ಈತನ ಹೆಸರು ಹೆ ಜಿಯಾಂಕ್ವಿ. 35ರ ಹರಯದ ಈ ಚೀನೀ ವಿಜ್ಞಾನಿ ಒಂದೂವರೆ ತಿಂಗಳ ಹಿಂದೆ ಇಡೀ ವಿಜ್ಞಾನ ಲೋಕವನ್ನೇ ತಲ್ಲಣಗೊಳಿಸಿದ. ತಾನು ‘ತಳಿಗುಣ ತಿದ್ದುಪಡಿ’ ಮಾಡಿದ ಭ್ರೂಣದಿಂದ ಅವಳಿಜವಳಿ ಮಕ್ಕಳು ಜನಿಸಿವೆ ಎಂದು ಘೋಷಿಸಿದ. ವಿಜ್ಞಾನಲೋಕದಲ್ಲಿ ಕಂಪನ ಎದ್ದಿತು. ಅವನ ಸಾಧನೆ ಗ್ರೇಟ್ ಅಂತ ಅಲ್ಲ. ಮನುಷ್ಯ ಜೀವಿಗಳ ತಳಿ ತಿದ್ದುಪಡಿ ಮಾಡಕೂಡದು ಎಂಬ ಕಟ್ಟುನಿಟ್ಟಾದ ನಿಷೇಧವನ್ನು ಈತ ಧಿಕ್ಕರಿಸಿದ ಅಂತ.

ಚೀನಾದ ಸದರ್ನ್ ಸೈನ್ಸ್ ವಿಶ್ವವಿದ್ಯಾಲಯದ ಈ ವಿಜ್ಞಾನಿ ತನ್ನ ಸಾಧನೆಯನ್ನು ಹಾಂಗ್‍ಕಾಂಗ್‍ನ ಶೃಂಗಸಭೆಯಲ್ಲಿ ಹೇಳಿದ್ದೇ ತಡ, ವಿಮಾನವೇರಿ ಈತನ ವಿ.ವಿಯ ಅಧ್ಯಕ್ಷ ಧಾವಿಸಿ ಬಂದ. ಹೆ ಜಿಯಾಂಕ್ವಿಯನ್ನು (He Jiankui) ಕರೆದೊಯ್ದು ಶೆಂಝೆನ್ ನಗರದ ಕ್ಯಾಂಪಸ್ಸಿನಲ್ಲಿ ಗೃಹಬಂಧನದಲ್ಲಿ ಇರಿಸಲಾಯಿತು. ಚೀನಾದ ಆರೋಗ್ಯ ಇಲಾಖೆ, ವಿಜ್ಞಾನ ಇಲಾಖೆ, ಸ್ವಾಸ್ಥ್ಯ ಆಯೋಗ ಎಲ್ಲವೂ ಈತ ಮಾಡಿದ್ದು ಅಕ್ಷಮ್ಯ ಎಂದು ಘೋಷಿಸಿದವು. ಜಿಯಾಂಕ್ವಿಯ ಪ್ರಯೋಗಶಾಲೆಗೆ ಬೀಗ ಹಾಕಲಾಯಿತು. ನಿನ್ನೆಯ ವರದಿಗಳ ಪ್ರಕಾರ ಆತನ ಸುತ್ತ ಕಾವಲು ಪಡೆ ಬಿಗಿಯಾಗಿದ್ದು ‘ಹೆ’ಗೆ ನೇಣು ಹಾಕುವ ಸಾಧ್ಯತೆಗಳಿವೆ.

ವಿಜ್ಞಾನಿಯೊಬ್ಬನ ಕೃತ್ಯಗಳಿಗೆ ಇಂಥ ಉಗ್ರ ಪ್ರತಿಕ್ರಿಯೆ ಈಚಿನ ವರ್ಷಗಳಲ್ಲಿ ಎಲ್ಲೂ ಕಂಡುಬಂದಿರಲಿಲ್ಲ. ಇಷ್ಟಕ್ಕೂ ಹೆ ಮಾಡಿದ್ದಾದರೂ ಏನು? ಏಡ್ಸ್ ಪೀಡಿತ ಗಂಡಿನ ಸಂಪರ್ಕದಿಂದಾಗಿ ಮಹಿಳೆಯೊಬ್ಬಳು ಗರ್ಭ ಧರಿಸಿದ್ದಳು. ಅವಳ ಎಳೇ ಗರ್ಭಾಂಕುರವನ್ನು ಈತ ಹೊರಕ್ಕೆ ತೆಗೆದು ಅದರ ತಳಿಗುಣದಲ್ಲಿ ತುಸುವೇ ಮಾರ್ಪಾಟು ಮಾಡಿದ. ತಂದೆಯ ಶರೀರದಲ್ಲಿನ ಏಡ್ಸ್ ವೈರಾಣುಗಳು ಈ ಮಗುವಿನ ದೇಹವನ್ನು ಬಾಧಿಸದಂತೆ ತಡೆಗಟ್ಟಿದ. ಆ ಪುಟ್ಟ ಗರ್ಭಾಂಕುರವನ್ನು ಮತ್ತೆ ಮಹಿಳೆಯ ಶರೀರಕ್ಕೇ ಸೇರಿಸಿದ. ನಿರೀಕ್ಷೆ ಮೀರಿ, ಅವಳಿ ಜವಳಿ ಹೆಣ್ಣುಮಕ್ಕಳು ಆ ಮಹಿಳೆಗೆ ಜನಿಸಿದರು. ಪುಟ್ಟ ಮಕ್ಕಳ ರಕ್ತ ಪರೀಕ್ಷೆ ಮಾಡಿ ತನ್ನ ಪ್ರಯೋಗ ಯಶಸ್ವಿಯೆಂದೂ ಏಡ್ಸ್ ಮುಕ್ತ ಜೀವವನ್ನು ತಾನು ಸೃಷ್ಟಿ ಮಾಡಿದೆನೆಂದೂ ಘೋಷಿಸಿದ. ಅದೊಂದು ಅಪರಾಧವೆ? ಅದು ಲೋಕಕಲ್ಯಾಣದ ಕೆಲಸವೇ ಅಲ್ಲವೆ? ಆದರೂ ವಿಜ್ಞಾನ ರಂಗದಲ್ಲಿ ಅಷ್ಟೆಲ್ಲ ತಲ್ಲಣ ಎದ್ದಿದ್ದು ಏಕೆ?

ಜೀವಿಗಳ ತಳಿಸೂತ್ರವನ್ನು ಸಲೀಸಾಗಿ ತಿದ್ದುಪಡಿ ಮಾಡಬಲ್ಲ ಕ್ರಿಸ್‍ಪರ್ (CRISPR) ಎಂಬ ತಂತ್ರಕ್ಕೆ ಕಳೆದ ಐದು ವರ್ಷಗಳಿಂದ ಭಾರಿ ಮಹತ್ವ ಸಿಗುತ್ತಿದೆ. ಒಂದರ್ಥದಲ್ಲಿ ಅದು ಜೀವಿಗಳ ಬ್ರಹ್ಮಸೂತ್ರವನ್ನೇ ಬದಲಾಯಿಸುವ ವಿದ್ಯೆ. ಜೀವಿಗಳ ಪ್ರತಿಯೊಂದು ಜೀವಕೋಶದಲ್ಲೂ ಕೋಟ್ಯಂತರ ‘ಅಕ್ಷರ’ಗಳ, ಲಕ್ಷಾಂತರ ‘ಪದ’ಗಳ (ಜೀನ್ ಅಥವಾ ಗುಣಾಣುಗಳ) ತಳಿಸೂತ್ರವಿದೆ. ಆ ಪದಗಳ ಕಾಗುಣಿತವನ್ನು ಬೇಕೆಂದಂತೆ ಬದಲಿಸಿ ವ್ಯಕ್ತಿಯ ಚಹರೆಯನ್ನು, ದೇಹಗುಣಗಳನ್ನು ಬದಲಿಸಬಹುದು. ಅದಕ್ಕೆ ‘ಜೀನೋಮ್ ಎಡಿಟಿಂಗ್’ ಎಂತಲೇ ಹೇಳುತ್ತಾರೆ. ಈ ತಂತ್ರವನ್ನು ಬಳಸಿ ಜೀವಲೋಕದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗುತ್ತಿದೆ. ಖಾರಾ ಟೊಮ್ಯಾಟೊ ಸೃಷ್ಟಿಯಾಗಿದೆ. ಮಲೇರಿಯಾ ವೈರಾಣುಗಳು ಸೊಳ್ಳೆಗಳ ಶರೀರದಲ್ಲಿ ಆಶ್ರಯ ಪಡೆಯದಂತೆ ಸೊಳ್ಳೆಗಳ ತಳಿಸೂತ್ರವನ್ನು ಬದಲಿಸಲಾಗುತ್ತಿದೆ. ಹಂದಿಯ ತಳಿಗುಣವನ್ನು ಮಾರ್ಪಡಿಸಿ ರೋಗಿಗಳಿಗೆ ಯಾವ ಅಂಗ ಎಂದು ಬೇಕಿದ್ದರೂ ಸುಲಭದಲ್ಲಿ ಲಭಿಸುವಂತೆ ಮಾಡಬಹುದಾಗಿದೆ. ರೇಷ್ಮೆ ಹುಳಗಳಿಗೆ ಎಂದೂ ವೈರಸ್ ರೋಗ ಬಾರದಂತೆ ತಡೆದು, ಅವುಗಳಿಂದ ಹೊಸಬಗೆಯ ಎಳೆಗಳನ್ನು ಜಪಾನೀ ವಿಜ್ಞಾನಿಗಳು ಈಚೆಗಷ್ಟೇ ಹೊಮ್ಮಿಸಿದ್ದಾರೆ. ಹಸು, ನಾಯಿ, ಬೆಕ್ಕು, ಹಾವು-ಹಲ್ಲಿಗಳ ತಳಿಗುಣಗಳನ್ನು ಬದಲಿಸುವ ಪ್ರಯೋಗಗಳು ನಡೆದಿವೆ. ನಿಸರ್ಗದಲ್ಲಿ ಕಾಣದಿದ್ದ ಹೊಸ ಜೀವಿಗಳ ಸೃಷ್ಟಿ ಸಾಧ್ಯವಾಗಲಿದೆ. ನಾವು ಹೊಸಯುಗವೊಂದರ ಹೊಸ್ತಿಲಲ್ಲಿದ್ದೇವೆ.

ಕಾನೂನು ಕಟ್ಟಳೆಗಳು ಬಿಗಿಯಾಗಿಲ್ಲದಿದ್ದರೆ ಈ ಬಗೆಯ ಹಸ್ತಕ್ಷೇಪ ನಿಸರ್ಗದ ಸಮತೋಲವನ್ನೇ ಏರುಪೇರು ಮಾಡಬಹುದು. ಸಮಸ್ಯೆ ಏನೆಂದರೆ, ಸೂಕ್ತ ಕಾನೂನುಗಳನ್ನು ರಚಿಸುವ ವೇಗಕ್ಕಿಂತ ಶೀಘ್ರವಾಗಿ ಹೊಸ ತಳಿಯ ಜೀವಿಗಳ ಸೃಷ್ಟಿಕಾರ್ಯ ನಡೆದಿದೆ. ಮನುಷ್ಯನ ತಳಿಸೂತ್ರಕ್ಕೆ ಕೈಹಾಕುವ ಪ್ರಯೋಗಕ್ಕಂತೂ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಕೆಲವರಿಗೆ ಒಲಿಂಪಿಕ್ ಪದಕ ತರಬಲ್ಲ ಸಂತಾನ ಬೇಕು; ಇನ್ನು ಕೆಲವರಿಗೆ ಸಿನಿಮಾ ತಾರೆಯಾಗಬಲ್ಲ ಮಗು ಬೇಕು; ಐನ್‍ಸ್ಟೀನ್ ಮೀರಿಸುವ ಬುದ್ಧಿಯುಳ್ಳ ಮಗು ಬೇಕು. ಬುದ್ಧಿಯೇ ಇಲ್ಲದ, ದೈತ್ಯನಂತೆ ಮುನ್ನುಗ್ಗುವ ಅರೆಮಾನವ, ಆಜ್ಞಾಪಾಲಕ ರೋಬಾಟ್‍ಗಳು ಮಿಲಿಟರಿಗೆ ಬೇಕು. ಹೇಳಿದಷ್ಟು ಕೆಲಸ ಮಾಡುತ್ತ ಹೋಗುವ ನೌಕರರು ಕಾರ್ಪೊರೇಟ್ ಕಂಪನಿಗಳಿಗೆ ಬೇಕು. ಹೀಗೆ ಹೊಸ ಬಗೆಯ ಮಾನವ ಪ್ರಭೇದಗಳೇ ನಾಳೆ ಸೃಷ್ಟಿಯಾಗಬಹುದು. ಮೀಸಲಾತಿಯ ಪರಿಕಲ್ಪನೆಯೇ ಅಸಂಬದ್ಧ ಎನ್ನಿಸಬಹುದು.

ಹಗ್ಗ ಕಿತ್ತ ಹೋರಿಯಂತೆ ಹೊರಟ ಈ ಜೈವಿಕ ತಂತ್ರಜ್ಞಾನ ನಾಳೆ ಏನೇನನ್ನು ಸೃಷ್ಟಿ ಮಾಡುತ್ತದೊ? ಸದ್ಯಕ್ಕೇನೊ ಜೀನ್‍ಗಳನ್ನು ಬದಲಿಸುವ ತಂತ್ರವಷ್ಟೇ ಗೊತ್ತಾಗಿದೆ. ಯಾವ ಜೀನನ್ನು ಬದಲಿಸಿದರೆ ಬೇರೆ ಎಲ್ಲೆಲ್ಲಿ ಏನೇನು ಅಡ್ಡಪರಿಣಾಮ ಆಗುತ್ತದೆ ಎಂಬುದು ಇನ್ನೂ ಸ್ಪಷ್ಟಗೊತ್ತಿಲ್ಲ. ಸುತ್ತಲಿನ ನಿಸರ್ಗದ ಮೇಲೆ ಏನೇನು ಪರಿಣಾಮ ಗೊತ್ತಿಲ್ಲ. ಮನುಷ್ಯನ ತಳಿಗುಣಕ್ಕೂ ವಿವೇಕಕ್ಕೂ ಏನು ಸಂಬಂಧ ಎಂಬುದು ಗೊತ್ತಿಲ್ಲ. ಪ್ರಾಣಿಗಳ ತಳಿಗುಣವನ್ನು ಬದಲಿಸಿ ಎಡವಟ್ಟಾದರೆ ಆ ಪ್ರಾಣಿಯನ್ನೇ ಕೊಲ್ಲಬಹುದು. ಆದರೆ ಮನುಷ್ಯರನ್ನು ಹಾಗೆ ಮಾಡುವಂತಿಲ್ಲ. ಆದ್ದರಿಂದ ಸದ್ಯಕ್ಕೆ ಮನುಷ್ಯನ ಜೀವಾಂಕುರದ ಮೇಲೆ ಕ್ರಿಸ್‍ಪರ್ ಪ್ರಯೋಗ ಮಾಡಲೇ ಕೂಡದು ಎಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಈ ನಿರ್ಧಾರವನ್ನು ಧಿಕ್ಕರಿಸುವ ಯತ್ನಗಳೂ ಅಲ್ಲಲ್ಲಿ ನಡೆಯುತ್ತಿವೆ.

ಚೀನಾದ ಹೆ ಜಿಯಾಂಕ್ವಿಯ ಕೃತ್ಯಕ್ಕೆ ಎಲ್ಲೆಡೆ ಛೀಮಾರಿ ಹಾಕಲಾಗಿದೆ. ನಾವೇನೋ ಇದನ್ನು ‘ಹೆ’ಯ ಕೃತ್ಯ ಎಂದು ಖಂಡಿಸಬಹುದು. ಆದರೆ ಕೆಲವರು ‘After all, He did it- ಅಂದರೆ ಸೃಷ್ಟಿಕರ್ತನೇ ಈ ಕೆಲಸ ಮಾಡಿದ’ ಎಂತಲೂ ಹೇಳಬಹುದು. ಹೀಗಿದ್ದರೂ ಆತನನ್ನು ಹೀರೊ ಎಂದು ಸನ್ಮಾನಿಸುವ ಬದಲು ಚೀನಾ ಸರ್ಕಾರ ಬಂಧಿಸಿಟ್ಟಿದೆ - ಏಕೆಂದರೆ ಜಪಾನ್, ಅಮೆರಿಕ, ಯುರೋಪ್‍ಗಳು ಚೀನಾದ ಮೇಲೆ ಆರ್ಥಿಕ, ರಾಜತಾಂತ್ರಿಕ ದಿಗ್ಬಂಧನ ಹೇರಬಹುದು. ಸದ್ಯಕ್ಕೆ ಅಷ್ಟಾದರೂ ಲಗಾಮು ಇದೆ. ರಹಸ್ಯವಾಗಿ ಎಲ್ಲಿ ಏನಾಗುತ್ತಿದೆಯೊ ಗೊತ್ತಿಲ್ಲ.

ಕ್ಷಾಮವನ್ನೂ ಮಹಾಯುದ್ಧಗಳನ್ನೂ ಮೆಟ್ಟಿ ನಿಂತ ಮಾನವ ಕುಲಕ್ಕೆ ಈಗ ಒಟ್ಟಾಗಿ ಮೂರು ಬಗೆಯ ಹೊಸ ಆತಂಕಗಳು ಎದುರಾಗಿವೆ: ಒಂದು, ಹವಾಮಾನ ವೈಪರೀತ್ಯ; ಇನ್ನೊಂದು ಜೈವಿಕ ತಂತ್ರಜ್ಞಾನ; ಮೂರನೆಯದು ರೊಬಾಟಿಕ್ ತಂತ್ರಜ್ಞಾನ (ಜೀವಿಗಳ ನರಮಂಡಲವನ್ನೂ ನಿಯಂತ್ರಿಸುವ ರೊಬಾಟಿಕ್ ತಂತ್ರ ಬರುತ್ತಿದೆ). ಈ ಮೂರಕ್ಕೂ ರಾಷ್ಟ್ರದ ಗಡಿಗಳೆಂಬುದು ಇಲ್ಲ. ಅಭಿವೃದ್ಧಿಯ ಹುಚ್ಚು ಪೈಪೋಟಿಯಲ್ಲಿ ಚೀನೀಯರು ದಿನಕ್ಕೊಂದು ಹೊಸ ಕಲ್ಲಿದ್ದಲ ವಿದ್ಯುತ್ ಘಟಕವನ್ನು ಆರಂಭಿಸುತ್ತಿದ್ದರೆ, ಅದರಿಂದಾಗಿ ಭೂಮಿಯ ತಾಪಮಾನ ಮತ್ತಷ್ಟು ಏರುವಾಗ ಯಾವ ರಾಷ್ಟ್ರವೂ ಏನೂ ಮಾಡುವಂತಿಲ್ಲ. ಹಾಗೆಯೇ ಬಯೊಟೆಕ್ನಾಲಜಿ, ಇನ್‍ಫಾರ್ಮೇಶನ್ ಟೆಕ್ನಾಲಜಿಗಳು (ಬಿಟಿ, ಐಟಿ) ಲಾಭಕೋರ ಕಂಪನಿಗಳ ದೆಸೆಯಿಂದ ಅನಿಯಂತ್ರಿತವಾಗಿ ಎತ್ತೆತ್ತಲೊ ನುಗ್ಗುತ್ತಿದ್ದರೆ ಯಾವ ಒಂದು ರಾಷ್ಟ್ರ ತಾನಾಗಿ ಏನೂ ಮಾಡುವಂತಿಲ್ಲ. ಬದಲಿಗೆ ಈ ಕ್ಷೇತ್ರದಲ್ಲಿ ತಾನು ಹಿಂದೆ ಬೀಳಬಾರದೆಂದು ಪ್ರತಿಯೊಂದು ರಾಷ್ಟ್ರವೂ ಮುನ್ನುಗ್ಗಲು ಯತ್ನಿಸುತ್ತದೆ. ಸಾಲದ್ದಕ್ಕೆ ಈಗೀಗ ಕೆಲವು ದೇಶಗಳಲ್ಲಿ ಟ್ರಂಪ್ ಮಾದರಿಯ ರಾಷ್ಟ್ರವಾದ ಮುನ್ನೆಲೆಗೆ ಬರುತ್ತಿದೆ. ಹೊಸ ಡಿಸೈನರ್ ಬೇಬಿಗಳನ್ನು ಸೃಷ್ಟಿ ಮಾಡಲು ಸಾಧ್ಯವಾದರೆ ‘ಮಾಡೋಣ, ಅದೇನಾಗುತ್ತೊ ನೋಡೋಣ’ ಎಂದು ಮುನ್ನುಗ್ಗುವ ಹುಂಬತಜ್ಞರ ಸಂಖ್ಯೆಯೂ ಹೆಚ್ಚುತ್ತಿದೆ.

‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಇಡೀ ಭೂಮಿಯ ಕ್ಷೇಮಚಿಂತನೆ ಮಾಡುವವರು, ಹೊಸ ಜಾತಿಗಳ ಸೃಷ್ಟಿಗೆ ಲಗಾಮು ಬೇಕೆನ್ನುವವರು ಎಲ್ಲಿದ್ದರೂ ಬೇಕಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.