ವರ್ಷದ ಹಿಂದಿನ ಮಾತು. ಹೊರಗಿನವನೊಬ್ಬ ತಮ್ಮ ರಾಜ್ಯಕ್ಕೆ ಕಾಲಿಟ್ಟು ಪಕ್ಷದ ಉಸ್ತುವಾರಿ ವಹಿಸಿಕೊಂಡಾಗ ಸ್ಥಳೀಯ ಮುಖಂಡರ ಕಣ್ಣು ಕೆಂಪಾಗಿತ್ತು. ಈತ ಏನು ಮಾಡಲು ಹೊರಟಿದ್ದಾನೆ? ರಾಜ್ಯದ ಬಗ್ಗೆ ಏನೂ ಗೊತ್ತಿರದ ವ್ಯಕ್ತಿಗೆ ಇಷ್ಟು ದೊಡ್ಡ ಜವಾಬ್ದಾರಿಯನ್ನು ಯಾಕಾದರೂ ಕೊಟ್ಟಿದ್ದಾರೋ ಎಂದೆಲ್ಲ ಗೊಣಗಾಡುತ್ತಿದ್ದರು. ಅಂದು ಆಕ್ಷೇಪ ಎತ್ತಿದವರು ಈಗ ಆ ವ್ಯಕ್ತಿಯನ್ನು ಬಾಯ್ತುಂಬ ಹೊಗಳುತ್ತಿದ್ದಾರೆ.

ಅವರೇ ಅಮಿತ್‌ಭಾಯ್ ಅನಿಲ್‌ಚಂದ್ರ ಷಾ. ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಬಲಗೈ ಬಂಟ. ಒಂದು ಕಾಲದಲ್ಲಿ ಷೇರು ದಲ್ಲಾಳಿಯಾಗಿದ್ದ ಅಮಿತ್ ಷಾ, ಇಂದು ‘ಕಿಂಗ್ ಮೇಕರ್’!

ಉತ್ತರಪ್ರದೇಶದಲ್ಲಿ ಸಂಪೂರ್ಣ ನೆಲಕಚ್ಚಿದ್ದ ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 71 ಸ್ಥಾನಗಳನ್ನು ಗೆದ್ದಿರುವುದು ಪವಾಡವಂತೂ ಖಂಡಿತ ಅಲ್ಲ. ಇಂಥದ್ದೊಂದು ಅಭೂತಪೂರ್ವ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಈ ಆಧುನಿಕ ಚಾಣಕ್ಯನ ವಿನೂತನ ಪ್ರಚಾರ ತಂತ್ರ. ತಮ್ಮ ನಡೆಯ ಗುಟ್ಟು ಬಿಟ್ಟುಕೊಡದ ಷಾ ತೆರೆಮರೆಯಲ್ಲಿದ್ದುಕೊಂಡೇ ಗುರಿ ಸಾಧಿಸಿಬಿಟ್ಟರು.

ಒಂದು ರಾಜ್ಯದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಚಿತ್ರಣದ ಸ್ಪಷ್ಟ ಕಲ್ಪನೆ ಇರದ ವ್ಯಕ್ತಿ ಇಷ್ಟೆಲ್ಲ ಸಾಧಿಸಿದ್ದು ಹಲವರಲ್ಲಿ ಸೋಜಿಗ ಮೂಡಿಸಿದ್ದು ಸುಳ್ಳಲ್ಲ.

‘ಪ್ರತಿಕೂಲ ಪರಿಸ್ಥಿತಿಯಲ್ಲೂ ಲಾಭ ಪಡೆಯುವುದು ಹೇಗೆ ಎನ್ನುವುದನ್ನು ಅಮಿತ್‌ಭಾಯ್ ಅವರನ್ನು ನೋಡಿ ಕಲಿಯಬೇಕು’ ಎನ್ನುತ್ತಾರೆ ಕೆಲವು ಮುಖಂಡರು. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಷಾ ಹೆಸರು ಕೇಳಿಬಂತು. ‘ಈ ಪ್ರಕರಣದಲ್ಲಿ ಷಾ ಅವರು ಎರಡು ವರ್ಷಗಳ ಕಾಲ ಗುಜರಾತ್‌ನಿಂದ ದೂರ ಇರಬೇಕು’ ಎಂದು 2010ರಲ್ಲಿ ಗುಜರಾತ್ ಹೈಕೋರ್ಟ್ ಆದೇಶ ನೀಡಿತ್ತು. ಒಂದು ರೀತಿಯಲ್ಲಿ ಇದು ಷಾ ಪಾಲಿಗೆ ವರವೇ ಆಯಿತೆನ್ನಿ. ಈ ಅವಧಿಯಲ್ಲಿ ಅವರು ಉತ್ತರಪ್ರದೇಶಕ್ಕೆ ಅನೇಕ ಸಲ ಭೇಟಿ ಕೊಟ್ಟರು. ಇದೇ ಸಂದರ್ಭದಲ್ಲಿ ಮೋದಿ, ಉತ್ತರಪ್ರದೇಶದಲ್ಲಿ ಚುನಾವಣಾ ಉಸ್ತುವಾರಿಯನ್ನು ಯಾರಿಗೆ ವಹಿಸಬೇಕು ಎಂಬ ಹುಡುಕಾಟದಲ್ಲಿದ್ದರು. ಅಮಿತ್‌್ ಷಾ ಹೇಳಿ ಮಾಡಿಸಿದ ವ್ಯಕ್ತಿ ಎಂದು ಲೆಕ್ಕ ಹಾಕಿದರು. ತಡಮಾಡದೇ ಅವರನ್ನು ಅಲ್ಲಿ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಕ ಮಾಡಿದರು.

ಲೋಕಸಭೆ ಚುನಾವಣೆಗೆ 11 ತಿಂಗಳು ಬಾಕಿ ಇದ್ದವು. ಷಾ ಮುಂದೆ ಎರಡು ಪ್ರಮುಖ ಸವಾಲುಗಳು ಇದ್ದವು. ಒಂದನೆಯದು, ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸುವುದು. ಎರಡನೆಯದು, ಚುನಾವಣೆಯಲ್ಲಿ ಏನಿಲ್ಲವೆಂದರೂ ಕನಿಷ್ಠ 40 ಸ್ಥಾನಗಳನ್ನು ಗೆಲ್ಲುವುದು. ಮೋದಿ ಅವರು ದೆಹಲಿ ಗದ್ದುಗೆ ಏರುವುದಕ್ಕೆ ಈ ರಾಜ್ಯದ ಫಲಿತಾಂಶ ನಿರ್ಣಾಯಕವಾಗಿತ್ತು. ಈ ಉದ್ದೇಶದಿಂದಲೇ ಮೋದಿ, ತಮ್ಮ ಶಿಷ್ಯನಿಗೆ ಆ ರಾಜ್ಯದ ಉಸ್ತುವಾರಿ ಪಟ್ಟ ಕಟ್ಟಿದ್ದರು. ಮೋದಿ ನಿರೀಕ್ಷೆ ಹುಸಿಯಾಗಲಿಲ್ಲ. ಅಚ್ಚರಿಯ ಫಲಿತಾಂಶ ಹೊರಬಿತ್ತು. ಹನುಮಂತನ ಭಕ್ತ ಅಮಿತ್‌್ ಷಾ, ಇಡೀ ಉತ್ತರಪ್ರದೇಶವನ್ನು ತಮ್ಮ ‘ಸಾಹೇಬ್’ ಉಡಿಗೆ ಹಾಕಿದರು. ಸದಾ ರಾಜಕೀಯವನ್ನೇ ಧ್ಯಾನಿಸುವ ಷಾ ಲೆಕ್ಕಾಚಾರ ತಲೆಕೆಳಗಾಗಿದ್ದು ತುಂಬ ಕಡಿಮೆ.

ರಾಮಮಂದಿರ ಚಳವಳಿ ನಂತರದ ದಶಕದಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಸ್ಥಿತಿ ಸೂತ್ರ ಕಿತ್ತ ಗಾಳಿಪಟವಾಗಿತ್ತು. ಇನ್ನು, 2009ರ ಲೋಕಸಭೆ ಚುನಾವಣೆಯಲ್ಲಿ ಇನ್ನಿಲ್ಲದಂತೆ ಹೀನಾಯ ಸೋಲು ಕಾಣಬೇಕಾಯಿತು. 80 ಸ್ಥಾನಗಳಲ್ಲಿ ಆಗ ಬಿಜೆಪಿ ಗೆದ್ದಿದ್ದು ಕೇವಲ 10 ಸ್ಥಾನಗಳಲ್ಲಿ. ಮಕಾಡೆ ಮಲಗಿದ್ದ ಪಕ್ಷವನ್ನು ಮತ್ತೆ ಮೇಲಕ್ಕೆತ್ತುವುದು ಸುಲಭದ ಕೆಲಸವಾಗಿರಲಿಲ್ಲ. ಬೆಟ್ಟದಂಥ ಸವಾಲು ಮುಂದಿತ್ತು. ಈ ಅಗ್ನಿಪರೀಕ್ಷೆ ಎದುರಿಸಲು ತಳಮಟ್ಟದಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದನ್ನು ಅರಿತುಕೊಳ್ಳಲು ಷಾ ಅವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.

ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ, ಮನೆ ಮನೆ ಭೇಟಿ, ಟಿ.ವಿ, ದಿನಪತ್ರಿಕೆಗಳ ಗಂಧ ಗಾಳಿ ಇಲ್ಲದ ಕುಗ್ರಾಮಗಳಲ್ಲಿ ಸಂಚಾರ, ಆರೆಸ್ಸೆಸ್ ಕಾರ್ಯಕರ್ತರ ತಂಡ ಕಟ್ಟಿಕೊಂಡು ಸಮರೋಪಾದಿಯಲ್ಲಿ ಪ್ರಚಾರ– ಇವು ಷಾ ಇಟ್ಟ ಹೆಜ್ಜೆಗಳು.

ಫೆಬ್ರುವರಿ ಅಂತ್ಯದ ಹೊತ್ತಿಗೆ ಅವರು ಏನಿಲ್ಲವೆಂದರೂ 76 ಕ್ಷೇತ್ರಗಳನ್ನು ಸುತ್ತಿ ಬಂದಿದ್ದರು. ಮೋದಿ ಭಾಷಣದ ವಿಡಿಯೊ ದೃಶ್ಯಗಳನ್ನು ಬಿತ್ತರಿಸಲು ಸುಮಾರು 450 ವಿಡಿಯೊ ವ್ಯಾನ್‌ಗಳು ಹಳ್ಳಿಹಳ್ಳಿಗೂ ಸಂಚರಿಸುತ್ತಿದ್ದವು. ಜಾತಿ ನೋಡಿ ವೋಟು ಹಾಕುವ ಜನರೆಲ್ಲ ‘ಗುಜರಾತ್ ಅಭಿವೃದ್ಧಿ ಮಾದರಿ’ ಬಗ್ಗೆ ಮಾತನಾಡುವಂತಾಯಿತು.

ಆರಂಭದಲ್ಲಿ ಪ್ರಚಾರದುದ್ದಕ್ಕೂ ರಾಮಮಂದಿರ ನಿರ್ಮಾಣ ವಿಷಯ ಪ್ರಸ್ತಾಪಿಸುತ್ತಿದ್ದ ಷಾ, ಕೊನೆಗೆ ಅಭಿವೃದ್ಧಿಯತ್ತ ಮಾತು ಹೊರಳಿಸಿದರು. ಪ್ರಚಾರದಲ್ಲಿ ಮಾತೇ ಬಂಡವಾಳ ಎನ್ನುವ ಕಾರಣಕ್ಕೋ ಏನೋ ಮಿತಭಾಷಿ ಷಾ ಕ್ರಮೇಣ ವಾಚಾಳಿಯಾಗಿಬಿಟ್ಟರು. ನಾಲಿಗೆ ಹಿಡಿತ ಸಡಿಲಿಸಿ ಚುನಾವಣಾ ಆಯೋಗದ ಕೆಂಗಣ್ಣಿಗೂ ಗುರಿಯಾದರು.

‘ಮೋದಿ ಪ್ರಚಾರದಲ್ಲಿ ಅಮಿತ್ ಷಾ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು. ಉತ್ತರಪ್ರದೇಶದಲ್ಲಿ ಮೋದಿ ಅಲೆಗಿಂತ ಹೆಚ್ಚಾಗಿ ಷಾ ಪ್ರಚಾರ ತಂತ್ರವೇ ಕೆಲಸ ಮಾಡಿದೆ’ ಎಂದು ಎದುರಾಳಿ ಪಕ್ಷದವರು ಕೂಡ ಮುಕ್ತವಾಗಿ ಹೇಳುತ್ತಾರೆ. ಮೋದಿ ಹಾಗೂ ಆರೆಸ್ಸೆಸ್ ನಾಯಕರ ನಡುವೆ ಅಮಿತ್‌್ ಷಾ ಸೇತುವೆಯಂತೆಯೂ ಕೆಲಸ ಮಾಡಿದ್ದಾರೆ.

ಹಲವಾರು ಬಾರಿ ಆರೆಸ್ಸೆಸ್ ನಾಯಕರನ್ನು ಖುದ್ದು ಭೇಟಿಯಾಗಿದ್ದ ಅವರು, ನರೇಂದ್ರ ಮೋದಿ ಅವರನ್ನೇ ಯಾಕೆ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕು ಎನ್ನುವುದನ್ನು ಮನದಟ್ಟು ಮಾಡಿಕೊಟ್ಟಿದ್ದರಂತೆ. ಗುಜರಾತ್‌ನಿಂದ ದೆಹಲಿವರೆಗಿನ ಮೋದಿ ಅವರ ರಾಜಕೀಯ ಪಯಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಮಿತ್ ಷಾ ಮುಂದಿನ ನಡೆಯನ್ನು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.