ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ: ರಾಜಕೀಯ ತೆರೆ ಮೇಲೆ ಚಿತ್ರ ತಾರೆಯರು

Published : 6 ಏಪ್ರಿಲ್ 2023, 18:50 IST
ಫಾಲೋ ಮಾಡಿ
Comments

ಕನ್ನಡ ಚಿತ್ರರಂಗಕ್ಕೂ ರಾಜ್ಯದ ರಾಜಕಾರಣಕ್ಕೂ ದೊಡ್ಡ ನಂಟಿದೆ. ಕನ್ನಡ ಚಿತ್ರರಂಗದ ಹತ್ತಾರು ದೊಡ್ಡ ತಾರೆಯರು ರಾಜಕಾರಣದಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಿದ್ದಾರೆ. ಅವರಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ. ಹಲವರು ಹೀಗೆ ಬಂದು, ಹಾಗೆ ಹೋಗಿದ್ದಾರೆ. ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಂತಂತೆ, ರಾಜಕಾರಣದಲ್ಲೂ ಗಟ್ಟಿಯಾಗಿ ನಿಂತವರ ಸಂಖ್ಯೆ ಕಡಿಮೆಯೇ.

ಕೆಲವು ಚಿತ್ರನಟರು ಸಕ್ರಿಯ ರಾಜಕಾರಣ ಪ್ರವೇಶಿಸದೇ ಇದ್ದರೂ ರಾಜಕಾರಣಿಗಳ ಪರವಾಗಿ ಮತ್ತು ರಾಜಕೀಯ ಪಕ್ಷಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ನಟ ಸುದೀಪ್‌ ಅವರು ಈಚೆಗಷ್ಟೇ, ಮುಖ್ಯಮಂತ್ರಿ ಬೊಮ್ಮಾಯಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ನಟ ರವಿಚಂದ್ರನ್‌ ಸಹ ಈ ಹಿಂದೆ ಕೆಲವು ರಾಜಕಾರಣಿಗಳ ಪರವಾಗಿ ಪ್ರಚಾರ ನಡೆಸಿದ್ದರು. ನಟ ದರ್ಶನ್, ಯಶ್‌ ಈ ಹಿಂದೆ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಕನ್ನಡ ಚಿತ್ರರಂಗ ಮತ್ತು ರಾಜಕಾರಣದ ನಡುವಣ ಸಂಬಂಧವು, ಪಕ್ಕದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕಿಂತ ತೀರಾ ಭಿನ್ನವಾದುದು. ತಮಿಳುನಾಡು ಮತ್ತು ಅವಿಭಜಿತ ಆಂಧ್ರಪ್ರದೇಶದ ಚಿತ್ರರಂಗಗಳು ಆಯಾ ರಾಜ್ಯಗಳ ರಾಜಕಾರಣದ ದಿಕ್ಕನ್ನೇ ಬದಲಿಸಿದ ಉದಾಹರಣೆಗಳು ನಮ್ಮೆದುರು ಇವೆ. ತೆಲುಗು ಚಿತ್ರರಂಗದ ಮಹಾತಾರೆ ಎನ್‌.ಟಿ.ರಾಮರಾವ್ ಚುನಾವಣಾ ರಾಜಕಾರಣದಲ್ಲಿ ಯಶಸ್ಸು ಕಂಡಿದ್ದಲ್ಲದೆ, ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು. ತೆರೆಯ ಮೇಲೆ ಅವರಿಗಿದ್ದ ವರ್ಚಸ್ಸು, ಯಶಸ್ವಿ ರಾಜಕಾರಣಿಯಾಗಿ ಇನ್ನಷ್ಟು ಹೆಚ್ಚಾಗಿತ್ತು. ಎನ್‌ಟಿಆರ್‌ ನಂತರದ ತಲೆಮಾರಿನ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಚಿರಂಜೀವಿ ಸಹ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಅವರು ಚುನಾವಣೆಯಲ್ಲಿ ಯಶಸ್ಸು ಕಂಡರೂ ಅವರ ಪಕ್ಷದ ಅಭ್ಯರ್ಥಿಗಳಿಗೆ ಗೆಲ್ಲುವ ಅದೃಷ್ಟವಿರಲಿಲ್ಲ. ಈಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ತಾರೆಗಳು ರಾಜಕಾರಣದಿಂದ ದೂರವೇ ಉಳಿದಿದ್ದಾರೆ.

ಪಕ್ಕದ ತಮಿಳುನಾಡಿನ ರಾಜಕಾರಣಕ್ಕೂ, ಅಲ್ಲಿನ ಚಿತ್ರರಂಗಕ್ಕೂ ಬಿಡಿಸಲಾರದ ನಂಟು. ಚಿತ್ರ ಸಾಹಿತಿಯಾಗಿದ್ದ ಎಂ. ಕರುಣಾನಿಧಿ ಅವರು ಅಣ್ಣಾದೊರೈ ನಂತರ ಡಿಎಂಕೆ ಪಕ್ಷವನ್ನು ಹಲವು ದಶಕಗಳ ಕಾಲ ಮುನ್ನಡೆಸಿದ್ದರು. ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿದ್ದರು. ಎಂಜಿಆರ್‌ ಸಹ ಚಿತ್ರರಂಗದಿಂದಲೇ ರಾಜಕಾರಣಕ್ಕೂ ಧುಮುಕಿ, ಅಲ್ಲಿಯೂ ಯಶಸ್ಸು ಕಂಡವರು. ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು. ಚಿತ್ರತಾರೆ ಜಯಲಲಿತಾ ಸಹ ಹಲವು ಬಾರಿ ಮುಖ್ಯಮಂತ್ರಿಯಾಗಿದ್ದರು. ಖುಷ್ಬೂ ಸುಂದರ್, ಕಮಲ್‌ ಹಾಸನ್‌ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಹೊಸ ತಲೆಮಾರಿನ ತಮಿಳು ನಟರು ತಮ್ಮ ರಾಜಕೀಯ ಸಿದ್ಧಾಂತಗಳನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಜತೆಗೆ, ಸರ್ಕಾರಗಳ ನೀತಿಗಳನ್ನು ಬಹಿರಂಗವಾಗಿಯೇ ಖಂಡಿಸಿದ್ದಾರೆ.

ಕನ್ನಡ ಚಿತ್ರರಂಗದ ಹತ್ತಾರು ತಾರೆಯರು ರಾಜಕಾರಣಕ್ಕೆ ಬಂದರೂ, ಸಚಿವಸ್ಥಾನ ಪಡೆದರೂ, ದೊಡ್ಡಮಟ್ಟದ ಯಶಸ್ಸು ಪಡೆದದ್ದು ಕಡಿಮೆ. ಎನ್‌ಟಿಆರ್‌ ಮತ್ತು ಎಂಜಿಆರ್‌ ತಲೆಮಾರಿನ ಕನ್ನಡ ಚಿತ್ರರಂಗದ ದೊಡ್ಡ ತಾರೆಯಾಗಿದ್ದ ರಾಜ್‌ಕುಮಾರ್‌ ಅವರು ರಾಜಕಾರಣದಿಂದ ದೂರವೇ ಉಳಿದಿದ್ದರು. ರಾಜಕಾರಣಕ್ಕೆ ಬನ್ನಿ ಎಂದು ರಾಜಕೀಯ ನಾಯಕರು, ಪಕ್ಷಗಳು ದುಂಬಾಲು ಬಿದ್ದಾಗಲೂ ರಾಜ್‌ಕುಮಾರ್ ಅವರು ಅದನ್ನು ತಿರಸ್ಕರಿಸಿದ್ದರು. ಗೋಕಾಕ್‌ ಚಳವಳಿಯ ಮುಂಚೂಣಿಯಲ್ಲಿ ಇದ್ದರೂ, ರಾಜ್‌ಕುಮಾರ್ ಅವರು ರಾಜಕಾರಣಕ್ಕೆ ಬರಲಿಲ್ಲ. ಆನಂತರ ರಾಜಕಾರಣಕ್ಕೆ ಬಂದ ಅನಂತನಾಗ್‌, ನಂತರದ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದರು. ರಾಜ್ಯ ರಾಜಕಾರಣದಲ್ಲಿ ಈಗಲೂ ಹತ್ತಾರು ಸಿನಿಮಾ ತಾರೆಯರು ಸಕ್ರಿಯವಾಗಿದ್ದಾರೆ. ಆದರೆ, ಅದು ರಾಜ್ಯದ ರಾಜಕಾರಣವನ್ನು ಪ್ರಭಾವಿಸುವ ಅಥವಾ ಅದರ ದಿಕ್ಕನ್ನು ಬದಲಿಸುವಷ್ಟು ಪ್ರಬಲವಾಗಿಲ್ಲ.

ನಟಿಯರ ಪ್ರಾತಿನಿಧ್ಯ ಹೆಚ್ಚು

ಕರ್ನಾಟಕ ರಾಜಕಾರಣದಲ್ಲಿ ಸಿನಿಮಾ ನಟಿಯರ ಸಂಖ್ಯೆ ದೊಡ್ಡದೇ ಇದೆ. ಸಕ್ರಿಯ ರಾಜಕಾರಣದಲ್ಲಿ ಇರುವ ನಟರ ಸಂಖ್ಯೆಗಿಂತ ನಟಿಯರ ಸಂಖ್ಯೆಯೇ ಹೆಚ್ಚು ಎಂದರೆ ತಪ್ಪಾಗಲಾರದು. ಸಿನಿಮಾ ನಟಿಯರು ರಾಜಕಾರಣಕ್ಕೆ ಬರುವ ಪ್ರವೃತ್ತಿ ತೀರಾ ಹೊಸದೂ ಅಲ್ಲ, ಹಳೆಯದ್ದೂ ಅಲ್ಲ. ಹಾಗೆ ನೋಡಿದರೆ ಒಂದು ದಶಕದಿಂದ ಈಚೆಗೆ ಸಕ್ರಿಯ ರಾಜಕಾರಣಕ್ಕೆ ಬಂದ ಸಿನಿಮಾ ನಟಿಯರ ಸಂಖ್ಯೆ ಹೆಚ್ಚಾಗಿದೆ. ಹಲವು ನಟಿಯರು ಇಲ್ಲಿ ಯಶಸ್ವಿಯೂ ಆಗಿದ್ದಾರೆ

ಉಮಾಶ್ರೀ

ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದ ಕನ್ನಡದ ಹೆಸರಾಂತ ನಟಿಯರಲ್ಲಿ ಉಮಾಶ್ರೀ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ರಾಜಕಾರಣದಲ್ಲಿ ಅವರ ಪಯಣ ಆರಂಭವಾಗಿ ಎರಡು ದಶಕ ದಾಟಿದೆ. 2001ರಲ್ಲಿ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2008ರವರೆಗೂ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಅವರು, ಅದೇ ವರ್ಷದ ವಿಧಾನಸಭಾ ಚುನಾವಣೆಯ ಮೂಲಕ ಚುನಾವಣಾ ರಾಜಕಾರಣಕ್ಕೆ ಧುಮುಕಿದ್ದರು. ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೂಲಕ, ಬಿಜೆಪಿಯ ಸಿದ್ದು ಸವದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 2013ರಲ್ಲಿ ಅದೇ ಕ್ಷೇತ್ರದಲ್ಲಿ ಬಿಜೆಪಿಯ ಸಿದ್ದು ಸವದಿ ಅವರನ್ನು ಸೋಲಿಸಿ, ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳಕಲ್ಯಾಣ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. 2018ರ ಚುನಾವಣೆಯಲ್ಲಿ ಸೋತರೂ, ರಾಜಕಾರಣದಲ್ಲಿ ಅವರು ಸಕ್ರಿಯವಾಗಿಯೇ ಇದ್ದಾರೆ. ಕ್ಷೇತ್ರದ ಜನರ ಜತೆಗೆ ಸಭೆ, ಸಂವಾದಗಳನ್ನು ನಡೆಸುತ್ತಿದ್ದಾರೆ.

ಜಯಮಾಲಾ

ನಟಿ ಜಯಮಾಲಾ ಅವರು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದರು. ಚುನಾವಣಾ ಪ್ರಚಾರಗಳಲ್ಲಿ, ರಾಜಕೀಯ ಚರ್ಚೆ ಮತ್ತು ಸಂವಾದಗಳಲ್ಲಿ ಭಾಗಿಯಾಗಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಯಮಾಲಾ ಅವರು ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದರು. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಆ ಸರ್ಕಾರದಲ್ಲಿ ಇದ್ದ ಏಕೈಕ ಸಚಿವೆ ಅವರಾಗಿದ್ದರು. ಮೈತ್ರಿ ಸರ್ಕಾರದ ಪತನದ ನಂತರ, ಸಕ್ರಿಯ ರಾಜಕಾರಣದಿಂದ ಅವರು ದೂರ ಉಳಿದಿದ್ದಾರೆ.

ರಮ್ಯಾ

‘ಚಂದನವನದ ರಾಣಿ’ ಎಂದೇ ಖ್ಯಾತರಾದ ರಮ್ಯಾ ಅವರದ್ದೂ ರಾಜಕಾರಣದಲ್ಲಿ ಗಮನಾರ್ಹ ಪಯಣ. 2013ರಲ್ಲಿ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಅವರು, ಗೆದ್ದು ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು. 2014ರ ಲೋಕಸಭಾ ಚುನಾವಣೆಯ ನಂತರ ರಾಜಕಾರಣದಿಂದ ದೂರವೇ ಉಳಿದಿದ್ದ ಅವರು, ನಂತರದ ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದರು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತ ನಂತರ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೊ ಯಾತ್ರೆ’ಯಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು.

ಸುಮಲತಾ ಅಂಬರೀಷ್

ನಟಿ ಸುಮಲತಾ ಅವರು ರಾಜಕಾರಣ ಪ್ರವೇಶಿಸಿದ್ದು ಅಂಬರೀಷ್‌ ಅವರ ಕಾಲಾನಂತರ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಅಂದಿನ ಚುನಾವಣೆಯಲ್ಲಿ ರಾಜ್ಯದಲ್ಲೇ ಹೆಚ್ಚು ಸದ್ದು ಮಾಡಿದ ಕ್ಷೇತ್ರವಿದು. ಕನ್ನಡ ಚಿತ್ರರಂಗದ ಹಲವು ಪ್ರಮುಖರು ಸುಮಲತಾ ಬೆಂಬಲಕ್ಕೆ ನಿಂತಿದ್ದರು. ಕಾಂಗ್ರೆಸ್‌ ಪರೋಕ್ಷ ಬೆಂಬಲ ನೀಡಿತ್ತು. ಮೊದಲ ಚುನಾವಣೆಯಲ್ಲೇ ಗೆದ್ದು ಸಂಸತ್ತು ಪ್ರವೇಶಿಸಿದ್ದರು. ಈಗ ಬಿಜೆಪಿಯನ್ನು ಬೆಂಬಲಿಸುವುದಾಗಿ ಸುಮಲತಾ ಹೇಳಿದ್ದಾರೆ. ತಮ್ಮ ಮಗನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ.

lಬಿಜೆಪಿ ವಕ್ತಾರೆಯಾಗಿರುವ ನಟಿ ಮಾಳವಿಕಾ ಅವಿನಾಶ್ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡ ಕನ್ನಡ ಚಿತ್ರರಂಗದ ಪ್ರತಿನಿಧಿಗಳಲ್ಲಿ ಒಬ್ಬರು. ಚುನಾವಣಾ ರಾಜಕಾರಣ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದರಾದರೂ ಇನ್ನೂ ಅವಕಾಶ ದೊರೆತಿಲ್ಲ. ನಟಿ ತಾರಾ ಅನೂರಾಧ ಅವರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಬಿಜೆಪಿಯಲ್ಲಿದ್ದಾರೆ. ನಟಿ ಶ್ರುತಿ 2008ರಲ್ಲಿ ಬಿಜೆಪಿ ಸೇರಿದ್ದರು. ನಂತರದ ವರ್ಷಗಳಲ್ಲಿ ಕೆಜೆಪಿ ಸೇರಿದ್ದರು. ಪೂಜಾಗಾಂಧಿ ಬಿಆರ್‌ಎಸ್‌ ಕಾಂಗ್ರೆಸ್‌ ಮೂಲಕ ಕಣಕ್ಕೆ ಇಳಿದು ಸೋತಿದ್ದರು. ಇನ್ನು ಭಾವನಾ ರಾಮಣ್ಣ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಈಚೆಗಷ್ಟೇ ಕಾಂಗ್ರೆಸ್‌ಗೆ ಹೋಗಿದ್ದಾರೆ.

––––––––––

ಅನಂತನಾಗ್

ಹೆಸರಾಂತ ನಟ ಅನಂತ್‌ನಾಗ್ ಅವರು ಐದು ದಶಕಗಳ ಹಿಂದೆಯೇ ರಾಜಕಾರಣ ಆರಂಭಿಸಿದ್ದವರು. ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್. ಪಟೇಲ್ ಅವರ ರಾಜಕೀಯ ಒಡನಾಡಿಯಾಗಿದ್ದರು. ಜನತಾ ಪಕ್ಷದ ಅಂದಿನ ಚುನಾವಣೆಗಳಲ್ಲಿ ಪ್ರಮುಖ ತಾರಾ ಪ್ರಚಾರಕರಾಗಿ ಅನಂತ್‌ನಾಗ್ ಗುರುತಿಸಿಕೊಂಡಿದ್ದರು. ಆದರೆ, ಚುನಾವಣಾ ಸ್ಪರ್ಧೆಯು ಅವರಿಗೆ ಆರಂಭದಲ್ಲಿ ಸೋಲು ತಂದಿತು. 1983ರ ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತ್‌ ಅವರು ಅನಂತ್‌ನಾಗ್ ಅವರಿಗೆ ಎದುರಾಳಿಯಾಗಿದ್ದರು. ಆದರೆ, ಇಬ್ಬರು ಖ್ಯಾತನಾಮರೂ ಸೋಲು ಕಾಣಬೇಕಾಯಿತು. 1994ರಲ್ಲಿ ವಿಧಾನಸಭೆ ಪ್ರವೇಶಿಸಿ, ಪಟೇಲ್ ಸಚಿವ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದರು. 2004ರಲ್ಲಿ ಮತ್ತೆ ಚುನಾವಣಾ ಕಣಕ್ಕೆ ಧುಮುಕಿದ ಅವರು, ಚಾಮರಾಜಪೇಟೆಯಲ್ಲಿ ಸೋಲು ಕಾಣಬೇಕಾಯಿತು.

ಶಂಕರ್‌ನಾಗ್

ಅನಂತ್ ನಾಗ್ ಅವರ ಸಹೋದರ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ಹಾಗೂ ತಂತ್ರಜ್ಞರಾಗಿ ಹೆಸರಾಗಿದ್ದ ಶಂಕರ್‌ನಾಗ್ ಅವರು ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡವರಲ್ಲ. ಆದರೆ ತಮ್ಮ ಸಹೋದರ ಅನಂತ್‌ನಾಗ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಅಂಬರೀಷ್

ಕನ್ನಡ ಚಿತ್ರರಂಗದ ರೆಬೆಲ್‌ ಸ್ಟಾರ್‌ ಎಂದೇ ಹೆಸರಾಗಿದ್ದ ಅಂಬರೀಷ್ ಅವರು ಚಿತ್ರರಂಗದ ಹಾಗೆಯೇ ರಾಜಕೀಯದಲ್ಲೂ ಹೆಸರಾದವರು. 1994ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸಕ್ರಿಯ ರಾಜಕಾರಣ ಆರಂಭಿಸಿದರು. ಜನತಾದಳಕ್ಕೆ ಸೇರ್ಪಡೆಯಾಗಿ, 1998ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆರಿಸಿಬಂದರು. ನಂತರ ಕಾಂಗ್ರೆಸ್‌ಗೆ ಮರು ಸೇರ್ಪಡೆಯಾದ ಅವರು ಕೇಂದ್ರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದರು. ಒಟ್ಟು ಮೂರು ಬಾರಿ ಲೋಕಸಭಾ ಸದಸ್ಯರಾಗಿ ಕೆಲಸ ಮಾಡಿದರು. ವಿಧಾನಸಭೆಗೂ ಆಯ್ಕೆಯಾಗಿದ್ದ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು.

‘ಮುಖ್ಯಮಂತ್ರಿ’ ಚಂದ್ರು

‘ಮುಖ್ಯಮಂತ್ರಿ’ ನಾಟಕದಿಂದ ಪ್ರಸಿದ್ಧರಾಗಿ, ನೂರಾರು ಸಿನಿಮಾಗಳಲ್ಲಿ ನಟಿಸಿರುವ ಮುಖ್ಯಮಂತ್ರಿ ಚಂದ್ರು ಅವರು 1985ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಗೌರಿಬಿದನೂರು ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. 90ರ ದಶಕದಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿ ಎರಡು ಅವಧಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾದರು. 2014ರಲ್ಲಿ ಪಕ್ಷ ಬದಲಿಸಿದ ಅವರು ಕಾಂಗ್ರೆಸ್‌ ಸೇರಿದರು. ಪರಿಷತ್‌ಗೆ ಮರು ಆಯ್ಕೆ ಮಾಡಲು ಕಾಂಗ್ರೆಸ್ ಹಿಂದೇಟು ಹಾಕಿತು ಎಂದು ಆರೋಪಿಸಿದ ಅವರು ಎಂಟು ವರ್ಷಗಳ ಬಳಿಕ ಕಾಂಗ್ರೆಸ್ ತ್ಯಜಿಸಿದರು. ಈಗ ಅವರು ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವನ್ನು ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಜಗ್ಗೇಶ್

ಆರಂಭದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿ ನಂತರದ ದಿನಗಳಲ್ಲಿ ನಾಯಕ ಸ್ಥಾನಕ್ಕೆ ಬಡ್ತಿ ಪಡೆದು ಯಶಸ್ವಿಯಾಗಿರುವ ಜಗ್ಗೇಶ್ ರಾಜಕೀಯದ ಸೆಳೆತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

ಆರಂಭದಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭೆಗೆ ಸ್ಪರ್ಧಿಸಿ ಗೆಲುವನ್ನೂ ಕಂಡ ಅವರು ನಂತರದ ದಿನಗಳಲ್ಲಿ ಬಿಜೆಪಿ ಸೇರಿದರು. ಬಿಜೆಪಿಯಿಂದ ಪರಿಷತ್‌ಗೆ ಆಯ್ಕೆಯಾದರು. ರಸ್ತೆಸಾರಿಗೆ ನಿಗಮದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದರು. ಉಪಚುನಾವಣೆಯಲ್ಲಿ ಸೋಲಿನ ರುಚಿಯನ್ನೂ ನೋಡಿದರು. ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ಗಮನ ಸೆಳೆದಿದ್ದಾರೆ.

ಬಿ.ಸಿ. ಪಾಟೀಲ್

ಪೊಲೀಸ್ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ ಬಿ.ಸಿ ಪಾಟೀಲ್, ಚಿತ್ರರಂಗದ ಸೆಳೆತದಿಂದ ಅಲ್ಲಿಯೂ ಮೋಡಿ ಮಾಡಿದರು. ಯಶಸ್ವಿ ಚಿತ್ರಗಳನ್ನು ನೀಡಿದ ಅವರನ್ನು ರಾಜಕೀಯವೂ ಸೆಳೆಯಿತು. 2004ರಲ್ಲಿ ಜೆಡಿಎಸ್ ಪಕ್ಷದಿಂದ ಹಿರೇಕೆರೂರು ಕ್ಷೇತ್ರದಲ್ಲಿ ಮೊದಲ ಬಾರಿ ಸ್ಪರ್ಧಿಸಿ ಶಾಸಕರಾದರು. 2008ರಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ನಿಂದ ಮತ್ತೊಮ್ಮೆ ವಿಧಾನಸಭೆಗೆ ಆರಿಸಿಬಂದರು. ಮಂದಿನ ಚುನಾವಣೆಯು ಅವರಿಗೆ ಸೋಲಿನ ನಿರಾಸೆ ಮೂಡಿಸಿತು. ಆದರೆ 2018ರಲ್ಲಿ ಗೆಲುವಿನ ನಗೆ ಬೀರಿದರು. ಸಚಿವ ಸ್ಥಾನದ ನಿರೀಕ್ಷೆಯಿದ್ದರೂ ಅವರಿಗೆ ಸಿಗಲಿಲ್ಲ. ವರ್ಷದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಸೇರ್ಪಡೆಯಾದರು. ಉಪಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದರು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಕೃಷಿ ಖಾತೆ ನಿರ್ವಹಿಸುತ್ತಿದ್ದು, ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ.

ಸಿ.ಪಿ. ಯೋಗೀಶ್ವರ್

ಸಿನಿಮಾರಂಗಕ್ಕೆ ಕಲಾವಿದನಾಗಿ ಪದಾರ್ಪಣೆ ಮಾಡಿದ ಸಿ.ಪಿ. ಯೋಗೀಶ್ವರ್ ಅವರು ನಾಯಕ ನಟರಾಗಿ ಕೆಲವು ಸಿನಿಮಾಗಳಲ್ಲಿ ಹೆಸರು ಮಾಡಿದರು. ಅವರು ರಾಜಕೀಯ ಪಯಣ ಆರಂಭಿಸಿದ್ದು ಕಾಂಗ್ರೆಸ್ ಪಕ್ಷದಿಂದ. ಆದರೆ ಅವರು ಹಲವು ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ. 2008ರಲ್ಲಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆಯಾಗಿ, ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದರು. ಅವರಿಗೆ ಸಂಪು ಟದಲ್ಲಿ ಸ್ಥಾನವೂ ದೊರೆಯಿತು. 2013ರಲ್ಲಿ ಅವರ ಚಿತ್ತ ಸಮಾಜವಾದಿ ಪಕ್ಷದತ್ತ ಹರಿಯಿತು. ಚನ್ನಪಟ್ಟಣದಲ್ಲಿ ಸೈಕಲ್ ಚಿಹ್ನೆಯಡಿ ಗೆದ್ದು ಮತ್ತೆ ವಿಧಾನಸಭೆಗೆ ಬಂದರು. ಅವರ ಮುಂದಿನ ಹಾದಿ ಮತ್ತೆ ಕಾಂಗ್ರೆಸ್‌ನತ್ತ, ಇದಾದ ಬಳಿಕ ಬಿಜೆಪಿಯತ್ತ ಸಾಗಿತು.

ಕುಮಾರ್ ಬಂಗಾರಪ್ಪ

‘ಅಶ್ವಮೇಧ’ದಂತಹ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡು, ಆ್ಯಕ್ಷನ್ ದೃಶ್ಯಗಳು ಹಾಗೂ ಡಾನ್ಸ್‌ನಲ್ಲಿ ಹೆಸರಾಗಿದ್ದ ಕುಮಾರ್ ಬಂಗಾರಪ್ಪ ಅವರು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಲೋಕಸಭೆಗೆ ಆಯ್ಕೆಯಾದಾಗ ತೆರವಾಗಿದ್ದ ಸೊರಬ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕುಮಾರ್ ಕಣಕ್ಕಿಳಿದು ಗೆದ್ದುಬಂದರು. ಚಿಕ್ಕ ವಯಸ್ಸಿನಲ್ಲಿ ಶಾಸನಸಭೆಗೆ ಆಯ್ಕೆಯಾದ ಹೆಗ್ಗಳಿಕೆ ಇವರದ್ದು. ಸತತ ಮೂರು ಬಾರಿ ಅವರು ಶಾಸಕರಾದರು. ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಸಹೋದರ ಮಧು ಬಂಗಾರಪ್ಪ ವಿರುದ್ಧ ಸ್ಪರ್ಧಿಸಿ ಗೆದ್ದು ಬಂದರು. ಒಮ್ಮೆ ಸಮಾಜವಾದಿ ಪಕ್ಷದಿಂದಲೂ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿದ್ದ ಅವರು ಕೆಲವೇ ದಿನಗಳಲ್ಲಿ ಮತ್ತೆ ಕಾಂಗ್ರೆಸ್‌ಗೆ ಬಂದಿದ್ದರು. ಇದೀಗ ಬಿಜೆಪಿ ಶಾಸಕರಾಗಿದ್ದು, ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ.

ಉಪೇಂದ್ರ

ಪ್ರಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರು ರಾಜಕೀಯ ಪ್ರವೇಶಿಸಿದ್ದು ಐದು ವರ್ಷಗಳ ಹಿಂದೆ. ಅವರ ಕಲ್ಪನೆಯ ‘ಪ್ರಜಾಕೀಯ’ ಎಂಬ ರಾಜಕೀಯ ವೇದಿಕೆಯ ಅಡಿ, ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷವನ್ನು (ಕೆಪಿಜೆಪಿ) ಕಟ್ಟಿದ್ದರು. ಪಕ್ಷದಿಂದ ಹಲವು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಉಪೇಂದ್ರ ಅವರು ಸ್ಪರ್ಧೆಯಿಂದ ದೂರವುಳಿದಿದ್ದರು. ಆದರೆ ಆಂತರಿಕ ಕಲಹದ ಕಾರಣ ಪಕ್ಷದಿಂದ ಹೊರಬಂದ ಅವರು, ಉತ್ತಮ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿದರು. ರಾಜಕೀಯ ವೇದಿಕೆ ಸ್ಥಾಪಿಸಿದ್ದರೂ, ಅವರು ಸದ್ಯ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.

ಶಶಿಕುಮಾರ್

ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಶಶಿಕುಮಾರ್ ಅವರು ರಾಜಕಾರಣಿಯಾಗಿಯೂ ಯಶಸ್ಸು ಪಡೆದವರು. 1999ರಲ್ಲಿ ಜೆಡಿಯು ಟಿಕೆಟ್‌ನಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದರು. ಸಂಸತ್ತಿಗೆ ಆಯ್ಕೆಯಾಗಿದ್ದರು. ನಂತರದ ವರ್ಷಗಳಲ್ಲಿ ಜೆಡಿಎಸ್ ಸೇರಿದ್ದರು. 2006ರಲ್ಲಿ ಜೆಡಿಎಸ್‌ ತೊರೆದು, ಕಾಂಗ್ರೆಸ್‌ ಸೇರಿದ್ದರು. ಕೆಲವೇ ತಿಂಗಳ ಹಿಂದೆ ಬಿಜೆಪಿ ಸೇರಿದ್ದರು.

––––––––––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT