ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ ।

ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಮ್ ।

ಇದರ ತಾತ್ಪರ್ಯ ಹೀಗೆ:

‘ಭಾಷೆಗಳಲ್ಲಿ ಮುಖ್ಯವೂ ಮಧುರವೂ ದಿವ್ಯವೂ ಆದುದು ಸಂಸ್ಕೃತಭಾಷೆ. ಅದರಲ್ಲಿಯೂ ಸಂಸ್ಕೃತಭಾಷೆಯ ಕಾವ್ಯ ಮಧುರ. ಅದಕ್ಕಿಂತಲೂ ಆ ಭಾಷೆಯಲ್ಲಿರುವ ಸುಭಾಷಿತ ಮಧುರ.‘

ಭಾರತದ ಪ್ರಾಚೀನ ಭಾಷೆ ಎಂದರೆ ಅದು ಸಂಸ್ಕೃತವೇ ಹೌದು. ವಿಶ್ವದ ಪ್ರಾಚೀನ ಭಾಷೆಗಳಲ್ಲೂ ಇದು ಒಂದು. ನಮ್ಮ ದೇಶದ ಸಂಸ್ಕೃತಿಯನ್ನು, ಪ್ರಜ್ಞಾಪರಂಪರೆಯನ್ನು ರೂಪಿಸಿರುವುದರಲ್ಲಿ ಸಂಸ್ಕೃತದ ಕೊಡುಗೆ ಅನನ್ಯ, ಅಪೂರ್ವ.

ಸಂಸ್ಕೃತದಲ್ಲಿರುವ ಸಾಹಿತ್ಯದ ಪ್ರಮಾಣವೂ ಅಗಾಧ; ವೈವಿಧ್ಯವೂ ಅಗಾಧ; ಸತ್ತ್ವವೂ ಆಗಾಧ. ವೇದಗಳಿಂದ ಮೊದಲುಗೊಂಡು ಗಾದೆಗಳ ತನಕ ಸಾವಿರ ಸಾವಿರ ಸಂಖ್ಯೆಯಲ್ಲಿ ಗ್ರಂಥಗಳ ರಾಶಿಯೇ ಇದೆ; ವಿಜ್ಞಾನ, ಗಣಿತ, ಕಲೆಗಳು, ವೈದ್ಯಶಾಸ್ತ್ರ, ತತ್ತ್ವಶಾಸ್ತ್ರ, ಭಾಷಾಶಾಸ್ತ್ರ, ವ್ಯಾಕರಣ – ಹೀಗೆ ಎಲ್ಲ ವಿಷಯಗಳ ಬಗ್ಗೆ ಗ್ರಂಥಪರಂಪರೆಯೇ ಇದೆ. ಒಟ್ಟಿನಲ್ಲಿ ಭಾರತವನ್ನು ಅರಿಯಬೇಕಾದರೆ ಸಂಸ್ಕೃತವನ್ನು ತಿಳಿಯಲೇಬೇಕು.

ಭಾಷೆಗಳಲ್ಲಿ ಮಧುರವಾದ ಭಾಷೆ ಎಂದರೆ ಅದು ಸಂಸ್ಕೃತಭಾಷೆಯೇ ಹೌದು – ಎನ್ನುವುದು ಈ ಸುಭಾಷಿತದ ಉದ್ಗಾರ. ಈ ಸಂಗತಿ ಆ ಭಾಷೆಯನ್ನು ಕಲಿತರೆ ಆಗ ಸ್ಪಷ್ಟವಾಗುತ್ತದೆಯೆನ್ನಿ! ಆ ಭಾಷೆಯ ವಿಶಾಲ ವಾಙ್ಮಯಪ್ರಪಂಚದಲ್ಲಿ ಕಾವ್ಯಗಳು ಇನ್ನೂ ಮಧುರವಂತೆ. ರಾಮಾಯಣ–ಮಹಾಭಾರತಗಳೂ ಕಾಲಿದಾಸ–ಭವಭೂತಿಗಳ ಕೃತಿಗಳೂ ಜಯದೇವ–ಲೀಲಾಶುಕರ ರಚನೆಗಳೂ ಕೆಲವು ಉದಾಹರಣೆಗಳನ್ನಾದರೂ ಇಲ್ಲಿ ನೋಡಬಹುದು. ಈ ಕಾವ್ಯಪರಂಪರೆಯಲ್ಲಿ ಮತ್ತೂ ಮಧುರವಾಗಿರುವಂಥದ್ದು ಸುಭಾಷಿತಗಳು ಎನ್ನುತ್ತಿದೆ, ಈ ಸುಭಾಷಿತ.

ಸುಭಾಷಿತಗಳು ಸಂಸ್ಕೃತವಾಙ್ಮಯದಲ್ಲಿ ತುಂಬ ವಿಶಿಷ್ಟವಾದ ರಚನೆಗಳು. ಜೀವನಾನುಭವವನ್ನೂ ಜೀವನದರ್ಶನವನ್ನೂ ಜೀವನವಿವೇಕವನ್ನೂ ತುಂಬ ಕಡಿಮೆ ಮಾತುಗಳಲ್ಲಿ ಸೊಗಸಾಗಿ ಸಂಗ್ರಹಿಸಿ ಕೊಡುವ ಈ ಸುಭಾಷಿತಗಳ ಸವಿಯೇ ಸವಿ.

ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಮ್ ।
ಮೂಢೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಧೀಯತೇ ।।

‘ಭೂಮಿಯಲ್ಲಿ ಸರ್ವಶ್ರೇಷ್ಠವಾದ ವಸ್ತುಗಳು ಕೇವಲ ಮೂರೇ ಮೂರಿವೆ. ನೀರು, ಅನ್ನ ಮತ್ತು ಸುಭಾಷಿತ – ಒಳ್ಳೆಯ ಮಾತು. ಆದರೆ ಮೂರ್ಖರು ಮಾತ್ರ ಕಲ್ಲಿನ ಚೂರುಗಳನ್ನು ರತ್ನ ಅಥವಾ ಶ್ರೇಷ್ಠವಸ್ತು ಎಂದು ಕರೆಯುತ್ತಿರುವುದು ವಿಷಾದಕರ ಸಂಗತಿ.‘

ನಮ್ಮ ಜೀವನಕ್ಕೆ ಸುಭಾಷಿತಗಳು ಅನ್ನ–ನೀರುಗಳಂತೆಯೇ ಪೋಷಕವಾದವು, ಆವಶ್ಯಕವಾದವು ಎನ್ನುವುದನ್ನು ಈ ಸುಭಾಷಿತ ಎತ್ತಿಹಿಡಿಯುತ್ತಿದೆ.

ಸಂಸಾರಕಟುವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ |

ಸುಭಾಷಿತರಸಾಸ್ವಾದಃ ಸಂಗತಿಃ ಸುಜನೈಃ ಸಹ ||

‘ಸಂಸಾರ ಎಂದರೆ, ಜೀವನ ಒಂದು ಕಹಿಯಾದ ಮರ. ಆದರೆ ಈ ಕಹಿವೃಕ್ಷದಲ್ಲಿಯೂ ಅಮೃತದಂಥ ಎರಡು ಹಣ್ಣುಗಳಿವೆ; ಅವೇ – ಸುಭಾಷಿತವನ್ನು ಸವಿಯುವಂಥದ್ದು ಮತ್ತು ಸಜ್ಜನರ ಸಹವಾಸ.’

ಸ್ವಾರಸ್ಯವನ್ನು ಕಳೆದುಕೊಂಡಿರುವ ಜೀವನಕ್ಕೆ ಸೊಗಸನ್ನೂ, ಕಹಿಯಿಂದ ತುಂಬಿದ ಬದುಕಿಗೆ ರಸವನ್ನೂ ತುಂಬಬಲ್ಲ ಅಮೃತಪ್ರಾಯ ಜೀವಸತ್ತ್ವವೇ ಸುಭಾಷಿತಗಳು – ಎಂಬುದನ್ನು ಈ ಪದ್ಯ ಸಾರುತ್ತಿದೆ.

ಸುಭಾಷಿತೇನ ಗೀತೇನ ಯುವತೀನಾಂ ಚ ಲೀಲಯಾ l

ಮನೋ ನ ಭಿದ್ಯತೇ ಯಸ್ಯ ಸ ಯೋಗೀ ಹ್ಯಥವಾ ಪಶುಃ ll

‘ಸುಭಾಷಿತ, ಹಾಡು ಮತ್ತು ಯುವತಿಯರ ವಿಲಾಸ – ಇವುಗಳಿಂದ ಯಾರ ಮನಸ್ಸು ಸೂರೆ ಹೋಗುವುದಿಲ್ಲವೋ ಅವನು ಯೋಗಿಯಾಗಿರಬೇಕು ಅಥವಾ ಪಶು ಆಗಿರಬೇಕು.’

ಎಂಥ ಜಡನನ್ನೂ ತನ್ನತ್ತ ಸೆಳೆಯಬಲ್ಲ ಗುಣ–ಶಕ್ತಿ ಸುಭಾಷಿತಗಳಿಗಿದೆ; ಹಾಡು ಎಂಥವರ ಮನಸ್ಸನ್ನೂ ಸೂರೆಗೊಳ್ಳುತ್ತದೆ; ಅಂತೆಯೇ ಹೆಣ್ಣಿನ ಸೌಂದರ್ಯವೂ ನಮ್ಮನ್ನು ಸಂತೋಷಗೊಳಿಸುತ್ತದೆ. ಹೀಗೆಯೇ ಸುಭಾಷಿತಗಳೂ ಕೂಡ ನಮ್ಮ ಮನಸ್ಸನ್ನು ಸೂರೆಗೊಳ್ಳುವ, ಮುದಗೊಳಿಸುವ ಸಹಜ ರಸಸ್ರೋತಗಳೇ ಹೌದು.

ಇಂದು ಸಂಸ್ಕೃತದಿನ. ಸಂಸ್ಕೃತಭಾಷೆಗೆ ಪ್ರವೇಶವನ್ನು ಸುಭಾಷಿತಗಳಿಂದಲೇ ಪಡೆಯಬಹುದು; ಅದು ಸಂಸ್ಕೃತದ ರಸಮಾರ್ಗವೇ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.