ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

SmartCity ಯೋಜನೆಯಡಿ ನಿರ್ಮಿಸಿದ್ದ ಡಬಲ್ ರಸ್ತೆಯ ಒಂದು ಭಾಗ ಭೂಮಾಲೀಕರಿಗೆ ವಾಪಸ್!

ಹೈಕೋರ್ಟ್‌ ಧಾರವಾಡ ಪೀಠದ ಆದೇಶದಂತೆ ಭೂಮಾಲೀಕ ಬಾಳಾಸಾಹೇಬ ಪಾಟೀಲ ಅವರಿಗೆ ಶನಿವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.
Published : 21 ಸೆಪ್ಟೆಂಬರ್ 2024, 5:30 IST
Last Updated : 21 ಸೆಪ್ಟೆಂಬರ್ 2024, 5:30 IST
ಫಾಲೋ ಮಾಡಿ
Comments

ಬೆಳಗಾವಿ: ಎಸ್‌ಪಿಎಂ ರಸ್ತೆಯಿಂದ ಹಳೇ ಪಿ.ಬಿ ರಸ್ತೆಯವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿದ್ದ ರಸ್ತೆಯಲ್ಲಿ ಒಂದು ಭಾಗವನ್ನು ಹೈಕೋರ್ಟ್‌ ಧಾರವಾಡ ಪೀಠದ ಆದೇಶದಂತೆ ಭೂಮಾಲೀಕ ಬಾಳಾಸಾಹೇಬ ಪಾಟೀಲ ಅವರಿಗೆ ಶನಿವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.

ಈ ರಸ್ತೆ ನಿರ್ಮಿಸಲು ಮಹಾನಗರ ಪಾಲಿಕೆಯು ನಿರಾಕ್ಷೇಪಣಾ ಪ್ರಮಾಣಪತ್ರ ಕೊಟ್ಟಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆಯನ್ನೇ ಪೂರ್ಣಗೊಳಿಸದೆ, ₹5.88 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. 2022ರಲ್ಲಿ ಪೂರ್ಣಗೊಂಡ ಈ ಕಾಮಗಾರಿಗೆ ಸರ್ವೆ ಸಂಖ್ಯೆ 4111ರಲ್ಲಿ 21.65 ಗುಂಟೆ ಜಮೀನು ಬಳಸಿಕೊಳ್ಳಲಾಗಿತ್ತು.

ಇದರಿಂದ ಆಕ್ರೋಶಗೊಂಡ ಭೂಮಾಲೀಕ ಬಾಳಾಸಾಹೇಬ ಪಾಟೀಲ ಅವರು, ಪರಿಹಾರ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೂ, ಪರಿಹಾರ ಕೈಗೆಟುಕದ ಕಾರಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ನಂತರ ಬೆಳಗಾವಿ ಉಪವಿಭಾಗದ ಸಹಾಯಕ ಆಯುಕ್ತರು, ಸುಮಾರು ₹20 ಕೋಟಿ ಪರಿಹಾರ ನೀಡುವುದಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ನೀಡಿದ್ದರು. 

ಇತ್ತೀಚೆಗೆ ಮಹಾನಗರ ಪಾಲಿಕೆಯಲ್ಲಿ ನಡೆದ ಪರಿಷತ್‌ ಸಭೆಯಲ್ಲೂ ನ್ಯಾಯಾಂಗ ನಿಂದನೆ ಪ್ರಕರಣ ತಡೆಯಲು ಭೂಮಾಲೀಕರಿಗೆ ₹20 ಕೋಟಿ ಪರಿಹಾರ ನೀಡಲು ನಿರ್ಧರಿಸಲಾಗಿತ್ತು.

ಈ ಮಧ್ಯೆ, ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ಕಾಮಗಾರಿಗೆ ಬಳಸಿಕೊಂಡಿದ್ದ ಜಮೀನು ವಾಪಸ್‌ ಪಡೆಯಲು ಒಪ್ಪಿಗೆ ಸೂಚಿಸಿದ್ದರು. ಹಾಗಾಗಿ ಆ ಜಮೀನನ್ನು ಮಾಲೀಕರಿಗೆ ಹಿಂತಿರುಗಿಸುವಂತೆ ನ್ಯಾಯಾಲಯವೂ ಪಾಲಿಕೆಗೆ ಸೂಚಿಸಿತ್ತು. ಈ ಪ್ರಕ್ರಿಯೆ ಪೂರ್ಣಗೊಳಿಸಿ, ಸೆಪ್ಟೆಂಬರ್ 23ರಂದು ವರದಿ ಸಲ್ಲಿಸಲು ಹೇಳಿತ್ತು.

ನ್ಯಾಯಾಲಯದ ಆದೇಶದ ಮೇರೆಗೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸ್ಮಾರ್ಟ್‌ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಸಯೀದಾ ಆಫ್ರೀನ್‌ಭಾನು ಬಳ್ಳಾರಿ ಮತ್ತು ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ್ ಅವರು, ಜಮೀನಿನ ದಾಖಲೆಗಳನ್ನು ಬಾಳಸಾಹೇಬ ಪಾಟೀಲ ಅವರ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

ಹಸ್ತಾಂತರಗೊಂಡ ಭೂಮಿಯ ಎರಡೂ ಬದಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ.  ಈ ಭೂಮಿಯನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂಬ ಫಲಕವನ್ನೂ ಪ್ರದರ್ಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT