ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಸ್ತಬ್ಧಚಿತ್ರಕ್ಕೆ ರೇಷ್ಮೆ–ಮಾವು ಮೆರಗು

ಸ್ತಬ್ಧಚಿತ್ರವನ್ನು ಅಲಂಕರಿಸಿವೆ ಜಿಲ್ಲೆಯ ಮಹನೀಯರ ಭಾವಚಿತ್ರಗಳು
Published : 11 ಅಕ್ಟೋಬರ್ 2024, 7:08 IST
Last Updated : 11 ಅಕ್ಟೋಬರ್ 2024, 7:08 IST
ಫಾಲೋ ಮಾಡಿ
Comments

ರಾಮನಗರ: ವಿಜಯದಶಮಿಯಂದು ಈ ಸಲ ರೇಷ್ಮೆನಾಡು ಖ್ಯಾತಿಯ ರಾಮನಗರ ಜಿಲ್ಲೆಯ ಪ್ರಮುಖ ಬೆಳೆ ರೇಷ್ಮೆ, ಮಾವು, ಜಿಲ್ಲೆಗೆ ಕೀರ್ತಿಯನ್ನು ನಾಡಿನಾದ್ಯಂತ ಬೆಳಗಿದ ಮಹನೀಯರು ಭಾವಚಿತ್ರಗಳು ಹಾಗೂ ಸ್ಥಳೀಯ ಪಾರಂಪರಿಕ ವಿಶೇಷತೆಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ರಾಜ್ಯದ ಜನರಿಗೆ ಸಿಗುತ್ತಿದೆ.

ಹೌದು. ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ ನಿರ್ಮಿಸಿರುವ ಸ್ತಬ್ಧಚಿತ್ರದಲ್ಲಿ ಜಿಲ್ಲೆಯ ಮೇಲಿನ ವಿಶೇಷತೆಗಳು ಗಮನ ಸೆಳೆಯಲಿದೆ. ಅ. 12ರಂದು ನಡೆಯಲಿರುವ ಚಾಮುಂಡೇಶ್ವರಿ ದೇವಿಯ ಚಿನ್ನದ ಮೂರ್ತಿಯನ್ನು ಹೊತ್ತ ಜಂಬೂ ಸವಾರಿಯ ದಿನದಂದು ಈ ಸ್ತಬ್ಧಚಿತ್ರದ ಮೆರವಣಿಗೆಯನ್ನು ಜನರು ಕಣ್ತುಂಬಿಕೊಳ್ಳಲಿದ್ದಾರೆ.

‘ಹಿಂದೆಲ್ಲಾ ಸ್ತಬ್ಧ ಚಿತ್ರಗಳಲ್ಲಿ ಜಿಲ್ಲೆಯ ಸ್ಮಾರಕಗಳು ಹಾಗೂ ದೇವಾಲಯಗಳ ಮಾದರಿಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಈ ಸಲ ವಿಭಿನ್ನವಾಗಿ ಜಿಲ್ಲೆಯ ಜನರ ಜೀವನಾಡಿಯಾಗಿರುವ ಬೆಳೆಗಳನ್ನು ಮುಖ್ಯವಾಗಿಟ್ಟುಕೊಂಡು ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ಜಿಲ್ಲೆ ಎಂದಾಕ್ಷಣ ನೆನಪಿಗೆ ಬರುವ ರೇಷ್ಮೆ, ಮಾವು, ಕೂಟಗಲ್ ಬೆಟ್ಟ, ರಾಮದೇವರ ಬೆಟ್ಟದ ರಣಹದ್ದು ವನ್ಯಜೀವಿಧಾಮ ಹಾಗೂ ಹಾಲು ಉತ್ಪಾದನೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿರುವುದನ್ನು ಬಿಂಬಿಸುವ ಚಿತ್ರಗಳಿಗೆ ಆದ್ಯತೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೇಷ್ಮೆ ಕೃಷಿಗೆ ಹೆಸರುವಾಸಿಯಾಗಿರುವ ರಾಮನಗರವು ಏಷ್ಯಾದ ಅತಿದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಹೊಂದಿದೆ. ಅದೇ ರೀತಿ, ಮಾವು ಬೆಳೆ ಕೂಡ ಇಲ್ಲಿ ಜನಪ್ರಿಯ. ಮಾರುಕಟ್ಟೆಗೆ ಮೊದಲು ದಾಂಗುಡಿ ಇಡುವುದೇ ರಾಮನಗರದ ಮಾವು. ಜಿಲ್ಲೆಯಲ್ಲಿ ಎರಡೂ ಬೆಳೆಗಳು ಜನಪ್ರಿಯವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿವೆ. ಹಾಗಾಗಿ, ರೇಷ್ಮೆ ಮತ್ತು ಮಾವಿಗೆ ಈ ಸಲ ಸ್ತಬ್ಧಚಿತ್ರದಲ್ಲಿ ಗಮನ ಸೆಳೆಯಲಿವೆ’ ಎಂದರು.

‘ದಸರಾಗೆ ಸಿದ್ಧವಾಗಿರುವ ಸ್ತಬ್ಧಚಿತ್ರವನ್ನು ಸುಮಾರು ₹9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಜೊತೆಗೆ, ದಸರಾದಲ್ಲಿ ಗಮನ ಸೆಳೆಯಲಿರುವ ಜಿಲ್ಲೆಯ ಮಳಿಗೆಗಳಿಗೆ ₹9 ಲಕ್ಷ ಖರ್ಚಾಗಲಿದೆ. ಈ ಮೊತ್ತವನ್ನು ವಿವಿಧ ಇಲಾಖೆಗಳು ಭರಿಸಲಿವೆ. ಚಾಮರಾಜನಗರ ಜಿಲ್ಲೆಯ ಕಲಾವಿದರು ಸ್ತಬ್ಧಚಿತ್ರವನ್ನು ಸಿದ್ಧಪಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಕಳೆದ ವರ್ಷದ ದಸರಾದಲ್ಲಿ ಚನ್ನಪಟ್ಟಣದ ಬೊಂಬೆ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ, ಭಕ್ತರ ಆರಾಧ್ಯ ದೇವತೆಯಾದ ಕಬ್ಬಾಳಮ್ಮನ ದೇವಸ್ಥಾನ, ರಣಹದ್ದು  ಒಳಗೊಂಡ ಸ್ತಬ್ಧಚಿತ್ರ ಗಮನ ಸೆಳೆದಿತ್ತು.

ಚಿಕ್ಕಸುಬ್ಬಯ್ಯ ಮುಖ್ಯ ಯೋಜನಾಧಿಕಾರಿ ಜಿಲ್ಲಾ ಪಂಚಾಯಿತಿ
ಚಿಕ್ಕಸುಬ್ಬಯ್ಯ ಮುಖ್ಯ ಯೋಜನಾಧಿಕಾರಿ ಜಿಲ್ಲಾ ಪಂಚಾಯಿತಿ
ನಾಡಹಬ್ಬವಾದ ಮೈಸೂರು ದಸರಾದಲ್ಲಿ ಈ ಸಲ ರೇಷ್ಮೆನಾಡು ರಾಮನಗರ ಜಿಲ್ಲೆಯ ಪ್ರಮುಖ ಬೆಳೆಗಳು ಜಿಲ್ಲೆಯ ವಿಶೇಷತೆಗಳು ಹಾಗೂ ಮಹನೀಯರ ಚಿತ್ರವನ್ನೊಳಗೊಂಡ ಸ್ತಬ್ಧಚಿತ್ರ ಗಮನ ಸೆಳೆಯಲಿದೆ
ಚಿಕ್ಕಸುಬ್ಬಯ್ಯ ಮುಖ್ಯ ಯೋಜನಾಧಿಕಾರಿ ಜಿಲ್ಲಾ ಪಂಚಾಯಿತಿ

ಸ್ತಬ್ಧಚಿತ್ರದ ಇತರ ವಿಶೇಷಗಳು

ಸ್ತಬ್ಧಚಿತ್ರದಲ್ಲಿ ಜಿಲ್ಲೆಯ ಪ್ರಮುಖ ಬೆಳೆಗಳಾದ ಮಾವು ರೇಷ್ಮೆ ಜೊತೆಗೆ ರಾಮದೇವರ ಬೆಟ್ಟದ ರಣಹದ್ದು ಮಾದರಿ ಜೊತೆಗೆ ಚನ್ನಪಟ್ಟಣದ ಅಂಬೆಗಾಲು ಕೃಷ್ಣ ರೇಷ್ಮೆಯ ಚಂದ್ರಿಕೆ ಮಾವಿನ ಮರ ಚನ್ನಪಟ್ಟಣದ ಆಟಿಕೆಗಳು ರೇಷ್ಮೆ ನೂಲು ಕಾರ್ಖಾನೆ ಸಾಲುಮರದ ತಿಮ್ಮಕ್ಕ ಕೆಂಗಲ್ ಹನುಂತಯ್ಯ ಕವಿ ಸಿದ್ದಲಿಂಗಯ್ಯ ನಾಡಪ್ರಭು ಕೆಂಪೇಗೌಡ ಶಿವಕುಮಾರಸ್ವಾಮಿ ಆದಿಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮೀಜಿ ಭಾವಚಿತ್ರಗಳು ಗಮನ ಸೆಳೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT