ಬಹಮನಿ ಸಾಮ್ರಾಜ್ಯಕ್ಕೆ ಸಾಂಸ್ಕೃತಿಕ, ಶೈಕ್ಷಣಿಕ ಮಹತ್ವವನ್ನು ತಂದುಕೊಟ್ಟ ಮಹಮೂದ್ ಗಾವಾನ್ ಧಾರ್ಮಿಕ ಸಾಮರಸ್ಯದ ರೂಪಕವೂ ಹೌದು. ಗಾವಾನ್‌ರ ಜೀವನ–ಸಾಧನೆಯನ್ನು ಕಂಬಾರರು ರಂಗರೂಪಕ್ಕೆ ಅದ್ಭುತವಾಗಿ ಅಳವಡಿಸಿದ್ದಾರೆ. ಅ. 28ರಂದು ಬಿಡುಗಡೆಯಾಗಲಿರುವ (ಪ್ರ: ಅಂಕಿತ ಪುಸ್ತಕ, ಬೆಂಗಳೂರು) ನಾಟಕದ ಒಂದು ಅಂಕ ಇಲ್ಲಿದೆ.

ಊರ ಹೊರಗೆ ಮಹಾರಾಷ್ಟ್ರದ ಅಧಿಕಾರಿ ದಾಮಾಜಿ ಪಂತ ಮಹಾಶಯ ಖ್ವಾಜಾ ಗಾವಾನರಿಗಾಗಿ ತನ್ನ ಪರಿವಾರದೊಂದಿಗೆ ಕಾಯುತ್ತಿದ್ದಾನೆ. ಅವರು ಬಂದೊಡನೆ ಅವರಿಗೆ ದೊಡ್ಡ ಮಾಲೆ ಹಾಕಿ ಗೌರವಿಸಿ ಅವರ ಕೈಹಿಡಿದು ಕರೆತರುವನು. ಕೂಡಲೇ ಹಲಗೆ, ಡೊಳ್ಳು, ಕಹಳೆ ಮುಂತಾದ ಮಂಗಳವಾದ್ಯಗಳೊಂದಿಗೆ ಎಲ್ಲರೂ ಊರಿನಲ್ಲಿ ನಡೆಯುವರು.

ಗಾವಾನ್: ಎಷ್ಟೊಂದು ಅದ್ದೂರಿಯ ಸ್ವಾಗತ ಏರ್ಪಡಿಸಿದ್ದೀರಲ್ಲ ಪಂತರೇ! ಅಗೋ ಕುಣಿಯೋ ಕಲಾವಿದರೇನು, ಮೊಳಗುವ ವಾದ್ಯಗಳೇನು..! ಅಬ್ಬಾ! ಪಂತರೇ, ಅದೇನು ಹಲಗೆ ಡೊಳ್ಳಿನ ಕಲಾವಿದರೆಲ್ಲ ಬೆನ್ನಿಗೆ ಕಸಬರಿಗೆ ಕಟ್ಟಿಕೊಂಡು ಕುಣಿಯುವರಲ್ಲ, ಯಾಕೆ?

ಪಂತ: ಇದು ನಮ್ಮ ಕಡೆಗಿನ ಪದ್ಧತಿ, ಗಾವಾನರೆ.

ಗಾವಾನ್: ಆಶ್ಚರ್ಯ! ಕೈಯಲ್ಲಿ ವಾದ್ಯಗಳೇನೋ ಸರಿ, ಆದರೆ ಬೆನ್ನಿಗೆ ಕಸಬರಿಗೆ ಯಾಕೆ?

ಪಂತ: ಓಹೋ ಅದೋ? ಅವರು ಮಹಾರ್ ಜಾತಿಯ ಜನ. ಅಂದರೆ ದಲಿತರು. ಊರೊಳಗೆ ಬರುತ್ತಿದ್ದರೆ ಅವರು ತಮ್ಮ ಹೆಜ್ಜೆ ಮೂಡಿದಲ್ಲೆಲ್ಲ ಕಸಬರಿಗೆ ಆಡಿಸಿ ಮೂಡಿದ ಹೆಜ್ಜೆಗಳನ್ನು ಅಳಿಸಿ ಹಾಕಬೇಕು. ಹಾಗೆ ಅವರ ಹೆಜ್ಜೆಗಳನ್ನ ಅಳಿಸಲಿಕ್ಕಾಗಿ ಇರುವ ಕಸಬರಿಗೆ ಅವು. ಇದು ಎಷ್ಟೆಂದರೂ ಪಂಡರೀನಾಥನ ದೇವಾಲಯವಿರುವ ರಾಜ್ಯ ನೋಡಿರಿ, ಮಡಿ, ಮೈಲಿಗೆ ಜಾಸ್ತಿ ಸ್ವಾಮಿ!

ಗಾವಾನ್: ಅಂದರೆ ದೇವರಿಗೆ ಇದು ಇಷ್ಟವೆ?

ಪಂತ: ಹೌದು. ಯಾಕಂದರೆ ಆ ಜನ ಅಸ್ಪೃಶ್ಯರು. ಅವರನ್ನು ಭಕ್ತಾದಿಗಳು ಹ್ಯಾಗೋ ಹಾಗೆ ದೇವರು ಕೂಡ ಮುಟ್ಟಬಾರದು. ಅವರ ಮೂಡಿದ ಹೆಜ್ಜೆಗಳಲ್ಲಿ ಹೆಜ್ಜೆ ಕೂಡ ಇಡಬಾರದು. ಇವೆಲ್ಲ ಬಹಳ ಮಡಿವಂತಿಕೆಯ ಸೀಮೆಗಳು ಸ್ವಾಮಿ!

ಗಾವಾನ್: ಆಶ್ಚರ್ಯ! ನಾನಿದನ್ನು ಕೇಳಿರಲಿಲ್ಲ, ಕಂಡಿರಲಿಲ್ಲ, ನಿಮ್ಮ ದೇವರು ಕೂಡ ಅಷ್ಟು ಮಡಿವಂತನೆ?

ಪಂತ: ಹೌದು.

ಗಾವಾನ್: ಆ ಅಸ್ಪೃಶ್ಯರು ಅಂಥ ಕೆಟ್ಟ ಕೆಲಸ ಮಾಡಿದ್ದೇನು?

ಪಂತ: ಸತ್ತ ದನ ತಿಂತಾರೆ... ಚರ್ಮ ಸುಲಿದು... ಅದಕ್ಕೇ ಅವರನ್ನು ಊರ ಹೊರಗಿರಿಸಿ ಮನೆ ಮಾಡಿ ಕೊಟ್ಟಿರ‍್ತೇವೆ. ಇಂಥ ವಾದ್ಯ ನುಡಿಸುವ ಅವಕಾಶಗಳಿಲ್ಲದಾಗ ಊರವರ ಮನೆ ಹೊಲಗಳಲ್ಲಿ ಕೂಲಿ ಕೆಲಸ ಮಾಡಿ ಅದರಿಂದಲೂ ಸಂಪಾದನೆ ಮಾಡುತ್ತಾರೆ.

ಗಾವಾನ್: ಹೊಲಗೆಲಸ ಮಾಡುವಾಗಲೂ ಬೆನ್ನಿಗೆ ಕಸಬರಿಗೆ ಕಟ್ಟಿಕೊಂಡಿರ‍್ತಾರೆಯೆ?

ಪಂತ: ಇಲ್ಲ, ಊರಲ್ಲಿ ಅಡ್ಡಾಡಬೇಕಾದರೆ ಮಾತ್ರ ಬೆನ್ನಿಗೆ ಕಸಬರಿಗೆ ಬೇಕೇ ಬೇಕು. ಜೊತೆಗೆ ತಮ್ಮ ಕೈಯಲ್ಲೊಂದು ಗಡಿಗೆಯನ್ನೂ ಹಿಡಿದಿರುತ್ತಾರೆ.

ಗಾವಾನ್: ಅಗೋ ಅಲ್ಲಿ ದೂರದಲ್ಲಿ ಕೆಲವರು ನಿಂತು ಮೆರವಣಿಗೆ ನೋಡುತ್ತಿದ್ದಾರಲ್ಲ, ಅವರ ಕೈಯಲ್ಲಿ ಮಡಕೆಗಳಿವೆ, ಅವೇನಾ?

ಪಂತ: ಹೌದು ಸ್ವಾಮಿ.

ಗಾವಾನ್: ಅವ್ಯಾಕೆ?

ಪಂತ: ಈ ಜನಕ್ಕೆ ಎಲಡಿಕೆ ತಿನ್ನೋ ಖಯಾಲಿ ಜಾಸ್ತಿ ಅದಕ್ಕೆ. ಚಟದವರು ತಿಂದೆಲೆ ಉಗಿಯಬೇಕಲ್ಲ, ನೆಲದ ಮೇಲೆ ಉಗಿದು ಮೈಲಿಗೆ ಮಾಡಬಾರದು. ಅದನ್ನ ತಂತಮ್ಮ ಮಡಿಕೆಗಳಲ್ಲಿ ಉಗಿದುಕೊಂಡು ಊರ ಹೊರಗೊಯ್ದು ಚೆಲ್ಲಬೇಕು. ಊರು ಹಸನಾಗಿರಬೇಕಲ್ಲವೆ?

ಗಾವಾನ್: ಸರಕಾರದಲ್ಲಿ ಅವರಿಗೆ ಏನಾದರೂ ಕೆಲಸಗಳು ಇದಾವ?

ಪಂತ: ಬೇಕಾದಷ್ಟಿದಾವಲ್ಲ ಸ್ವಾಮಿ. ಕಂದಾಯ ವಸೂಲಿ ಮಾಡ್ತಾರೆ, ನಾವು ವಸೂಲಿ ಮಾಡಿದ್ದನ್ನ ಸರಕಾರಕ್ಕೆ ಒಯ್ದು ಪ್ರಾಮಾಣಿಕತೆಯಿಂದ ತಲುಪಿಸುತ್ತಾರೆ. ಈ ಜನ ಸರಕಾರದ ವಿಷಯದಲ್ಲಾಗಲಿ, ಕರ್ತವ್ಯದ ವಿಷಯದಲ್ಲಾಗಲಿ ಬಹಳ ಪ್ರಾಮಾಣಿಕರು ಸ್ವಾಮಿ. ಅದರಲ್ಲಿ ಎರಡು ಮಾತಿಲ್ಲ.

ಗಾವಾನ್: ಅಂದರೆ ಜಾತಿವಂತರಿಗಿಂತ ಹೆಚ್ಚಿಗೆ ಪ್ರಾಮಾಣಿಕರೆ?

ಪಂತ: ಸಾಮಾನ್ಯವಾಗಿ ಕರ್ತವ್ಯದ ವಿಷಯದಲ್ಲಿ ಇಬ್ಬರೂ ಪ್ರಾಮಾಣಿಕರು ಸ್ವಾಮಿ. ಅಗೋ ಇದೇ ಧರ್ಮಸತ್ರ. ಇಲ್ಲಿಯೇ ತಮ್ಮ ಭೋಜನದ ವ್ಯವಸ್ಥೆ ಮಾಡಿದ್ದೇವೆ, ಬನ್ನಿರಿ.
(ಧರ್ಮಸತ್ರದ ಹೊರಗೆ ವಾದ್ಯದವರು ನಿಂತು ಗಾವಾನ್ ಮತ್ತವನ ಸೈನಿಕ ಪರಿವಾರ ಒಳಗೆ ಹೋಗುವರು.)

ಪಂತ: ತಮ್ಮ ಸವಾರರೆಲ್ಲ ಕೈಕಾಲು ತೊಳೆದು ಊಟದ ಪಂಕ್ತಿಯಲ್ಲಿ ಕೂರೋಣವಾಗಲಿ ಸ್ವಾಮಿ. ಭೋಜನ ಸಿದ್ಧವಾಗಿದೆ.

ಗಾವಾನ್: ವಾದ್ಯದವರೂ ಊಟಕ್ಕೆ ಕೂರೋದಿಲ್ಲವೋ?

ಪಂತ: ಕೂತಿದ್ದಾರಲ್ಲಾ?

ಗಾವಾನ್: ಎಲ್ಲಿ?

ಪಂತ: ಅಗೋ ಹೊರಗೆ ಬನ್ನಿ. ನೋಡಿ...

ಗಾವಾನ್: ಅಲ್ಲ ಪಂತರೇ, ಹೀಗೆ ನಮ್ಮಿಂದಗಲಿ ದೂರ ಕೂತಿದ್ದಾರಲ್ಲ, ಯಾಕೆ? ನಮ್ಮನ್ನ ಕರೆತಂದವರು ನಮ್ಮೊಂದಿಗೆ ಊಟಕ್ಕೆ ಕೂರಬೇಡವೆ? ಹೀಗೆ ನಮಗೆ ಹೊರತಾಗಿ ಹೊರಗೆ ಕೂತರೆ ಹ್ಯಾಗೆ?

ಪಂತ: ಸ್ವಾಮಿ ಅವರು ಮಹಾರ್ ಜನ, ದಲಿತರು. ಜಾತಿಯವರೊಂದಿಗೆ ಅವರು ಊಟಕ್ಕೆ ಕೂರಲು ನಮ್ಮ ರೀತಿ ರಿವಾಜು ಒಪ್ಪುವುದಿಲ್ಲ.

ಗಾವಾನ್: ಅದೆಂಥಾ ರೀತಿ ರಿವಾಜು ಪಂತರೇ, ನಮ್ಮ ಬರುವಿಕೆಯನ್ನ ಹುರುಪಿನಿಂದ, ಆನಂದೋದ್ರೇಕದಿಂದ ಕುಣಿಕುಣಿದು ಆಚರಿಸಿದವರು, ಹೀಗೆ ನಮ್ಮನ್ನು ಬಿಟ್ಟು ನಮ್ಮಿಂದ ಹೊರಗೆ ಕೂತರೆ ನಮ್ಮ ಮನಸ್ಸುಗಳಾದರೂ ಹ್ಯಾಗೆ ಒಪ್ಪಬಹುದು?

ಪಂತ: ಸ್ವಾಮೀ ಇದು ಹಿಂದಿನಿಂದ ನಡೆದು ಬಂದ ಪದ್ಧತಿ. ಅದು ನೀವು ಹೇಳುವಂತೆ ಧರ್ಮಸಂಕರ ಮಾಡಿ ಊಟ ಮಾಡಿರಿ ಅಂತ ಹೇಳಿಲ್ಲ.

ಗಾವಾನ್: ಪಂತರೇ, ಅಸಮಾಧಾನ ಮಾಡಿಕೋಬ್ಯಾಡ್ರಿ. ನಿಮ್ಮ ಹಾಗೆ ನಮ್ಮ ಪದ್ಧತಿಯ ಕಡೆಗೂ ಕೊಂಚ ಗಮನ ಕೊಡಬೇಕಲ್ಲ? ನಮ್ಮಲ್ಲಿ ಪಂಕ್ತಿಭೇದ ಮಾಡಿ ಊಟ ಮಾಡುವ ಪದ್ಧತಿ ಇಲ್ಲ.

ಪಂತ: ಪೂಜ್ಯ ಗವಾನರೇ, ನಮ್ಮ ದೇವರು ಇದನ್ನೆಲ್ಲ ಒಪ್ಪುವುದಿಲ್ಲ.

ಗಾವಾನ್: ನಮ್ಮ ದೇವರೂ ಮಹಾ ಹಟಮಾರಿ ಪಂತರೇ. ಪಂಕ್ತಿಭೇದ ಮಾಡುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಬೇಕಾದರೆ ನಾವು ನಿಮ್ಮ ಧರ್ಮಸತ್ರದ ಹೊರಗೆ ಹೋಗಿ ಮಹಾರ್ ಅವರೊಂದಿಗೇ ಕೂತು ಊಟ ಮಾಡುತ್ತೇವೆ. ಅದಕ್ಕಾದರೂ ಒಪ್ಪಿಕೊಳ್ಳುತ್ತೀರಾ?

ಪಂತ: ಅದು ಅನಿವಾರ್ಯವೇ ಗವಾನರೇ?

ಗಾವಾನ್: ದಯಮಾಡಿ ಅಪ್ಪಣೆ ಕೊಡಿ. (ಏಳುವರು...)
(ಹೊರಗಿನ ಪಂಕ್ತಿಯವರು ಪಂತರು ಮತ್ತು ಗಾವಾನರ ಮಧ್ಯೆ ನಡೆಯುತ್ತಿರುವ ವಾದವನ್ನು ದೂರ ನಿಂತು ಕೇಳಿಸಿಕೊಳ್ಳುತ್ತಿದ್ದಾರೆ.)

ಪಂತ: ಅಯ್ಯೋ.. ಅಯ್ಯೋ..! ನನ್ನ ಕರ್ಮವೇ! ಇವತ್ತು ಬೆಳಿಗ್ಗೆದ್ದು ಯಾರ ಮುಖ ನೋಡಿದೆ ನಾನು?

ಗಾವಾನ್: ಅಂದರೆ ಆ ದಲಿತರದೇ ಮುಖ ನೋಡಿರಬಹುದ? ಅಯ್ಯಾ ಸರದಾರರೇ ಬನ್ನಿ, ನೀವೂ ಬನ್ನಿ, ನಾವು ಹೊರಗೆ ವಾದ್ಯಮೇಳ ದವರೊಂದಿಗೆ ಕೂತು ಊಟ ಮಾಡೋಣ ಬನ್ನಿ. (ಸರದಾರರೆಲ್ಲ ಎದ್ದು ದಲಿತರ ಪಂಕ್ತಿಯಲ್ಲಿ ಊಟಕ್ಕೆ ಕೂರುವುದನ್ನು ನೋಡಿದ ತಾವೂ ಅಲ್ಲಿಯೇ ಹೋಗಿ ಊಟಕ್ಕೆ ಕೂರುವರು. ಪಂತರಿಗೆ ಅನಿರೀಕ್ಷಿತ ಆಘಾತವಾಗುತ್ತದೆ.)

ಪಂತ: ಸ್ವಾಮೀ.. ಸ್ವಾಮೀ... ಇದೇನಿದು? ಈ ಪಾಪಿಗೆ ಈ ಶಿಕ್ಷೆಯೇ?

ಗಾವಾನ್: ಶಿಕ್ಷೆಯೇನು ಬಂತು ಪಂತರೇ, ನೀವೂ ಬನ್ನಿ, ನಮ್ಮೊಂದಿಗೆ... (ಎಂದು ಸಲಿಗೆಯಿಂದ ಕೈ ಹಿಡಿದು ಕರೆಯುವರು)

ಪಂತ: ಉಂಟೇ? ಉಂಟೇ? ನೀವೆಲ್ಲರೂ ಊಟಕ್ಕೆ ಕುಳಿತುಕೊಳ್ಳಿರಿ. ನಾನೂ ಮತ್ತು ನನ್ನ ಜನ ಬಡಿಸುತ್ತೇವೆ. ಬನ್ನಿರಿ ಸ್ವಾಮೀ, ನಿಮಗೆ ಊಟ ಬಡಿಸುವ ಈ ಭಾಗ್ಯ ನನಗೆ ದೊರೆತದ್ದು ಸಾಮಾನ್ಯವೇ? ಎಷ್ಟು ಜನ್ಮಗಳ ಪುಣ್ಯ ಫಲವೋ! ಬನ್ನಿರಿ... (ಎಂದು ಜೋರು ಮಾಡಿ ಕೂರಿಸಿ, ನೀಡಲು ಬಂದವನ ಪಾತ್ರೆ ತಗೊಂಡು ತಾನೂ ಬಡಿಸತೊಡಗುವನು. ಅಷ್ಟರಲ್ಲಿ ತಮ್ಮೊಂದಿಗೆ ಕೂತ ಗಾವಾನರ ಬಳಿಗೆ ದಲಿತರು ಬಂದು ಗಾವಾನರೆದುರು ಭಕ್ತಿಯಿಂದ ನಿಂತು ಕೈಮುಗಿದು ಕೆಲವರು ಬಾಗಿ ನಮಸ್ಕರಿಸಿ ತಾವೂ ಊಟಕ್ಕೆ ಕೂರುವರು. ಗಾವಾನರೂ ಅವರ ನಮಸ್ಕಾರಗಳನ್ನು ವಿನಿಮಯಿಸಿ ಊಟ ಮಾಡುವರು. ಊಟ ಮುಗಿದು ಗಾವಾನರು ಎಲ್ಲರಿಗಿಂತ ಮುಂಚೆ ಎದ್ದು ಪ್ರತ್ಯೇಕವಾಗಿ ಕಟ್ಟೆಯ ಮೇಲೆ ಇಡಲಾಗಿದ್ದ ಪೀಠಗಳಲ್ಲಿ ಒಂದರಲ್ಲಿ ಕೂರುವರು. ಊಟ ಬಡಿಸುತ್ತಿದ್ದ ಪಂತರನ್ನು ಕರೆದು ಎದುರು ಪೀಠದಲ್ಲಿ ಕೂರಿಸಿ)

ಗಾವಾನ್: ಊಟ ಚೆನ್ನಾಗಿತ್ತು ಪಂತರೇ. ಬಿಸಿಲಲ್ಲಿ ಅಲೆದಾಡಿ ಭಯಾನಕ ಹಸಿವಾಗಿತ್ತು. ರುಚಿಕಟ್ಟಾದ ಊಟ ಹೊಟ್ಟೆ ತುಂಬ ಸೇರಿ ಹೊಟ್ಟೆ ತಂಪಾಯಿತು. ನೀವು ಹೇಳುತ್ತೀರಲ್ಲ, ಅನ್ನದಾತಾ ಸುಖೀಭವ ಅಂತ, ಒಳ್ಳೇ ಮಾತು. ಅಲ್ಲಾಹನು ನಿಮ್ಮನ್ನು ಚೆನ್ನಾಗಿಡಲಿ ಪಂತರೇ.

ಪಂತ: ಇಂಥಾ ಪುಳಿಚಾರು ಊಟಕ್ಕೇ ಹೀಗೆ ಹೇಳುತ್ತೀರಲ್ಲಾ, ಸ್ವಾಮೀ ಗಾವಾನರೇ, ಇದಲ್ಲವೇ ನಮ್ಮ ಭಾಗ್ಯ!

ಪಂತ: ಪೂಜ್ಯ ಗಾವಾನರೇ ಇನ್ನೊಂದು ದೃಶ್ಯ ಇದೆ. ದಯಮಾಡಿ ಒಂದು ಹೆಜ್ಜೆ ಈ ಕಡೆ ಬರುತ್ತೀರಾ?

ಗಾವಾನ್: (ಎದ್ದು) ಇಗೋ, ಬಂದೆ.

ಪಂತ: ಅಗೋ, ಅಲ್ಲಿ ಕೈಯಲ್ಲಿ ತಟ್ಟೆ ಹಿಡಿದುಕೊಂಡು ನಿಂತಿದ್ದಾರಲ್ಲಾ?

ಗಾವಾನ್: ಹೌದು, ಅವರ‍್ಯಾರು?

ಪಂತ: ಹಸಿದವರು ಸ್ವಾಮೀ. ಮಳೆಯಿಲ್ಲದೆ, ಬೆಳೆಯಿಲ್ಲದೆ ಕಂಗಾಲಾದ ರೈತರು ಹೊಟ್ಟೆಗಿಲ್ಲದೆ,– ‘ದೊಡ್ಡವರು ಬಂದಿದ್ದಾರೆ, ತುತ್ತನ್ನ ಸಿಕ್ಕೀತು’ ಎಂಬ ಭರವಸೆಯಿಂದ ಬಂದು ಆ ಪರಿ ನಿಂತಿದ್ದಾರೆ. ಇವರಿಗೆ ನಾನು ಏನು ಹೇಳಲಿ? ನೀವಾದರೂ ಏನು ಹೇಳುತ್ತೀರಿ?

(ಗಾವಾನ್ ಅವರನ್ನು ನೋಡಿ, ಅಲ್ಲೇ ಕಟ್ಟೆಯ ಮೇಲೆ ಕುಸಿದು ಕೂರುವನು)

ಗಾವಾನ್: ಇದೇನು ಪಂತರೇ! ಇಂಥವರನ್ನು ಇಲ್ಲಿಟ್ಟುಕೊಂಡು ನೀವು ಭೂರಿಭೋಜನ ನೀಡಿದ್ದು, ನಾವು ಉಂಡದ್ದು– ಎಲ್ಲಾ ಅಪರಾಧವೆಂದು ಅನ್ನಿಸೋದಿಲ್ಲವೆ? ಇವರನ್ನು ನೀವು ಮೊದಲೇ ಯಾಕೆ ತೋರಿಸಲಿಲ್ಲ?

ಪಂತ: ಊಟಕ್ಕೆ ಮುನ್ನ ತಮ್ಮ ದರ್ಶನವಾದರೆ ನೀವು ಊಟ ಮಾಡಲಕ್ಕಿಲ್ಲವೆಂದು ಅವರೇ ನಿಮ್ಮ ಭೋಜನದ ತರುವಾಯ ಕಾಣಿಸಿಕೊಂಡರು ಸ್ವಾಮಿ!

ಗಾವಾನ್: ಅಯ್ಯೋ ದೇವರೇ, ಇವರಿಗೆ ನಾನೇನು ಮಾಡಬಲ್ಲೆ? ನಿಮಗೇನಾದರೂ ಅನಿಸಿದೆಯೆ ಪಂತರೇ?

ಪಂತ: ನೀವು ಮನಸ್ಸು ಮಾಡುವುದಾದರೆ ಒಂದು ಉಪಾಯ ಇದೆ ಸ್ವಾಮಿ.

ಗಾವಾನ್: ಹೇಳ್ರಿ, ನಾನೇನು ಮಾಡಬಲ್ಲೆ?

ಪಂತ: ಸರಕಾರೀ ಕಣಜದಲ್ಲಿ ಬೇಕಾದಷ್ಟು ಧಾನ್ಯ ತುಂಬಿದೆ ಸ್ವಾಮೀ. ಸುಲ್ತಾನರಿಗೆ ಹೇಳಿ ಇದೊಂದು ವರ್ಷ ನೀವು ದೊಡ್ಡ ಮನಸ್ಸು ಮಾಡಿದರೆ... ನಿಮ್ಮ ಹೆಸರು ಹೇಳಿ ಜನ ಬದುಕಿಕೊಳ್ತಾರೆ.

ಗಾವಾನ್: ಹಾಗೇ ಮಾಡ್ರಿ. ಸುಲ್ತಾನರಿಗೆ ನಾನು ಹೇಳಿಕೊಳ್ತೇನೆ. ಸುಲ್ತಾನರ ಔದಾರ‍್ಯ ದೊಡ್ಡದು. ಅವರ ಹೆಸರಿನಲ್ಲಿ ಧಾನ್ಯವನ್ನೆಲ್ಲಾ ಹಂಚಿಬಿಡಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.