ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಫ್) ಸಂಬಂಧಿಸಿದಂತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಸರ್ಕಾರವು 45 ದಿನಗಳಲ್ಲಿ ತನ್ನ ಮೂರು ನಿರ್ಧಾರಗಳನ್ನು ವಾಪಸ್ ತೆಗೆದುಕೊಂಡಿದೆ. ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗೆ ಮಣಿದಿರುವ ಸರ್ಕಾರ ತನ್ನ ಪ್ರಕಟಿತ ನಿರ್ಧಾರ ರದ್ದುಪಡಿಸಿ ತೀವ್ರ ಮುಜುಗರಕ್ಕೆ ಒಳಗಾಗಿದೆ.

ಪಿಂಚಣಿ ನಿಧಿ ಸಂಸ್ಥೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) 2015–16ನೆ ಸಾಲಿಗೆ ನಿಗದಿಪಡಿಸಿದ್ದ ಶೇ 8.8 ಬಡ್ಡಿ ದರವನ್ನು ಶೇ 8.7ಕ್ಕೆ ಇಳಿಸಿದ್ದ ಹಣಕಾಸು ಇಲಾಖೆಯು ಕೊನೆಗೆ ತನ್ನ ನಿರ್ಧಾರ ಬದಲಿಸಿತು.

ಇದಕ್ಕೂ ಮೊದಲು, ಉದ್ಯೋಗಿಗಳು ತಮ್ಮ ‘ಇಪಿಎಫ್’ ಖಾತೆಯಲ್ಲಿನ ಹಣ ವಾಪಸ್ ಪಡೆಯುವುದರ ಮೇಲೆ ತೆರಿಗೆ ವಿಧಿಸಲು 2016–17ನೆ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಉದ್ಯೋಗಿಗಳು ನಿವೃತ್ತರಾಗುವವರೆಗೆ ‘ಇಪಿಎಫ್’ನಲ್ಲಿನ ಹಣ ವಾಪಸ್ ಪಡೆಯುವುದರ ಮೇಲೆ ನಿರ್ಬಂಧ ವಿಧಿಸಿ ಕಾರ್ಮಿಕ ಸಚಿವಾಲಯವು ಫೆಬ್ರುವರಿ 10ರಂದು ಆದೇಶ ಹೊರಡಿಸಿತ್ತು.

ವೇತನದಾರರು ತಮ್ಮ ಸ್ವಂತ ಕೊಡುಗೆ (ಮೂಲ ವೇತನದ ಶೇ 12) ವಾಪಸ್ ಪಡೆಯಲು ಅನುಮತಿ ನೀಡಿದ್ದರೂ, ಸಂಸ್ಥೆ ಪಾವತಿಸುವ ಮೂಲ ವೇತನದ ಶೇ 12ರಲ್ಲಿನ ಶೇ 3.67ರ ಹಣವನ್ನು ನಿವೃತ್ತಿ ನಂತರವೇ (58 ವರ್ಷ ಪೂರ್ಣಗೊಂಡಾಗ) ಮರಳಿ ಪಡೆಯಲು ನಿರ್ಬಂಧ ವಿಧಿಸಿತ್ತು. ಭವಿಷ್ಯ ನಿಧಿಗೆ ಸಂಸ್ಥೆಯು ನೀಡುವ ಮೂಲ ವೇತನದ ಶೇ 12ರಲ್ಲಿನ ಶೇ 8.33ರಷ್ಟು ಹಣವು ಉದ್ಯೋಗಿಗಳ ಪಿಂಚಣಿ ಯೋಜನೆಗೆ (Employees Pension Scheme -EPS) ಜಮೆಯಾಗುತ್ತದೆ. ಉಳಿದ ಮೊತ್ತವು ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಫ್‌ಗೆ) ಸೇರ್ಪಡೆಯಾಗುತ್ತದೆ.

ಉದ್ಯೋಗಿಗಳು ನಿವೃತ್ತಿ ಮುಂಚೆಯೇ ವೈದ್ಯಕೀಯ, ಮಕ್ಕಳ ಶಿಕ್ಷಣ, ಮದುವೆ ವೆಚ್ಚಗಳಿಗೆ ಅಥವಾ ಉದ್ಯೋಗ ಬದಲಿಸುವಾಗ ‘ಇಪಿಎಫ್’ನಲ್ಲಿನ ಪೂರ್ಣ ಮೊತ್ತವನ್ನು ಮರಳಿ ಪಡೆಯುವುದನ್ನು ನಿರ್ಬಂಧಿಸಿದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಬಿಟ್ಟಿತ್ತು.

ಮಧ್ಯಮ ವರ್ಗದ ವೇತನದಾರರ ತೀವ್ರ ವಿರೋಧಕ್ಕೆ ಮಣಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ನಿವೃತ್ತಿ ಸಂದರ್ಭದಲ್ಲಿ ಇಪಿಎಫ್ ಹಣ ಮರಳಿ ಪಡೆಯುವಾಗ ಶೇ 40ರಷ್ಟು ಹಣಕ್ಕೆ ಮಾತ್ರ ತೆರಿಗೆ ವಿನಾಯ್ತಿ ನೀಡುವ ಬಜೆಟ್ ಪ್ರಸ್ತಾವವನ್ನು ಮಾರ್ಚ್ 8ರಂದು ವಾಪಸ್ ತೆಗೆದುಕೊಂಡಿದ್ದರು. ಸದ್ಯಕ್ಕೆ ‘ಇಪಿಎಫ್’ ಹಣ ವಾಪಸ್ ಪಡೆಯುವುದು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.

ಈಗ ‘ಇಪಿಎಫ್’ ಬಡ್ಡಿ ದರ ತಗ್ಗಿಸಿ ಸರ್ಕಾರ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿತ್ತು. ಸರ್ಕಾರ ‘ಇಪಿಎಫ್’ ಬಡ್ಡಿ ದರ ಇಳಿಸುವ ತನ್ನ ನಿರ್ಧಾರ ಬದಲಿಸುವ ಮೂಲಕ, ದಿಟ್ಟ ಆರ್ಥಿಕ ನಿರ್ಧಾರಗಳನ್ನು ಜಾರಿಗೆ ತರುವ ಇಚ್ಛಾಶಕ್ತಿಯು ಸರ್ಕಾರಕ್ಕೆ ಇಲ್ಲದಿರುವುದನ್ನು ಸಾಬೀತುಪಡಿಸಿದೆ.

‘ಇಪಿಎಫ್’ ಬಡ್ಡಿ ದರ ಇಳಿಸಿದರೆ ಅದಕ್ಕೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಲಿದೆ ಎನ್ನುವ ಅಂದಾಜು ಮಾಡುವಲ್ಲಿ ಹಣಕಾಸು ಇಲಾಖೆ ವಿಫಲವಾಯಿತು. ಎರಡು ತಿಂಗಳಲ್ಲಿ ಮೂರು ಬಾರಿ ತನ್ನ ನಿರ್ಧಾರವನ್ನು ಸರ್ಕಾರ ಬದಲಿಸಬೇಕಾಗಿ ಬಂದಿರುವುದು ನರೇಂದ್ರ ಮೋದಿ ಸರ್ಕಾರದ ಅದರಲ್ಲೂ ವಿಶೇಷವಾಗಿ ಹಣಕಾಸು ಇಲಾಖೆಯಲ್ಲಿನ ಬೌದ್ಧಿಕ ದಿವಾಳಿತನಕ್ಕೂ ಕನ್ನಡಿ ಹಿಡಿಯುತ್ತದೆ.

ದೇಶದಲ್ಲಿನ ಬಹುತೇಕ ವೇತನ ವರ್ಗದ ಪಾಲಿಗೆ ಭವಿಷ್ಯ ನಿಧಿಯು ನಿವೃತ್ತಿಯ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಇದೊಂದು ದೀರ್ಘಾವಧಿಯ ಉತ್ತಮ ಹೂಡಿಕೆ ಯೋಜನೆಯೂ ಆಗಿದೆ. ಅಂಚೆ ಕಚೇರಿಯ ಸಣ್ಣ ಉಳಿತಾಯ ಮತ್ತು ಬ್ಯಾಂಕ್ ಠೇವಣಿಗಳ ಬಡ್ಡಿ ದರಗಳಿಗೆ ಹೋಲಿಸಿದರೆ, ‘ಇಪಿಎಫ್’ ಬಡ್ಡಿ ದರ ಹೆಚ್ಚಿಗೆ ಇದೆ. ಉದ್ಯೋಗಿ ಮತ್ತು ಸಂಸ್ಥೆಯ ಕೊಡುಗೆಗೆ ಪಾವತಿಸುವ ಬಡ್ಡಿಯು ದೀರ್ಘಾವಧಿಯಲ್ಲಿ ಹಣದುಬ್ಬರಕ್ಕಿಂತ ಹೆಚ್ಚಿನ ಲಾಭ ತಂದು ಕೊಡಲಿದೆ.

ಸಿರಿವಂತ ದೇಶಗಳಲ್ಲಿ ಇರುವಂತೆ ನಮ್ಮಲ್ಲಿ ಸೇವಾ ನಿವೃತ್ತರಿಗೆ ಸಾಮಾಜಿಕ ಸುರಕ್ಷತಾ ವ್ಯವಸ್ಥೆ ಇಲ್ಲ. ಹೀಗಾಗಿ ಬಹುಸಂಖ್ಯಾತರು ಈ ನಿಧಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ‘ಇಪಿಎಫ್’ ಸೇವೆ ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ನೆರವಿನಿಂದ ವೇತನದಾರರು ಉದ್ಯೋಗ ಬದಲಿಸಿದರೂ ಖಾತೆಯಲ್ಲಿನ ಹಣವನ್ನು ಸುಲಭವಾಗಿ ವರ್ಗಾಯಿಸಬಹುದು. ಎರಡು ತಿಂಗಳಿಗಿಂತ ಹೆಚ್ಚಿನ ಅವಧಿಗೆ ನಿರುದ್ಯೋಗಿಯಾಗಿದ್ದರೆ ಖಾತೆಯಲ್ಲಿನ ಪೂರ್ಣ ಹಣವನ್ನು ಹಿಂದಕ್ಕೆ ಪಡೆಯಬಹುದು. ನಿಧಿಯ ಶೇ 5ರಷ್ಟನ್ನು ಷೇರುಪೇಟೆಯಲ್ಲಿ ವಹಿವಾಟು ನಡೆಸುವ ನಿಧಿಗಳಲ್ಲಿ (ಇಟಿಎಫ್) ತೊಡಗಿಸಲಾಗುತ್ತಿದೆ.

ದೀರ್ಘಾವಧಿಯಲ್ಲಿ ಇದು ‘ಇಪಿಎಫ್’ಗೆ ಹೆಚ್ಚು ಲಾಭ ತಂದುಕೊಡುವ ನಿರೀಕ್ಷೆ ಇದೆ. ಇದು ಬಡ್ಡಿ ದರ ಹೆಚ್ಚಿಸಲೂ ನೆರವಾಗಲಿದೆ. ಒಂದು ವೇಳೆ ಸರ್ಕಾರಕ್ಕೆ ಭವಿಷ್ಯ ನಿಧಿ ಬಗ್ಗೆ ಸುಧಾರಣೆಗಳನ್ನು ತರುವ ಉದ್ದೇಶ ಇದ್ದರೆ, ಎಲ್ಲ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೆಗೆದುಕೊಂಡ ಅರೆಬೆಂದ ನಿರ್ಧಾರ ಇದಾಗಿತ್ತು.

ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಸಿರುವುದಕ್ಕೆ ಪೂರಕವಾಗಿ ಹಣಕಾಸು ಸಚಿವಾಲಯವು ‘ಇಪಿಎಫ್’ ಬಡ್ಡಿ ದರ ಇಳಿಕೆ ಮಾಡಿತ್ತು. ಬ್ಯಾಂಕ್‌ಗಳು ತಮ್ಮ ಸಾಲಗಳ ಮೇಲಿನ ಬಡ್ಡಿ ದರ ತಗ್ಗಿಸಲು ಅನುವಾಗಲು, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್‌ಗಳ ಬಡ್ಡಿ ದರಗಳನ್ನು ಈಗಾಗಲೇ ಕಡಿತಗೊಳಿಸಲಾಗಿದೆ. ಏಪ್ರಿಲ್ 1 ರಿಂದ ಈ ದರಗಳು ಜಾರಿಗೆ ಬಂದಿವೆ.

ಹಣಕಾಸು ಸಚಿವಾಲಯದ ಸಮರ್ಥನೆ
ಬಡ್ಡಿ ದರ ಹೆಚ್ಚಿಸಿದರೆ, ‘ಇಪಿಎಫ್‌ಒ’ದ ಮೀಸಲು ನಿಧಿ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ದರಗಳನ್ನು ತಗ್ಗಿಸಲಾಗಿತ್ತು. ಭವಿಷ್ಯ ನಿಧಿಯಲ್ಲಿ ಇರುವ ನಿಷ್ಕಿಯ ಖಾತೆಗಳಿಗೂ ಬಡ್ಡಿ ದರ ಪಾವತಿಸಬೇಕಾಗಿರುವುದರಿಂದ ಬಡ್ಡಿ ದರ ಕಡಿತ ಮಾಡಲು ಸೂಚಿಸಲಾಗಿತ್ತು ಎಂದು ಹಣಕಾಸು ಸಚಿವಾಲಯ ತನ್ನ ವಾದಕ್ಕೆ ಸ್ಪಷ್ಟನೆ ನೀಡಿತ್ತು.

ಬಡ್ಡಿ ದರ ಕಡಿಮೆ ಮಾಡುವ ನಿರ್ಧಾರವು ಗಣಿತದ ಲೆಕ್ಕಾಚಾರ ಆಧರಿಸಿತ್ತು. ‘ಇಪಿಎಫ್‌ಒ’ ಗಳಿಸಿದ ವರಮಾನವು ಶೇ 8.7ರಷ್ಟು ಬಡ್ಡಿ ಪಾವತಿಸಲೂ ಸಾಕಾಗುವುದಿಲ್ಲ.

2014–15ನೆ ಸಾಲಿನಲ್ಲಿನ ಉಳಿತಾಯವನ್ನೇ ಶೇ 8.7ರಷ್ಟು ಬಡ್ಡಿ ಪಾವತಿಸಲು ಬಳಸಬೇಕಾಗಿದೆ ಎನ್ನುವುದು ಹಣಕಾಸು ಸಚಿವಾಲಯದ ವಾದವಾಗಿದೆ. ಕಾರ್ಮಿಕರಿಗೆ ಸಂಬಂಧಿಸಿದ ಇನ್ನೂ ಅನೇಕ ಸಮಸ್ಯೆಗಳಿವೆ.

ಗುತ್ತಿಗೆ ಕಾರ್ಮಿಕರು, ಕನಿಷ್ಠ ವೇತನ, ಬೆಲೆ ಏರಿಕೆ ಮತ್ತು ಕಾರ್ಮಿಕ ಕಾಯ್ದೆಗಳಿಗೆ ಏಕಪಕ್ಷೀಯವಾಗಿ ತಿದ್ದುಪಡಿ ತರುವ ಸರ್ಕಾರದ ಧೋರಣೆಯು ಕಾರ್ಮಿಕ ಸಮುದಾಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ತಮ್ಮ ಆಕ್ರೋಶದ ಅಭಿವ್ಯಕ್ತಿಗೆ ಸೆಪ್ಟೆಂಬರ್ 2ರಂದು ಭಾರತ್ ಬಂದ್‌ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.

ಈ ಎಲ್ಲ ಬೆಳವಣಿಗೆ ನೋಡಿದರೆ, ಕಾರ್ಮಿಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಿಸಬೇಕಾದ ಮಾರ್ಗದಲ್ಲಿ ಸಾಕಷ್ಟು ಅಡಚಣೆಗಳು ಇರುವುದು ಸ್ಪಷ್ಟಗೊಳ್ಳುತ್ತದೆ.

ಶಿಷ್ಟಾಚಾರ ಉಲ್ಲಂಘನೆ

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಕಾರ್ಮಿಕ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಸಂಘಟನೆಯ ನಿರ್ಧಾರ ಕೈಗೊಳ್ಳುವ ಉನ್ನತ ಮಟ್ಟದ ಧರ್ಮದರ್ಶಿಗಳ ಕೇಂದ್ರೀಯ ಮಂಡಳಿಯು (ಸಿಬಿಟಿ) ನಿಗದಿಪಡಿಸುವ ಬಡ್ಡಿ ದರವನ್ನು ಸ್ಥಿರೀಕರಿಸುವಂತೆ ಕಾರ್ಮಿಕ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸುತ್ತದೆ.

ಅದೊಂದು ಬರೀ ಶಿಷ್ಟಾಚಾರ. ಅದರಲ್ಲಿ ಯಾವುದೇ ಮಾರ್ಪಾಡು ಮಾಡದೆ ಹಣಕಾಸು ಇಲಾಖೆಯು ಅನುಮೋದನೆ ನೀಡುವುದು ಮೊದಲಿನಿಂದಲೂ ಅನುಸರಿಸಿಕೊಂಡು ಬರಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಹಣಕಾಸು ಇಲಾಖೆಯು ತನ್ನ ನಿಲುವು ಬದಲಿಸಿ ಬಡ್ಡಿ ದರ ಇಳಿಸುವ ನಿರ್ಧಾರ ಪ್ರಕಟಿಸಿತ್ತು.

ಕಾರ್ಮಿಕ ಸಂಘಟನೆಗಳ ನಿಲುವು

‘ಸಿಬಿಟಿ’ ಅಂದಾಜಿಸಿದ ವರಮಾನದ ಪ್ರಕಾರ, ಇಪಿಎಫ್ ಬಡ್ಡಿ ದರವನ್ನು ಶೇ 8.95ರಷ್ಟು ನಿಗದಿ ಮಾಡಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಮಾರುಕಟ್ಟೆಯ ಬದಲಾದ ಪರಿಸ್ಥಿತಿಗೆ ತಕ್ಕಂತೆ ಭವಿಷ್ಯದ ಉಳಿತಾಯಕ್ಕಾಗಿ ಕೆಲ ಮುಂಜಾಗ್ರತೆ ತೆಗೆದುಕೊಳ್ಳಬೇಕೆಂಬ ಕಾರ್ಮಿಕ ಸಚಿವಾಲಯದ ಸಲಹೆಯಂತೆ ಶೇ 8.8ರಷ್ಟು ಬಡ್ಡಿ ದರ ನಿಗದಿ ಮಾಡಲು ಸಮ್ಮತಿಸಲಾಗಿತ್ತು.

ಹಣಕಾಸು ಸಚಿವಾಲಯವು ‘ಇಪಿಎಫ್‌ಒ’ಗೆ ಒಂದು ನಯೆ ಪೈಸೆಯನ್ನೂ ನೀಡುವುದಿಲ್ಲ ಮತ್ತು ‘ಇಪಿಎಫ್‌ಒ’ ಹಣದ ಕಾವಲುಗಾರನೂ ಅಲ್ಲ. ಎಲ್ಲವನ್ನೂ ಹಣಕಾಸು ಸಚಿವಾಲಯವೇ ನಿರ್ಧರಿಸುವುದಾದರೆ ಯಾವ ಪುರುಷಾರ್ಥಕ್ಕೆ ‘ಸಿಬಿಟಿ’ ರಚಿಸಲಾಗಿದೆ ಎನ್ನುವುದು ಕಾರ್ಮಿಕ ಮುಖಂಡರ ನಿಲುವಾಗಿದೆ.

ಆರ್ಥಿಕ ತಜ್ಞರ ಆಕ್ಷೇಪ

ಒಟ್ಟಾರೆ ಅರ್ಥ ವ್ಯವಸ್ಥೆಯ ದೃಷ್ಟಿಯಿಂದ ನೋಡಿದರೆ ಸರ್ಕಾರದ ಬದಲಾದ ನಿರ್ಧಾರವು ನಿರಾಶೆ ಮೂಡಿಸುತ್ತದೆ. ದೇಶಿ ಆರ್ಥಿಕತೆಯಲ್ಲಿ ಕಡಿಮೆ ಬಡ್ಡಿ ದರ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಇಪಿಎಫ್ ಬಡ್ಡಿ ದರಗಳನ್ನು ತಗ್ಗಿಸುವುದೂ ಸರಿಯಾದ ಕ್ರಮವಾಗಿದೆ ಎನ್ನುವುದು ಆರ್ಥಿಕ ತಜ್ಞರ ನಿಲುವಾಗಿದೆ.

ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿಮೆಯಾಗುವವರೆಗೆ ಬ್ಯಾಂಕ್‌ಗಳು ಠೇವಣಿ ಮತ್ತು ಸಾಲಗಳ ಬಡ್ಡಿ ದರಗಳನ್ನು ಇಳಿಸುವುದಿಲ್ಲ. ಸಣ್ಣ ಉಳಿತಾಯ ಯೋಜನೆಗಳಿಗೆ ನೀಡಲಾಗುತ್ತಿರುವ ಗರಿಷ್ಠ ಮಟ್ಟದ ಬಡ್ಡಿ ದರಗಳಿಂದಾಗಿಯೇ ಬ್ಯಾಂಕ್‌ಗಳು ಸಾಲಗಳ ಬಡ್ಡಿ ದರಗಳನ್ನು ಇಳಿಸುತ್ತಿಲ್ಲ. ಇದೇ ಕಾರಣಕ್ಕೆ ಸರ್ಕಾರ ‘ಇಪಿಎಫ್’ ಬಡ್ಡಿ ದರ ಇಳಿಸಿದಾಗ ಅದನ್ನು ಆರ್ಥಿಕ ತಜ್ಞರು ಬೆಂಬಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.