ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಪ್ಟೊ ಪಾಸ್‌ವರ್ಡ್‌ ಬದಲಿಸಿ ₹56 ಕೋಟಿ ವಂಚನೆ ಆರೋಪ: ಎಂಜಿನಿಯರ್‌ ಬಂಧನ

Published : 10 ಸೆಪ್ಟೆಂಬರ್ 2024, 15:39 IST
Last Updated : 10 ಸೆಪ್ಟೆಂಬರ್ 2024, 15:39 IST
ಫಾಲೋ ಮಾಡಿ
Comments

ಬೆಂಗಳೂರು: ಕ್ರಿಪ್ಟೊ ಖಾತೆಯ ಪಾಸ್‌ವರ್ಡ್ ಬದಲಾಯಿಸಿ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಆರೋಪಿಯನ್ನು ಸಿಐಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

ಸೈಫರ್ ಟೆಕ್ನಾಲಜೀಸ್ ಪ್ರೈವೇಟ್ ಕಂಪನಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಅಖಿಲ್ ಗುಪ್ತಾ ಅವರು ನೀಡಿದ ದೂರಿನ ಮೇರೆಗೆ ಹರಿಯಾಣದ ಶುಭಾಂಗ್ ಜೈನ್ (26) ಎಂಬುವರನ್ನು ಮುಂಬೈನಲ್ಲಿ ಬಂಧಿಸಿ, ಎರಡು ಮೊಬೈಲ್ ಹಾಗೂ ಎರಡು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ನಗರದ ಸೈಪರ್ ಟೆಕ್ನಾಲಜೀಸ್ ಕಂಪನಿಯಲ್ಲಿ ಕ್ರಿಪ್ಟೊ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಶುಭಾಂಗ್ ಕೆಲಸ ಮಾಡುತ್ತಿದ್ದರು. ಮುಖ್ಯಸ್ಥರ ಗಮನಕ್ಕೆ ತರದೆ ಕಂಪನಿಯ ವ್ಯವಹಾರಕ್ಕೆ ಉಪಯೋಗಿಸುತ್ತಿದ್ದ ಕ್ರಿಪ್ಟೊ ಪಾಸ್‌ವರ್ಡ್‌ ಅನ್ನು ಬದಲಿಸಿದ್ದರು. ಬಳಿಕ ಖಾತೆಯಲ್ಲಿದ್ದ ಕ್ರಿಪ್ಟೊ ಕರೆನ್ಸಿಯನ್ನು ರೂಪಾಯಿಗೆ ಪರಿವರ್ತಿಸಿ, ಕಂಪನಿಗೆ ಸುಮಾರು ₹ 56 ಕೋಟಿ ವಂಚಿಸಲಾಗಿದೆ ಎಂದು ದೂರು ನೀಡಲಾಗಿತ್ತು. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಹೆಚ್ಚಿನ ತನಿಖೆಗಾಗಿ ಸಿಐಡಿ ಘಟಕಕ್ಕೆ ವರ್ಗಾಯಿಸಲಾಗಿತ್ತು’ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

‘ಆರೋಪಿಯು ತಮಿಳುನಾಡಿನ ವೆಲ್ಲೂರು ಇನ್​​ಸ್ಟಿಟ್ಯೂಟ್​​ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿ, 2021ರಲ್ಲಿ ಕೆಲಸಕ್ಕೆ ಸೇರಿದ್ದ. ಕುಟುಂಬಸ್ಥರು ಹಾಗೂ ಸ್ನೇಹಿತರ ಖಾತೆಗೆ ಹಣವನ್ನು ವರ್ಗಾಯಿಸಿದ್ದರು. ಅಲ್ಲದೇ ಕೆಲ ಸ್ನೇಹಿತರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಹೇಳಿದ್ದಾರೆ.

‘ಕಂಪನಿಯಲ್ಲಿ ಕೆಲಸ ಮಾಡುವಾಗ ನಗರದ ಎಚ್ಎಸ್ ಆರ್ ಲೇಔಟ್​​ನಲ್ಲಿ ಉಳಿದುಕೊಂಡಿದ್ದ ಶುಭಾಂಗ್, ಕೆಲಸ ತೊರೆದ ಬಳಿಕ ಅಹಮದಾಬಾದ್​​ನಲ್ಲಿ ವಾಸ್ತವ್ಯ ಹೂಡಿದ್ದರು. ಬಂಧನ ಭೀತಿಯಿಂದ ಅಹಮದಾಬಾದ್​ನಿಂದ ಮುಂಬೈನಲ್ಲಿ ತೆರಳಿದ್ದರು’ ಎಂದು ತಿಳಿಸಿದ್ದಾರೆ.

‘ಕೋಟ್ಯಂತರ ರೂಪಾಯಿ ವಂಚನೆ ಸಂಬಂಧ ಆರೋಪಿ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕ್ರಿಪ್ಟೊ ವಾಲೆಟ್​​ನಿಂದ ಯಾರಿಗೆ ಎಷ್ಟು ಹಣ ನೀಡಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT