‘ಪ್ರಸ್ಥಾನ’, ಇದು ಬಲವಂತದ ಒಕ್ಕಲೆಬ್ಬಿಸುವಿಕೆಯ ಸಂಕಟಗಳನ್ನು ಕಟ್ಟಿಕೊಡುವ ಕಾದಂಬರಿ. ಅಭಿವೃದ್ಧಿಯ ಹೆಸರಿನಲ್ಲಿ ಅಣೆಕಟ್ಟೆಯ ನೀರಿನಲ್ಲಿ ಶಾಶ್ವತವಾಗಿ ಮುಳುಗಿಹೋದ ಸಂಸ್ಕೃತಿಯೊಂದರ ಚಿತ್ರಣವನ್ನು ಕಾವ್ಯಸತ್ಯದ ಚೌಕಟ್ಟಿನಲ್ಲಿ, ವಾಸ್ತವಕ್ಕೆ ಕುಂದುಂಟಾಗದಂತೆ ಓದುಗರಿಗೆ ಮನದಟ್ಟು ಮಾಡಿಸುತ್ತದೆ. ಶರಾವತಿ ನದಿಗೆ ಮಡೆನೂರು ಹಾಗೂ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ಕಟ್ಟುವಾಗ ಆ ಪ್ರದೇಶದ ಜನಮಾನಸದಲ್ಲಿ ಉಂಟಾದ ತಲ್ಲಣ ಈ ಕಾದಂಬರಿಯಲ್ಲಿದೆ. ಶ್ರಮ ಸಂಸ್ಕೃತಿಯನ್ನೇ ಉಸಿರಾಗಿಸಿಕೊಂಡಿದ್ದ, ತಮ್ಮದೇ ಆದ ಪ್ರಪಂಚದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಗ್ರಾಮೀಣ ಪ್ರದೇಶದ ಜನರ ಮೇಲೆ ಅಭಿವೃದ್ಧಿಯ ಹೆಸರಿನಲ್ಲಿ ಆದ ಗದಾಪ್ರಹಾರದ ಚಿತ್ರಣ ಕಾದಂಬರಿಯಲ್ಲಿ ಹರಳುಗಟ್ಟಿದೆ.

ನದಿಗಳನ್ನೇ ಅವಲಂಬಿಸಿಕೊಂಡು ಹಲವು ನಾಗರಿಕತೆಗಳು ಬೆಳೆದಿವೆ. ಭಾರತದ ಇತಿಹಾಸದಲ್ಲಿ ನದಿ ಪಾತ್ರಗಳಿಗೆ ವಿಶೇಷ ಸ್ಥಾನವಿದೆ. ಅಂತೆಯೇ ಶರಾವತಿ ನದಿಯ ಬಲದಂಡೆ ಹಾಗೂ ಎಡದಂಡೆಗಳಲ್ಲಿ ವಾಸಿಸುತ್ತಿರುವ ಜನಜೀವನದ ಸಂಸ್ಕೃತಿಯ ಸೊಬಗು ಕಾದಂಬರಿಯಲ್ಲಿ ಮೈದಳೆದಿದೆ. ಪ್ರಕೃತಿ-ಮಾನವ, ಮನುಷ್ಯ-ಮನುಷ್ಯ, ಜನ ಹಾಗೂ ಪ್ರಾಣಿ-ಪಕ್ಷಿಗಳ ನಡುವಣ ಬಾಂಧವ್ಯವೂ ಅನಾವರಣಗೊಂಡಿದೆ. ಹರಿವ ನೀರನ್ನು ತಡೆಹಿಡಿಯುವ ಪ್ರಯತ್ನದಲ್ಲಿ ಆ ಸಂಬಂಧಗಳು ಹೇಗೆ ‘ನೀರು ಪಾಲಾದವು’ ಎಂಬುದನ್ನೂ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.

‘ಕೆಳಗಿನ ಬರುವೆ’ ಎಂಬಲ್ಲಿನ ಸೂರಯ್ಯ ಅವರ ಮಗಳ ಮದುವೆಯ ವರ್ಣನೆಯೊಂದಿಗೆ ಆರಂಭವಾಗುವ ಕಥೆಯಲ್ಲಿ, ಮಲೆನಾಡಿನ ಸಮೃದ್ಧ ಸಂಸ್ಕೃತಿಯ ಚಿತ್ರಣವಿದೆ. ಸೂರಯ್ಯನವರ ಮಗ ಗೋಪಾಲಕೃಷ್ಣ (ಗೋಪಣ್ಣ) ಉನ್ನತ ಶಿಕ್ಷಣಕ್ಕೆಂದು ಮೈಸೂರಿಗೆ ಹೋಗುವುದು, ಅಲ್ಲಿ ಶಂಕರರಾಯರು ಎಂಬ ಸರ್ಕಾರಿ ನೌಕರರೊಬ್ಬರ ಮನೆಯಲ್ಲಿ ಅತ ಉಳಿದುಕೊಳ್ಳುವುದು, ಅವರ ಮಗಳನ್ನೇ ಮದುವೆಯಾಗುವುದು, ನಂತರ ತಮ್ಮದೇ ಊರಿನ ಇತರ ಯುವಕರ ಉನ್ನತ ಶಿಕ್ಷಣಕ್ಕೂ ನೆರವಾಗುವುದು ಗ್ರಾಮೀಣ ಜನರ ಪರೋಪಕಾರದ ಮನೋಭಾವಕ್ಕೆ ಹಿಡಿದ ಕನ್ನಡಿ. ಮತ್ತೊಂದೆಡೆ ಎಲ್ಲಿಂದಲೋ ‘ಬರುವೆ’ಗೆ ಬಂದು ಜೊತೆಯಾದ ‘ರಾಮಣ್ಣ’ನನ್ನು ತಮ್ಮದೇ ಮಗನಂತೆ ಸೂರಯ್ಯನವರು ಕಾಣುವುದು, ತಮ್ಮ ಆಸ್ತಿಯಲ್ಲಿ ಒಂದು ಭಾಗವನ್ನು ಆತನಿಗೇ ನೀಡುವುದು, ಗ್ರಾಮೀಣ ಜನರು ಮನುಷ್ಯ ಸಂಬಂಧಗಳನ್ನು ಕಾಣುವ ರೀತಿಗೆ ದ್ಯೋತಕ. ಮಾನವ ಮತ್ತು ಪ್ರಾಣಿ ಜಗತ್ತಿನ ಸಂಬಂಧ ಕೂಡ ಕಾದಂಬರಿಯಲ್ಲಿ ಅತ್ಯಂತ ಮಾರ್ಮಿಕವಾಗಿ ನಿರೂಪಣೆಗೊಂಡಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮ ಗಾಂಧಿ ಪ್ರಣೀತ ಚಳವಳಿಗಳು ಗ್ರಾಮೀಣ ಬದುಕಿನ ಮೇಲೆ ಬೀರಿದ ಪರಿಣಾಮವನ್ನೂ ಕಾದಂಬರಿಯಲ್ಲಿ ಕಾಣಬಹುದು. ಮಡೆನೂರಿಗೆ ಅಣೆಕಟ್ಟೆ ಕಟ್ಟುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಸೂರಯ್ಯನವರ ನೇತೃತ್ವದಲ್ಲಿ ಆರಂಭವಾದ ಚಳವಳಿ ಇದಕ್ಕೆ ಸಾಕ್ಷಿ. ಅಣೆಕಟ್ಟೆ ನಿರ್ಮಾಣವಾಗುವುದನ್ನು ತಡೆಯುವುದು ಸಾಧ್ಯವಾಗುವುದಿಲ್ಲ ಎಂಬುದು ಅರಿವಿಗೆ ಬರುತ್ತಿದ್ದಂತೆ ಪರಿಹಾರಕ್ಕಾಗಿ ನಡೆಸುವ ಹೋರಾಟ ಆಡಳಿತವರ್ಗದ ಮತ್ತೊಂದು ಮುಖವನ್ನು ಬಯಲಾಗಿಸಿದೆ. ಹತ್ತಾರು ವರ್ಷಗಳಿಂದ ತಾವು ಬಾಳಿಬದುಕಿರುವ ಮನೆ, ಜಮೀನು ತೊರೆದು ಹೋಗುವಾಗಲೂ ಅದಕ್ಕೆ ಪರಿಹಾರ ಪಡೆಯಬೇಕಿದ್ದರೆ ಅಧಿಕಾರಿಗಳಿಗೆ ಲಂಚ ನೀಡಬೇಕಾದುದು, ಅವರನ್ನು ಓಲೈಸಬೇಕಾದುದು ಗ್ರಾಮೀಣ ಜನರಿಗೆ ನುಂಗಲಾರದ ತುತ್ತಾಗುತ್ತದೆ.

ತಲೆತಲಾಂತರದಿಂದ ತಮ್ಮ ಪೂರ್ವಜರು ಅನುಭವಿಸಿದ್ದ, ಇಡೀ ಜೀವನಕ್ಕೆ ಆಧಾರವಾದ ಮನೆ, ಕೃಷಿ ಭೂಮಿಯನ್ನು ಬಿಟ್ಟು ಹೋಗಲಾರದೆ ಕೆಲವು ಹಿರಿಯ ಜೀವಗಳು ಸಂಕಟಪಟ್ಟು ಮರಣ ಹೊಂದಿದ ಘಟನೆಗಳು ಕಣ್ಣುಗಳನ್ನು ಮಂಜಾಗಿಸುತ್ತವೆ. ಹರದೂರು ದುರ್ಗಾ ದೇವಸ್ಥಾನ, ಅನೇಕ ಐತಿಹಾಸಿಕ ಶಾಸನಗಳು ಹಾಗೂ ಸ್ಮಾರಕಗಳು ಅಣೆಕಟ್ಟೆಯ ನೀರಿನಲ್ಲಿ ಮುಳುಗಡೆಯಾಗಿರುವುದರ ಉಲ್ಲೇಖ ಇತಿಹಾಸದ ದೃಷ್ಟಿಯಿಂದಲೂ ಗಮನಾರ್ಹ. ಈ ಎಲ್ಲ ಬೆಳವಣಿಗೆಗಳ ನಡುವೆ ಎತ್ತಿನ ಬಂಡಿಯಲ್ಲಿ ಓಡಾಡುತ್ತಿದ್ದ ಜನ ಬೈಸಿಕಲ್ ಕಂಡು ಅಚ್ಚರಿಪಡುವುದು, ಕ್ರಮೇಣ ರೈಲು, ಬಸ್ಸು ಪ್ರಯಾಣದತ್ತ ಮುಖ ಮಾಡುವುದು, ಕಾರನ್ನು ಅವಲಂಬಿಸುವುದು ನಡೆಯುತ್ತದೆ. ದೋಣಿ ನಡೆಸಿಯೇ ಜೀವನ ಸಾಗಿಸುತ್ತಿದ್ದ ‘ದುಗ್ಗಣ್ಣ' ಅಣೆಕಟ್ಟೆಯ ಮೇಲೆ ಸಂಚಾರ ಆರಂಭವಾದಾಗ ಕೆಲಸವಿಲ್ಲದೆ ಸಾಗರಕ್ಕೆ ಹೋಗಿ ಕಡಲೆ ಮಾರಾಟ ಮಾಡಬೇಕಾಗುತ್ತದೆ. ಈ ಮಧ್ಯೆ, ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆಯುತ್ತದೆ. ಕಾದಂಬರಿಯಲ್ಲಿ ಬರುವ ಈ ಎಲ್ಲ ಘಟನಾವಳಿಗಳು ಜಗತ್ತು ನಿಧಾನವಾಗಿ ಬದಲಾಗುತ್ತಾ ಬಂದುದರ ದಾಖಲೆ.

ಅಭಿವೃದ್ಧಿ ಹೆಸರಿನಲ್ಲಿ ಅಣೆಕಟ್ಟೆ ರೂಪುಗೊಂಡಾಗ ಜನ ಅನುಭವಿಸುವಂತಹ ತಲ್ಲಣ, ಯಾತನೆ ಇಲ್ಲಿ ಧ್ವನಿ ಪಡೆದುಕೊಂಡಿದೆ. ಕಾದಂಬರಿಯ ಹೆಸರಿನಲ್ಲಿಯೇ ನಿರ್ಗಮನದ ನೋವೂ ಇದೆ. ಆ ನೋವೇ ಕೃತಿಯ ಸ್ಥಾಯಿಭಾವವಾಗಿ ಪ್ರತಿಪುಟದಲ್ಲಿಯೂ ಅನುರಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.