ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದ ಕುದುರೆಗಳಿಗೆ ‘ಮಹಾ’ ಮರ್ಯಾದೆ

ಪ್ರತಿ ವರ್ಷ ಆಷಾಢ ಏಕಾದಶಿ ದಿಂಡಿಯಾತ್ರೆಯಲ್ಲಿ 315 ಕಿ.ಮೀ ನಡೆಯುವ ಹೀರಾ, ಮೋತಿ
ಚಂದ್ರಶೇಖರ ಎಸ್. ಚಿನಕೇಕರ
Published 23 ಜೂನ್ 2024, 4:18 IST
Last Updated 23 ಜೂನ್ 2024, 4:18 IST
ಅಕ್ಷರ ಗಾತ್ರ

ಚಿಕ್ಕೋಡಿ: ಹೀರಾ ಮತ್ತು ಮೋತಿ ಅವರಿಗೆ ಮಹಾರಾಷ್ಟ್ರದ ಪಂಢರಪುರದ ವಿಠ್ಠಲನ ಸನ್ನಿಧಿಯಲ್ಲಿ ಆಷಾಢ ಏಕಾದಶಿಯಲ್ಲಿ ರಾಜ ಮರ್ಯಾದೆ ಸಿಗುತ್ತದೆ. ಪ್ರತಿ ವರ್ಷ ಪಂಢರಪುರಕ್ಕೆ ಹೊರಡುವ ದಿಂಡಿಯಲ್ಲಿ 315 ಕಿ.ಮೀ ದಾರಿಯುದ್ದಕ್ಕೂ ಇವರೂ ಹೆಜ್ಜೆ ಹಾಕುತ್ತಾರೆ..!

ಇದರಲ್ಲೇನು ವಿಶೇಷ ಎಂದುಕೊಳ್ಳಬೇಡಿ. ಹೀರಾ, ಮೋತಿ ಎಂಬುದು ಎರಡು ಕುದುರೆಗಳ ಹೆಸರು. ತಾಲ್ಲೂಕಿನ ಅಂಕಲಿ ಗ್ರಾಮದ ಶಿಥೋಳೆ ಮನೆತನದವರು ಸಾಕಿರುವ ಈ ಕುದುರೆ ಜೋಡಿಗೆ ಪಂಢರಪುರದ ದೇವಸ್ಥಾನದಲ್ಲಿ ವಿಶೇಷ ಆತಿಥ್ಯ ಸಿಗುತ್ತದೆ.

ಪ್ರತಿವರ್ಷ ಜ್ಯೇಷ್ಠ ಮಾಸದ ದ್ವಾದಶಿಯಂದು ಅಂಕಲಿಯ ಶಿಥೋಳೆ ಸರ್ಕಾರದ ಅರಮನೆ ಆವರಣದ, ಅಂಬಾಬಾಯಿ ಮಂದಿರದಲ್ಲಿ ಕುದುರೆಗಳನ್ನು ಪೂಜಿಸಿ ಬೀಳ್ಕೊಡಲಾಗುತ್ತದೆ. ಅಂಕಲಿಯಿಂದ ಆಳಂದಿಗೆ ಹೊರಡುವ ಈ ಎರಡೂ ಕುದುರೆಗಳು ಪ್ರತಿ ದಿನ ಸುಮಾರು 30 ಕಿ.ಮೀ ನಡೆದುಕೊಂಡು 8-10 ದಿನಗಳಲ್ಲಿ ಆಳಂದಿ ತಲುಪುತ್ತವೆ. ಆಳಂದಿಯಲ್ಲಿ ನಾಲ್ಕೈದು ದಿನ ವಿಶ್ರಾಂತಿ ಪಡೆದು, ಅಲ್ಲಿಂದ 315 ಕಿ.ಮೀ ದೂರದ ಪಂಢರಪುರದವರೆಗೆ ನಡೆದುಕೊಂಡೇ ತಲುಪುತ್ತವೆ.

ಈ ಬಾರಿ ದಿಂಡಿಯಲ್ಲಿ ಜೂನ್ 18ರಂದು ಹೊರಟಿರುವ ಕುದುರೆಗಳು ಜುಲೈ 17ರಂದು ಪಂಢರಪುರವನ್ನು ತಲುಪುತ್ತವೆ.

ಆಳಂದಿಯಿಂದ ಸಂತ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿಯು ಮಾವುಲಿಯ ರಥದ ಮುಂದೆ ಈ ಕುದುರೆಗಳನ್ನು ಭಕ್ತರು ಪೂಜಿಸುವುದು ವಾಡಿಕೆ. ಪಂಢರಪುರದಲ್ಲಿ ಆಷಾಢ ಏಕಾದಶಿ ಜಾತ್ರಾ ಮಹೋತ್ಸವದಲ್ಲಿ ಆರತಿ ಬೆಳಗಿ, ಮಹಾ ನೈವೇದ್ಯ ಅರ್ಪಿಸುತ್ತಾರೆ. ಹೀಗಾಗಿ ಕರ್ನಾಟಕದ ಹೀರಾ–ಮೋತಿ ಕುದುರೆಗಳು ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿವೆ.

ಕರ್ನಾಟಕ–ಮಹಾರಾಷ್ಟ್ರದ ಸಾಂಸ್ಕೃತಿಕ ಕೊಂಡಿಯಾಗಿರುವ ಈ ಸಂಪ್ರದಾಯ ಎರಡು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಅಂಕಲಿಯ ಶಿಥೋಳಿ ಮನೆತನದವರು ತಲೆತಲಾಂತರದಿಂದ ‘ಮಾನ’ದ ಕುದುರೆಗಳನ್ನು ಸಾಕುತ್ತ ಬಂದಿದ್ದಾರೆ. 1832ರಲ್ಲಿ ಪ್ರಾರಂಭಗೊಂಡ ಈ ಪರಂಪರೆಗೆ 192 ವಸಂತ ತುಂಬಿವೆ.

ಏಳೆಂಟು ತಲೆಮಾರಿನಿಂದ ಅಂಕಲಿಯ ಮಾನದ ಕುದುರೆಗಳು ಆಷಾಢ ಏಕಾದಶಿಯ ದಿಂಡಿಯಲ್ಲಿ ಮಾತ್ರ ಭಾಗವಹಿಸುತ್ತವೆ. ಇದೀಗ ಅಂಕಲಿಯ ಶಿಥೋಳೆ ಕುಟುಂಬದ ಶ್ರೀಮಂತ ಉರ್ಜಿತಸಿಂಹ ರಾಜೆ ಇದರ ನೇತೃತ್ವ ವಹಿಸುತ್ತಿದ್ದು, ಹೀರಾ ಕುದುರೆಯ ಮೇಲೆ ಸಂತ ಜ್ಞಾನೇಶ್ವರ ಮಹಾರಾಜರ ಪಾದುಕೆ ಇಟ್ಟು ಮೆರವಣಿಗೆ ಮಾಡಲಾಗುತ್ತದೆ. ಹೀರಾ ಕುದುರೆಗೆ ಸಾಥಿಯಾಗಿ ಮೋತಿ ಕುದುರೆಯನ್ನೂ ತೆಗೆದುಕೊಂಡು ಹೋಗಲಾಗುತ್ತದೆ. ಈ ಎರಡೂ ಕುದುರೆಗಳನ್ನು ತುಕಾರಂ ಕೋಳಿ, ಅಕ್ಷಯ ಪರೀಟ ಅವರು ಸಲಹುತ್ತಾರೆ.

ದಿಂಡಿ ವೇಳೆ ಎಲ್ಲೆಲ್ಲಿ ತಂಗುತ್ತವೆಯೋ ಅಲ್ಲೆಲ್ಲ ಭಕ್ತರು ಪೂಜೆ ಸಲ್ಲಿಸುತ್ತಾರೆ. ಕುದುರೆಗಳನ್ನು ಒಂದು ಜಾಗದಲ್ಲಿ ವರ್ತುಲಾಕಾರ ಓಡಿಸುವುದು (ರಿಂಗಣ) ವಿಶೇಷ ಆಚರಣೆ. ಅದನ್ನು ನೋಡುವುದೇ ಹಬ್ಬ.

ಪ್ರತಿ ವರ್ಷ ಪಂಢರಪುರದ ಏಕಾದಶಿ ಮಹೋತ್ಸವಕ್ಕೆ ನಮ್ಮ ಮನೆತನದ ಕುದುರೆಗಳು ತೆರಳುವ ಪರಂಪರೆ ನಡೆದುಕೊಂಡು ಬಂದಿರುವುದು ರಾಜ್ಯಕ್ಕೆ ಸಂದ ಹೆಮ್ಮೆ.
ಶ್ರೀಮಂತ ಉರ್ಜಿತಸಿಂಹ ರಾಜೆ ಮಾನದ, ಕುದುರೆಗಳ ಮಾಲೀಕ
ಅಂಕಲಿ ಗ್ರಾಮದ ಕುದುರೆಗಳಿಗೆ ಪಂಢರಪುರದಲ್ಲಿ ರಾಜ ಮರ್ಯಾದೆ ಸಿಗುತ್ತಿರುವುದು ಕನ್ನಡಿಗರ ಹೆಮ್ಮೆ. ಎರಡು ರಾಜ್ಯಗಳ ನಡುವಿನ ಸಾಮರಸ್ಯಕ್ಕೆ ಇದು ಸಾಕ್ಷಿಯಾಗಿರಲಿ.
ಭಾರತಿ ಕೋರೆ, ಅಂಕಲಿ ನಿವಾಸಿ
ಪಂಢರಪುರ ಕ್ಷೇತ್ರ ವಿಶ್ವಪ್ರಸಿದ್ಧವಾಗಿದೆ. ಅಲ್ಲಿ ಕರ್ನಾಟಕಕ್ಕೆ ಗೌರವ ತಂದುಕೊಡುವಲ್ಲಿ ಹೀರಾ ಮತ್ತು ಮೋತಿ ಅವರ ಕೊಡುಗೆ ದೊಡ್ಡದು.
ಅಮರ ನಾಯಕ, ಅಂಕಲಿ ನಿವಾಸಿ
ರಿಂಗಣ ಆಚರಣೆಯಲ್ಲಿ ಹೀರಾ– ಮೋತಿ ಜೋಡಿಯ ಓಟದ ಪರಿ
ರಿಂಗಣ ಆಚರಣೆಯಲ್ಲಿ ಹೀರಾ– ಮೋತಿ ಜೋಡಿಯ ಓಟದ ಪರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT