ಈ ಕೃತಿ ಮಾನವಿಕ ಅಧ್ಯಯನಗಳು ಕಳೆದ ಒಂದೆರಡು ದಶಕಗಳಿಂದ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ‘ಲೋಕ ಭಿತ್ತಿ’ಗೆ ಅತ್ಯುತ್ತಮ ಮಾದರಿಯಾಗಿದೆ. ಮಾನವಿಕ ಅಧ್ಯಯನಗಳು ಅಂತರ್‌ಶಿಸ್ತೀಯ, ಬಹುಶಿಸ್ತೀಯ ಎನ್ನುವ ಆಯಾಮಗಳನ್ನು ಇನ್ನೂ ವಿಸ್ತರಿಸಿಕೊಂಡು ಲೋಕ ಸಮಸ್ತವನ್ನೂ ಒಳಗೊಂಡು ತಮ್ಮ ತಾತ್ವಿಕತೆಯನ್ನು ಗಟ್ಟಿಗೊಳಿಸಿಕೊಳ್ಳುವ, ಸೂಕ್ಷ್ಮಗೊಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿವೆ. ಯಾವ ಕ್ಷೇತ್ರವೂ ವರ್ಜ್ಯವಲ್ಲ ಅಥವಾ ಅವುಗಳು ಸಮಾನಾಂತರವಾಗಿಯೂ ಇರಬೇಕಾಗಿಲ್ಲ. ಅವು ಒಂದಕ್ಕೊಂದು ಪೂರಕವಾಗಬಲ್ಲವು ಎನ್ನುವುದನ್ನು ನಂಬಿರುವ ನಿಲುವು ಇದು. ವರ್ತಮಾನದ ಇತಿಹಾಸ ಮಾತ್ರವಲ್ಲದೆ ಇತಿಹಾಸದ ವರ್ತಮಾನವು, ಈ ಎರಡರಿಂದ ಕಾಣಿಸುವ ಭವಿಷ್ಯದ ಹೊಳಹುಗಳನ್ನು ಈ ಸಮಗ್ರತೆ ಅಥವಾ ಅಖಂಡ ತಾತ್ವಿಕತೆಯಿಂದ ಸಾಧ್ಯವಾಗಬಲ್ಲದು ಎನ್ನುವುದನ್ನು ಈ ಮಾದರಿಯ ಅಧ್ಯಯನಗಳು ಸಾಬೀತು ಪಡಿಸುತ್ತಿವೆ.

ಚೆನ್ನಿಯವರ ಈ ಕೃತಿಯಲ್ಲಿ ಅಂಬೇಡ್ಕರ್ ಮತಾಂತರದ ಪ್ರಶ್ನೆಗಳು, ತೇಲ್ತುಂಬ್ಡೆಯವರ ಮಹಾಡ್ ವ್ಯಾಖ್ಯಾನದ ಮಗ್ಗುಲಲ್ಲೇ ಬೇಂದ್ರೆ ಕಾವ್ಯದ ಅಭ್ಯಾಸದ ಕೆಲವು ಟಿಪ್ಪಣಿಗಳು ಬರುವುದು ಆಕಸ್ಮಿಕವೂ ಅಲ್ಲ, ಭಿನ್ನ ರುಚಿಯದ್ದೂ ಅಲ್ಲ. ಅವುಗಳ ನಡುವೆ ಜೈವಿಕ ಸಂಬಂಧವಿದೆಯೆಂದೇ ಅವು ಒಂದೇ ಹೆಣಿಗೆಯಲ್ಲಿ ಸೇರಿಕೊಂಡಿವೆ.

ಇಲ್ಲಿನ ಬರಹಗಳ ಹಿಂದಿನ ಮನಸ್ಥಿತಿ ಚೆನ್ನಿಯವರ ಸ್ಥಾಯಿಭಾವವೆಂದರೂ ನಡೆಯುತ್ತದೆ. ಸಾರ್ವಜನಿಕ ಬುದ್ಧಿಜೀವಿಯು ತಮ್ಮ ಪಾತ್ರ ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಇರಾದೆ ಅವರಿಗೆ ಇಲ್ಲ ಎಂದೇ ಈ ಬರವಣಿಗೆ ಅವರಿಂದ ಸಾಧ್ಯವಾಗಿದೆ.

‘ಮನಸ್ಸಿನಿಂದ ಜಾತಿ, ಅಸ್ಪೃಶ್ಯತೆ ಇವುಗಳನ್ನು ತೊಡೆದುಹಾಕಲಾಗದ ಸಮುದಾಯವು ಹಿಂದುತ್ವದ ವಿರೋಧಿಗಳೆಂದು ‘ಇತರ’ರನ್ನು ಕಲ್ಪಿಸಿ ಅವರ ಮೇಲೆ ದಾಳಿ ಮಾಡುವಾಗ ಯಾವ ನೈತಿಕ ಪ್ರತಿರೋಧವನ್ನು ತೋರಬಲ್ಲದು? ಬಂಡವಾಳಶಾಹಿಯು ತನ್ನ ಯಾವ ಸ್ವರೂಪದಲ್ಲಿಯೂ ಸಮಾನತೆಯನ್ನು ಬೆಂಬಲಿಸಲಾರದು ಎಂದು ಗೊತ್ತಿರುವಾಗ ಅದರಿಂದ ಪ್ರೇರಿತವಾದ ಪ್ರಗತಿ, ಅಭಿವೃದ್ಧಿಗಳು ನಮಗೆ ಆಪ್ಯಾಯಮಾನವಾಗಿ ಕಂಡರೆ ಪರಿಹಾರವು ಎಲ್ಲಿಂದ ಬರಬೇಕು?’

ಇದು ವ್ಯಕ್ತಿಗಳಲ್ಲ, ಒಟ್ಟಾಗಿ ಸಮುದಾಯವೇ ಹಾಕಿಕೊಳ್ಳಬೇಕಾದ ಅಪ್ರಿಯ ಪ್ರಶ್ನೆಯಾಗಿದೆ. ನಮ್ಮ ದ್ವಂದ್ವಗಳು ಆಯ್ಕೆಯ ಪ್ರಕ್ರಿಯೆಯನ್ನು ಇನ್ನೂ ಸಂಕೀರ್ಣಗೊಳಿಸಿರುವುದು ಮಾತ್ರ ಸಮಸ್ಯೆಯಲ್ಲ, ಅವು ಒಂದಕ್ಕೊಂದು ತಳುಕು ಹಾಕಿಕೊಂಡಿರುವ ಸಂಗತಿಯನ್ನು ನಾವು ಅರ್ಥ ಮಾಡಿಕೊಳ್ಳದೇ ಹೋದರೆ ಎದುರಾಗುವ ದುರ್ದಮ್ಯ ವಾಸ್ತವನ್ನು ಕುರಿತ ಆತಂಕ ಇಲ್ಲಿನ ಎಲ್ಲ ಬರೆಹಗಳಲ್ಲೂ ಕಾಣುತ್ತದೆ.

ಈ ಕೃತಿಯನ್ನು ‘ಆಪತ್ಕಾಲೀನ ಕೃತಿ’ ಎಂದು ನೋಡುವುದು ಸರಿ. ತುರ್ತು ಪರಿಸ್ಥಿತಿಯ ಈ ಕಾಲಕ್ಕೆ ಯಾರು ಹೊಣೆ ಎನ್ನುವುದರ ಶವಪರೀಕ್ಷೆಯಾಗಲು ಸಾಧ್ಯವಿಲ್ಲ; ಅದು ಅದರ ಶಕ್ತಿಯನ್ನು ಇನ್ನೂ ಹೆಚ್ಚಿಸಿಕೊಳ್ಳುತ್ತಲೇ ಇರುವುದರಿಂದ. ಅಂಬೇಡ್ಕರ್ ಎದುರಿಸಿದ ಮತಾಂತರದ ಸವಾಲುಗಳನ್ನು, ಮಹಾಡ್ ಕೆರೆಯನ್ನು ಕುರಿತ ತೇಲ್ತುಂಬ್ಡೆಯವರ ಅಧ್ಯಯನಗಳನ್ನು ನಾವು ಹೊರಗಿನಿಂದ ಅಭ್ಯಾಸ ಮಾಡುವುದಲ್ಲ, ಅವು ಒಳಗಿನಿಂದ ನಮ್ಮ ವರ್ತಮಾನವನ್ನು ಎದುರಿಸಲು ಬೇಕಾಗುವ ನೋಟಗಳನ್ನು, ಹತ್ಯಾರಗಳನ್ನು ಹೇಗೆ ಒದಗಿಸಿಕೊಡುತ್ತವೆ ಎಂಬುದನ್ನು ದಕ್ಕಿಸಿಕೊಳ್ಳಬೇಕು ಎನ್ನುವುದನ್ನು ಚೆನ್ನಿಯವರು ಚರ್ಚಿಸುತ್ತಾ ಹೋಗುತ್ತಾರೆ.

ಈ ದೃಷ್ಟಿಯಿಂದ ವೈದಿಕ ದರ್ಶನದ ವಕ್ತಾರರೆಂದು ಆರಂಭದಲ್ಲಿ ದೂರವಿಟ್ಟಿದ್ದ ಬೇಂದ್ರೆಯವರು ಅವರ ಕಾವ್ಯದ ಅವಿಚ್ಛಿನ್ನ ಭಾಗವಾಗಿರುವ ಪ್ರತಿಭಟನೆ, ಅಂತಃಕರಣದ ಕಾರಣಕ್ಕೆ ಇವತ್ತಿನ ಇತಿಹಾಸಕ್ಕೆ ಅಗತ್ಯವೂ ಅನಿವಾರ್ಯವೂ ಆಗುತ್ತಾರೆ. ಸರಳವಾದ ‘ಕರಿಮರಿ ನಾಯಿ’ ನಾಗರಿಕತೆಯ ವಿಕಾರವನ್ನು ಕುರಿತ ಪ್ರತಿಭಟನೆಯ ಸಂಕೇತವಾಗುತ್ತಾ ಹೋಗುತ್ತದೆ. ಷೇಕ್ಸ್‌ಪಿಯರನ ಕ್ಯಾಲಿಬನ್ ಘನ ರೂಪಕದಂತೆ ಕಾಣಿಸುತ್ತಾನೆ. ‘ನೀನು ನನಗೆ ಭಾಷೆಯನ್ನು ಕಲಿಸಿದೆ, ಅದರ ಪ್ರಯೋಜನವೆಂದರೆ, ಅದರಲ್ಲಿ ನಾನು ನಿನ್ನನ್ನೂ ಶಪಿಸಬಲ್ಲೆ’ ಎನ್ನುವ ಮಾತಿನ ಧ್ವನಿ ನಮ್ಮ ಸಂದರ್ಭವನ್ನು ಅದೆಷ್ಟು ಬಗೆಗಳಲ್ಲಿ ಅನುರಣಿಸುತ್ತದೆ ಎನ್ನುವುದನ್ನು ಹೇಳುತ್ತಲೇ ಈ ಕೃತಿ ಇದರ ಸಾಮಾಜಿಕ, ಸಾಂಸ್ಕೃತಿಕ ಎಳೆಗಳನ್ನು ಇದಕ್ಕೆ ಜೋಡಿಸಿ ಅದನ್ನು ಈ ಕಾಲದ ವ್ಯಾಖ್ಯಾವಾಗಿಸುತ್ತದೆ.

ಗೇಲ್ ಆಮ್ ವೆಟ್ ಮತ್ತು ಪಂಡಿತ ರಮಾಬಾಯಿಯವರನ್ನು ಕುರಿತ ಲೇಖನಗಳು, ವಿಠಲ್ ಭಂಡಾರಿ, ಡಿ.ಎಸ್. ನಾಗಭೂಷಣರ ವ್ಯಕ್ತಿಚಿತ್ರಗಳು, ಚಿತ್ತಾಲರ ದಿಗಂಬರ, ಅಮರೇಶ ನುಗಡೋಣಿಯವರನ್ನು ಕುರಿತ ಲೇಖನಗಳು, ಮತ ಪಂಥ, ರಾಷ್ಟ್ರೀಯತೆ , ಜಾತಿ ರಾಜಕಾರಣದ ವಿಶ್ಲೇಷಣೆ, ನಮ್ಮ ಕಾಲಕ್ಕೆ ಬೇಕಾದ ಕುವೆಂಪು ಸಂಹಿತೆ... ಈ ಲೇಖನಗಳು ಮುಖ್ಯವಾದವು.

ಚೆನ್ನಿಯವರ ಆಳವಾದ ಓದು, ಒಳಗಣ್ಣಿನಿಂದ ಅವುಗಳನ್ನು ಉದ್ದೇಶಿತ, ಮೇಲ್ನೋಟದ ಚೌಕಟ್ಟಿನಿಂದ ಆಚೆ ತಂದು ಹೊಸ ಆಯಾಮದಲ್ಲಿ ಇಡಬಲ್ಲ ಪ್ರತಿಭೆ ಈ ಎಲ್ಲವೂ ಈ ಕೃತಿಯ ಓದನ್ನು ಒಂದು ಗಾಢವಾದ ಅನುಭವವಾಗಿಸುತ್ತವೆ.

ನಿಂತ ‘ಹೆಜ್ಜೆ’ಯನ್ನು, ಆ ಹೆಜ್ಜೆಯ ಒತ್ತು, ಆ ಹೆಜ್ಜೆಯ ತಾವು, ಅದನ್ನು ಇಡುವಾಗಿನ ಮನಸ್ಥಿತಿ, ತಾನೇ ಇಟ್ಟ, ಇಡುತ್ತಿರುವ ಹೆಜ್ಜೆಯ ಗುರುತನ್ನು ಅದು ತನ್ನದಲ್ಲ ಎನ್ನುವ ಆತ್ಮವಂಚನೆಯ ನೆಲೆಗಳು, ಅಂದಿಗೂ ಇಂದಿಗೂ ಮೀರಿಕೊಳ್ಳಲಾಗದ ತರತಮದ ಉಸುಕಿನಲ್ಲಿ ಕುಸಿಯುತ್ತಲೇ ಇರುವ ಸಮುದಾಯದ ಕುಸಿತವನ್ನು, ತಾನೂ ಇದರ ಒಂದು ಭಾಗ ಎನ್ನುವ ಶೋಧದಲ್ಲಿ, ಪ್ರಾಮಾಣಿಕತೆ ಮತ್ತು ಸ್ವಪ್ರಮಾಣದಲ್ಲಿ ಕಾಣುವ ಮನಸ್ಥಿತಿ ಇಂದಿನ ಅಗತ್ಯವೆಂದೇ ನನ್ನ ಮಟ್ಟಿಗೆ ಇದು ನಮ್ಮ ಕಾಲದ ಮುಖ್ಯವಾದ ನಿರೂಪಣೆಗಳಲ್ಲಿ ಒಂದು ಎನ್ನಿಸುತ್ತದೆ. ⇒

ಸಾಂಸ್ಕೃತಿಕ ರಾಜಕೀಯ: ಇಂದಿನ ಇತಿಹಾಸ

ಲೇ: ರಾಜೇಂದ್ರ ಚೆನ್ನಿ

ಪ್ರ: ಅಭಿರುಚಿ ಪ್ರಕಾಶನ

ಸಂ: 9980560013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.