‘ಸಾಹಿತ್ಯದಿಂದ, ಸಾಹಿತಿಗಳಿಂದ ಯಾವ ಉಪಯೋಗವೂ ಇಲ್ಲ’ ಎಂದು ರಚ್ಚೆ ಹಿಡಿದಿದ್ದವರೂ ಪುಳಕಗೊಳ್ಳುವಂತೆ ಮಾಡಿರುವುದು ದೇವನೂರ ಮಹಾದೇವ ಅವರ ‘ಆರ್ಎಸ್ಎಸ್ ಆಳ ಮತ್ತು ಅಗಲ’ ಕೃತಿಯ ಸಾಧನೆಗಳಲ್ಲೊಂದು. ಇದು ‘ಸಾಹಿತ್ಯೇತರ’ ಕೃತಿಯಾದುದರಿಂದ, ಪ್ರಸಕ್ತ ಪುಳಕಕ್ಕೂ ಸಾಹಿತ್ಯಕ್ಕೂ ಸಂಬಂಧವಿಲ್ಲ ಎಂದು ಹೇಳಬಹುದು. ಆದರೆ, ಈ ಕೃತಿಗೆ ದೊರೆತಿರುವ ವಿಶೇಷ ಹೊಳಪು ಹಾಗೂ ಮಹತ್ವಕ್ಕೆ ವಸ್ತುವಿನಷ್ಟೇ ಕೃತಿಯನ್ನು ಬರೆದಿರುವ ಬರಹಗಾರನ ವಿಶ್ವಾಸಾರ್ಹತೆಯೂ ಮುಖ್ಯವಾದುದು; ಆ ವಿಶ್ವಾಸಾರ್ಹತೆ ದೇವನೂರರಿಗೆ ದೊರೆತಿರುವುದಕ್ಕೆ ಪ್ರಮುಖ ಕಾರಣ ಸಾಹಿತ್ಯದ ಹಿನ್ನೆಲೆ. ಬರಹಗಾರನಿಗಿರುವ ವಿಶ್ವಾಸಾರ್ಹತೆ ಕೃತಿಗೆ ವಸ್ತುನಿಷ್ಠತೆ ತಂದುಕೊಟ್ಟಿದೆ ಹಾಗೂ ಅದರ ಬಗ್ಗೆ ಜನರ ಗಮನಸೆಳೆಯುವಂತೆ ಮಾಡಿದೆ. ಇದೇ ಕೃತಿಯನ್ನು ಆರ್ಎಸ್ಎಸ್ನ ಕಟು ಟೀಕಾಕಾರರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿದ್ದರೆಂದುಕೊಳ್ಳಿ. ಆಗ ಈ ಕೃತಿಯನ್ನು ರಾಜಕಾರಣದ ಕನ್ನಡಕದಿಂದಲೇ ನೋಡಲಾಗುತ್ತಿತ್ತು.

ಮಹಾದೇವ ಅವರ ಕಲಾಕೃತಿಗಳು ಸದ್ದಿಲ್ಲದೆ ಮೂಡಿಸಿರುವ, ಮೂಡಿಸುತ್ತಿರುವ ಸಾಮಾಜಿಕ ಎಚ್ಚರ ಹಾಗೂ ತಿಳಿವಳಿಕೆ ಸಮಾಜಶಾಸ್ತ್ರೀಯ ಮಾನದಂಡಗಳಿಗೆ ನಿಲುಕಲಾರದಂತಹವು. ಆ ಸಾಮಾಜಿಕ ಪ್ರಜ್ಞೆಯ ಭಾಗವಾಗಿಯೇ ನೋಡಬೇಕಾದ‘ಆರ್ಎಸ್ಎಸ್ ಆಳ ಮತ್ತು ಅಗಲ’ ಕೃತಿಗೆ ರಾಜಕಾರಣ ಹಾಗೂ ಸಾಮಾಜಿಕ ಆಯಾಮ ಇರುವಂತೆಯೇ ಸಾಂಸ್ಕೃತಿಕ ಆಯಾಮವೂ ಇದೆ. ಆ ಸಾಂಸ್ಕೃತಿಕ ಆಯಾಮದ ಕಾರಣದಿಂದಲೇ ಪುಸ್ತಕ ಜನಸಮೂಹದ ಗಮನಸೆಳೆದಿದೆ. ಬರಹಗಾರನ ನೈತಿಕತೆ, ಬರವಣಿಗೆಯ ಪರಿಣಾಮ, ಸಾಹಿತ್ಯದ ಸಾಧ್ಯತೆಗಳ ಕುರಿತು ನಂಬಿಕೆ ಮೂಡಿಸುವ ಈ ಕೃತಿಯನ್ನು ಲೇಖಕನೊಬ್ಬನ ಸಾಮಾಜಿಕ ಬದ್ಧತೆಯ ಉದಾಹರಣೆ ಯಾಗಿಯೂ ನೋಡಬಹುದು. ಬರಹಗಾರನೊಬ್ಬ ತನ್ನನ್ನೇ ಉರಿಸಿಕೊಂಡು ರಚಿಸಿರುವ, ಪ್ರಕಟಣೆಯ ನಂತರದ ಉರಿಯನ್ನು ಅನುಭವಿಸಲೂ ಸಿದ್ಧನಾಗಿ ರೂಪಿಸಿರುವ ಪುಸ್ತಕವಿದು.

ಆರ್ಎಸ್ಎಸ್ ಕುರಿತಂತೆ ಕನ್ನಡದಲ್ಲಿ ಈ ಮೊದಲೂ ಕೃತಿಗಳು ಪ್ರಕಟವಾಗಿವೆ. ಆದರೆ, ಆ ಕೃತಿಗಳಿಗೆ ಮಹಾದೇವ ಅವರ ಕೃತಿಗೆ ದೊರೆತಷ್ಟು ಓದುಗರ ಸ್ಪಂದನ ದೊರೆತಿರಲಿಲ್ಲ. ‘ಆರ್ಎಸ್ಎಸ್ ಆಳ ಮತ್ತು ಅಗಲ’ ಕೃತಿಯನ್ನು ಈಗಿರುವಷ್ಟೇ
ಚೆನ್ನಾಗಿ ಅಥವಾ ಈಗಿರುವುದಕ್ಕೂ ಹೆಚ್ಚು ಪರಿಣಾಮ ಕಾರಿಯಾಗಿ ಮತ್ತೊಬ್ಬ ಬರಹಗಾರ ರಚಿಸುವುದಕ್ಕೆ ಸಾಧ್ಯವಿದೆ. ಆದರೆ, ಆ ಸಂಭಾವ್ಯ ಕೃತಿಗೆ ಮಹಾದೇವ ಪುಸ್ತಕಕ್ಕೆ ದೊರೆತಷ್ಟು ಪ್ರತಿಕ್ರಿಯೆ ಹಾಗೂ ಗೌರವ ಸಲ್ಲುತ್ತದೆಂದು ನಿರೀಕ್ಷಿಸಲಾಗದು. ಏಕೆಂದರೆ, ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ದೇವನೂರ ಮಹಾದೇವ ಓರ್ವ ಬರಹಗಾರನಷ್ಟೇ ಅಲ್ಲ; ಆತನೊಬ್ಬ ‘ಮಾಯ್ಕಾರ.’ ಬರಹಗಾರನೊಬ್ಬ ಸಹೃದಯರ ಮನಸ್ಸಿನಲ್ಲಿ ನೆಲೆ ಕಂಡುಕೊಳ್ಳಲು ಬರಹದಲ್ಲಿ ಮಾಂತ್ರಿಕತೆಯಿದ್ದರಷ್ಟೇ ಸಾಲದು, ವ್ಯಕ್ತಿತ್ವದಲ್ಲಿ ಪ್ರಾಮಾಣಿಕತೆಯೂ ಇರಬೇಕು, ನಡವಳಿಕೆಯಲ್ಲಿ ಬದ್ಧತೆ ಇರಬೇಕು. ಆ ಪ್ರಾಮಾಣಿಕತೆ–ಬದ್ಧತೆ ಪ್ರೀತಿಯ ರೂಪದಲ್ಲಿ ಓದುಗರನ್ನು ತಾಕಬೇಕು.

ಈ ಕೃತಿ ಖಂಡಿತವಾಗಿಯೂ ದೇವನೂರರ ಪ್ರಾತಿನಿಧಿಕ ಕೃತಿಯಲ್ಲ. ಕಥೆಗಳೊಂದಿಗೆ ಹೋಲಿಕೆ ಬಿಡಿ, ಅವರ ಸಾಹಿತ್ಯೇತರ ಬರಹಗಳ ಜೊತೆಗಿಟ್ಟು ನೋಡಿದರೂ ಪ್ರಸಕ್ತ ಬರಹ ಸಾಧಾರಣವಾದುದು. ದೇವನೂರರಿಗಷ್ಟೇ ಸಾಧ್ಯವಾದ ಕಾವ್ಯಕಾಣ್ಕೆಗಳು, ಧ್ಯಾನದ ಶೈಲಿ ಈ ಕೃತಿಯಲ್ಲಿಲ್ಲ. ದೇವನೂರರು ತಮ್ಮತನವನ್ನು ಬಿಟ್ಟುಕೊಟ್ಟಿರುವ, ಬರಹಗಾರನೊಬ್ಬ ಅತೀವ ಸಾಮಾಜಿಕ ಎಚ್ಚರದಲ್ಲಿ ಸೃಜನಶೀಲತೆ
ಯೊಂದಿಗೆ ಮಾಡಿಕೊಂಡ ರಾಜಿಯಂತೆ ಈ ಕೃತಿಯನ್ನು ನೋಡಬಹುದು.

ಈ ಕೃತಿಯ ಬರವಣಿಗೆ ಮತ್ತು ಅದನ್ನು ಓದುಗರಿಗೆ ತಲುಪಿಸಲು ಅನುಸರಿಸಿರುವ ಮಾರ್ಗ– ಎರಡೂ ಕುತೂಹಲಕಾರಿಯಾಗಿವೆ. ದೇವನೂರರ ಬರವಣಿಗೆಯ ಶೈಲಿ ಓದುಗರೊಂದಿಗಿನ ಮಾತುಕತೆಯ ಸ್ವರೂಪದ್ದಲ್ಲ; ಅದು ತನಗೆ ತಾನೇ ಹೇಳಿಕೊಳ್ಳುವಂತಹ ಮಾತುಗಳ ರೀತಿಯದು. ಆದರೆ, ಆರ್ಎಸ್ಎಸ್ ಕುರಿತ ಕೃತಿ ಓದುಗರನ್ನು ನೇರವಾಗಿ ಉದ್ದೇಶಿಸಿ ಬರೆದಿರುವಂತಹದ್ದು. ಮುಖ್ಯವಾಗಿ, ಹೊಸಗಾಲದ ಓದುಗರನ್ನು ಗಮನದಲ್ಲಿ ಇರಿಸಿಕೊಂಡಿರುವಂತಹದ್ದು. ವಾಟ್ಸ್ಆ್ಯಪ್, ಫೇಸ್ಬುಕ್ ತಲೆಮಾರು ಎಂದು ವ್ಯಂಗ್ಯದಿಂದ ಕಾಣಲಾಗುವ ತರುಣ ತರುಣಿಯರನ್ನು ಮುಟ್ಟುವ ಪ್ರಯತ್ನ ದೇವನೂರರ ಈ ಬರವಣಿಗೆಯ ಹಿಂದೆ ಇರುವಂತಿದೆ. ನೇರ, ಸರಳ, ಸ್ಪಷ್ಟ ಬರವಣಿಗೆ ಯುವ ಓದುಗರನ್ನು ಮುಟ್ಟುವ ಹಂಬಲಕ್ಕೆ ಪೂರಕವಾಗಿದೆ. ಕೃತಿಯ ತುಂಬ ತುಂಬಿಕೊಂಡಿರುವ ಉಲ್ಲೇಖಗಳು, ಲೇಖಕ ತಾನು ಹೇಳಬೇಕಾದ ವಿಚಾರವನ್ನು ಓದುಗನಿಗೆ ಒಪ್ಪಿಸುವುದಕ್ಕಿಂತಲೂ ಆ ಬಗ್ಗೆ ಯೋಚಿಸುವಂತೆ ಮಾಡುವ ಉದ್ದೇಶ ಹೊಂದಿರುವಂತಿವೆ.

ಲೇಖಕನ ಹಕ್ಕುಸ್ವಾಮ್ಯವನ್ನು ಬಿಟ್ಟುಕೊಟ್ಟು, ಪುಸ್ತಕವನ್ನು ಯಾರು ಬೇಕಾದರೂ ಮುದ್ರಿಸಲಿಕ್ಕೆ ಅವಕಾಶ ಕಲ್ಪಿಸಿರುವುದು, ಹೆಚ್ಚಿನ ಸಂಖ್ಯೆಯ ಓದುಗರನ್ನು ತಲುಪಲು ಕಂಡುಕೊಂಡಿರುವ ಹೊಸ ದಾರಿಯಂತಿದೆ. ಪಿಡಿಎಫ್ ಪ್ರತಿಗಳು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿರುವುದು ಹಾಗೂ ಇತರ ಭಾಷೆಗಳಿಗೂ ಪುಸ್ತಕವನ್ನು ಅನುವಾದಿಸುವ ಪ್ರಯತ್ನಗಳು ಪುಸ್ತಕವನ್ನು ಹೊಸ ತಲೆಮಾರಿಗೆ ತಲುಪಿಸುವ ಪ್ರಯತ್ನವೇ ಆಗಿದೆ. ಕೃತಿಯ ಸಾವಿರಾರು ಪ್ರತಿಗಳ ಮಾರಾಟದಿಂದ ಲೇಖಕರಿಗೆ ಹಣಕಾಸಿನ ಲಾಭವಿಲ್ಲವಾದರೂ, ಪ್ರಕಾಶಕರಿಗೆ ಪುಸ್ತಕ ಲಾಭಕರವೇ. ಪುಸ್ತಕವನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದಾಗಿ ಹೇಳಲಾಗುತ್ತಿದ್ದರೂ, ಪುಟ್ಟ ಪುಸ್ತಿಕೆಗೆ ಇಟ್ಟಿರುವ ಬೆಲೆ ನ್ಯಾಯಯುತವಾಗಿಯೇ ಇದೆ.

ಯುವ ತಲೆಮಾರನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡದ ಮುಖ್ಯ ಲೇಖಕರು ಈ ಬಗೆಯ ಸವಾಲಿಗೆ ತಮ್ಮನ್ನೊಡ್ಡಿಕೊಂಡಿರುವ ಉದಾಹರಣೆಗಳು ಕನ್ನಡದಲ್ಲಿ ಕಡಿಮೆ. ಯು.ಆರ್. ಅನಂತಮೂರ್ತಿ ಅವರು ತಮ್ಮ ಕೊನೆದಿನಗಳಲ್ಲಿ (82ನೇ ವಯಸ್ಸಿನಲ್ಲಿ) ಬರೆದ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಕೂಡ ಇದೇ ಬಗೆಯ ಕೃತಿ. ಹಿಂದುತ್ವ ಮತ್ತು ಹಿಂದ್ ಸ್ವರಾಜ್ಗಳಲ್ಲಿ ಯಾವುದು ಜೀವಪರ ಹಾಗೂ ಅವೆರಡರಲ್ಲಿ ನಮ್ಮ ದಾರಿ ಯಾವುದಾಗಬೇಕು ಎಂದು ಚರ್ಚಿಸಿದ್ದ ಆ ಕೃತಿ ನಿರೀಕ್ಷಿತ ಚರ್ಚೆಯನ್ನು ಹುಟ್ಟುಹಾಕಲಿಲ್ಲ, ಅನಂತಮೂರ್ತಿಯವರ ಎಂದಿನ ಪಕ್ವತೆಯನ್ನೂ ಮುಟ್ಟಿರಲಿಲ್ಲ. ಎಂಟು ವರ್ಷಗಳ ಹಿಂದೆ ಅನಂತಮೂರ್ತಿ ಅವರು ಆಶಿಸಿದ್ದ ಚರ್ಚೆಯನ್ನು ಈಗ ದೇವನೂರರ ಕೃತಿ ಹುಟ್ಟುಹಾಕಿದೆ.

ಪ್ರಸಕ್ತ ಕೃತಿಯ ಯಶಸ್ಸಿಗೆ ದೇವನೂರ ಮಹಾದೇವ ಕಾರಣರಾದರೂ, ಅವರ ಹಿಂದೆ ಬಹುತ್ವ ಭಾರತವನ್ನು ಅಹರ್ನಿಶಿ ಹಂಬಲಿಸುವ ಅನೇಕ ಸಹಮನಸ್ಕರ ತುಡಿತಗಳೂ ಇರುವುದನ್ನು ಮರೆಯಬಾರದು.

‘ಆರ್ಎಸ್ಎಸ್ ಆಳ ಮತ್ತು ಅಗಲ’ ಕೃತಿಯ ಮೂಲಕ ಕೊಳಕ್ಕೆ ಕಲ್ಲು ಎಸೆಯುವ ಕೆಲಸವನ್ನು ಮಾಡಲಾಗಿದೆ. ಆರ್ಎಸ್ಎಸ್ನ ಸೈದ್ಧಾಂತಿಕ ನೆಲೆಗಟ್ಟು ಯಾವ ಬಗೆಯದು ಎನ್ನುವುದನ್ನು ಓದುಗರ ಮುಂದಿಡಲಾಗಿದೆ. ಈ ಕೃತಿಯಿಂದ ಯುವ ತಲೆಮಾರಿನ ನಂಬಿಕೆಗಳು ಬದಲಾಗುತ್ತವೆ ಎಂದು ಹೇಳಲಾಗದು. ಆದರೆ, ಕೆಲವರಾದರೂ ತಮ್ಮ ಈವರೆಗಿನ ನಂಬಿಕೆ–ವಿಚಾರಗಳನ್ನು ಪರಿಶೀಲಿಸಿಕೊಳ್ಳಲು, ವಿಮರ್ಶೆಯ ಒರೆಗೆ ಹಚ್ಚಿಕೊಳ್ಳಲು ಮಹಾದೇವರ ಬರವಣಿಗೆ ಒತ್ತಾಯಿಸುತ್ತದೆ. ಈ ಕೃತಿ ಓದುಗರಲ್ಲಿ ಎಬ್ಬಿಸುವ ಪ್ರಶ್ನೆಗಳು, ಸಂಘ ಪರಿವಾರದ ಬೆಂಬಲಿಗರನ್ನು ಗಾಯಗಳಾಗಿ ಬಹುಕಾಲ ಕಾಡಲಿವೆ. ಹಾಗೆಯೇ ಕೋಮುವಾದವನ್ನು ವಿರೋಧಿಸುವ ಮನಸ್ಸುಗಳಿಗೆ ಈ ಕೃತಿ ಆತ್ಮವಿಶ್ವಾಸವನ್ನು ತುಂಬಲಿದೆ.

ಈ ಕೃತಿಯನ್ನು ಸಂಘಟನೆಯೊಂದರ ಟೀಕೆ–ಟಿಪ್ಪಣಿಯ ಕೃತಿಯನ್ನಾಗಿಯಷ್ಟೇ ನೋಡಬಾರದು. ಇದು, ಸಾಮಾಜಿಕ ವಿಕಾರಗಳನ್ನು ಕೊನೆಗಾಣಿಸಿ ಬಂಧುತ್ವವನ್ನು, ಬಹುತ್ವವನ್ನು ಜೀವಗೊಳಿಸುವ ಹಂಬಲದ ಪ್ರಯತ್ನ. ದೇವನೂರರ ಕೃತಿಶ್ರೇಣಿಯಲ್ಲಿ ಗುಣಮಟ್ಟದ ಕಾರಣದಿಂದಾಗಿ ‘ಆರ್ಎಸ್ಎಸ್ ಆಳ ಮತ್ತು ಅಗಲ’ ಪ್ರತ್ಯೇಕವಾಗಿ ನಿಲ್ಲುತ್ತದಾದರೂ, ಚಾರಿತ್ರಿಕ–ಸಾಂಸ್ಕೃತಿಕ ಮಹತ್ವದ ಕಾರಣದಿಂದಾಗಿ ‘ಒಡಲಾಳ’ದಷ್ಟೇ ಮುಖ್ಯವಾದುದು. ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎನ್ನುವುದು ದೇವನೂರರ ಒಟ್ಟಾರೆ ಸಾಹಿತ್ಯದ ಬೀಜವಾಕ್ಯ. ಈ ನಂಬಿಕೆ ಹಾಗೂ ಮನೋಧರ್ಮವೇ ‘ಆರ್ಎಸ್ಎಸ್ ಆಳ ಮತ್ತು ಅಗಲ’ ಕೃತಿಯ ಅಂತರಂಗದಲ್ಲೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.