ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಳಗಿ: ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿದ ರೋಗಿಗಳ ಸಂಖ್ಯೆ

ಹವಾಮಾನ ಏರಿಳಿತದ ದುಷ್ಪರಿಣಾಮ
ಕಾಶೀನಾಥ ಸೋಮನಕಟ್ಟಿ
Published : 5 ಅಕ್ಟೋಬರ್ 2024, 5:53 IST
Last Updated : 5 ಅಕ್ಟೋಬರ್ 2024, 5:53 IST
ಫಾಲೋ ಮಾಡಿ
Comments

ಬೀಳಗಿ: ತಾಲ್ಲೂಕಿನಾದ್ಯಂತ ಹವಾಮಾನ ಬದಲಾವಣೆಯಿಂದಾಗಿ ವೈರಾಣು ಕಾಯಿಲೆಗಳು ಉಲ್ಬಣಿಸುತ್ತಿದ್ದು, ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಮಕ್ಕಳು ಹೈರಾಣಾಗುತ್ತಿದ್ದಾರೆ.

ತಾಲ್ಲೂಕಾ ಆಸ್ಪತ್ರೆಯಲ್ಲಿರುವ ಮಕ್ಕಳ ವಿಭಾಗದಲ್ಲಿ ನಿತ್ಯವೂ 100ಕ್ಕೂ ಹೆಚ್ಚು ಮಕ್ಕಳನ್ನು ಚಿಕಿತ್ಸೆಗೆಂದು ಪೋಷಕರು ಕರೆತರುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಜನಸಂದಣಿ ಹೆಚ್ಚಾಗಿದ್ದು, ಚಿಕಿತ್ಸೆ ನೀಡುವಲ್ಲಿ ವೈದ್ಯರು ನಿರತರಾಗಿ ಇದ್ದಾರೆ. ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವವರಲ್ಲಿ ಶೇ 30ರಿಂದ ಶೇ 40ರಷ್ಟು ಮಕ್ಕಳು ವೈರಾಣು ಸೋಂಕಿನಿಂದ ಬಳಲುತ್ತಿದ್ದಾರೆ.

ತಾಪಮಾನ ಏರಿಳಿತ, ಗಾಳಿ ಸಹಿತ ಮಳೆ ಹಾಗೂ ಬಿಸಿಲಿನಿಂದಾಗಿ ವೈರಾಣು ಜ್ವರವು ಮಕ್ಕಳನ್ನು ಹೆಚ್ಚಾಗಿ ಕಾಡುತ್ತಿದೆ. ಇನ್ನೊಂದು ಕಡೆ, ಶೀತ– ಜ್ವರ ಮಾದರಿಯ ಆರೋಗ್ಯ ಸಮಸ್ಯೆಗಳೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.

‘ಬೀಳಗಿ ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಲ್ಲಿ ನೂರಾರು ರೋಗಿಗಳು ಜ್ವರ, ನೆಗಡಿ, ಕೆಮ್ಮಿನಿಂದ ಬಳಲಿ ತಪಾಸಣೆಗೆ ಬಂದಿದ್ದರು. ವಾತಾವರಣ ಬದಲಾವಣೆಯಾದಾಗ ಜ್ವರದ ಪ್ರಕರಣಗಳು ಕಾಣಿಸುತ್ತವೆ. ಭಯಪಡುವ ಅವಶ್ಯಕತೆ ಇಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಜಯ ಯಡಹಳ್ಳಿ ಹೇಳಿದರು.

‘ಎರಡೂ–ಮೂರು ದಿನಗಳಿಂದ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿತ್ತು. ನಮ್ಮೂರಿನ ವೈದ್ಯರ ಬಳಿ ತೋರಿಸಿದ್ದೆವು. ಜ್ವರ ಕಡಿಮೆಯಾಗದ ಕಾರಣ, ಬೀಳಗಿ ಸರ್ಕಾರಿ ಆಸ್ಪತ್ರೆಯ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆದ ಮೇಲೆ ಈಗ ಆರಾಮವಾಗಿದೆ’ ಎಂದು ಹಳ್ಳಿಗಳಿಂದ ಆಗಮಿಸಿದ ತಾಯಂದಿರು ತಿಳಿಸಿದರು.

ಮನೆಯಲ್ಲಿ ಎಚ್ಚರಿಕೆ

‘ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು ಸಾಮಾನ್ಯವಾಗಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ಮನೆ ಮಂದಿಗೆಲ್ಲ ವ್ಯಾಪಕವಾಗಿ ಹರಡುತ್ತದೆ. ನೆಗಡಿ ಕೆಮ್ಮು ಮೈ–ಕೈ ನೋವಿನಿಂದ ಆರಂಭವಾಗಿ ನಾಲ್ಕಾರು ದಿನ ಸಮಸ್ಯೆ ಬಾಧಿಸುತ್ತದೆ. ಸೀನು ಕೆಮ್ಮಿದಾಗ ಹೊರ ಹೊಮ್ಮುವ ನೀರಿನ ಹನಿ ಬೇರೆಯವರಿಗೆ ತಗುಲದಂತೆ ಎಚ್ಚರ ವಹಿಸಬೇಕು’ ಎಂದು ಚಿಕ್ಕಮಕ್ಕಳ ತಜ್ಞ ಡಾ.ವಿಶ್ವನಾಥ ಪತ್ತಾರ ತಿಳಿಸಿದರು.

‘ಜ್ವರ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಕಂಡುಬಂದಾಗ ರೋಗಿಯು ವೈದ್ಯರನ್ನು ಸಂಪರ್ಕಿಸದೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT