ಡಾ.ಜಿ.ಕೃಷ್ಣಪ್ಪ ಎಂಬ ಹೆಸರನ್ನು ಹೇಳಿದರೆ, ‘ಯಾರು ಬೇಂದ್ರೆ ಕೃಷ್ಣಪ್ಪ ಅವರಾ?’ ಎನ್ನುವ ಮರುಪ್ರಶ್ನೆ ಬರುವುದು ಖಂಡಿತ. ಬೇಂದ್ರೆ ಕಾವ್ಯದ ಅಧ್ಯಯನಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರು ಈ ಕೃಷ್ಣಪ್ಪ. ‘ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ: ಒಂದು ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದವರು. ‘ನಾಕುತಂತಿ:ಒಂದು ಟಿಪ್ಪಣಿ’, ‘ಹೂತದ ಹುಣಸಿ’ ‘ಅಂತರಂಗದತ್ತನಯನ’ ಮುಂತಾಗಿ ಬೇಂದ್ರೆ ಸಾಹಿತ್ಯದ ಕುರಿತು ಅವರ ಹಿಂದಿನ ಪುಸ್ತಕಗಳು ಬೇಂದ್ರೆ ಕಾವ್ಯಾಸಕ್ತರ ಓದಿಗೆ ತುಂಬ ನೆರವಾಗಿವೆ. ಇವರು ಈವರೆಗೆ ಬರೆದಿರುವ 15 ಪುಸ್ತಕಗಳಲ್ಲಿ 10 ಕೇವಲ ಬೇಂದ್ರೆ ಕಾವ್ಯವನ್ನೇ ಕುರಿತಾದದ್ದು. ಇದೀಗ ‘ಬೇಂದ್ರೆ ಕಾವ್ಯ: ಪದನಿರುಕ್ತ’ ಎನ್ನುವ ಹೊಸ ಪುಸ್ತಕವೊಂದನ್ನು ಹೊರತಂದಿದ್ದಾರೆ. ಬೇಂದ್ರೆಯವರ ಕಾವ್ಯವನ್ನು ಇಷ್ಟೊಂದು ಮೋಹದಿಂದ ಬೆನ್ನುಹತ್ತಿ, ಪ್ರತಿಯೊಂದು ಕವಿತೆಯನ್ನೂ ಅರ್ಥ ಮಾಡಿಕೊಳ್ಳಲು ಈ ಮಟ್ಟಿನ ಸಾಹಿತ್ಯ ಕೈಂಕರ್ಯ ಮಾಡಿದ ಇನ್ನೊಂದು ಉದಾಹರಣೆ ಸಾಹಿತ್ಯಲೋಕದಲ್ಲಿ ಇದ್ದಂತೆ ಕಾಣುವುದಿಲ್ಲ.

ಈ ಕೃತಿಯಲ್ಲಿ ಬೇಂದ್ರೆಯವರ ನೂರಾರು ಕವಿತೆಗಳಲ್ಲಿ ಬರುವ, ಸುಲಭವಾಗಿ ಅರ್ಥವಾಗದ ಸುಮಾರು 1400 ಪದಗಳನ್ನು ಹೆಕ್ಕಿ ತೆಗೆದು, ಅವುಗಳ ನೈಜ ಅರ್ಥವೇನು ಎನ್ನುವುದನ್ನು ಬಿಡಿಸಿಟ್ಟಿದ್ದಾರೆ. ಬೇಂದ್ರೆ ಕಾವ್ಯದ ವಾಚ್ಯಾರ್ಥ, ಧ್ವನ್ಯಾರ್ಥ ಮತ್ತು ಲಕ್ಷ್ಯಾರ್ಥಗಳನ್ನು ಹೇಗೆ ಗ್ರಹಿಸಬೇಕು ಎನ್ನುವುದಕ್ಕೆ ದಾರಿ ತೋರುವ ಅತ್ಯುತ್ತಮ ಕೃತಿಯಿದು. ಹಾಗೆಂದೇ ಪುಸ್ತಕದ ಸವಿನುಡಿಯಲ್ಲಿ ಕೆ.ಅನಂತರಾಮು ಅವರು, ‘ಬೇಂದ್ರೆ ಕಾವ್ಯವಿಮರ್ಶೆಯ ಹಾದಿಯಲ್ಲಿ ಕೃಷ್ಣಪ್ಪನವರು ಒಂದು ಚಿನ್ನದ ಬಾಗಿಲನ್ನೇ ತೆರೆದಿದ್ದಾರೆ’ ಎಂದಿದ್ದಾರೆ. ಸ್ಥೂಲವಾಗಿ ನಿಘಂಟಿನ ಸ್ವರೂಪದಲ್ಲಿರುವ ಈ ಕೃತಿಯಲ್ಲಿ ಬೇಂದ್ರೆಯವರ ಆರಂಭದ ಕವನಗಳಿಂದ ಹಿಡಿದು, ಮರಣೋತ್ತರವಾಗಿ ಪ್ರಕಟಿತ ಕವಿತೆಗಳವರೆಗೂ (ಪ್ರಕಟಣೆಯ ವರ್ಷಕ್ಕೆ ಅನುಗುಣವಾಗಿ) ಗಮನಿಸಿ, ಪದಗಳನ್ನು ಹೆಕ್ಕಿ ತೆಗೆದಿದ್ದಾರೆ. ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು, ಓದುಗರು ಮಾತ್ರವಲ್ಲ ವಿಮರ್ಶಕರಿಗೂ ಅನುಕೂಲವಾಗುವಂತಹ ವಿಶಿಷ್ಟ ಕೃತಿಯಿದು. ಮೊದಲು ಪದರೂಪ, ಬಳಿಕ ಅದು ಬಳಕೆಯಾದ ಕವಿತೆಯ ವಾಕ್ಯವೃಂದ, ಆಮೇಲೆ ಅರ್ಥ– ಹೀಗೆ ರೂಪಿಸಿದ ಕ್ರಮವೂ ಹೆಚ್ಚು ವೈಜ್ಞಾನಿಕವಾಗಿದೆ. ಹುಡುಕುವ ಕೆಲಸ ಸುಲಭವಾಗಲೆಂದು ಕೊನೆಯಲ್ಲಿ ಪದಸೂಚಿಯನ್ನೂ ಕೊಟ್ಟಿದ್ದಾರೆ.

ಪದಗಳನ್ನು ಒಡೆದು, ಬಗ್ಗಿಸಿ, ವಿಸ್ತರಿಸಿ ವಿಶಿಷ್ಟ ಅರ್ಥಗಳನ್ನು ಹೊಳೆಯಿಸುವುದರಲ್ಲಿ ಬೇಂದ್ರೆಯವರದ್ದು ಎತ್ತಿದ ಕೈ. ಅವರ ಕೆಲವು ಕವಿತೆಗಳನ್ನು ಅರ್ಥ ಮಾಡಿಕೊಳ್ಳಲು ಜಾನಪದ ಮಾತ್ರವಲ್ಲ, ದರ್ಶನಶಾಸ್ತ್ರಗಳ ಓದಿನ ಹಿನ್ನೆಲೆಯೂ ಬೇಕಾಗುತ್ತದೆ. ಹಲವು ಶಬ್ದಗಳ ಅರ್ಥ ಎಷ್ಟೇ ತಿಣುಕಾಡಿದರೂ ಗೊತ್ತಾಗುವುದಿಲ್ಲ. ಇಲ್ಲಿ ಅಂತಹ ನೂರಾರು ಪದಗಳನ್ನು ಗುಳೇಹಾಕಿ ಅಲ್ಲಲ್ಲಿ ಪದಗಳ ಸ್ವರೂಪಾರ್ಥಗಳನ್ನೂ ನೀಡಿರುವುದು ವಿಶೇಷ. ಇಲ್ಲಿ ಕೃಷ್ಣಪ್ಪ ಗುರುತಿಸಿರುವ ಕೆಲವು ಶಬ್ದಗಳು ಕನ್ನಡದ ಯಾವ ನಿಘಂಟಿನಲ್ಲೂ ಕಾಣಸಿಗುವುದಿಲ್ಲ ಎನ್ನುವುದು ಬೇಂದ್ರೆಯವರ ಕಾವ್ಯದ ಗಹನತೆಯನ್ನು ತೋರಿದಂತೆಯೇ, ಕೃಷ್ಣಪ್ಪನವರ ಅಧ್ಯಯನದ ಆಳಕ್ಕೂ ಸಾಕ್ಷಿಯಾಗಿದೆ.

ಕಾವ್ಯಗಾರುಡಿಗನ ಕವಿತೆಗಳ ಪದಸಂಪತ್ತಿನ ಶೋಧಕ್ಕೆ ಕೃಷ್ಣಪ್ಪ ಅವರು ಇಲ್ಲಿ ಪಾತಾಳಗರಡಿ ಹಿಡಿದು ಜಾಲಾಡಿದ್ದಾರೆ. ಮದಗ, ಮುಕ್ಕು, ಮದಗುಣಕಿ, ಗಂಟಿಚೌಡಿ, ತನ್ವಂತರ, ಕಸೆ, ಜಡಧಿ, ರಾಸಭ, ಚಷಕ, ಅಂಗಲು, ನಿವಳ, ಓಜ, ತ್ರಿವಾರ, ನೆಲಬುರಕಿ, ಎಕ್ಕಲ– ಹೀಗೆ ನೂರಾರು ಸಂಕೀರ್ಣ ಪದಗಳ ಗ್ರಾಹ್ಯ ಮತ್ತು ಅಗ್ರಾಹ್ಯ ಅರ್ಥ– ಭಾವಗಳ ಶೋಧನೆ ನಡೆಸಿದ್ದಾರೆ. ಹಾಗೆ ಕೃಷ್ಣಪ್ಪನವರ ನಿಕಷಕ್ಕೆ ಒಡ್ಡಿಕೊಂಡ ಕೆಲವು ಪದಗಳು (ಉದಾಹರಣೆಗೆ ಒಂಭತ್ತುಗೆರಿ ದೇವರು) ಪ್ರಾದೇಶಿಕ ಸಂಸ್ಕೃತಿಯ ಅಪರೂಪದ ವಿವರಗಳನ್ನೂ ನೀಡುತ್ತವೆ. ಧಾರವಾಡದ ಸುತ್ತಮುತ್ತ ಹಲವು ಜಾತ್ರೆ, ಸಮಾರಂಭಗಳಲ್ಲಿ ಸಾಕಷ್ಟು ಸಲ ಓಡಾಡಿ ರೈತರು, ಕುಶಲಕರ್ಮಿಗಳು, ಶಿಕ್ಷಕರು, ಸ್ನೇಹಿತರ ಜೊತೆಗೆ ಚರ್ಚಿಸಿ ಜನಬಳಕೆಯಲ್ಲಿರುವ ಅರ್ಥಗಳನ್ನು ಶೋಧಿಸಿರುವುದು ಈ ಕೃತಿರಚನೆಗೆ ಎಷ್ಟೊಂದು ಶ್ರಮಪಟ್ಟಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.ಹಲವು ಕಾವ್ಯಸಾಲುಗಳಿಗೆ ವಿವರವಾದ ಟಿಪ್ಪಣಿಗಳನ್ನು (ಉದಾಹರಣೆಗೆ ಇಂದ್ರಜಾಲ, ಅಸ್ಮಿತಾ, ಅಮೃತಾಣುಭವ, ಸುಖಸ್ಪರ್ಶ, ಗಂಗಾವತರಣ) ಕೊಟ್ಟಿದ್ದಾರೆ. ಆದರೆ ‘ಕುರುಡು ಕಾಂಚಾಣಾ’ ಕಾವ್ಯಸಾಲೊಂದರ ವಿವರಣೆಯಲ್ಲಿ ಕೃಷ್ಣಪ್ಪ ಅವರು ಆರ್ಥಿಕತೆಯ ಕುರಿತು ಬೀಸುಹೇಳಿಕೆ ನೀಡಿದಂತಿದೆ.

ನಿಜ ಹೇಳಬೇಕೆಂದರೆ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಮಾಡಬಹುದಾದ ಕೆಲಸವನ್ನು ಕೃಷ್ಣಪ್ಪನವರು ಏಕಾಂಗಿಯಾಗಿ ಮಾಡಿದ್ದಾರೆ. ಕಲಿಕೆಯಿಂದ ಅಟೊಮೊಬೈಲ್ ಎಂಜಿನಿಯರ್ ಆಗಿ ಎಆರ್‌ಟಿಒ ಹುದ್ದೆಯಲ್ಲಿ ನಿವೃತ್ತರಾದ ಕೃಷ್ಣಪ್ಪ, ಮೋಟಾರು ವಾಹನಗಳ ಬಿಡಿಭಾಗಗಳನ್ನು ಬಿಚ್ಚಿ, ಮರಳಿ ಜೋಡಿಸುವ ಕುಶಲ ತಂತ್ರಜ್ಞನಂತೆಯೇ ಇಲ್ಲಿ ಬೇಂದ್ರೆ ಕಾವ್ಯಪದ ಮೀಮಾಂಸೆಯನ್ನು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಮುಂದಿನ ಪೀಳಿಗೆಗೆ ಬೇಂದ್ರೆಯವರ ಕಾವ್ಯವನ್ನು ದಾಟಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕೃತಿ. ವಿಮರ್ಶಕರೂ ಬೇಂದ್ರೆ ಕವಿತೆಗಳನ್ನು ಕುರಿತ ತಮ್ಮ ಕೆಲವು ಅಪಗ್ರಹಿಕೆಗಳನ್ನು ನೇರ್ಪುಗೊಳಿಸುವಲ್ಲಿ ನೆರವಾಗಬಲ್ಲ ಕೃತಿ.

ಬೇಂದ್ರೆ ಕಾವ್ಯ: ಪದನಿರುಕ್ತ

ಡಾ.ಜಿ.ಕೃಷ್ಣಪ್ಪ

ವಂಶಿ ಪಬ್ಲಿಕೇಷನ್ಸ್, ಬೆಂಗಳೂರು

ಪುಟ: 512

ಬೆಲೆ: ರೂ 480

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.