹೊತ್ತುಕೊಂಡು ಅಕ್ಕ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಾಳೆ.

ಬೋಧಿ ಮರದ ನೆಳಲು
ಅಂಗಾಲಿಗೆ ಒತ್ತುವ ಕೆಂಡಗಳು
ನನ್ನ, ಭಾರತಿಯ ಮತ್ತು ವಿಭಾಳ ಕುರಿತು ಬರೆಯವುದು ಇದು ಸಂದರ್ಭವಲ್ಲವೇನೋ. ಆದರೆ ಹೀಗೊಂದು ಬದುಕು ಇರಬಹುದೇ ಎನ್ನುವ ಕಾರಣಕ್ಕಾಗಿಯಾದರೂ ಕೆಲ ಸಂಗತಿಗಳನ್ನು ಹೇಳಲೇಬೇಕಿದೆ. ಅಪ್ಪ ಕೊಡುವ ಯಾತನೆಗಳಿಂದ ಬಿಡುಗಡೆ ಪಡೆಯುವ ನನ್ನ ಪ್ರಯತ್ನ, ಯಾವಾಗಲೋ ಹುಟ್ಟಿದ್ದ ಪ್ರೇಮ– ಯಾವ ಯಾವುದೋ ಘಟನೆಗಳಿಗೆ ಸಾಕ್ಷಿಯಾಯಿತು. ಅಪ್ಪ ಕೊಡುತ್ತಿದ್ದ ಹಿಂಸೆ ಅವ್ವ, ತಮ್ಮ ಮತ್ತು ನನ್ನನ್ನು ಮನೋಯಾತನೆಯ ಕೂಪಕ್ಕೆ ತಳ್ಳಿಬಿಟ್ಟಿತ್ತು. ಇದರಿಂದಾಗಿಯೇ ಶುರುವಾದ ಅಲರ್ಜಿ ಜೀವಹಿಂಡಿತು.

ತಿಂಗಳಿಗೆ ನಾಲ್ಕಾರು ಸಾವಿರ ರೂಪಾಯಿ ಔಷಧಿ ಖರ್ಚು. ಇನ್ಸುಲಿನ್ ಇಂಜೆಕ್ಷನ್ಗಳನ್ನು ನಾನೇ ಚುಚ್ಚಿಕೊಳ್ಳಬೇಕಾಗಿತ್ತು. ಆ ಯಾತನೆಯ ಸುಖ ಪಟ್ಟವನಿಗೇ ಗೊತ್ತು. ಆಗೆಲ್ಲ ಡ್ರಗ್ಸ್ ತೆಗೆದುಕೊಳ್ಳುವವರ ಸೈರಣೆಯ ಶಕ್ತಿಯನ್ನು ಧ್ಯಾನಿಸುತ್ತಿದ್ದೆ. ಈ ಎಲ್ಲದರಿಂದ ಬಿಡುಗಡೆ ಬಯಸಿಯೋ ಏನೋ ಎದೆಯೊಳಗೆ ಮೊಳೆತಿದ್ದ ಪ್ರೀತಿಯನ್ನು ಹುಡುಕಿ ಅಲೆಯತೊಡಗಿದೆ. ಮೊದಲ ಪಿಯುಸಿಯಲ್ಲಿ ಗೆಳತಿಯಾಗಿದ್ದ, ಆದರೆ ನನ್ನ ಇಂಗಿತವನ್ನು ನಯವಾಗಿ ನಿರಾಕರಿಸಿದ್ದ ಗೆಳತಿ ಈಗಲಾದರೂ ಸಿಕ್ಕಾಳೇನೋ ಎಂದು ಹರಿಹರದ ಓಣಿ ಓಣಿಗಳಲ್ಲಿ ಅಲೆದೆ. ಅಪಹಾಸ್ಯಕ್ಕೊಳಗಾದೆ. ಅವಮಾನಿತನಾದೆ.

ಹೀಗಿರುವಾಗಲೇ ನಾನು ರಾಯಬಾಗದಲ್ಲಿ ನಡೆಯಲಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಮ್ಮಟಕ್ಕೆ ಬಂದೆ. ಅಲ್ಲಿ ಭಾರತಿ ಭೇಟಿಯಾದಳು. ಹೆಜ್ಜೆಗಳು ತಮಗೆ ತಾವೇ ಮಾತನಾಡಿಕೊಂಡವು. ನಮ್ಮ ಪಿಸುಮಾತುಗಳು, ಮುಗುಳು ನಗು ಏನು ಹೇಳಿಕೊಂಡವೋ ಗೊತ್ತಿಲ್ಲ. ಅಂತೂ ಬದುಕಿನ ಪಯಣಕ್ಕೆ ಜೊತೆಯಾಗಲು ಒಪ್ಪಿಕೊಂಡೆವು.

ಇದೇ ಸಂದರ್ಭದಲ್ಲಿ ಗೆಳೆಯ ಶಿವಕುಮಾರ ಕಂಪ್ಲಿ ಮತ್ತು ಭಾರತಿ ಸೇರಿ ನನ್ನ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಪ್ರಕಟಿಸಿದರು. ಆ ಪುಸ್ತಕವನ್ನು ಅಂದವಾಗಿ ವಿನ್ಯಾಸ ಮಾಡಿಕೊಟ್ಟ ಕವಿ ವಿ.ಆರ್. ಕಾರ್ಪೆಂಟರ್ ಪುಸ್ತಕದ ಹಕ್ಕುಗಳ ಬಗ್ಗೆ ಕೇಳಿದಾಗ, ನಾನು ಭಾರತಿಗೆ ಫೋನು ಮಾಡಿ ಹಕ್ಕುಗಳನ್ನು ನಿನ್ನ ಹೆಸರಿಗೇ ಕೊಡುವೆ ಎಂದೆ. ಭಾರತಿ ಖುಷಿಯಿಂದ ಸಮ್ಮತಿಸಿದಳು. ಹೆಸರು ಜೊತೆಯಾಗಿ ಬರೆಯಲೂ ಹೇಳಿದಳು. ಹೀಗಾಗಿ ನಾನು ಹಕ್ಕುಗಳ ಜಾಗದಲ್ಲಿ ‘ಭಾರತಿ ವೀರಣ್ಣ’ ಎಂದು ಬರೆದೆ. ದುರಂತವೆಂದರೆ, ಹೋರಾಟವೆಂದರೆ ಓಡಿಬರುವ, ಅರೆಸ್ಟ್ ಆಗುವುದೆಂದರೆ ಓಡಿಹೋಗುವ ಸ್ನೇಹಿತರೊಬ್ಬರು ಇದಕ್ಕೆ ದೊಡ್ಡ ದನಿಯಲ್ಲಿ ತಕರಾರು ತೆಗೆದರು. ಚರ್ಚೆ ಕವಿತೆಗಳ ಬಗ್ಗೆ ಬೆಳೆಯಲಿಲ್ಲ. ಮದುವೆಗೆ ಮುಂಚೆಯೇ ಹೀಗೆ ಜೊತೆಯಾಗಿ ಹೆಸರು ಬರೆದುಕೊಂಡು ಕ್ಷಮಿಸಲಾಗದ ಅಪರಾಧ ಮಾಡಿದ್ದಾರೆ ಎಂದು ಕೆಲವರು ಆಡಿಕೊಂಡರು. ನಮಗೆ ಸ್ಪಷ್ಟತೆಯಿತ್ತು. ಮನಸ್ಸು ಜೊತೆಯಾಗಿರುವಾಗ ಹೆಸರಿನದೇನು ಲೆಕ್ಕ.

ಅಗಸರಿಗೂ ಹೊಲೆಯರಿಗೂ ಅಣ್ಣತಂಗಿಯರ ಸಂಬಂಧವೆಂದೂ ಹಾಗಾಗಿ ಅಗಸನಾಗಿರುವ ನನ್ನನ್ನು ಮದುವೆಯಾಗಕೂಡದು ಎನ್ನುವುದು ಭಾರತಿಗಿದ್ದ ಒತ್ತಡಗಳಲ್ಲಿ ಒಂದು. ಈ ನಂಬಿಕೆಯಿಂದ ಖುಷಿಗೊಂಡ ನಾನು– ‘ಹಾಗಾದ್ರೆ ನಮ್ಮಪ್ಪ ಅಣ್ಣ, ನಿಮ್ಮವ್ವ ತಂಗಿ, ನಾನು ನಮ್ಮತ್ತೆಯ ಮಗಳನ್ನೇ ಮದುವೆಯಾಗುತ್ತಿದ್ದೇನೆ’ ಎಂದು ಹೇಳಿದೆ. ಇಬ್ಬರೂ ನಗುತ್ತಲೇ ಅಳಹತ್ತಿದೆವು.

ಮೈಸೂರಿನ ಮಾನವ ಮಂಟಪದಲ್ಲಿ ಮಂತ್ರಮಾಂಗಲ್ಯದ ಮೂಲಕ ನಾವು ಮದುವೆಯಾದೆವು. ಏಕಾಂತವೋ ಲೋಕಾಂತವೋ, ನರಳಾಟವೋ ನಗೆಪಾಟಲೋ, ಮುಲುಗಾಟವೋ ನಲುಗಾಟವೋ ಯಾವುದೊಂದೂ ತಿಳಿಯದೆ ನಮ್ಮ ಬದುಕು ಜೊತೆಯಾಯಿತು. ಕಾಲ ಎಲ್ಲವನ್ನೂ ನೋಡುತ್ತಲಿತ್ತು. ವಿಭಾ ಬಂದಳು. ನಾವು ಮತ್ತಷ್ಟು ಗಟ್ಟಿಯಾದೆವು. ನಿಜಕ್ಕೂ ಕಣ್ಣೀರು ಸುರಿಸಿ ಹೂದೋಟ ಬೆಳೆಸಲು ಹವಣಿಸುತ್ತಿರುವ ನಮ್ಮ ಮಧ್ಯೆ ಅಪನಂಬಿಕೆಯ ಕೀಟಗಳನ್ನು ಈಗಲೂ ಬಿಡುವವರು ಇದ್ದಾರೆ. ನಾನು ಮಾನವೀಯ ಸ್ವರೂಪಿ ಎಂದು ಭಾವಿಸಿದ್ದ ಸಾಂಸ್ಕೃತಿಕ ಚಿಂತಕರೊಬ್ಬರು ‘ತಮ್ಮ ತಂಗಿಯನ್ನು ಆ ವೀರಣ್ಣನಿಗೆ ಕೊಡಬಾರದಿತ್ತು’ ಎಂದದ್ದನ್ನು ಈಗಲೂ ನನಗೆ ಅರಗಿಸಿಕೊಳ್ಳಲಾಗಿಲ್ಲ. ಇಂಥವರ ಪ್ರಯತ್ನಗಳು ನಾನು ನಾಲ್ಕು ಕಡೆ ಪರಿಚಿತನಾದ ಮೇಲಂತೂ ಹೆಚ್ಚಾಗಿವೆ. ಲಡಾಯಿಯ ಹೆಸರಿನ ಲಂಪಟತನಗಳಿಗೆ ಏನು ಮಾಡುವುದು.

ನೀಲಚಕ್ರದ ಉರುಳಿನಲ್ಲಿ...
ಯು.ಆರ್. ಅನಂತಮೂರ್ತಿ ಅವರು ಹಿಂದೂ, ಮುಸ್ಲಿಂ, ಕ್ರೈಸ್ತರು ಬಂಧುಗಳಾಗಿರುವ ಮನೆಯ ಕನಸನ್ನು ಹಂಚಿಕೊಳ್ಳುತ್ತಿದ್ದರೆಂದು ನಾನು ಕೇಳಿದ್ದೇನೆ. ಅದು ನನ್ನ ಬದುಕಿನಲ್ಲಿ ಆಕಸ್ಮಿಕವಾಗಿ ನಿಜವಾಗಿದೆ ಎನ್ನುವುದು ಈ ಕ್ಷಣದ ಬೆರಗು. ಮೂವತ್ತು ವರ್ಷಕ್ಕೇ ನನ್ನನ್ನು ಅಜ್ಜನನ್ನಾಗಿಸಿರುವ ಜೇಬಾ, ‘ಮಾಮಾ’ ಎನ್ನುವ ಎಲಿಜೆಬೆತ್ ಈಗ ನನಗೆ ಸಿಕ್ಕಿದ್ದಾರೆ. ನನಗೊಬ್ಬ ಅಣ್ಣನಿದ್ದ ಮತ್ತು ಕೊನೆಗೂ ನಾನವನನ್ನು ನೋಡಲೇ ಇಲ್ಲವೆಂದರೆ ಈ ತಲ್ಲಣಕ್ಕೆ ಭಾಷೆ ಸಿಗುತ್ತಿಲ್ಲ. ಹೌದು, ಇತ್ತೀಚೆಗೆ ನನ್ನಣ್ಣ ಕಾರಣವೇ ತಿಳಿಯದ ರೀತಿಯಲ್ಲಿ ತೀರಿಹೋದ. ಅಪ್ಪ ಇಲ್ಲದ ದುಃಖದಲ್ಲಿ ಮನೆಯ ತುಂಬ ಹೆಣ್ಣುಮಕ್ಕಳಿರುವ ನನ್ನ ಮಗ ಯಾಸೀನ್ ತಾನು ಅತ್ತರೆ ಮನೆಯವರೆಲ್ಲರನ್ನು ಸಂತೈಸುವವರಿಲ್ಲ ಎಂದು ಯೋಚಿಸಿ, ಮಸೀದಿಯ ಮೂಲೆಯಲ್ಲಿ ಕುಳಿತು ರೋದಿಸುತ್ತಾನೆ. ಆರು ವರ್ಷದ ಅವನ ಈ ತಿಳಿವಳಿಕೆಗೆ ಯಾವ ಬಹುಮಾನ ಕೊಡಲಿ. ವಿಭಾ ಹೇಳುತ್ತಾಳೆ, ‘ಎಲ್ಲ ಸರಿಯಾಗುತ್ತೆ’ ಎಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.