ರಜೆಯಲ್ಲಿ ಹಳ್ಳಿಗೆ, ತಾತನ ಮನೆಗೆ ಬಂದಿದ್ದಾಳೆ ಶಾನ್ವಿ. ಮಾಮನ ಬಳಿ ಒಂದು ಸಣ್ಣ ಮೊಬೈಲ್ ಬಿಟ್ಟರೆ ಬೇರೇನಿಲ್ಲ. ಬೆಳಿಗ್ಗೆ, ಸಂಜೆ ಅಂತ ಸಮಯ ಸಿಕ್ಕಾಗೆಲ್ಲ ರಿಮೋಟ್ ಕಂಟ್ರೋಲ್ ಹಿಡಿದು ಟಿ.ವಿ. ನೋಡುವ, ಮೊಬೈಲಲ್ಲಿ ಜಗತ್ತನ್ನೇ ನೋಡುವ ಶಾನ್ವಿಗೆ ಇಲ್ಲಿ ತುಂಬ ಬೇಜಾರು. ಅವುಗಳಿಲ್ಲದೆ ಇವರೆಲ್ಲ ಹೇಗೆ ಬದುಕುತ್ತಾರೋ ಅನ್ನುವ ಆಶ್ಚರ್ಯ ಬೇರೆ.

ಅಜ್ಜಿ, ತಾತ, ಅತ್ತೆ, ಮಾವ ಎಲ್ಲ ಮುದ್ದು ಮಾಡ್ತಾರೆ, ಬೇಕಾದ್ದು ಕೊಡಿಸ್ತಾರೆ... ಆದರೆ ಬೋರ್ ಹೋಗ್ಬೇಕಲ್ಲ? ಎದುರಿನ ಗದ್ದೆಯಲ್ಲಿ ಮಾವ ಗದ್ದೆ ಉಳುತ್ತಿದ್ದರು. ಗದ್ದೆಯ ಬದುವಿನ ಮೇಲೆ ನಿಂತು ನೋಡಿದಳು ಶಾನ್ವಿ. ನೇಗಿಲಿನಿಂದ ನೆಲ ಸೀಳಿಕೊಂಡು ಎತ್ತುಗಳು ಗದ್ದೆ ಉಳುತ್ತಿವೆ, ಮಾಮ ನೇಗಿಲು ಹಿಡಿದಿದ್ದಾರೆ. ‘ಮಾಮ ಈಗ ರಿಮೋಟ್ ಕಂಟ್ರೋಲ್!’ ಅಂತ ಹೇಳಿಕೊಂಡು ನಕ್ಕಳು ಶಾನ್ವಿ. ಇಪ್ಪತ್ತು, ಮೂವತ್ತು ಗಂಡಸರು, ಹೆಂಗಸರು ಹಾಡು ಹೇಳ್ತಾ ನೇಜಿ ನೆಡ್ತಿದ್ದಾರೆ. ಗಂಡಸರು ಗೊಬ್ಬರ ತಂದು ಸುರಿಯುತ್ತಿದ್ದಾರೆ.

ಕಾಲು ಕೆಸರಾದೀತು ಅಂತ ಗದ್ದೆಗಿಳಿಯಲು ಅಸಹ್ಯಪಡ್ತಿದ್ದ ಶಾನ್ವಿ ತಾನೂ ನೇಜಿ ನೆಡುವ ಆಸೆಗೆ ಗದ್ದೆಗಿಳಿದಳು. ಹೆಂಗಸರು ಇವಳಿಗೆ ನೇಜಿ ನೆಡುವುದು ಹೇಗೆ ಅಂತ ಕಲಿಸಿಕೊಟ್ಟರು. ಸ್ವಲ್ಪ ಹೊತ್ತು ನೇಜಿ ನೆಡುವ ಪ್ರಯತ್ನ ಮಾಡಿ ಮೇಲೆ ಬಂದು ಕೈಕಾಲು ತೊಳೆದುಕೊಂಡಳು. ಆಚೀಚೆ ನೋಡಿದರೆ ದನಗಳ ಹಟ್ಟಿ ಕಾಣಿಸಿತು. ಅತ್ತ ಹೋದಳು ಅವಳು.

ಅಂಬಾ ಅಂತ ದನಗಳ ಕೂಗು ಕೇಳುತ್ತಿದೆ. ಅತ್ತೆ ಹಾಲು ಕರೆಯುತ್ತಿದ್ದಾರೆ. ಅದನ್ನೇ ನೋಡ್ತಾ ನಿಂತ ಶಾನ್ವಿ, ‘ಅತ್ತೆ, ಅಂಬೆಗೆ ನೋವಾಗಲ್ವಾ?’ ಅಂತ ಕೇಳಿದಳು. ಹೆದರಿ ಹೆದರಿ ತಾನೂ ಹಾಲು ಕರೆಯಲು ಬಗ್ಗಿ ಸಾಧ್ಯವಾಗದೆ ಹಿಂದೆ ಬಂದಳು. ಪೇರಿಸಿಟ್ಟಿದ್ದ ಹುಲ್ಲಿನ ರಾಶಿಯಿಂದ ಮುಷ್ಟಿಯಲ್ಲಿ ಹುಲ್ಲು ತಂದು, ತಂದು ದನ, ಕರುಗಳಿಗೆ ತಿನ್ನಿಸಿದಳು. ‘ಬಂದೆ ಇರು’, ‘ನಿಂಗೂ ಕೊಡ್ತೇನೆ ಆಯ್ತಾ?’ ಅಂತ ಮಾತಾಡ್ತಾನೇ ಹುಲ್ಲು ತರುತ್ತಿದ್ದಳು.

ತಿಂಡಿ ತಿಂದ ಮೇಲೆ ಅಡುಗೆ, ಇತರ ಮನೆಗೆಲಸ ಎಲ್ಲವನ್ನೂ ಸರಸರನೆ ಮುಗಿಸಿದ ಅತ್ತೆ, ‘ಶಾನೂ, ಕಾಡಿಗೆ ಹೋಗೋಣವಾ?’ ಅಂತ ಕರೆದರು. ಚಂಗನೆ ಚಪ್ಪಲಿ ಮೆಟ್ಟಿ ಹಾರಿ ಬಂದಳು ಶಾನ್ವಿ. ಅತ್ತೆಯ ಕೈ ಹಿಡಿದುಕೊಂಡೇ ನಡೆದಳು. ಎಷ್ಟೊಂದು ಮರ, ಗಿಡ, ಬಳ್ಳಿಗಳವೆ! ದೊಡ್ಡ ದೊಡ್ಡ ಬಂಡೆಗಳೂ ಇವೆ! ಕಾಡು ಹೂಗಳು ಒಂದಕ್ಕಿಂತ ಒಂದು ಚೆನ್ನಾಗಿವೆ! ಬಂಡೆಗಳ ಮೇಲೂ ಹೂಗಳು! ‘ಇವಕ್ಕೆಲ್ಲ ಯಾರು ನೀರು ಹಾಕ್ತಾರೆ ಅತ್ತೆ?’ ಕೇಳಿದಳು ಶಾನ್ವಿ. ‘ಯಾರೂ ಇಲ್ಲಮ್ಮ’ ಅಂದರು ಅತ್ತೆ. ಕಾಡಿನ ಮಧ್ಯೆ ಕೆರೆಯೂ ಇದೆ! ಎಷ್ಟು ಕ್ಲೀನಾಗಿದೆ ನೀರು!

ಹೊಸ ಪ್ರಪಂಚದೊಳಗೇನೇ ಪ್ರವೇಶ ಮಾಡಿದ ಹಾಗಾಯ್ತು ಅವಳಿಗೆ. ಅತ್ತೆ ಅವಳಿಗೆ ಹಲವು ಮರ, ಗಿಡ, ಬಳ್ಳಿಗಳ ಪರಿಚಯ ಮಾಡಿಸಿದರು. ನೆಲ್ಲಿಕಾಯಿ, ನೇರಳೆ ಹಣ್ಣು ಕಿತ್ತುಕೊಟ್ಟರು. ನಡೆದು ಸುಸ್ತಾದ ಹುಡುಗಿಯನ್ನು ನೋಡಿ, ‘ಸ್ವಲ್ಪ ಹೊತ್ತು ಕೂರೋಣ ಇಲ್ಲಿ’ ಅಂತ ತಾವೂ ಕುಳಿತರು.

‘ನಾಳೆ, ನಾಡಿದ್ದು, ರಜೆ ಮುಗಿಯುವ ತನಕವೂ ಎಲ್ಲ ನೋಡೋಣ ಅತ್ತೆ’ ಅಂತ ಬೇಡಿಕೆಯಿಟ್ಟಳು ಶಾನ್ವಿ. ‘ಖಂಡಿತ ಪುಟ್ಟಾ. ತೋಟ, ಕೆರೆ, ಗುಡ್ಡ, ಕಾಡು, ಸುರಂಗ, ಜೇನುಗೂಡು, ಉಯ್ಯಾಲೆ, ಹಕ್ಕಿಗಳು, ಮರಗಳು... ನೋಡಿ ಮುಗಿಯದಷ್ಟು ಅದ್ಭುತಗಳಿವೆ ಇವೆ ಈ ಪ್ರಕೃತಿಯಲ್ಲಿ’ ಅಂದರು. ‘ಖುಷಿಯಾಗ್ತಿದೆ ನಂಗೆ!’ ಅಂದಳು ಶಾನ್ವಿ ಕಣ್ಣು ಹೊಳಪಿಸುತ್ತ.

ದಿನ ದಿನವೂ ಹೊಸತೇ, ದಿನ ದಿನವೂ ಬೆರಗೇ ಶಾನ್ವಿಗೆ. ಬಾಯಾರಿದಾಗ ಅತ್ತೆ ಬೊಗಸೆಯಲ್ಲಿ ತುಂಬಿಕೊಟ್ಟ ನೀರನ್ನು ಪುಟ್ಟ ಕರುವಿನಂತೆ ಕುಡಿದು, ‘ಮ್ಬೇ’ ಅಂತ ಬೇರೆ ಕೂಗಿ, ‘ನಾನು ಅಂಬೆ ಪಾಪು’ ಅನ್ನುತ್ತಾಳೆ. ಅತ್ತೆಯ ಸಹಾಯದಿಂದ ಮರ ಏರಿ ಸಾಹಸ ಮಾಡುತ್ತಾಳೆ. ಅಲ್ಲಿಂದಲೇ ಕೋತಿಯ ಹಾಗೆ ಟ್ರ್ ಟ್ರ್ ಅಂತ ಕೂಗುತ್ತಾಳೆ. ಹಕ್ಕಿಗಳ ಕೂಗನ್ನು ಅನುಕರಿಸಿ ಅಣಕಿಸುತ್ತಾಳೆ. ಸಂಜೆಯಾದರೆ ಮನೆ ಸೇರಿ, ‘ಅತ್ತೆ, ನಾಳೆ?’ ಅಂತ ಕೇಳುತ್ತಾಳೆ. ಹತ್ತರ ಹುಡುಗಿ ಅತ್ತೆಯ ಕಾಲು ಸುತ್ತುತ್ತಾ ನಾಲ್ಕರ ಪೋರಿಯಂತೆ ಸೆರಗು ಹಿಡಿದು ಸುತ್ತುತ್ತಾಳೆ. ಅತ್ತೆ ಅವಳಿಗೆ ಅಲ್ಲಿ ತಿನ್ನಲು ಚಕ್ಕುಲಿ, ಕೋಡುಬಳೆ, ಉಂಡೆ ಅಂತ ಮಾಡಿಕೊಂಡೂ ಹೊರಡಬೇಕಲ್ಲ?. ಮನೆಯಲ್ಲಿ ಗೋಡೆಗಳ ಮಧ್ಯೆ ಟಿ.ವಿ. ಮುಂದೆ ಕುಳಿತು ತಿನ್ನುವುದಕ್ಕಿಂತ ಇಲ್ಲಿ ಪ್ರಕೃತಿ ಮಧ್ಯೆ ತಿನ್ನುವ ರುಚಿ ಹೆಚ್ಚಿನದು ಅಂತ ಶಾನ್ವಿಯ ಅನುಭವಕ್ಕೂ ಬಂದಿದೆ.

ಮರುದಿನ ಮಗಳನ್ನು ಕರೆದುಕೊಂಡು ಹೋಗಲು ಬಂದ ಅಪ್ಪ, ‘ಹಲೋ ಶಾನ್, ಹೇಗಿದ್ದಿಯಾ?’ ಅಂತ ಪ್ರಶ್ನಿಸಿದಾಗ, ‘ವಂಡರ್ಫುಲ್ಅಪ್ಪಾ!’ ಅಂತಂದ ಶಾನ್ವಿಯಲ್ಲಿ ಕತೆಗಳ ಬದಲು, ಹೇಳಲು ಕಾದಂಬರಿಯೇ ಇತ್ತು. ಪುನಃ ಸ್ಕೂಲಿಗೆ, ಮನೆಗೆ ಹೋಗಬೇಕಾದರೂ ಇವೆಲ್ಲವನ್ನು ಬಿಟ್ಟು ಹೋಗ್ಬೇಕಲ್ಲ ಅನ್ನುವ ಬೇಸರವೂ ಇತ್ತು. ತಾನು ಮತ್ತು ಅತ್ತೆ ಕಾಡಿನಿಂದ ತಂದ ನೆಲ್ಲಿಕಾಯಿ, ಕೋಕಂ ಹಣ್ಣುಗಳ ಸಿಪ್ಪೆ (ಜ್ಯೂಸ್ ಮಾಡಲು), ಮರ ಕೆಸುವಿನ ಎಲೆಗಳು, ಅತ್ತೆ ಬೆಳೆಸಿದ ಬಸಳೆ, ಬೆಂಡೆ, ತೊಂಡೆ, ಬದನೆ ಮುಂತಾದ ತರಕಾರಿಗಳು, ಹಪ್ಪಳ, ಸಂಡಿಗೆಗಳು, ಹಲಸಿನ ಕಾಯಿಗಳು, ತೆಂಗಿನಕಾಯಿಗಳು, ಬಾಳೆಗೊನೆಗಳು...ಅಪ್ಪನ ಕಾರು ‘ಹೌಸ್ ಫುಲ್!’ ಅನ್ನುತ್ತಿತ್ತು!

ರಜೆಯ ಅನುಭವಗಳನ್ನು ಬರೆದು ತರಲು ಹೇಳಿದ್ದಾರೆ ಮಿಸ್. ಆ ರಾತ್ರಿ ಶಾನ್ವಿ ಕುಳಿತು ಬರೆದದ್ದೇ ಬರೆದದ್ದು. ‘ಮೂರು ಪುಟಗಳಾದ್ರೂ ಬರೀರಿ’ ಅಂದದ್ದು ಹತ್ತು ಪುಟಗಳಾದ್ರೂ ಮುಗೀತಾ ಇಲ್ಲ!

ಮರುದಿನ ಮಿಸ್ ಎಲ್ಲರ ಅನುಭವಗಳನ್ನು ಓದಿದರು. ಶಾನ್ವಿಯ ಅನುಭವಗಳ ಬರಹವನ್ನು ಕೈಗೆತ್ತಿಕೊಂಡರು.

‘ಇದನ್ನು ಓದಿದ ನಂತರ ನಾನೂ ಈ ಅನುಭವ ಪಡೆಯಬೇಕು ಅಂತ ತುಂಬ ಆಸೆಯಾಗ್ತಿದೆ ನನಗೆ..’ ಅಂದವರು ತಾವೇ ಅದನ್ನು ಓದಿ ಹೇಳಿದರು. “ಇಷ್ಟು ಮಂದಿಯಲ್ಲಿ ಅತಿ ಹೆಚ್ಚು ರಜೆಯ ಆನಂದ ಅನುಭವಿಸಿದ್ದು ಶಾನ್ವೀನೇ. ಅಲ್ವ?” ಅಂದರು. “ನಾನು ಗಿಡಗಳನ್ನೂ ನೆಟ್ಟಿದ್ದೇನೆ ಮಿಸ್, ಮುಂದಿನ ಸಾರಿ ಹೋದಾಗ ನೋಡಬೇಕು” ಅಂದಳು ಶಾನ್ವಿ.

“ಒಳ್ಳೆಯ ಅನುಭವ ಪಡೆದಿದ್ದಿ ಶಾನ್ವಿ, ವೆರಿ ಗುಡ್!” ಅಂತ ಪೆನ್ನಿನ ಉಡುಗೊರೆಯನ್ನೂ ಕೊಟ್ಟರು ಶಾನ್ವಿಗೆ. “ಆದರೆ, ಅಜ್ಜಿ ಮನೇಲಿ ನೋಡ್ಲಿಕ್ಕೆ ಟಿ.ವಿ. ಕೂಡಾ ಇಲ್ಲ ಅಂತ ಮೊದಲು ತುಂಬ ಬೇಜಾರಿತ್ತು ನನಗೆ. ಬೋರ್ ಅನಿಸ್ತಿತ್ತು. ನಂತರ, ಕೊನೆ ಕೊನೆಗೆ ಅಲ್ಲಿಂದ ಹಿಂದೆ ಬರಲಿಕ್ಕೇನೇ ಮನಸ್ಸಾಗ್ತಿರಲಿಲ್ಲ” ಅಂದಳು ಶಾನ್ವಿ.. ಶಾನ್ವಿ ಆ ದಿನದ ಮಟ್ಟಿಗೆ ‘ರಾಜಕುಮಾರಿ’ ಆಗಿಬಿಟ್ಟಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.