ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯೋತ್ಸವ: ₹ 20 ಸಾವಿರ ಗಳಿಸಿದ ಚಿಂದಿ ಆಯುವವರು!

ರಾಣಿ ಚನ್ನಮ್ಮ ವೃತ್ತದಲ್ಲಿ 5 ತಾಸಿನಲ್ಲಿ 2 ಟನ್‌ ಪ್ಲಾಸ್ಟಿಕ್‌ ಬಾಟಲಿ ಸಂಗ್ರಹ
Published 2 ನವೆಂಬರ್ 2023, 20:23 IST
Last Updated 2 ನವೆಂಬರ್ 2023, 20:23 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ, ಚಿಂದಿ ಆಯುವ 10 ಮಂದಿ ಐದೇ ತಾಸಿನಲ್ಲಿ ₹20 ಸಾವಿರ ಗಳಿಸಿದರು.

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬುಧವಾರ ರಾಣಿ ಚನ್ನಮ್ಮ ವೃತ್ತದಲ್ಲಿ ಲಕ್ಷಾಂತರ ಜನ ಸೇರಿದ್ದರು. ಅವರು ನೀರು ಕುಡಿದು ಬಿಸಾಡಿದ ಪ್ಲಾಸ್ಟಿಕ್‌ ಬಾಟಲಿಗಳನ್ನು ಗುರುವಾರ 10 ಮಂದಿ ಚಿಂದಿ ಆಯುವವರು ಸಂಗ್ರಹಿಸಿದರು. ನಸುಕಿನ 3ರಿಂದ ಬೆಳಿಗ್ಗೆ 8ರವರೆಗೆ ಎರಡು ಟನ್‌ಗೂ ಅಧಿಕ ಪ್ಲಾಸ್ಟಿಕ್‌ ಬಾಟಲಿಗಳು ಸಂಗ್ರಹವಾದವು.

ಪ್ರತಿ ಕೆ.ಜಿ.ಗೆ ಮಹಾನಗರ ಪಾಲಿಕೆ ₹10 ದರ ನೀಡುತ್ತದೆ. 2,000 ಕೆ.ಜಿ ಬಾಟಲಿಗಳನ್ನು ನೀಡಿ ₹20 ಸಾವಿರ ಗಳಿಸಿದರು. ಎಲ್ಲ ಹತ್ತೂ ಮಂದಿಗೆ ತಲಾ ₹2,000 ಹಂಚಿದ್ದಾಗಿ ಪಾಲಿಕೆ ಪರಿಸರ ಎಂಜಿನಿಯರ್‌ ಹಣಮಂತ ಕಲಾದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಾನಗರ ಪಾಲಿಕೆಯಿಂದ 475 ಮಂದಿಗೆ ಚಿಂದಿ ಆಯುವ ಗುರುತಿನ ಚೀಟಿ ನೀಡಲಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಪ್ರತಿದಿನ ಗರಿಷ್ಠ ₹200 ಗಳಿಸುತ್ತಾರೆ. ಆದರೆ, ರಾಜ್ಯೋತ್ಸವಕ್ಕೆ ಬಂದ ಜನರು ಬಿಸಾಡಿದ ತ್ಯಾಜ್ಯ ಅಧಿಕ ಪ್ರಮಾಣದಲ್ಲಿತ್ತು’ ಎಂದರು.

ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪಾಲಿಕೆ ಪೌರಕಾರ್ಮಿಕರು ಹರಿದ ಚಪ್ಪಲಿಗಳನ್ನು ಸಂಗ್ರಹಿಸಿದರು
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪಾಲಿಕೆ ಪೌರಕಾರ್ಮಿಕರು ಹರಿದ ಚಪ್ಪಲಿಗಳನ್ನು ಸಂಗ್ರಹಿಸಿದರು

‘ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರ ನಿರ್ದೇಶನದಂತೆ, ರಾಜ್ಯೋತ್ಸವ ಮೆರವಣಿಗೆ ನಡೆದ ಮಾರ್ಗಗಳಲ್ಲಿ 100 ಕೆ.ಜಿ.ಯಷ್ಟು ತ್ಯಾಜ್ಯ ಪದಾರ್ಥಗಳನ್ನು ಸಂಗ್ರಹಿಸುವ ದೊಡ್ಡ ತೊಟ್ಟಿಗಳನ್ನು ಇಡಲಾಗಿತ್ತು. ಇದರಿಂದ ಮಾಲಿನ್ಯವಾಗದಂತೆ, ತ್ಯಾಜ್ಯದಿಂದ ನಗರದ ಸೌಂದರ್ಯ ಹಾಳಾಗದಂತೆ ಕಾಪಾಡಲಾಯಿತು’ ಎಂದು ಅವರು ತಿಳಿಸಿದರು.

ಉಳಿದಂತೆ, 200 ಕೆ.ಜಿಯಷ್ಟು ವಿವಿಧ ಬಗೆಯ ಹೂವು, 100 ಕೆ.ಜಿ.ಗೂ ಅಧಿಕ ಹರಿದ ಚಪ್ಪಲಿಗಳು, ಪ್ಲಾಸ್ಟಿಕ್‌ ಚೀಲಗಳು, ತಿಂಡಿ ತಿಂದು ಬಿಸಾಡಿದ ವ್ಯರ್ಥ ಪದಾರ್ಥಗಳು ಹೀಗೆ ಅಪಾರ ಪ್ರಮಾಣದ ತ್ಯಾಜ್ಯವನ್ನು ಪಾಲಿಕೆ ವಾಹನಗಳಲ್ಲಿ ಸಾಗಿಸಲಾಯಿತು.

ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪಾಲಿಕೆ ಪೌರಕಾರ್ಮಿಕರು ಹೂವಿನ ತಾಜ್ಯ ಸಂಗ್ರಹಿಸಿದರು
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪಾಲಿಕೆ ಪೌರಕಾರ್ಮಿಕರು ಹೂವಿನ ತಾಜ್ಯ ಸಂಗ್ರಹಿಸಿದರು
ವೃತ್ತದಲ್ಲಿ ನಿಯೋಜನೆ ಮಾಡಿದ ಹತ್ತೂ ಜನ ಚಿಂದಿ ಆಯುವವರಿಗೆ ನಾಡ ಹಬ್ಬದ ಕಾಣಿಕೆ ಸಿಕ್ಕಂತಾಗಿದೆ.
–ಹಣಮಂತ ಕಲಾದಗಿ, ಪಾಲಿಕೆ ಪರಿಸರ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT