‘ಫೀಪೋ’ ಸಂಕಲನದ ಮೊದಲನೇ ಕಥೆಯ ಹೆಸರು ‘ಒಂದು ಅ–ಸಹ್ಯ ಕತೆ’. ‘ಅಸಹ್ಯ’ ಎಂಬ ಶಬ್ದವನ್ನು ಒಡೆದು ಸಹ್ಯವೂ ಅಸಹ್ಯವೂ ಎರಡೂ ಆಗಿ ಕಾಣುವ ಹಾಗೆ ಮಾಡಿದ ಚಮತ್ಕಾರ ಇಲ್ಲಿದೆ. ಶೀರ್ಷಿಕೆಯ ಅರ್ಥಸಾಧ್ಯತೆಗಳ ಆಚೆಗೆ, ಶೀರ್ಷಿಕೆಯಲ್ಲಿನ ಈ ಚಮತ್ಕಾರವೂ ಇಡೀ ಕಥೆಗೆ ಹೊಂದುವಂತಿದೆ. ಯಾಕೆಂದರೆ ಈ ಇಡೀ ಕಥೆಯಲ್ಲಿಯೂ ಕತೆಗಾರನ ಬೌದ್ಧಿಕ ಚಮತ್ಕಾರವೇ ಮುನ್ನೆಲೆಯಲ್ಲಿದೆ.

ಈ ಸಂಕಲನಕ್ಕೆ ‘ಹೊಸ ರೀತಿಯ ಕಥೆಗಳ ಗುಚ್ಛ’ ಎಂಬ ಅಡಿಟಿಪ್ಪಣಿಯೂ ಇದೆ. ಆದರೆ, ಕನ್ನಡಕ್ಕೆ ಈ ಕಥೆಗಳು ಹೊಸ ರೀತಿಯವೇನೂ ಅಲ್ಲ. ಹೊಸ ರೀತಿಯ ಕಟ್ಟೋಣವೇ ಕಥೆಯ ಯಶಸ್ಸಿನ ಸೂಚನೆಯೂ ಅಲ್ಲ. ಇದಕ್ಕೆ ಉದಾಹರಣೆಯಾಗಿ ‘ಫೀಫೋ’ ಸಂಕಲನದ ಕಥೆಗಳನ್ನೇ ಗಮನಿಸಬಹುದು. ಇಲ್ಲಿನ ಮೊದಲ ಆರು ಕಥೆಗಳಲ್ಲಿ ತೀರಾ ಹೊಸ ಬಗೆ ಕಾಣಿಸದಿದ್ದರೂ, ಹಳೆಯದನ್ನು, ರೂಢಿಯಲ್ಲಿರುವುದನ್ನು ಮುರಿಯುವ ಹಂಬಲವಂತೂ ಕಾಣಿಸುತ್ತದೆ. ಆ ಹಂಬಲದಲ್ಲಿ ಕತೆಗಾರ ವಾಸ್ತವದಿಂದ ಚಂಗನೆ ಅತಿವಾಸ್ತವ, ಫ್ಯಾಂಟಸಿಗಳಿಗೆ ಜಿಗಿಯುವುದೂ ಇದೆ. ಆದರೆ ಹೀಗೆ ಇಲ್ಲಿಂದ ಅಲ್ಲಿಗೆ ಜಿಗಿದ ಕಥೆಗಳು ಫ್ಲೈ ಓವರ್ ವೃತ್ತಗಳಲ್ಲಿ ಹೊರಬೀಳುವ ದಾರಿ ಸಿಗದೆ ಸುತ್ತಿ ಸುತ್ತಿ ಕಂಗಾಲಾಗಿ ಗಾಡಿ ಸೈಡಿಗೆ ಹಾಕಿ ನಿಂತುಬಿಟ್ಟ ಹುಡುಗನ ಹಾಗೆ ನಿಂತುಬಿಡುತ್ತವೆ. ಇವುಗಳನ್ನು ಓಪನ್ ಎಂಡಿಂಗ್ ಎಂದು ಒಪ್ಪಿಕೊಳ್ಳುವುದೂ ಕಷ್ಟ. ಇವು ಬುದ್ಧಿಯ ಕಸರತ್ತಿನ ಹಂತ ಮೀರಿ ಹೃದಯಕ್ಕೆ ಇಳಿಯುವುದು ವಿರಳ.

ಮಧುಸೂದನ ಅವರ ನಿಜವಾದ ಕಥನಶಕ್ತಿ ಉಜ್ವಲವಾಗಿ ಬೆಳಗಿರುವುದು ‘ಕಣ್ಮಣಿಯ ಅಭಿಲಾಷೆ’ ಎಂಬ ಕಥೆಯಲ್ಲಿ. ಇದು ಈ ಸಂಕಲನದ ಅತಿ ಹೆಚ್ಚು ಯಶಸ್ವಿ ಕಥೆ.ಹೋಟ್ಲಿನ ಚಂದ್ರು ಮತ್ತು ಅಪ್ಪ ಅಮ್ಮನೊಂದಿಗೆ ಸಂತೆಗೆ ಬಂದಿರುವ ಕಣ್ಮಣಿ – ಈ ಇಬ್ಬರು ಪುಟಾಣಿಗಳು ಕಥನದ ಕೇಂದ್ರದಲ್ಲಿದ್ದಾರೆ. ಮಕ್ಕಳ ಮುಗ್ಧತೆ, ಅಪ್ಪ ಅಮ್ಮನ ಅಸಹಾಯಕತೆ, ಆ ಅಸಹಾಯಕತೆ ಹುಟ್ಟಿಸುವ ಸಣ್ಣತನಗಳು ಎಲ್ಲವೂ ಈ ಕಥೆಯಲ್ಲಿ ತುಂಬ ಸಹಜವಾಗಿ ಬಂದಿವೆ. ಭಾಷೆಯಲ್ಲಿನ ನವಿರುತನದಿಂದ ಒಂದು ಹಗುರವಾದ ವಾತಾವರಣ ನಿರ್ಮಾಣಗೊಂಡಿದೆ. ನಾವೂ ಆ ವಾತಾವರಣದ ಭಾಗವಾಗಿಯೇ ಚಂದ್ರು ನೋಡುವ ಮಾಲಾಶ್ರೀ ಪೋಸ್ಟರುಗಳನ್ನೂ, ಕಣ್ಮಣಿ ತಿನ್ನುವ ಮಸಾಲೆ ದೋಸೆಯನ್ನೂ ಆಸ್ವಾದಿಸುತ್ತೇವೆ. ಈ ಚಿತ್ರಕಶಕ್ತಿಯು ಸಾರ್ಥಕಗೊಳ್ಳುವುದು ಕೊನೆಯಲ್ಲಿ ಚಂದ್ರು–ಕಣ್ಮಣಿ ಸೇರಿಕೊಂಡು ದೊಡ್ಡವರ ಜಗಳಕ್ಕೆ ಪೂರ್ಣವಿರಾಮ ಹಾಕಲು ಕಂಡುಕೊಳ್ಳುವ ದಾರಿಯಲ್ಲಿ. ನಮ್ಮ ಹೃದಯವನ್ನು ಇನ್ನಷ್ಟು ಮೆತ್ತಗಾಗಿಸುವ, ಮಾನವೀಯಗೊಳಿಸುವ ಈ ಕಥನದ ಶಿಲ್ಪವೂ ಅಷ್ಟೇ ಗಟ್ಟಿಯಾಗಿದೆ. ಶಿಲ್ಪ ಮತ್ತು ಅದು ಹುಟ್ಟಿಸುವ ದರ್ಶನದ ದೃಷ್ಟಿಯಿಂದಲಷ್ಟೇ ಅಲ್ಲ, ಮಧುಸೂದನ ಅವರ ಕಥನಶಕ್ತಿಯು ಯಾವ ದಾರಿಯಲ್ಲಿ ಹೆಚ್ಚು ಬೆಳಗುತ್ತದೆ ಎಂಬುದನ್ನು ಅರಿತುಕೊಳ್ಳುವ ದೃಷ್ಟಿಯಿಂದಲೂ ಇದು ಮುಖ್ಯವಾದ ಕಥೆಯಾಗಿದೆ.

‘ಭವ್ಯ’ ಈ ಸಂಕಲನದ ಇನ್ನೊಂದು ಗಮನಾರ್ಹ ಕಥೆ. ನಿರೂಪಕನ ‘ಮಾಮ’ ಈ ಕಥೆಯ ಕೇಂದ್ರದಲ್ಲಿದ್ದಾನೆ. ನಾಗರಿಕ ಜಗತ್ತಿನ ಮಾನದಂಡಗಳ ಪ್ರಕಾರ ಅವನು ದಡ್ಡ, ವ್ಯವಹಾರಜ್ಞಾನ ಇಲ್ಲದವ. ಆದರೆ ಅವನದೇ ದಾರಿಯಲ್ಲಿ ತೀವ್ರವಾಗಿ ಬದುಕುತ್ತಿರುವವ. ಈ ಎರಡರ ನಡುವಿನ ಘರ್ಷಣೆಯಿಂದ ಕುಟುಂಬದಲ್ಲಿ ಉಂಟಾಗುವ ತಲ್ಲಣಗಳನ್ನು ನಿರೂಪಕ ತನ್ನ ನೆನಪಿನ ಮೂಲಕ ಚಿತ್ರಿಸುತ್ತ ಹೋಗುತ್ತಾನೆ. ಆದರೆ ಇದು ಕಥೆಗಿಂತ ಲಲಿತಪ್ರಬಂಧದ ಪ್ರಕಾರಕ್ಕೆ ಹೆಚ್ಚು ಹತ್ತಿರವಾಗಿರುವಂತಿದೆ. ಹಾಗಾಗಿಯೇ ಮಾವನ ಬದುಕಿನ ಮೂಲಕ ಒಂದು ಮನೆತನದ ಕಥೆಯನ್ನು ಹೇಳುವುದರಲ್ಲಿಯೇ ಮುಗಿದುಬಿಡುತ್ತದೆ. ನಮ್ಮ ಮನಸ್ಸಿಗೆ ತಾಕುವ ಕಥನವಾತಾವರಣ ರೂಪುಗೊಂಡಿದ್ದರೂ, ಅದರಾಚೆಗೆ ಇನ್ನೇನೋ ಆಗಬೇಕಿತ್ತು ಎಂಬ ಅತೃಪ್ತಿಯೊಂದನ್ನು ಉಳಿಸಿಬಿಡುತ್ತದೆ. ‘ಪಾದಗಳು’ ಕೂಡ ಒಂದು ನಿರ್ದಿಷ್ಟವಾದ ಕೇಂದ್ರವಿಲ್ಲದೆಯೇ ಸಡಿಲವಾಗಿ ಕಾಣಿಸುವ ಕಥೆ. ಕುಟುಂಬದೊಳಗಿನ ಒಂದು ಸಾವು ಹುಟ್ಟಿಸುವ ಪ್ರಶ್ನೆಗಳ ಮೂಲಕ ಈ ಕಥೆ ಬೆಳೆಯುತ್ತದೆ. ಆದರೆ ಆ ಸಾವು, ಅದು ಹುಟ್ಟಿಸುವ ಪ್ರಶ್ನೆಗಳು ಎಲ್ಲವೂ ಸಂಭಾಷಣೆಯ ಮೂಲಕವೇ ದಾಟುತ್ತ ಹೋಗುವುದರಿಂದ ಕೊನೆಗೂ ಅದೊಂದು ‘ಮಾತಿನ ಆಟ’ವಾಗಿ ಉಳಿದುಬಿಡುತ್ತದೆಯೇ ಹೊರತು ಅನುಭವವಾಗಿ ಮುಟ್ಟುವುದಿಲ್ಲ.

‘ಮುಸ್ಸಂಜೆಗಳಲ್ಲಿ ಜರುಗುವುದೆಲ್ಲ ಮಧುರ ಕತೆಗಳಲ್ಲ’ ಎಂಬ ಹೆಸರಿನ ಕಥೆ ತನ್ನ ಚಿತ್ರಕಶಕ್ತಿಯಿಂದ ಗಮನಸೆಳೆಯುತ್ತದೆ. ರಾತ್ರಿ ಹೊತ್ತಲ್ಲಿ ಬೀದಿಯಲ್ಲಿ ಕಾಣಿಸಿಕೊಳ್ಳುವ ಹಾವೊಂದರ ಸುತ್ತ ಈ ಕಥೆ ಬೆಳೆಯುತ್ತದೆ. ಯಾವ ದುರುದ್ದೇಶವೂ ಇಲ್ಲದ ಒಳ್ಳೆಯ ವ್ಯಕ್ತಿಗಳೇ ಒಂದು ಸಮೂಹವಾದಾಗ ಅದರಿಂದ ಹುಟ್ಟಿಕೊಳ್ಳುವ ಕ್ರೌರ್ಯವನ್ನು ಈ ಕಥೆ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಕಣಿವೆಯಲ್ಲೊಂದು ಸಂಜೆ ಮತ್ತು ಬೆಳ್ಳಿಗೆರೆ ಇವು ಪ್ರಹಸನರೂಪದ ಬರಹಗಳು. ಲಘುವಾದ ಭಾಷೆಯಲ್ಲಿ ನಕ್ಕು ಹಗುರವಾಗುವಂಥ ಪ್ರಸಂಗಗಳನ್ನು ಕಟ್ಟಿಕೊಡುವ ಇವು ಇಡೀ ಸಂಕಲನದ ಕೊನೆಯಲ್ಲಿ ಓದುಗನ ಮುಖದಲ್ಲೊಂದು ನಗುಮೂಡಿಸಲಿಕ್ಕಾಗಿಯೇ ಪವಡಿಸಿದಂತಿವೆ.

ಬೌದ್ಧಿಕ ಚಾತುರ್ಯ, ಭಾವುಕ ಪ್ರಪಂಚ ಎರಡೂ ಈ ಕತೆಗಾರರಲ್ಲಿ ತೀವ್ರವಾಗಿಯೇ ಇವೆ. ಆದರೆ ಅನುಭವವು ಕಲೆಯಾಗಿ ಅಭಿವ್ಯಕ್ತಿಗೊಳ್ಳುವುದು FIFO ಆಥವಾ LIFO ಮಾದರಿಯಲ್ಲಿ ನಡೆಯುವುದಲ್ಲ, ಅದು ಅಂಥ ಎಲ್ಲ ಮಾದರಿಗಳನ್ನೂ ಮೀರಿದ ಅನೂಹ್ಯ ಸಂಯೋಗದಲ್ಲಿ ಘಟಿಸುವಂಥದ್ದು. ಈ ಮಾತಿಗೆ ಪುಷ್ಟಿಯೊದಗಿಸುವ ಕಥೆಗಳೂ ಈ ಸಂಕಲನದಲ್ಲಿಯೇ ಇರುವುದು, ಮಧುಸೂದನ ಅವರ ಮುಂದಿನ ರಚನೆಗಳತ್ತ ನಿರೀಕ್ಷೆ ಹುಟ್ಟಿಸುವಂತೆ ಮಾಡುತ್ತವೆ.

ಕೃತಿ: ಫೀಪೋ

ಲೇಖಕರು: ಮಧುಸೂದನ ವೈ ಎನ್

ಪು: 168 ಬೆ: ₹ 200

ಪ್ರಕಾಶನ: ಬಹುರೂಪಿ (ದೂರವಾಣಿ: 7019182729)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.