ನೀಲವ್ವ (ಕಥಾಸಂಕಲನ)
ಲೇ: ವಿಕಾಸ್ ಆರ್. ಮೌರ್ಯ
ಪ್ರ: ಅಭಿರುಚಿ ಪ್ರಕಾಶನ
ಸಂ: 9980560013

ನಾಟಕ, ಲೇಖನ, ಅನುವಾದ ಹೀಗೆ ಸಾಹಿತ್ಯದ ಬೇರೆ ಪ್ರಕಾರಗಳಲ್ಲಿ ಕೃಷಿ ಮಾಡಿರುವ ವಿಕಾಸ್ ಅವರ ಮೊದಲ ಕಥಾಸಂಕಲನ ‘ನೀಲವ್ವ’. ನಿರಂತರವಾಗಿ ತುಳಿತಕ್ಕೊಳಗಾಗುತ್ತಲೇ ಇರುವ ಸಮುದಾಯದ ಜನರ ಬರ್ಬರ ಬದುಕಿನ ‘ಇತಿ’ ಮತ್ತು ಆ ಬದುಕನ್ನು ಕಥೆಯಾಗಿಸುವಲ್ಲಿ ಎದುರಿಸಿದ ‘ಮಿತಿ’ ಎರಡೂ ಸೇರಿಯೇ ಈ ಕೃತಿಯ ಜಗತ್ತು ರೂಪುಗೊಂಡಿದೆ.

‘ನೀಲವ್ವ’ ಈ ಕೃತಿಯ ಹೆಸರಷ್ಟೇ ಅಲ್ಲ, ಈ ಸಂಕಲನದ ಮೊದಲ ಕಥೆಯ ಶೀರ್ಷಿಕೆಯೂ ಹೌದು. ಕಥೆಯಲ್ಲಿ ಒಂದೆರಡು ಮಾತನ್ನಷ್ಟೇ ಆಡುವ ಈ ನೀಲವ್ವ, ವಿಕಾಸ್ ಅವರ ಕಥನಜಗತ್ತಿನ ಅಂತಃಕರಣದಂತೆ ಭಾಸವಾಗುತ್ತಾಳೆ. ‘ಒಂದು ಹೆಜ್ಜೆ’ ಕಥೆಯ ಅವ್ವ, ‘ಜಗವೆಂಬ ಜೈಲಿನಲಿ’ ಕಥೆಯ ಗಂಟಪ್ಪ, ‘ಜಡೆಪ್ಪನ ಮಗಳು ರಮ್ಯ’ ಕಥೆಯ ಜಡೆಪ್ಪ, ‘ದೇವರ ಬಾವಿ’ಯ ಸುಂಕ – ಹೀಗೆ ಇಲ್ಲಿನ ಹಲವು ಪಾತ್ರಗಳ ಅಂತರಂಗದಲ್ಲಿ ಹರಿದು ಈ ಕಥನಪ್ರಪಂಚವನ್ನು ಸೇರಿಸಿ ಕಟ್ಟಿರುವ ದಾರದಂತೆ ಭಾಸವಾಗುತ್ತಾಳೆ.

ಮೇಲುವರ್ಗದವರಿಂದ ಬರ್ಬರವಾಗಿ ಶೋಷಣೆ ಅನುಭವಿಸಿ ಮಾತು ಕಳೆದುಕೊಂಡು ಮಲಗಿರುವ ತಳವರ್ಗದ ಜನರ ಪ್ರತಿನಿಧಿಯಂತೆ ಕಾಣಿಸುವ ನೀಲವ್ವ ಬಾಯಿಬಿಡುವುದು, ತನಗಾದ ಅನ್ಯಾಯಕ್ಕೆ ಪ್ರತೀಕಾರ ತೆಗೆದುಕೊಳ್ಳಲು ತನ್ನ ಮಗ ಚಂದ್ರು ಅದೇ ಅನ್ಯಾಯದ ದಾರಿ ಹಿಡಿದಾಗ. ಅದುವರೆಗೂ ಮಲಗಿದ್ದಲ್ಲೇ ಮಲಗಿದ್ದ ನೀಲವ್ವ ‘ಸಾಕ್ಷಿ ಹೇಳಬೇಕು’ ಎಂದು ಹೇಳುತ್ತ ಎದ್ದು ಕೂಡುತ್ತಾಳೆ. ಅವಳು ಸಾಕ್ಷಿ ಹೇಳುವುದು ತನ್ನ ಮೇಲೆ ಅತ್ಯಾಚಾರವೆಸಗಿದ ಬಸಪ್ಪ ಸಾಹುಕಾರನ ವಿರುದ್ಧವಾ ಅಥವಾ ಅವನ ಮಗಳ ಮೇಲೆ ಅತ್ಯಾಚಾರವೆಸಗಿ ಬಂದ ತನ್ನ ಮಗ ಚಂದ್ರುವಿನ ವಿರುದ್ಧವಾ ಎನ್ನುವುದನ್ನು ಕಥೆಗಾರರು ಬಾಯಿಬಿಟ್ಟು ಹೇಳುವುದಿಲ್ಲ. ಹೀಗೆ ಹೇಳದಿರುವುದರಿಂದಲೇ ಕಥೆಯ ಅಂತ್ಯಕ್ಕೆ ಇಡೀ ಕಥೆಯನ್ನು ಬೆಳಗಬಲ್ಲ ಧ್ವನಿಶಕ್ತಿ ದಕ್ಕಿದೆ. ಆದರೆ ಅಮ್ಮನನ್ನು ಮಗುವಿನ ಹಾಗೆಯೇ ನೋಡಿಕೊಳ್ಳುತ್ತಿದ್ದ ತಾಯಿಹೃದಯದ ಚಂದ್ರು, ಸಾಹುಕಾರನ ಮಗಳ ಮೇಲೆ ಅತ್ಯಾಚಾರ ಎಸಗುವುದು ಮತ್ತು ‘ಆ ನನ್ಮಗ ನಮ್ಮವ್ವನ್ ಮೈ ಮುಟ್ಟಿದ್ದಕ್ಕೆ ನಾನು ಅವನ ಮಗಳ ಮೈ ಮುಟ್ಟಿವ್ನಿ. ಅವನ ಪ್ರಾಣ ತೆಗೆಯಾದ್ರಿಂದ ನಯಾ ಪೈಸೆದ ಸಮಾಧಾನ ಆಯ್ತಿತ್ತಿಲ್ಲ. ಆದ್ರೆ ಈಗ ನೋಡು ನೆಮ್ದಿಯಾಗಿ ನಿದ್ದೆ ಮಾಡ್ತಿವ್ನಿ’ ಎನ್ನುವಷ್ಟು ಕ್ರೌರ್ಯವನ್ನು ಮನಸೊಳಗೆ ತುಂಬಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನು ಮಾತ್ರ ಈ ಕಥೆ ಹಾಗೆಯೇ ಉಳಿಸಿಬಿಡುತ್ತದೆ.

ಸಮಾಜದಲ್ಲಿ ವಿವೇಕ ಬೆಳೆಸಬೇಕಾದ ಶಿಕ್ಷಣ ಸಂಸ್ಥೆಗಳಲ್ಲಿಯೇ ಇರುವ ಜಾತಿ, ಆಹಾರ ರಾಜಕೀಯದ ಕ್ರೂರ ಸ್ವರೂಪದ ಕುರಿತು ಹೇಳುವ ಕಥೆ ‘ಒಂದು ಹೆಜ್ಜೆ’. ಸುಶಿಕ್ಷಿತ ಮಗನ ಸ್ವಾಭಿಮಾನ ಕುಸಿಯುವ ಹೊತ್ತಿಗೆ ಅನಕ್ಷರಸ್ಥಳಾದ ‘ಅವ್ವ’ ಊರುಗೋಲಾಗಿ, ಮಾನವೀಯತೆಯ ಕಣ್ಣಾಗಿ ಒದಗಿಬರುತ್ತಾಳೆ. ‘ನಾವು ಒಂದು ಹೆಜ್ಜೆ ಮುಂದಿಡೋಣ, ಅವರೂ ಇನ್ನೊಂದು ಹೆಜ್ಜೆ ಮುಂದಿಡಲು ಕಾಯೋಣ’ ಎನ್ನುವುದು ಅವ್ವನ ಮಾತು. ಸ್ವಾಭಿಮಾನವನ್ನು ಕಳೆದುಕೊಳ್ಳದೆ ಮಾನವೀಯ ಹಸ್ತ ಚಾಚುವ ಆಶಯದ ಈ ಕಥೆ, ಇದರಿಂದ ಎಲ್ಲ ಬದಲಾಗಿಬಿಡುತ್ತದೆ ಎಂಬ ಭ್ರಮೆಯನ್ನೂ ಹೊಂದಿಲ್ಲ. ಹಾಗಾಗಿಯೇ ನಾಯಕ ಕೊಟ್ಟ ಬುತ್ತಿಯನ್ನು ಪೂರ್ಣಿಮಾ ಮೇಡಂ ತೆರೆಯುತ್ತಾರೆಯೇ? ನಾಯಕನ ಬುತ್ತಿಯಲ್ಲಿ ಏನಿರಬಹುದು? ಎಂಬ ಪ್ರಶ್ನೆಗಳನ್ನು ಉಳಿಸಿಯೇ ಕಥೆ ಕೊನೆಗೊಳ್ಳುತ್ತದೆ.

ವಸ್ತು ಮತ್ತು ಆಶಯಗಳ ದೃಷ್ಟಿಯಿಂದ ಗಮನಾರ್ಹ ಕಥೆ ‘ಚಿನ್ನದ ಕನ್ನಡಕ’. ಆದರೆ ಅವುಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವಲ್ಲಿ ವಿಫಲರಾಗಿರುವುದರಿಂದ ಅನುಭವವೇ ಆಗಿ ಒದಗಿಬರಬೇಕಾದ ವಸ್ತು, ವಿಚಾರಗಳಾಗಿ ದಾಟುತ್ತಿರುತ್ತವೆ. ಮನಸ್ಸಲ್ಲಿ ಮೂಡಿದ ವಿಚಾರಕ್ಕೆ ಅನುಗುಣವಾಗಿ ಘಟನೆಗಳನ್ನು ಪೋಣಿಸುತ್ತ ಹೋದ ಹಾಗೆ ಭಾಸವಾಗುತ್ತದೆ. ಹೀಗಾಗಿಯೇ ಕಥೆಯ ಕೊನೆಯಲ್ಲಿ, ಬಿಸಿಯಾಗಿದ್ದ ಅಂಬೇಡ್ಕರರ ಪ್ರತಿಮೆಯನ್ನು ಶಫಿ, ಸೂರಿ, ಹನುಮಂತ, ಹನುಮಕ್ಕರೆಲ್ಲ ಸೇರಿ ತಬ್ಬಿ ಮುದ್ದಾಡಿ ತಣ್ಣಗಾಗಿಸುವ ಅಪೂರ್ವವಾದ ಸನ್ನಿವೇಶವೂ ತುಸು ವಿಚಾರವಾಗಿಯಷ್ಟೇ ನಮಗೆ ದಕ್ಕುತ್ತದೆ.

‘ತೆರೆಮರೆಯ ಯೋಧ’, ‘ಹುಲುಗ’, ‘ತಲೆ ತಲಾಂತರ’, ‘ಮಳೆ ಬಂದಾಗ’ ಕಥೆಗಳಲ್ಲಿಯೂ ವಿಚಾರಗಳು, ಆಶಯಗಳೇ ವಾಚ್ಯವಾಗಿ ಮುನ್ನೆಲೆಗೆ ಬಂದು ಕಥನಕೌಶಲ ಹಿಂದಕ್ಕೆ ಸರಿದಿದ್ದರಿಂದ ತುಸು ಸೊರಗಿದಂತೆ ಕಾಣಿಸುತ್ತವೆ. ‘ತೆರೆಮರೆಯ ಯೋಧ’ ಕಥೆಯಲ್ಲಿ ಸೈನಿಕ ದಿನೇಶ್ ತಾನು ಸನ್ಮಾನಗೊಳ್ಳಬೇಕಾದ ವೇದಿಕೆಯ ಮೇಲೆ ಪೌರಕಾರ್ಮಿಕ ಭರಮಪ್ಪನನ್ನು ಸನ್ಮಾನಿಸುವ ಚಿತ್ರಣವಿದೆ. ಅದಕ್ಕೆ ಕಾರಣವಾದ ಸಾಮಾಜಿಕ ಕಾಳಜಿಯ ಸುದೀರ್ಘ ಭಾಷಣವನ್ನೂ ಅವನು ಮಾಡುತ್ತಾನೆ. ತೆರೆಮರೆಯಲ್ಲಿ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿರುವವರಿಗೂ ವೇದಿಕೆ ಸಿಗಬೇಕು ಎಂಬ ಸದಾಶಯದ ಈ ಕಥೆ, ನಮ್ಮ ದೇಶದ ಪ್ರಧಾನಿಗಳು ಪೌರಕಾರ್ಮಿಕರ ಪಾದ ತೊಳೆದ ‘ಡ್ರಾಮಾ’ವನ್ನು ನೆನಪಿಸುವುದು ವಿಪರ್ಯಾಸ. ಮತ್ತು ಆ ನೆನಪೇ ಈ ಕಥೆಯ ವೈಫಲ್ಯದ ಕಾರಣವನ್ನೂ ಸೂಚಿಸುತ್ತದೆ. ‘ಮಳೆ ಬಂದಾಗ’ ಕಥೆ, ತಳವರ್ಗದ ಜನರಿಗೆ ಎದುರಾಗಿ, ಮೇಲುವರ್ಗ – ನಗರದ ಜನರನ್ನು ಕಟಕಟೆಯಲ್ಲಿ ಭರದಲ್ಲಿ ‘ಕಪ್ಪು–ಬಿಳುಪು’ ಜಾಡಿಗೆ ಬಿದ್ದು ಕುಸಿಯುತ್ತದೆ.

‘ಜಡೆಪ್ಪನ ಮಗಳು ರಮ್ಯ’ ಈ ಸಂಕಲನ ಇನ್ನೊಂದು ಗಮನಾರ್ಹ ಕಥೆ. ಮನುಷ್ಯನ ಅಸ್ತಿತ್ವದ ಗುರುತಷ್ಟೇ ಆಗಿರುವ ಹೆಸರೇ ಅವರಿಗೆ ಶಾಪವೂ ಆಗಿಬಿಡುವ ಅಮಾನವೀಯ ಪರಿಸ್ಥಿತಿಯ ಕುರಿತು ಈ ಕಥೆ ಮಾತಾಡುತ್ತದೆ. ಸಮಾಜದಲ್ಲಿ ಹೆಸರೇ ಮನುಷ್ಯನ ‘ಜಾಗ’ವನ್ನು ನಿರ್ಧರಿಸುವ ವಿಪರ್ಯಾಸ ಮತ್ತು ಹೆಸರಿನೊಟ್ಟಿಗೆ ತಮ್ಮ ಬದುಕನ್ನೂ ಬದಲಿಸಿಕೊಳ್ಳಲು ಹರಸಾಹಸಪಡುತ್ತಿರುವ ಜನರ ದುರಂತ ಎರಡನ್ನೂ ಈ ಕಥೆ ಕಾಡುವ ಹಾಗೆ ಕಟ್ಟಿಕೊಡುತ್ತದೆ.

ವಿಕಾಸ್ ಅವರಲ್ಲಿ ಅಸಮಾನತೆ, ಜಾತಿ ತಾರತಮ್ಯ, ಶೋಷಣೆಯ ವಿರುದ್ಧ ಹರಿಹಾಯುವ, ಬದಲಾವಣೆಗಾಗಿ ಹಪಹಪಿಸುವ ‘ಆ್ಯಕ್ಟಿವಿಸ್ಟ್’ ಇದ್ದಾನೆ. ಹಾಗೆಯೇ ಈ ಎಲ್ಲ ಅನಿಷ್ಟಗಳನ್ನು ಬದುಕಿನ ಅನುಭವಗಳ ಮೂಲಕವೇ ಎದುರಿಸುವ ಮಾತೃಹೃದಯಿ ಕಥೆಗಾರನೂ ಇದ್ದಾನೆ. ಈ ಸಂಕಲನದ ಹಲವು ಕಥೆಗಳಲ್ಲಿ ಪ್ರತ್ಯೇಕವಾಗಿ ಕಾಣಿಸುವ ಈ ಇಬ್ಬರು, ಸೃಜನಶೀಲ ಕಲಾಕುಲುಮೆಯಲ್ಲಿ ಬೆರೆತು ಒಂದಾಗಬೇಕಾಗಿದೆ. ಆಗ ವಿಕಾಸ್ ಅವರ ಕಥನಗಾರಿಕೆ ಸ್ವಂತಿಕೆಯನ್ನೂ, ಹೊಸ ಧ್ವನಿಶಕ್ತಿಯನ್ನೂ ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.