ವೈದ್ಯ, ವಿಜ್ಞಾನಿ, ಚಿತ್ರಕಾರ, ಜಲಗಾರ, ಸಂಗೀತಗಾರ ಹೀಗೆ ಬೇರೆ ಬೇರೆ ವರ್ಗಗಳ ಸಾಧಕರು ಸಮಾಜಕ್ಕೆ ಗಣನೀಯ ಕೊಡುಗೆ ನೀಡುತ್ತಿದ್ದರೂ ಕನ್ನಡಿಗರ ಮೊದಲ ಗೌರವವು ಸಾಹಿತಿಗಳಿಗೆ ಸಂದಿರುವ ಉದಾಹರಣೆಗಳೇ ಹೆಚ್ಚು. ಏಕೆ ಹೀಗೆ? ಇದಕ್ಕೆ ಉತ್ತರವಾಗಿ ಕನ್ನಡ ಕಾವ್ಯ ಪರಂಪರೆಯನ್ನು ಗಮನಿಸಬೇಕು.

ಜನಸಮೂಹಕ್ಕೆ ಅಗತ್ಯವಾದ ವಿವೇಕವನ್ನು ರೂಪಿಸುವಲ್ಲಿ ಸಾಹಿತ್ಯಲೋಕವೇ ಮುಂಚೂಣಿಯಲ್ಲಿದೆ. ವ್ಯಕ್ತಿಗೆ ಅಗತ್ಯವಾದ ಆತ್ಮಗೌರವ ಮತ್ತು ವಿವೇಕವನ್ನು ಕಟ್ಟಿಕೊಡುವ ಕವಿ, ತನ್ನ ಕಾವ್ಯದ ಮೂಲಕ ತಾನು ಬದುಕುತ್ತಿರುವ ಸಮಾಜದ ತವಕ ತಲ್ಲಣಗಳಿಗೆ ಕನ್ನಡಿಯೂ ಆಗುತ್ತಾನೆ. ಸಮಕಾಲೀನ ಸಂಕಟಗಳನ್ನು ಎದುರಿಸಲು ಸಹೃದಯರಿಗೆ ಅಗತ್ಯವಾದ ವೈಚಾರಿಕ ದ್ರವ್ಯವನ್ನು ತನ್ನ ಮಾತು–ಕೃತಿಗಳ ಮೂಲಕ ನೀಡುತ್ತಾನೆ. ಪ್ರಭುತ್ವದ ವಿಮರ್ಶಕನಾಗಿರುವ ಮೂಲಕ ಸಮಾಜದ ಹಿತಕ್ಕೆ ಕಾರಣನಾಗುತ್ತಾನೆ. ಭಾಷೆಯ ಸೌಂದರ್ಯ ಹಾಗೂ ಜೀವಶಕ್ತಿ ಹೆಚ್ಚಿಸುತ್ತಾನೆ. ಈ ಎಲ್ಲ ಕಾರಣಗಳೂ ಕನ್ನಡಿಗರ ಕವಿ–ಕಾವ್ಯ ಪಕ್ಷಪಾತಕ್ಕೆ ಕಾರಣವಿರಬಹುದು.

ಕನ್ನಡ ಕಾವ್ಯಪರಂಪರೆಯ ಆದರ್ಶಗಳು ಕೇವಲ ಬಾಯಿಮಾತಿನವಲ್ಲ. ಅವುಗಳನ್ನು ಆಚರಣೆಯಲ್ಲೂ ನೋಡಬಹುದು. ಕೆಲವು ಉದಾಹರಣೆಗಳ ಮೂಲಕ ಆ ಮಾದರಿಯನ್ನು ಸ್ಪಷ್ಟಪಡಿಸಿಕೊಳ್ಳಬಹುದು.

ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ. ಒಂದು ವಿಚಿತ್ರ ದೂರು ಮುಖ್ಯಮಂತ್ರಿಗಳ ಕಚೇರಿಯನ್ನು ತಲುಪಿತು. ‘ಪ್ರಾರ್ಥನೆ’ ಎನ್ನುವ ಕವಿತೆಯಲ್ಲಿ ಅಶ್ಲೀಲತೆಯಿದ್ದು, ಆ ಪದ್ಯ ಬರೆದ ಕವಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ದೂರದು. ಮುಖ್ಯಮಂತ್ರಿಗಳ ಕಚೇರಿಯಿಂದ ಕವಿಗೆ ಪತ್ರ ರವಾನೆಯಾಯಿತು. ‘ನಿಮ್ಮ ಪ್ರಾರ್ಥನೆ ಎಂಬ ಕವನದ ಬಗ್ಗೆ ಮುಖ್ಯಮಂತ್ರಿಗಳು ಅವರಿಗೆ ಅನುಕೂಲವಾದ ದಿನ ಮತ್ತು ಸಮಯದಲ್ಲಿ ಚರ್ಚಿಸಲು ಬಯಸುತ್ತಾರೆ’ ಎನ್ನುವುದು ಪತ್ರದ ಸಾರಾಂಶ. ಆ ಪತ್ರಕ್ಕೆ ಕವಿ ಬರೆದ ಮಾರೋಲೆಯಲ್ಲಿ, ‘ಚರ್ಚೆಗೆ ಅವರಿಗೆ ಅನುಕೂಲವಾದ ದಿನ ಮತ್ತು ಸಮಯವೇ ಏಕಾಗಬೇಕು? ನನಗೂ ಅನುಕೂಲವಾದ ದಿನ ಮತ್ತು ಸಮಯ ಇರಬಹುದಲ್ಲವೇ?’ ಎಂದು ಪ್ರಶ್ನಿಸಿದರು. ‘ಇಬ್ಬರಿಗೂ ಅನುಕೂಲವಾದ ದಿನ ಮತ್ತು ವೇಳೆಯಲ್ಲಿ ಭೇಟಿಯಾಗಲು ಬಯಸುತ್ತಾರೆ’ ಎನ್ನುವ ಮತ್ತೊಂದು ಪತ್ರ ಮುಖ್ಯಮಂತ್ರಿಗಳ ಕಚೇರಿಯಿಂದ ಬಂತು. ಆದರೆ, ಆ ಭೇಟಿಗೆ ಸಮಯ ಕೂಡಿ ಬರಲೇ ಇಲ್ಲ.

ಇನ್ನೊಂದು ಘಟನೆ, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದ್ದು. ಪ್ರಖ್ಯಾತ ಕವಿಯೊಬ್ಬರು ಜೀವನೋಪಾಯಕ್ಕೆ ತೊಂದರೆ ಎದುರಿಸುತ್ತಿರುವ ಸುದ್ದಿ ಅರಸರನ್ನು ತಲುಪಿತು. ಕವಿಯೊಂದಿಗೆ ಮಾತನಾಡಿದ ಅವರು, ‘ಜನರ ಹಣವನ್ನು ಜನರ ಕವಿಗೆ ದೊರೆಯುವಂತೆ ಮಾಡೋಣ’ ಎಂದಾಗ, ಮುಖ್ಯಮಂತ್ರಿಯ ಹೃದಯವಂತಿಕೆಯನ್ನು ಕವಿ ಮೆಚ್ಚಿಕೊಂಡರೇ ಹೊರತು, ಸರ್ಕಾರದ ನೆರವು ಪಡೆಯಲಿಲ್ಲ.

ಆಳುವವರ ಕಣ್ಣಿಗೆ ಹೇಗಾದರೂ ಬೀಳಲಿಕ್ಕೆ ತುದಿಗಾಲಲ್ಲಿ ನಿಂತವರೇ ಬಹುಸಂಖ್ಯೆಯಲ್ಲಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿಗಳೇ ಭೇಟಿಯಾಗಲು ಬಯಸಿದಾಗ ವ್ಯಕ್ತಿಯೊಬ್ಬ ತನ್ನ ಅನುಕೂಲದ ವೇಳೆಯ ಬಗ್ಗೆ ಮಾತನಾಡುವುದು ಏನನ್ನು ಹೇಳುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಮುಖ್ಯಮಂತ್ರಿ ಗಳು ತಾವಾಗಿಯೇ ನೆರವು ನೀಡಲು ಮುಂದಾದಾಗ ಅದನ್ನು ಒಲ್ಲೆ ಎನ್ನುವುದೂ ಸುಲಭವಲ್ಲ. ಈ ಸ್ವಾಭಿಮಾನ ಹಾಗೂ ದಿಟ್ಟತನದ ಪ್ರದರ್ಶನ ಅಸಲು ಕವಿಗಷ್ಟೇ ಸಾಧ್ಯ.

ಪ್ರಭುತ್ವದ ವಿಮರ್ಶೆ ಕನ್ನಡ ಕಾವ್ಯದ ಆರಂಭದಿಂದಲೂ ಇರುವಂತಹದ್ದೇ. ಆಶ್ರಯ ನೀಡಿದ ಅರಸನನ್ನು ಕಾವ್ಯನಾಯಕನಾಗಿ ಚಿತ್ರಿಸಿದರೂ, ‘ಕರ್ಣ ರಸಾಯನಮಲ್ತೆ ಭಾರತಂ’ ಎನ್ನಲು ಪಂಪ ಹಿಂಜರಿ ಯಲಿಲ್ಲ. ಕುಮಾರವ್ಯಾಸನ ಕಣ್ಣಿಗೆ ‘ಅರಸು ರಾಕ್ಷಸ’. ರಾಜಕೀಯ ಪ್ರಭುತ್ವಕ್ಕೆ ಪರ್ಯಾಯವಾಗಿ ಸಾಂಸ್ಕೃತಿಕ ಮಂತ್ರಿಮಂಡಲವನ್ನು ಪ್ರತಿಪಾದಿಸಿದವರು ಕುವೆಂಪು. ಈ ಪರಂಪರೆಯ ಭಾಗವಾದ ಕವಿ, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದಾಗ ಸರ್ಕಾರದ ವಿರುದ್ಧ ಧ್ವನಿ ಎತ್ತದಿರುವುದು ಸಾಧ್ಯವೇ? ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯೆ ಯಾದ, ‘ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು/ ಬೇಕಾದದ್ದು ಬೆಳೆದುಕೋ ಬಂಧು’ ಎನ್ನುವ ಮಾತು ಈ ಹೊತ್ತಿಗೂ ಅನ್ವಯಿಸುವಂತಹದ್ದು. ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳು ರೈತರ ಹಿತಾಸಕ್ತಿಗೆ ಮಾರಕ ಎಂದು ಲಕ್ಷ ಲಕ್ಷ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ, ರೈತರ ದಾರಿಗೆ ಅಡ್ಡವಾಗಿ ಮೊಳೆಗಳನ್ನು ಹೊಡೆಯುವ ಸರ್ಕಾರ ‘ತಾನು ರೈತಪರ’ ಎಂದು ಹೇಳಿಕೊಳ್ಳುತ್ತದೆ. ತುರ್ತು ಪರಿಸ್ಥಿತಿಯಂಥ ದಮನಕಾರಿ ಸಂದರ್ಭವನ್ನೂ ದೇಶ ಮತ್ತು ಜನಹಿತದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ ಸೋಗಲಾಡಿತನವೇ ಪ್ರಸ್ತುತ ರೈತರ ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರ ಅನುಸರಿಸುತ್ತಿರುವ ದಮನಕಾರಿ ನೀತಿಯಲ್ಲೂ ಇದೆ. ‘ನಾಲೆಗಳನ್ನು ಬಂದು ಮಾಡಿ, ಬೇಕಾದ್ದನ್ನು ಬೆಳೆದುಕೊ’ ಎನ್ನುವ ಮಾತು ಇಂದಿನ ಸರ್ಕಾರಕ್ಕೂಅನ್ವಯಿಸುವಂತಹದ್ದು.

ದೊಡ್ಡ ದೊಡ್ಡ ಮಾತಿನ ಬಲೂನುಗಳು ಉಬ್ಬಿದಾಗಲೆಲ್ಲ ನಿಜದ ಸೂಜಿಮೊನೆ ತಾಗಿಸುವ ಕವಿ, ತನ್ನ ಕಾಲದ ಸಂಕಟಗಳಿಗೆ ರೂಪಕಗಳನ್ನು ಸೃಷ್ಟಿಸುತ್ತಾನೆ; ಕಾವ್ಯ ಸಾಕ್ಷಿಪ್ರಜ್ಞೆಯಾಗುತ್ತದೆ. ‘ಇಂದು ನಮ್ಮೀ ನಾಡು’ ಕವಿತೆ ನೆನಪಿಸಿಕೊಳ್ಳಿ. ‘ಇತ್ತುಗಳ ಧ್ವಜವ ಹಿಡಿದೆತ್ತಿ ನಿಲ್ಲು ಮಗು, ಇದೆಯ ಹೃದಯದ್ರಾವ ಬೇಡ ನಿನಗೆ’ ಎಂದು ಕವಿ ಯುವಪೀಳಿಗೆಯನ್ನು ಮಾತಿನಲ್ಲೇ ಚುಚ್ಚುತ್ತಾನೆ. ‘ಇತ್ತು’ಗಳ ಧ್ವಜವ ನಿಲ್ಲಿಸುವ ಆಟ ಯಾವ ಬಗೆಯದು? ಬೇರು ಸತ್ತ ಮರವನ್ನು ಹಿಡಿದೆತ್ತಿ ನಿಲ್ಲಿಸುವ, ಕೋಗಿಲೆಯ ಕೊಂದು ಗುಂಜಾರವದ ಹಾಡುಹಲಗೆ ಹಚ್ಚುವ, ಕೋದಂಡ ಕಮಂಡಲಗಳ ನೆಲ ಇದೆಂದು ಬೀಗುತ್ತ ವರ್ತಮಾನದ ಸಂಕಟಗಳ ಬಗ್ಗೆ ತಲೆಕೆಡಿಸಿಕೊಳ್ಳದ ಆಟವದು. ಆ ಆಟ ಈಗಲೂ ಚಾಲ್ತಿಯಲ್ಲಿರುವಂತಹದ್ದು.

ರೈತರು, ದಲಿತರು, ಹೆಣ್ಣುಮಕ್ಕಳ ಸಂಕಟಗಳ ಬಗ್ಗೆ ನಾವು ಕುರುಡು, ಕಿವುಡು. ಬಡತನದ ಬಗೆಗಿನ ಮಾತುಗಳು ನಮಗೆ ಬೇಡ. ಅಲ್ಪಸಂಖ್ಯಾತರ ಕಾಳಜಿ ಬಗ್ಗೆ ಯೋಚಿಸುವ ಅಗತ್ಯ ನಮಗಿಲ್ಲ. ಹಾಗಾದರೆ ನಮಗೆ ಬೇಕಾದುದೇನು? ಮಾಡುತ್ತಿರುವುದೇನು? ‘ಇತ್ತುಗಳ ಧ್ವಜವ ಹಿಡಿದೆತ್ತಿ ನಿಲ್ಲಿಸುವ’ ಆಟವಲ್ಲದೆ ಬೇರೇನಲ್ಲ. ದೇಶಪ್ರೇಮಿಗಳಾದವರು ಸಂಕಟ–ಸಂಕಷ್ಟಗಳ ಬಗ್ಗೆ ಮಾತನಾಡುವುದೀಗ ಸಲ್ಲ. ಈ ವೈರುಧ್ಯವನ್ನು ಅರ್ಥ ಮಾಡಿಕೊಳ್ಳಲು, ‘ಇಂದು ನಮ್ಮೀ ನಾಡು’ ಕವಿತೆಯನ್ನು ಮತ್ತೆಮತ್ತೆ ಓದಬೇಕು. ಆ ಕವಿತೆಯ ಕವಿಯೇ– ‘ನಾವೆಲ್ಲರು ಒಂದೆ ಜಾತಿ, ಒಂದೆ ಮತ, ಒಂದೆ ಕುಲ;/ ನಾವು ಮನುಜರು; ನರರ ನಡುವಿನಡ್ಡ ಗೋಡೆಗಳನು/ ಕುಟ್ಟಿ ಕೆಡಹುವೆವು’ ಎಂದು ಸಮತೆಯ ಸಾಲುಗಳನ್ನು ಉದ್ಗರಿಸಿದ್ದು.

ಹೀಗೆ, ತನ್ನ ಸಮಾಜಕ್ಕೆ ಆತ್ಮಗೌರವದ ಮಾದರಿಯನ್ನು, ವಿವೇಕ–ವಿಮರ್ಶೆ–ವೈಖರಿಗಳ ಕಾವ್ಯವನ್ನು ಕಟ್ಟಿಕೊಟ್ಟ ಕವಿಯನ್ನಲ್ಲದೆ ಮತ್ತ್ಯಾರನ್ನು ಪ್ರಜಾಪ್ರಭುತ್ವವಾದಿ ಕವಿ ಎನ್ನುವುದು? ನಿಜ ಅರ್ಥದಲ್ಲಿ ಕವಿಯೊಬ್ಬ ಪ್ರಜಾಪ್ರಭುತ್ವ ವಿರೋಧಿಯಾಗಿರುವುದು ಸಾಧ್ಯವಿಲ್ಲ. ಒಂದು ವೇಳೆ, ಹಾಗಿರುವುದು ಸಾಧ್ಯವಾದರೆ ಆ ಬರಹಗಾರ ಕವಿಯೆನ್ನುವುದೇ ಸುಳ್ಳು. ಗೋಪಾಲಕೃಷ್ಣ ಅಡಿಗರು (1918, ಫೆ. 18– 1992, ನ. 4) ‘ಪ್ರಜಾಪ್ರಭುತ್ವ ವಿರೋಧಿ ಕವಿ’ ಎಂದು ಕೆಲವರು ಮಾತನಾಡಿದಾಗಲೆಲ್ಲ ಮೇಲಿನ ಪ್ರಸಂಗಗಳು ನೆನಪಾಗುತ್ತವೆ. ಅಂಥ ಚರ್ಚೆಗಳ ಹಿನ್ನೆಲೆಯಲ್ಲಿ ಎರಡು ಸಾಧ್ಯತೆಗಳಿರಬೇಕು: ಒಂದು,ಪ್ರಜಾಪ್ರಭುತ್ವದ ವ್ಯಾಖ್ಯೆಗಳೇ ಬದಲಾಗಿರಬಹುದು. ಇಲ್ಲವೇ ಕಾವ್ಯದ ಪರಿಕಲ್ಪನೆಯೇ ಬದಲಾಗಿರಬೇಕು.

‘ನೆಹರೂ ನಿವೃತ್ತರಾಗುವುದಿಲ್ಲ’ ಕವಿತೆ ಬರೆದ ಅಡಿಗರು ಈಗ ಇದ್ದಿದ್ದರೆ, ‘ಮೋದಿ ನಿವೃತ್ತರಾಗುವುದಿಲ್ಲ’ ಎನ್ನುವ ಕವಿತೆ ಬರೆಯುತ್ತಿದ್ದರೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅಡಿಗರು ಯಾರ ಜೊತೆ ತಮ್ಮನ್ನು ಗುರ್ತಿಸಿಕೊಂಡಿದ್ದರು ಎಂದು ಯೋಚಿಸುವಾಗ, ಅವರು ಯಾವುದರ ವಿರುದ್ಧವಿದ್ದರು ಎನ್ನುವುದನ್ನು ನಾವು ಮರೆಯುತ್ತೇವೆ. ಪ್ರಭುತ್ವದ ವಿರುದ್ಧವಿದ್ದ ಅವರು, ಈಗ ನೂರಾ ಮೂರರ ಅಜ್ಜನಾಗಿ ಬದುಕಿದ್ದಿದ್ದರೆ ಖಂಡಿತವಾಗಿಯೂ ಪ್ರಭುತ್ವದ ವಿರುದ್ಧವಾಗಿಯೇ ಇರುತ್ತಿದ್ದರು, ಬರೆಯುತ್ತಿದ್ದರು. ಕವಿ ಎಂದಿಗೂ ವಿರೋಧ ಪಕ್ಷವೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.