ಕೋಲ್ಕತ್ತದಲ್ಲಿ ಟ್ರಾಮ್, ಮುಂಬೈಗೆ ಲೋಕಲ್ ಟ್ರೈನ್, ಬೆಂಗಳೂರಿಗೆ ಬಿಎಂಟಿಸಿ, ಮೆಟ್ರೊ ಹೇಗೋ ಹಾಗೆಯೇ ಕರ್ನಾಟಕದ ಕರಾವಳಿಯಲ್ಲಿ ಖಾಸಗಿ ಬಸ್ಸುಗಳು. ಅವುಗಳು ಇಲ್ಲದಿರುವ ಕರಾವಳಿಯನ್ನು ಊಹಿಸಲಾಗದು. ಒಂದು ದಿನವಾದರೂ ಅವುಗಳ ಹಾರ್ನಿನ ದನಿಯಾಗಲೀ ರೈಟ್ ಪೋಯಿಯಾಗಲೀ ಕೇಳದಿದ್ದರೆ ಕರಾವಳಿಯಲ್ಲಿ ಕರ್ಫ್ಯೂ ಹಾಕಿದಂತಿರುತ್ತದೆ.

ನಮ್ಮ ಅಪ್ಪು, ಅಚ್ಚ ಕುಂದಾಪ್ರ ಕನ್ನಡದಲ್ಲಿ ‘ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ ರೈಟ್ ರೈಟ್ ಎಂದು ‘ಚಿಲ್ರಿ ಶೋಕಿ ಗಂಡು ನಾನಲ್ಲ’ದಲ್ಲಿ ಹಾಡಿದ ಮೇಲೆ ‘ನಮ್ ಕುಂದಾಪ್ರ ಭಾಷಿ ಜೊತಿ’ ನಮ್ಮೂರ ಬಸ್ಸುಗಳೂ ಫೇಮಸ್ ಆದವು. ಬೇರೆ ಊರುಗಳಲ್ಲಿ ಜನರು ಬಸ್ಸಿಗಾಗಿ ಸಾಲಾಗಿ ನಿಂತು ಕಾಯಬೇಕಿದ್ದರೆ, ಇಲ್ಲಿನ ಮುಖ್ಯ ಬಸ್ಸ್ಟ್ಯಾಂಡುಗಳಲ್ಲಿ ಬಸ್ಸುಗಳೇ ಸಾಲಾಗಿ ನಿಂತು ಜನರಿಗಾಗಿ ಕಾದು ಗೌರವದಿಂದ ಹತ್ತಿಸಿಕೊಳ್ಳುತ್ತವೆ. ಇಂಥ ಸೇವೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಕಂಡಕ್ಟರು, ಕ್ಲೀನರುಗಳು ಬ್ರೆತ್ಲೆಸ್ ಆಗಿ ಕೂಗುತ್ತಿದ್ದರೆ ಇತ್ತ ಡ್ರೈವರ್, ‘ರುಂಯ್ ರುಂಯ್’ ಎಂದು ಆ್ಯಕ್ಸಿಲರೇಟರ್ ರೈಸ್ ಮಾಡುತ್ತಾ ಬಸ್ಸು ಹೊರಟಿದೆ ಎಂದು ಸಿಗ್ನಲ್ ಕೊಡುವ ಜಾಣ. ಇಂಥ ಕೃತಕ ಗಡಿಬಿಡಿಗೆ ಜನರು ಮೋಸ ಹೋಗುವುದಿಲ್ಲ. ಕಿಟಕಿಯಿಂದಲೇ ಕರ್ಚೀಫು, ಟವೆಲ್ಲು, ಚೀಲ ಮುಂತಾದವುಗಳನ್ನು ಹಾಕಿ ಸೀಟು ರಿಸರ್ವ್ ಮಾಡುವ ಬುದ್ಧಿಯೂ ಇಲ್ಲ. ಯಾಕೆಂದರೆ ಈ ಬಸ್ಸು ಅಲ್ಲದಿದ್ದರೆ ಇನ್ನೊಂದು ಎಂದು ತಮಗಿರುವ ಭಾಗ್ಯವನ್ನು ಚೆನ್ನಾಗಿಯೇ ಉಪಯೋಗಿಸಿಕೊಳ್ಳುವವರು.

ಸೀಟೆಲ್ಲ ತುಂಬಿದರೂ ಹೊರಡಲು ಉದಾಸೀನ ತೋರಿಸುತ್ತಿದ್ದರೆ, ಹಿಂದಿನಿಂದ ಬಂದ ಇನ್ನೊಂದು ಬಸ್ಸು ‘ಇನ್ನೂ ಹೊರಡಲಿಲ್ಲವಾ’ ಎಂದು ಜಿದ್ದಿಗೆ ಬಿದ್ದಂತೆ ಜೋರಾಗಿ ‘ಪೋಂ…ಯ್, ಪೋಂ…ಯ್’ ಎಂದು ಹಾರ್ನ್ ಹಾಕಿದಾಗಲಷ್ಟೇ ಮುಂದೋಡುವ ಮನಸ್ಸು ಮಾಡುತ್ತದೆ. ತುಂಬಿದ ಬಸ್ಸು ಹೊರಟಿತೆಂದರೆ ಕರಾವಳಿಯ ಸಾಂಸ್ಕೃತಿಕ, ಸಾಮಾಜಿಕ ಬದುಕೇ ಹೊರಟಂತೆ ತೋರುತ್ತದೆ. ದೇವರ ಪೂಜೆ ಮಾಡಿ ಬಂದ ಪುರೋಹಿತರಿಂದ ಹಿಡಿದು ಮನೆಕೆಲಸ ಮಾಡಿಬಂದ ಮಹಿಳೆಗೂ ಆಧಾರ ಇದೇ ಬಸ್ಸು. ಮೀನು ಹಿಡಿಯುವವರೂ, ಮಾರುವವರೂ ಇರುತ್ತಾರೆ; ನಾಲ್ಕೆಕರೆ ಜಮೀನಿನ ‘ಒಡ್ತ್ರ’ರೂ (ಒಡೆಯರು) ಇರುತ್ತಾರೆ. ಬಡವ, ಶ್ರೀಮಂತ, ಜಾತಿ, ಧರ್ಮ ಎಲ್ಲವೂ ಅಲ್ಲಿ ಗೌಣ. ಗಮ್ಯ ಒಂದೇ ಗುರಿ. ಸಾಮರಸ್ಯದ ಭದ್ರಬುನಾದಿಯ ರಂಗಭೂಮಿಯದು.

ಹಾಗೆಯೇ ಕರಾವಳಿಯ ಬಿಸಿಯ ಬೆವರ ವಾಸನೆ, ತಂಬಾಕು, ಕಳ್ಳು, ಮೀನಿನ ವಾಸನೆ ಎಲ್ಲಾ ಸೇರಿ ಆಘ್ರಾಣ ಪರೀಕ್ಷೆಯ ಪ್ಯಾಕೇಜು ಲಭ್ಯ. ಸಮುದ್ರತೀರದ ಊರಾದರೂ ಉಳಿದ ಪ್ರಯಾಣಿಕರು ಕಿರಿಕಿರಿ ಮಾಡುವರೆಂದು ಕಂಡಕ್ಟರುಗಳು ಮೀನು ಮಾರುವ ಮಹಿಳೆಯರನ್ನು ಹತ್ತಿಸಿಕೊಳ್ಳಲು ಹಿಂದೇಟು ಹಾಕುವುದುಂಟು. ಮಾತಿನಲ್ಲಿ ಜಗಮೊಂಡಿಯರಾದ ಇವರು ಏನೋ ಗಲಾಟೆ ಮಾಡಿ ಹತ್ತಿಯೇ ಬಿಡುತ್ತಾರೆ. ಕೆಲವೊಮ್ಮೆ ಇಂಥ ಮಹಿಳೆಯರನ್ನು ಕಾಲೆಳೆದು ಮಾತನಾಡಿಸುವ ಕಂಡಕ್ಟರರು ಬಸ್ಸನ್ನಿಡೀ ನಗೆಯ ಸಂತೆಯನ್ನಾಗಿ ಮಾಡಿಬಿಡುತ್ತಾರೆ, ಮೀನಿನವಾಸನೆಯನ್ನು ಮರೆಸುವಷ್ಟು.

ಕುಂದಾಪುರ-ಉಡುಪಿ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ (ಈಗ 66, ಮೊದಲು 17) ಚಲಿಸುತ್ತವೆ. ಎರಡು ನಿಮಿಷಕ್ಕೊಂದರಂತೆ ಹೋಗುವ ಬಣ್ಣಬಣ್ಣದ ಬಸ್ಸುಗಳನ್ನು ಕಾಣುತ್ತಿದ್ದರೆ ಚಿತ್ತಾರಗಳ ಕ್ಯಾನ್ವಾಸ್ ಹೋಗುತ್ತಿರುವಂತಿರುತ್ತದೆ. ಸಣ್ಣದರಲ್ಲಿ ಬಸ್ಸುಗಳ ಬಗ್ಗೆ ವ್ಯಾಮೋಹ ಬೆಳೆಸಿಕೊಂಡಿದ್ದ ನನ್ನಣ್ಣ ‘ದೊಡ್ಡವನಾದ ಮೇಲೆ ಕಂಡಕ್ಟರ್ ಆಗುವೆ’ ಎನ್ನುತ್ತಿದ್ದ. ಎಲ್ಲಾ ಬಸ್ಸುಗಳ ಸಮಯವನ್ನು ಬಾಯಿಪಾಠ ಮಾಡಿಕೊಂಡಿರುತ್ತಿದ್ದವನನ್ನು ನೆರೆಹೊರೆಯವರು ‘ಈಗ ಉಡುಪಿಗೆ ಯಾವ ಬಸ್ಸಿದೆ?’ ಎಂದೋ ‘ಮಂದಾರ್ತಿಯ ಬಸ್ಸು ಹೋಯಿತೇ?’ ಎಂದೋ ಕೇಳುತ್ತಿದ್ದರು. ಇದಕ್ಕೆಲ್ಲಾ ಕರಾರುವಕ್ಕಾಗಿ ಹೇಳುವ ಸಾಮರ್ಥ್ಯ ಅವನಲ್ಲಿತ್ತು.

ಈ ಬಸ್ಸುಗಳಲ್ಲಿ ಎರಡು ವಿಧ. ಒಂದು, ಎಕ್ಸ್ಪ್ರೆಸ್. ಅದಕ್ಕೆ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ನಿಲ್ಲುವಂಥದ್ದು. ಇನ್ನೊಂದು ಶೆಟಲ್ ಅಥವಾ ಲೋಕಲ್ ಬಸ್ಸು. ಈ ಶೆಟಲ್ ಬಸ್ಸುಗಳ ಬಗ್ಗೆ ಜೋಕೊಂದು ಪ್ರಚಲಿತದಲ್ಲಿತ್ತು- ಈ ಬಸ್ಸು ನಿಲ್ಲುವುದು ಎರಡೇ ಸ್ಥಳಗಳಲ್ಲಿ, ಒಂದು ನಿಲ್ದಾಣದಲ್ಲಿ, ಇನ್ನೊಂದು ಕೈ ಅಡ್ಡಹಾಕಿದಲ್ಲಿ. ಈ ಬಸ್ಸುಗಳ ದರ ಎಕ್ಸ್ಪ್ರೆಸ್ ಬಸ್ಸುಗಳಿಗೆ ಹೋಲಿಸಿದರೆ ಕೊಂಚ ಕಮ್ಮಿ. ದೂರ ಪ್ರಯಾಣಕ್ಕೆ ಎಕ್ಸ್ಪ್ರೆಸ್ಸಾದರೆ, ಕಿರುಪ್ರಯಾಣಕ್ಕೆ ಶೆಟಲ್.

ಸಮಯದ ಪರಿಪಾಲನೆ ಈ ಬಸ್ಸುಗಳಿಂದ ಕಲಿಯಬೇಕು. ಗಡಿಯಾರವಾದರೂ ಒಮ್ಮೊಮ್ಮೆ ನಡೆಯುವುದನ್ನು ಮರೆಯುತ್ತದೆ, ಆದರೆ ಬಸ್ಸುಗಳು ಮಾತ್ರ ಟೈಂ ಟು ಟೈಂ ಬಾರದೇ ಇರುವುದಿಲ್ಲ! ಬೆಳಗ್ಗೆ ಏಳುಗಂಟೆಯ ಭಾರತಿ ಬಸ್ಸು ಹೋಗುವುದರೊಳಗೆ ಮನೆ ಗುಡಿಸಿ, ಒರೆಸಿ, ಸ್ನಾನಕ್ಕೆ ಹೋಗಿರುತ್ತಿದ್ದೆ. ಮಂದಾರ್ತಿಗೆ ಹೋಗುವ ಶ್ರೀಲಕ್ಷ್ಮಿ ಎಕ್ಸ್ಪ್ರೆಸ್ ಎಂಟು ಗಂಟೆಗೆ ಬರುವಾಗ ತಿಂಡಿಗೆ ಪ್ಲೇಟು ಇಟ್ಟಾಗಿರುತ್ತಿತ್ತು.

ಒಮ್ಮೊಮ್ಮೆ ‘ಓ ಶಂಕರ್ ವಿಠಲ್ ಹೋಯಿತು, ನಾನಿನ್ನೂ ದನ ಕರೆದಿಲ್ಲ ಎಂದು ಅಮ್ಮ ಹಟ್ಟಿಗೆ ಓಡುವುದಿತ್ತು. ದುರ್ಗಾಪ್ರಸಾದ ಮೋಟಾರ್ ಬರುವಾಗ ಸೈಕಲ್ ಹತ್ತಿ ರಸ್ತೆಯ ತಿರುವಿನಲ್ಲಿರುತ್ತಿದ್ದರೆ ಮಾತ್ರ ಶಾಲೆಯನ್ನು ಸರಿಯಾಗಿ 9.15ಕ್ಕೆ ಸೇರಿರುತ್ತಿದ್ದೆ. ದಾರಿಯಲ್ಲಿ ಮೂರು ಕುಂದಾಪುರದ ಎಕ್ಸ್ಪ್ರೆಸ್, ಎರಡು ಉಡುಪಿಗೆ, ಒಂದು ಶೆಟಲ್ ಬಸ್ಸು ಸಿಕ್ಕಿಯೇ ಸಿಗುತ್ತವೆ.

ಈ ಬಸ್ ಡ್ರೈವರು, ಕಂಡಕ್ಟರುಗಳ ಬಗ್ಗೆ ಹೇಳದಿದ್ದರೆ ಬರಹ ಅಪೂರ್ಣ, ಒಮ್ಮೆ ಬೆಂಗಳೂರಿನಲ್ಲಿ ಹೋಟೆಲ್ಲಿಗೆ ಹೋದಾಗ ಅಲ್ಲಿ ಕೆಲಸಕ್ಕಿದ್ದ ಪರಿಚಯದ ಕಂಡಕ್ಟರೊಬ್ಬರನ್ನು ಕಂಡು ಅಚ್ಚರಿಯಾಗಿತ್ತು. ಕಂಡಕ್ಟರ್ ಕೆಲಸ ಬಿಟ್ಟಿದ್ದಾಗಿ ಹೇಳಿ ಕುಶಲ ಕೇಳಿದ್ದರು. ಹೀಗೆ ಪ್ರತಿದಿನ ಒಂದೇ ಬಸ್ಸಿನಲ್ಲಿ ಪ್ರಯಾಣಿಸುವವರೊಂದಿಗೆ ಆತ್ಮೀಯ ಭಾವ ಮೂಡಿ ಸಹೋದರನೋ, ಸ್ನೇಹಿತನೋ ಎಂಬ ಭಾವ ಉದಯಿಸಿಬಿಟ್ಟಿರುತ್ತದೆ. ಒಂದು ದಿನ ಬಾರದಿದ್ದರೆ ‘ನಿನ್ನೆ ಏಕೆ ಬರಲಿಲ್ಲ ಎಂದು ಕೇಳುವಷ್ಟು ಸಲುಗೆಯಿರುತ್ತದೆ.

ಇನ್ನು ಈ ಬಸ್ಸು ಡ್ರೈವರುಗಳಂತೂ ಬಾಲಿವುಡ್ ಹೀರೊಗಳಿಗೂ ಸಡ್ಡು ಹೊಡೆಯುವಂತಹ ಸುಂದರಾಂಗಸುಂದರರು. ಕೂಲಿಂಗ್ ಗ್ಲಾಸ್ ಏರಿಸಿ, ಜೀನ್ಸ್ ಪ್ಯಾಂಟು ತೊಟ್ಟು ಹೋಗುತ್ತಿದ್ದರೆ ಅಮೀರ್ ಖಾನೂ, ರಣವೀರ್ ಕಪೂರನೂ ಸುಳ್ಳು. ಹೀಗಾಗಿ ಅನೇಕ ಕಾಲೇಜು ಹುಡುಗಿಯರು ಡ್ರೈವರಿನ ಸೌಂದರ್ಯಕ್ಕೆ ಫಿದಾ ಆಗಿ ಒಂದಷ್ಟು ದಿನ, ಜನರ ಬಾಯಿಗೆ ಆಹಾರವಾಗಿಯೂ ಇದ್ದಿದ್ದರು, ಇನ್ನು ಕೆಲವರು ಅವರನ್ನೇ ಮದುವೆಯಾಗಿದ್ದರು.

ಕುಂದಾಪುರ, ಉಡುಪಿಯಂಥ ಮುಖ್ಯ ನಿಲ್ದಾಣದಲ್ಲಿ ಸಣ್ಣಸಣ್ಣ ವ್ಯಾಪಾರಿಗಳು ಜಾಸ್ತಿ. ಅದರಲ್ಲೂ ಉಡುಪಿಯಲ್ಲಿರುತ್ತಿದ್ದ ಚಿಕ್ಕು ವ್ಯಾಪಾರಿಯೊಬ್ಬ, ಹಣ್ಣಿನ ಬುಟ್ಟಿಯನ್ನು ಪ್ರಯಾಣಿಕರ ಮುಖದೆದುರು ಹಿಡಿದು ‘ಛೀಕೂ, ಛೀಕೂ ಎಂದು ಹೇಳುತ್ತಿದ್ದ ರೀತಿ ಹಣ್ಣಿಗಿಂತ ಆಕರ್ಷಕವಾಗಿರುತ್ತಿತ್ತು. ಸೈಕಲ್ಲಿನಲ್ಲಿ ಐಸ್ಕ್ರೀಂ ಮಾರುವಾತ ಕಿಟಕಿ ಬದಿ ವಿರಾಜಮಾನರಾಗಿರುವ ಮಕ್ಕಳನ್ನೇ ಗುರಿಯಾಗಿಸಿ ಚೋಕೋಬಾರ್, ಪೆಪ್ಸಿ ಎಂದು ಅಲ್ಲಲ್ಲೇ ಸುತ್ತುವವ. ಕುಂಟರು, ಕೈ ಇಲ್ಲದವರು, ಭಿಕ್ಷುಕರು ಮುಂತಾದವರಿಗೆ ಕೊನೆಯಿಲ್ಲ. ಅದರಲ್ಲೂ ಕುಂದಾಪುರದಲ್ಲಿರುತ್ತಿದ್ದ ಭಿಕ್ಷುಕ ‘ನಾಕಾಣೆ ಕೊಡಿಯಿಂದ ಆರಂಭಿಸಿ, ‘ಬೀಡಿ ಕೊಡಿಯವರೆಗೆ ಬಂದು ಅಂತ್ಯದಲ್ಲಿ ‘ಹ್ವಾಯ್, ಎಂತಾದರೂ ಕೊಡಿಯವರೆಗೆ ಬಂದು ನಿಲ್ಲುತ್ತಿದ್ದ.

ಇಷ್ಟು ಬಣ್ಣಬಣ್ಣದ ಬಸ್ಸುಗಳು, ಕೊಡುವ ಅನುಭವಗಳ ನಡುವೆ ಬೆಳೆದ ನನಗೆ ಬೆಂಗಳೂರಿನ ಹಸಿರು, ನೀಲಿ ಬಣ್ಣದ ಬಸ್ಸುಗಳು ಇಂಗ್ಲಿಷ್ ಶಾಲೆಯ ಯೂನಿಫಾರ್ಮ್ ತೊಟ್ಟ ಮಕ್ಕಳಂತೆ ಕಂಡಿದ್ದಲ್ಲದೆ, ಉಡುಪಿ ಕುಂದಾಪುರದ ಸುಮಾರು 40 ಕಿ.ಮೀ. ದೂರವನ್ನು ಮುಕ್ಕಾಲು ಗಂಟೆಯೊಳಗೆ ಪೂರೈಸುವ ಬಸ್ಸುಗಳೆದುರು ಎರಡು ಗಂಟೆ ಕೂತಿದ್ದರೂ ಇಳಿಯುವ ಜಾಗ ಬಾರದಿದ್ದ ಮೇಲೆ ಬಸ್ಸುಪ್ರಯಾಣ ಹೀಗೂ ಉಂಟೇ ಎಂಬ ಚೋದ್ಯವನ್ನು ಹುಟ್ಟಿಸಿಬಿಟ್ಟಿತ್ತು. ಅಲ್ಲದೆ ಇಲ್ಲಿನಂತೆ ಪಿಕ್ ಪಾಕೆಟ್ ಕಳ್ಳರು, ಚಿಲ್ಲರೆ ಮತ್ತೆ ಕೊಡುವೆನೆಂದು ಟಿಕೆಟ್ಟಿನ ಹಿಂದೆ ಬರೆದು ಕೊಡುವ ಕಂಡಕ್ಟರ್ಗಳು ಅಲ್ಲಿ ಇಲ್ಲವೇಇಲ್ಲ.

ಈ ಬಸ್ಸುಗಳ ಓಡಾಟವಿದ್ದರೆ ಮಾತ್ರ ಕರಾವಳಿಯಲ್ಲಿ ಜೀವಸಂಚಾರ. ಇಲ್ಲದಿದ್ದರೆ ಭಣಭಣ. ಎರಡೆರಡು ಬಾರಿಯ ಲಾಕ್ಡೌನ್ನಿಂದ ಓಡಾಟವಿಲ್ಲದೆ ಮೈದಾನದಲ್ಲೋ, ಖಾಲಿ ಜಾಗದಲ್ಲೋ ಸಾಲಾಗಿ, ಶಿಸ್ತಿನಲ್ಲಿ ನಿಂತ ಎಪಿಎಂ, ದುರ್ಗಾಂಬಾ, ಭಾರತಿ ಮುಂತಾದ ಬಸ್ಸುಗಳನ್ನು ನೋಡಿದಾಗ ಆಟವಾಡುವ ಮಗು ಸುಮ್ಮನೆ ಒಂದುಬದಿ ಚಟುವಟಿಕೆಯಿಲ್ಲದೆ ಕೂತರೆ ಆಗುವಂಥ ಥಳಮಳ ನನ್ನನ್ನು ಕಾಡಿತ್ತು. ಹೆಚ್ಚಿನ ಬಸ್ಸುಗಳು ತುಕ್ಕುಹಿಡಿದು, ಬಳ್ಳಿಗಳು ಸುತ್ತುವರೆದು, ಹಕ್ಕಿಗಳ, ಪ್ರಾಣಿಗಳ ಆವಾಸಸ್ಥಾನವಾಗಿದ್ದು ಕಂಡು ಉಸಿರೇ ನಿಂತಂತಾಗಿತ್ತು. ಲಾಕ್ಡೌನ್ ಸಡಿಲವಾದ ಮೇಲೆ ಬಸ್ಸುಗಳ ಓಡಾಟ ನಿಧಾನಕ್ಕೆ ಶುರುವಾಗಿದ್ದು ಮುಂಜಾವಿನ ಚಿಲಿಪಿಲಿಯಂತೆ ಆಹ್ಲಾದಕರವಾಗಿದೆ.

‘It’s not about the destination, it’s about the journey’ ಎನ್ನುವಂತೆ ಊರಿಗೆ ಹೋದಾಗೆಲ್ಲಾ ಈ ಎಲ್ಲಾ ಅನುಭವಗಳನ್ನು ಮತ್ತೆ ನನ್ನದಾಗಿಸಿಕೊಳ್ಳಲು, ಬಸ್ಸಿನ ಪ್ರಯಾಣವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಕಳೆದ ದಿನಗಳನ್ನು ಮತ್ತೊಮ್ಮೆ ಬೊಗಸೆಯಲ್ಲಿ ಬಾಚಿಕೊಳ್ಳುವ ಸರ್ವಪ್ರಯತ್ನ ಮಾಡುತ್ತೇನೆ.

ನೀವೂ ಆ ಕಡೆ ಹೋದರೆ ಉಡುಪಿ-ಕುಂದಾಪುರ ನಡುವಿನ ಪ್ರಯಾಣವನ್ನು ಸುಮ್ಮನೆ ಮಾಡಲಾದರೂ ಬಸ್ಸು ಹತ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.