ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸಭೆ: ನಾಯಕರಿಗೆ ಢವ, ಢವ

Published 11 ಜುಲೈ 2024, 4:18 IST
Last Updated 11 ಜುಲೈ 2024, 4:18 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಲು ಕಾರಣಗಳೇನು ಎಂಬ ಕುರಿತು ಬೆಂಗಳೂರಿನಲ್ಲಿ ಗುರುವಾರ ಸತ್ಯಶೋಧನಾ ಸಮಿತಿ ಮಧುಸೂದನ್‌ ಮೇಸ್ತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ ಜಿಲ್ಲಾ ನಾಯಕರ ಎದೆ ಬಡಿತ ಜೋರಾಗಿಸಿದೆ.

ಐದು ಗ್ಯಾರಂಟಿಗಳನ್ನೂ ನೀಡಿದ ನಂತರವೂ ನಿರೀಕ್ಷಿತ ಫಲಿತಾಂಶ ಬರದಿರುವುದರಿಂದ ಹೈಕಮಾಂಡ್‌ ಲೋಕಸಭಾ ಚುನಾವಣಾಯಲ್ಲಾದ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲೆಯಲ್ಲಿ ಸಚಿವರು ಸೇರಿದಂತೆ ಐವರು ಕಾಂಗ್ರೆಸ್‌ ಶಾಸಕರಿದ್ದರೂ ಏಕೆ ಸೋಲಾಯಿತು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೈಕಮಾಂಡ್ ಮುಂದಾಗಿದೆ.

ಗುರುವಾರ ಹಿರಿಯ ನಾಯಕರು, ಸಚಿವರ, ಶಾಸಕರ, ಜಿಲ್ಲಾ ಘಟಕದ ಅಧ್ಯಕ್ಷರ ಸಭೆ, ಶುಕ್ರವಾರ 2023ರ ವಿಧಾನಸಭಾ ಅಭ್ಯರ್ಥಿಗಳ, ಮುಂಚೂಣಿ ಘಟಕಗಳ ಅಧ್ಯಕ್ಷರ, ನಿಗಮ, ಮಂಡಳಿ ಅಧ್ಯಕ್ಷರೊಂದಿಗೆ ಸಮಿತಿ ನಾಯಕರು ಸಭೆ ನಡೆಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಹಿನ್ನಡೆಯಾಗಿತ್ತು. ಉಳಿದ ಶಾಸಕರ ಕ್ಷೇತ್ರಗಳಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿತ್ತು. ಲೋಕಸಭಾ ಕ್ಷೇತ್ರದ ನರಗುಂದ ಹೊರತುಪಡಿಸಿದರೆ, ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮುನ್ನಡೆ ದೊರೆತಿರಲಿಲ್ಲ.

2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ ಈ ಬಾರಿಯೂ ಆಕಾಂಕ್ಷಿಯಾಗಿದ್ದರು. ಅವರು ಅಭ್ಯರ್ಥಿಯಾಗುವುದಕ್ಕೆ ವಿರೋಧಿಸಿದ್ದ ಜಿಲ್ಲಾ ಶಾಸಕರು, ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಅಭ್ಯರ್ಥಿಯಾಗಲು ಸಮ್ಮತಿಸಿದ್ದರು. ಒಮ್ಮತದ ಅಭ್ಯರ್ಥಿ ಕಣಕ್ಕಿಳಿದ ನಂತರವೂ ಏಕೆ ಸೋಲಾಯಿತು ಎಂಬುದರ ಚರ್ಚೆ ನಡೆಯಲಿದೆ.

ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆ ಕಾಂಗ್ರೆಸ್‌ ಶಾಸಕರು, ವಿಧಾನಸಭಾ ಚುನಾವಣೆಯಂತೆ ಕೆಲಸ ಮಾಡುವುದಿಲ್ಲ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಪ್ರತಿ ಬಾರಿ ಅಭ್ಯರ್ಥಿ ಬದಲಾವಣೆ ಮಾಡಿದರೂ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದು ಕಾಂಗ್ರೆಸ್‌ ಮುಖಂಡರ ಆರೋಪ.

ಪುತ್ರಿಯ ಗೆಲುವಿನ ನಿರೀಕ್ಷೆಯೊಂದಿಗೆ ಬಂದಿದ್ದ ಸಚಿವ ಶಿವಾನಂದ ಪಾಟೀಲ ಅವರಿಗೆ ನಿರಾಸೆಯಾಗಿದೆ. ಅವರು ಹಾಗೂ ಅಭ್ಯರ್ಥಿಯಾಗಿದ್ದ ಅವರ ಪುತ್ರಿ ಸಂಯುಕ್ತಾ ಪಾಟೀಲ ಜಿಲ್ಲಾ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲವಾದರೂ, ಸಮಿತಿಯ ಮುಂದೆ ಏನು ಹೇಳಲಿದ್ದಾರೆ ಎಂಬ ಕುತೂಹಲ ಕಾಂಗ್ರೆಸ್‌ ನಾಯಕರಲ್ಲಿದೆ.

ಸಮಿತಿಯ ಮುಂದೆ ಯಾರು, ಯಾರು ಏನು ಹೇಳಲಿದ್ದಾರೆ ಎಂಬುದು ಶಾಸಕರನ್ನು ಚಿಂತೆಗೆ ದೂಡಿದೆ. ಹೈಕಮಾಂಡ್‌ ರಚಿಸಿರುವ ಸಮಿತಿಯ ಮುಂದೆ ಮುಂಚೂಣಿ ಘಟಕದ ನಾಯಕರನ್ನೇ ಕರೆದಿರುವುದರಿಂದ ಸತ್ಯ ಹೊರಬೀಳುವುದೇ ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT