ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ | ನನಗೆ ಇಪಿಎಸ್ ಪಿಂಚಣಿ ದೊರೆಯುವುದೇ?

Published : 16 ಜುಲೈ 2024, 23:10 IST
Last Updated : 16 ಜುಲೈ 2024, 23:10 IST
ಫಾಲೋ ಮಾಡಿ
Comments
ಪ್ರ

ನಾನು ಒಂದು ವರ್ಷದ ಹಿಂದೆ ಮನೆಯನ್ನು ಮಾರಾಟ ಮಾಡಿ ಬಂದ ಲಾಭದ ಮೇಲೆ ತೆರಿಗೆ ಉಳಿತಾಯಕ್ಕೆ ಸಂಬಂಧಿಸಿ ‘ಕ್ಯಾಪಿಟಲ್ ಗೈನ್ಸ್’ ಖಾತೆ ತೆರೆದು ತೆರಿಗೆ ವಿನಾಯಿತಿ ಪಡೆದಿದ್ದೆ. ಪ್ರಸ್ತುತ ನಾನು ಮೊದಲ ಹಂತದಲ್ಲಿ ನಿವೇಶನ ಖರೀದಿಸಿ ಮುಂದೆ ಮನೆಯನ್ನು ಕಟ್ಟಬೇಕೆಂದಿದ್ದೇನೆ. ಮನೆ ನಿರ್ಮಾಣಕ್ಕೆ ಸಂದಾಯವಾಗುವ ಹಣಕ್ಕಿಂತ ಅಧಿಕ ಮೊತ್ತ ಭೂಮಿಗೆ ಪಾವತಿಯಾಗುತ್ತಿದೆ. ಉಳಿದ ಹಣವನ್ನು ಮನೆ ಕಟ್ಟುವ ಕೆಲಸಕ್ಕೆ ಉಪಯೋಗಿಸಲಿದ್ದೇನೆ.ನನ್ನ ಪ್ರಶ್ನೆ ಏನೆಂದರೆ, ಮನೆ ನಿರ್ಮಾಣವನ್ನು ತುಸು ಮುಂದೂಡಿ ಮೊದಲ ಹಂತದಲ್ಲಿ ಭೂಮಿ ಖರೀದಿಸಿ ಇಟ್ಟುಕೊಂಡು ಅವಕಾಶವಾದಾಗ ಮನೆ ನಿರ್ಮಿಸಲು ಇಚ್ಛಿಸಿದ್ದೇನೆ. ಇದರಿಂದ ಯಾವುದಾದರೂ ತೊಂದರೆ ಇದೆಯೇ? ಈ ಹಿಂದೆ ಪಡೆದ ತೆರಿಗೆ ವಿನಾಯಿತಿಗೆ ಯಾವುದಾದರೂ ತೊಡಕಾಗುತ್ತದೆಯೇ? ಈ ಬಗ್ಗೆ ನಾನು ಮುಂದೇನು ಮಾಡಬಹುದು?

ನೀವು ನೀಡಿರುವ ಮಾಹಿತಿಯಂತೆ ಹಿಂದಿನ ವರ್ಷದಲ್ಲಿ ನಿಮ್ಮ ಮನೆ ಮಾರಾಟ ಮಾಡಿ ಅದೇ ಸಂದರ್ಭದಲ್ಲಿ ‘ಕ್ಯಾಪಿಟಲ್ ಗೈನ್ಸ್’ ಅಕೌಂಟ್ ತೆರೆದು ತೆರಿಗೆ ವಿನಾಯಿತಿ ಪಡೆದಿದ್ದೀರಿ. ಈ ಖಾತೆಯಲ್ಲಿ ಹಣ ಹೂಡಿಕೆ ಮಾಡಿದ್ದ ಸನ್ನಿವೇಶಗಳಲ್ಲಿ ತೆರಿಗೆದಾರರಿಗೆ ಒಂದಿಷ್ಟು ಸಮಯ ತಮ್ಮ ಮುಂದಿನ ಯೋಜನೆಯನ್ನು ನಿರೂಪಿಸಿ ಖಾತೆಯಲ್ಲಿ ಇರುವ ಹಣವನ್ನು ತೆರಿಗೆ ಉಳಿತಾಯಕ್ಕಿರುವ ನಿಯಮದಂತೆ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.  

ಇದರಂತೆ ನಿಮ್ಮ ಮೂಲ ಆಸ್ತಿ ಮಾರಾಟವಾದ ಸಂದರ್ಭದಿಂದ ಎರಡು ವರ್ಷದೊಳಗೆ ಹೊಸದೊಂದು ಮನೆ ಖರೀದಿಸಿರಬೇಕು ಅಥವಾ ಮೂರು ವರ್ಷದೊಳಗೆ ಮನೆ ಕಟ್ಟಿಸಿರಬೇಕು. ಒಂದು ವೇಳೆ ಇದು ಯಾವುದೂ ಕಾರ್ಯಗತ ಮಾಡಿರದ ಸನ್ನಿವೇಶದಲ್ಲಿ ಮೂಲ ಮನೆಯ ಮಾರಾಟದ ಸಂದರ್ಭದಲ್ಲಿ ನೀಡಲಾಗಿದ್ದ ವಿನಾಯಿತಿಯನ್ನು ರದ್ದುಗೊಳಿಸಿ ಹಿಂದೆ ನೀಡಲಾದ ವಿನಾಯಿತಿಯನ್ನು ಮೂರು ವರ್ಷದ ಸಮಯ ಪರಿಮಿತಿ ಕಳೆದೊಡನೆ ದೀರ್ಘಾವಧಿ ಬಂಡವಾಳ ಲಾಭವೆಂದು ಪರಿಗಣಿಸಿ ತೆರಿಗೆಗೆ ಒಳಪಡಿಸಲಾಗುತ್ತದೆ.

ಹೀಗಾಗಿ, ನಿಮ್ಮ ಮೊದಲ ಹಂತದ ಯೋಜನೆ ಕೇವಲ ಭೂಮಿ ಖರೀದಿಸುವುದು ಹಾಗೂ ಅವಕಾಶ ಬಂದಾಗ ಮುಂದೆ ಮನೆ ಕಟ್ಟುವ ದೀರ್ಘಾವಧಿ ಯೋಜನೆ ಇದ್ದರೂ, ಅದು ತೆರಿಗೆ ನಿಯಮಗಳ ಅನ್ವಯ ಸಮಯ ಪರಿಮಿತಿ ಮೀರಿದಾಗ ಈಗಾಗಲೇ ಪಡೆದ ವಿನಾಯಿತಿಯು ತಾತ್ಕಾಲಿಕವಾಗುತ್ತದೆ. ತೆರಿಗೆ ನಿಯಮದ ಅನ್ವಯ ಕೇವಲ ಭೂಮಿ ಖರೀದಿಗಾಗಿ ಅಥವಾ ಭೂಮಿಯಲ್ಲಿ ಹೂಡಿಕೆಗಾಗಿ ಯಾವುದೇ ವಿನಾಯಿತಿ ಇರುವುದಿಲ್ಲ.

ನೀವು ಮನೆ ಮಾರಾಟ ಮಾಡಿ ಮನೆ ಖರೀದಿಸುವುದರಿಂದ ಸೆಕ್ಷನ್ 54ರ ಅಡಿ ವಿನಾಯಿತಿ ಪಡೆದಿರುತ್ತೀರಿ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ತೆರಿಗೆದಾರರಲ್ಲಿ ಹೊಸ ಮನೆ ನಿರ್ಮಾಣ- ಖರೀದಿಗೆ ಉತ್ತೇಜನ ನೀಡುವುದಾಗಿದೆಯೇ ಹೊರತು, ಕೇವಲ ಮರು ಹೂಡಿಕೆಯ ದೃಷ್ಟಿಯಿಂದ ಕೈಗೊಳ್ಳುವ ಭೂ ವ್ಯವಹಾರಗಳಿಗೆ ತೆರಿಗೆ ವಿನಾಯಿತಿ ನೀಡುವುದಲ್ಲ.

ಹೊಸ ಮನೆ ಖರೀದಿಗೆ ಉತ್ತೇಜನ ನೀಡಿದಾಗ ಪರೋಕ್ಷವಾಗಿ ದೇಶದ ಆರ್ಥಿಕತೆಗೂ ಸಹಕಾರಿಯಾಗುತ್ತದೆ ಎಂಬುದು ಇದರ ಹಿಂದಿನ ಅಲಿಖಿತ ಆಶಯ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಮಾಡಲಾದ ಹೂಡಿಕೆಯನ್ನು ಯಾವುದೇ ನಿರ್ಧಾರ ಕೈಗೊಳ್ಳದೆ ಹಾಗೆಯೇ ಇಟ್ಟರೂ ಉದ್ದೇಶಿತ ಗುರಿ ಈಡೇರದ ಕಾರಣ ತೆರಿಗೆ ಕಟ್ಟಿಯೇ ಹಣ ಹಿಂಪಡೆಯಬೇಕಾಗುತ್ತದೆ. ಅದಕ್ಕೂ ನೀವು ತೆರಿಗೆ ಪಾವತಿಸಿರುವ ದಾಖಲೆಗಳನ್ನು ನೀಡಬೇಕಾಗುತ್ತದೆ. ಹೀಗಾಗಿ, ನಿಮ್ಮ ಯೋಜನೆಯನ್ನು ಈ ವಿಚಾರಗಳ ಸುತ್ತ ಮರು ಪರಿಶೀಲನೆ ಮಾಡಬೇಕು ಹಾಗೂ ಸಮಯದ ಪರಿಧಿಯೊಳಗೆ ಮನೆ ನಿರ್ಮಾಣ ಪೂರೈಸಿ.

ಪ್ರ

ನಾನು ಬಹುರಾಷ್ಟ್ರೀಯ ಐ.ಟಿ ಕಂಪನಿಯಲ್ಲಿ ಒಂಬತ್ತು ವರ್ಷ ಏಳು ತಿಂಗಳ ಕಾಲ ಕೆಲಸ ನಿರ್ವಹಿಸಿ ನಂತರದಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದೇನೆ. ಮೊದಲ ಕೆಲಸದ ಸಮಯದಲ್ಲಿ ಒಂಬತ್ತು ವರ್ಷ ಆರು ತಿಂಗಳಿಗಿಂತ ಹೆಚ್ಚು ಕಾರ್ಯ ನಿರ್ವಹಿಸಿರುವುದರಿಂದ ಇಪಿಎಸ್ ಅರ್ಹನಾಗಿದ್ದೇನೆ. ಈಗ ಸರ್ಕಾರಿ ನೌಕರಿಗೆ ಸೇರಿರುವುದರಿಂದ ಅಲ್ಲಿಯೂ ಎನ್‌ಪಿಎಸ್ ದೊರೆಯುತ್ತದೆ. ಇದರಿಂದ ನನಗೆ ಇಪಿಎಸ್ ಪಿಂಚಣಿ ದೊರೆಯುವುದೇ? ಒಂದು ವೇಳೆ ದೊರೆಯದಿದ್ದರೆ ಇಪಿಎಸ್ ಮೊತ್ತ ಹಿಂಪಡೆಯಬಹುದೇ?

ನೀವು ಈಗಾಗಲೇ ಸರ್ಕಾರಿ ಉದ್ಯೋಗಕ್ಕೆ ಸೇರಿದ್ದು ಅಲ್ಲಿ ನಿವೃತ್ತಿ ಸಂಬಂಧಿತ ಯೋಜನೆ ಹಾಗೂ ಅದಕ್ಕೆ ಪಾವತಿಗಳು ಪ್ರತ್ಯೇಕವಾದ ಎನ್‌ಪಿಎಸ್ ಅಡಿ ನಡೆಯುತ್ತಿದೆ ಎಂದು ತಿಳಿಸಿದ್ದೀರಿ. ನಿಮ್ಮ ಹಿಂದಿನ ಸಂಸ್ಥೆಯ ಸೇವೆಯ ಆಧಾರದ ಮೇಲೆ ನೀವು ಈಗಾಗಲೇ ಪಿಂಚಣಿಗೆ ಅರ್ಹರಾಗಲು ಅಗತ್ಯವಿರುವ ಕನಿಷ್ಠ ಸೇವಾವಧಿಯಾದ ಹತ್ತು ವರ್ಷ ಪೂರೈಸಿರುವುದರಿಂದ ನೀವು ಪಿಂಚಣಿಗೆ ಅರ್ಹರು.

ನೌಕರರ ಪಿಂಚಣಿ ಯೋಜನೆಯಡಿ ಹತ್ತು ವರ್ಷ ಸೇವಾವಧಿ ಪೂರೈಸಿದ ನಂತರ ಅವಧಿಗೂ ಮುನ್ನ ಪಿಂಚಣಿ ಪಡೆಯಲು ಅವಕಾಶವಿಲ್ಲ. ಆದರೆ, 50 ವರ್ಷ ಪೂರ್ತಿಯಾದ ನಂತರ 58 ವರ್ಷಕ್ಕೂ ಮೊದಲು, ಅವಧಿಗೂ ಮುನ್ನ ಪಿಂಚಣಿ ಪಡೆಯಲು ಅವಕಾಶವಿದೆ.

58 ವಯಸ್ಸು ಪೂರ್ತಿಯಾದ ನಂತರ ಖಾತೆದಾರರು ಸಹಜವಾಗಿ ಪೂರ್ಣ ಪ್ರಮಾಣದ ಪಿಂಚಣಿ ಪಡೆಯಲು ಅರ್ಹರು. ಸಂದರ್ಭದಲ್ಲಿ ಅವಧಿಗೂ ಮುನ್ನ, ಎಷ್ಟು ವರ್ಷ ಪೂರ್ವಭಾವಿಯಾಗಿ ಪಿಂಚಣಿ ಪಡೆಯುತ್ತೀರೋ ಅದಕ್ಕೆ ಅನುಗುಣವಾಗಿ ಪಿಂಚಣಿಯ ಪ್ರಮಾಣವೂ ಕಡಿಮೆಯಾಗುತ್ತದೆ.

ಪಿಂಚಣಿ ಖಾತೆದಾರರು ಪಿಂಚಣಿಗಾಗಿ ತಮ್ಮ ಕನಿಷ್ಠ ಸೇವಾವಧಿ ಪೂರೈಸದಿದ್ದ ಸಂದರ್ಭದಲ್ಲಿ ಮಾತ್ರ ಈಗಾಗಲೇ ಪಾವತಿಸಿರುವ ಮೊತ್ತ ಹಿಂಪಡೆಯಲು ಸಾಧ್ಯವಿದೆ. ನಿಮ್ಮ ವಿಚಾರದಲ್ಲಿ ಇದು 9 ವರ್ಷ 6 ತಿಂಗಳಿಗಿಂತ ಹೆಚ್ಚಿರುವ ಕಾರಣ ಹತ್ತು ವರ್ಷ ಸೇವಾವಧಿಗೆ ಸಮ. ಹೀಗಾಗಿ, ಮುಂದಿನ ಕೆಲವು ವರ್ಷ ನೀವು ಕಾಯಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT