ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: ಕೃಷ್ಣಾ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು

ಹೊಲಗದ್ದೆಗಳಿಗೆ ನುಗ್ಗಿದ ನದಿ ನೀರು
Published 21 ಜುಲೈ 2024, 16:01 IST
Last Updated 21 ಜುಲೈ 2024, 16:01 IST
ಅಕ್ಷರ ಗಾತ್ರ

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ನಿರಂತರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ಹಾಗೂ ಉಪನದಿಗಳ ನೀರಿನ ಹರಿವಿನ ಪ್ರಮಾಣ ಶರವೇಗದಲ್ಲಿ ಏರಿಕೆಯಾಗುತ್ತಿದೆ. ಶನಿವಾರ ಕೃಷ್ಣಾ ನದಿಯಲ್ಲಿ 81 ಸಾವಿರ ಕ್ಯುಸೆಕ್ ನಷ್ಟಿದ್ದ ನೀರಿನ ಹರಿವು, ಭಾನುವಾರ ಬೆಳಿಗ್ಗೆ 1 ಲಕ್ಷ ಕ್ಯುಸೆಕ್ ದಾಟಿದೆ. ಹೀಗಾಗಿ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗುತ್ತಿದೆ.

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ 10.7 ಸೆ.ಮೀ, ವಾರಣಾದಲ್ಲಿ 7.5 ಸೆ.ಮೀ, ಕಾಳಮ್ಮವಾಡಿಯಲ್ಲಿ 6.5 ಸೆ.ಮೀ, ಮಹಾಬಳೇಶ್ವರದಲ್ಲಿ 15.8 ಸೆ.ಮೀ, ನವಜಾದಲ್ಲಿ 12.7 ಸೆ.ಮೀ, ರಾಧಾನಗರಿಯಲ್ಲಿ 9.7 ಸೆ.ಮೀ, ಕೊಲ್ಹಾಪುರದಲ್ಲಿ 2.9 ಸೆ.ಮೀ ಮಳೆಯು ರವಿವಾರ ದಾಖಲಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರೆ ಬ್ಯಾರೇಜಿನಲ್ಲಿ 81083 ಕ್ಯುಸೆಕ್ ಹೊರ ಹರಿವು ಇದ್ದು, ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ದೂಧಗಂಗಾ ನದಿಗೆ 24640 ಕ್ಯುಸೆಕ್ ಒಳ ಹರಿವು ಇದೆ. ಹೀಗಾಗಿ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 105723 ಕ್ಯುಸೆಕ್ ಹೊರ ಹರಿವು ಇದೆ. ಇನ್ನು, 6 ಟಿಎಂಸಿ ಅಡಿ ನೀರು ಸಂಗ್ರಹ ಸಾಮಾರ್ಥ್ಯದ ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್ ನಲ್ಲಿ 3.148 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಒಳ ಹರಿವು 87111 ಒಳ ಹರಿವು ಇದ್ದು, ಹೊರ ಹರಿವು 80250 ಇದೆ.

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ-ದತ್ತವಾಡ, ಸದಲಗಾ-ದತ್ತವಾಡ, ಕಾರದಗಾ-ಭೋಜ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿರುವ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಬೋಜವಾಡಿ-ಕುನ್ನೂರು ಸೇರಿದಂಥೆ ಏಳು ಸೇತುವೆಗಳು ಜಲಾವೃತಗೊಂಡ ಸ್ಥಿತಿಯಲ್ಲಿಯೇ ಇವೆ. ಸೇತುವೆಯ ಮೇಲಿನಿಂದ ಸಂಚಾರ ಸ್ಥತಿಗೊಂಡಿದ್ದರೂ ಕೂಡ ಸುತ್ತುವರೆದು ಗ್ರಾಮ ತಲುಪಲು ಪರ್ಯಾಯ ಮಾರ್ಗಗಳಿವೆ.

ದೂಧಗಂಗಾ ನದಿ ತೀರದಲ್ಲಿ ಕಾರದಗಾ ಗ್ರಾಮದ ಬಂಬಾಗಲಿ ಬಾಬಾ ದೇವಸ್ಥಾನ, ಕೃಷ್ಣಾ ನದಿ ತೀರದ ಕಲ್ಲೋಳ ಗ್ರಾಮದ ಬಳಿಯ ದತ್ತಾತ್ರೇಯ ಮಂದಿರ ಸೇರಿದಂತೆ ನದಿ ತೀರದಲ್ಲಿಯ ಹಲವು ಸಣ್ಣ ಪುಟ್ಟ ದೇವಾಲಯ, ದರ್ಗಾ ಮುಂತಾದವುಗಳು ಜಲಾವೃತಗೊಂಡಿದ್ದು, ಇಲ್ಲಿ ಪೂಜಾ ಕೈಂಕರ್ಯಗಳಿಗೆ ವ್ಯತ್ಯಯ ಉಂಟಾಗಿದೆ.

ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿ ನೀರು ಹೊಲ ಗದ್ದೆಗಳಿಗೆ ನುಗ್ಗಿದೆ
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿ ನೀರು ಹೊಲ ಗದ್ದೆಗಳಿಗೆ ನುಗ್ಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT