ಆ ಬೆಟ್ಟದ ಬಗೆಗೆ ಎಲ್ಲರೂ ಮಾತಾಡುತ್ತಿದ್ದರು. ಅಲ್ಲಿನ ಹಸಿರು, ಗಿಡ-ಮರ, ಪಶು-ಪಕ್ಷಿ-ಪ್ರಾಣಿ, ಆಗಾಗ್ಗೆ ಕಣ್ಣಿಗೆ ಬೀಳುತ್ತಿದ್ದ ತೋಳ, ಕಾಡು ಹಂದಿ, ನಾಯಿ, ನರಿ ಮತ್ತು ಕಾಡು ಬೆಕ್ಕು.

ಒಮ್ಮೊಮ್ಮೆ ಹುಲಿ, ಚಿರತೆಯೂ ಕಣ್ಣಿಗೆ ಬೀಳುತ್ತವೆ ಅನ್ನುವವರೂ ಇದ್ದರು.

ನಾನು ಚಿಕ್ಕವನಿದ್ದಾಗ ಅಪ್ಪ ಒಮ್ಮೆ ಆ ಬೆಟ್ಟಕ್ಕೆ ಕರೆದೊಯ್ದಿದ್ದ. ಹೆಸರೇ ಗೊತ್ತಿಲ್ಲದ ಒಂದಿಷ್ಟು ಪಕ್ಷಿಗಳು, ಕಾಡು ಬೆಕ್ಕು ನೋಡಿದ್ದು ಬಿಟ್ಟರೆ ಬೇರಾವ ಕಾಡು ಪ್ರಾಣಿಗಳು ಕಣ್ಣಿಗೆ ಬೀಳಲಿಲ್ಲ.

ಮಟಮಟ ಮಧ್ಯಾಹ್ನ ಉರಿ ಬಿಸಿಲಲ್ಲಿ ಏದುಸಿರು ಬಿಡುತ್ತ ಕೈ ಹಿಡಿದು ಅಪ್ಪ ಬೆಟ್ಟ ಹತ್ತಿಸಿದ್ದ. ಬೆಟ್ಟದ ಮೇಲೇರುವ ಹೊತ್ತಿಗೆ ಇಬ್ಬರ ಮೈಯಲ್ಲಿನ ಬೆವರು ಕಿತ್ತುಕೊಂಡು ಹೋಗಿತ್ತು. ಬಟ್ಟೆ ಉಪ್ಪೊಡೆದು ವಾಸನೆ ಹೊಡೆಯುತ್ತಿದ್ದವು. ಮುಖ ಬಾಡಿತ್ತು. ತಲೆ ಜಿಗುಟಾಗಿತ್ತು. ಅದು ಮಾವು ಕಾಯಿ ಬಿಡುವ ಕಾಲ. ಮಾವಿನಕಾಯಿ ಹುಲುಸಾಗಿ ಬೆಳೆದು ಹೋತದ ಬೀಜದ ಹಾಗೆ ಇಳಿ ಬಿದ್ದಿದ್ದವು. ಜೊಂಪಾಗಿ ಬೆಳೆದ ಗಿಡಗಳಲ್ಲಿ ಹೂವಿನ ಪರಿಮಳವಿತ್ತು. ಚಿಟ್ಟೆಗಳಿಗೆ ಲೆಕ್ಕ ಇರಲಿಲ್ಲ. ಜೇನು ನೊಣಗಳು ಗುಂಯಿ ಗುಡುತ್ತಿದ್ದವು. ‘ಮಾರಿಜಾ’ ಅಪ್ಪ ಕೂಗಿದ. ‘ಇಲ್ಲೇ ಎಲ್ಲೋ ಜೇನುಗೂಡು ಕಟ್ಟಿರಬೇಕು ನೋಡು’ ಅಂದ. ನನಗೇನೂ ತಿಳಿಯದು. ಜೇನು ತಿಂದಿದಷ್ಟೇ ಗೊತ್ತು. ಅಪ್ಪ ಅದೆಷ್ಟೋ ಬಾರಿ ಇದೇ ಬೆಟ್ಟದಿಂದ ಜೇನು ಇಳಿಸಿ ತಂದಿದ್ದ. ಮರದ ತುಂಡಿಗೆ ಮೆತ್ತಿಕೊಂಡ ಜೇನಿನ ತಟ್ಟೆಯನ್ನು ಒಡೆದು ಪಾತ್ರೆಗೆ ಬಸಿದು ಬೆರಳದ್ದಿ ಒಂದು ತೊಟ್ಟು ನಾಲಿಗೆಗೆ ಅಂಟಿಸುಕೊಂಡರೆ ಸಾಕು, ನೋಡು ನೋಡುವುದರೊಳಗೆ ಖಾಲಿಯಾಗಿ ಬಿಡುತ್ತಿತ್ತು. ಅಂಗೈಗೆ ಮೆತ್ತಿಕೊಂಡ ಜೇನನ್ನು ನಾಲಿಗೆಯಿಂದ ನೆಕ್ಕುವುದರಲ್ಲಿ ಅದೆಂತಹ ಹಿತವಿದೆ.

‘ಮಾರಿಜಾ’ ಅಪ್ಪ ಮತ್ತೆ ಕೂಗಿದ. ‘ಅಲ್ಲಿ ಜೇನಿನಗೂಡು ಇರಬೇಕು, ಬಗ್ಗಿ ನೋಡು’ ಅಂದ. ಗಿಡದ ಟೊಂಗೆ ಮುರಿದು ಮುಳ್ಳುಕಂಟಿ ಸರಿಸಿ ಕಣ್ಣು ಅಗಲಿಸಿ ಹಣಿಕಿ ನೋಡಿದೆ. ಏನೂ ಕಾಣಲಿಲ್ಲ. ‘ಜೇನು ಕಂಡಿತೇನೋ’ ಅಪ್ಪ ಕೇಳಿದ. ‘ಬರೀ ನೊಣಗಳು ಹಾರಾಡುತ್ತಿವೆ, ಜೇನಿಲ್ಲ’ ಅಂದೆ. ‘ಸರಿ ಬಿಡು, ಬಾ ಈ ಕಡೆ’ ಅಂತ ಕರೆದ. ಮರದ ತುಂಡನ್ನು ಅಲ್ಲಿಯೇ ಎಸೆದು ಅವನ ಬೆನ್ನು ಹತ್ತಿದೆ.

ಅಪ್ಬ ಬೆಟ್ಟವೆಲ್ಲ ಸುತ್ತಿ ಒಂದಿಷ್ಟು ಹಣ್ಣು, ಹೂವು ಕಡಿದು ಇದು ಅಕ್ಕನಿಗೆ, ಇದು ನಿಮ್ಮವ್ವಗೆ, ಇದು ನಿನಗೆ ಎನ್ನುತ್ತ ಒಂದೊಂದಾಗಿ ಗಂಟು ಕಟ್ಟಿದ. ಹೊತ್ತೇರಿ ಕತ್ತಲಾವರಿಸುವುದರೊಳಗೆ ಬೆಟ್ಟ ಇಳಿದು ಮನೆಗೆ ಬಂದೆವು.

ಅಪ್ಪ ಈಗಿಲ್ಲ. ಅವನು ತೀರಿ ಹೋಗಿ ಅದೆಷ್ಟೋ ವರ್ಷಗಳಾದವು. ಅಕ್ಕನ ಮದುವೆಯಾಗಿ ಆಕೆಗೊಂದು ಮಗುವಿದೆ. ಗಡ್ಡ, ಮೀಸೆ ಬೆಳೆದು ನಾನು ದೊಡ್ಡವನಾಗಿದ್ದೇನೆ. ಅವ್ವನ ಶಕ್ತಿ ಕುಂದಿದೆ. ಒಲೆ ಮುಂದೆ ಕೂತು ಕೂತು ಆಕೆಯ ಕಣ್ಣು ಮಂಜಾಗಿವೆ. ಈಗಲೂ ಅವಳು ನಾನು ಚಿಕ್ಕವನಿದ್ದಾಗ ಕೂಗಿ ಕರೆಯುವಂತೆಯೇ ‘ಮಾರಿಜಾ’ ಅಂತಲೇ ಕರೆಯುತ್ತಾಳೆ. ನಾನು ಈಗ ಹುಡುಗನಲ್ಲ. ಹರೆಯಕ್ಕೆ ಕಾಲಿಟ್ಟವನು ಅನ್ನುವ ಕನಿಷ್ಠ ಜ್ಞಾನವೂ ಅವಳಿಗಿಲ್ಲ ಅಂದುಕೊಳ್ಳುತ್ತೇನೆ. ನಾನು ದೊಡ್ಡವನಾಗಿರುವುದು ಅವಳಿಗೆ ದೊಡ್ಡ ವಿಷಯವೇ ಅಲ್ಲ. ಗಡ್ಡ, ಮೀಸೆ ಬಂದರೂ ನಾನು ಅವಳಿಗಿನ್ನೂ ಮಗುವೇ. ಆದರೆ... ಸರಸಿಯ ಪಾಲಿಗೆ ನಾನು ಸಣ್ಣವನಲ್ಲ. ಅವಳ ಕಣ್ಣಲ್ಲಿ ನಾನಾಗಲೇ ಬೆಳೆದ ಹುಡುಗ. ಅವಳ ನೋಟ, ನಗೆ, ನಾಚಿಕೆ ನನ್ನನ್ನು ಇನ್ನಷ್ಟು ದೊಡ್ಡವನನ್ನಾಗಿಸಿರುವುದು ನನ್ನವ್ವಗೆ ಗೊತ್ತಿಲ್ಲ. ಅವಳಿಗೆ ಗೊತ್ತು, ಇದೆಲ್ಲ ಹುಡುಗಾಟ ಅಂತ. ಸರಸಿಯ ಸೆರಗಲ್ಲಿ ಸುಖಪಡುತ್ತಿದ್ದದ್ದು ಮಾತ್ರ ಮುಚ್ಚಿಡಲಾಗಲಿಲ್ಲ. ಅವಳ ಅವ್ವ ಆಗಲೇ ಇದನ್ನು ತನ್ನ ತಮ್ಮನ ಕಿವಿಗೆ ಹಾಕಿದ್ದಳು. ಅವನು ಕುಡುಗೋಲು ಮಸೆಯುತ್ತ ನಡುಬೀದಿಯಲ್ಲೇ ಕಡಿದು ಹಾಕುವ ಮಾತಾಡುತ್ತಿದ್ದ. ಕುಡುಗೋಲು ಮಸೆದು ಸೂರ್ಯನಿಗೆ ಅಡ್ಡ ಹಿಡಿದು ‘ಹೇಗೆ ಹೊಳೆಯುತ್ತಿದೆ ನೋಡು, ಒಂದೇ ಏಟು ಕುತ್ತಿಗೆ ತುಂಡಾಗಲು’ ಎಂದು ನನ್ನ ಕಂಡಾಗೆಲ್ಲ ಹೆದರಿಸುತ್ತಿದ್ದ. ಅವರ ಗುಡಿಸಲ ಬೀದಿಯಲ್ಲಿ ಕಾಲಿಟ್ಟರೆ ಸಾಕು, ತೊಡೆಯಲ್ಲಿ ನಡುಕ ಶುರುವಾಗಿ ದಾರಿ ಬದಲಿಸುತ್ತಿದೆ. ಕಾಳ ನಿಜಕ್ಕೂ ಕ್ರೂರಿ ಅಂತ ನನಗೆ ಗೊತ್ತಿತ್ತು. ಅವನು ಹಂದಿ ಮಾಂಸವನ್ನು ಹಸಿಯಾಗಿ ತಿನ್ನೋ ಮನುಷ್ಯ ಅಂತ ಜನ ಅನ್ನುತ್ತಿದ್ದರು. ಅದು ನಿಜವೂ ಆಗಿತ್ತು. ಕಾಡು ಹಂದಿ ಬೇಟೆಯಾಡಿ ಅದನ್ನು ಅವನು ಸುಟ್ಟು ತಿಂದಿದನ್ನು ಕಂಡಿದ್ದೆ. ಕಲ್ಲಿನಂತ ಅವನ ಮೈ, ಕಬ್ಬಿಣದಂತ ಕೈಗಳು, ಬೀಡಿ ಸೇದಿ ಹಳದಿ ಬಣ್ಣಕ್ಕೆ ತಿರುಗಿದ್ದ ಆ ಹಲ್ಲುಗಳು ಭಯ ಹುಟ್ಟಿಸುತ್ತಿದ್ದವು. ಸರಸಿಯನ್ನು ಅವನು ಮದುವೆಯಾಗಲಿದ್ದ. ಆತನ ಅಕ್ಕನ ಆಸೆಯೂ ಅದೇ ಆಗಿತ್ತು. ಸರಸಿ ಮಾತ್ರ ಅದೆಲ್ಲ ಸುಳ್ಳು ಅನ್ನುತ್ತಿದ್ದಳು. ಅವಳಿಗೆ ಅವನ ಮೇಲೆ ಒಂದಿಷ್ಟು ಮನಸ್ಸು ಇಲ್ಲ ಅನ್ನೋದು ನನಗೆ ಗೊತ್ತಿತ್ತು. ನಾವಿಬ್ಬರು ಒಟ್ಟಿಗೆ ಇರುವುದನ್ನು ಕಾಳ ಕಂಡಿದ್ದ. ಅವಳ ಸಂಗ ಮಾಡಬೇಡ. ದೂರ ಇರು. ಹೆಣವಾಗುತ್ತೀಯಾ’ ಎಂದೆಲ್ಲ ಹೆದರಿಸಿದ್ದ.

ಕಾಳ ನೀಡಿದ ಎಚ್ಚರಿಕೆ ಸರಸಿಯ ಸಂಗದಿಂದ ದೂರ ಮಾಡಿತ್ತು. ಊಟ ಸೇರದಾಯಿತು. ನಿದ್ದೆ ಬಾರದಾಯಿತು. ಮನಸ್ಸು ಭಾರವಾಯಿತು. ಕಣ್ಣೀರ ಕಟ್ಟೆ ಒಡೆಯಿತು. ಇನ್ನೂ ತಾಳುವುದು ಅಸಾಧ್ಯವೇ ಆಗಿ ಹೋಗಿ ಅವಳನ್ನು ಕಂಡೆ. ಅಪ್ಪಿದೆ. ಮುದ್ದಿಸಿದೆ. ಮುದ್ದಾಡಿದೆ. ಮರು ಕ್ಷಣವೇ ಗಟ್ಟಿ ಧೈರ್ಯಮಾಡಿ ‘ನಡಿ ಹೋಗೋಣ’ ಎಂದೆ. ಮರು ಮಾತಾಡದೆ, ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬೆನ್ನತ್ತಿ ಬಂದಳು.

ಓಡಿದೆವು ಓಡಿದೆವು ಓಡಿದೆವು... ಓಡಿ ಬೆಟ್ಟ ಹತ್ತಿ ಅಂಗಾತ ಬಿದ್ದು ದಣಿವಾರಿಸಿಕೊಂಡೆವು. ಕಾಲು ಸೋತಿದ್ದವು. ಜೊಂಪು ಹತ್ತಿತ್ತು. ಕಣ್ಣು ಬಿಟ್ಟಾಗ ಕಾಳ ಕುಡಗೋಲು ಹಿಡಿದು ಎದುರು ನಿಂತಿದ್ದ. ಉಸಿರುಗಟ್ಟಿದಂತಾಯ್ತು. ಓಡಿ ಹೋಗಲು ಆಗದು. ಕಾಳ ಕುಡುಗೋಲು ಎತ್ತಿದ, ಇನ್ನೇನು ಹೊಡೆಯಬೇಕು ಅಂದಿದ್ದ, ಕೈಯಲ್ಲಿದ್ದ ಕೊಡಲಿ ಬೀಸಿದೆ. ಕುತ್ತಿಗೆಗೆ ತಗುಲಿ ರಕ್ತ ಬಳ್ಳಂತು. ಕುಸಿದು ಬಿದ್ದ. ಗೋಣು ಕತ್ತರಿಸಿದ ಕೋಳಿ ಹಾಗೆ ಒದ್ದಾಡಿದ. ನೋಡು, ನೋಡುವುದರೊಳಗೆ ನಿಶ್ಚಲನಾದ. ಇನ್ನೂ ಉಸಿರಿದೆಯೇ ಎಂದು ಅಲುಗಾಡಿಸಿದೆ. ಮಿಸುಕಾಡಲಿಲ್ಲ. ಸತ್ತು ಹೋದನೇನೋ ಪಾಪ. ಬೇಡ ಅಂದರೂ ಕೇಳಲಿಲ್ಲ. ಅವನ ಮೇಲೆ ನನಗ್ಯಾವ ದ್ವೇಷವೂ ಇರಲಿಲ್ಲ. ಅವನನ್ನು ಕೊಲ್ಲುವ ಮನಸ್ಸೂ ನನಗಿರಲಿಲ್ಲ. ಅದೆಲ್ಲಿಂದ ಬಂತು ಅಷ್ಟೊಂದು ರೋಷ? ಅಪ್ಪ ಅದ್ಯಾವತ್ತು ಮಸೆದು ಇಟ್ಟನೋ ಈ ಕೊಡಲಿಯನ್ನು, ಯಾವುದಕ್ಕೂ ಇರಲಿ ಎಂದು ಜೊತೆಗೆ ತಂದಿದ್ದೇ ತಪ್ಪಾಯ್ತು. ಒಂದೇ ಏಟಿಗೆ ಕತ್ತು ಕತ್ತರಿಸುವುದೇ! ಅದನ್ನೆಷ್ಟು ಮಸೆದು ಹರಿತಗೊಳಿಸಿದ್ದನೋ ಅಪ್ಪ.

ಸರಸಿ ದಂಗಾದಳು, ಬಾಯಿ ತೆರೆದರೂ ಮಾತಾಡಲಿಲ್ಲ. ‘ಸರಸಿ’ ಅಂದೆ. ಅವಳು ಬಿಕ್ಕಳಿಸುತ್ತಿದ್ದಳು. ಅವಳ ಕೈ ಹಿಡಿದು ಬೆಟ್ಟ ಇಳಿದೆ. ಹಳ್ಳದ ನೀರಲ್ಲಿ ಕೊಡಲಿಗೆ ಮೆತ್ತಿದ ರಕ್ತ ತೊಳೆದೆ. ಏಕೋ ಬೇಡ ಅನಿಸಿತು. ಅದನ್ನು ನೀರಿಗೆಸೆದೆ. ಇಬ್ಬರು ಕೂಡಿ ಹಳ್ಳದ ದಂಡೆ ಹಿಡಿದು ನಡೆದೇ ನಡೆದೆವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.