ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ | ಫುಟ್‌ಬೋರ್ಡ್ ಮೇಲೆ ಪ್ರಯಾಣ: ಬೇಕಿದೆ ಕಡಿವಾಣ

ಶಂಕರ ಈ. ಹೆಬ್ಬಾಳ
Published : 21 ಸೆಪ್ಟೆಂಬರ್ 2024, 5:29 IST
Last Updated : 21 ಸೆಪ್ಟೆಂಬರ್ 2024, 5:29 IST
ಫಾಲೋ ಮಾಡಿ
Comments

ಮುದ್ದೇಬಿಹಾಳ: ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು, ಕೆಲವು ಯುವಕರು ಬಸ್‌ನಲ್ಲಿ ಫುಟ್‌ಬೋರ್ಡ್ ಮೇಲೆ ನಿಂತು ಬಾಗಿಲಲ್ಲಿ ನೇತಾಡಿಕೊಂಡು ಹೋಗುವ ಘಟನೆಗಳು ನಡೆಯುತ್ತಿವೆ. ಸಾರಿಗೆ ಇಲಾಖೆಯ ನೌಕರ ಸುರಕ್ಷತೆಯ ಕುರಿತು ಎಷ್ಟೇ ತಿಳಿವಳಿಕೆ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವರಿಲ್ಲ.

ಮುದ್ದೇಬಿಹಾಳದ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಮುಖ್ಯರಸ್ತೆಯಲ್ಲಿ ಹಾಕಿರುವ ರಸ್ತೆ ಉಬ್ಬು ದಾಟುವಾಗ ಬಸ್‌ನಿಂದ ಬಿದ್ದು ವಿದ್ಯಾರ್ಥಿಯೊಬ್ಬ ಈಚೆಗೆ ಗಂಭೀರವಾಗಿ ಗಾಯಗೊಂಡಿದ್ದ. ಈ ಕುರಿತು ಪೊಲೀಸ್ ಠಾಣೆಯವರೆಗೂ ದೂರು ಹೋಗಿತ್ತು. 

ಬಸ್‌ನಲ್ಲಿ ಜಾಗ ಇದೆಯೋ, ಇಲ್ಲವೋ ಅದ್ಯಾವುದನ್ನೂ ಲೆಕ್ಕಿಸದೇ ಫುಟ್‌ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಾರೆ. ರಸ್ತೆಯಲ್ಲಿ ತಗ್ಗು ಗುಂಡಿಗಳಿಗೆ ಬಸ್ ಮುಗ್ಗರಿಸಿದಾಗ ಫುಟ್‌ಬೋರ್ಡ್ ಮೇಲೆ ನಿಂತಿರುವ ವಿದ್ಯಾರ್ಥಿಗಳು ಬಿದ್ದು ಗಾಯಗೊಂಡು ತೊಂದರೆ ಅನುಭವಿಸಿದ ಪ್ರಸಂಗಗಳೂ ನಡೆಯುತ್ತಿವೆ. 

ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದಾಗಿನಿಂದ ಹಬ್ಬ, ಜಾತ್ರೆ ಇದ್ದ ಸಮಯದಲ್ಲಿ ವಿದ್ಯಾರ್ಥಿಗಳು ನಿಲ್ಲಲೂ ಆಗದಷ್ಟು ಬಸ್‌ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿರುತ್ತವೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮಗೆ ಇರುವ ಒಂದೊ, ಎರಡೋ ಬಸ್‌ಗಳನ್ನೇ ನಂಬಿಕೊಂಡು ಜೀವ ಒತ್ತೆ ಇಟ್ಟಾದರೂ ಪ್ರಯಾಣಿಸುವ ಪರಿಸ್ಥಿತಿ ಇದೆ. ಶಕ್ತಿ ಯೋಜನೆಯಲ್ಲಿ ಕೆಲವು ಮಾರ್ಪಾಡು ತರಬೇಕು ಎಂಬ ಆಗ್ರಹವೂ ವಿದ್ಯಾರ್ಥಿ ವಲಯದಿಂದ ಕೇಳಿ ಬರುತ್ತಿದೆ.

‘ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಎರಡು ಮೂರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಯೋಜನೆಯನ್ನು ರದ್ದುಗೊಳಿಸುವುದು ಸೂಕ್ತ’ ಎಂದು ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವನಗೌಡ ಬಿರಾದಾರ ಹಾಗೂ ಕಾರ್ಯಕರ್ತೆ ಗಂಗಾ ಹಡಪದ ಒತ್ತಾಯಿಸಿದ್ದಾರೆ.

‘ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಯೋಜನೆಯನ್ನು ಮಾರ್ಪಾಡು ಮಾಡಲು ಚಿಂತನೆಗಳು ನಡೆದಿವೆ. ವಿದ್ಯಾರ್ಥಿಗಳು ಫುಟ್‌ಬೋರ್ಡ್ ಮೇಲೆ ನಿಂತು ಪಯಣಿಸದಂತೆ ಸಾರಿಗೆ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದು ಎನ್ಎಸ್‌ಯುಐ ರಾಜ್ಯ ಪ್ರಧಾನ ಕಾಯದರ್ಶಿ ಸದ್ದಾಂ ಕುಂಟೋಜಿ ಅಭಿಪ್ರಾಯಪಟ್ಟರು.

‘ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣದ ಸಮಯದಲ್ಲಿ ಬಾಗಿಲಲ್ಲಿ ನಿಂತು ಸಂಚರಿಸಬಾರದು ಎಂದು ತಿಳಿಸಿದ್ದೇವೆ. ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿ, ಮನೆಯ ಜವಾಬ್ದಾರಿ ಅರಿತುಕೊಂಡು ಶಾಲೆ, ಕಾಲೇಜು ಮುಗಿದ ಕೂಡಲೇ ಸುರಕ್ಷಿತವಾಗಿ ಮನೆ ತಲುಪಬೇಕು’ ಎಂದು ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಎಸ್.ಎಸ್. ಅಂಗಡಿ ತಿಳಿಸಿದ್ದಾರೆ.

‘ಬಸ್‌ಗಳು ಸಾಲುತ್ತಿಲ್ಲ’

ಶಕ್ತಿ ಯೋಜನೆ ಜಾರಿಯಾದಾಗಿನಿಂದ ಜನರ ಓಡಾಟ ಹೆಚ್ಚಿದೆ. ನಮ್ಮ ಡಿಪೊದಲ್ಲಿರುವ 125 ಬಸ್‌ಗಳು ಸಾಕಾಗುತ್ತಿಲ್ಲ. ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಚಾಲಕ, ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಬೇಕು. ಆದರೂ ಸ್ಥಳೀಯವಾಗಿ ನಾವು ಎರಡು ಬಸ್‌ಗಳು ಹೋಗುವಲ್ಲಿ 4 ಬಸ್‌ಗಳನ್ನು ಓಡಿಸುತ್ತಿದ್ದೇವೆ. ಈಚೆಗೆ ಶಾಸಕರ ಗಮನಕ್ಕೂ ಇದನ್ನು ತಂದಿದ್ದೇವೆ. ಇನ್ನೊಂದು ಉಪ ಸಾರಿಗೆ ಘಟಕ ನಮ್ಮಲ್ಲಿ ಆರಂಭವಾಗಬೇಕು. ಫುಟ್‌ಬೋರ್ಡ್ ಪ್ರಯಾಣ ಯಾವತ್ತಿದ್ದರೂ ಅಪಾಯವೇ. ಇದನ್ನು ಆಯಾ ಚಾಲಕ, ನಿರ್ವಾಹಕರು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಬೇಕು.

- ಅಬೂಬಕರ್ ಮದಭಾವಿ, ಕೆಕೆಆರ್‌ಸಿಟಿ ಘಟಕ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT