ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ | ಯಾವ ಬಗೆಯ ತೆರಿಗೆ ರಿಯಾಯಿತಿಗಳು ಲಭ್ಯ ?

Published : 6 ಆಗಸ್ಟ್ 2024, 23:30 IST
Last Updated : 6 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ಪ್ರ

ನಾನು ಹಿರಿಯ ನಾಗರಿಕ (ವಯಸ್ಸು 87). ನಮಗೆ ಯಾವ ಬಗೆಯ ತೆರಿಗೆ ರಿಯಾಯಿತಿಗಳು ಲಭ್ಯ ಎನ್ನುವ ಮಾಹಿತಿ ನೀಡಿ. ನನ್ನಲ್ಲಿ ಬ್ಯಾಂಕ್ ಎಫ್‌.ಡಿ ಹಾಗೂ ಉಳಿತಾಯ ಖಾತೆ ಬಡ್ಡಿ ಆದಾಯ ಬರುತ್ತಿದೆ. ಇದಲ್ಲದೆ, ವೈದ್ಯಕೀಯ ವೆಚ್ಚ ಕೂಡ ಇದೆ. ಈ ರಿಯಾಯಿತಿಗಳಲ್ಲದೆ ಇನ್ನೂ ಇತರೆ ವಿಶೇಷ ರಿಯಾಯಿತಿ ಸೌಲಭ್ಯವು ನಮಗೆ ಸಿಗುವುದಿದ್ದರೆ ತಿಳಿಸಿ.

ನೀವು ಅತಿ ಹಿರಿಯ ನಾಗರಿಕರಾಗಿದ್ದೀರಿ. ಇದರಿಂದ ನಿಮ್ಮ ಆಯ್ಕೆಯ ತೆರಿಗೆ ಪದ್ಧತಿಯಂತೆ ನಿಮಗೆ ಸಿಗುವ ತೆರಿಗೆ ವಿನಾಯಿತಿ ಕಳೆದು ಉಳಿದ ಮೊತ್ತವು ಇನ್ನೂ ತೆರಿಗೆಗೆ ಒಳಪಡುವುದಿದ್ದರೆ, ತೆರಿಗೆ ಪಾವತಿಸಿ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ನಿಮ್ಮ ವಿಚಾರದಲ್ಲಿ ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವುದೇ ಲಾಭದಾಯಕವೆಂದು ಕಂಡುಬಂದರೆ ಮಾತ್ರ ಈ ಕೆಳಗಿನ ಮಾಹಿತಿಯಂತೆ ವಿನಾಯಿತಿ ಪಡೆಯಬಹುದು.  ಬಡ್ಡಿ ಆದಾಯಕ್ಕೆ ಸೆಕ್ಷನ್ 80ಟಿಟಿಬಿ ಅಡಿ ₹50,000, ಸೆಕ್ಷನ್ 80ಡಿ ಅಡಿ ಇನ್ಶೂರೆನ್ಸ್ ಇಲ್ಲದ ಸಂದರ್ಭದಲ್ಲಿ ಮೆಡಿಕಲ್ ವೆಚ್ಚಕ್ಕಾಗಿ ₹50,000, ವಿಶೇಷ ಕಾಯಿಲೆ ಇತ್ಯಾದಿ ಇದ್ದ ಸಂದರ್ಭದಲ್ಲಿ ಸೆಕ್ಷನ್ 80ಡಿಡಿಬಿ ಅಡಿ ನೈಜ ವೆಚ್ಚ ಅಥವಾ ₹1 ಲಕ್ಷದ ತನಕ ವಿನಾಯಿತಿ ಲಭ್ಯವಿದೆ.

ಸೆಕ್ಷನ್ 194ಪಿ ಅನ್ವಯ ಕೇವಲ ಪಿಂಚಣಿ ಆದಾಯ ಅಥವಾ ಬಡ್ಡಿ ಆದಾಯ ಇದ್ದಾಗ ನೀವು ಆಯ್ಕೆ ಮಾಡಿದ ಯಾವುದೇ ಪದ್ಧತಿಯಡಿ ಬ್ಯಾಂಕಿನವರು ನಿಮಗೆ ಅನ್ವಯವಾಗುವ ಸಮರ್ಪಕ ತೆರಿಗೆಯನ್ನು ಕಡಿತಗೊಳಿಸಿ ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಲ್ಲಿಸಿದ್ದರೆ ನೀವು ರಿಟರ್ನ್ಸ್ ಸಲ್ಲಿಸುವ ಅಗತ್ಯವೂ ಇರುವುದಿಲ್ಲ. ಒಂದು ವೇಳೆ ನಿಮಗೆ ₹50,000ಕ್ಕಿಂತ ಅಧಿಕ ಬಡ್ಡಿ ಬರುತ್ತಿದ್ದು, ಒಟ್ಟಾರೆ ತೆರಿಗೆ ಅನ್ವಯಿಸುವುದಿಲ್ಲ ಎಂದಾದರೆ ಫಾರಂ 15 ಎಚ್‌ ಅನ್ನು ಬ್ಯಾಂಕಿಗೆ ಸಲ್ಲಿಸಿ.

ಪ್ರ

ನಾನು ಬ್ಯಾಂಕ್‌ನ ನಿವೃತ್ತ ಉದ್ಯೋಗಿ. 2015ರ ಏಪ್ರಿಲ್‌ 30ರಂದು ನಿವೃತ್ತಿ ಹೊಂದಿದೆ. 8 ತಿಂಗಳ ರಜಾ ನಿವೃತ್ತಿ ವೇತನವಾಗಿ ₹6.02 ಲಕ್ಷ ಮೊತ್ತ ಸಿಕ್ಕಿತ್ತು. ಆ ಸಂದರ್ಭದಲ್ಲಿ ₹3 ಲಕ್ಷ ಮಾತ್ರ ರಜಾ ವೇತನಕ್ಕೆ ತೆರಿಗೆ ವಿನಾಯಿತಿ ಇತ್ತು. ತದನಂತರ ಈ ಮೊತ್ತವನ್ನು ₹25 ಲಕ್ಷಕ್ಕೆ ಹೆಚ್ಚಿಸಲಾಯಿತು. ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ (ದಿನಾಂಕ 24.5.2023ರಂದು) ಹೊರಡಿಸಲಾಯಿತು.

ಇದರಲ್ಲಿ ಇರುವಂತೆ ಪೂರ್ವಾನ್ವಯವಾಗುವ ರೀತಿ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ನಮ್ಮ ಬ್ಯಾಂಕ್‌ನ ಪೆನ್ಷನರ್ ಅಸೋಸಿಯೇಷನ್ ಕೂಡ ಈ ವಿನಾಯಿತಿ ಪೂರ್ವಾನ್ವಯವಾಗುವ ಕಾರಣಕ್ಕೆ ಹಿಂದಿನ ವರ್ಷಗಳಿಗೂ ವಿನಾಯಿತಿ ಪಡೆಯಬಹುದು ಎಂದು ಮಾಹಿತಿ ನೀಡುವ ತಿಳಿವಳಿಕೆ ಪತ್ರವನ್ನು ಸದಸ್ಯರ ಅವಗಾಹನೆಗೆ ತಂದಿರುತ್ತಾರೆ. ಈ ಬಗ್ಗೆ ನನ್ನ ಪ್ರಶ್ನೆ ಏನೆಂದರೆ, ಈ ನೋಟಿಫಿಕೇಷನ್ ಪ್ರಕಾರ ನಾವು 2015ಕ್ಕೆ ನಿವೃತ್ತಿಯ ಸಮಯ ಸಲ್ಲಿಸಿದ್ದ ರಿಟರ್ನ್ಸ್‌ಗಳಲ್ಲಿ ₹3 ಲಕ್ಷಕ್ಕೂ ಹೆಚ್ಚಿನ ಮೊತ್ತದ ರಜಾ ವೇತನಕ್ಕೆ ಪಾವತಿಸಿದ ತೆರಿಗೆ ಹಿಂಪಡೆಯಬಹುದೇ? ಈ ಬಗ್ಗೆ ಮಾಹಿತಿ ನೀಡಿ.

ಉತ್ತರ: ರಜಾ ವೇತನಕ್ಕೆ ಸಂಬಂಧಿಸಿದ ವಿನಾಯಿತಿ ಬಗ್ಗೆ ಆದಾಯ ತೆರಿಗೆಯ ಸೆಕ್ಷನ್ 10(10ಎಎ) ಅಡಿ ಹೇಳಲಾಗಿದೆ. 2023ರ ಕೇಂದ್ರ ಬಜೆಟ್‌ನಲ್ಲಿ ಈ ಸಂಬಂಧ ಇರುವ ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗಿತ್ತು.

ತಾವು ಉಲ್ಲೇಖಿಸಿರುವ ಹಾಗೂ ಪ್ರಶ್ನೆಯೊಂದಿಗೆ ಮಾಹಿತಿಗಾಗಿ ನೀಡಿದ ಗೆಜೆಟ್‌ನಲ್ಲಿ ಹೇಳಿರುವಂತೆ ಈ ಹೊಸ ವಿನಾಯಿತಿ ಮಿತಿಯ ಪೂರ್ವಾನ್ವಯ ದಿನಾಂಕವು 2023ರ ಏಪ್ರಿಲ್‌ 1 ಆಗಿದೆ. ಆಗ ಚಾಲ್ತಿಯಲ್ಲಿದ್ದ ವಿನಾಯಿತಿ ಮೊತ್ತವನ್ನು ₹3 ಲಕ್ಷದಿಂದ ₹25 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸುತ್ತಾ, ಆ ಬಗ್ಗೆ ಸೂಕ್ತ ಈ  ನೋಟಿಫಿಕೇಷನ್ ಹೊರಡಿಸುವ ಬಗ್ಗೆ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಲಾಗಿತ್ತು. ಈ ಭಾಷಣದ ಪ್ರಸ್ತಾವನೆಯಂತೆ ಈ ಹಿಂದೆ ಈಗಾಗಲೇ ನಿವೃತ್ತಿ ಹೊಂದಿ, ಆಯಾ ಸಂದರ್ಭಕ್ಕೆ ಹೊಂದಿಕೊಂಡು, ಪಡೆಯಲಾದ ತೆರಿಗೆ ವಿನಾಯಿತಿಗಳಿಗೆ ಇನ್ನೂ ಹೆಚ್ಚುವರಿಯಾಗಿ ವಿನಾಯಿತಿ ಸಿಗುವ ರೀತಿ ಪೂರ್ವಾನ್ವಯವಾಗುವಂತೆ ತೆರಿಗೆ ಕಾನೂನು ನಿರೂಪಿಸುವುದು ಉದ್ದೇಶವಾಗಿರಲಿಲ್ಲ. ಬದಲಾಗಿ ಗೆಜೆಟ್ ಅಧಿಸೂಚನೆಯಲ್ಲಿ ಹೇಳಲಾದ ಮಾಹಿತಿಯಂತೆ 2023ರ ಏಪ್ರಿಲ್‌ 1ರಿಂದ ಹೆಚ್ಚುವರಿ ಮಿತಿ ಅನ್ವಯವಾಗುವುದಾಗಿ ಹೇಳಲಾಗಿತ್ತು.

ಹೀಗಾಗಿ, ಗೆಜೆಟ್ ಅಧಿಸೂಚನೆಯನ್ನು (24.5.2023ರಂದು) ತಡವಾಗಿ ಹೊರಡಿಸಲಾಗಿ ದ್ದರೂ ಅದನ್ನು 2023ರ ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗುವ ರೀತಿ ಕಾರ್ಯರೂಪಕ್ಕೆ ತರಲಾಗಿದೆ. ಆದರೆ, ತಡವಾಗಿ ಹೊರಡಿಸಲಾದ ಗೆಜೆಟ್‌ನಿಂದ ಯಾರಿಗೂ ವೃಥಾ ತೊಂದರೆಯಾಗ ಬಾರದು ಎನ್ನುವ ಉದ್ದೇಶದಿಂದ ವಿವರಣಾತ್ಮಕ ಮಾಹಿತಿ ನೀಡಲಾಗಿತ್ತು.

ಉದಾಹರಣೆಗೆ ಈ ಎರಡು ದಿನಾಂಕಗಳ ಅವಧಿಯಲ್ಲಿ ಯಾವುದೇ ವ್ಯಕ್ತಿ ನಿವೃತ್ತಿ ಹೊಂದಿದ್ದರೆ, ಅವರ ತೆರಿಗೆ ಲೆಕ್ಕ ಹಾಕುವಾಗ ₹3 ಲಕ್ಷದ ವಿನಾಯಿತಿ ಮಿತಿ ಎಂದು ಪರಿಗಣಿಸಿರುವ ಸಾಧ್ಯತೆ ಇರುವ ಕಾರಣ ಹಾಗೂ ಅದರಂತೆ ತೆರಿಗೆಯನ್ನೂ ಗೆಜೆಟ್ ಹೊರಡಿಸುವ ಮುನ್ನ ಕಡಿತಗೊಳಿಸಿರಬಹುದಾದ ಸಾಧ್ಯತೆ ಇದೆ. ಇದರಿಂದ, ಅಂತಹವರು ಅನಗತ್ಯ ತೊಂದರೆಗೆ ಒಳಪಡಬಾರದು ಎನ್ನುವ ಕಾರಣಕ್ಕೆ ವಾರ್ಷಿಕ ರಿಟರ್ನ್ಸ್ ಸಲಿಸುವಾಗ ರೀಫಂಡ್ ಪಡೆದುಕೊಳ್ಳಬಹುದು ಎಂಬುದೇ ಅದರಲ್ಲಿನ ವಿವರಣೆಯ ಪರೋಕ್ಷ ಅರ್ಥವಾಗಿದೆ.  

ಹೀಗಾಗಿ, ಈ ಪೂರ್ವಾನ್ವಯ ವಿನಾಯಿತಿಯನ್ನು ಬಜೆಟ್ ಮಂಡನೆಯ ಪರಿವ್ಯಾಪ್ತಿಗಿಂತಲೂ ಹಿಂದಿನ ಆರ್ಥಿಕ ವರ್ಷಗಳಿಗೆ ತಳಕು ಹಾಕುವುದು ತೆರಿಗೆ ವಿನಾಯಿತಿಯ ಪರಿಷ್ಕರಣೆಯ ಉದ್ದೇಶವಲ್ಲ. ಜೊತೆಗೆ, ತೆರಿಗೆಯ ಆಡಳಿತಾತ್ಮಕ ದೃಷ್ಟಿಕೋನದಿಂದಲೂ ಅದು ಪ್ರಾಯೋಗಿಕವಲ್ಲ. ಏಕೆಂದರೆ ಈ ಬಗೆಗಿನ ತೆರಿಗೆ ಮೌಲ್ಯಮಾಪನವು ಕೂಡ ಮುಗಿದಿರುತ್ತದೆ. ರಿಟರ್ನ್ಸ್ ಪರಿಷ್ಕರಿಸಲು ಇರುವ ಅವಧಿಯೂ ಆಯಾ ವರ್ಷಕ್ಕೆ ಸಂಬಂಧಿಸಿ ಈಗಾಗಲೇ ಮುಗಿದಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT