ಕಾರಣ ಯಾವುದೇ ಇರಲಿ ಇಡೀ ಜಗತ್ತು ಕ್ಲಾಸಿಕ್, ಮಹತ್ವದ ಕೃತಿ ಎಂದು ಗುರುತಿಸಿರುವ ‘ವಾರ್ ಅಂಡ್ ಪೀಸ್’ ಕಾದಂಬರಿ ಮತ್ತೊಮ್ಮೆ ಜನರ ಗಮನ ಸೆಳೆಯುತ್ತಿದೆ. ಈ ಕೃತಿಯನ್ನು ಇನ್ನಷ್ಟು ಜನರು ಓದುವಂತಾಗಲಿ ಎಂಬುದು ‘ಪ್ರಜಾವಾಣಿ’ಯ ಆಶಯವೂ ಹೌದು. ಇದೇ ಉದ್ದೇಶದಿಂದ ಮಾರ್ಚ್ 18, 2012ರಂದು ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟವಾಗಿದ್ದ ಓ.ಎಲ್.ನಾಗಭೂಷಣಸ್ವಾಮಿ ಅನುವಾದದ  ‘ಯುದ್ಧ ಮತ್ತು ಶಾಂತಿ’ ಪುಸ್ತಕ ವಿಮರ್ಶೆಯನ್ನು ಮತ್ತೊಮ್ಮೆ ಪ್ರಕಟಿಸಲಾಗಿದೆ. ಜಾಗತಿಕ ಸಾಹಿತ್ಯದ ಆಳವಾದ ಒಳನೋಟ ಹೊಂದಿರುವ ಎಸ್.ದಿವಾಕರ್ ಅವರ ಈ ಬರಹವನ್ನು ಏಳು ವರ್ಷಗಳ ನಂತರ ಓದಿದರೆ ಮತ್ತೊಂದು ಹೊಸನೋಟ ಸಿಕ್ಕೀತು.

ಇದನ್ನೂ ಓದಿ: ವಾರ್ ಅಂಡ್ ಪೀಸ್ ಪುಸ್ತಕವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಪರಾಧವೇ?

‘ಯುದ್ಧ ಮತ್ತು ಶಾಂತಿ’ ಒಂದು ಮಹಾ ಕಾದಂಬರಿ. ವಿಸ್ತೃತ ಭಿತ್ತಿಯಲ್ಲಿ, ಅತಿಸೂಕ್ಷ್ಮ ವಿವರಗಳಲ್ಲಿ, ಅಪರಿಮಿತ ವೈವಿಧ್ಯದಲ್ಲಿ, ಅಂತಿಮವಾಗಿ ಸಮಸ್ತವನ್ನೂ ಒಳಗೊಳ್ಳಬಲ್ಲ ಸಾವಯವ ಶಿಲ್ಪದಲ್ಲಿ ಈ ಕಾದಂಬರಿಗೆ ಸರಿಗಟ್ಟುವ ಇನ್ನೊಂದು ಕೃತಿ ಇಲ್ಲ. ನೆಪೋಲಿಯನ್ನನ ರಷ್ಯನ್ ಆಕ್ರಮಣಕ್ಕೆ ಕಾರಣವಾಗುವ ವರ್ಷಗಳನ್ನು ವಿವರಿಸುವ ಈ ಕಾದಂಬರಿ ಸಂಘರ್ಷಗಳಿಂದ, ಬದಲಾವಣೆಗಳಿಂದ ಜರ್ಜರಗೊಂಡ ಒಂದು ಇಡೀ ಸಮಾಜದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ.

ತನ್ನ ಮೂಲ ನೆಲೆಯಲ್ಲಿ ಒಂದು ಸ್ಥಾನ ಗಳಿಸಿಕೊಳ್ಳಬೇಕೆಂದು ಪ್ರಯತ್ನಿಸುವ ವಿಕ್ಷಿಪ್ತ ಬುದ್ಧಿಜೀವಿ ಪಿಯರೆ ಬೆಝಕೋವ್, ಆತ್ಮ-ಸಂದೇಹದಿಂದ ತೊಳಲಾಡುವ ಧೀರ ಪ್ರಭು ಪ್ರಿನ್ಸ್ ಆಂದ್ರೇಯ್, ಮರುಳುಗೊಳಿಸುವಂಥ ಚೆಲುವಿನ ಕುವರಿಯಾಗಿದ್ದು ಒಬ್ಬ ಗಂಭೀರ ಮಹಿಳೆಯಾಗಿ ಪಕ್ವಗೊಳ್ಳುವ ನತಾಶಾ- ಇವರು ಈ ಕಾದಂಬರಿಯಲ್ಲಿ ನೆಪೋಲಿಯನ್ನನಿಂದ ಹಿಡಿದು ಅತ್ಯಂತ ವಿನೀತ ರಷ್ಯನ್ ರೈತನವರೆಗೆ ಕಾಣಿಸಿಕೊಳ್ಳುವ ಅನೇಕಾನೇಕ ಪಾತ್ರಗಳ ನಡುವೆ ಪ್ರಮುಖ ಪಾತ್ರ ವಹಿಸುತ್ತಾರೆ.

ಇಲ್ಲಿ ಇಡೀ ಮಾನವಕುಲ ತನ್ನೆಲ್ಲ ಮುಗ್ಧತೆಯಲ್ಲಿ, ಭ್ರಷ್ಟತೆಯಲ್ಲಿ, ವಿವೇಕ ಅವಿವೇಕಗಳಲ್ಲಿ, ಸೋಲು ಗೆಲುವುಗಳಲ್ಲಿ ಸಾಕಾರಗೊಂಡಿದೆ.

ಇದನ್ನೂ ಓದಿ: ಕನ್ನಡದಲ್ಲಿ ‘ಬಿನ್ನಪ’ವಾಯ್ತು ಟಾಲ್ಸ್ಟಾಯ್ರ ‘ಕನ್ಫೆಶನ್’

ಟಾಲ್ಸ್ಟಾಯಿಗೆ ಕಥಾ ಸಂವಿಧಾನಕ್ಕಿಂತ ಮಿಗಿಲಾಗಿ ಜೀವ ಪ್ರಕ್ರಿಯೆಯ ಪ್ರತಿನಿಧೀಕರಣದಲ್ಲಿ ವಿಶೇಷ ಆಸಕ್ತಿಯಿತ್ತು. `ಯುದ್ಧ ಮತ್ತು ಶಾಂತಿ~ ಕಾದಂಬರಿಯಲ್ಲಿ 1805ರಿಂದ 1815ರವರೆಗಿನ ಘಟನೆಗಳ ವೃತ್ತಾಂತವಿದೆ; 1912ರಲ್ಲಿ ನೆಪೋಲಿಯನ್ ರಷ್ಯದ ಮೇಲೆ ನಡೆಸಿದ ಆಕ್ರಮಣದ ಚಿತ್ರಣವಿದೆ.

ಇವು ಸಮಾಜದ ಹಾಗೂ ರಾಜಕೀಯದ ಮಹಾ ಮೆರವಣಿಗೆಯೊಂದರ ಭವ್ಯ ಚಿತ್ರವೊಂದನ್ನು ಕಟ್ಟಿಕೊಡುವುದಲ್ಲದೆ, ಯೂರೋಪಿಯನ್ ಇತಿಹಾಸದ ಅತ್ಯಂತ ಪ್ರಕ್ಷುಬ್ಧ ಕಾಲಘಟ್ಟಗಳನ್ನು ಕೂಡ ದಾಖಲಿಸುತ್ತವೆ.

ಟಾಲ್ಸ್ಟಾಯ್ ನೆಪೋಲಿಯನ್ ಮತ್ತು ಅವನ ಸೇನಾಧಿಪತಿಗಳನ್ನು, 1ನೇ ಝಾರ್ ಅಲೆಕ್ಸಾಂದರ್ ಮತ್ತು ಅವನ ಜನರಲ್ಲುಗಳನ್ನು, ಫ್ರೆಂಚರನ್ನು ಸೋಲಿಸಿದ ಸೇನಾ ಮುಖ್ಯಸ್ಥ ಕುತುಝೋವ್ನನ್ನು ಬಣ್ಣಿಸುತ್ತಾನೆ, ನಿಜ. ಆದರೆ ಅವನು ಯುದ್ಧಗಳನ್ನು ಹಾಗೂ ಇತರ ದುರದೃಷ್ಟದ ವಿದ್ಯಮಾನಗಳನ್ನು ನಿರಂತರವಾಗಿ ಚಿತ್ರಿಸಿದರೂ ಕೂಡ ಈ ಎಲ್ಲ `ಮಹಾ~ ಘಟನೆಗಳು ಕೇವಲ ಭ್ರಮೆಗಳೆಂದೂ, ಹಮ್ಮುಬಿಮ್ಮಿನ ಅತಿರೇಕಗಳೆಂದೂ, ನಿಜಕ್ಕೂ ಮುಖ್ಯವಾದ್ದು ವ್ಯಕ್ತಿಗಳ ನೋವು, ನಲಿವು, ಸಾಹಸಗಳೆಂದೂ, ಜೀವನಚರಿತ್ರೆಯೇ ಇತಿಹಾಸಕ್ಕಿಂತ ಹೆಚ್ಚು ಚೈತನ್ಯದಾಯಕವೆಂದೂ ಪ್ರತಿಪಾದಿಸುತ್ತಿರುವಂತೆ ತೋರುತ್ತದೆ.

‘ಯುದ್ಧ ಮತ್ತು ಶಾಂತಿ’ ಒಂದು ಕುಟುಂಬದ ವೃತ್ತಾಂತ; ಜಮೀನ್ದಾರಿ ಮತ್ತು ಧನಿಕವರ್ಗಕ್ಕೆ ಸೇರಿದ ರೋಸ್ತೋವ್, ಬೆಝುಕೋವ್, ಬೋಲ್ಕೋನ್ಸ್ಕಿ ಕುಟುಂಬಗಳ ವೃತ್ತಾಂತ. ಸ್ವತಃ ಅಂಥ ವರ್ಗಕ್ಕೆ ಸೇರಿದ್ದ ಟಾಲ್ಸ್ಟಾಯಿಗೆ ಈ ಪ್ರಪಂಚ ತುಂಬ ಚೆನ್ನಾಗಿ ಗೊತ್ತಿತ್ತೆನ್ನುವುದು ಸ್ಪಷ್ಟ. ಆದ್ದರಿಂದಲೇ ಆತ್ಮ-ಚಿತ್ರಣದಲ್ಲಿ ಅವನದು ಎತ್ತಿದ ಕೈ.

ಆತ್ಮ ದರ್ಶನವನ್ನು ಪ್ರಕಾಶಪಡಿಸುವುದಕ್ಕಾಗಿಯೇ ಕಥಾ ಸಾಹಿತ್ಯವನ್ನು ಉಪಯೋಗಿಸಿಕೊಂಡ ಈತ ತನ್ನ ಕಾದಂಬರಿಗಳನ್ನು ತನ್ನದೇ ಆಂತರಿಕ ವಿಕಾಸದ ಮೈಲಿಗಲ್ಲುಗಳಾಗುವಂತೆ ರೂಪಿಸಿದವನು.

ಪರಕಾಯ ಪ್ರವೇಶದಲ್ಲಿ, ಇತರ ಜನರನ್ನು ಪ್ರತಿನಿಧಿಸುವಲ್ಲಿ ಅವನಿಗಿದ್ದ ಪ್ರತಿಭೆಯಂತೂ ಅಸಾಧಾರಣ. ಟಾಲ್ಸ್ಟಾಯಿಯ ಕಲಾತ್ಮಕ ಪ್ರತಿಭೆಯ ಬೀಸು, ವ್ಯಾಪ್ತಿ, ವೈವಿಧ್ಯ ಅದೆಷ್ಟು ವ್ಯಾಪಕವಾಗಿದೆಯೆಂದರೆ ಅವನನ್ನು ಹೋಮರ್ ಅಥವಾ ಶೇಕ್ಸ್ಪಿಯರನೊಂದಿಗೆ ಮಾತ್ರ ಹೋಲಿಸಬಹುದೇನೊ.

`ಯುದ್ಧ ಮತ್ತು ಶಾಂತಿ~ಯಲ್ಲಿ 559 ಪಾತ್ರಗಳಿವೆ. ಈ ಎಲ್ಲ ಪಾತ್ರಗಳೂ ಸುಸ್ಪಷ್ಟ ವ್ಯಕ್ತಿವಿಶೇಷಗಳಿಂದ ಕೂಡಿದ್ದು ಇವು ಭಾವನೆಗಳಿಂದ, ಆಂತರಿಕ ಆಶೋತ್ತರಗಳಿಂದ ಸಜೀವವಾಗುತ್ತವೆ; ನಿರ್ದಿಷ್ಟ ದೈಹಿಕ ಮತ್ತು ಮಾನಸಿಕ ವೈಶಿಷ್ಟ್ಯ, ವೈಚಿತ್ರ್ಯಗಳನ್ನು ಉಳಿಸಿಕೊಳ್ಳುತ್ತವೆ. ದೈಹಿಕ ಮತ್ತು ವೈಯಕ್ತಿಕ ವಿವರಗಳ ಕರಾರುವಾಕ್ಕಾದ ಚಿತ್ರಣದೊಡನೆ ಆಂತರಿಕ ಪ್ರಕ್ರಿಯೆಯನ್ನು ಸ್ಫುಟಗೊಳಿಸುವುದೇ ಟಾಲ್ಸ್ಟಾಯಿಯ ವಿಧಾನ.

ಇದನ್ನೂ ಓದಿ: ‘ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ’ ಶೀರ್ಷಿಕೆಯಡಿ ಕನ್ನಡಕ್ಕೆ ಬಂತು ಟಾಲ್ಸ್ಟಾಯ್ರ ‘ವೈಸ್ ಥಾಟ್ಸ್ ಫಾರ್ ಎವೆರಿಡೇ’

ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಮೂರು ಕಾದಂಬರಿಗಳಿಗಾಗುವಷ್ಟು ಗ್ರಾಸವಿದೆ. ಟಾಲ್ಸ್ಟಾಯ್ ಇಲ್ಲಿ ಮೂವರು ಹೀರೋಗಳನ್ನು ಸೃಷ್ಟಿಸಿ ಅವರನ್ನು ಸೇನೆಗಳ, ಚಕ್ರಾಧಿಪತ್ಯಗಳ ಹಾಗೂ ಯೂರೋಪಿಯನ್ ಇತಿಹಾಸದ ಭೋರ್ಗರೆಯುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾನೆ.

‘ಯುದ್ಧ ಮತ್ತು ಶಾಂತಿ’ಯನ್ನು ರಷ್ಯನ್ ಸಮಾಜದ, ಅದರಲ್ಲೂ ಮುಖ್ಯವಾಗಿ ಉನ್ನತ ಪ್ರಭು ವರ್ಗದ ಒಂದು ಇತಿಹಾಸವೆಂದು ಕೂಡ ಓದಬಹುದು. ಇಲ್ಲಿ ಸಂತುಷ್ಟವಾಗಿರುವ ವರ್ಗವೆಂದರೆ ಸಂಪೂರ್ಣವಾಗಿ ಪಾಶ್ಚಾತ್ಯೀಕರಣಗೊಂಡ ಎಲೀಟರ ವರ್ಗ.

ರಷ್ಯನ್ ಭಾಷೆಯಂತೆಯೇ ಫ್ರೆಂಚನ್ನೂ ನಿರರ್ಗಳವಾಗಿ ಮಾತಾಡುವ, ಆಳುವುದೇ ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿಕೊಂಡು ಅದ್ದೂರಿಯ ಜೀವನ ನಡೆಸುತ್ತಿರುವ ವರ್ಗ ಇದು. ಇನ್ನೊಂದು ತುದಿಯಲ್ಲಿರುವುದು ಗುಲಾಮ ವರ್ಗ.

ಈ ವರ್ಗದ ದುಡಿಮೆಯಿಲ್ಲದೆ ರಷ್ಯನ್ ಸಮಾಜದ ಸಂರಚನೆಯನ್ನು ಕಲ್ಪಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಟಾಲ್ಸ್ಟಾಯಿಗೆ ಸಾಮಾನ್ಯ ರಷ್ಯನ್ ಜನತೆಯ ಬಗೆಗಿರುವ ಪ್ರೀತಿ ಸಾಮಾಜಿಕವಾಗಿ ಮೇಲೇರುವುದನ್ನೇ ಗುರಿಯಾಗಿಟ್ಟುಕೊಂಡಿರುವ ಜನರ ಬಗ್ಗೆ ಇಲ್ಲವೇ ಇಲ್ಲವೆನ್ನಬೇಕು.

ಈ ಕಾದಂಬರಿ ನಿರ್ಮಿಸಿರುವ ವೇದಿಕೆಯಲ್ಲಿ ರಷ್ಯವಷ್ಟೇ ಅಲ್ಲ, ಇಡೀ ಯೂರೋಪೇ ಇದೆ. ಟಾಲ್ಸ್ಟಾಯಿಗೆ ಆ ಖಂಡದುದ್ದಗಲ ವ್ಯಾಪಿಸಿಕೊಂಡಿದ್ದ ಶಕ್ತಿ ಸಂಘರ್ಷದ ಅರ್ಥ ಮುಖ್ಯವಾಗಿತ್ತು. ಮಹಾನ್ ಘಟನೆಗಳು ಮಹಾನ್ ವ್ಯಕ್ತಿಗಳ ಸಾಹಸದ ಫಲ ಎನ್ನುವುದು ಇತಿಹಾಸದ ಒಂದು ದೃಷ್ಟಿ.

ಇದಕ್ಕೆ ತದ್ವಿರುದ್ಧವಾಗಿ ಟಾಲ್ಸ್ಟಾಯ್ ಮನುಷ್ಯರನ್ನು ಇತಿಹಾಸದ ಸಾಧನಗಳೆಂದು ತಿಳಿಯುತ್ತಾನೆಯೇ ಹೊರತು, ಅವರೇ ಅದರ ಸೃಷ್ಟಿಕರ್ತರೆಂದು ಬಗೆಯುವುದಿಲ್ಲ.

ಅವನು ಅನುಕಂಪ ತೋರುವುದು ಝಾರ್ ಚಕ್ರವರ್ತಿಗಲ್ಲ, ಸ್ಪೆರಾನ್ಸ್ಕಿಗಲ್ಲ, ಕುತುಝೋವ್ಗೆ. ಈತನಿಗೆ ಇತಿಹಾಸದ ಗತಿ ಯಾವಾಗ ತನ್ನ ಪರವಾಗೂ ಚಲಿಸುವುದೆಂದು ಗೊತ್ತು. ಆದರೆ ನೆಪೋಲಿಯನ್ ತನ್ನ ವಿರುದ್ಧ ಸಾಗುವ ಘಟನೆಗಳ ಮುಂದೆ ಅಸಹಾಯಕನಾಗುವ ಸಾಹಸಿಯಷ್ಟೆ.

ಕಾದಂಬರಿಯ ಶೀರ್ಷಿಕೆಯೇ ಸೂಚಿಸುವ ಹಾಗೆ ಒಂದರ ನಂತರ ಒಂದರಂತೆ ಸಂಭವಿಸುವ ‘ಯುದ್ಧ ಮತ್ತು ಶಾಂತಿ’ ಕತೆಯ ಪ್ರಮುಖ ಲಯವಾಗಿದ್ದು ಇವು ಪ್ರತಿಯೊಂದು ಪಾತ್ರದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಇಲ್ಲಿ ಉನ್ನತ ವರ್ಗ ಮತ್ತು ರೈತಾಪಿ, ಫ್ರೆಂಚ್ ಮತ್ತು ರಷ್ಯನ್ ಭಾಷೆಗಳು, ರಾಜಾಸ್ಥಾನ ಮತ್ತು ಹಳ್ಳಿಗಾಡು ಇವುಗಳ ನಡುವಣ ವೈರುಧ್ಯಗಳೂ ಎದ್ದುಕಾಣುತ್ತವೆ.

ಇದನ್ನೂ ಓದಿ: ಲಿಯೊ ಟಾಲ್ಸ್ಟಾಯ್ಗೆ ‘ಹೆಣ್ಣುಬಾಕ’ ಎಂಬ ಬಿರುದು ಕೊಟ್ಟವರಿದ್ದಾರೆ

ಈ ಕಾದಂಬರಿಯನ್ನು ತುಂಬಿಕೊಂಡಿರುವ ಪಾತ್ರಗಳು ಬಗೆಬಗೆಯವು. ಅಷ್ಟೇನೂ ಮುಖ್ಯವಲ್ಲದ ಪಾತ್ರಗಳು ಕೂಡ ನಿರ್ದಿಷ್ಟ ವ್ಯಕ್ತಿಗಳಾಗಿ ನೆನಪಿನಲ್ಲಿ ಉಳಿಯುವಂತಿವೆ. ಮುಖ್ಯವಲ್ಲದ ಪಾತ್ರಗಳು ಸ್ಥಾವರಸ್ಥಿತಿಯಲ್ಲಿವೆ; ಅಂದರೆ ಅಷ್ಟಾಗಿ ಬದಲಾಗವು.

ಇವುಗಳಿಗೆ ಪ್ರತಿಯಾಗಿ ಪಿಯರೆ, ಆಂದ್ರೆ, ನಿಕೊಲಾಯ್ ಮತ್ತು ನತಾಶಾ ಪೂರ್ಣ ಪ್ರಮಾಣದ ಪಾತ್ರಗಳು. ಇವರು ಪರಸ್ಪರರಿಗೆ, ಅಪರಿಚಿತರಿಗೆ, ಸ್ವತಃ ತಮತಮಗೆ ಹೇಗೆ ಕಾಣಿಸುತ್ತಾರೆಂದು ನಮಗೆ ಗೊತ್ತಾಗುತ್ತದೆ. ಇವರು ಬೆಳೆದಂತೆ ಬದಲಾಗುವವರು.

ಪುಟ್ಟ ಹುಡುಗಿಯಾಗಿದ್ದ ನತಾಶಾ ತರುಣಿಯಾಗಿ ಕಡೆಗೆ ಗಂಭೀರ ಪತ್ನಿಯಾಗುತ್ತಾಳೆ. ನಿಕೊಲಾಯ್ ಜವಾಬ್ದಾರಿಯುಳ್ಳ ಗ್ರಾಮೀಣ ಜಮೀಂದಾರನಾಗುತ್ತಾನೆ. ಆಂದ್ರೆ ಕೂಡ, ಸಾವು ಸಮೀಪಿಸುತ್ತಿರುವಾಗ, ತಾನು ಜೀವನದುದ್ದಕ್ಕೂ ಕಳೆದುಕೊಂಡಿದ್ದ ನಿರ್ಲಿಪ್ತತೆಯನ್ನೂ ಶಾಂತಿಯನ್ನೂ ಪಡೆದುಕೊಳ್ಳುತ್ತಾನೆ.

ಹೀಗೆ ಕೇಂದ್ರ ಪಾತ್ರಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸಫಲವಾಗುತ್ತವೆ. ಟಾಲ್ಸ್ಟಾಯ್ ಸಂತೋಷದ ರಹಸ್ಯವೆನ್ನುವುದು ಚಕ್ರಾಧಿಪತ್ಯಗಳ ನಡುವಣ ಸಂಘರ್ಷದಲ್ಲೋ ಮುತ್ಸದ್ದಿಯೊಬ್ಬನ ಕಾರ್ಯದಲ್ಲೋ ಇಲ್ಲ, ಅದು ಪರಸ್ಪರ ಪ್ರೀತಿಸುವುದು ಹೇಗೆಂದು ತಿಳಿದಿರುವ, ಮಾನವಕುಲದ ಸಾಮಾನ್ಯ ಪ್ರವೃತ್ತಿಗಳಿಗೆ ತೆರೆದುಕೊಳ್ಳುವ ಸಾಮಾನ್ಯ ಜನರ ಖಾಸಗಿ ಬದುಕಿನಲ್ಲಿದೆ ಎಂದು ಹೇಳುವಂತೆ ತೋರುತ್ತದೆ.

ಒಂದು ದೃಷ್ಟಿಯಿಂದ ಇದೊಂದು ಆದಿ, ಅಂತ್ಯಗಳಿದ್ದ ಕಾದಂಬರಿ. ಟಾಲ್ಸ್ಟಾಯ್ ದೃಷ್ಟಿಯ ವಾಸ್ತವಿಕತೆಯಲ್ಲಿ ಜನರು ತಮ್ಮ ಬದುಕನ್ನು ಯೋಜಿಸಲಾರರು; ತಮಗೆ ಅರ್ಥವಾಗದ ಶಕ್ತಿಯೊಂದು ತಮ್ಮನ್ನು ಮುನ್ನಡೆಸುವುದೆಂದು ನಂಬಿರುವವರು.

ಬಹುಶಃ ಇದೇ ಕಾರಣದಿಂದಲೇ ಟಾಲ್ಸ್ಟಾಯ್ ಹಳೆಯ ಕಾದಂಬರಿಕಾರರ ಕಥಾ ಸಂವಿಧಾನಗಳನ್ನೂ ಇತಿಹಾಸದ ಮೇಲೆ ಸುಳ್ಳು ವಿನ್ಯಾಸಗಳನ್ನು ಹೇರುವ ಇತಿಹಾಸಕಾರರನ್ನೂ ಟೀಕಿಸುತ್ತಾನೆ.

ಇಂಥ ಬೃಹತ್ ಕಾದಂಬರಿಯನ್ನು ಕನ್ನಡಕ್ಕೆ ತರುವುದೆಂದರೆ ಅದೊಂದು ಮಹತ್ಸಾಧನೆಯೇ. ಇದಕ್ಕೆ ಮೂಲ ಕೃತಿಯ ಆಶಯವನ್ನು ಸಮಗ್ರವಾಗಿ ಗ್ರಹಿಸುವ ಪ್ರತಿಭೆ ಬೇಕು; ಒಂದು ಸಂಸ್ಕೃತಿಯನ್ನು ಇನ್ನೊಂದು ಸಂಸ್ಕೃತಿಗೆ ದಾಟಿಸಲು ಅಗತ್ಯವಾದ ಭಾಷಿಕ ಪರಿಕರಗಳೆಲ್ಲವೂ ಬೇಕು.

ಜೊತೆಗೆ ಕಾದಂಬರಿಕಾರನೊಬ್ಬನ ನಿರೂಪಣಾ ಕೌಶಲ್ಯವೂ ಅಗತ್ಯ. ಓ.ಎಲ್. ನಾಗಭೂಷಣ ಸ್ವಾಮಿಯವರಲ್ಲಿ ಇವೆಲ್ಲವೂ ಎಷ್ಟು ಸಮೃದ್ಧವಾಗಿವೆ ಎನ್ನುವುದನ್ನು `ಯುದ್ಧ ಮತ್ತು ಶಾಂತಿ~ಯ ಪ್ರತಿಯೊಂದು ಪುಟವೂ ಸಾರಿಹೇಳುವಂತಿದೆ.

ಇದನ್ನೂ ಓದಿ: ಕುವೆಂಪು ಮೇಲೆ ಪರಿಣಾಮ ಬೀರಿದ್ದು ‘ವಾರ್ ಅಂಡ್ ಪೀಸ್’

ಅರ್ಜೆಂಟೀನಾದ ಮಹಾ ಲೇಖಕ ಹೋರ್ಹೆ ಲೂಯಿಸ್ ಬೋರ್ಹೆಸ್ ತನ್ನ ಇಂಗ್ಲಿಷ್ ಅನುವಾದಕ ನಾರ್ಮನ್ ಥಾಮಸ್ ಡಿ ಜಿಯೋವಾನ್ನಿಗೆ ಹೇಳಿದ ಬುದ್ಧಿಮಾತು: ‘ನಾನೇನು ಹೇಳುತ್ತಿದ್ದೇನೋ ಅದನ್ನೇ ಅನುವಾದಿಸಬೇಡ; ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೇನೋ ಅದನ್ನಷ್ಟೆ ಅನುವಾದಿಸು’.

ನಾಗಭೂಷಣಸ್ವಾಮಿಯವರು, ಗೊತ್ತಿದ್ದೋ ಗೊತ್ತಿಲ್ಲದೆಯೋ, ಬೋರ್ಹೆಸ್ನ ಈ ಸಲಹೆಯನ್ನೇ ಅನುಸರಿಸಿದ್ದಾರೆನಿಸುತ್ತದೆ. ಸುಮಾರು ಮೂವತ್ತೈದು ವರ್ಷಗಳಷ್ಟು ಹಿಂದೆ ನಾನು ಓದಿದ್ದು ಆನ್ ಡನಿಗನ್ ಇಂಗ್ಲಿಷ್ಗೆ ಅನುವಾದಿಸಿದ ‘ವಾರ್ ಅಂಡ್ ಪೀಸ್’. ಅದರ 3ನೇ ಭಾಗದ 14ನೇ ಅಧ್ಯಾಯದಲ್ಲಿರುವ ಈ ಪ್ಯಾರಾ ನೋಡಿ:

“Madame Schoss, who had been out to visit her daughter, increased the Countess’s fears by describing to her the scene she had witnessed outside a spirit dealer’s shop in Myasnitskaya Street. When returning by that street she had been unable to pass because of drunken mob rioting in front of the shop. She had taken a cab and driven home by a side street, and the cabman had told her that people were breaking open the casks in the shop because they had received orders to do so.”

ಇದನ್ನು ನಾಗಭೂಷಣ ಸ್ವಾಮಿಯವರು ಅನುವಾದಿಸಿರುವುದು ಹೀಗೆ:

‘ಮೇಡಂ ಸ್ಕಾಸ್ ತನ್ನ ಮಗಳನ್ನು ನೋಡಲು ನಡೆದುಕೊಂಡು ಹೋಗಿದ್ದವಳು ವಾಪಸ್ಸು ಬಂದು ಮ್ಯಾಸಿನ್ತ್ಸ್ಕಿ ರಸ್ತೆಯ ಹೆಂಡದಂಗಡಿಯ ಮುಂದೆ ಕಂಡದ್ದನ್ನು ಹೇಳುತ್ತಾ ಕೌಟೆಸ್ಳ ಭಯವನ್ನು ಇನ್ನೂ ಹೆಚ್ಚುಮಾಡಿದ್ದಳು. ಹೆಂಡದಂಗಡಿ ಅವಳು ಮನೆಗೆ ವಾಪಸ್ಸು ಬರುವ ದಾರಿಯಲ್ಲೇ ಇತ್ತು. ತುಂಬ ಜನ ಸೇರಿದ್ದರು. ಅವಳಿಗೆ ದಾರಿ ಬಿಡಲೇ ಇಲ್ಲ. ಕುಡಿದ ಜನ ಗಲಾಟೆ ಎಬ್ಬಿಸಿದ್ದರು. ಬಾಡಿಗೆ ಗಾಡಿ ಹಿಡಿದು ಎಲ್ಲೋಗಲ್ಲಿಗಳಲ್ಲ್ಲೆಲ ಸುತ್ತಿಕೊಂಡು ಬರಬೇಕಾಯಿತು, ಜನ ಹೆಂಡದ ಪೀಪಾಯಿಗಳನ್ನು ಒಡೆದು ಲೂಟಿಮಾಡುತ್ತಿದ್ದಾರೆ, ಹಾಗೆ ಮಾಡಿ ಎಂದು ಅವರಿಗೆ ಆರ್ಡರು ಆಗಿದೆಯಂತೆ ಅಂತ ಗಾಡಿಯವನು ಹೇಳಿದ ಅಂದಳು’.

ಇಲ್ಲಿ ಇಂಗ್ಲಿಷ್ ವಾಕ್ಯಗಳನ್ನು ಇಡಿಯಾಗಿ ಅನುಸರಿಸದಿದ್ದರೂ ಆ ವಾಕ್ಯಗಳ ಅಂತರಾರ್ಥ ಕನ್ನಡಕ್ಕೆ ತೀರ ಸಹಜವೆಂಬಂತೆ ಮೂಡಿಬಂದಿರುವುದನ್ನು ಗಮನಿಸಬೇಕು. ಒಟ್ಟಿನಲ್ಲಿ ನಾಗಭೂಷಣ ಸ್ವಾಮಿಯವರು ಅಪಾರ ಶ್ರಮ, ತಾಳ್ಮೆಗಳನ್ನು ಬಯಸುವ ಈ ಕೃತಿಯನ್ನು ಒಂದು ತಪಸ್ಸಿನಂತೆ ಕುಳಿತು ತುಂಬ ಸೊಗಸಾಗಿ ಅನುವಾದಿಸಿದ್ದಾರೆ. ಇದಕ್ಕಾಗಿ ಅವರನ್ನು ಎಷ್ಟು ಅಭಿನಂದಿಸಿದರೂ ಸಾಲದು.

ಇಲ್ಲಿ ನನಗೆ ಅನ್ನಿಸಿದ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರೆ ಅದು ಅಪ್ರಸ್ತುತವಾಗಲಾರದೇನೊ. ಟಾಲ್ಸ್ಟಾಯ್ ರಷ್ಯನ್ ಉಚ್ಚಾರಣೆಯಲ್ಲಿ `ತೊಲ್ಸ್ತೋಯ್’. ನಮಗೆ ಇಂಗ್ಲಿಷಿನ ಮೂಲಕ ಪರಿಚಿತನಾದ ಅವನನ್ನು ಈಗ `ತೊಲ್ಸ್ತೋಯ್’ ಎಂದು ಬರೆಯುವುದರಲ್ಲಿ ಅರ್ಥವಿಲ್ಲ, ನಿಜ.

ಆದರೆ ಆಂಡ್ರ್ಯೂ, ರೋಸ್ಟೋವ್, ಡೆನಿಸೋವ್, ರೋಸ್ಟೋಪ್ಚಿನ್ ಮೊದಲಾದ ಪಾತ್ರಗಳನ್ನು ರಷ್ಯನ್ ಭಾಷೆಯಲ್ಲಿ ಉಚ್ಚರಿಸುವ ಹಾಗೆ `ಆಂದ್ರ್ಯೂ’, ‘ರೋಸ್ತೋವ್’, ‘ದೆನಿಸೋವ್’, ‘ರೋಸ್ತೋಪ್ಚಿನ್’ ಎಂದು ಬರೆಯಬಹುದಿತ್ತು.

ಎರಡನೆಯ ಸಂಪುಟದ ಕೊನೆಯಲ್ಲಿರುವ ಚಿತ್ರಗಳನ್ನು ಹಾಲು ಕಾಗದದಲ್ಲಿ ಮುದ್ರಿಸಬಹುದಿತ್ತು. ನನಗೆ ಸಿಕ್ಕಿರುವ ಪ್ರತಿಯಲ್ಲಿ 424ನೇ ಪುಟದ ನಂತರ 321ರಿಂದ 328ರವರೆಗೆ, ನಂತರ 345ರಿಂದ 352ರವರೆಗೆ ಪುಟಗಳಿವೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮುದ್ರಣಾಲಯದ ಈ ತಪ್ಪನ್ನು ಸರಿಪಡಿಸದಿರುವುದು ತರವಲ್ಲ.

2003ರಲ್ಲಿ ಅಮೆರಿಕದಲ್ಲಿ `ಡಾನ್ ಕ್ವಿಕ್ಸೋಟ್~ (ದಾನ್ ಕಿಹೋತೆ) ಎಂಬ ವಿಶ್ವವಿಖ್ಯಾತ ಸ್ಪ್ಯಾನಿಶ್ ಕಾದಂಬರಿಯ ಹೊಸ ಅನುವಾದವೊಂದು ಪ್ರಕಟವಾದಾಗ ಪ್ರಕಾಶನ ಕ್ಷೇತ್ರದಲ್ಲಿ, ಓದುಗ ಸಮುದಾಯದಲ್ಲಿ, ವಿಮರ್ಶಕ ವಲಯದಲ್ಲಿ ಅದೊಂದು ಅತ್ಯಂತ ಸಂಭ್ರಮದ ಘಟನೆಯಾಯಿತು.

ಶ್ರೇಷ್ಠ ವಿಮರ್ಶಕ ಹೆರಾಲ್ಡ್ ಬ್ಲೂಮ್ ಅಷ್ಟೇ ಸಂಭ್ರಮದಿಂದ ಆ ಅನುವಾದಕ್ಕೊಂದು ಮುನ್ನುಡಿ ಬರೆದು ಅನುವಾದಕಿ ಎಡಿತ್ ಗ್ರಾಸ್ಮನ್ಳನ್ನು (ಗಾಬ್ರಿಯೇಲ್ ಗಾರ್ಸಿಯಾ ಮಾರ್ಕೆಸ್ನ ಹಲವು ಕೃತಿಗಳ ಅನುವಾದಕಿ) ಮನಸಾರೆ ಮೆಚ್ಚಿಕೊಂಡ. ನನ್ನ ದೃಷ್ಟಿಯಲ್ಲಿ ನಾಗಭೂಷಣ ಸ್ವಾಮಿಯವರ ಈ `ಯುದ್ಧ ಮತ್ತು ಶಾಂತಿ’ ಅಂಥದೇ ಸಂಭ್ರಮಕ್ಕೆ ಕಾರಣವಾಗಬೇಕು.

ಪುಸ್ತಕ ಈಗ ಶೇ 50ರ ರಿಯಾಯ್ತಿ ದರದಲ್ಲಿ ಲಭ್ಯ. ಹೆಚ್ಚಿನ ಮಾಹಿತಿಗೆ ‘ಯುದ್ಧ ಮತ್ತು ಶಾಂತಿ’ ಲಿಂಕ್ ಕ್ಲಿಕ್ ಮಾಡಿ.

ಇನ್ನಷ್ಟು...

ಭೀಮಾ ಕೋರೆಗಾಂವ್ ಯುದ್ಧಕ್ಕೆ 201 ವರ್ಷ: ನೀವು ಓದಲೇಬೇಕಾದ ಸುದ್ದಿಗಳು

ಕೋರೆಗಾಂವ್ ಎಂಬ ದಲಿತ ಕಥನ

ಕೋರೆಗಾಂವ್ ಶೋಷಿತರ ವಿಜಯದ ರೂಪಕ

ಭೀಮಾ–ಕೋರೆಗಾಂವ್ ಘಟನೆಗೆ ಭುಗಿಲೆದ್ದ ಆಕ್ರೋಶ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.