ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಆರಂಭವಾಗದ ಬಿಎಸ್‌ಡಬ್ಲ್ಯು, ಬಿ.ಎಸ್ಸಿ ಕೋರ್ಸ್‌

Published 11 ಜುಲೈ 2024, 4:14 IST
Last Updated 11 ಜುಲೈ 2024, 4:14 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಬಿ.ಎಸ್ಸಿ(ವಿಜ್ಞಾನ ಪದವಿ) ಮತ್ತು ಬಿಎಸ್‌ಡಬ್ಲ್ಯು(ಸಮಾಜಕಾರ್ಯ ಪದವಿ) ಕೋರ್ಸ್‌ ಮಂಜೂರಾಗಿ 10 ವರ್ಷ ಕಳೆದಿದೆ. ಆದರೆ, ತರಗತಿಗೆ ಕೊಠಡಿ ಇಲ್ಲದ್ದರಿಂದ ಆ ಕೋರ್ಸ್‌ಗಳೇ ಇನ್ನೂ ಆರಂಭವಾಗಿಲ್ಲ.

ಪದವಿ ಶಿಕ್ಷಣ ಪಡೆಯಲು ಮಹಿಳೆಯರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ 2014–15ರಲ್ಲಿ ಬೆಳಗಾವಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆರಂಭಿಸಿದೆ. ಇದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿದೆ. ಇದಕ್ಕೆ ಸ್ವಂತ ಕಟ್ಟಡ ಇಲ್ಲದ್ದರಿಂದ ಸರ್ಕಾರಿ ಸರ್ದಾರ್ ಪದವಿಪೂರ್ವ ಕಾಲೇಜಿನ 14 ಕೊಠಡಿಗಳನ್ನೇ ಮಧ್ಯಾಹ್ನದ ಅವಧಿಯಲ್ಲಿ ಪದವಿ ಕಾಲೇಜಿಗೆ ಬಳಸಿಕೊಳ್ಳಲಾಗುತ್ತಿದೆ.

ಆದರೆ, ಪಿಯು ಕಾಲೇಜಿನಲ್ಲಿ ಲಭ್ಯವಿರುವ ಕೊಠಡಿ ಬಿ.ಎ(ಕಲಾ ಪದವಿ) ಮತ್ತು ಬಿ.ಕಾಂ(ವಾಣಿಜ್ಯ ಪದವಿ) ತರಗತಿ ಸಂಘಟಿಸಲಷ್ಟೇ ಸಾಲುತ್ತಿವೆ. ಅಲ್ಲಿ 680 ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಹೆಚ್ಚುವರಿ ಕೊಠಡಿ ಇಲ್ಲದ್ದರಿಂದ ಬಿ.ಎಸ್ಸಿ ಮತ್ತು ಬಿಎಸ್‌ಡಬ್ಲ್ಯು ಕೋರ್ಸ್‌ಗಳ ಆರಂಭಕ್ಕೆ ಹಿನ್ನಡೆಯಾಗಿದೆ.

ಬೇಕಿದೆ 10 ಹೆಚ್ಚುವರಿ ಕೊಠಡಿ:

‘ಬಿ.ಎಸ್ಸಿ, ಬಿಎಸ್‌ಡಬ್ಲ್ಯು ಕೋರ್ಸ್‌ ಆರಂಭಿಸಲು ವಿದ್ಯಾರ್ಥಿಗಳಿಂದ ಬೇಡಿಕೆ ಹೆಚ್ಚಿದೆ. ಆದರೆ, ರಸಾಯನ ವಿಜ್ಞಾನ, ಭೌತ ವಿಜ್ಞಾನ, ಕಂಪ್ಯೂಟರ್ ಸೈನ್ಸ್ ವಿಷಯಗಳ ಪ್ರಯೋಗಾಲಯ ನಿರ್ಮಾಣ ಸೇರಿದಂತೆ ಬೋಧನೆಗಾಗಿ ಕನಿಷ್ಠ 10 ಹೆಚ್ಚುವರಿ ಕೊಠಡಿ ಬೇಕಿದೆ’ ಎನ್ನುತ್ತಾರೆ ಉಪನ್ಯಾಸಕರು.

ನಮ್ಮಲ್ಲಿ ಬಿ.ಎಸ್ಸಿ ಬಿಎಡಬ್ಲ್ಯು ಕೋರ್ಸ್‌ಗಳ ಆರಂಭಕ್ಕೆ ಬೇಡಿಕೆ ಹೆಚ್ಚಿದೆ. ಕೊಠಡಿ ಇಲ್ಲದ್ದರಿಂದ ಅವುಗಳನ್ನು ಆರಂಭಿಸಿಲ್ಲ. ಸ್ವಂತ ಕಟ್ಟಡ ನಿರ್ಮಾಣವಾದರೆ ಆರಂಭಿಸುತ್ತೇವೆ ರಮೇಶ ಮಾಂಗಳೇಕರ
–ಪ್ರಾಚಾರ್ಯ ಸರ್ಕಾರಿ ದರ್ಜೆ ಮಹಿಳಾ ಕಾಲೇಜು ಬೆಳಗಾವಿ
ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿ.ಎಸ್ಸಿ ಬಿಎಸ್‌ಡಬ್ಲ್ಯು ಕೋರ್ಸ್‌ಗಳ ಆರಂಭದ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು
–ಲಕ್ಷ್ಮಿಪತಿ ಉಪನಿರ್ದೇಶಕ ಕಾಲೇಜು ಶಿಕ್ಷಣ ಇಲಾಖೆ ಧಾರವಾಡ ವಿಭಾಗ
ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಾಲೇಜುಗಳಲ್ಲಿ ಮಾತ್ರ ಬಿಎಸ್‌ಡಬ್ಲ್ಯು ಕೋರ್ಸ್‌ ಲಭ್ಯವಿದೆ. ಬೆಳಗಾವಿಯ ಮಹಿಳಾ ಕಾಲೇಜಿನಲ್ಲಿ ಈ ಕೋರ್ಸ್‌ ಆರಂಭವಾದರೆ ಕಲಿಕೆಗೆ ಅನುಕೂಲವಾಗುತ್ತದೆ
–ಅಶೋಕ ಡಿಸೋಜಾ ಮುಖ್ಯಸ್ಥ ಸಮಾಜಕಾರ್ಯ ವಿಭಾಗ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

ಮೂರು ಕಡೆ ಬಿಎಸ್‌ಡಬ್ಲ್ಯು ಕೋರ್ಸ್‌

‘ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲಾ ಕೇಂದ್ರದ ಯಾವ ಕಾಲೇಜಿನಲ್ಲೂ ಬಿಎಸ್‌ಡಬ್ಲ್ಯು ಕೋರ್ಸ್‌ ಇಲ್ಲ. ಈ ಕೋರ್ಸ್‌ ಓದಬೇಕಾದರೆ ನಾವು ಮೂಡಲಗಿಯ ಸರ್ಕಾರಿ ತುಕ್ಕಾನಟ್ಟಿ ಮತ್ತು ನಿಪ್ಪಾಣಿ ತಾಲ್ಲೂಕಿನ ನನದಿ ಖಾಸಗಿ ಕಾಲೇಜಿಗೆ ಹೋಗಬೇಕಿದೆ. ಕಲಿಕೆಗಾಗಿ ಬೆಳಗಾವಿಯಿಂದ ನಿತ್ಯ ಅಲ್ಲಿಗೆ ಹೋಗಿಬರುವುದು ಕಷ್ಟ. ಹಾಗಾಗಿ ಈ ಕೋರ್ಸ್‌ ಗೊಡವೆಯೇ ಬೇಡವೆಂದು ಬಿ.ಎ ಮತ್ತು ಬಿ.ಕಾಂ ಕೋರ್ಸ್‌ ಓದುತ್ತಿದ್ದೇವೆ’ ಎಂದು ವಿದ್ಯಾರ್ಥಿನಿಯರು ಅಸಹಾಯಕತೆ ವ್ಯಕ್ತಪಡಿಸಿದರು.

‘ಬೆಳಗಾವಿಯಲ್ಲಿ ಬಿ.ಎಸ್ಸಿ ಅಧ್ಯಯನಕ್ಕಾಗಿ ಮಹಿಳಾ ಕಾಲೇಜು ಬಿಟ್ಟರೆ ಬೇರೆ ಸರ್ಕಾರಿ ಪದವಿ ಕಾಲೇಜು ಇಲ್ಲ. ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯುವುದೂ ನಮಗೆ ದುಬಾರಿಯಾಗಿದೆ. ಇಲ್ಲಿ ಬಿ.ಎಸ್ಸಿ ಕೋರ್ಸ್‌ ಆರಂಭಿಸಿದರೆ ಅನುಕೂಲವಾಗುತ್ತದೆ’ ಎಂಬುದು ವಿದ್ಯಾರ್ಥಿಗಳ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT