ಮಕ್ಕಳ ಸಾಹಿತ್ಯದ ಅತ್ಯುತ್ತಮ ಕೃತಿಗಳಲ್ಲಿನ ಸಾಮಾನ್ಯ ಅಂಶಗಳು ಎರಡು: ಮನರಂಜನೆ ಹಾಗೂ ಮನೋವಿಕಾಸ. ಅವುಗಳ ನಂತರದ ಸ್ಥಾನ ನೀತಿಬೋಧನೆ. ರಂಜನೆ ಹಾಗೂ ವಿಕಾಸ ಮುನ್ನೆಲೆಯಲ್ಲಿನ ಅಂಶಗಳಾಗಿದ್ದು, ನೀತಿಬೋಧನೆ ಪರೋಕ್ಷ ಆಶಯವಷ್ಟೇ ಆಗಿರುತ್ತದೆ. ವಿಪರ್ಯಾಸದ ಸಂಗತಿಯೆಂದರೆ, ಮಕ್ಕಳ ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಇಂದಿನ ಬಹುತೇಕ ಸಾಹಿತ್ಯ ನೀತಿಬೋಧನೆಯನ್ನೇ ನೆಚ್ಚಿಕೊಂಡಿವೆ. ಈ ಕೃತಿಗಳು, ಹಿರಿಯರು ಮೂಲೆಗುಂಪು ಮಾಡಿದ ಮೌಲ್ಯಗಳನ್ನು ಮಕ್ಕಳ ಮೇಲೆ ಹೇರುವ ಚಪಲದಂತೆ ಕಾಣಿಸುತ್ತವೆ. ಇಂಥ ಚಪಲದಿಂದ ಹೊರತಾದ, ಮಕ್ಕಳ ಸಾಹಿತ್ಯ ರಚನೆಯಲ್ಲಿ ಬದ್ಧತೆಯುಳ್ಳ ಕೆಲವು ಬರಹಗಾರರೂ ಇದ್ದಾರೆ. ಅಂಥ ಮಹತ್ವಾಕಾಂಕ್ಷೆಯ ಬರಹಗಾರರಲ್ಲೊಬ್ಬರು ಗಣೇಶ ಪಿ. ನಾಡೋರ.

ಗಣೇಶ ನಾಡೋರರು ಈವರೆಗೆ ಮಕ್ಕಳಿಗಾಗಿಯೇ ಹದಿನೇಳು ಕೃತಿಗಳನ್ನು ರಚಿಸಿದ್ದಾರೆ. ‘ಪುಟ್ಟ ಯಜಮಾನ’ ಅವರ ಎಂಟನೇ ಮಕ್ಕಳ ಕಾದಂಬರಿ. ಈ ಸಂಖ್ಯಾಸಮೃದ್ಧಿ ಎಳೆಯರ ಬಗೆಗಿನ ನಾಡೋರರ ಪ್ರೀತಿಗೆ ಹಾಗೂ ಮಕ್ಕಳ ಸಾಹಿತ್ಯದ ಬಗೆಗಿನ ಬದ್ಧತೆಗೆ ಉದಾಹರಣೆಯಂತಿದೆ.

‘ಪುಟ್ಟ ಯಜಮಾನ’ ಕಾದಂಬರಿ ಗಣಪತಿ ಎನ್ನುವ ಬಾಲಕನ ಓದುವ ಕನಸು ನುಚ್ಚುನೂರಾಗುವ ಕಥೆಯ ನಿರೂಪಣೆಯಾಗಿದೆ. ಲಾರಿ ಚಾಲಕನಾದ ಅಪ್ಪ ಅನಾರೋಗ್ಯದಿಂದ ಮನೆ ಸೇರಿ, ‘ಇನ್ನು ಮುಂದೆ ನಾನು ದುಡಿಯಲಾರೆ’ ಎಂದು ಹೇಳುವುದರೊಂದಿಗೆ ಕಥೆ ಶುರುವಾಗುತ್ತದೆ. ಅಪ್ಪ ದುಡಿಮೆಗೆ ಬೆನ್ನುಹಾಕಿದ್ದು ಮಗನ ಬದುಕಿನ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಗಣಪತಿಯ ನಡಿಗೆ ಶಾಲೆಯ ಹಾದಿಯಿಂದ ದುಡಿಮೆಯ ದಾರಿಯತ್ತ ಹೊರಳಿಕೊಳ್ಳುವುದರೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ. ಮಗನನ್ನು ತಿದ್ದಬೇಕಾದ ಅಪ್ಪನಿಗಿಲ್ಲದ ಅರಿವು ಹಾಗೂ ಜವಾಬ್ದಾರಿಯನ್ನು ಹದಿನಾಲ್ಕರ ಪ್ರಾಯದ ಹುಡುಗ ವ್ಯಕ್ತಪಡಿಸುವ ಕಾರಣದಿಂದಾಗಿ, ‘ಪುಟ್ಟ ಯಜಮಾನ’ ಎನ್ನುವ ಶೀರ್ಷಿಕೆ ಧ್ವನಿಪೂರ್ಣವಾಗಿದೆ.

ಓದಲು ಹಂಬಲವಿರುವ ಮಕ್ಕಳ ಬದುಕು ಬಡತನದ ಕಾರಣದಿಂದಾಗಿ ದುಡಿಮೆಗೆ ತೆರೆದುಕೊಳ್ಳುವ ವಿಪರ್ಯಾಸದ ಕಥನ, ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಓದುಗರ ಗಮನಸೆಳೆಯುತ್ತದೆ. ಆದರೆ, ಸಮಸ್ಯೆಯನ್ನು ಚಿತ್ರಿಸುವುದಷ್ಟೇ ಕಾದಂಬರಿಕಾರರ ಉದ್ದೇಶವಾಗಿಲ್ಲ. ಬದುಕಿನ ಸೊಗಸು ಹಾಗೂ ಕರಾಳಮುಖ ಎರಡನ್ನೂ ಚಿತ್ರಿಸುವ ಪ್ರಯತ್ನ ಅವರದಾಗಿದೆ. ಕೋಳಿ ಊಟದ ಪ್ರಸಂಗಗಳು, ಹಣ್ಣುಗಳನ್ನು ಹುಡುಕಿಕೊಂಡು ಕಾಡಿಗೆ ಹೋಗುವುದು, ಗಿಣ್ಣಿನ ಸವಿ, ಗ್ರಹಣದ ಆತಂಕ - ಇವೆಲ್ಲ ಮಾಹಿತಿಯ ಹಂತದಲ್ಲಷ್ಟೇ ಉಳಿಯದೆ, ಮನುಷ್ಯನ ಅಂತರಂಗಕ್ಕೆ ಕನ್ನಡಿಹಿಡಿಯುವ ಪ್ರಸಂಗಗಳಾಗಿವೆ. ಕೋಳಿಯನ್ನು ಮಕ್ಕಳು ಶುಚಿ ಮಾಡುವುದು ಹಾಗೂ ಗಿಣ್ಣಿನ ಕುರಿತ ಪ್ರಸಂಗಗಳು ಆಹಾರ ಸಂಸ್ಕೃತಿಯನ್ನು ಸೊಗಸಾಗಿ ಪರಿಚಯಿಸುತ್ತವೆ. ಕೋಳಿಯೂಟವನ್ನು ತನ್ನ ಮಕ್ಕಳಿಗಷ್ಟೇ ಉಣಬಡಿಸುವ ಅಮ್ಮ ಇಲ್ಲಿದ್ದಾಳೆ. ಅವಳ ಈ ಮನೋಭಾವವನ್ನು ಸಣ್ಣತನ ಎನ್ನಬಹುದಾದರೂ, ಆ ಸಂಕುಚಿತ ಮನೋಭಾವ ಬಡತನದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಸಾಧ್ಯತೆಯನ್ನು ಮರೆಯಬಾರದು. ಸೂರ್ಯಗ್ರಹಣದ ಪ್ರಕ್ರಿಯೆ ಗಣಪತಿಯ ತಾಯಿಯ ಬದುಕಿಗೂ ಗ್ರಹಣ ಹಿಡಿದಿರುವುದನ್ನು ಸೂಚಿಸುತ್ತದೆ. ಇಂಥ ಸಾಧ್ಯತೆಗಳೇ ‘ಪುಟ್ಟ ಯಜಮಾನ’ ಕೃತಿಗೆ ಹೊಳಪನ್ನು ತಂದುಕೊಟ್ಟಿವೆ. ನಾಡೋರರ ಭಾಷೆ ಸರಳವಾದುದು. ಮಕ್ಕಳ ನಾಲಗೆಗೆ ಒಗ್ಗುವಂತಹದ್ದು.

ರಾಮಾಯಣ, ಮಹಾಭಾರತ, ಪಂಚತಂತ್ರ, ಈಸೋಪನ ಕಥೆಗಳಾಚೆಗೆ ಮಕ್ಕಳ ಜಗತ್ತನ್ನು ವಿಸ್ತರಿಸುವ ಹಂಬಲವನ್ನು ತಮ್ಮ ಕಾದಂಬರಿಯ ಹಿನ್ನೆಲೆಯಲ್ಲಿ ಹೊಂದಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ. ಮುನ್ನುಡಿ, ಬೆನ್ನುಡಿಕಾರರು ಕೂಡ ನಾಡೋರರ ಕೃತಿಯಲ್ಲಿ ಹೊಸ ಪ್ರಯತ್ನವನ್ನು ಕಂಡಿದ್ದಾರೆ. ಈ ಪ್ರವೇಶಿಕೆಗಳು ಹಾಗೂ ಕೃತಿಯ ಕಥನ, ಗಣಪತಿಯ ಬದುಕಿನ ಮೂಲಕ ಕಾದಂಬರಿಕಾರರು ಹೇಳಲು ಪ್ರಯತ್ನಿಸುತ್ತಿರುವುದೇನು ಎನ್ನುವ ಪ್ರಶ್ನೆಗೆ ಆಸ್ಪದ ಕಲ್ಪಿಸುತ್ತವೆ.

ತಂದೆ- ತಾಯಿಯ ಹಳಸಿದ ದಾಂಪತ್ಯ ಹಾಗೂ ಅಪ್ಪನ ಅನೈತಿಕ ಸಂಬಂಧ ಗಣಪತಿಯ ಗಮನಕ್ಕೆ ಬರುತ್ತದೆ. ಅಪ್ಪನ ಕುಡಿತದ ಸಾಹಸಕ್ಕೆ ಮಗ ಸಾಕ್ಷಿಯಾಗುತ್ತಾನೆ. ದೊಡ್ಡಪ್ಪನ ಸಾವಿನ ಸಂದರ್ಭದಲ್ಲಿನ ಅತಿರೇಕದ ಅಳುವಿನಿಂದಾಗಿ ಅಮ್ಮನನ್ನು ಮಗ ಶಂಕಿಸುವಂತಾಗುತ್ತದೆ. ಇಂಥ ಸನ್ನಿವೇಶಗಳ ಮೂಲಕ ಕಾದಂಬರಿಕಾರರು ಹೇಳಲು ಪ್ರಯತ್ನಿಸುವುದೇನು? ‘ಮಕ್ಕಳಿಗೆ ಅವರು ಬದುಕುತ್ತಿರುವ ಲೋಕದ ಅನುಭವಗಳಿಗೆ ಅವರು ತೆರೆದುಕೊಳ್ಳುವಂತೆ ಮಾಡುವುದು ಇಂದು ಅಗತ್ಯವಾಗಿದೆ’ ಎನ್ನುವ ಮುನ್ನುಡಿಕಾರರ ಮಾತಿನ ಬೆಳಕಿನಲ್ಲಿ ಕಾದಂಬರಿ ಓದಿದರೂ, ಸಮಾಜದಲ್ಲಿನ ಕಹಿಗಳನ್ನು ಮಕ್ಕಳಿಗೆ ಪರಿಚಯಿಸುವುದರಿಂದ ಅವರ ಮನಸ್ಸನ್ನು ರಾಡಿಗೊಳಿಸಿದಂತಾಗುವುದಿಲ್ಲವೇ ಎನ್ನುವ ಪ್ರಶ್ನೆ ಕೊನೆಗೆ ಉಳಿದುಬಿಡುತ್ತದೆ.

ಮಕ್ಕಳ ಕಣ್ಣಿನ ಮೂಲಕ ಸಮಾಜದ ದುರ್ಬರ ಸಂಗತಿಗಳನ್ನು ಅನಾವರಣಗೊಳಿಸುವುದು ಹೊಸತೇನೂ ಅಲ್ಲ. ಈ ತಂತ್ರವನ್ನು ‘ಕಾಡು’ ಕಾದಂಬರಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿಯವರು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.

‘ಪುಟ್ಟ ಯಜಮಾನ’ ಕಾದಂಬರಿಗೆ ಸಂಬಂಧಿಸಿದಂತೆ ಪ್ರಶ್ನೆ ಇರುವುದು, ‘ಮಕ್ಕಳ ಕಾದಂಬರಿ’ ಹೆಸರಿನಲ್ಲಿ ಎಳೆಯರ ಲೋಕಕ್ಕೆ ಹೊರತಾದ ಸಂಗತಿಗಳನ್ನು ಚಿತ್ರಿಸುವುದರ ಔಚಿತ್ಯದ ಬಗ್ಗೆ. ಈ ಬಗೆಯ ಚಿತ್ರಣ ಮಕ್ಕಳ ಸಾಹಿತ್ಯದ ಮೂಲ ಉದ್ದೇಶವಾದ ಮನರಂಜನೆ-ಮನೋವಿಕಾಸದ ಬದಲಿಗೆ ಮನೋಕ್ಲೇಶವನ್ನೇ ಹೆಚ್ಚು ಉಂಟುಮಾಡುತ್ತದೆ.

ಪುಟ್ಟ ಯಜಮಾನ

ಲೇ: ಗಣೇಶ ಪಿ. ನಾಡೋರ

ಪು: 108; ಬೆ: ರೂ. 90

ಪ್ರ: ಲಡಾಯಿ ಪ್ರಕಾಶನ, ಗದಗ, ಫೋನ್: 94802 86844.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.